ತಮಿಳುನಾಡಿನಲ್ಲಿ 18ನೇ ಕೋವಿಡ್ ಮೆಗಾ ಲಸಿಕಾ ಶಿಬಿರವು ಪ್ರಸ್ತುತ 50,000 ಕೇಂದ್ರಗಳಲ್ಲಿ ನಡೆಯುತ್ತಿದೆ ಎಂದು ರಾಜ್ಯ ಸರ್ಕಾರ ಶನಿವಾರ ತಿಳಿಸಿದೆ. ರಾಜ್ಯವು ಕಳೆದ ವರ್ಷ ಸೆಪ್ಟೆಂಬರ್‌ನಿಂದ ಪ್ರತಿ ಭಾನುವಾರದಂದು ಇಂತಹ ಶಿಬಿರಗಳನ್ನು ಸರ್ಕಾರ ಆಯೋಜಿಸುತ್ತಿದೆ. ಈ ಬಾರಿ ಭಾನುವಾರ ಲಾಕ್‌ಡೌನ್ ಕಾರಣಕ್ಕೆ ಅದನ್ನು ಶನಿವಾರ ನಡೆಸಲಾಗುತ್ತಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಆರೋಗ್ಯ ಸಚಿವ ಮಾ ಸುಬ್ರಮಣಿಯನ್, “ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಸೂಚನೆಯ ಮೇರೆಗೆ, 18 ನೇ ಮೆಗಾ ಲಸಿಕೆ ಶಿಬಿರವು ಇಂದು 50,000 ಕೇಂದ್ರಗಳಲ್ಲಿ ನಡೆಯುತ್ತಿದೆ” ಎಂದು ಹೇಳಿದ್ದಾರೆ. ಚೆನ್ನೈನ ವೆಲಾಚೇರಿ ವಿಧಾನಸಭಾ ಕ್ಷೇತ್ರದ ಇಂದ್ರ ನಗರದಲ್ಲಿನ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ವೈವಾಹಿಕ ಅತ್ಯಾಚಾರ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯದ ಅತಿದೊಡ್ಡ ರೂಪ: ದೆಹಲಿ ಹೈಕೋರ್ಟ್‌ಗೆ ಅರ್ಜಿದಾರರು
ರಾಜ್ಯದಲ್ಲಿ ಇದುವರೆಗೆ 87,254,887 ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ. ಒಟ್ಟು 87,254,887 ಡೋಸ್‌ಗಳಲ್ಲಿ 52,234,274 ಫಸ್ಟ್ ಡೋಸ್‌ಗಳು ಮತ್ತು 35,020,613 ಎರಡು ಡೋಸ್ ಲಸಿಕೆ ನೀಡಲಾಗಿದೆ.
ರಾಜ್ಯದಲ್ಲಿ ಪ್ರಸ್ತುತ ರಾತ್ರಿ 10 ರಿಂದ ಬೆಳಿಗ್ಗೆ 5 ರ ವರೆಗೆ ನೈಟ್ ಕರ್ಫ್ಯೂ ಹೇರಲಾಗಿದೆ. ಭಾನುವಾರದಂದು ಸಂಪೂರ್ಣ ಲಾಕ್‌ಡೌನ್ ವಿಧಿಸಲಾಗಿದೆ. 1 ರಿಂದ 9 ನೇ ತರಗತಿಗಳಿಗೆ ಶಾಲೆಗಳನ್ನು ಮುಚ್ಚಲಾಗಿದ್ದು, ವಾಣಿಜ್ಯ ಸಂಸ್ಥೆಗಳು, ಸಾರ್ವಜನಿಕ ಸಾರಿಗೆಯು 50% ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುವಂತೆ ಆದೇಶಿಸಲಾಗಿದೆ.
ಶುಕ್ರವಾರ, ರಾಜ್ಯದಲ್ಲಿ 8,981 ಹೊಸ ಕೋವಿಡ್ ಪ್ರಕರಣಗಳು ಮತ್ತು ಎಂಟು ಕೊರೊನಾ ಸಂಬಂಧಿತ ಸಾವುಗಳು ವರದಿಯಾಗಿವೆ. ರಾಜ್ಯದಲ್ಲಿ ಇಲ್ಲಿಯವರೆಗೆ 121 ಒಮಿಕ್ರಾನ್ ರೂಪಾಂತರದ ಪ್ರಕರಣಗಳು ವರದಿಯಾಗಿದ್ದವು ಅವರೆಲ್ಲರೂ ಚೇತರಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.


