ರಾಜ್ಯದಲ್ಲಿ ಕೊರೊನಾ ಉಲ್ಬಣಗೊಳ್ಳುತ್ತಿದ್ದು, ಸೋಮವಾರ 1290 ಹೊಸ ಪ್ರಕರಣಗಳು ವರದಿಯಾಗಿವೆ. ದೈನಂದಿನ ಪಾಸಿಟಿವಿಟಿ ದರ 1.60% ಇದ್ದು, ಅದರಲ್ಲೂ 90% ಪ್ರಕರಣಗಳು ಬೆಂಗಳೂರಿನಿಂದಲೇ ವರದಿಯಾಗುತ್ತಿವೆ. ಹೀಗಾಗಿ ರಾಜ್ಯ ರಾಜಧಾನಿಯಲ್ಲಿ ಶೀಘ್ರದಲ್ಲೇ ಕಠಿಣ ನಿರ್ಬಂಧಗಳನ್ನು ಹೇರಲಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.
“ಇಂದು ಸಂಜೆ 6 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ತನ್ನ ಹಿರಿಯ ಸಂಪುಟ ಸಹೋದ್ಯೋಗಿಗಳು ಮತ್ತು ಕೊರೊನಾ ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಸಭೆ ನಡೆಸಲಿದ್ದು, ರಾಜ್ಯದಲ್ಲಿ ಓಮೈಕ್ರಾನ್ ಹರಡುವಿಕೆಯನ್ನು ವಿಶ್ಲೇಷಿಸಿದ ನಂತರ ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ನಿರ್ಧರಿಸಲಾಗುವುದು” ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಮಂಗಳವಾರ ತಿಳಿಸಿದ್ದಾರೆ.
ಇದನ್ನೂ ಓದಿ:ಓಮೈಕ್ರಾನ್ ಆತಂಕ: ದೆಹಲಿಯಲ್ಲಿ ವೀಕೆಂಡ್ ಕರ್ಫ್ಯೂ ಘೋಷಣೆ
“ಬೆಂಗಳೂರು ವಿಮಾನ ನಿಲ್ದಾಣದಲ್ಲಿನ ಕ್ರಮಗಳು, ಮೈಕ್ರೋ ಕಂಟೈನ್‌ಮೆಂಟ್ ವಲಯಗಳು, ಶಾಲೆಗಳು ಮತ್ತು ಇತರ ನಿರ್ಬಂಧಗಳ ಕುರಿತು ಚರ್ಚಿಸಲಾಗುವುದು. ಬೆಂಗಳೂರು ಈ ಹಿಂದಿನ ಎರಡು ಅಲೆಗಳ ಕೇಂದ್ರಬಿಂದುವಾಗಿತ್ತು. ಜೊತೆಗೆ ಕರ್ನಾಟಕದಲ್ಲಿ ಪ್ರಾರಂಭವಾಗಿರುವ ಮೂರನೇ ಅಲೆಯಲ್ಲಿ ಅದೇ ಸಂಭವಿಸುವ ಸಾಧ್ಯತೆಯಿದೆ” ಎಂದು ಅವರು ಹೇಳಿದ್ದಾರೆ.
“ಬೇರೆ ದೇಶಗಳು ಮತ್ತು ರಾಜ್ಯಗಳ ಜನರು ಬೆಂಗಳೂರಿಗೆ ಪ್ರಯಾಣಿಸುತ್ತಿದ್ದಾರೆ. ಆದ್ದರಿಂದ ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿವೆ. ನಗರದಲ್ಲಿ ಹರಡುವಿಕೆಯನ್ನು ನಿಯಂತ್ರಿಸಿದರೆ, ರಾಜ್ಯದಲ್ಲೂ ಹರಡುವಿಕೆಯನ್ನು ನಿಯಂತ್ರಿಸಬಹುದು” ಎಂದು ಸುಧಾಕರ್ ಹೇಳಿದ್ದಾರೆ.
ಇದನ್ನೂ ಓದಿ:ಪ್ರಕರಣ ಹೆಚ್ಚಾದರೆ ಶಾಲೆ ಮುಚ್ಚಲು ಹಿಂದೆ ಸರಿಯುವುದಿಲ್ಲ: ಶಿಕ್ಷಣ ಸಚಿವ ನಾಗೇಶ್
ರಾಜ್ಯದಲ್ಲಿ ಕೊರೊನಾ ಹರಡುವುದನ್ನು ತಡೆಯಲು ಸಾಧ್ಯವಿಲ್ಲ ಆದರೆ ವಿವಿಧ ಕ್ರಮಗಳ ಮೂಲಕ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡಬಹುದು ಎಂದು ಅವರು ಹೇಳಿದ್ದಾರೆ.
ಇತ್ತೀಚೆಗೆ ಜನರ ಜೀವನ ಮತ್ತು ಜೀವನೋಪಾಯಗಳು ಸಹಜ ಸ್ಥಿತಿಗೆ ಮರಳಿರುವುದರಿಂದ ಲಾಕ್‌ಡೌನ್‌ನಂತಹ ಪದಗಳನ್ನು ಬಳಸಬೇಡಿ ಎಂದು ಅವರು ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ. ಸಾಮಾನ್ಯ ಜನರಿಗೆ ತೊಂದರೆಯಾಗದಂತೆ ಕ್ರಮಗಳನ್ನು ತರಲು ರಾಜ್ಯ ಸರ್ಕಾರ ಉದ್ದೇಶಿಸಿದೆ ಎಂದು ಅವರು ತಿಳಿಸಿದ್ದಾರೆ.
15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೊರೊನಾ ಲಸಿಕೆ ನೀಡುವುದನ್ನು ರಾಜ್ಯದಲ್ಲಿ ಸೋಮವಾರದಿಂದ ಪ್ರಾರಂಭಿಸಲಾಗಿದೆ.
ಇದನ್ನೂ ಓದಿ:2 ಡೋಸ್ ಪಡೆದವರಿಗಷ್ಟೇ ಮಾಲ್, ಥಿಯೇಟರ್‌ಗೆ ಪ್ರವೇಶ: ರಾಜ್ಯ ಸರ್ಕಾರ ನಿರ್ಧಾರ


