ಹಿಂದೂಯೇತರರನ್ನು ದೂರವಿಡಿ ಎಂದು ಪೋಸ್ಟರ್ ಹಾಕುವ ಮೂಲಕ ಕೋಮುದ್ವೇಷ ಹರಡಲು ಯತ್ನಿಸಿದ ಐವರ ವಿರುದ್ಧ ವಾರಣಾಸಿ ಪೊಲೀಸರು ಜನವರಿ 9ರಂದು ಎಫ್‌ಐಆರ್ ದಾಖಲಿಸಿದ್ದಾರೆ.
ವಾರಣಾಸಿಯ ವಿವಿಧ ಘಾಟ್‌ಗಳಲ್ಲಿ ಹಿಂದೂಯೇತರರನ್ನು ದೂರವಿಡುವಂತೆ ಎಚ್ಚರಿಕೆ ನೀಡುವ ಪೋಸ್ಟರ್‌ಗಳನ್ನು ಹಾಕಲಾಗಿತ್ತು. ಈ ಕುರಿತು ಇಲ್ಲಿನ ಭೇಲುಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಆದರೆ, ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ.
ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮತ್ತು ಬಜರಂಗದಳದ ಸದಸ್ಯರು ವಾರಣಾಸಿಯ ಘಾಟ್‌ಗಳ ಸುತ್ತಲೂ ಪೋಸ್ಟರ್‌ಗಳನ್ನು ಅಂಟಿಸಿದ್ದರು. ಅದರಲ್ಲಿ ಹಿಂದೂಯೇತರರು ವಾರಣಾಸಿಯಲ್ಲಿ ಗಂಗಾನದಿಯ ದಂಡೆಗೆ ಭೇಟಿ ನೀಡುವುದನ್ನು ನಿಷೇಧಿಸಲಾಗಿದೆ ಎಂದು ಪೋಸ್ಟರ್‌ನಲ್ಲಿ ಬರೆಯಲಾಗಿತ್ತು. ಈ ಪೋಸ್ಟರ್‌ಗಳನ್ನು ಹಾಕುತ್ತಿರುವ ಫೋಟೋಗಳು, ವೀಡಿಯೊಗಳನ್ನೂ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ.
ಐವರು ಆರೋಪಿಗಳಲ್ಲಿ ಇಬ್ಬರು ವಿಎಚ್‌ಪಿ ಮತ್ತು ಬಜರಂಗದಳಕ್ಕೆ ಸೇರಿದವರು. ಅವರೇ ಈ ಕುರಿತು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಇಬ್ಬಿಬ್ಬರನ್ನು ರಾಜನ್ ಗುಪ್ತಾ, ನಿಖಿಲ್ ತ್ರಿಪಾಠಿ “ರುದ್ರ” ಎಂದು ಪೊಲೀಸರು ಗುರುತಿಸಿದ್ದಾರೆ.
ವಿಎಚ್‌ಪಿಯ ವಾರಣಾಸಿ ವಿಭಾಗದ ಕಾರ್ಯದರ್ಶಿ ರಾಜನ್ ಗುಪ್ತಾ ಅವರು ವೀಡಿಯೊವೊಂದರಲ್ಲಿ, “ಈ ಪೋಸ್ಟರ್‌ಗಳು ಮನವಿಯಲ್ಲ, ಆದರೆ ಸನಾತನ ಧರ್ಮವನ್ನು ಅನುಸರಿಸದವರಿಗೆ ಎಚ್ಚರಿಕೆ” ಎಂದು ಹೇಳಿದ್ದಾರೆ ಎಂದು ದಿ ವೈರ್ ವರದಿ ಮಾಡಿದೆ.
ಇಲ್ಲಿನ ಘಾಟ್‌ಗಳು, ಕಾಶಿಯ ದೇವಾಲಯಗಳನ್ನು ಹಿಂದೂ ಧರ್ಮ ಮತ್ತು ಸಂಸ್ಕೃತಿಯ ಸಂಕೇತಗಳೆಂದು ಕರೆದಿರುವ ಗುಪ್ತಾ, ಇತರರು ಇಲ್ಲಿಂದ ದೂರವಿರಬೇಕು ಎಂದು ಹೇಳುತ್ತಾರೆ. “ಈ ಸ್ಥಳಗಳಿಗೆ ಭೇಟಿ ನೀಡುವವರು ಹಿಂದೂ ಧರ್ಮದಲ್ಲಿ ನಂಬಿಕೆ ಹೊಂದಿದ್ದರೆ, ಅವರಿಗೆ ಸ್ವಾಗತವಿದೆ. ಇಲ್ಲದಿದ್ದರೆ ನಾವು ಅವರನ್ನು ನಮ್ಮ ಪವಿತ್ರ ಸ್ಥಳಗಳಿಂದ ವಾಪಸ್ ಕಳುಹಿಸುತ್ತೇವೆ” ಎಂದು ಎಚ್ಚರಿಸಿದ್ದಾರೆ.
ಬಜರಂಗದಳದ ವಾರಣಾಸಿ ಸಂಯೋಜಕ, ನಿಖಿಲ್ ತ್ರಿಪಾಠಿ ‘ರುದ್ರ’ ಮಾತನಾಡಿ, “ಗಂಗಾ ನದಿ ನಮ್ಮ ತಾಯಿ, ಇದು ಪಿಕ್ನಿಕ್ ಸ್ಪಾಟ್ ಅಲ್ಲ. ಗಂಗೆಯನ್ನು ಪಿಕ್ನಿಕ್ ಸ್ಪಾಟ್ ಎಂದು ಪರಿಗಣಿಸುವವರು ಅದರಿಂದ ದೂರವಿರಬೇಕು. ಅವರಾಗಿಯೇ ಇದನ್ನು ಪಾಲಿಸದಿದ್ದರೆ ಬಜರಂಗದಳ ಈ ಕೆಲಸವನ್ನು ಮಾಡಿಸುತ್ತದೆ” ಎಂದಿದ್ದಾರೆ.
ಇಬ್ಬರನ್ನು ಸಂಘಟನೆಗಳಿಂದ ತೆಗೆದುಹಾಕಲಾಗಿದೆ ಎಂದು ವಿಎಚ್‌ಪಿ ಭಾನುವಾರ ಹೇಳಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಸಹಾಯಕ ಪೊಲೀಸ್ ಕಮಿಷನರ್ (ಭೇಲುಪುರ್) ಪ್ರವೀಣ್ ಕುಮಾರ್ ಸಿಂಗ್ ಪ್ರತಿಕ್ರಿಯೆ ನೀಡಿದ್ದು, “ಭಾಗಿಯಾಗಿರುವ ಇತರರ ಗುರುತುಗಳನ್ನು ಖಚಿತಪಡಿಸಿಕೊಳ್ಳಲು ತನಿಖಾಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ” ಎಂದಿದ್ದಾರೆ.
ಗುಪ್ತಾ ಮತ್ತು ತ್ರಿಪಾಠಿ ಅವರನ್ನು ಸಂಘಟನೆಗಳಿಂದ ಹೊರಹಾಕಲಾಗಿದೆ. ಅವರನ್ನು ಎಲ್ಲಾ ಜವಾಬ್ದಾರಿಗಳಿಂದ ಬಿಡುಗಡೆ ಮಾಡಲಾಗಿದೆ ಎಂದು ವಿಎಚ್‌ಪಿಯ ಕಾಶಿ (ವಾರಣಾಸಿ) ಪ್ರಾಂತ ಮಂತ್ರಿ ಆನಂದ್ ಸಿಂಗ್ ತಿಳಿಸಿದ್ದಾರೆ.
ಸ್ಥಳೀಯ ಕಾಂಗ್ರೆಸ್ ನಾಯಕ ರಾಘವೇಂದ್ರ ಚೌಬೆ ಅವರು ‘ದಿ ವೈರ್’ನೊಂದಿಗೆ ಮಾತನಾಡಿ, “ಕಾಂಗ್ರೆಸ್ ಪಕ್ಷವು ಬಲಪಂಥೀಯರ ದುಷ್ಕೃತ್ಯಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದೆ. ಪಟ್ಟಣದಲ್ಲಿ ಕೇಸರಿ ವಸ್ತ್ರಧಾರಿ ಯುವಕರು ಆರಂಭಿಸಿರುವ ದ್ವೇಷ ಅಭಿಯಾನದ ಕುರಿತು ಇಲ್ಲಿನ ಡಿಸಿಪಿ ಅವರಿಗೆ ಮಾಹಿತಿ ನೀಡಿದ್ದೇನೆ” ಎಂದು ಹೇಳಿದ್ದಾರೆ.
“ಗಂಗಾ ಮತ್ತು ಅದರ ಘಾಟ್‌ಗಳು ಎಂದಿಗೂ ಒಂದು ಧರ್ಮದ ಅನುಯಾಯಿಗಳಿಗೆ ಸೇರಿಲ್ಲ” ಎಂದು ಹಿರಿಯ ಪತ್ರಕರ್ತ ವಿಜಯ್ ವಿನೀತ್ ದೂರವಾಣಿಯಲ್ಲಿ ದಿ ವೈರ್‌ಗೆ ತಿಳಿಸಿದ್ದಾರೆ.
ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರು ಗಂಗಾ ಸ್ನಾನದ ನಂತರ ಹೇಗೆ ನಮಾಜ್ ಮಾಡುತ್ತಿದ್ದರು ಎಂಬುದರ ಕುರಿತು ಹಿರಿಯ ಪತ್ರರ್ಕರು ವಿವರಿಸಿದ್ದಾರೆ. ರಾಜಕೀಯಕ್ಕಾಗಿ ಜನರನ್ನು ವಿಭಜಿಸಲು ಯತ್ನಿಸುತ್ತಿರುವ ಶಕ್ತಿಗಳ ಕುರಿತು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ವಾರಣಾಸಿ ಪ್ರಧಾನಿ ನರೇಂದ್ರ ಮೋದಿಯವರ ಸಂಸದೀಯ ಕ್ಷೇತ್ರವಾಗಿದೆ. ಫೆಬ್ರವರಿ 10 ರಿಂದ ಮಾರ್ಚ್ 7 ರವರೆಗೆ ಏಳು ಹಂತಗಳಲ್ಲಿ ನಡೆಯಲಿರುವ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಗೆ ಮುನ್ನ ಈ ಘಟನೆ ನಡೆದಿದೆ.


