Homeಸಾಹಿತ್ಯ-ಸಂಸ್ಕೃತಿಕಥೆಕಥೆ; ಶೇಷಾದ್ರಿ ನಗು!

ಕಥೆ; ಶೇಷಾದ್ರಿ ನಗು!

- Advertisement -
- Advertisement -

ಅದೊಂದು ಜಿಲ್ಲಾ ಸಾಹಿತ್ಯ ಸಮ್ಮೇಳನ; ಅದರ ಉಸ್ತುವಾರಿ ಈಶ್ವರಪ್ಪ ಎಂಬ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಾಕ್ಷರು. ಸಮ್ಮೇಳನದ ವಿಶೇಷವೆಂದರೆ ಯಾವುದೇ ಪುಸ್ತಕದ ಮಳಿಗೆಗಳಿರಲಿಲ್ಲ; ಮಳಿಗೆ ತೆರೆಯಲು ತಾವು ಕೊಡಲಾಗದಷ್ಟು ಸುಂಕವನ್ನು ಈಶ್ವರಪ್ಪ ವಿಧಿಸಿದ್ದರಿಂದ, ಪ್ರತಿಭಟಿಸಿದ್ದ ಬಹುತೇಕ ಪ್ರಕಾಶಕರು ಮತ್ತು ಪುಸ್ತಕದ ವ್ಯಾಪಾರಿಗಳು ಸಮ್ಮೇಳನದಿಂದ ದೂರವೇ ಉಳಿದಿದ್ದರು. ಆದರೂ ಅಲ್ಲೊಂದು ಪ್ರಕಾಶನದ ಮಳಿಗೆ ತೆರೆದಿತ್ತು; ನಿಸರ್ಗ ಪ್ರಕಾಶನ ಮಾಡಿಕೊಂಡಿದ್ದ ನಟರಾಜ್ ಮತ್ತು ಶೇಷಾದ್ರಿ ಈಶ್ವರಪ್ಪನನ್ನು ಭೇಟಿಮಾಡಿ ವ್ಯಾಪಾರವಾದ ಕೂಡಲೇ ಪುಸ್ತಕದ ಮಳಿಗೆಗೆ ವಿಧಿಸಿರುವ ಶುಲ್ಕವನ್ನು ಕೊಟ್ಟೇಕೊಡುತ್ತೇವೆಂದು ನಂಬಿಸಿ ಮಳಿಗೆ ತೆರೆದಿದ್ದರು. ಅವರ ಪ್ರಕಾಶನದಲ್ಲಿ ನವ್ಯ ಸಾಹಿತ್ಯವೇ ಅಧಿಕವಾಗಿದ್ದರಿಂದ ಜನ ಬಂದು ಗಂಭೀರವಾಗಿ ಪುಸ್ತಕಗಳನ್ನು ನೋಡಿ ಹೋಗುತ್ತಿದ್ದರು. ಬಹುತೇಕರು ಪತ್ತೇದಾರಿ ಕಾದಂಬರಿಗಳು, ಸಾಯಿಸುತೆ, ಭೈರಪ್ಪ, ಯಂಡಮೂರಿ, ಸಿನಿಮಾ ಹಾಡಿನ ಪುಸ್ತಕ, ಆರೋಗ್ಯದ ಪುಸ್ತಕ ಇತ್ಯಾದಿ ಸಂತೆಯಲ್ಲಿ ಮಾರುವ ಪುಸ್ತಕಗಳನ್ನು ಕೇಳಿ ವಾಪಸ್ ಹೋಗುತ್ತಿದ್ದರು. ಜನರ ಅಭಿರುಚಿ ಗ್ರಹಿಸಿದ್ದ ನಟರಾಜ್ ಸಾವಧಾನದಿಂದಲೇ ಆ ಪುಸ್ತಕ ಇಲ್ಲ ಈ ಪುಸ್ತಕ ಇಲ್ಲ ಎಂದು ಹೇಳುತ್ತಿದ್ದರೆ, ಶೇಷಾದ್ರಿ ಗುಲುಕು ನಗು ನಕ್ಕು ಭುಜಕುಣಿಸಿ ಸುಮ್ಮನಾಗುತ್ತಿದ್ದರು. ಯಾವ ಕೆಲಸವನ್ನಾದರೂ ತುಂಬು ಜವಾಬ್ದಾರಿಯಿಂದ ಮಾಡುತ್ತಿದ್ದ ನಟರಾಜ್ ತಾವೇ ಪ್ರಕಟಿಸಿದ ಯುವ ಲೇಖಕರ ಪುಸ್ತಕಗಳನ್ನ ಮಾರಿ, ಅವರ ಸಂಭಾವನೆಯನ್ನು ನಿಷ್ಠೆಯಿಂದ ತಲುಪಿಸುತ್ತಿದ್ದವರು. ಸಾಹಿತ್ಯದ ಹೂರಣವಿದ್ದ ಪುಸ್ತಕಗಳನ್ನ ಆಕರ್ಷಕ ಮುಖಪುಟದಿಂದ ತರುವ ಅಗತ್ಯವಿಲ್ಲ, ಅದೆಲ್ಲಾ ಸಾಹಿತ್ಯಕ್ಕೆ ಹೊರತಾದ ಗಿಮಿಕ್ಕುಗಳು ಎಂದು ವಾದಿಸುತ್ತಿದ್ದರು. ಅವರು ಕೊಡುವ ಉದಾಹರಣೆಯಲ್ಲಿ ಕುವೆಂಪು ಪುಸ್ತಕಗಳ ಮುಖಪುಟದಲ್ಲಿ ಸ್ವಚ್ಛಂದವಾಗಿ ಹಾರಾಡುವ ಕಾಜಾಣಗಳ ಉಲ್ಲೇಖ ಇದ್ದೇ ಇರುತ್ತಿತ್ತು. ಹಾಗಾಗಿ ನಿಸರ್ಗ ಪ್ರಕಾಶನದ ಪುಸ್ತಕ ನೋಡಿದರೆ ಖಾಲಿದೋಸೆ ನೋಡಿದಂತಾಗುತ್ತಿತ್ತು, ಕೊಂಡು ಓದಿದರೆ ಮಸಾಲೆ ತಿಂದಂತಾಗುತ್ತಿತ್ತು. ನಟರಾಜ್ ಯಾವ ಸಮ್ಮೇಳನವನ್ನೂ ಬಿಟ್ಟವರಲ್ಲ; ಎಲ್ಲ ಸಾಹಿತ್ಯ ಸಮ್ಮೇಳನಕ್ಕೂ ಎರಡು ಗಂಟು ಪುಸ್ತಕ ತೆಗೆದುಕೊಂಡು ಹೋಗುತ್ತಿದ್ದರು. ಒಂದು ಗಂಟನ್ನ ತಾವು ಹೊತ್ತಿದ್ದರೆ ಇನ್ನೊಂದನ್ನ ಶೇಷಾದ್ರಿ ಹೊತ್ತಿರುತ್ತಿದ್ದರು. ಈ ಪುಸ್ತಕಗಳ ಮೇಲೆ ಹಾಕಿರುವ ಬಂಡವಾಳ, ಅವನ್ನು ಬಸ್ಸಿನಲ್ಲಿಟ್ಟು ಲಗೇಜ್ ದುಡ್ಡು ಕೊಟ್ಟು ತೆಗೆದುಕೊಂಡು ಹೋಗುವುದು, ಮಳಿಗೆ ಶುಲ್ಕ ಕೊಟ್ಟು ವ್ಯಾಪಾರ ಮಾಡಿ ಕಡೆಗೆ ಹಣ ಎಣಿಸಿಕೊಂಡರೆ ಭತ್ತ ಬೆಳೆದು ಮಾರಿದ ರೈತನ ಸ್ಥಿತಿ ಎದುರಾಗುತ್ತಿತ್ತು. ಇದರ ಜೊತೆಗೆ ಶ್ರಮಕ್ಕೆ ತಕ್ಕ ಸಾಂತ್ವನ ಪಡೆಯಲು ಸರಳವಾದ ಎಣ್ಣೆ ಅಂಗಡಿಗೆ ಹೋಗುತ್ತಿದ್ದರು. ಅಲ್ಲಿಗೆ ಹೋದರೆ, ಅವರಿಂದ ಪಾಠ ಹೇಳಿಸಿಕೊಂಡು ಈಗ ಸರಕಾರಿ ನೌಕರನೋ, ಪಂಚಾಯ್ತಿ ಸದಸ್ಯನೋ ಅಥವ ವ್ಯಾಪಾರಿಯೋ ಆಗಿರುವ ವಿದ್ಯಾರ್ಥಿಗಳು ಸಿಕ್ಕಿ ಗುರುಗಳಿಗೊಂದು ಸಿಕ್ಸ್‌ಟಿ ಹೇಳಿ ಹೋಗುತ್ತಿದ್ದರು. ಅವರಿಂದ ಪಾಠ ಹೇಳಿಸಿಕೊಂಡವರು ಶಾಸಕರಾಗಿದ್ದಾರೆ, ಮಂತ್ರಿಗಳಾಗಿದ್ದಾರೆ, ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದಾರೆ; ಇದಕ್ಕಿಂತ ಮುಖ್ಯವಾದ ವಿಷಯವೆಂದರೆ ಇಂದು ರಾಜ್ಯವನ್ನಾಳುತ್ತಿರುವ ರಾಜಕೀಯ ಪಕ್ಷಗಳ ಮುಂಚೂಣಿಯಲ್ಲಿರುವ ಬಹುತೇಕರು ನಟರಾಜ್‌ಗೆ ತಲೆನೋವಾಗಿದ್ದ ವಿದ್ಯಾರ್ಥಿಗಳು. ಇವೆಲ್ಲಾ ನಟರಾಜ್‌ಗೆ ವಿಶೇಷವಾದ ಸಂಗತಿಗಳಾಗದೆ, ಪಾಠ ಹೇಳುವ ಮೇಷ್ಟರ ಬದುಕಿನಲ್ಲಿ ಸಂಭವಿಸುವ ಸಾಮಾನ್ಯ ಸಂಗತಿಗಳು ಎನ್ನುತ್ತಿದ್ದರು ಅವರು.

ನಟರಾಜ್ ಸಾಹಿತ್ಯ ಸಮ್ಮೇಳನದ ಸಭಾಂಗಣಕ್ಕೆ ಹೋಗದಿದ್ದರೂ ಮಳಿಗೆಯಲ್ಲಿ ಕುಳಿತೇ ಎಲ್ಲಾ ಗೋಷ್ಠಿಗಳ ಭಾಷಣಗಳನ್ನು ಕೇಳಿ ಭಾಷಣ ಮಾಡಿದವನ ಬೆಲೆ ಕಟ್ಟುತ್ತಿದ್ದರು. ಅವರಿಗೆ ಈಚೆಗೆ ತಲೆತಿಂದ ಸಂಗತಿ ಯಾವುದೆಂದರೆ ಅತಿಥಿಗಳನ್ನ ಸ್ವಾಗತಿಸುವವನೊಬ್ಬ, ಹಾಗೆ ಪರಿಚಯ ಮಾಡುವವನೊಬ್ಬ, ವಂದನಾರ್ಪಣೆ ಇತ್ಯಾದಿಯಾಗಿ ಮೂರ್‍ನಾಲ್ಕು ಜನ ಸಮಯ ತಿಂದು, ಮಾತನಾಡಲು ಬಂದವನನ್ನು ಬಕರ ಮಾಡುವುದು. ಯಾವ ಸಮ್ಮೇಳನವೂ ನಿಗದಿಯಾದ ಸಮಯಕ್ಕೆ ಪ್ರಾರಂಭವಾಗದ ಕಾರಣ ಮುಂದಿನ ಎಲ್ಲ ಗೋಷ್ಠಿಗಳು ಅದ್ವಾನವೆದ್ದು ಯಾವುದೋ ಸಮಯದಲ್ಲಿ ಯಾವುದೊ ಗೋಷ್ಠಿ ನಡೆಯುವುದು ರೂಢಿಯಾಗಿತ್ತು. ಸಮಯಕ್ಕೆ ಯಾವ ಬೆಲೆಯನ್ನೂ ಕೊಡದ ಸಾಹಿತ್ಯ ಸಮ್ಮೇಳನದ ಗೋಷ್ಠಿಯಲ್ಲಿ ಕೂರುವುದಕ್ಕಿಂತ ತಮ್ಮ ಪುಸ್ತಕದ ಮಳಿಗೆಯಲ್ಲಿ ಕುಳಿತು ಭಾಷಣ ಕೇಳಿಸಿಕೊಳ್ಳುವುದು ಅವರ ಅಭ್ಯಾಸವಾಗಿತ್ತು. ನಮಗಾಗದವರು ಮಾತನಾಡುತ್ತಿದ್ದರೆ, ನಮಗೆ ಒಗ್ಗದ ವಿಷಯ ಕೊರೆಯುತ್ತಿದ್ದರೆ ನಾವು ಅಸಹನೆ ತೋರಿಸಿ ಅವಾಯ್ಡು ಮಾಡುತ್ತೇವೆ; ಆದರೆ ನಟರಾಜ್ ಅದನ್ನ ಸಾವಧಾನದಿಂದ ಕೇಳಿಸಿಕೊಳ್ಳತ್ತಿದ್ದರು ಮತ್ತು ಎದುರಿಗಿನ ದುರುಗುಟ್ಟಿ ನೋಡುತ್ತಿದ್ದರು. ಆಗ ಮಾತನಾಡುವಾತ ನಟರಾಜ್ ತಮ್ಮ ಮಾತನ್ನು ಗಂಭೀರವಾಗಿ ಒಳಗಿಳಿಸಿಕೊಳ್ಳುತ್ತಿದ್ದಾರೆ ಎಂದು ಮನಸೋಯಿಚ್ಛೆ ಕೊರೆದು ಸುಸ್ತಾಗಿ ಹೋಗುತ್ತಿದ್ದರು. ಈ ಸ್ಪರ್ಧೆಯಲ್ಲಿ ಗೆಲ್ಲುತ್ತಿದ್ದವರು ಮಾತ್ರ ನಟರಾಜರೆ.

ಸಾಹಿತ್ಯ ಸಮ್ಮೇಳನದ ಏಕೈಕ ಪುಸ್ತಕದ ಮಳಿಗೆ ಎದುರು ಒಂದೆರಡು ಮಾರು ದೂರದಲ್ಲಿ ಹಣೆಗೆ ನಾಮ ಹಾಕಿದವನೊಬ್ಬ ಬೋಳು ಹಣೆಯವನೊಂದಿಗೆ ಮಾತನಾಡುತ್ತಿದ್ದನು. ಇದು ಶೇಷಾದ್ರಿ ಗಮನಕ್ಕೆ ಬಂತು.

ಆಗ ಅವರು “ನಟರಾಜ್ ಸಾರ್ ಅಲ್ಲಿ ಮಾತಾಡ್ತಯಿರೋನ್ನ ಎಲ್ಲೊ ನೋಡಿದ್ದಿನಿ” ಎಂದರು.

“ಎಲ್ಲಿ ನೋಡಿದ್ದೀರಿ?”

“ಎಲ್ಲೋ ನೋಡಿದ್ದೀನಿ ಸಾರ್. ತುಂಬ ಪರಿಚಯದ ಮುಖ ಅದು.”

“ಎಲ್ಲೋ ನೋಡಿರುವುದಲ್ಲ. ಎಲ್ಲೆಲ್ಲೂ ನೋಡಿದ್ದೀರಿ. ಈಚೆಗೆ ಕೆಲವು ಕಾರು, ಲಾರಿ, ವ್ಯಾನು, ಬೈಕಿನ ಮೇಲೂ ಆತನ ಮುಖ ಇದೆ ನೋಡಿದ್ದೀರಾ?” ಎಂದರು.

ಶೇಷಾದ್ರಿಗೆ ಸಿಕ್ಕಾಪಟ್ಟೆ ನಗುಬಂತು. “ನಿಜ ಸಾರ್. ಆ ಮುಖಭಾವ ಕಣ್ಣು ಹೇಳೋ ವಿಷಯದ ಬೆರಗು ಎಲ್ಲಾ ಅದೆ. ಮಾರುತಿಯ ಅಪರಾವತಾರ. ಅಲ್ಲಾ ಸಾರ್, ನಮ್ಮ ಮಹಾಕಾವ್ಯದ ರಾಮ ಒಬ್ಬನೇ ಇರೋತರ ಮಾಡಬಾರ್ದು. ಅವನು ಯಾವತ್ತು ಸೀತೆ ಲಕ್ಷ್ಮಣ ಆಂಜನೇಯನ ಜೊತೆಯಿದ್ರೆ ಚಂದ, ಅಂಗೆನೆ ಮಾರುತಿ ಒಬ್ಬನೆ ಇದ್ದಾಗ ಧ್ಯಾನ ಸ್ಥಿತಿಲಿರತನೆ, ಬುದ್ಧನಂಗೆ ಅರೆಗಣ್ಣು ಬಿಟ್ಟುಕೊಂಡು ಪ್ರಮುದಿತನಂಗಿರತನೆ. ಸ್ವಾಮಿನಿಷ್ಟೆಗೆ ಅವುನ್ನ ಬಿಟ್ರಿಲ್ಲ. ಸಂಗೀತ ಪ್ರೇಮಿ ಕೂಡ. ನಮ್ಮ ಹಳ್ಳಿಲಿ ರಾಮಾಯಣ ನಾಟಕ ಆಡಿದ್ರೆ ಜನ ಆಂಜನೇಯ ಬರದನ್ನೆ ಕಾಯ್ತರೆ. ಯಾಕಂದ್ರೆ ಅವನು ಸಂಗೀತಗಾರ. ಅವನ ಪಾರ್ಟು ಮಾಡೋನು ಹ್ಯಂಗಾಡ್ತನೆ ನೋಡನ ಅನ್ನ ಕುತೂಹಲ ಇವತ್ತಿಗೂ ಇದೆ. ಅಂತಹ ಮಹಾಪುರುಷನ ಮುಖನೆ ಹಾಳುಮಾಡಿದಾರಲ್ಲ ಸಾರ್. ಇವರ ಮನಸಾಳಾದ್ರೆ ಮಾರುತಿದ್ದೇನು ತಪ್ಪು, ಅವನ್ಯಾವತ್ತು ಪ್ರಶಾಂತನೆ. ರಾಮಾಯಣದ ಯುದ್ಧದ ನಂತರ ಪ್ರಶಾಂತವಾದೋನು ಮತ್ತೆ ಕೆರಳಿದ್ದು ರಾಮಾಂಜನೇಯ ಯುದ್ಧದಲ್ಲಿ. ಆಗ ರಾಮನನ್ನ ಯಂಗೆ ಟೀಕೆ ಮಾಡ್ತನೆ ಅಂದ್ರೆ, ಇವತ್ತಿಗೂ ನಮ್ಮ ರಾಜಕಾರಣಿಗಳ ನಿಷ್ಟರು ತಿರುಗಿ ಬಿದ್ರೆ ಏನು ಮಾತಾಡ್ತರೆ ಅನ್ನೊ ಜ್ಞಾನೋದಯ ಆಗಬೇಕಾದ್ರೆ ರಾಮಾಂಜನೇಯ ಯುದ್ದದ ಕಥೆ ಓದಬೇಕು. ನಿಷ್ಟಾವಂತ ಸೇವಕನ ಎದೇಲಿ ನಮ್ಮ ಬಗ್ಗೆ ತಿರಸ್ಕಾರನೂ ಇರತ್ತೆ, ಆತ ತಿರುಗಿಬಿದ್ದಾಗ ಅದು ಈಚೆಗೆ ಬರುತ್ತೆ. ಈಗ ನಮ್ಮ ರಾಜಕಾರಣದಲ್ಲಿ ನಡಿತಾಯಿರೋದು ಅದೆ. ನಿನ್ನೆಮೊನ್ನೆ ಮುಖ್ಯಮಂತ್ರಿನ ’ಅಪ್ಪಾ’ ಅಂತಿದ್ದೋನು ಪಾರ್ಟಿ ಬದ್ಲಾಸಿದ ಕೂಡ್ಲೆ, ಅವನೊಬ್ಬ ನೀಚ, ಕೊಳಕ, ಭ್ರಷ್ಟ ಅಂತ ಬೋದುಬುಡ್ತಾನೆ. ಆದ್ದರಿಂದ ಅವನ ನಿಷ್ಟೆ ನಿಜವೋ, ಬೈಗುಳ ನಿಜವೂ ಅಂತ ತಿಳಿದಂಗಾಯ್ತದೆ. ಇದ ತಿಳಕಂಡು ನಡಕೊಂಡೋನು ರಾಮ. ಅಷ್ಟು ಹೀನಾಮಾನವಾಗಿ ಮಾರುತಿ ಬೈದರೂ ರಾಮ ಕಡಿಗೆ ಬಾಚಿ ತಬ್ಬಿಕಂಡ. ಅದ್ಕೆ ಅವನು ಪುರುಷೋತ್ತಮ.”

“ಅದೇನಾರ ಆಗ್ಲಿ ಸಾರ್ ಅಲ್ಲಿ ನೋಡಿ ಯಂಗೆ ಕೊರಿತಾ ಅವುನೆ?”

“ಅವನ ಕೈಲಿ ನಾನೂ ಕೊರೆಸಿಕೊಂಡಿದ್ದೀನಿ. ಅದು ತಾಲ್ಲೂಕು ಸಾಹಿತ್ಯ ಸಮ್ಮೇಳನ ಆದ್ರಿಂದ ಕಡಮೆ ಕೊರೆದ. ಮುಖ್ಯವಾಗಿ ನವೋದಯ ಸಾಹಿತ್ಯ ಕುರುತು ಕೊರೆದ.”

“ಅವನಿಗೆ ನವೋದಯ ಸಾಹಿತ್ಯನೂ ಗೊತ್ತೆ?”

“ಅರದು ಕುಡುದವನೆ. ಮುಖ್ಯವಾಗಿ ಬಿ.ಎಂ.ಶ್ರೀ, ಮಾಸ್ತಿ, ಬೇಂದ್ರೆ, ಕೆ.ಎಸ್.ನಾ ಇವರಿಂದ ಹಿಡಿದು ಲಕ್ಷ್ಮಿನಾರಾಯಣ ಭಜನೆವರೆಗೂ ಕೊರಿತನೆ, ಏನಪ್ಪಾ ಅಂದ್ರೆ ಅವರನ್ನ ನಮ್ಮವರು ಅಂತ್ಲೆ ಮಾತಾಡ್ತನೆ.”

“ಪ್ರಗತಿಶೀಲರು ನವ್ಯ ಬಂಡಾಯದ ಬಗ್ಗೆ ಏನಂತಾನೆ?”

“ಪ್ರಗತಿಶೀಲರಲ್ಲಿ ಅವುನಿಗೆ ಅನಕೃ ಇಷ್ಟ; ಸ್ವಲ್ಪ ತರಾಸು ಇಷ್ಟ. ಅದು ಬಿಟ್ರೆ ನಿರಂಜನ ಕಟ್ಟಿಮನಿ ವಿಷಯ ತಗಿಯಲ್ಲ.”

“ಬಂಡಾಯದವುರ ಕಂಡ್ರಾಗದಿಲ್ಲವೇನೊ?”

“ಅವರ ನೆರಳು ಕೂಡ ಆಗದಿಲ್ಲ. ದೇವನೂರ ಮಹಾದೇವನ್ನ ಆ ಮನುಷ ಅಂತ್ಲೆ ಮಾತಾಡದು. ಬಂಡಾಯದ ಬಗ್ಗೆ ಅದೆಷ್ಟು ಅಂತ ನಿಮ್ಮದ್ನೆ ಬರಕತ್ತಿರಿ, ಸ್ವಲ್ಪ ಸಾಹಿತ್ಯನೂ ಬರಿರಿ ಅಂತನೆ.”

“ಇವುನ್ಯಾರು ಅಂತ ಗೊತ್ತಾಯ್ತು ಬುಡಿ ಸಾರ್.”

“ನಮ್ಮ ಗೆಳೆಯನ ಮಾವ ಅವುನು.”

ಇದನ್ನೂ ಓದಿ: ಒಂದಿಷ್ಟು ಜಪಾನೀ ಹಾಯ್ಕುಗಳು

“ಅಂಗಾದ್ರೊದ ಬುಡಿ ಸಾರ್. ಮರತುಬುಡಿ ಅತ್ಲಾಗೆ”

“ಮರಿಬಾರ್ದು, ಅಂಗೇ ವಾಚ್ ಮಾಡಬೇಕು, ಮನರಂಜನೆ ತಗೊಬೇಕು. ಈಗ ಉಳುದಿರೋದು ಅದೇ ನಮಗೆ.”

“ಅದೇನು ಸಾರ್ ಕಣ್ಣು ಮ್ಯಟ್ರಿಸಿಗಂಡು ಮಾತಾಡ್ತ ಅವುನೆ, ನಿಮ್ಮ ಗೆಳೆಯನ ಮಾವ.”

“ಅದು ನವೋದಯದವರ ರಮ್ಯತೆ ಹ್ಯಂಗೆ ಪ್ರಗತಿಶೀಲರ, ನವ್ಯರ, ಬಂಡಾಯದವರ ಕಾಲವನ್ನು ಸೀಳಿ ಹೋಗ್ತಾಯಿದೆ ಅಂತ ಹೇಳತಾಯಿರಬಹುದು. ಇಲ್ಲ ಅಂದ್ರೆ ಆತ ಅಂಗೆ ಕಣ್ಣುಬಿಡಕ್ಕೆ ಸಾಧ್ಯಯಿಲ್ಲ ಎಂದು ನಟರಾಜ್ ಹೇಳಿದಾಗ ಅನುಮಾನಗೊಂಡ ಶೇಷಾದ್ರಿ ಹಾಗೆ ಯತ್ತ ಮುಂದಾಗಿಯೋ ಮುಖ ಮಾಡಿಕೊಂಡು, ಸಾಹಿತ್ಯ ಚರ್ಚೆಯ ಗೋಷ್ಠಿಯ ಸನಿಹಕ್ಕೆ ಸುಳಿದು ಬಂದು, ನಂತರ “ನೀವೇಳಿದ್ದು ನಿಜ ಸಾರ್. ಆತ ಮಾಸ್ತಿಯವರು ಹ್ಯಂಗೆ ಹಿಂದೂ ಧರ್ಮದ ಚರ್ಚೆಯಲ್ಲಿ ಬ್ರಿಟಿಷ್ ವಿದ್ವಾಂಸರನ್ನೇ ಸೋಲಿಸಿದ್ರು ಅಂತ ಹೇಳ್ತ ಅವುನೆ.”

“ಹೇಳದೇನುಮ ಮಾಸ್ತಿ ಆತನಿಗೆ ಹಿಂದೂ ಧರ್ಮದ ಶ್ರೇಷ್ಠ ಲೇಖಕ ಗೊತ್ತೆ?”

“ಧರ್ಮದ ಹೊರಗಿನ ಕತೆನೂ ಬರದವುರಲ್ಲವೆ.”

“ಅದವುನಿಗೆ ಬೇಕಿಲ್ಲ. ತನಗೆ ಬೇಕಿದ್ದ ತಗಳ್ತನೆ, ಅದಕೊಂದು ಆಕಾರ ಕೊಡ್ತಾನೆ, ಅದನ್ನ ಪ್ರತಿಪಾದುಸ್ತನೆ, ಭಜನೆ ಮಾಡ್ತನೆ, ಸಿಕ್ಕಸಿಕ್ಕದೊರಿಗೆ ಕೊರಕಂಡು ತಿರಗ್ತನೆ. ಆತನ ಜಾತಿ ನಿಷ್ಟೆ ನೋಡಿದ್ರೆ ಆಶ್ಚರ್ಯ ಆಗತ್ತೆ. ಸುಮಾರು ವರ್ಷದಿಂದ ನೋಡ್ತಿದೀನಿ, ಅದೇ ಅಡಕೆ ಬಣ್ಣದ ಜುಬ್ಬ, ಹಳದಿ ಪಂಚೆ. ಇದು ಅವನ ಲಾಂಛನ. ಆದ್ರು ಒಳ್ಳೆ ಮನುಷ್ಯ!”

“ಅದ್ಯಂಗೆ ಸಾರ್ ಒಳ್ಳೆ ಮನುಷ್ಯ?”

“ನೀನು ಎಷ್ಟೇ ಬೊಗಳ ಬೈಯ್ಯಿ ಬೇಜಾರು ಮಾಡಿಕಳಲ್ಲ. ಮೆಟ್ಟಿನಲ್ಲಿ ಹ್ವಡಿತಿನಿ ಅನ್ನು ಕೋಪ ಮಾಡಿಕಳಲ್ಲ. ನಿನ್ನ ಸಂಸ್ಕಾರ ಮಾಡೇ ಹೋಗೊನಂಗೆ ನೋಡ್ತನೆ. ಸರಳ ಜೀವಿ ಕಠೋರ ಜಾತಿನಿಷ್ಠೆಯ ಆಸಾಮಿ. ಏನು ಮಾಡದು?”

“ಏನೂ ಮಾಡದು ಬೇಡಿ. ಊಟಕ್ಕೆ ಜನ ಕ್ಯೂ ನಿಂತಗತ್ತಾ ಅವುರೆ ಬನ್ನಿ. ಬಿಸಿಬೇಳೆಬಾತ್, ಮೊಸರನ್ನ, ವಡೆ, ಜಿಲೇಬಿ ಬಫೆ ಸಿಸ್ಟಂ. ಜಿಲ್ಲಾ ಸಾಹಿತ್ಯ ಸಮ್ಮೇಳನ ಆದ್ದರಿಂದ ಸರಳ ಊಟವಂತೆ. ತಡ ಆದ್ರೆ ಅದು ಮುಗುದೋಯ್ತದೆ, ಅಮ್ಯಾಲೆ ಈಶ್ವರಪ್ಪ ಮನಿಗೋಗಿ ಉಂಡು ಬನ್ನಿ ಅಂತನೆ,” ಎಂದು ಶೇಷಾದ್ರಿ ತವಕಿಸಿದರು. ಅವರು ಊಟಕ್ಕೆ ಹೊರಟಾಗಲೂ ಎದುರು ನಿಂತು ಕೊರೆಯುತ್ತಿದ್ದವನು ಕೊರೆಸಿಕೊಳ್ಳುತ್ತಿದ್ದವನನ್ನು ಕುರಿತು ನಟರಾಜ್ “ರಾಯರೇ ಬನ್ನಿ ಊಟ ಮಾಡಿ ಬರನ” ಎಂದರು.

ಈ ದನಿಯಲ್ಲಿ ವ್ಯಂಗ್ಯವಿದ್ದರೂ ಕರೆಯನ್ನು ಕೇಳಿಸಿಕೊಂಡ ಕೂಡಲೇ ಗಡಿಬಿಡಿಗೊಳಗಾದ ರಾಯರು ನಟರಾಜರಿಗಿಂತಲೂ ಮುಂದೆ ಹೋಗಿ ಕ್ಯೂ ನಿಂತರು. ಹಾಲು ಬಣ್ಣದ ತಟ್ಟೆಗೆ ಹಬೆ ಏಳುತ್ತಿದ್ದ ಬಿಸಿ ಬೇಳೆಬಾತ್ ಹಾಕಿದರು; ಆ ಕೂಡಲೇ ರಾಯರು ಚಮಚದಲ್ಲಿ ಬಗೆದು ಬಾಯಿಗಿಟ್ಟುಕೊಂಡರು. ಅಷ್ಟೇ ವೇಗವಾಗಿ ತಟ್ಟೆಯೊಳಕ್ಕೆ ಬಾತನ್ನು ಬಾಯಿಂದ ಬೀಳಿಸಿದರು. ಮೇಲೆ ಸುಳ್ಳು ಹಬೆ ಬೀರುತ್ತಿದ್ದ ಬಾತು ಒಳಗಿನ್ನು ಕುದಿಯುತ್ತಿತ್ತು. ಇದನ್ನ ಗ್ರಹಿಸಿದ್ದ ರಾಯರು ಹುಳಿ ಅನ್ನ ಕಲಸಿ ಬಾಯಿಗಿಡುವಂತೆ, ಚಮಚದಲ್ಲಿ ಬಗೆದು ಬಾಯಿಗಿಟ್ಟುಕೊಂಡಕೂಡಲೇ ತಟ್ಟೆಗೆ ಉಗಿದಿದ್ದು ಶೇಷಾದ್ರಿಗೆ ನಗು ತರಿಸಿತು. ಅವರು ಬಾಯಿಬಿಡದೆ ನಗತೊಡಗಿದರು. ಮತ್ತೆಮತ್ತೆ ನೆನೆಸಿಕೊಂಡು ನಕ್ಕುನಕ್ಕು ಸುಸ್ತಾದರು. ನಟರಾಜ್ ಎಚ್ಚರಿಸಿ ಸುಮ್ಮನಿರಿಸಿದ್ದಲ್ಲದೆ, ತಾವೂ ಎಚ್ಚರಿಕೆಯಿಂದ ಬಾತು ತಿಂದು, ನಂತರ ಮೊಸರನ್ನ ವಡೆ ಹಾಕಿಸಿಕೊಂಡರು. ಸಾಹಿತಿಗಳಲ್ಲೆಲ್ಲಾ ಸಕ್ಕರೆ ಕಾಯಿಲೆ ಹೆಚ್ಚಿರುವುದಕ್ಕೋ ಏನೋ ಜಿಲೇಬಿ ತುಂಬ ಉಳಿದಿರುವಂತೆ ಕಂಡಿತು. ನೆನೆಸಿಕೊಂಡಂತೆ ನಗುತ್ತಲೇ ಇದ್ದ ಶೇಷಾದ್ರಿ ಇನ್ನೂ ಹೆಚ್ಚು ನಗುವಂತೆ ಮಾಡಿದ್ದು ನಟರಾಜರ ಮಾತು. ರಾಯರು ಎಂದಿನಂತೆ ಮೊದಲು ನಿಂತ ಜಾಗಕ್ಕೆ ಬಂದು ತಮ್ಮ ಪರಿಚಿತರನ್ನು ಹಿಡಿದು ಕೊರೆಯತೊಡೆಗಿದರು.

ಆ ಸಾಹಿತ್ಯ ಸಮ್ಮೇಳನಕ್ಕೆ ಹಿಂದೆಂದೂ ಕಂಡರಿಯದಷ್ಟು ಜನ ಬಂದಿದ್ದರು. ಅಂದರೆ ಮುಂಭಾಗದ ಕುರ್ಚಿಗಳಷ್ಟೇ ತುಂಬಿ ಇಡೀ ಸಭಾಂಗಣ ಖಾಲಿಯಿತ್ತು. ಈಶ್ವರಪ್ಪ ಏರ್ಪಡಿಸಿದ್ದ ಎಲ್ಲ ಗೋಷ್ಠಿಗಳ ಕಥೆಯೂ ಹಾಗೆ. ಮಾತನಾಡುವ ಅತಿಥಿಗಳ ಜೊತೆಗೆ ಸಮ್ಮೇಳನಾಧ್ಯಕ್ಷ, ಪರಿಷತ್ ಅಧ್ಯಕ್ಷ, ನಿರೂಪಣೆ ಮಾಡುವಾತ, ವಂದನಾರ್ಪಣೆ ಗಿರಾಕಿ ಹಾಗು ಸನ್ಮಾನದ ಪರಿಕರದ ಜವಾಬ್ದಾರಿ ಹೊತ್ತವರೆಲ್ಲಾ ವೇದಿಕೆಯಲ್ಲಿ ಕಿಕ್ಕಿರಿದಿದ್ದರೆ ಅಷ್ಟೇ ಜನ ಎದುರು ಕುರ್ಚಿಯಲ್ಲಿದ್ದರು. ಸಂಜೆ ಮುಗಿಯುವ ಗೋಷ್ಠಿ ರಾತ್ರಿ ಎಂಟು ಗಂಟೆಗೆ ಮುಗಿಯಿತು. ನಂತರ ವೇದಿಕೆಯಲ್ಲಿ ಈಶ್ವರಪ್ಪ ಟೀಮು ಅವನೇ ಬರೆದ ನಾಟಕವನ್ನು ಆಡತೊಡಗಿದರು. ಪಾತ್ರಧಾರಿಗಳ ಸಂಬಂಧಿಕರನ್ನ ಬಿಟ್ಟು ವೇದಿಕೆ ಎದುರು ಇನ್ಯಾರೂ ಇರಲಿಲ್ಲ.

ಶೇಷಾದ್ರಿ ಪುಸ್ತಕದ ಮಳಿಗೆ ಕ್ಲೋಸು ಮಾಡಿ ವೇದಿಕೆ ಹಿಂಭಾಗದಲ್ಲಿ ವಿತರಿಸುತ್ತಿದ್ದ ಪ್ಲೇಟ್ ಮೀಲ್ಸ್‌ಅನ್ನ ನಟರಾಜ್ ಜೊತೆ ಹೋಗಿ ತಿಂದು ಎಲೆಯಡಿಕೆ ಹಾಕಿಕೊಂಡು ಸಿಗರೇಟು ಸೇದುತ್ತ ಆಗಾಗ್ಗೆ ನಗುತ್ತಾ ಮಳಿಗೆಗೆ ಬಂದರು. ಆಶ್ಚರ್ಯ, ಅದಾಗಲೇ ಅಲ್ಲಿ ಯಾರೋ ಬಂದು, ಹಳದಿ ಪಂಚೆಹೊದ್ದು ಅಂಗಾತ ಮಲಗಿದ್ದರು. ಕುತೂಹಲಗೊಂಡ ಶೇಷಾದ್ರಿ ಪಂಚೆ ಸರಿಸಿ ನೋಡಿದರೆ, ಅವರು ವಾಹನಗಳ ಹಿಂದೆ ನೋಡಿದ ಚಿತ್ರದ ವ್ಯಕ್ತಿ. ಪ್ರಶಾಂತವಾಗಿ ಮಲಗಿರುವಂತೆ ಕಂಡಿತು. ಕೂಡಲೇ ಶೇಷಾದ್ರಿಗೆ ನಗುವಿನ ಸ್ಫೋಟವಾಗಿಬಿಟ್ಟಿತು. ಮಳಿಗೆ ಹೊರಗಿದ್ದ ನಟರಾಜ್ ಏನಾಯ್ತೆಂದು ಒಳ ಬಂದು ನೋಡಿದಾಗ ಶೇಷಾದ್ರಿ ಹೊಟ್ಟೆ ಹಿಡಿದುಕೊಂಡು ಸುಸ್ತಿನ ದನಿಯಲ್ಲಿ ಅಯ್ಯೋಅಯ್ಯೋ ರಾಮ ಎಂದು ನಗುತ್ತಿದ್ದರು. ನಟರಾಜ್ ಕೂಡ ನಗುತ್ತ “ಏನಾಯಿತ್ರಿ, ಯಾಕಿಂಗೆ ನಗತಿರಿ, ಕಂಟ್ರೋಲ್ ಮಾಡಿಕೊಳಿ” ಎಂದರೂ ನಗುತ್ತ ಶೇಷಾದ್ರಿ ನಗುತ್ತಲೇ ಮಲಗಿದ್ದ ಆಕೃತಿಯ ಕಡೆಗೆ ಕೈತೋರಿದರು. ನಟರಾಜ್‌ಗೆ ಮಲಗಿರುವ ಅಕೃತಿ ಯಾವುದೆಂದು ಅರಿವಾಯ್ತು. ಆ ಕೂಡಲೇ ಶೇಷಾದ್ರಿಯನ್ನ ಹೊರಗೆ ಕರೆದುಕೊಂಡು ಬಂದು “ಶೇಷಾದ್ರಿ ಕಂಟ್ರೋಲ್ ಮಾಡಿಕೊಳಿ” ಎಂದು ಗಡಸು ದನಿಯಲ್ಲಿ ಎಚ್ಚರಿಸತೊಡಗಿದರು. ನಟರಾಜ್‌ಗೆ ಶೇಷಾದ್ರಿ ನಗುವಿನ ಹಿನ್ನೆಲೆಗಳು ಗೊತ್ತಿದ್ದವು. ಆದರೆ ಯೂನಿವರ್ಸಿಟಿ ವಿದ್ವಾಂಸರ ವೇಷಭೂಷಣ ಮತ್ತು ಗತ್ತಿನ ಮಾತು, ಜಗದ್ಗುರುಗಳು ಗಂಭೀರವಾಗಿ ಮಾಡುವ ಬೋಧನೆ, ರಾಜಕಾರಣಿಗಳ ಭಾಷಣ ಇವೆಲ್ಲಾ ಶೇಷಾದ್ರಿಯ ನಗುವಿನ ಸಾಮಗ್ರಿಗಳಾಗಿದ್ದವು. ಆದರೆ ಈದಿನದ ನಗುವಿಗೆ ಕಾರಣ ಅವರೇ ಹೇಳಬೇಕಿತ್ತು. ನಗುವಿನಿಂದ ಅದೂ ಸಾಧ್ಯವಾಗುತ್ತಿರಲಿಲ್ಲ. ರಾಯರು ಹೇಳದೆ ಕೇಳದೆ ಬಂದು ತಮ್ಮ ಪುಸ್ತಕದ ಮಳಿಗೆಯಲ್ಲಿ ಮಲಗಿದ್ದುದು ಆ ಕಾರಣವಾಗಿರಲಿಲ್ಲ. ವಾಹನಗಳ ಹಿಂಗಾಜು ಮುಂಗಾಜಿನ ವ್ಯಗ್ರಗೊಂಡ ಆಕೃತಿ ಪ್ರಶಾಂತವಾಗಿ ಮಲಗಿರುವಂತೆ ಕಂಡಿದ್ದೂ ಒಂದು ಕಾರಣವೆಂದರೆ ಅದೇ ಕಾರಣವಾಗಿ ಕಾಣುತ್ತಿಲ್ಲ. ಶೇಷಾದ್ರಿಗೆ ನಗುವನ್ನು ನಿಲ್ಲಿಸಲಾಗಲಿಲ್ಲ. ನಟರಾಜ್‌ಗೆ ಆತಂಕವಾಗತೊಡಗಿತು; ರಾಯರನ್ನು ಎಬ್ಬಿಸಿ ಕಳಿಸುವಂತಿಲ್ಲ, ಶೇಷಾದ್ರಿಯನ್ನು ಇಲ್ಲಿಟ್ಟುಕೊಳ್ಳುವಂತಿಲ್ಲ, ಏನು ಮಾಡುವುದು! ಆಗ ಶೇಷಾದ್ರಿ ತನ್ನ ಕತೆಗಳಲ್ಲಿ ಕಂಡ ಜಗತ್ತಿನ ಕಡೆ ಕರೆದುಕೊಂಡು ಹೊರಟರು. ಅದು ಧಾರುಣ ಕೇರಿ. ಉತ್ತರ ಕರ್ನಾಟಕದಿಂದ ರಸ್ತೆ ಮಾಡಲು ಬಂದವರು; ಈರುಳ್ಳಿ ಕೀಳಲು ಬಂದವರು; ಟಾರು ಹಾಕಲು ಬಂದವರು. ಇವರೆಲ್ಲಾ ತಾತ್ಕಾಲಿಕವಾಗಿ ಶೆಡ್ಡು ನಿರ್ಮಿಸಿಕೊಂಡು ಬೀದಿಗಳಲ್ಲೇ ಒಲೆ ಹಾಕಿಕೊಂಡು ಅಡುಗೆ ಮಾಡುತ್ತಿದ್ದರು. ಆ ಕಡೆ ಹೋದಾಗ ಶೇಷಾದ್ರಿ ನಗು ತಹಬಂದಿಗೆ ಬಂತು. ಆದರೂ ಪುಸ್ತಕ ಮಳಿಗೆಗೆ ಮರಳದೆ “ಇಲ್ಲಿನ ಸೇತುವೆ ಮೇಲೆ ಬೆಳಕು ಹರಿಸುತ್ತೇನೆ” ಎಂದರು. ಹೇಗೋ ಪುಸ್ತಕ ಕಾಯಲು ರಾಯರು ಇದ್ದಿದ್ದರಿಂದ ನಟರಾಜ್ ಕೂಡ ಸೇತುವೆ ಮೇಲೆ ಕುಳಿತು ಆಕಾಶ ನೋಡಿದರು!

ಬಿ. ಚಂದ್ರೇಗೌಡ

ಬಿ. ಚಂದ್ರೇಗೌಡ
ಲಂಕೇಶರ ಪತ್ರಿಕೆಯಲ್ಲಿ ಬಯಲುಸೀಮೆಯ ಕಟ್ಟೆ ಪುರಾಣದ ಮೂಲಕ ಕನ್ನಡಿಗರೆಲ್ಲರ ಗಮನಕ್ಕೆ ಬಂದ ಚಂದ್ರೇಗೌಡರು, ನಾಟಕಕಾರರು, ನಟರಷ್ಟೇ ಅಲ್ಲ ವಿಶಿಷ್ಟ ರಾಜಕೀಯ ನೋಟವುಳ್ಳವರೂ ಸಹಾ. ಕರ್ನಾಟಕದ ಸಾಂಸ್ಕೃತಿಕ ಹಾಗೂ ರಾಜಕೀಯ ಇತಿಹಾಸದ ಆಗುಹೋಗುಗಳು ಅವರಲ್ಲಿ ದಾಖಲಾಗಿರುವ ಬಗೆಯೂ ವಿಶಿಷ್ಟವೇ..

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಇವಿಎಂ ಅನ್‌ಲಾಕ್‌ ಮಾಡಲು ಮೊಬೈಲ್ ಬಳಸಿದ ಶಿವಸೇನೆ ಸಂಸದನ ಸಂಬಂಧಿ?

0
ಮತ ಎಣಿಕೆ ಕೇಂದ್ರದೊಳಗೆ ಮೊಬೈಲ್ ಫೋನ್ ಬಳಸಿದ ಆರೋಪದ ಹಿನ್ನೆಲೆ ಮುಂಬೈ ವಾಯುವ್ಯ ಕ್ಷೇತ್ರದ ಶಿವಸೇನೆ ಸಂಸದ ರವೀಂದ್ರ ವೈಕರ್ ಅವರ ಸಂಬಂಧಿಯ ವಿರುದ್ದ ಪ್ರಕರಣ ದಾಖಲಾಗಿದೆ. ಮಂಗೇಶ್ ಪಂಡಿಲ್ಕರ್ ಎಂಬಾತನ ವಿರುದ್ದ ಭಾರತೀಯ...