ವಿಕೃತ ದುಷ್ಕರ್ಮಿಗಳ ಗುಂಪೊಂದು ಬುಲ್ಲಿ ಬಾಯ್ ಮತ್ತು ಸುಲ್ಲಿಡೀಲ್ಸ್ ಎಂಬ ಮೊಬೈಲ್ ಆಪ್‌ಗಳ ಮೂಲಕ ಹೆಣ್ಣು ಮಕ್ಕಳ ಚಿತ್ರಗಳನ್ನು ಪ್ರಕಟಿಸಿ ಆಕ್ಷೇಪಾರ್ಹವಾಗಿ ಬರೆಯುತ್ತಿದ್ದ ಪ್ರಕರಣ ಎರಡು ದಿನಗಳಿಂದ ಸದ್ದು ಮಾಡುತ್ತಿದೆ. 100 ಮುಸ್ಲಿಂ ಮಹಿಳೆಯರ ಚಿತ್ರಗಳನ್ನು ಪ್ರಕಟಿಸಿ ಮಾರಾಟಕ್ಕಿದ್ದಾರೆ ಎಂಬ ಅಸಭ್ಯ ಟೀಕೆಗಳು ಬುಲ್ಲಿ ಬಾಯ್‌ನಲ್ಲಿ ಪ್ರಕಟಗೊಂಡ ನಂತರ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು ಮುಂಬೈ ಪೊಲೀಸರು ಬೆಂಗಳೂರು ಮೂಲದ 21 ವರ್ಷದ ಇಂಜಿನಿಯರಿಂಗ್ ಓದುತ್ತಿದ್ದ ಯುವಕನನ್ನು ಬಂಧಿಸಿದ್ದಾರೆ.
ಏನಿದು ಬುಲ್ಲಿ ಬಾಯ್?
ಗಿಟ್ ಹಬ್ ಪ್ಲಾಟ್‌ಫಾರ್ಮ್ ಮೂಲಕ ರಚನೆಗೊಂಡ ಮೊಬೈಲ್ ಅಪ್ ಬುಲ್ಲಿ ಬಾಯ್. ಇದರಲ್ಲಿ ದುಷ್ಕರ್ಮಿಗಳು ಮಹಿಳೆಯರ ಚಿತ್ರಗಳನ್ನು ಪ್ರಕಟಿಸಿ ಅಸಭ್ಯ ಕಮೆಂಟ್‌ಗಳನ್ನು ಮಾಡಲಾಗುತ್ತಿತ್ತು. ಅಲ್ಲದೆ ಬೇರೆಯವರು ಸಹ ಇದೇ ಮಾಡುವಂತೆ ಪ್ರಚೋದನೆ ನೀಡಲಾಗುತ್ತಿತ್ತು. ಆ ಮೂಲಕ ಟ್ವಿಟರ್‌ನಲ್ಲಿ #BulliBai ಎಂಬ ಹ್ಯಾಷ್ ಟ್ಯಾಗ್ ಅನ್ನು ಟ್ರೆಂಡಿಂಗ್ ಮಾಡಲಾಗುತ್ತಿತ್ತು. ಈ ಮುಂಚೆ ಸುಲ್ಲಿ ಡೀಲ್ ಎಂಬ ಆಪ್ ಮೂಲಕ ಮಹಿಳೆಯರ ಚಿತ್ರಗಳನ್ನು ಪ್ರಕಟಿಸಿ ಮಾರಾಟಕ್ಕಿದ್ದಾರೆ ಎಂಬ ಕಮೆಂಟ್ ಮಾಡುವು ಮೂಲಕ ಅವಮಾನ ಮಾಡಲಾಗುತ್ತಿತ್ತು. ಕೆಲವೊಮ್ಮೆ ಧಾರ್ಮಿಕವಾಗಿ ಹೀಯಾಳಿಸಲು ಇದನ್ನು ಬಳಸಿಕೊಳ್ಳಲಾಗಿತ್ತು. ಅದೇ ರೀತಿ ಬುಲ್ಲಿ ಬಾಯ್ ನಲ್ಲಿಯೂ ಕೂಡ 100 ಮುಸ್ಲಿಂ ಮಹಿಳೆಯರ ಚಿತ್ರಗಳನ್ನು ಪ್ರಕಟಿಸಿ ಮಾರಾಟಕ್ಕಿದ್ದಾರೆ ಎಂದು ಪ್ರಕಟಿಸಿದಾಗ ಅದರಲ್ಲಿ ಒಬ್ಬ ಖ್ಯಾತ ಮುಸ್ಲಿಂ ಪತ್ರಕರ್ತೆಯ ಫೋಟೊ ಸಹ ಪ್ರಕಟಿಸಲಾಗಿತ್ತು. ಇಂದಿನ ನಿಮ್ಮ ಬುಲ್ಲಿ ಬಾಯ್ ಇವರು ಎಂದು ಮಹಿಳೆಯರ ಫೋಟೊಗಳನ್ನು ಅಪ್‌ಲೋಡ್ ಮಾಡಿ ಅದರ ಕೆಳಗೆ ಹರಾಜಿಗಿಡಲಾಗಿದೆ ಎಂದು ಬರೆದು ವಿಕೃತಿ ಮೆರೆಯಲಾಗುತ್ತಿತ್ತು. ಪತ್ರಕರ್ತರೊಬ್ಬರು ದೆಹಲಿ ಪೊಲೀಸರಿಗೆ ದೂರು ನೀಡಿದ ನಂತರ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿತ್ತು.
ದೆಹಲಿ ಪೊಲೀಸರು FIR ದಾಖಲಿಸಿದ ನಂತರ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು “ಭಾರತ ಸರ್ಕಾರವು ದೆಹಲಿ ಮತ್ತು ಮುಂಬೈನಲ್ಲಿ ಪೊಲೀಸ್ ಸಂಸ್ಥೆಗಳೊಂದಿಗೆ ಈ ವಿಷಯದಲ್ಲಿ ಕೆಲಸ ಮಾಡುತ್ತಿದೆ” ಎಂದು ಟ್ವೀಟ್ ಮಾಡಿದ್ದರು. ಟ್ವಿಟರ್‌ನಲ್ಲಿ ಬುಲ್ಲಿ ಬಾಯ್ ಖಾತೆಯನ್ನು ಬ್ಲಾಕ್ ಮಾಡುವುದಲ್ಲದೆ, ಆಪ್ ಅನ್ನು ರದ್ದುಗೊಳಿಸಲಾಗಿತ್ತು. ಶಿವಸೇನಾ ನಾಯಕಿ ಪ್ರಿಯಾಂಕ ಚತುರ್ವೇದಿ ಮುಂಬೈ ಪೊಲೀಸರ ಮೇಲೆ ಈ ಕುರಿತು ಕ್ರಮ ಕೈಗೊಳ್ಳುವಂತೆ ಒತ್ತಡ ಹೇರಿದ್ದರು. ಆ ನಂತರ ಬೆಂಗಳೂರಿನ ಯುವಕನ ಬಂಧನವಾಗಿದೆ. ಯುವಕನ ವಯಸ್ಸು ಹೊರತುಪಡಿಸಿ ಉಳಿದ ಯಾವುದೇ ಮಾಹಿತಿಯನ್ನು ಪೊಲೀಸರು ಇದುವರೆಗೆ ನೀಡಿಲ್ಲ.
ಪೊಲೀಸರು ಐಪಿಸಿ ಮತ್ತು ಐಟಿ ಕಾಯ್ದೆಯ ಹಲವು ಸೆಕ್ಷನ್ ಗಳ ಆಧಾರದಲ್ಲಿ ಬುಲ್ಲಿ ಆಪ್ ತಯಾರಕರು, ಅದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡವರು, ಮುಂತಾದವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಬಿಜೆಪಿ ಪ್ರಚೋದನೆಯೇ ಕಾರಣ: ಮಲ್ಲಿಕಾರ್ಜುನ ಖರ್ಗೆ ಆಕ್ರೋಶ
ಬುಲ್ಲಿ ಬಾಯ್ ಪ್ರಕರಣದಲ್ಲಿ ಮುಸ್ಲಿಂ ಮಹಿಳೆಯರನ್ನು ಗುರಿಯಾಗಿಸಿ ಅಸಭ್ಯ ಫೋಟೊಗಳು ಹೊರಬರುತ್ತಿದ್ದಂತೆ ಇದಕ್ಕೆಲ್ಲಾ ಬಿಜೆಪಿ ಪ್ರಚೋದನೆಯೇ ಕಾರಣ ಎಂದು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, “ಮುಸ್ಲಿಂ ಮಹಿಳೆಯರ ಮೇಲಿನ ಈ ಅಸಹ್ಯಕರ ಕಿರುಕುಳವನ್ನು ಬಲವಾಗಿ ಖಂಡಿಸುತ್ತೇನೆ. ಇದು ಬಿಜೆಪಿ ನಾಯಕತ್ವವು ಪದೇ ಪದೇ ಅಲ್ಪಸಂಖ್ಯಾತರ ಮೇಲೆ ಅಮಾನವೀಯವಗಿ ವರ್ತಿಸಿದ್ದರ ಪರಿಣಾಮವಾಗಿದೆ. ಇದೇ ರೀತಿಯ ಕಿರುಕುಳಗಳು ಹಿಂದೆ ಕೇಳಿಬಂದಾಗ ಅವುಗಳನ್ನು ನಿರ್ಲಕ್ಷಿಸಿದ್ದು ಏಕೆ? ಈ ಬಾರಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನಾನು ಭಾವಿಸುತ್ತೇನೆ” ಎಂದಿದ್ದಾರೆ.
ಇದನ್ನೂ ಓದಿ: ದೇಶ ವಿಭಜನೆಯ ವಾಸ್ತವ ಸತ್ಯಗಳು: ಭಾಗ-ಒಂದು


