Homeಚಳವಳಿಬಂಡಾಯ, ಕಿಲಾಡಿ, ಕಿಡಿಗೇಡಿತನ: ಚಂಪಾರವರೊಂದಿಗೆ ಯಾಹೂ ಮಾತುಕತೆ

ಬಂಡಾಯ, ಕಿಲಾಡಿ, ಕಿಡಿಗೇಡಿತನ: ಚಂಪಾರವರೊಂದಿಗೆ ಯಾಹೂ ಮಾತುಕತೆ

ಚಂಪಾರವರಿಗೆ 70 ವರ್ಷ ತುಂಬಿದ ಸಂದರ್ಭದಲ್ಲಿ ಬಿ.ಚಂದ್ರೇಗೌಡರು ಬರೆದ ಯಾಹೂ ಲೇಖನ

- Advertisement -
- Advertisement -

ಚಂಪಾರಿಗೆ ಎಪ್ಪತ್ತು! ನಂಬುವುದೇ ಕಷ್ಟ. ಅವರ ಬಂಡಾಯ, ಕಿಲಾಡಿ ಮತ್ತು ಕಿಡಿಗೇಡಿತನಕ್ಕೆ ಎಪ್ಪತ್ತು  ತುಂಬಲು ಸಾಧ್ಯವಿಲ್ಲ, ಅದು ಬಂಡಾಯ ಮತ್ತು ನವ್ಯದ ನಡುಕಾಲದಲ್ಲೇ ನಿಂತಿರಬೇಕು ಅನ್ನಿಸಿತು. ಆದರೂ ಅವರನ್ನು ಮಾತನಾಡಿಸಿ ಒಂದು ಹಾರೈಕೆ ಮಾತೇಳುವುದು ನಮ್ಮ ಕರ್ತವ್ಯವಲ್ಲವೆ. ಫೋನ್  ಮಾಡಿದ್ರೆ ಸಿಕ್ಕೇಬಿಟ್ರು.

“ಹಲೋ ನಮಸ್ಕಾರ ಸಾರ್, ನಾನು ಯಾಹೂ”

“ಯಾಹು ಅಂದ್ರ ಗೌರಿ ಲಂಕೇಶದಾಗ ಬರೀತಿರಲ್ಲಿ ಅವರ ಹೌದಲ್ಲೋ ?

“ಹೌದು ಸಾರ್”.

“ನಿಮ್ಮ ಹೆಸರೇನ್ರಿ ?”

“ಯಾಹೂ ಅಂತ ಸಾರ್ ?

“ಅದು ಖರೇರಿ, ತಂದಿ ತಾಯಿ ಇಟ್ಟ ಹೆಸರಿಲ್ಲೇನು ?”

“ಅದು ಕರಿಯಕ್ಕೆ ಚನ್ನಾಗಿಲ್ಲ ಅಂತ ಗೌರಿಮೇಡಂ ಯಾಹೂ ಅಂತ ಇಟ್ಟವರೆ ಸಾ”,

“ಅಂಗೆನ ಯದಕ ಫೋನ್ ಮಾಡಿದಿರಿ ಹೇಳ್ರಲ್ಲ ?”

“ಯಪ್ಪತ್ತು ವರ್ಸಾಯ್ತಂತಲ್ಲ ಸಾರ್ ನಿಮಗೆ ?”

 “ಅನಂತಮೂರ್ತಿಗಾಗ್ಲೆ ಎಪ್ಪತ್ತಾರಾತು ಗೊತ್ತೇನ ?”

“ಅವು ಎಪ್ಪತ್ತಾರಕ್ಕಿಂತ್ಲೂ ಜಾಸ್ತಿಯಾದಂಗೆ ಕಣ್ತಾರೆ. ಆದ್ರೆ ನೀವು ಮಾತ್ರ ಇನ್ನು ಐವತ್ತಾರು ವರ್ಷದಂಗೆ ಕಾಣ್ತೀರಿ. ಇದರ ಗುಟ್ಟೇನು ಸಾರ್ ?

“ಇದರಾಗ ಗುಟ್ಟೇನು ಬಂತ್ರಿ, ನನ್ನ ಮಾತುಕತಿ, ಬರವಣಿಗೆ, ನಡವಳಿಕೆ ಇವೇನದಾವು ಇವುಕೂ, ನನ್ನ ವಯಸಿಗೂ ಸಂಬಂದಿಲ್ಲ, ನಮ್ಮ ದೇಶದಾಗ ಒಂದೊಂದು ವಯೋಮಾನಕ್ಕೆ ಒಂದೊಂದು ನಡವಳಿಕೆ ಇರಾಕೆ ಬೇಕು ಅಂತ ಹೇಳಿ ನಿಯಮ ಮಾಡ್ಕಾರ, ಅದನ್ನ ಮುರಕೊಂಡ ಹೋದ್ರೆ ನಾವು ಅರಾಮಿರತೇವಿ, ಅಷ್ಟ”.

“ನೀವೀಗ ಯಾವುದನ್ನು ಮುರದಿದ್ದಿರಿ ಸಾರ್ ?”

“ಅರವತ್ತರ ಅರಳುಮರಳು ಮುರುದು ಹತ್ತು ವರ್ಸಾತು”

“ಈ ಎಪ್ಪತ್ತು ವರ್ಷದಲ್ಲಿ ಹಿಂತಿರುಗಿ ನೋಡಿದ್ರೆ ಏನನಸ್ತದೆ ಸಾರ್ ?

“ಭಾಳ ಮಂದಿ ಸಾವಿಗೆ ಸಂತಾಪ ಬರದೇನಿ, ಇನ್ನ ರಗಡ ಮಂದಿಗೆ ಬರಿಬೇಕಲ್ಲಪ್ಪಾ ಅನಸತೈತಿ.”

“ನೀವು ಸಂತಾಪ ಬರಿಯೋ ಮಂದಿ ಬಹಳ ಜನ ಉಳಿದಿಲ್ಲವಲ್ಲ ಸಾರ್ ?”

“ಏ, ಭಾಳ ಮಂದ್ಯದಾರ, ಪುರೋಹಿತರ ಪೈಕಿನ ಒಂದು ಡಜನ್ ಅದಾರ, ರಾಜಕಾರಣದಾಗ ಮೂರು ನಾಕು ಮಂದಿ ಆದಾರ, ಸಾಹಿತ್ಯ ಲೋಕದಾಗ ಆಯಸ್ಸು ಮುಗಿಸಿ ಹೋಗೋ ಮಂದಿಗಿಂತ ಲಬಕ್ಕನ ಹೋಗೋ ಮಂದಿ ಭಾಳದಾರ”.

“ಅದರಲ್ಲೂ ಬಂಡಾಯದೋರು ಬೇಗ ಹೋಗ್ತರಲ್ಲ ಸಾರ್ ?”

“ಹೌದ್ರಿ,  ನವೋದಯದವರು ಪಿಂಚಣಿ ತೊಗಂಡು ಆರಾಮವಾಗಿದ್ದಾರ. ನವ್ಯದವರು, ಬಂಡಾಯದವರು ಕೂಡೇ ಹೊಂಟ ಹೋದರ್‍ರಿ”.

“ಸಾಹಿತ್ಯ ಲೋಕದಲ್ಲಿ ನವೋದಯ, ಪ್ರಗತಿಶೀಲ, ನವ್ಯ, ಬಂಡಾಯ ಅಂತ ಕೆಲವು ಕಾಲಘಟ್ಟಗಳವಲ್ಲಾ ಸಾರ್, ನಿಮ್ಮ ಬರವಣಿಗೆ ಹೋರಾಟ, ಯಾವ ಘಟ್ಟದಲ್ಲಿ ತೀವ್ರವಾಗಿತ್ತು ಸಾರ್.

“ನೋಡಿ ಇವರೆ, ನಾವು ಯಾವ ಕಾಲಘಟ್ಟದಾಗೂ ಎರಡೂ ಕಾಲಿಟ್ಟವರಲ್ಲ. ಒಂದೊಂದೇ ಕಾಲಿಟ್ಟು ಹಿಂದ ತಗದೇವಿ”.

“ಯಾಕ್ ಸರ್ ?”

“ಯಾಕ್ ಅಂದ್ರ, ಒಂದು ಲೇಬಲ್ ಹಚಗೊಂಡು ಬರಿಯೂದಂದ್ರ ನನಗಾಗುದಿಲ್ರಿ,

ಮೊದಲಿಕ್ಕ ನವೋದಯದವರು ಬರಿಯಕ್ಕತ್ತಿದ್ರು. ಅವುರಿಗೆ ಆಗ ಲೇಬಲ್ ಇರಲಿಲ್ಲ. ಈ ನಮ್ಮ ಪಿತಾಮಹರಿಗೆ ಯಂಗೋ ಏನೋ ನವೋದಯದವರು ಅನ್ನೋ ಲೇಬಲ್ ಸಿಕ್ಕು ‘ಏ ನಮಗ ಲೇಬಲ್ ಸಿಕ್ತು’ ಅಂತೇಳಿ ಬರದು ಬರೆದು ಸುಸ್ತಾದರ್‍ರಿ.”

“ಆದ್ರು ಇವತ್ತಿಗೂ ಅವರನ್ನ ಓದಬವುದಲ್ಲ ಸಾರ್”…?

“ಕೆಲವು ಮಂದಿನ್ನ ಓದಬವುದು ಅಷ್ಟರಿ, ಇನ್ನ ಕೆಲವು ಮಂದಿ ಪುಸ್ತಕ ತೊಗಂಡು ಸಂತಾಪ ಸೂಚನೆ ಮಾಡಿ ಮುಂದೆ ಹೋಗಬಹುದು”.

“ಆ ತರ ಬರದಿರೋರು ಪ್ರಗತಿಶೀಲರಲ್ಲವ ಸಾರ್ ?”

“ಪ್ರಗತಿಶೀಲರು ಬರಕೊಂಡ್ ಬದುತ್ತೇವಿ ಅಂತ ಹೊಂಟರ್‍ರಿ. ಅದಕ ಅಂಗ ಬರದಾರ, ಪಾಪ ಮೊದಲಕ್ಕ ತಮ್ಮ ಸುತ್ತಮುತ್ತ ಕಾಣೋ ಸಮಾಜ ಕುರುತು ಬರದ್ರು. ಅದು ಖಾಲಿ ಆತು. ಅನಂತರ ಗಟಾರ ಜೀವನ ಬರಿಬೇಕು ಅಂತ ಹೊಂಟರ್‍ರಿ, ಅನುಭವದ ಸಲುವಾಗಿ ಗಟಾರಕ್ಕೋದ್ರು, ವಳ್ಳಿ ಬರಲಿಲ್ಲವರು. ‘ಏ ಇಲ್ಲಿ ಭಾಳ ಅರಾಮೈತ’ ಅಂತ ಅಲ್ಲೇ ಉಳುದ್ರು. “ಅಲ್ಲಿಂದ ಅಂಗೇ ಹೊಂಟೋದರಲ್ಲ?”

“ಹೌದ್ರಿ, ಇನ್ನ ನವ್ಯದವರಿಗೆ ಅನಾಥ ಪ್ರಜ್ಞೆ ಅಮರಿಕೊಂಡು ಏನು ನೋಡಿದ್ರೂ ಚಂದ ಕಾಣಿರಲಿಲ್ಲ ಅವರಿಗೆ. ಆದ್ರಿಂದ ಒಳಗೋದ್ರು. ವಳ್ಳಿ ಬರಲಿಲ್ಲವರು. ನಾವೊಂದಿಷ್ಟು ಮಂದಿ ಹೊರಬಂದು ಬಂಡಾಯದ ಕಡೆ ಹೊಂಟವಿ”.

“ಅಂಗಾದ್ರೆ ನಿಮ್ಮ ಬಂಡಾಯ ಮಧ್ಯಂತರದ್ದ ಸಾರ್ ?”

“ಇಲ್ರೀ, ಬಂಡಾಯ ನನ್ನ ಮನೋಧರ್ಮ, ನಾ ಪೆನ್ನ ತೊಗಂಡ ಕೂಡಲೇ ಹೊರಬಂದಿದ್ದೇ ಬಂಡಾಯ, ಧಾರವಾಡದಾಗ ಬೇಂದ್ರೆ, ಜೋಶಿ ಮತ್ತವರ ಬಳಗ, ಅನಂತರ ಸಿ.ಪ. ಶೆಟ್ಟಿ, ಗಿರಡ್ಡಿ, ಮಾಕು, ದೇಕು, ಗೋಕಾಕ್ ಇವರ ವಿರುದ್ಧ ನನ್ನ ಬಂಡಾಯ ಎಂದೂ ಇದ್ದದ್ದೆ. ಅದಕ ನೋಡ್ರಿ ಎಮರ್ಜೆನ್ಸಿಲಿ ನಾ ಒಬ್ಬವನೇ ಜೇಲಿಗೆ ಹೋದದ್ದು “.

“ಆಗ ಇಡೀ ಧಾರವಾಡ ಖುಷಿಪಡ್ತಾಂತಲ್ಲಾ ಸಾರ್?”

“ನಾ ಹೊರಬಂದಾಗ ಅಷ್ಟೇ ಬೇಸರಾತು ಅವರಿಗೆ”.

“ಜೈಲಲ್ಲಿ ನೀವು ಆರೆಸೆನ್ಸಿನವರ ಜೊತೆಗಿದ್ರಂತೆ ?”

“ಜೈಲಂದ್ರ ಮುಗಿತಲ್ರೀ ಅದು ಪಬ್ಲಿಕ್ ಪಡಖಾನಿ ಇದ್ದಂಗ, ಅಲ್ಲಿಗೆ ದರವೊಬ್ಬರೂ ಬರತಾರ, ಅಂಗ ಚೆಡ್ಡಿ ಹುಡ್ರು ಬಂದಿದ್ದು, ಕೆಲವುರು ನಾ ಆರೆಸ್ಸೆಸ್ಸಲ್ಲ ಅಂತ ಅಳಾಕತ್ತಿದ್ರು.”

“ಆದ್ರಿವತ್ತು ಯಂಗೆ ನಗ್ತಾರೆ ನೋಡಿ ಸಾರ್”

“ಇಲ್ಲಿ ಯಾರ ನಗೂನೂ ಶಾಶ್ವತ ಅಲ್ಲರೀ. ಒಂದು ಕಾಲಕ್ಕೆ ಕಾಂಗ್ರೆಸ್‌ನವರು ಅಂದ್ರೆ ಮಂದಿ ಹೆದರುತಿದ್ದರು. ಆದ್ರ ಇವತ್ತು ಕಾಂಗ್ರೆಸ್ಸಿನವರು ಅಂದ್ರೆ ಒಂದೀಟು ಡುಬ್ಬು ಕೆರೆದು ಹೋಕ್ಯೇನಾ ಅನ್ನಂಗಾಗೇರೆ. ಅಂಗ ಈ ಚೆಡ್ಡಿಗಳ ನಗು ಎಡೂರಪ್ಪ ಲಗಾಟ ಹೊಡೆದ ನಂತರ ಹಿಂಗೇ ಇರುತ್ತೆ ಅಂತ ಹೇಳಾಕ ಬರೂದಿಲ್ಲ”.

“ಇದೊಂತರ ಹತಾಶೆ ಮುಚ್ಚಿಡೋ ಅಭಿಪ್ರಾಯದಂಗೆ ಇದೆಯಲ್ಲ ಸಾರ್”.

“ಹತಾಶ ಅನ್ನದು ನನ್ನ ಸನೇಕ ಸುಳೆದಿಲ್ಲರಿ. ಹತಾಶ ಏನಾರ ನನಗೆ ಇದ್ದಿದ್ರೆ ನನ್ನ ಅರವತ್ತನೇ ವರ್ಷದ ಅದ್ದೂರಿಯಿಂದೆ ಆಚರಿಸೊ ಏರ್ಪಾಡು ಮಾಡತಿದ್ವೆ. “

“ಹೌದ ಸಾರ್?”

“ಹೌದ್ರಿ, ನನಗೆ ಕೆಲವರ ನೋಡಿದ ಕೂಡ್ಳೆ ಬ್ಯಾಟ್ರಿ ಚಾರ್ಜಾಕ್ಕಿತಿ. ಚಡ್ಡಿಗಳ ನೋಡಿದ್ರೆ, ಪುರೋಹಿತರ ನೋಡಿದ್ರೆ, ಪೊಲೀಸರ ನೋಡಿದ್ರೆ, ಇನ್ನು ಕೆಲವರದಾರ ಅವರನ್ನ ನೋಡಿದ್ರೆ, ಅವರ ಬರದದ್ದನ್ನ ಓದಿದ್ರೆ ನನ್ನ ಬ್ಯಾಟರಿ ಚಾರ್ಜ್ ! ಅದಕ ನೋಡ್ರಿ ನನಗೆ ಎಪ್ಪತ್ತಾದದ್ದು ನನಗೇ ಗುರುತಾಗಲಿಲ್ಲ”.

  • ಬಿ. ಚಂದ್ರೇಗೌಡ

(ಚಂಪಾರವರಿಗೆ 70 ವರ್ಷ ತುಂಬಿದ ಸಂದರ್ಭದಲ್ಲಿ ಬಿ.ಚಂದ್ರೇಗೌಡರು ಬರೆದ ಯಾಹೂ ಲೇಖನ)


ಇದನ್ನೂ ಓದಿ; ಇಲ್ಲೇ ಇದ್ದೀರಿ ನಮ್ಮ ನೆನಪಿನ ಗುದ್ದಿನೊಳಗೆ: ಚಂಪಾರವರಿಗೆ ನುಡಿನಮನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...

ನಾವು ದಾಖಲೆಗಳನ್ನು ಕೊಟ್ಟರೂ ನಮ್ಮನ್ನು ಹಕ್ಕುಗಳಿಂದ ವಂಚಿಸಲಾಗುತ್ತದೆ ಎಚ್ಚರ- ಡಿ.ಹೆಚ್.ಕಂಬಳಿ

ಸಿಂಧನೂರು: SIR ವಿರೋಧಿಸಿ ನಡೆಸಲಾಗುತ್ತಿರುವ ಜಾಗೃತಿ ಜಾಥ ರಾಯಚೂರು ಜಿಲ್ಲೆಯ ಸಿಂಧನೂರು ಪ್ರವೇಶಿಸಿತ್ತು. ನಗರದ ಜಮಾತ್ ಎ ಇಸ್ಲಾಂ ಹಿಂದ್ ಕಚೇರಿಯಲ್ಲಿ ಹಲವು ಸಮುದಾಯದ ಮುಖಂಡರು ಹಾಗೂ ಹೋರಾಟಗಾರರು ಹಾಜರಿದ್ದರು. ಜಾಥಾದ ಭಾಗವಾಗಿ...

ಹುಬ್ಬಳ್ಳಿಯಲ್ಲಿ ಎಸ್‌ಐಆರ್ ವಿರೋಧಿ ಜನಜಾಗೃತಿ ಸಭೆ ; ಒಗ್ಗಟ್ಟಿನ ಹೋರಾಟಕ್ಕೆ ಕರೆ

ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರೋಧಿಸಿ ಹುಬ್ಬಳ್ಳಿಯ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜ್ಞಾನ ಮಂಟಪದಲ್ಲಿ ಮಂಗಳವಾರ (ಜೂ.16) ಸಂಜೆ ವಿವಿಧ ಜನ ಸಂಘಟನೆಗಳು ಮತ್ತು...

ಎಸ್ಐಆರ್ ಮೂಲಕ ಮನುವಾದದ ಮರು ಜಾರಿಗೆ ಯತ್ನ : ಡಾ. ಗಣೇಶ್ ದೇವಿ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಮೂಲಕ ಮನುವಾದದ ಮರು ಜಾರಿಗೆ ಪ್ರಯತ್ನಿಸಲಾಗುತ್ತಿದೆ ಎಂದು ಪದ್ಮಶ್ರೀ ಪುರಸ್ಕೃತ ಡಾ. ಗಣೇಶ್ ದೇವಿ ಹೇಳಿದರು. ಮಂಗಳವಾರ (ಜೂ.16) ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಬಳಿಯ...

ಎಡದೊರೆಯ ನಾಡಿನಲ್ಲಿ ಮೊಳಗಿದ SIR ವಿರೋಧಿ ಕೂಗು

ಕರ್ನಾಟಕದಲ್ಲಿ ಅವೈಜ್ಞಾನಿಕವಾಗಿ ಜಾರಿಮಾಡಲು ಹೊರಟಿರುವ SIR ಅನ್ನು ವಿರೋಧಿಸಿ ಜನಜಾಗೃತಿ ಜಾಥಾವು ಇಂದು ಕಲ್ಯಾಣ ಕರ್ನಾಟಕ ಭಾಗದ ರಾಯಚೂರು ಜಿಲ್ಲೆಯನ್ನು ಪ್ರವೇಶಿಸಿತು. ಹೋರಾಟಗಳ ನೆಲ ರಾಯಚೂರಿನಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಹೋರಾಟಗಾರರು, ವಿವಿಧ ಸಮುದಾಯದ...

ಜೂನ್ 20ರ ಬೆಂಗಳೂರಿನ ‘SIR’ ವಿರೋಧಿ ಸಮಾವೇಶಕ್ಕೆ ಶಿವಮೊಗ್ಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಹಿರಿಯ ವಕೀಲರಾದ ಶ್ರೀಪಾಲ್ ಕರೆ

ಜೂನ್ 20 ರಂದು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿರುವ ‘SIR’ ವಿರೋಧಿ ಜನಜಾಗೃತಿ ಸಮಾವೇಶಕ್ಕೆ ಶಿವಮೊಗ್ಗ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಬೇಕೆಂದು ಹಿರಿಯ ವಕೀಲರಾದ ಶ್ರೀಪಾಲ್ ಕರೆ ನೀಡಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಪ್ರಗತಿಪರ ಸಂಘಟನೆಗಳ...