ಕನ್ನಡದ ದಿನಪತ್ರಿಕೆಗಳಾದ ‘ಪ್ರಜಾವಾಣಿ’, ‘ವಿಜಯವಾಣಿ’, ‘ಸಂಯುಕ್ತ ಕರ್ನಾಟಕ’, ‘ಹೊಸದಿಗಂತ’ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಮೇಕೆದಾಟು ಕುರಿತ ಎರಡು ಪುಟಗಳ ಜಾಹೀರಾತು ಓದುಗರಲ್ಲಿ ಗೊಂದಲ ಸೃಷ್ಟಿಸಿದೆ. ಜಾಹೀರಾತಿನ ವಾರಸುದಾರರು ಯಾರೆಂಬ ಪ್ರಶ್ನೆ ಓದುಗರಲ್ಲಿ ಮೂಡಿದೆ. ಈ ವಿಚಾರದಲ್ಲಿ ಸತ್ಯ ತಿಳಿಯಲು ನಾನುಗೌರಿ.ಕಾಂ ಆ ಪತ್ರಿಕೆಗಳನ್ನು ನೇರವಾಗಿ ಸಂಪರ್ಕಿಸಿತು. ಅವರೇನು ಹೇಳಿದರು ಎಂದು ನೋಡುವ ಮುನ್ನ, ಈ ಜಾಹೀರಾತಿನ ವಿವರಗಳನ್ನು ನೋಡೋಣ.
ಕಾಂಗ್ರೆಸ್ ನಾಯಕರು ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಪಾದಯಾತ್ರೆ ಆರಂಭಿಸಿದ ಹಿನ್ನೆಲೆಯಲ್ಲಿ ಕರ್ನಾಟಕದ ಬಿಜೆಪಿಯ ಅಧಿಕೃತ ಟ್ವಿಟರ್ ಖಾತೆ ಹಾಗೂ ಆರೋಗ್ಯ ಸಚಿವ ಡಾ.ಸುಧಾಕರ್ ಅವರ ಟ್ವಿಟರ್ ಖಾತೆಯ ಮೂಲಕ ಈ ಜಾಹೀರಾತುಗಳನ್ನು ಹಂಚಿಕೊಳ್ಳಲಾಗಿದೆ.
ದಿನಾಂಕ 8/01/2022ರಲ್ಲಿ ಸಂಯುಕ್ತ ಕರ್ನಾಟಕ ಹಾಗೂ ಪ್ರಜಾವಾಣಿ ಪತ್ರಿಕೆಗಳಲ್ಲಿ ‘ಜಾಹೀರಾತು’ ಪ್ರಕಟವಾಗಿತ್ತು. ದಿನಾಂಕ 9/01/2022ರಂದು ಸಚಿವ ಸುಧಾಕರ್ ಪ್ರಜಾವಾಣಿಯ ಜಾಹೀರಾತನ್ನು ಹಂಚಿಕೊಂಡಿದ್ದಾರೆ. 9/01/2022ರಂದು ‘ಹೊಸದಿಗಂತ’ ಎಂಬ ಪತ್ರಿಕೆಯಲ್ಲಿ ಪ್ರಕಟವಾಗಿರುವ ಜಾಹೀರಾತುಗಳನ್ನು ಕರ್ನಾಟಕ ಬಿಜೆಪಿಯ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
“ಅಧಿಕಾರವಿದ್ದಾಗ ಮೇಕೆದಾಟು ಯೋಜನೆ ಬಗ್ಗೆ ನಿರ್ಲಕ್ಷ್ಯ ತೋರಿದ್ದ ಕಾಂಗ್ರೆಸ್ ಈಗ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಬೀದಿನಾಟಕ ಮಾಡುತ್ತಿದೆ. ಅಧಿಕಾರವಿದ್ದಾಗ ಇಲ್ಲದ ಇಚ್ಛಾಶಕ್ತಿ, ಚುನಾವಣೆಗಾಗಿ ಬಂದಿರುವ ಹಠಾತ್ ರಾಜಕೀಯ ಆಸಕ್ತಿ ಎಲ್ಲವನ್ನೂ ಜನ ಗಮನಿಸುತ್ತಿದ್ದಾರೆ. ಮೇಕೆದಾಟು ಯೋಜನೆ ಜಾರಿ ಮಾಡುವ ನೈಜ ಬದ್ಧತೆ ಇರುವುದು ಬಿಜೆಪಿಗೆ ಮಾತ್ರ” ಎಂದು ಸುಧಾಕರ್ ಟ್ವೀಟ್ ಮಾಡಿದ್ದು, ಪ್ರಜಾವಾಣಿಯಲ್ಲಿ ಪ್ರಕಟವಾಗಿರುವ ಜಾಹೀರಾತನ್ನು ಹಂಚಿಕೊಂಡಿದ್ದಾರೆ.
ದಿನಪತ್ರಿಕೆಯಲ್ಲಿ ಶನಿವಾರ ಪ್ರಕಟಿಸಿದ ಜಾಹೀರಾತಿನಲ್ಲಿ ಜಾಹೀರಾತು ಕೊಟ್ಟವರ ಮಾಹಿತಿ ಇಲ್ಲ ಎಂಬುದು ಚರ್ಚೆಯ ವಿಷಯವಾಗಿದೆ. ಜಾಹೀರಾತು ಕೊಟ್ಟವರು ಯಾರೆಂಬುದೇ ಇಲ್ಲವಾದರೆ, ಅಲ್ಲಿ ಪ್ರಕಟವಾಗಿರುವ ಜಾಹೀರಾತನ್ನು ನಂಬುವುದಾದರೂ ಹೇಗೆ?
ಪತ್ರಿಕೆಗಳಲ್ಲಿ ಈ ರೀತಿಯಲ್ಲಿ ಜಾಹೀರಾತು ಪ್ರಕಟವಾಗಿರುವುದಕ್ಕೆ ಕೆಲವು ಓದುಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
“ಪತ್ರಿಕೆಗಳು ಜಾಹೀರಾತು ಪ್ರಕಟಿಸುವಾಗ ಆ ಜಾಹೀರಾತು ನೀಡಿದವರ ಹೆಸರನ್ನೋ, ಸಂಸ್ಥೆ/ಇಲಾಖೆಗಳ ಹೆಸರನ್ನೋ ದಾಖಲಿಸುವುದು ನೈತಿಕತೆ ಅನ್ನಬಹುದು. ಆದರೆ ಇಂದು ಪ್ರಜಾವಾಣಿ ಎರಡು ಪುಟಗಳಲ್ಲಿ ಕಾಂಗ್ರೆಸ್ಸಿನ ವೈಫಲ್ಯಗಳನ್ನು ಕುರಿತು ಪ್ರಕಟಿಸಿರುವ ಜಾಹೀರಾತಿನಲ್ಲಿ ಎಲ್ಲೂ ಕೂಡ ಪ್ರಕಟಿಸಿದವರ ಹೆಸರು ಇಲ್ಲ! ನಾಳೆ ಮತ್ತಿನ್ಯಾರೋ ಇನ್ನೇನೋ ಬರೆದು ಹೆಸರು ಹೇಳದೆ ಕಾಸು ಕೊಟ್ಟರೆ ಹೀಗೆ ಪ್ರಕಟಿಸುತ್ತಾರೆಯೆ?” ಎಂದು ಲೇಖಕ ವಿ.ಆರ್.ಕಾರ್ಪೆಂಟರ್ ಆಕ್ಷೇಪ ಎತ್ತಿದ್ದಾರೆ. ಅನೇಕ ಓದುಗರು ಕಮೆಂಟ್ ಮಾಡುವ ಮೂಲಕ ಪತ್ರಿಕೆಯ ನಿಲುವನ್ನು ಪ್ರಶ್ನಿಸಿದ್ದಾರೆ.

ಜಾಹೀರಾತು ಪ್ರಕಟವಾದ ಒಂದು ದಿನ ಬಳಿಕ ಜಾಹೀರಾತು ಕುರಿತು ‘ಪ್ರಜಾವಾಣಿ’ ಪತ್ರಿಕೆಯಲ್ಲಿ ವರದಿಯೊಂದು ಪ್ರಕಟವಾಗಿದೆ. ಜಲಸಂಪನ್ಮೂಲ ಸಚಿವ ಗೋವಿಂದ ಕಾರಾಜೋಳ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, “ಕಾಂಗ್ರೆಸ್‌ನವರು ಮೇಕೆದಾಟು ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ರಾಜಕೀಯವಾಗಿಯೇ ಉತ್ತರ ಕೊಡಲು ಸತ್ಯವನ್ನು ತಿಳಿಸಿದ್ದೇವೆ. ಜಾಹೀರಾತಿನಲ್ಲಿ ನಾನು ನನ್ನ ಅಥವಾ ಮುಖ್ಯಮಂತ್ರಿಯವರ ಫೋಟೋ ಹಾಕಿಕೊಂಡಿಲ್ಲ. ಜನರಿಗೆ ಇದ್ದದನ್ನು ಇದ್ದಂತೆ ತೋರಿಸಿದ್ದೇವೆ. ಸರ್ಕಾರದ ಕಡತದಲ್ಲಿದ್ದ ಮಾಹಿತಿಯನ್ನು ಮುಂದಿಟ್ಟಿದ್ದೇವೆ” ಎಂದಿದ್ದಾರೆ.
ಸಿದ್ದರಾಮಯ್ಯ ಅವರು ಸುದ್ದಿಗಾರರೊಂದಿಗೆ ಮಾತನಾಡಿದ್ದು, “ಮೇಕೆದಾಟು ಯೋಜನೆಗಳ ಸೇರಿದಂತೆ ನೀರಾವರಿ ಯೋಜನೆಗಳ ವಿಷಯದಲ್ಲಿ ಎರಡೂವರೆ ವರ್ಷದಿಂದ ಏನನ್ನೂ ಮಾಡದ ಬಿಜೆಪಿ ಸರ್ಕಾರ, ಸುಳ್ಳು ಜಾಹೀರಾತು ನೀಡಿ ಜನರನ್ನು ಹಾದಿ ತಪ್ಪಿಸುವ ಹುನ್ನಾರ ಮಾಡಿದೆ” ಎಂದಿದ್ದಾರೆ.
ಮಾಜಿ ನೀರಾವರಿ ಸಚಿವ ಎಂ.ಬಿ.ಪಾಟೀಲ್, “ಕಾರಜೋಳ ಒಬ್ಬ ಮೂರ್ಖ. ಮಂತ್ರಿ ಸ್ಥಾನಕ್ಕೆ ನಾಲಾಯಕ್. ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು. ಅಂತರ್ ರಾಜ್ಯ ಜಲ ವಿವಾದದ ಬಗ್ಗೆ ಕಾರಜೋಳ ಅವರಿಗೆ ಗೊತ್ತೇ ಇಲ್ಲ. ಬೆಂಗಳೂರಿಗೆ ಕುಡಿಯಲು ನೀರು ಸಿಕ್ಕಿದ್ದರೆ ಅದು ನಮ್ಮ ಪ್ರಯತ್ನ. ಅವರನ್ನು ಜಲಸಂಪನ್ಮೂಲ ಸಚಿವರನ್ನಾಗಿ ಇಟ್ಟುಕೊಂಡಷ್ಟು ದಿನವೂ ಹಾನಿಯಾಗುತ್ತಲೇ ಇರುತ್ತದೆ. ಪತ್ರಿಕೆಯಲ್ಲಿ ಜಾಹೀರಾತು ನೀಡುವ ಮೂಲಕ ಕಾರಜೋಳ ಅವರು ಮೂರನೇ ದರ್ಜೆಯ ಕೆಲಸ ಮಾಡುತ್ತಿದ್ದಾರೆ. ಜಾಹೀರಾತು ಪ್ರಾಯೋಜಿತ ಎಂದು ಹಾಕಿದ್ದಾರೆ. ಅನಾಮಧೇಯರು ಹಾಕಿದ್ದು ಅದು. ಯಾರ ಸತ್ಯ ದರ್ಶನ ಇದು. ಇದು ಯಾರ ವಿವೇಕ. ಬಿಜೆಪಿನೂ ಕೊಟ್ಟಿಲ್ಲ. ಸರ್ಕಾರ ಕೊಟ್ಟಿಲ್ಲ. ಸಂಘ ಸಂಸ್ಥೆಗಳೂ ಕೊಟ್ಟಿಲ್ಲ. ಹಾಗಿದ್ದರೆ ಕೊಟ್ಟವರು ಯಾರು? ಚಿಲ್ಲರೆಯಾಗಿ ವರ್ತನೆ ಮಾಡುತ್ತಿರುವುದು ಯಾರು? ಇದಕ್ಕೆಲ್ಲ ಕಾರಜೋಳ ಕಾರಣ” ಎಂದು ದೂರಿದ್ದಾರೆ.
ಕಾರಜೋಳ ಅವರು ಜಾಹೀರಾತು ಮೂಲವನ್ನು ತಿಳಿಸಿದ್ದರೂ ಸರ್ಕಾರದಿಂದ ನೀಡಲಾಗಿದೆಯೋ, ಪಕ್ಷದಿಂದ ನೀಡಲಾಗಿದೆಯೋ ಎಂದು ಸ್ಪಷ್ಟನೆ ನೀಡಿಲ್ಲ. ರಾಜಕೀಯ ನಾಯಕರ ಟೀಕೆ ವಿಮರ್ಶೆಗಳಿಗಿಂತ ಮುಖ್ಯವಾಗಿ ಚರ್ಚಿಸಬೇಕಾದ ಸಂಗತಿ ಮತ್ತೊಂದಿದೆ. ಹೀಗೆ ‘ವಾರಸುದಾರರಿಲ್ಲದ ಜಾಹೀರಾತುಗಳನ್ನು ಮುಂದೆಯೂ ಕೊಟ್ಟರೆ ಕನ್ನಡ ಪತ್ರಿಕೆಗಳು ಪ್ರಕಟಿಸುತ್ತವೆಯೇ? ಇಂತಹ ಜಾಹೀರಾತುಗಳನ್ನು ಪ್ರಕಟಿಸುವುದರಿಂದ ಓದುಗರು ಗೊಂದಲಕ್ಕೆ ಒಳಗಾಗುವುದಿಲ್ಲವೇ?’ ಎಂಬ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಾಗಿದೆ.
ಈ ಕುರಿತು ಪತ್ರಿಕೆಗಳಿಂದಲೇ ಸ್ಪಷ್ಟನೆ ಪಡೆದು ಓದುಗರಿಗೆ ತಿಳಿಸಬೇಕೆಂದು ‘ನಾನುಗೌರಿ.ಕಾಂ’ ನಿರ್ಧರಿಸಿತು. ಈ ನಿಟ್ಟಿನಲ್ಲಿ ಪ್ರಜಾವಾಣಿ, ವಿಜಯವಾಣಿ, ಸಂಯುಕ್ತ ಕರ್ನಾಟಕ ಪತ್ರಿಕೆಗಳನ್ನು ಸಂಪರ್ಕಿಸಲಾಯಿತು.
ಇನ್ನು ಮುಂದೆ ಈ ರೀತಿಯ ಜಾಹೀರಾತು ಪ್ರಕಟಿಸುವುದಿಲ್ಲ: ಪ್ರಜಾವಾಣಿ
ಮೊದಲಿಗೆ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಯ ಸಿಇಒ ಅವರನ್ನು ಸಂಪರ್ಕಿಸಲಾಯಿತು. ಅವರು ಔಟ್‌ಸೈಡ್ ಇರುವುದಾಗಿ ತಿಳಿಸಿ, ಪ್ರಜಾವಾಣಿಯ ಸಹ ಸಂಪಾದಕರಾದ ಎಂ.ನಾಗರಾಜ್ ಅಥವಾ ಕಾರ್ಯ ನಿರ್ವಾಹಕ ಸಂಪಾದಕರಾದ ರವೀಂದ್ರ ಭಟ್ಟ ಅವರನ್ನು ಸಂಪರ್ಕಿಸಲು ತಿಳಿಸಿದರು.
ರವೀಂದ್ರ ಭಟ್ಟ ಅವರನ್ನು ಸಂಪರ್ಕಿಸಲು ಯತ್ನಿಸಲಾದರೂ ‘ಸ್ವಿಚ್’ ಆಫ್ ಎಂದು ಬಂತು. ನಾಗರಾಜ್ ಅವರನ್ನು ಸಂಪರ್ಕಿಸಲು ಯತ್ನಿಸುವ ಮುನ್ನ ಪ್ರಜಾವಾಣಿ ಹಾಗೂ ಡೆಕ್ಕನ್ ಹೆರಾಲ್ಡ್‌ನ ಜಾಹೀರಾತು ವಿಭಾಗದ ಜನರಲ್ ಮ್ಯಾನೇಜರ್ ಸುದೀಪ್ ನಾಗ್ ಅವರನ್ನು ಸಂಪರ್ಕಿಸಲಾಯಿತು. ನಮ್ಮೊಂದಿಗೆ ಮಾತನಾಡಿದ ಅವರು, “ಮೇಕೆದಾಟು ಜಾಹೀರಾತು ವಿಷಯದ ಕುರಿತು ವಿಚಾರಿಸುವುದಾದರೆ ಸರ್ಕಾರಿ ಜಾಹೀರಾತು, ನೋಟಿಫಿಕೇಷನ್‌ಗಳನ್ನು ನೋಡಿಕೊಳ್ಳುವ ನಂದಕುಮಾರ್ ಎಂಬವರನ್ನು ಸಂಪರ್ಕಿಸಿ” ಎಂದು ನಂಬರ್ ನೀಡಿದರು.
ನಂದಕುಮಾರ್ ಅವರು ಸಂಪರ್ಕಿಸಲಾಯಿತು. ನಮ್ಮೊಂದಿಗೆ ಮಾತನಾಡಿದ ಅವರು, “ಜಾಹೀರಾತುಗಳು ಜಾಹೀರಾತು ಏಜೆನ್ಸಿಗಳಿಂದ ಬರುತ್ತವೆ. ಈಗ ಚರ್ಚೆಯ ವಸ್ತುವಾಗಿರುವ ಜಾಹೀರಾತು ಒಂದು ಏಜೆನ್ಸಿಯಿಂದ ಬಂದಿದೆ. ಇದೇ ಏಜೆನ್ಸಿ ಎಲ್ಲ ಪತ್ರಿಕೆಗಳಿಗೂ ನೀಡಿದೆ” ಎಂದರು.
“ಜಾಹೀರಾತು ನೀಡಿದವರು ಯಾರೆಂಬುದು ಇಲ್ಲದಿದ್ದರೂ ಜಾಹೀರಾತು ಪ್ರಕಟಿಸಲಾಗುವುದೇ?” ಎಂದು ಕೇಳಿದೆವು. “ಒಂದೊಂದು ಸಲ ಜಾಹೀರಾತಿನ ವಿಷಯಗಳು ಗೊತ್ತಾಗುವುದಿಲ್ಲ. ಹೀಗಾಗಿ ಜಾಹೀರಾತು ಎಂದು ಮೇಲ್ಭಾಗದಲ್ಲಿ ಇದು ಜಾಹೀರಾತೆಂದು ಬರೆದು ಪ್ರಕಟಿಸಲಾಗುತ್ತಿದೆ” ಎಂದು ತಿಳಿಸಿದರು.
“ಜಾಹೀರಾತನ್ನು ಯಾರು ಕೊಟ್ಟಿದ್ದಾರೆ ಎಂದು ನಮೂದಿಸಿದ್ದರೆ ನಾವು ನಂಬಬೇಕೋ ಬೇಡವೋ ಎಂದು ಓದುಗರು ನಿರ್ಧರಿಸುತ್ತಾರಲ್ಲವೇ? ಹೆಸರಿಲ್ಲದೆ ಜಾಹೀರಾತು ಕೊಟ್ಟಿದ್ದನ್ನು ಪ್ರಜಾವಾಣಿ ಸ್ವೀಕರಿಸುತ್ತದೆಯೇ” ಎಂದು ಕೇಳಿದೆವು. “ಹಾಗಲ್ಲ. ಜಾಹೀರಾತು ಬಂದಿದೆ ಎಂದ ಮೇಲೆ ಅದರ ಹಿಂದೆ ಯಾವುದಾದರೂ ಇಲಾಖೆ ಇದ್ದೇ ಇರುತ್ತದೆ. ಅವರು ಏಜೆನ್ಸಿಯ ಮೂಲಕ ನೀಡಿರುತ್ತಾರೆ. ಏಜೆನ್ಸಿಗಳು ಪತ್ರಿಕೆಗಳಿಗೆ ಜಾಹೀರಾತು ನೀಡುತ್ತವೆ” ಎಂದರು. “ಹಾಗಾದರೆ ಈ ಜಾಹೀರಾತು ಎಲ್ಲಿಂದ ಬಂದಿದ್ದು?” ಎಂದು ಕೇಳಿದೆವು. “ಝೇಂಕಾರ್ ಏಜೆನ್ಸಿಯಿಂದ ಜಾಹೀರಾತು ಬಂದಿದೆ. ಈ ಏಜೆನ್ಸಿಯು ಸರ್ಕಾರದಿಂದ ಅನುಮೋದನೆ ಪಡೆದಿದೆ” ಎಂದರು.
“ಯಾರು ಜಾಹೀರಾತು ಕೊಟ್ಟಿದ್ದರೂ, ಏಜೆನ್ಸಿಯಿಂದ ಜಾಹೀರಾತು ಬಂದರೆ ಸ್ವೀಕರಿಸುತ್ತೀರಾ?” ಎಂದು ಕೇಳಿದಾಗ, “ಹಾಗಲ್ಲ. ಪ್ರತಿ ಸಲವೂ ಜಾಹೀರಾತು ಬಂದಾಗ ವಿಚಾರಿಸಲಾಗುತ್ತದೆ. ಹೆಸರಿಲ್ಲದೆ ಜಾಹೀರಾತು ಬಂದಿದ್ದು ಇದೇ ಮೊದಲು” ಎಂದರು.
“ಮುಂದಿನ ಸಲವೂ ಇದೇ ರೀತಿಯ ಜಾಹೀರಾತು ಬಂದರೆ ಪ್ರಜಾವಾಣಿ ಮುಂದೆಯೂ ಪ್ರಕಟಿಸುತ್ತದೆಯೇ?” ಎಂದು ಮುಂದುವರಿದು ಪ್ರಶ್ನಿಸಲಾಯಿತು. “ಯಾವುದೇ ಜಾಹೀರಾತು ಬಂದರೂ ಅದು ಪತ್ರಿಕೆ ಹೊಣೆಯಲ್ಲ ಎಂದು ನಾವು ಪ್ರಕಟಿಸಿರುತ್ತೇವೆ. ಪಬ್ಲಿಕ್ ನೋಟೀಸ್ ಬರುತ್ತವೆ. ಲಾಯರ್ ನೋಟಿಸ್ ಜೊತೆಗೆ ಜಾಹೀರಾತು ಪಬ್ಲಿಕ್ ನೋಟೀಸ್ ಜಾಹೀರಾತುಗಳು ಇರುತ್ತವೆ. ಲಾಯರ್ ನೋಟೀಸ್ ಆಧಾರದಲ್ಲಿ ಜಾಹೀರಾತು ಪ್ರಕಟಿಸುತ್ತೇವೆ. ಈಗ ಏಜೆನ್ಸಿಯಿಂದ ಬಂದಿದೆ. ಏಜೆನ್ಸಿಯವರು ನಮಗೆ ಹಣವನ್ನು ನೀಡುತ್ತಾರೆ. ಅವರು ಎಲ್ಲಿಂದ ಹಣವನ್ನು ಕಲೆಕ್ಟ್ ಮಾಡಿಕೊಳ್ಳುತ್ತಾರೋ ಗೊತ್ತಿಲ್ಲ.
“ಏಜೆನ್ಸಿ ಮೂಲಕ ಯಾರೇ ಲೇಖನ ಬರೆದು ಕೊಟ್ಟರೂ ಅವರ ಹೆಸರು ಹಾಕದೆ ಪ್ರಕಟಿಸುತ್ತೀರಾ?” ಎಂದು ಕೇಳಿದೆವು. “ಹಾಗೆ ಮಾಡಲು ಆಗಲ್ಲ. ಈಗ ಜಾಹೀರಾತು ನೀಡಿರುವುದು ಸರ್ಕಾರದ ಅನುಮೋದನೆ ಪಡೆದ ಏಜೆನ್ಸಿ. ಹೀಗಾಗಿ ಇವರ ಮೂಲಕ ಜಾಹೀರಾತು ಬಂದಾಗ ನಾವು ನಂಬಿದೆವು. ಯಾರೋ ಇನ್ನೊಬ್ಬರು ಏನೋ ಜಾಹೀರಾತು ಕೊಟ್ಟರೆ ಹಾಕಲು ಸಾಧ್ಯವೇ?” ಎಂದು ನಮ್ಮನ್ನು ಪ್ರಶ್ನಿಸಿದರು.
“ಹಾಗಾದರೆ ಸದರಿ ಏಜೆನ್ಸಿಯಿಂದ ಇದೇ ರೀತಿಯ ಜಾಹೀರಾತು ಬಂದರೆ ಮತ್ತೆ ಪ್ರಜಾವಾಣಿ ಜಾಹೀರಾತನ್ನು ಪ್ರಕಟಿಸುತ್ತದೆಯೇ?” ಎಂದು ನೇರವಾಗಿ ಕೇಳಿದೆವು. “ಯಾವುದೇ ಕಾರಣಕ್ಕೂ ಅಂತಹ ಜಾಹೀರಾತನ್ನು ಹಾಕುವುದಿಲ್ಲ. ಈ ರೀತಿಯ ಜಾಹೀರಾತು ಮತ್ತೊಮ್ಮೆ ಬರುವ ಸಾಧ್ಯತೆ ಇದೆ. ಅದು ಪ್ರಜಾವಾಣಿಗೆ ಬರುವುದಿಲ್ಲ, ಡೆಕ್ಕನ್ ಹೆರಾಲ್ಡ್‌ಗೆ ಬರಬಹುದು. ಈಗಾಗಲೇ ಮುದ್ರಣವಾಗಿರುವ ವಿಷಯವನ್ನು ಭಾಷಾಂತರ ಮಾಡಿ ಕೊಡಬಹುದು. ಅದನ್ನು ನಾವು ಪ್ರಕಟಿಸುವುದಿಲ್ಲ. ಇದು ಗ್ಯಾರಂಟಿ. ನಮಗೆ ಗೊತ್ತಿಲ್ಲದೇ ಒಂದು ಜಾಹೀರಾತು ಪ್ರಕಟವಾಗಿದೆ. ಇನ್ನು ಮುಂದೆ ಹುಷಾರಾಗಿರುತ್ತೇವೆ. ಈ ಜಾಹೀರಾತು ಸಂಬಂಧ ಸಂಪಾದಕರೂ ಸೂಚನೆ ನೀಡಿದ್ದಾರೆ. ಮಾಹಿತಿ ಮತ್ತು ಪ್ರಚಾರ ಇಲಾಖೆಯ ಆಯುಕ್ತರು ನಿನ್ನೆ ಕರೆ ಮಾಡಿ ನನ್ನೊಂದಿಗೆ ಮಾತನಾಡಿದರು. ಈ ಜಾಹೀರಾತು ಇಲಾಖೆಯಿಂದ ಅನುಮೋದನೆ ಪಡೆದಿಲ್ಲ. ನಮ್ಮ ಕಡೆಯಿಂದ ಪೇಮೆಂಟ್ ಆಗಲ್ಲ ಎಂದರು. ಯಾರ ಕಡೆಯಿಂದ ಜಾಹೀರಾತು ಬಂದಿದೆ ಎಂದು ವಿಚಾರಿಸಿದರು. ಝೇಂಕಾರ್‌ನಿಂದ ಬಂದಿದೆ ಎಂದು ತಿಳಿಸಿದೆ. ಅವರು ಹಣ ಕೊಟ್ಟರೆ ತೆಗೆದುಕೊಳ್ಳಿ. ಆದರೆ ನಾವು ಕೊಡುವುದಿಲ್ಲ” ಎಂದರು. “ಈ ರೀತಿಯ ಜಾಹೀರಾತುಗಳು ಮುಂದೆ ಬಂದಲ್ಲಿ ಯಾವುದೇ ಕಾರಣಕ್ಕೂ ಪ್ರಜಾವಾಣಿ ಹಾಗೂ ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳು ತೆಗೆದುಕೊಳ್ಳುವುದಿಲ್ಲ” ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.
ಪ್ರಜಾವಾಣಿ ಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕರಾದ ರವೀಂದ್ರ ಭಟ್ ಅವರು ನಮ್ಮ ಕರೆಗೆ ತಡವಾಗಿ ಲಭ್ಯವಾದರು. ಜಾಹೀರಾತು ವಿಭಾಗದಿಂದ ಬಂದ ಪ್ರತಿಕ್ರಿಯೆಯನ್ನು ಅವರ ಗಮನಕ್ಕೆ ತಂದಾಗ ಈ ರೀತಿ ಜಾಹೀರಾತು ಪ್ರಕಟವಾಗಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು.
“ವಿಳಾಸವಿಲ್ಲದ ಜಾಹೀರಾತನ್ನು ತೆಗೆದುಕೊಳ್ಳಬಾರದೆಂದು ಜಾಹೀರಾತು ವಿಭಾಗಕ್ಕೆ ಸೂಚನೆ ನೀಡಲಾಗಿದೆ. ನನ್ನ ಗಮನಕ್ಕೆ ಬಾರದೆ ಈ ಜಾಹೀರಾತು ಬಂದಿತ್ತು. ಬೆಳಿಗ್ಗೆ ನೋಡಿದ ತಕ್ಷಣ ಜಾಹೀರಾತು ವಿಭಾಗದೊಂದಿಗೆ ಪ್ರಶ್ನಿಸಿದೆ. ನಾಳೆ ನಮ್ಮ ಬಗ್ಗೆಯೋ ನಿಮ್ಮ ಬಗ್ಗೆಯೋ ಯಾರೋ ಏನೋ ಜಾಹೀರಾತು ಕೊಡುತ್ತಾನೆ. ಹಾಕಲು ಸಾಧ್ಯವಿಲ್ಲ. ಜಾಹೀರಾತಿನ ವಾರಸುದಾರರನ್ನು ಓದುಗರಿಗೆ ನಾವು ತಿಳಿಸಲೇಬೇಕು” ಎಂದರು.
ನಂಬಲರ್ಹ ಮೂಲಗಳಿಂದ ಈ ರೀತಿಯ ಜಾಹೀರಾತು ಬಂದರೆ ಪ್ರಕಟಿಸುತ್ತೇವೆ: ವಿಜಯವಾಣಿ
ವಾರಸುದಾರರರಿಲ್ಲದ ಜಾಹೀರಾತಿನ ಕುರಿತು ವಿಜಯವಾಣಿ ಪತ್ರಿಕೆಯ ಸಂಪಾದಕರಾದ ಚನ್ನೇಗೌಡ ಅವರೊಂದಿಗೆ ಮಾತನಾಡಲಾಯಿತು. ಅವರು ಹೇಳಿದಿಷ್ಟು:
“ಝೇಂಕಾರ್ ಎಂಬ ಜಾಹೀರಾತು ಏಜೆನ್ಸಿಯಿಂದ ಜಾಹೀರಾತು ಬಂದಿರುವಂತಿದೆ. ಯಾವುದೇ ವಿಷಯವನ್ನು ತೆಗೆದುಕೊಳ್ಳುವಾಗ ಸಂಪಾದಕೀಯ ವಿಭಾಗದಿಂದ ಅಭಿಪ್ರಾಯವನ್ನು ಕೇಳುತ್ತಾರೆ. ಯಾರಿಗೂ ಮಾನಹಾನಿಯಾಗಲ್ಲ ಅಂದರೆ ಪ್ರಕಟಿಸುತ್ತೇನೆ. ಈಗ ಬಂದಿರುವ ಜಾಹೀರಾತು ಮಾಹಿತಿಯನ್ನು ಒಳಗೊಂಡಿದೆ. ಅದಕ್ಕೆ ಮೂಲ ಬೇಕೆಂದು ಇಲ್ಲವಲ್ಲ. ಜನರಿಗೆ ಉಪಯೋಗವಾಗುವಂತಹ ಜಾಹೀರಾತು ಕೊಟ್ಟರೆ ನಾವು ಅದನ್ನು ತೆಗೆದುಕೊಳ್ಳುತ್ತೇವೆ. ಜನರಿಗೆ ಉಪಯೋಗವಾಗಬೇಕು. ಯಾರಿಗೂ ತೇಜೋವಧೆ ಆಗಬಾರದು. ಯಾರಿಗೂ ಮಾನಹಾನಿಯಾಗಬಾರದು ಅಷ್ಟೇ. ಈ ಜಾಹೀರಾತಿನಲ್ಲಿ ಏತಕ್ಕಾಗಿ ಮೂಲವನ್ನು ಉಲ್ಲೇಖಿಸಿಲ್ಲ ಎಂಬುದಕ್ಕೆ ನನ್ನ ಬಳಿ ಮಾಹಿತಿ ಇದೆ. ಯಾವ ಕಾರಣಕ್ಕೆ ಹೆಸರು ಹಾಕಿಲ್ಲ ಎಂಬುದಕ್ಕೆ ಜಾಹೀರಾತು ಕೊಟ್ಟವರು ನಮ್ಮೊಂದಿಗೆ ಮಾತನಾಡಿದ್ದಾರೆ. ಮೂಲವನ್ನು ರಿವೀಲ್ ಮಾಡದಿರುವುದಕ್ಕೆ ಸಮಜಾಯಿಷಿ ನೀಡಿದ್ದಾರೆ. ಹಾಗಾಗಿ ಇದು ಸ್ವೀಕಾರಾರ್ಹ. ನೀವು ನಾಳೆ ಒಂದು ಜಾಹೀರಾತು ತಂದು, ಹೆಸರನ್ನು ಮುಚ್ಚಿಡುವ ಕಾರಣವನ್ನು ತಿಳಿಸಿದರೆ, ಅದು ಒಪ್ಪಬಹುದಾದ ಸಂಗತಿಯಾದರೆ ನಾವು ಅದನ್ನು ಒಪ್ಪಬಹುದಲ್ಲ” ಎಂದು ಸ್ಪಷ್ಟಪಡಿಸಿದರು.
“ಓದುಗರು ಮೂಲವನ್ನು ಕೇಳಿದರೆ ಹೇಳಬೇಕಲ್ಲ?” ಎಂದು ಮರು ಪ್ರಶ್ನಿಸಿದಾಗ, “ಯಾರೋ ಮೂರ್ನಾಲ್ಕು ಜನ ಮೂಲವನ್ನು ಕೇಳುತ್ತಿದ್ದಾರೆ. ಈ ಕುರಿತು ಕೇಳಲು ನಮಗೆ ಕರೆ ಮಾಡಿರುವುದು ನೀವೊಬ್ಬರೇ” ಎಂದರು. “ಕಾಂಗ್ರೆಸ್‌ನವರು ನಾಳೆ ಬಂದು ಜಾಹೀರಾತು ನೀಡಿದರೂ ಸ್ವೀಕರಿಸುತ್ತೇವೆ” ಎಂದು ಸ್ಪಷ್ಟಪಡಿಸಿದರು.
ನೀರಾವರಿ ಇಲಾಖೆಯನ್ನು ಕೇಳಿ: ಸಂಯುಕ್ತ ಕರ್ನಾಟಕ
‘ಸಂಯುಕ್ತ ಕರ್ನಾಟಕ’ ಪತ್ರಿಕೆಯ ಸಂಪಾದಕರಾದ ಹುಣಸವಾಡಿ ರಾಜನ್ ಮಾತನಾಡಿ, “ಸರ್ಕಾರವನ್ನು ಕೇಳಿ. ನನ್ನನ್ನು ಕೇಳಿದರೆ ಪ್ರತಿಕ್ರಿಯಿಸಲು ಆಗಲ್ಲ. ನೀರಾವರಿ ಇಲಾಖೆ ಏನು ಹೇಳುತ್ತದೆಯೋ ಅದು ಕರೆಕ್ಟ್” ಎಂದರು.
‘ಹೊಸ ದಿಗಂತ’ ಪತ್ರಿಕೆಯನ್ನು ಸಂಪರ್ಕಿಸಿಲ್ಲ.
ಇದನ್ನೂ ಓದಿರಿ: ಹರಿಯೋ ನೀರು, ಉರಿಯೋ ಸೂರ್ಯನ ತಡೆಯಲಾಗಲ್ಲ, ಮೇಕೆದಾಟು ಹೋರಾಟ ನಿಲ್ಲಿಸಲಾಗಲ್ಲ: ಡಿ.ಕೆ.ಶಿವಕುಮಾರ್



ಆ ಸರ್ಕಾರ ಹಾಗೆ ಮಾಡಿದರೆ , ಈಗ ಈ ಸರ್ಕಾರ ಬಂದು ಮೂರು ವರುಷ ಕಳೆಯಿತಲ್ಲ…. ಏನು ಮಾಡ್ತಿತು…? ಇಬ್ಬರೂ ಅಣ್ಣ ತಮ್ಮಂದಿರೇ….
ನಾನು ನೋಡಿದ ಹಾಗೆ… ಈ ಸರ್ಕಾರ ಗೋಹತ್ಯೆ ನಿಷೇಧ, ಮತಾಂತರ ನಿಷೇಧ, ಕಾಯ್ದೆ ಲಾಕ್ ಡೌನ್ (ಕೆಲಸಕ್ಕೆ ಬಾರದ) ಇಂತಹ ಚಟುವಟಿಕೆಗಳನ್ನು ಮಾತ್ರ ಮಾಡಿರುವುದು ಬಿಟ್ರೆ ಬೇರೇನೂ ಮಾಡಿದ್ದು ನನಗೂ ಗೊತ್ತಿಲ್ಲ. ಅಬಿವೃದ್ಧಿ ಕಾರ್ಯ ಎಲ್ಲಿದೆ…? ಇನ್ನು ಮುಂದೆ ನಾವು ಓಟು ಹಾಕ್ತೇವ…..?
ಇದು ಜಾಹಿರಾತು ಎಂದು ಯಾಕೆ ನಾವು ಗ್ರಹಿಸಬೇಕು? ಇದು ಪತ್ರಿಕೆಯ ಸುದ್ದಿ ಎಂದೇ ಜನ ಓದುತ್ತಾರೆ. ಪುಟ ವಿನ್ಯಾಸ, ಚಿತ್ರ , ಬಾಕ್ಸ್ ಐಟಂ ಇತ್ಯಾದಿ ಗಮನಿಸಿದರೆ ಪತ್ರಿಕೆಯ ವಿಶೇಷ ಲೇಖನ ತರಹ , ಪತ್ರಿಕೆಯ ವಿಸ್ವಸಾರ್ಹತೆಯನ್ನೂ ಸದರಿ ಲೇಖನ ಒಳಗೊಂಡಿದೆ.
ಇದರ ಅರ್ಥ , ಒಂದು ವೇಳೆ ಇದು ಜಾಹಿರಾತು ಎಂದು ಅನಾಮಧೆಯರು ಹಣ ನೀಡಿ ತನ್ನ ಹೆಸರು ಉಲ್ಲೇಖಿಸದೇ ಇಂತಹ ಲೇಖನ, ಸುದ್ದಿ ಪ್ರಕಟಿಸಿದರೆ ಆಯಾ ಪತ್ರಿಕೆಗಳು ಕಾಸಿಗಾಹಿ ತನ್ನ ವಿಸ್ವಸಾರ್ಹತೆಯನ್ನು ಮಾರಿಕೊಂಡಿದ್ದಾರೆ.
ಇದು ಪತ್ರಿಕಾ ಧರ್ಮ ಅಲ್ಲ. ಓದುಗರ ಜೊತೆ ವಿಸ್ವಸಘಾತ. ಇದು ಪೇಡ್ ನ್ಯೂಜ್. ಇದು ಅನೈತಿಕ.
– ಗಂಧರ್ವ ಸೇನಾ, ಬೀದರ
Good job
“ಮಾರಿಕೊಂಡ ಮಾದ್ಯಮ”ಗಳು, ಓದುಗರ ಮುಂದೆ ಬೆತ್ತಲಾಗಿವೆ. “ನೀನು ಏನಾದರೂ ಮಾಡು, ಆದರೆ ಸಾದ್ಯವಾದಶ್ಟು ಬೇಗ ದುಡ್ಡು ಮಾಡು” ಎಂಬ ಸಿದ್ದಾಂತಕ್ಕೆ ಈಗ ಮಾದ್ಯಮಗಳೂ ಜೋತುಬಿದ್ದಿರುವುದು, ಈ ನಾಡಿನ, ದೇಶದ ದುರಂತ.