‘ಬುಲ್ಲಿ ಬಾಯ್’ ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಸೈಬರ್ ಪೊಲೀಸರು ಉತ್ತರಾಖಂಡದ ಮತ್ತೊಬ್ಬ ವಿದ್ಯಾರ್ಥಿಯನ್ನು ಬಂಧಿಸಿದ್ದಾರೆ.
“ಮಾಯಾಂಕ್ ರಾವಲ್ (21) ಎಂದು ಗುರುತಿಸಲಾದ ವಿದ್ಯಾರ್ಥಿಯನ್ನು ಬುಧವಾರ ಮುಂಜಾನೆ ಬಂಧಿಸಲಾಯಿತು” ಎಂದು ಅಧಿಕಾರಿಯೊಬ್ಬರು ಇಂದು (ಜನವರಿ 5) ಪಿಟಿಐಗೆ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರ ಸೈಬರ್ ಘಟಕವು ಈ ಹಿಂದೆ ಉತ್ತರಾಖಂಡದ ಪ್ರಮುಖ ಆರೋಪಿ ಶ್ವೇತಾ ಸಿಂಗ್ (18) ಮತ್ತು ಬೆಂಗಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿ ವಿಶಾಲ್ ಕುಮಾರ್ ಝಾ (21) ಅವರನ್ನು ಬಂಧಿಸಿತ್ತು.
ಮುಂಬೈ ಪೊಲೀಸ್ ಕಮಿಷನರ್ ಹೇಮಂತ್ ನಗ್ರಾಳೆ ಸುದ್ದಿಗಾರರೊಂದಿಗೆ ಮಾತನಾಡಿ, “ಬುಲ್ಲಿ ಬಾಯ್ ಆ್ಯಪ್ ಅನ್ನು ಐವರು ಅನುಸರಿಸುತ್ತಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಅವರಲ್ಲಿ ಮೂವರನ್ನು ಬಂಧಿಸಲಾಗಿದೆ. ಎಲ್ಲಾ ಐವರನ್ನು ವಿಚಾರಿಸಲಾಗಿದ್ದು, ಅವರ ಆನ್‌ಲೈನ್ ಸಂವಹನಗಳನ್ನು ಟ್ರ್ಯಾಕ್ ಮಾಡಲಾಗಿದೆ” ಎಂದು ತಿಳಿಸಿದ್ದಾರೆ.
ಆ್ಯಪ್‌ನ ಆಪರೇಟರ್‌ಗಳು ಯಾರು, ಟ್ವಿಟರ್ ಹ್ಯಾಂಡಲ್‌ಗಳನ್ನು ಯಾರು ಆರಂಭಿಸಿದರು ಎಂಬುದೂ ಪೊಲೀಸರಿಗೆ ತಿಳಿದುಬಂದಿರುವುದಾಗಿ ಅವರು ಹೇಳಿಕೆ ನೀಡಿದ್ದಾರೆ.
“ಇದುವರೆಗೆ ಬಂಧಿತರಾಗದ ಆರೋಪಿಗಳ ಹೆಚ್ಚಿನ ತನಿಖೆ ಆನ್‌ಲೈನ್ ಮತ್ತು ಇಂಟರ್ನೆಟ್ ಮೂಲವಾಗಿರುವುದರಿಂದ ಸಾಕ್ಷ್ಯವನ್ನು ನಾಶಪಡಿಸಲು ಪ್ರಯತ್ನಿಸಬಹುದು” ಎಂದು ನಗ್ರಾಲ್ ಹೇಳಿದ್ದಾರೆ.
“ನಿಮ್ಮೆಲ್ಲರನ್ನೂ ನಮ್ಮೊಂದಿಗೆ ಸಹಕರಿಸುವಂತೆ ನಾನು ವಿನಂತಿಸುತ್ತೇನೆ. ಹೆಚ್ಚಿನ ವಿವರಗಳಿಗಾಗಿ ಒತ್ತಾಯಿಸಬೇಡಿ” ಎಂದು ಅವರು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.
ಏನಿದು ‘ಬುಲ್ಲಿ ಬಾಯ್’ ಆ್ಯಪ್?
ಗಿಟ್ ಹಬ್ ಪ್ಲಾಟ್‌ಫಾರ್ಮ್ ಮೂಲಕ ರಚನೆಗೊಂಡ ಮೊಬೈಲ್ ಅಪ್ ಬುಲ್ಲಿ ಬಾಯ್. ಇದರಲ್ಲಿ ದುಷ್ಕರ್ಮಿಗಳು ಮಹಿಳೆಯರ ಚಿತ್ರಗಳನ್ನು ಪ್ರಕಟಿಸಿ ಅಸಭ್ಯ ಕಮೆಂಟ್‌ಗಳನ್ನು ಮಾಡಲಾಗುತ್ತಿತ್ತು. ಅಲ್ಲದೆ ಬೇರೆಯವರು ಸಹ ಇದೇ ಮಾಡುವಂತೆ ಪ್ರಚೋದನೆ ನೀಡಲಾಗುತ್ತಿತ್ತು. ಆ ಮೂಲಕ ಟ್ವಿಟರ್‌ನಲ್ಲಿ #BulliBai ಎಂಬ ಹ್ಯಾಷ್ ಟ್ಯಾಗ್ ಅನ್ನು ಟ್ರೆಂಡಿಂಗ್ ಮಾಡಲಾಗುತ್ತಿತ್ತು.
ಈ ಮುಂಚೆ ಸುಲ್ಲಿ ಡೀಲ್ ಎಂಬ ಆಪ್ ಮೂಲಕ ಮಹಿಳೆಯರ ಚಿತ್ರಗಳನ್ನು ಪ್ರಕಟಿಸಿ ಮಾರಾಟಕ್ಕಿದ್ದಾರೆ ಎಂಬ ಕಮೆಂಟ್ ಮಾಡುವ ಮೂಲಕ ಅವಮಾನ ಮಾಡಲಾಗುತ್ತಿತ್ತು. ಕೆಲವೊಮ್ಮೆ ಧಾರ್ಮಿಕವಾಗಿ ಹೀಯಾಳಿಸಲು ಇದನ್ನು ಬಳಸಿಕೊಳ್ಳಲಾಗಿತ್ತು. ಅದೇ ರೀತಿ ಬುಲ್ಲಿ ಬಾಯ್ ನಲ್ಲಿಯೂ 100 ಮುಸ್ಲಿಂ ಮಹಿಳೆಯರ ಚಿತ್ರಗಳನ್ನು ಪ್ರಕಟಿಸಿ ಮಾರಾಟಕ್ಕಿದ್ದಾರೆ ಎಂದು ಪ್ರಕಟಿಸಿದಾಗ ಅದರಲ್ಲಿ ಒಬ್ಬ ಖ್ಯಾತ ಮುಸ್ಲಿಂ ಪತ್ರಕರ್ತೆಯ ಫೋಟೊ ಸಹ ಪ್ರಕಟಿಸಲಾಗಿತ್ತು. ಇಂದಿನ ನಿಮ್ಮ ಬುಲ್ಲಿ ಬಾಯ್ ಇವರು ಎಂದು ಮಹಿಳೆಯರ ಫೋಟೊಗಳನ್ನು ಅಪ್‌ಲೋಡ್ ಮಾಡಿ ಅದರ ಕೆಳಗೆ ಹರಾಜಿಗಿಡಲಾಗಿದೆ ಎಂದು ಬರೆದು ವಿಕೃತಿ ಮೆರೆಯಲಾಗುತ್ತಿತ್ತು. ಪತ್ರಕರ್ತರೊಬ್ಬರು ದೆಹಲಿ ಪೊಲೀಸರಿಗೆ ದೂರು ನೀಡಿದ ನಂತರ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿತ್ತು.
ದೆಹಲಿ ಪೊಲೀಸರು FIR ದಾಖಲಿಸಿದ ನಂತರ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು, “ಭಾರತ ಸರ್ಕಾರವು ದೆಹಲಿ ಮತ್ತು ಮುಂಬೈನಲ್ಲಿ ಪೊಲೀಸ್ ಸಂಸ್ಥೆಗಳೊಂದಿಗೆ ಈ ವಿಷಯದಲ್ಲಿ ಕೆಲಸ ಮಾಡುತ್ತಿದೆ” ಎಂದು ಟ್ವೀಟ್ ಮಾಡಿದ್ದರು. ಟ್ವಿಟರ್‌ನಲ್ಲಿ ಬುಲ್ಲಿ ಬಾಯ್ ಖಾತೆಯನ್ನು ಬ್ಲಾಕ್ ಮಾಡುವುದಲ್ಲದೆ, ಆಪ್ ಅನ್ನು ರದ್ದುಗೊಳಿಸಲಾಗಿತ್ತು. ಶಿವಸೇನಾ ನಾಯಕಿ ಪ್ರಿಯಾಂಕ ಅವರು ಈ ಕುರಿತು ಕ್ರಮ ಕೈಗೊಳ್ಳುವಂತೆ ಚತುರ್ವೇದಿ ಮುಂಬೈ ಪೊಲೀಸರ ಮೇಲೆ ಒತ್ತಡ ಹೇರಿದ್ದರು.
ಇದನ್ನೂ ಓದಿರಿ: ಬೆಂಗಳೂರು ಮೂಲದ ಯುವಕನ ಬಂಧನ: ಏನಿದು ಬುಲ್ಲಿ ಬಾಯ್ ಪ್ರಕರಣ?


