ಭೀಮಾ ಕೋರೆಗಾಂವ್ ಹಿಂಸಾಚಾರದ ಆರೋಪಿ, ಬಲಪಂಥೀಯ ನಾಯಕ ಮಿಲಿಂದ್ ಎಕ್ಬೋಟೆ, ಸ್ವಾಮಿ ಕಾಳಿಚರಣ್ ಮತ್ತು ಇತರ ನಾಲ್ವರ ವಿರುದ್ಧ ಕಾರ್ಯಕ್ರಮವೊಂದರಲ್ಲಿ ಪ್ರಚೋದನಕಾರಿ ಭಾಷಣಗಳನ್ನು ಮಾಡಿದ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಪುಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಛತ್ರಪತಿ ಶಿವಾಜಿ ಮಹಾರಾಜರಿಂದ ಮೊಘಲ್ ಸೇನಾಧಿಕಾರಿ ಅಫ್ಜಲ್ ಖಾನ್ ಹತ್ಯೆಯ ದಿನದ ಆಚರಣೆಗಾಗಿ ‘ಶಿವ ಪ್ರತಾಪ್ ದಿನ್’ ಎಂಬ ಕಾರ್ಯಕ್ರಮವನ್ನು ಮಹಾರಾಷ್ಟ್ರದ ಪುಣೆಯಲ್ಲಿ ಮಿಲಿಂದ್ ಏಕ್ಬೋಟೆ ನೇತೃತ್ವದ ‘ಸಮಸ್ತ್ ಹಿಂದೂ ಅಘಾಡಿ’ ಸಂಘಟನೆಯು ಡಿಸೆಂಬರ್ 19 ರಂದು ಆಯೋಜಿಸಿತ್ತು.
ಇದನ್ನೂ ಓದಿ:ಭೀಮಾ ಕೋರೆಗಾಂವ್: 8 ಹೋರಾಟಗಾರರಿಗೆ ಡೀಫಾಲ್ಟ್ ಜಾಮೀನು ನಿರಾಕರಿಸಿದ ಬಾಂಬೆ ಹೈಕೋರ್ಟ್
ಪೊಲೀಸರ ಪ್ರಕಾರ, ಈ ಕಾರ್ಯಕ್ರಮದಲ್ಲಿ ಕಾಳಿಚರಣ್, ಮಿಲಿಂದ್ ಎಕ್ಬೋಟೆ, ಕ್ಯಾಪ್ಟನ್ ದಿಗೇಂದ್ರ ಕುಮಾರ್ (ನಿವೃತ್ತ) ಮತ್ತು ಇತರರು ಭಾಗವಹಿಸಿದ್ದರು.
ಕ್ಯಾಪ್ಟನ್ ದಿಗೇಂದ್ರ ಕುಮಾರ್ ಅವರು ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದವರಾಗಿದ್ದಾರೆ. ಯುದ್ಧದಲ್ಲಿ ತೋರಿದ ಶೌರ್ಯಕ್ಕಾಗಿ ಅವರಿಗೆ ‘ಮಹಾವೀರ ಚಕ್ರ’ ನೀಡಿ ಗೌರವಿಸಲಾಗಿತ್ತು ಎಂದು ಪೊಲೀಸ್ ಇನ್ಸ್‌ಪೆಕ್ಟರ್ (ಅಪರಾಧ) ಹರ್ಷವರ್ಧನ್ ಗಾಡೆ ಹೇಳಿದ್ದಾರೆ.
ಸ್ವಾಮಿ ಕಾಳಿಚರಣ್, ಮಿಲಿಂದ್ ಎಕ್ಬೋಟೆ, ಕ್ಯಾಪ್ಟನ್ ದಿಗೇಂದ್ರ ಕುಮಾರ್ ಮತ್ತು ಇತರ ಮೂವರ ವಿರುದ್ಧ ಐಪಿಸಿ ಸೆಕ್ಷನ್ 295 (ಎ), 298, 505 (2) ಅಡಿಯಲ್ಲಿ ಮಂಗಳವಾರ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ:ಭೀಮಾ ಕೋರೆಗಾಂವ್ ಪ್ರಕರಣ: ಸುರೇಂದ್ರ ಗಾಡ್ಲಿಂಗ್ ಕಂಪ್ಯೂಟರ್‌ಗೆ ಸುಳ್ಳು ಸಾಕ್ಷ್ಯಗಳನ್ನು ಸೇರಿಸಲಾಗಿದೆ-ವರದಿ
ಎಫ್‌ಐಆರ್‌ನ ಪ್ರಕಾರ, ಎಲ್ಲಾ ಆರೋಪಿಗಳು ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವ ಉದ್ದೇಶದಿಂದ ಮತ್ತು ಜನರ ನಡುವೆ ಕೋಮು ಬಿರುಕು ಮೂಡಿಸುವ ಉದ್ದೇಶದಿಂದ ಪ್ರಚೋದಕ ಭಾಷಣಗಳನ್ನು ಮಾಡಿದ್ದಾರೆ.
ಕಾರ್ಯಕ್ರಮದ ವೀಡಿಯೊ ತುಣುಕನ್ನು ಪರಿಶೀಲಿಸಿದ ನಂತರ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇತ್ತೀಚೆಗೆ ರಾಯ್‌ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಹಾತ್ಮಾ ಗಾಂಧಿ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿದ ಆರೋಪದಲ್ಲಿ ಸ್ವಾಮಿ ಕಾಳಿಚರಣ್ ವಿರುದ್ದ ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢದಲ್ಲಿ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ.
2018 ರಲ್ಲಿ ಪುಣೆ ಜಿಲ್ಲೆಯ ಕೋರೆಗಾಂವ್-ಭೀಮಾದಲ್ಲಿ ನಡೆದ ಹಿಂಸಾಚಾರ ಪ್ರಕರಣದಲ್ಲಿ ಮಿಲಿಂದ್ ಏಕ್ಬೋಟೆ ಆರೋಪಿಯಾಗಿದ್ದಾನೆ.
ಇದನ್ನೂ ಓದಿ:ಭೀಮಾ ಕೋರೆಗಾಂವ್ ಖೈದಿಗಳ ಬಿಡುಗಡೆ ಮಾಡಿ-ಮೋದಿಗೆ ನೊಬೆಲ್ ಪ್ರಶಸ್ತಿ ವಿಜೇತರು ಮತ್ತು ಯುರೋಪಿಯನ್ ಸಂಸದರ ಪತ್ರ


