ಉತ್ತರಾಖಂಡದ ಹರಿದ್ವಾರದಲ್ಲಿ ನಡೆದ ‘ಧರ್ಮ ಸಂಸದ್’ ವೇಳೆ ದ್ವೇಷಪೂರಿತ ಭಾಷಣ ಮಾಡಿದ ಆರೋಪದ ಪ್ರಕರಣದ ತನಿಖೆಗೆ ಐವರು ಸದಸ್ಯರ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಲಾಗಿದೆ.
“ಹರಿದ್ವಾರದಲ್ಲಿ ನಡೆದ ಧರ್ಮ ಸಂಸದ್ ದ್ವೇಷ ಭಾಷಣ ಪ್ರಕರಣದ ಬಗ್ಗೆ ತನಿಖೆ ನಡೆಸಲು ಎಸ್‌ಪಿ ಮಟ್ಟದ ಅಧಿಕಾರಿಯ ನೇತೃತ್ವದಲ್ಲಿ 5 ಸದಸ್ಯರ ಎಸ್‌ಐಟಿಯನ್ನು ರಚಿಸಲಾಗಿದೆ. ತಪ್ಪಿತಸ್ಥರೆಂದು ಪತ್ತೆಯಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಗರ್ವಾಲ್ ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ (ಡಿಐಜಿ), ಕರಣ್ ಸಿಂಗ್ ನಾಗನ್ಯಾಲ್ ಹೇಳಿದ್ದಾರೆ.
ಹರಿದ್ವಾರ ಪೊಲೀಸರು ದ್ವೇಷಪೂರಿತ ಭಾಷಣದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ನಲ್ಲಿ ಹಿಂದೂ ಮುಖಂಡರಾದ ಯತಿ ನರಸಿಂಹಾನಂದ ಮತ್ತು ಸಾಗರ್ ಸಿಂಧುರಾಜ್ ಅವರ ಹೆಸರನ್ನು ಸೇರಿಸಿದ್ದಾರೆ.
ಇದನ್ನೂ ಓದಿ: ಹರಿದ್ವಾರದ ದ್ವೇಷ ಭಾಷಣಗಳ ವಿರುದ್ಧ ಸ್ವಯಂಪ್ರೇರಿತ ಕ್ರಮಕ್ಕಾಗಿ ಸುಪ್ರೀಂಕೋರ್ಟ್‌ಗೆ ಪತ್ರ ಬರೆದ 76 ಖ್ಯಾತ ವಕೀಲರು
“ವೈರಲ್ ವೀಡಿಯೋ ಕ್ಲಿಪ್ ಆಧಾರದ ಮೇಲೆ, ಹೆಚ್ಚಿನ ತನಿಖೆಯ ನಂತರ, ಧರ್ಮ ಸಂಸದ್ ದ್ವೇಷ ಭಾಷಣ ಪ್ರಕರಣದಲ್ಲಿ ಇನ್ನೂ ಇಬ್ಬರ ಹೆಸರುಗಳು, ಸಾಗರ್ ಸಿಂಧು ಮಹಾರಾಜ್ ಮತ್ತು ಯತಿ ನರಸಿಂಹಾನಂದ ಗಿರಿ ಅವರನ್ನು ಎಫ್‌ಐಆರ್‌ನಲ್ಲಿ ಸೆಕ್ಷನ್ 295 ಎ ಸೇರಿಸಲಾಗಿದೆ” ಎಂದು ಉತ್ತರಾಖಂಡದ ಪೊಲೀಸ್ ಮಹಾನಿರ್ದೇಶಕ ಅಶೋಕ್ ಕುಮಾರ್ ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಧರ್ಮ್ ದಾಸ್, ಅನ್ನಪೂರ್ಣ, ವಾಸಿಂ ರಿಜ್ವಿ ಅಕಾ ಜಿತೇಂದ್ರ ತ್ಯಾಗಿ ಮತ್ತು ಇತರ ಕೆಲವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಈ ಹಿಂದೆ ತಿಳಿಸಿದ್ದರು.
ಕಳೆದ ತಿಂಗಳು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದ ಉತ್ತರ ಪ್ರದೇಶ ಕೇಂದ್ರ ಶಿಯಾ ವಕ್ಫ್ ಬೋರ್ಡ್‌ನ ಮಾಜಿ ಅಧ್ಯಕ್ಷರಾಗಿದ್ದ ರಿಜ್ವಿ ವಿರುದ್ಧ ಉತ್ತರಾಖಂಡ್ ಪೊಲೀಸರು ಎಫ್‌ಐಆರ್ ದಾಖಳಿಸಿದ್ದಾರೆ. ಐಪಿಸಿಯ ಸೆಕ್ಷನ್ 153 ಎ (ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
ಡಿಸೆಂಬರ್ 17 ಮತ್ತು 19 ರ ನಡುವೆ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿರುವ ಹಲವು ಬಲಪಂಥೀಯ ನಾಯಕರು ಬಹಿರಂಗವಾಗಿಯೇ ಮುಸ್ಲಿಮರ ವಿರುದ್ಧ ಹಿಂಸಾಚಾರಕ್ಕೆ ಕರೆ ನೀಡಿದ್ದಾರೆ. ಈ ಭಾಷಣದ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.


