Homeಮುಖಪುಟಧರ್ಮ ಆಚರಿಸಿ, ದ್ವೇಷ ಭಾಷಣವನ್ನಲ್ಲ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

ಧರ್ಮ ಆಚರಿಸಿ, ದ್ವೇಷ ಭಾಷಣವನ್ನಲ್ಲ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

- Advertisement -
- Advertisement -

ದ್ವೇಷ ಭಾಷಣ ಮತ್ತು ಕೋಮುವಾದದ ವಿರುದ್ಧ ಸೋಮವಾರದಂದು ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಅವರು ಪ್ರಬಲ ಹೇಳಿಕೆ ನೀಡಿದ್ದಾರೆ. ಧರ್ಮವನ್ನು ಆಚರಿಸುವುದರಲ್ಲಿ ಯಾವುದೇ ತಪ್ಪಿಲ್ಲ, ಆದರೆ ಯಾವುದೇ ಸಮುದಾಯದ ವಿರುದ್ಧ ದ್ವೇಷದ ಭಾಷಣಗಳನ್ನು ಮಾಡಬಾರದು ಎಂದು ಅವರು ಹೇಳಿದ್ದಾರೆ. ಪ್ರತಿಯೊಬ್ಬ ಭಾರತೀಯರಿಗೂ ಅವರ ನಂಬಿಕೆಯನ್ನು ಆಚರಣೆ ಮಾಡುವ ಹಕ್ಕಿದೆ ಎಂದು ಉಪರಾಷ್ಟ್ರಪತಿ ಪ್ರತಿಪಾದಿಸಿದ್ದಾರೆ.

ಅವರು ಕೇರಳದ ಕೊಟ್ಟಾಯಂ ಬಳಿಯ ಮನ್ನನಂನಲ್ಲಿ ನಡೆದ ಕೇರಳ ಕ್ಯಾಥೋಲಿಕ್ ಸಮುದಾಯದ ಆಧ್ಯಾತ್ಮಿಕ ನಾಯಕ ಮತ್ತು ಸಮಾಜ ಸುಧಾರಕ ಸಂತ ಕುರಿಯಾಕೋಸ್ ಎಲಿಯಾಸ್ ಚವರ ಅವರ 150 ನೇ ಪುಣ್ಯತಿಥಿಯ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. “ನಿಮ್ಮ ಧರ್ಮವನ್ನು ಆಚರಣೆ ಮಾಡಿ ಆದರೆ ದ್ವೇಷ ಭಾಷಣ ಮತ್ತು ಬರಹಗಳ ಮೂಲಕ ನಿಂದಿಸುವುದರಲ್ಲಿ ತೊಡಗಿಸಿಕೊಳ್ಳಬೇಡಿ” ಎಂದು ಉಪರಾಷ್ಟ್ರಪತಿ ಹೇಳಿದ್ದಾರೆ.

ಇದನ್ನೂ ಓದಿ:ಹರಿದ್ವಾರ ’ಧರ್ಮ ಸಂಸದ್’ ದ್ವೇಷ ಭಾಷಣ: ತನಿಖೆ ನಡೆಸಲು ಎಸ್‌ಐಟಿ ರಚನೆ

ಎಲ್ಲಾ ಸಂಪ್ರದಾಯಗಳು ಮತ್ತು ನಂಬಿಕೆಗಳನ್ನು ಆಚರಿಸುವ ಭಾರತೀಯ ಸಂಸ್ಕೃತಿಯ ಜಾತ್ಯತೀತ ಸ್ವರೂಪವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಮತ್ತು ಆಚರಿಸಲು ಹಾಗೂ ಸೇವಾ ಮನೋಭಾವವನ್ನು ಶಾಲಾ ಹಂತದಿಂದಲೇ ಬೆಳೆಸುವಂತೆ ಉಪರಾಷ್ಟ್ರಪತಿ ಕರೆನೀಡಿದ್ದಾರೆ. ಜಾತ್ಯತೀತತೆ ಪ್ರತಿಯೊಬ್ಬ ಭಾರತೀಯನ ರಕ್ತದಲ್ಲಿದೆ ಮತ್ತು ದೇಶವು ತನ್ನ ಸಂಸ್ಕೃತಿ ಮತ್ತು ಪರಂಪರೆಗಾಗಿ ವಿಶ್ವಾದ್ಯಂತ ಗೌರವಿಸಲ್ಪಟ್ಟಿದೆ ಎಂದು ಅವರು ಹೇಳಿದ್ದಾರೆ.

“ವಾಸ್ತವವಾಗಿ, ಇತರರಿಗೆ ಹಂಚುವುದು ಮತ್ತು ಕಾಳಜಿಯ ತತ್ವವು ಭಾರತದ ಪ್ರಾಚೀನ ಸಂಸ್ಕೃತಿಯ ತಿರುಳಾಗಿದ್ದು, ಅದನ್ನು ವ್ಯಾಪಕವಾಗಿ ಪ್ರಚಾರ ಮಾಡಬೇಕು. ನಮಗೆ, ಇಡೀ ಪ್ರಪಂಚವು ನಮ್ಮ ಕಾಲಾತೀತ ಆದರ್ಶವಾದ ‘ವಸುಧೈವ ಕುಟುಂಬಕಂ’ನಲ್ಲಿ ಒಳಗೊಂಡಿರುವ ಒಂದು ಕುಟುಂಬವಾಗಿದೆ. ಈ ಮನೋಭಾವದಿಂದ ನಾವು ಒಟ್ಟಾಗಿ ಮುನ್ನಡೆಯಬೇಕು” ಎಂದು ವೆಂಕಯ್ಯ ನಾಯ್ಡು ಹೇಳಿದ್ದಾರೆ.

ಇದನ್ನೂ ಓದಿ:ದ್ವೇಷ ಭಾಷಣ: ಭೀಮಾ ಕೋರೆಗಾಂವ್ ಹಿಂಸಾಚಾರ ಆರೋಪಿ ಮಿಲಿಂದ್ ವಿರುದ್ಧ ಎಫ್ಐಆರ್

ಕುರಿಯಕೋಸ್ ಎಲಿಯಾಸ್ ಚವರ ಮತ್ತು ಶ್ರೀ ನಾರಾಯಣ ಗುರುಗಳಂತಹ ಸಮಾಜ ಸುಧಾರಕರ ಕಾರ್ಯವನ್ನು ಶ್ಲಾಘಿಸಿದ ಅವರು, ಸಾಮಾಜಿಕ ಪ್ರಗತಿ ಮತ್ತು ಶೈಕ್ಷಣಿಕ ಸಬಲೀಕರಣದ ಕ್ಷೇತ್ರಗಳಲ್ಲಿ ಅದರಲ್ಲೂ ವಿಶೇಷವಾಗಿ ಮಹಿಳೆಯರು ಮತ್ತು ಹಿಂದುಳಿದ ಸಮುದಾಯಗಳ ಕ್ಷೇತ್ರಗಳಲ್ಲಿ ಕೇರಳದಿಂದ ಇತರ ರಾಜ್ಯಗಳು ಸ್ಫೂರ್ತಿ ಪಡೆಯಬಹುದು ಎಂದು ಹೇಳಿದ್ದಾರೆ.

ಹರಿದ್ವಾರ ಮತ್ತು ರಾಯ್‌ಪುರದಲ್ಲಿ ಮುಸ್ಲಿಮರ ವಿರುದ್ಧ ಮಾಡಿದ ದ್ವೇಷ ಭಾಷಣಗಳು ಮತ್ತು ಕರ್ನಾಟಕದಲ್ಲಿ ಕ್ರಿಸ್‌ಮಸ್ ಆಚರಣೆಗಳ ಮೇಲೆ ನಡೆದ ದಾಳಿಗಳು ಸೇರಿದಂತೆ ದೇಶಾದ್ಯಂತ ಅಲ್ಪಸಂಖ್ಯಾತರ ಮೇಲೆ ನಡೆದ ವಿವಿಧ ದಾಳಿಗಳ ಹಿನ್ನಲೆಯಲ್ಲಿ ಅವರ ಈ ಹೇಳಿಕೆಗಳು ಬಹಳ ಪ್ರಾಮುಖ್ಯತೆಯನ್ನು ಹೊಂದಿವೆ.

ಇದನ್ನೂ ಓದಿ:ಉಡುಪಿ ದ್ವೇಷ ಭಾಷಣ: ಬೇಷರತ್‌‌ ಕ್ಷಮೆ ಕೇಳಿದ ತೇಜಸ್ವಿ ಸೂರ್ಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read