Homeದಲಿತ್ ಫೈಲ್ಸ್ಅಯೋಧ್ಯೆ- ದಲಿತ ಜಮೀನು ಲಪಟಾಯಿಸಿದ ಪ್ರಸಂಗ

ಅಯೋಧ್ಯೆ- ದಲಿತ ಜಮೀನು ಲಪಟಾಯಿಸಿದ ಪ್ರಸಂಗ

- Advertisement -
- Advertisement -

ಅಯೋಧ್ಯೆಯ ಬಾಬರಿ ಮಸೀದಿ-ರಾಮಜನ್ಮಭೂಮಿಯ 2.77 ಎಕರೆಗಳಷ್ಟು ವಿವಾದಿತ ಜಮೀನನ್ನು ರಾಮಮಂದಿರ ಕಟ್ಟಿಕೊಳ್ಳಲು ಸುಪ್ರೀಮ್ ಕೋರ್ಟು ಹಿಂದೂಗಳಿಗೆ ಒಪ್ಪಿಸಿತ್ತು. ಸುಪ್ರೀಮ್ ತೀರ್ಪಿನ ಅನ್ವಯ ರಚಿಸಲಾದ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ 2.77 ಎಕರೆಗಳ ಸುತ್ತಮುತ್ತ ಈವರೆಗೆ 70 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಂಡಿದೆ. ಈ ಎರಡು ವರ್ಷಗಳಲ್ಲಿ ಅಯೋಧ್ಯೆಯ ರಿಯಲ್ ಎಸ್ಟೇಟ್ ದಂಧೆ ಅತಿಶಯವಾಗಿ ಗರಿಗೆದರಿದೆ. ಭವ್ಯ ರಾಮಮಂದಿರದ ಸುತ್ತಮುತ್ತಲ ಜಮೀನಿನ ಖರೀದಿ ದರ ಆಕಾಶಕ್ಕೇರುವ ನಿರೀಕ್ಷೆ ಹೊಂದಿರುವ ಖಾಸಗಿ ಖರೀದಿದಾರರೂ ಈ ಜಮೀನಿಗೆ ಮುಗಿ ಬೀಳತೊಡಗಿದ್ದಾರೆ.

ಸ್ಥಳೀಯ ಶಾಸಕರು ಮತ್ತು ಅಯೋಧ್ಯೆಯ ಉನ್ನತ ಸರ್ಕಾರಿ ಅಧಿಕಾರಿಗಳ ಹತ್ತಿರದ ಸಂಬಂಧಿಕರು ಇಲ್ಲಿನ ಬಡ ದಲಿತರ ಜಮೀನು ಖರೀದಿ ಮಾಡಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.

ರಾಮಮಂದಿರ ನಿವೇಶನದಿಂದ ಕೆಲವೇ ಕಿಲೋಮೀಟರುಗಳ ದೂರದ ಬರ್ಹಟ ಮಾಂಝಾ ಮತ್ತಿತರೆ ಗ್ರಾಮಗಳ ದಲಿತರಿಂದ 21 ಬಿಘಾಗಳಷ್ಟು (52,000 ಚದರ ಗಜಗಳು) ಜಮೀನನ್ನು 1990ರ ದಶಕಗಳಲ್ಲಿ ಮಹೇಶ್ ಯೋಗಿ ವಿದ್ಯಾಪೀಠ ಟ್ರಸ್ಟ್ ಖರೀದಿಸಿತ್ತು. 2016ರಲ್ಲಿ ಸಂಬಂಧಪಟ್ಟ ಕಾಯಿದೆ ತಿದ್ದುಪಡಿಗೆ ಮುನ್ನ ದಲಿತರು ತಮ್ಮ ಜಮೀನನ್ನು ದಲಿತೇತರರಿಗೆ ಮುಕ್ತವಾಗಿ ಪರಭಾರೆ ಮಾಡುವಂತಿರಲಿಲ್ಲ. ಆದರೆ ಮಹೇಶ್ ಯೋಗಿ ಟ್ರಸ್ಟ್ ಮೋಸ ಮರೆಯಿಂದ ಹತ್ತು ಹನ್ನೆರಡು ಮಂದಿ ದಲಿತರಿಂದ ಜಮೀನು ಖರೀದಿಸಿತ್ತು. ತನ್ನ ದಲಿತ ಉದ್ಯೋಗಿ ರೊಂಘೈ ಹೆಸರಿನಲ್ಲಿ ನೋಂದಣಿ ಮಾಡಿಕೊಂಡಿತ್ತು. ಈ ಜಮೀನನ್ನು ರೊಂಘೈನಿಂದ 1996ರಲ್ಲಿ ದಾನವಾಗಿ ಬರೆಯಿಸಿಕೊಂಡಿತ್ತು. ಕೇವಲ 6.38 ಲಕ್ಷ ರುಪಾಯಿಗೆ ದಲಿತರಿಂದ ದಕ್ಕಿಸಿಕೊಂಡಿದ್ದ ಈ ಜಮೀನಿನ ಇಂದಿನ ಮಾರುಕಟ್ಟೆ ಬೆಲೆ ಕೋಟ್ಯಂತರ ರುಪಾಯಿಗಳು. ಮಹಾದೇವನೆಂಬ ದಲಿತನಿಂದ ಬರೆಯಿಸಿಕೊಂಡಿದ್ದ ಮೂರು ಬಿಘಾಗಳಷ್ಟು ಜಮೀನಿಗೆ ಟ್ರಸ್ಟ್ ಅಂದು ನೀಡಿದ್ದ ಮೊತ್ತ 1.02 ಲಕ್ಷ ರುಪಾಯಿ. ಉತ್ತರಪ್ರದೇಶದಲ್ಲಿ ಒಂದು ಎಕರೆ ಜಮೀನು ಅಂದಾಜು ಒಂದೂವರೆ ಎಕರೆ ಬಿಘಾಕ್ಕೆ ಸಮ. ಹೀಗೆ ದಲಿತರಿಂದ ಪಡೆದ ಜಮೀನನ್ನು ಮಹೇಶ್ ಯೋಗಿ ಟ್ರಸ್ಟ್ ತನಗೆ ಬೇಕಾದವರಿಗೆ ಮಾರಾಟ ಮಾಡಲಾರಂಭಿಸಿತು. ತನ್ನ ಜಮೀನನ್ನು ಅಕ್ರಮವಾಗಿ ವರ್ಗ ಮಾಡಿಸಿಕೊಳ್ಳಲಾಗಿದೆ ಎಂದು ದಲಿತ ಮಹಾದೇವ ರೆವಿನ್ಯೂ ಮಂಡಳಿಗೆ ದೂರು ನೀಡಿದ. ಪರಿಣಾಮವಾಗಿ ಜರುಗಿದ ತನಿಖೆಯ ವರದಿಯು ಅಕ್ರಮ ವರ್ಗಾವಣೆಯ ದೂರನ್ನು ಎತ್ತಿ ಹಿಡಿದು ಸಂಬಂಧಪಟ್ಟ ಸರ್ಕಾರಿ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಶಿಫಾರಸು ಮಾಡಿತು. ಈ ಶಿಫಾರಸನ್ನು ಅನುಮೋದಿಸಿದ ಅಯೋಧ್ಯಾ ವಿಭಾಗಾಧಿಕಾರಿ ಎಂ.ಪಿ.ಅಗರವಾಲ್ ಸಂಬಂಧಿಕರು ಮಹೇಶ್ ಯೋಗಿ ಟ್ರಸ್ಟ್‌ನಿಂದ ನಿವೇಶನಗಳನ್ನು ಪಡೆದಿದ್ದಾರೆ. ಅಗರವಾಲ್ ಅವರ ಪತ್ನಿಯ ತಂದೆ ಮತ್ತು ಪತ್ನಿಯ ಸೋದರರಿಬ್ಬರೂ ತಲಾ ಎರಡೂವರೆ ಸಾವಿರ ಮತ್ತು 1,260 ಚದರ ಗಜಗಳ ಅಳತೆಯ ನಿವೇಶನಗಳನ್ನು 2020ರ ಡಿಸೆಂಬರ್‌ನಲ್ಲಿ ಗಿಟ್ಟಿಸಿದ್ದಾರೆ. ಇದೇ ಟ್ರಸ್ಟಿನಿಂದ ಮುಖ್ಯ ಕಂದಾಯ ಅಧಿಕಾರಿ ಪುರುಷೋತ್ತಮ ದಾಸ್ ಗುಪ್ತಾ ಮತ್ತು ಡಿ.ಐ.ಜಿ. ದೀಪಕ್ ಕುಮಾರ್ ಅವರ ಸಮೀಪದ ಸಂಬಂಧಿಕರು 1,130 ಚದರ ಗಜ ಮತ್ತು 1,020 ಚದರ ಗಜಗಳ ವಿಸ್ತೀರ್ಣದ ನಿವೇಶನಗಳನ್ನು ಬರ್ಹಾಟ ಮಾಂಝಾ ಗ್ರಾಮದಲ್ಲಿ ಖರೀದಿಸಿದ್ದಾರೆ. ಅಯೋಧ್ಯೆಯ ಜಿಲ್ಲಾಧಿಕಾರಿಯ ತಂದೆ ಕೂಡ ಭವ್ಯ ರಾಮಮಂದಿರದಿಂದ ಒಂದು ಕಿ.ಮೀ. ಫಾಸಲೆಯಲ್ಲಿ ಮಹೇಶ್ ಯೋಗಿ ಟ್ರಸ್ಟ್‌ನಿಂದ ನಿವೇಶನ ಖರೀದಿಸಿದ್ದಾರೆ.

ಉಳಿದಂತೆ ಅಯೋಧ್ಯಾ ಜಿಲ್ಲೆಯ ಗೋಸಾಯಿಗಂಜ್ ಬಿಜೆಪಿ ಶಾಸಕ ಇಂದ್ರಪ್ರತಾಪ ತಿವಾರಿ 2019ರ ನವೆಂಬರಿನಲ್ಲಿ 2,593 ಚದರ ಗಜ, ನಿವೃತ್ತ ಐ.ಎ.ಎಸ್. ಅಧಿಕಾರಿ ಉಮಾಧರ ದ್ವಿವೇದಿ ಅವರು 2021ರ ಅಕ್ಟೋಬರಿನಲ್ಲಿ 1,680 ಚದರ ಗಜಗಳ ಅಳತೆಯ ನಿವೇಶನಗಳ ಖರೀದಿಸಿದ್ದಾರೆ.

ಈ ಅಧಿಕಾರಿಗಳು ಮತ್ತು ಅವರ ಸಂಬಂಧಿಕರು ಖರೀದಿಸಿರುವ ನಿವೇಶನಗಳು ವಿವಾದಗ್ರಸ್ತ ದಲಿತ ಜಮೀನಿಗೆ ಸೇರಿಲ್ಲ. ಆದರೆ ದಲಿತರಿಂದ ಅಕ್ರಮವಾಗಿ ಜಮೀನು ಖರೀದಿಸಿದ್ದ ತಪ್ಪಿಗಾಗಿ ಮಹೇಶ್ ಯೋಗಿ ಟ್ರಸ್ಟ್ ಕಟಕಟೆಯಲ್ಲಿ ನಿಂತಿದೆ. ತನಿಖೆಗೆ ಗುರಿಯಾಗಿದೆ. ಅಂತಹ ಟ್ರಸ್ಟಿನಿಂದ ಹಾಲಿ ಅಧಿಕಾರಿಗಳು, ಅವರ ಆಪ್ತಸಂಬಂಧಿಕರು, ನಿವೃತ್ತ ಅಧಿಕಾರಿಗಳು ನಿವೇಶನ ಖರೀದಿಸಿರುವುದು ಔಚಿತ್ಯಪೂರ್ಣ ಎನಿಸಿಕೊಳ್ಳುವುದಿಲ್ಲ. ಈ ನಿವೇಶನಗಳು ತಾನು ಆಪಾದನೆಯಿಂದ ಪಾರಾಗಲೆಂದು ಟ್ರಸ್ಟ್ ನೀಡುತ್ತಿರುವ ’ಲಂಚ’ ಎನಿಸಿಕೊಳ್ಳುತ್ತವೆ. ಖರೀದಿ ಮಾಡಿರುವವರು ಟ್ರಸ್ಟ್‌ಅನ್ನು ಕಾನೂನು ಕ್ರಮದ ಕುಣಿಕೆಯಿಂದ ಬಚಾವು ಮಾಡುವುದಿಲ್ಲವೆಂಬ ಖಾತರಿಯೇನು?

ದಲಿತರ ಜಮೀನನ್ನು ಲಪಟಾಯಿಸಲು ಟ್ರಸ್ಟ್ ಗಾಳವಾಗಿ ಬಳಸಿಕೊಂಡ ದಲಿತ ರೊಂಘೈ ಮತ್ತು ಅವನ ಕುಟುಂಬ ಅಯೋಧ್ಯೆಯಿಂದ ದೂರದಲ್ಲಿ ವಾಸಿಸಿದೆ.

ಭರತ ಭೂಮಿಯ ದಲಿತರು ಸಾವಿರಾರು ವರ್ಷಗಳಿಂದ ಜಮೀನುವಂಚಿತರು. ಜಾತಿವ್ಯವಸ್ಥೆಯು ಅವರಿಗೆ ಜಮೀನಿನ ಒಡೆತನವನ್ನು ನಿರಾಕರಿಸಿತ್ತು. ಭೂಹೀನ ಸ್ಥಿತಿಯು ಬಲಿಷ್ಠ ಜಾತಿಗಳ ಗುಲಾಮಗಿರಿಗೆ
ಅವರನ್ನು ನೂಕಿದೆ.

2011ರ ಜನಗಣತಿಯ ಪ್ರಕಾರ ದೇಶದ ಶೇ.71ರಷ್ಟು ದಲಿತರು ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ, ಬಳಿ ಸ್ವಂತ ಜಮೀನಿಲ್ಲ. ಕೆಲವು ರಾಜ್ಯಗಳಲ್ಲಿ ಈ ಪ್ರಮಾಣ ಶೇ.90ರಷ್ಟು.

ಸ್ವಾತಂತ್ರ್ಯ ಬಂದು ಏಳು ದಶಕಗಳೇ ಉರುಳಿದ್ದರೂ ಭೂಮಿಯ ಕ್ರಮಬದ್ಧ ಮರುಹಂಚಿಕೆ ನಡೆದೇ ಇಲ್ಲ. ಒಂದು ಅಧ್ಯಯನದ ಪ್ರಕಾರ ಏಳು ಹೆಕ್ಟೇರುಗಳ ಭೂಒಡೆತನ ಮಿತಿ ಹೇರಿದರೆ ಮರು ಹಂಚಿಕೆಗೆ ಲಭಿಸುವ ಹೆಚ್ಚುವರಿ ಭೂಮಿ 75 ಲಕ್ಷ ಹೆಕ್ಟೇರುಗಳು.

ಭೂಒಡೆತನವು ಆತ್ಮಗೌರವದ ಮೂಲ ಎಂಬುದು ಗ್ರಾಮೀಣ ಭಾರತದ ವಾಸ್ತವ. ಹೀಗಾಗಿ ಭೂಸುಧಾರಣೆಯು ಸಾಮಾಜಿಕ ನ್ಯಾಯದ ಬಹುಮುಖ್ಯ ಭಾಗ. ಭಾರತದ ದಮನಿತ ಸಮುದಾಯಗಳ ಘನತೆಯೊಂದಿಗೆ ಬೆಸೆದುಕೊಂಡಿರುವ ಪರಿಹಾರ.

ಹಿಂದಿಯ ಬಹುಮುಖ್ಯ ಕವಿಗಳಲ್ಲಿ ಒಬ್ಬರಾದ ಜ್ಞಾನಪೀಠ ಪ್ರಶಸ್ತಿ ವಿಜೇತ ಕುಂವರ ನಾರಾಯಣ ಅವರ ’ಅಯೋಧ್ಯೆ ಕವಿತೆ ನೆನಪಾಗುತ್ತಿದೆ-

ಹೇ ರಾಮ,
ಬದುಕು ಒಂದು ಕಟು ಯಥಾರ್ಥ
ಮತ್ತು ನೀನೊಂದು ಮಹಾಕಾವ್ಯ!

ನಿನ್ನ ಕೈಯಿಂದಾಗದು
ಆ ಅವಿವೇಕವನ್ನು ಗೆಲ್ಲುವುದು
ಹತ್ತು ಇಪ್ಪತ್ತಲ್ಲ, ಅದಕ್ಕೆ
ಈಗ ಲಕ್ಷ ತಲೆಗಳು- ಲಕ್ಷಾಂತರ ಹಸ್ತಗಳು
ಮತ್ತು ವಿಭೀಷಣ ಕೂಡ ಈಗ
ಯಾರ ಜೊತೆಗಿರುವನೋ ತಿಳಿಯದು.

ಇದಕ್ಕಿಂತ ಇನ್ನೇನಾಗಬೇಕು.
ನಮ್ಮ ದೌರ್ಭಾಗ್ಯ
ಒಂದು ವಿವಾದಿತ ಸ್ಥಳಕ್ಕೆ ಕುಗ್ಗಿ
ಕುಸಿಯಿತಲ್ಲ ನಿನ್ನ ಸಾಮ್ರಾಜ್ಯ

ಅಯೋಧ್ಯೆ ಈಗ ನಿನ್ನ ಆಯೋಧ್ಯೆ ಅಲ್ಲ
ಅದು ಯೋಧರ ಲಂಕೆ
’ಮಾನಸ’ ನಿನ್ನ ’ಚರಿತೆ’ ಅಲ್ಲ
ಅದು ಚುನಾವಣೆಯ ನಗಾರಿ!

ಹೇ ರಾಮ, ಈ ಯುಗವೆಲ್ಲಿ
ಎಲ್ಲಿ ನಿನ್ನ ತ್ರೇತಾಯುಗ,
ಎಲ್ಲಿ ನೀನು ಮರ್ಯಾದಾ ಪುರುಷೋತ್ತಮ
ಎಲ್ಲಿ ಈ ನೇತಾ ಯುಗ!

ಸವಿನಯ ನಿವೇದನೆ ಪ್ರಭೂ, ವಾಪಸು ಹೋಗಿಬಿಡು
ಯಾವುದಾದರೂ ಪುರಾಣ- ಮತ್ಯಾವುದೋ ಧರ್ಮಗ್ರಂಥದೊಳಕ್ಕೆ
ಸಕುಶಲ ಸಪತ್ನೀಕ….
ವಾಲ್ಮೀಕಿ ಅಲೆದಾಡಿದ ಆ ಅಡವಿಯಲ್ಲ!
ಈಗಿನ ಅಡವಿ


ಇದನ್ನೂ ಓದಿ: ಬಾಬರಿ ಮಸೀದಿ ಧ್ವಂಸ ದಿನ: ರಾಮ್‌ ಕೆ ನಾಮ್ | ರಾಮನ ಹೆಸರಿನಲ್ಲಿ | In the name of God | ಸಾಕ್ಷ್ಯಚಿತ್ರ ನೋಡಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...