ದೇಶಾದ್ಯಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ಇಡಬ್ಲ್ಯೂಎಸ್ (ಆರ್ಥಿಕವಾಗಿ ದುರ್ಬಲ ವಿಭಾಗ) ಮೀಸಲಾತಿ ಫಲಾನುಭವಿಗಳನ್ನು ಗುರುತಿಸಲು ಈಗ ಅಸ್ತಿತ್ವದಲ್ಲಿರುವ ಮಾನದಂಡಗಳನ್ನು ಈ ಶೈಕ್ಷಣಿಕ ವರ್ಷಕ್ಕೆ ಉಳಿಸಿಕೊಳ್ಳಲಾಗುವುದು ಎಂದು ಸರ್ಕಾರ ತಿಳಿಸಿದೆ.
ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿರುವ ಸರ್ಕಾರ, ನೀಟ್ (ನ್ಯಾಷನಲ್ ಎಲಿಜಿಬಿಲಿಟಿ ಕಮ್ ಎಂಟ್ರೆನ್ಸ್ ಟೆಸ್ಟ್) ಬರೆದ ವಿದ್ಯಾರ್ಥಿಗಳಿಗೆ ಪ್ರವೇಶ ಮತ್ತು ಕಾಲೇಜುಗಳ ಹಂಚಿಕೆ ನಡೆಯುತ್ತಿರುವ ಈ ಸಮಯದಲ್ಲಿ ನಿಯಮಗಳ ಬದಲಾವಣೆಯು ತೊಡಕುಗಳಿಗೆ ಕಾರಣವಾಗುತ್ತದೆ” ಎಂದು ಪ್ರತಿಕ್ರಿಯಿಸಿದೆ.
ಮುಂದಿನ ಶೈಕ್ಷಣಿಕ ವರ್ಷದಿಂದ ಇಡಬ್ಲ್ಯೂಎಸ್ ನಿಯಮಗಳ ಪರಿಷ್ಕರಣೆಗಳನ್ನು ಅನ್ವಯಿಸಬಹುದು ಎಂದು ಸರ್ಕಾರ ತಿಳಿಸಿದೆ.
ಪರಿಷ್ಕೃತ EWS ಮಾನದಂಡವು ವಿವಾದಾತ್ಮಕವಾಗಿದ್ದು ₹ 8 ಲಕ್ಷ ವಾರ್ಷಿಕ ಆದಾಯದ ಮಿತಿಯನ್ನು ಉಳಿಸಿಕೊಂಡಿದೆ. ಆದರೆ ಆದಾಯವನ್ನು ಲೆಕ್ಕಿಸದೆ ಐದು ಎಕರೆ ಅಥವಾ ಅದಕ್ಕಿಂತ ಹೆಚ್ಚಿನ ಕೃಷಿ ಭೂಮಿ ಹೊಂದಿರುವ ಕುಟುಂಬಗಳನ್ನು ಹೊರತುಪಡಿಸುತ್ತದೆ.
₹ 8 ಲಕ್ಷ ವಾರ್ಷಿಕ ಆದಾಯದ ಮಾನದಂಡವು ಸಂವಿಧಾನದ 14, 15 ಮತ್ತು 16 ನೇ ವಿಧಿಗಳಿಗೆ ಅನುಗುಣವಾಗಿದೆ ಎಂದು ಸರ್ಕಾರ ಈ ಹಿಂದೆ ವಾದಿಸಿತ್ತು.
ನವೆಂಬರ್‌ನಲ್ಲಿ ನಡೆದ ಕೊನೆಯ ವಿಚಾರಣೆಯಲ್ಲಿ, ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, “ಪ್ರಸ್ತುತ ಆದಾಯ ಮಾನದಂಡಗಳನ್ನು ಮರುಪರಿಶೀಲಿಸಲಾಗುವುದು ಮತ್ತು ನಾಲ್ಕು ವಾರಗಳಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು” ಎಂದು ಹೇಳಿದ್ದರು.
ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠಕ್ಕೆ ಸರ್ಕಾರದ ವಾದ ಅಷ್ಟಾಗಿ ಒಪ್ಪಿಗೆಯಾಗಲಿಲ್ಲ. “ನೀವು ಕೆಲವು ಜನಸಂಖ್ಯಾ ಅಥವಾ ಸಾಮಾಜಿಕ-ಆರ್ಥಿಕ ಅಂಕಿ-ಅಂಶವನ್ನು ಹೊಂದಿರಬೇಕು” ಎಂದು ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದರು.
₹ 8 ಲಕ್ಷ ಮಿತಿಗೆ ಯಾವುದೇ ಆಧಾರವಿದೆಯೇ ಎಂದು ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠ ಸರ್ಕಾರವನ್ನು ಪ್ರಶ್ನಿಸಿತ್ತು. ವಾರ್ಷಿಕ ₹ 8 ಲಕ್ಷಕ್ಕಿಂತ ಕಡಿಮೆ ಆದಾಯದ ಗುಂಪಿನಲ್ಲಿರುವ ಇತರ ಹಿಂದುಳಿದ ವರ್ಗಗಳು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ ಎಂದು ಸೂಚಿಸುವ ಯಾವುದೇ ಸಾಮಾಜಿಕ, ಪ್ರಾದೇಶಿಕ ಅಥವಾ ಇತರ ಯಾವುದೇ ಸಮೀಕ್ಷೆ, ಡೇಟಾ ಇದೆಯೇ ಎಂದು ನ್ಯಾಯಾಲಯ ಕೇಳಿತ್ತು.
ಕಳೆದ ವಾರ ದೆಹಲಿಯಲ್ಲಿ ಕಿರಿಯ ವೈದ್ಯರು NEET ಕೌನ್ಸೆಲಿಂಗ್ ಮತ್ತು ಪ್ರವೇಶದ ವಿಳಂಬವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು. ಭಾರತದಾದ್ಯಂತ ಮಾನದಂಡಗಳನ್ನು ಹೇಗೆ ಅನ್ವಯಿಸಬಹುದು ಎಂಬುದನ್ನು ನ್ಯಾಯಾಲಯವು ತಿಳಿದುಕೊಳ್ಳಲು ಬಯಸಿದೆ. “ಒಂದು ಸಣ್ಣ ಪಟ್ಟಣ ಅಥವಾ ಹಳ್ಳಿಯಲ್ಲಿರುವ ಒಬ್ಬ ವ್ಯಕ್ತಿಯ ಗಳಿಕೆಯನ್ನು ಮೆಟ್ರೋ ನಗರಗಳಲ್ಲಿ ಅದೇ ರೀತಿ ಗಳಿಸುವವರಿಗೆ ಹೇಗೆ ಸಮೀಕರಿಸಬಹುದು?” ಎಂದು ಕೇಳಿದೆ.
EWS ಕೋಟಾ ಸಮಸ್ಯೆಯು NEET ಪ್ರವೇಶದ ಮೇಲೆ ಪರಿಣಾಮ ಬೀರಿದೆ, ಇದರಿಂದಾಗಿ ಕಳೆದ ವಾರ ರಾಷ್ಟ್ರ ರಾಜಧಾನಿಯಲ್ಲಿ ಕಿರಿಯ ವೈದ್ಯರು ನೇಮಕಾತಿ ವಿಳಂಬದ ವಿರುದ್ಧ ಪ್ರತಿಭಟನೆಯನ್ನು ಪ್ರಾರಂಭಿಸಿದರು.
ಸರ್ಕಾರದ ವಿಳಂಬ ನೀತಿಯನ್ನು ವೈದ್ಯರು ಪ್ರಶ್ನಿಸುತ್ತಿದ್ದಾರೆ. ದೇಶದ ಆರೋಗ್ಯ ರಕ್ಷಣೆಗೆ, ವಿಶೇಷವಾಗಿ ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿನ ಒತ್ತಡ ಹಾಗೂ ಗಂಭೀರ ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡುತ್ತಿದ್ದಾರೆ.
ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ತಜ್ಞರ ಸಮಿತಿಯು ಇಡಬ್ಲ್ಯೂಎಸ್ ನಿಯಮಗಳ ಪರಿಷ್ಕರಣೆ ವರದಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲು ಒಪ್ಪಿದ ನಂತರ ಪ್ರತಿಭಟನೆಯನ್ನು ಸ್ಥಗಿತಗೊಳಿಸಲಾಯಿತು.
ಇದನ್ನೂ ಓದಿರಿ: ನಿಮ್ಮಿಂದಾಗಿ ನಾನು ನೇಣು ಹಾಕಿಕೊಳ್ಬೇಕಾ? ಸುವರ್ಣ ಟಿ.ವಿ. ವಿರುದ್ಧ ನಟಿ ಸಂಜನಾ ಕಿಡಿ


