Homeಕರ್ನಾಟಕನಮ್ಮ ತಾಲೂಕಾಫೀಸು ಏನಾಗಿದೆ ಗೊತ್ತೆ!

ನಮ್ಮ ತಾಲೂಕಾಫೀಸು ಏನಾಗಿದೆ ಗೊತ್ತೆ!

- Advertisement -
- Advertisement -

ನನಗೆ ಪಿತ್ರಾರ್ಜಿತವಾಗಿ ಬಂದ ಎರಡೆಕರೆ ಬಾರೆ ಜಮೀನಿನ ನಡುವೆ ಒಂದು ಕೋಳಿ ಫಾರಂ ಮಾಡಿದೆ. ಇದು ಸ್ವಂತ ತೀರ್ಮಾನವಲ್ಲ; ಯಾರೂ ಮನೆಹಾಳರು ಕೊಟ್ಟ ಸಲಹೆ. ಕೋಳಿ ಫಾರಂ ತಯಾರಾಗುತ್ತಿದ್ದಂತೆ ಜನಗಳು ನನ್ನ ಈ ಸ್ಥಿತಿಗೆ ಮರುಗಿದರು. ಶಿವಮೊಗ್ಗದಲ್ಲಿದ್ದುಕೊಂಡು ಮನೆ ಸೈಟು ಏನೇನೊ ಮಾಡಿಕೊಂಡು ಜೋರಾಗಿದ್ದಾನೆಂದು ಭಾವಿಸಿದ್ದ ಜನಕ್ಕೆ ಕೋಳಿ ಸಾಕಿ ಜೀವನ ಮಾಡಲು ಬಂದ ನನ್ನನ್ನು, ಬೆನ್ನಹಿಂದೆ ಆಡಿಕೊಂಡು ಕನಿಕರದಿಂದ ನಗುವುದು ಕ್ರಮೇಣ ನನ್ನ ಗಮನಕ್ಕೆ ಬಂತು. ಆಗ ನಾನು ಈ ಕೋಳಿ ಸಾಕುವುದು ತುಂಬ ಹೀನಾಯವಾದ ವೃತ್ತಿಯೇನಲ್ಲ ಎಂಬುದಕ್ಕೆ ಉದಾಹರಣೆಗಳನ್ನು ನೆನಪಿಸಿಕೊಳ್ಳುತ್ತಿದ್ದೆ.

ನಮ್ಮ ದೇಶದ ಶ್ರೇಷ್ಠ ಸರೋದ್ ವಾದಕ್‌ರಲ್ಲಿ ರಾಜೀವ ತಾರಾನಾಥರೂ ಒಬ್ಬರು. ಅವರು ಬರೀ ಸರೋದ್ ವಾದಕರಲ್ಲ, ಇಂಗ್ಲಿಷ್ ಫ್ರೊಫೆಸರ್ ಕೂಡ. ಅಂತಹ ವ್ಯಕ್ತಿ ಮದರಾಸಿನ ಯೂನಿವರ್ಸಿಟಿಯಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿದ್ದು, ಕೋಳಿ ಸಾಕಿ ಅಂಗಡಿಗೆ ಮೊಟ್ಟೆ ಕೊಡುತ್ತಿದ್ದರು. ತಮಿಳಿನ ಪ್ರಖ್ಯಾತ ನಟಿ ಕೆ.ಆರ್. ವಿಜಯ ತಮ್ಮ ಮನೆ ಮೇಲೆ ಕೋಳಿ ಸಾಕಿದ್ದರು. ಅಷ್ಟಕ್ಕೂ ಕೋಳಿ ಸಾಕುವುದು ನನಗೇನು ಹೊಸದಲ್ಲ. ಶಿವಮೊಗ್ಗದ ಪ್ರತಿಷ್ಠಿತ ಬಡಾವಣೆಯಲ್ಲಿದ್ದ ನನ್ನ ಮನೆಯಲ್ಲಿ ಕೋಳಿ ಸಾಕಿದ್ದೆ; ನನ್ನ ಈ ಕಸುಬು ನೋಡಿ ಅಕ್ಕಪಕ್ಕದ ಮನೆಯವರೂ ಸಾಕಿದ್ದರು. ನನ್ನ ಮಗನ ಜೊತೆ ಬಂದ ಸಹಪಾಠಿಗಳು ಕೋಳಿ ಕಸ ನೋಡಿ ಹೇಸಿಕೊಂಡಿದ್ದರಿಂದ ಅನಿವಾರ್ಯವಾಗಿ ವಾರಕ್ಕೊಂದರಂತೆ ಕೊಂದು ಖಾಲಿ ಮಾಡಿದೆ. ಆದರೂ ಜನಕ್ಕೆ, ಇವೆಲ್ಲ ಸಂಗತಿಗಳು ನಾನು ಹಾಳಾಗಿ ಬಂದಿರುವುದಕ್ಕೆ ಕೊಡುತ್ತಿರುವ ಸಬೂಬುಗಳಂತೆ ಕಂಡವೇ ಹೊರತು, ಬದುಕಿನ ಪ್ರಯೋಗಶೀಲತೆಯಾಗಿ ಕಾಣಲಿಲ್ಲ.

ಅಂತೂ ಕೋಳಿ ಶೆಡ್ ಮುಗಿಯಿತು. ನೂರೈವತ್ತಡಿ ಉದ್ದದ ಅದರಲ್ಲಿ ಮೂರುಸಾವಿರ ಕೋಳಿ ಸಾಕಬಹುದಿತ್ತು. ಕೋಳಿಗಳಿಗೇನೋ ಜಾಗವಾಯ್ತು. ನಾನಿರಲು ಒಂದು ಕುಟೀರ ಬೇಡವೆ? ಅದಕ್ಕಾಗಿ ಯೋಚಿಸುತ್ತಿದ್ದಾಗ, ಕೋಳಿ ಫಾರಂ ಕಟ್ಟಿದವನು, ’ಅಣ್ಣ ನೀವು ಸಾಹಿತಿ ಅಂತೀರಿ, ನಿಮಗಿಷ್ಟವಾದ ಕುಟೀರ ರೆಡಿ ಮಾಡುತ್ತೇನೆ. ಸಾಮಾನುಗಳು ಇಲ್ಲೇ ಇವೆ. ಕಟ್ಟುವ ಖರ್ಚಿಗಾಗಿ ಇನ್ನ ಐವತ್ತೈದು ಸಾವಿರ ಕೊಡಿ. ಋಷಿಗಳ ಕುಟೀರದಂತೆ ಮನೆ ಮಾಡಿಕೊಡ್ತೀನಿ’ ಅಂದ. ಅವನ ಮಾತಿಗೆ, ನಾನು ಇನ್ನ ಗಡ್ಡ ಮೀಸೆ ಬೆಳೆಸಿಕೊಳ್ಳುವುದು ಬಾಕಿ ಎಂದುಕೊಂಡು ಐವತ್ತೈದು ಸಾವಿರ ತೆಗೆದುಕೊಟ್ಟು ಕೊಟ್ಟಿಗೆಹಾರದಲ್ಲಿ ನಡೆವ ತೇಜಸ್ವಿಯವರ ಸೆಮಿನಾರ್‌ಗೆ ಹೋದೆ. ಅಲ್ಲಿಂದ ಬರುವಷ್ಟರಲ್ಲಿ ಕೋಳಿ ಶೆಡ್ ನಿರ್ಮಾಣದ ಮಂಜನ ಟೀಮು ಪರಾರಿಯಾಗಿತ್ತು. ಫೋನ್ ಮಾಡಿದರೆ ಸ್ವಿಚ್ ಆಫ್ ಮಾಡಿಕೊಂಡಿದ್ದ. ಅವನ ನಂಬಿಕೆದ್ರೋಹಕ್ಕೆ ಆಘಾತಗೊಂಡ ನಾನು ಕೋಳಿ ಫಾರಂನ ಸಹವಾಸ ತೊರೆದು ಸುಮ್ಮನಾದೆ. ಆದರೆ ನನಗೆ ಗೊತ್ತಿಲ್ಲದಂತೆ ಕೋಳಿ ಫಾರಂ ಚಾಲನೆಗೊಂಡು ರಾತ್ರಿಯಲ್ಲಾ ಬಾರ್&ರೆಸ್ಟ್ಟೊರೆಂಟಿನ ರೂಪ ಪಡೆದು ವಿಜೃಂಭಿಸತೊಡಗಿತು. ಆ ಪ್ರಾಂತ್ಯದ ಪಡ್ಡೆ ಹುಡುಗರಿಗೆ ಬಾರಲ್ಲಿ ಕುಳಿತು ಪಾರ್ಟಿ ಮಾಡುವುದು ದುಬಾರಿಯಾಗಿ ಕಂಡಿದ್ದರಿಂದ, ಅವರೆಲ್ಲ ಸುಸಜ್ಜಿತವಾದ ನೂರೈವತ್ತು ಅಡಿ ಫಾರಂ ಒಳಗೆ ಕುಡಿದುಕೊಂಡು ರಾತ್ರಿಯಲ್ಲಾ ಕಾರ್ಡ್ಸ್ ಆಡಿ ಹೋಗತೊಡಗಿದರು. ಜನರ ದೂರು ಕೇಳಿ ನಾನೊಮ್ಮೆ ಹೋಗಿ ನೋಡಿದರೆ ಚಾಪೆ, ದಿಂಬು, ಕಾರ್ಡ್ಸ್ ಜೊತೆಗೆ ನೂರಾರು ಬಾಟಲಿಗಳು ಅಲ್ಲಿ ಉರುಳಾಡುತ್ತಿದ್ದವು. ಈಚೆಗೆ ಬಾಟಲಿಗಳಿಗೆ ಬೆಲೆಯಿಲ್ಲದ್ದರಿಂದ ಅವು ಕುಡಿದ ಜಾಗದಲ್ಲೇ ಬಿದ್ದಿರುತ್ತವೆ. ಪೋಲಿ ಹುಡುಗರಾದರೆ ಅವನ್ನ ಪುಡಿಮಾಡಿ ಹೋಗಿರುತ್ತವೆ. ಬಾಟಲಿಯನ್ನು ಜೋಡಿಸಿದೆ. ಪಡ್ಡೆ ಹುಡುಗರು ಬೆಂಕಿ ಹಾಕಿಕೊಳ್ಳಲು ನಮ್ಮ ರಿಪೀಸ್ ಪಟ್ಟಿಗಳನ್ನ ಖಾಲಿ ಮಾಡಿದ್ದರು. ಅವರೆಲ್ಲಾ ಸೇರುವ ಗೇಟಿನ ಬಳಿ ಬಂದು, ’ಪಾಪ ಆ ಹುಡುಗರು ಅಲ್ಲಿ ಇಲ್ಲಿ ಕುಳಿತುಕೊಂಡು ಕುಡಿಯುವುದರ ಬದಲು ನನ್ನ ಫಾರಂನಲ್ಲಿ ಕುಡಿಯಲಿ ಬಿಡಿ, ಅದನ್ನ ಕಟ್ಟಿಸಿರುವುದೇ ಅದಕ್ಕಾಗಿ’ ಎಂದು ಜನರ ಮುಂದೆ ಅಂದೆ.

ನನ್ನ ಮಾತಿನ ನಂತರ ಈ ಸಮಾಜಕ್ಕೆ ಸವಾಲಾಗಿರುವ ಹುಡುಗರೆಲ್ಲಾ ಸೇರಿಕೊಂಡು ಅಲ್ಲಿ ಪಾರ್ಟಿ ಮಾಡತೊಡಗಿದವು. ಹಣ ಸಾಲದ್ದಕ್ಕೋ ಏನೂ ಬೋರ್‌ವೆಲ್ ಮಿಷನ್ನಿನ ಸ್ಟಾರ್ಟರ್ ಬಿಚ್ಚಿಕೊಂಡು ಹೋಗಿ ಮಾರಿಕೊಂಡಿದ್ದರು; ನಂತರ ಪೈಪು, ಹೀಗೆ ಕೋಳಿ ಶೆಡ್ಡಿನಲ್ಲಿದ್ದ ಮರ ಮುಟ್ಟು ಸ್ಟಾರ್ಟರ್ ಪೈಪು ಎಲ್ಲ ಖಾಲಿಯಾದವು. ಸಮಾಜದ ಹೊಸ ತಲೆಮಾರು ಯಕ್ಕುಟ್ಟಿ ಹೋಗಿರುವಾಗ ಇದನ್ನೆಲ್ಲಾ ಸಹಿಸಿಕೊಳ್ಳಬೇಕು ಅನಿಸಿತು. ಮತ್ತೊಂದು ದಿನ ಶೆಡ್ಡಿನೊಳಗೆ ಶಿವರಾಮೇಗೌಡರ ಹುಟ್ಟುಹಬ್ಬದ ಪ್ಲೆಕ್ಸ್ ಕಟ್ಟಿ ಭೀಕರವಾಗಿ ತಿಂದು ಕುಡಿದು ಕುಣಿದಾಡಿ ಹೋಗಿದ್ದರು. ಮತ್ತೊಬ್ಬ ಪೋನ್ ಮಾಡಿ, “ಅಣ್ಣಾ ಸುರೇಶ್ ಗೌಡ್ರು ನಮ್ಮ ಹುಡುಗರಿಗ್ಯಲ್ಲ ಪಾರ್ಟಿ ಕೊಡ್ತರಂತೆ. ಅದ್ಕೆ ನಿಮ್ಮ ಫಾರಂ ಜಾಗ ಚನ್ನಗ್ಯದೆ ಅಂತ ಹೇಳಿದ್ದೀವಿ, ಮಾಡಲೇನಣ್ಣ” ಅಂದ; ಅದಕ್ಕೆ ’ಮಾಡ್ರಪ್ಪ, ಅಂಗೆ ಶಿವರಾಮೇಗೌಡರ ಕಡಿಯೋರು ಮಾಡಿರೊ ಪಾರ್ಟಿ ಗಲೀಜನ್ಯಲ್ಲ ತೆಗೆದು ಕ್ಲೀನ್ ಮಾಡಿ. ನಿಮ್ಮ ಪಾರ್ಟಿನು ಚನ್ನಾಗಿ ನ್ಯಡಿಲಿ; ಅಂದೆ. ಕ್ರಮೇಣ ಆ ಕೋಳಿ ಫಾರಂ ಕಂಟ್ರಿ ಕ್ಲಬ್ಬಾಗಿ ಕಂಗೊಳಿಸತೊಡಗಿತು. ಈಚೆಗೆ ಉತ್ಸಾಹಿ ತರುಣನೊಬ್ಬ ಬಂದು, “ನಿಮ್ಮ ಕೋಳಿ ಫಾರಂನ ನಾನು ನಡೆಸಿಕೊಂಡು ಹೋಗುತ್ತೇನೆ, ಪಂಚಾಯ್ತಿಯಿಂದ ಪರಮಿಷನ್ ಕೊಡಿಸಿ” ಎಂದ. ಆತನ ಹಿನ್ನೆಲೆ ಕೆದಕಿದಾಗ ಕೋಳಿ ಫಾರಂ ನಡೆಸಿದ ಅನುಭವವಿತ್ತು; ಜೊತೆಗೆ ಶ್ರಮಜೀವಿ ಎಂದು ತಿಳಿಯಿತು. ಆ ಕೂಡಲೆ ನಾನು ನಮ್ಮ ಗ್ರಾಮ ಪಂಚಾಯ್ತಿ ಆಫೀಸಿಗೆ ಹೋಗಿ ಕಂಪ್ಯೂಟರ್ ಮುಂದೆ ಕುಳಿತ್ತಿದ್ದ ಪಿ.ಡಿ.ಒಗೆ ಕೋಳಿ ಫಾರಂಗೆ ಪರವಾನಗಿ ಬೇಕೆಂದು ಕೇಳಿದೆ. ಕಂಪ್ಯೂಟರ್‌ನಿಂದ ಈಕಡೆ ತಿರುಗಿಯೂ ನೋಡದ ಆತ, ’ಮಂಡ್ಯದ ಪರಿಸರ ಮಾಲಿನ್ಯ ತಡೆ ಇಲಾಖೆಯಿಂದ ಪರವಾನಗಿ ತನ್ನಿ’ ಎಂದ. ಇದೊಂದು ಅನಿವಾರ್ಯ ಕೆಲಸವಾದ್ದರಿಂದ ವಿಪರೀತ ದನ ಸಾಕಿರುವ ಧನಂಜಯ ಎಂಬ ಗೆಳೆಯನ ಕಾರಿಗೆ ಪೆಟ್ರೋಲ್ ತುಂಬಿಸಿಕೊಂಡು ಮಂಡ್ಯಕ್ಕೆ ಹೋದೆ. ಅಲ್ಲಿನ ಮಹಿಳಾ ಆಫೀಸರ್ ಒಬ್ಬರ ಎದುರು ನಿಂತು, “ನಾನು ಕೂಡ ಅಧಿಕಾರಿಯಾಗಿದ್ದವನು. ಮುಂದಿನ ದಿನಗಳನ್ನ ದೂಡಲು ಕೋಳಿ ಫಾರಂ ಮಾಡಿದ್ದೇನೆ, ಪರವಾನಗಿ ಕೊಡಿ ಮೇಡಂ” ಎಂದೆ. ಆಕೆಗೆ ಲಂಚ ಕೊಡಬೇಕಾಗುತ್ತದೇನೋ ಎಂದು ಹೆದರಿ ವಿಪರೀತ ಮಾತನಾಡಿದೆ. ಆಕೆ “ಎಷ್ಟು ಕೋಳಿ ಸಾಕ್ತಿರಿ” ಎಂದರು. “ಮೂರು ಸಾವುರ ಮೇಡಂ” ಎಂದೆ. “ಮೂರು ಸಾವಿರಕ್ಕೆ ನಮ್ಮ ಪರವಾನಗಿ ಬೇಕಿಲ್ಲ, ಅದಕ್ಕಿಂತ ಜಾಸ್ತಿ ಸಾಕಿದ್ರೆ ಬೇಕಾಗುತ್ತೆ. ಈ ಕಂಡೀಷನ್‌ಗಳ ಸುತ್ತೋಲೆ ತಗೊಳಿ, ಇದು ಆ ಪಿ.ಡಿ.ಓಗೆ ಗೊತ್ತಿರಬೇಕಿತ್ತು” ಎಂದು ಆ ಕಂಡೀಷನ್ ಪತ್ರವನ್ನ ಕೊಟ್ಟು ಕಳಿಸಿದರು.

ಇದಾದನಂತರ ತಹಸೀಲ್ದಾರರಿಂದ ಎನ್.ಓ.ಸಿ ಪಡೆದುಕೊಳ್ಳಬೇಕು. ಅವರು ಅದನ್ನ ಕೊಡಬೇಕಾದರೆ ವಿಲೇಜ್ ಅಕೌಂಟೆಂಟು ಸ್ಥಳ ಪರಿಶೀಲಿಸಿ ವಿವರ ಕೊಡಬೇಕು ಎಂದರು. ಪರಿಚಯವಿದ್ದ ವಿ.ಎ ಬಳಿ ಹೇಳಿದಾಗ ಆತ ಕೂಡಲೇ ಬರೆದುಕೊಟ್ಟರು. ಇನ್ನ ಅದನ್ನು ಪರಿಶೀಲಿಸಿ ರೆವಿನ್ಯೂ ಇನ್ಸ್‌ಸ್ಪೆಕ್ಟರ್ ಸಹಿಮಾಡಬೇಕು. ಆನಂತರ ತಹಸೀಲ್ದಾರ್ ಸಹಿ ಮಾಡಿದ ಮೇಲೆ ಅದು ಪಂಚಾಯ್ತಿ ಪರಿಶೀಲನೆಗೆ ಒಳಪಟ್ಟು ಪಂಚಾಯ್ತಿ ಮೀಟಿಂಗ್‌ನಲ್ಲಿ ಆ ಅರ್ಜಿಯ ಬಗ್ಗೆ ಚರ್ಚೆ ನಡೆದು ಪರವಾನಗಿ ಹೊರಬೀಳಬೇಕು ಎಂಬುದು ಗೊತ್ತಾಯಿತು. ಇಂತಹ ಕೆಲಸಗಳ ಜಾಲದೊಳಗೆ ಸಿಕ್ಕಿದ ಜನ ತಾಲ್ಲೂಕ್ ಆಫೀಸಿನ ತುಂಬ ಜಮಾಯಿಸಿದ್ದರು. ಕೆಲವರು ಅಲ್ಲಲ್ಲೇ ಕುಳಿತು ತಬರನ ಸಂಬಂಧಿಗಳಂತೆ ಕಣ್ಣುಬಿಡುತ್ತಿದ್ದರು. ಇಡೀ ತಾಲೂಕಾಫೀಸನ್ನು ಸುತ್ತಿ ಒಂದು ರವುಂಡ ಬಂದಾಗ ಯಾರೂ ತಮ್ಮತಮ್ಮ ಕರ್ತವ್ಯದ ಜಾಗದಲ್ಲಿರಲಿಲ್ಲ, ಎಲ್ಲೆಲ್ಲೋ ಹೋಗಿದ್ದರು. ರೆವಿನ್ಯೂ ಇನ್ಸ್‌ಪೆಕ್ಟರ್ ಮಿನಿ ವಿಧಾನಸೌಧದ ಎದುರಿಗಿರುವ ಟೀ ಸ್ಟಾಲಿನ ಗಾಡಿಯ ಟೈರಿಗೆ ತನ್ನ ಕಾಲನ್ನ ಒದೆದಿಟ್ಟುಕೊಟ್ಟುಕೊಂಡು ಬೀಡಿ ಸೇದುತ್ತಿದ್ದ. ಆತನ ಬಳಿಗೆ ಹೋದ ಗೆಳೆಯನೊಬ್ಬ ನನ್ನ ಪರಿಚಯವನ್ನ ವಿಶೇಷವಾಗಿ ಮಾಡಿದ. ಆದರೆ ಆ ರೆವಿನ್ಯೂ ಇನ್ಸ್‌ಪೆಕ್ಟರ್ ಮುಖದಲ್ಲಿ ಯಾವ ಬದಲಾವಣೆಯೂ ಕಾಣಲಿಲ್ಲ. ಬದಲಿಗೆ ಯಾವ ಸಂಕೋಚವು ಇಲ್ಲದೆ “ಎನ್.ಒ.ಸಿ ಸುಮ್ಮನೆ ಸಿಗಿತ್ತೇನ್ರಿ? ಕೋಳಿ ಫಾರಂನಲ್ಲಿ ಎಷ್ಟು ದುಡಿತೀರಿ ನೀವೆ ನೋಡಿಕೊಡಿ” ಎಂದ. ಒದ್ದುಬಿಡಬೇಕೆನಿಸಿತು, ಆದರೆ ಏನು ಮಾಡುವುದು? ಈಗ ನಂಜುಂಡಸ್ವಾಮಿಯವರೂ ಇಲ್ಲ, ರೈತ ಸಂಘವೂ ಛಿದ್ರವಾಗಿದೆ. ಅಂತೂ ನನ್ನನ್ನು ನಾನು ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿರುವಾಗ ಗೆಳೆಯ ಚೌಕಾಸಿ ಮಾಡಿ ಎರಡು ಸಾವಿರಕ್ಕೆ ಇಳಿಸಿದ. ಆ ನಂತರ ವಿ.ಎ ಕೊಟ್ಟಿದ್ದ ಅರ್ಜಿ ನೋಡಿ, ’ಯಾವ ಸೀಮೆ ವಿ.ಎ ಅವುನು? ತಲೆನೆ ಇಲವಲ್ರಿ. ನೋಡಿ ಇಲ್ಲಿ ಸಯಿನು ಮಾಡಿಸಿಕೊಂಡು ಬನ್ನಿ’ ಎಂದು ಅರ್ಜಿ ಎಸೆದ. ಅಲ್ಲಿಗೆ ವಿ.ಎ.ಗೆ ಮತ್ತು ಈತನಿಗೆ ’ತಿನ್ನುವುದರಲ್ಲಿ’ ಜಗಳವಿದೆ ಎಂಬುದು ತಿಳಿಯಿತು.

ವಿ.ಎ ಹುಡುಕುತ್ತ ಹೊರಟರೆ, ಆತ ಮಿನಿ ವಿಧಾನಸೌಧದ ಮೂರನೆ ಮಹಡಿಯಲ್ಲಿದ್ದ. ಯಾರಿಗೋ ಕಾಯುತ್ತಿರುವಂತೆ ಕಂಡ. ಅಷ್ಟರಲ್ಲಾಗಲೆ ತಾಲ್ಲೂಕು ಆಫೀಸು ಹಳ್ಳಿಗರಿಂದ ತುಂಬಿ ಹೋಗಿತ್ತು. ಕಾರಣ ಕೇಳಲಾಗಿ ಬಗರ್‌ಹುಕುಂ ಸಾಗುವಳಿ ಜಾಗವನ್ನ ಸಕ್ರಮ ಮಾಡಿಕೊಡುವ ಸುದ್ದಿಯನ್ನ ಒತ್ತುವರಿದಾರರಿಗೆ ತಿಳಿಸಲಾಗಿತ್ತು. ಅದರಲ್ಲಿ ಕೆಲವರು ಹಣದ ಸಮೇತ ತಾಲ್ಲೂಕು ಆಫೀಸಿಗೆ ದಾಳಿಯಿಟ್ಟಿದ್ದರು. ಭೂಮಿ ಅನುಭವಿಸಿದ ಆಧಾರದ ಮೇಲೆ ಒಂದು ಸಣ್ಣ ಮೊತ್ತ ವಿಧಿಸಿ ಸಕ್ರಮ ಮಾಡಿಕೊಡಬಹುದಾದ ಕೆಲಸಕ್ಕೆ ತಹಸೀಲ್ದಾರ ಎಕರೆಗೆ ಲಕ್ಷ ನಿಗದಿ ಮಾಡಿದ್ದ. ಇದು ಎಮ್ಮೆಲ್ಲೆ, ತಹಸೀಲ್ದಾರ, ರೆವುನ್ಯೂ ಇನ್ಸ್‌ಪೆಕ್ಟರ್ ಹಾಗೂ ವಿ.ಎ.ವರೆಗೆ ಶ್ರೇಣೀಕರಣದಲ್ಲಿ ಹಂಚಿಕೆಯಾಗಬೇಕಾದ ರೈತರ ಹಣ. ನಾವು ಹಾಗೇ ಲೆಕ್ಕಹಾಕಿದಾಗ ಶಾಸಕನಿಗೆ ಕೋಟ್ಯಂತರ ಸಂದಾಯವಾಗುವಂತೆ ಕಂಡಿತು.

ವಿ.ಎ ಸಹಿ ಪಡೆದು ಕೆಳಗಿಳಿದು ಬರುವಾಗ ತಹಸೀಲ್ದಾರ ರೈತನೊಬ್ಬನಿಗೆ ಉಪಕಾರ ಮಾಡುವ ದನಿಯಲ್ಲಿ, ’ಒಂದು ಲಕ್ಷ ತಗಂಬಾ, ಯಾರನೂ ಕರಕೊಂಡು ಬರಬ್ಯಾಡ, ಈಗ್ಲೆ ಹೇಳಿದ್ದಿನಿ’ ಎಂದು ಮೆಟ್ಟಲು ಹತ್ತಿ ತನ್ನ ಆಫೀಸು ಕಡೆ ಹೊರಟ. ವಿಚಾರಿಸಲಾಗಿ ಆತ ಪ್ರಭಾರ ತಹಸೀಲ್ದಾರ, ಹೊಸಬರು ಬರಬೇಕಿದೆ ಎಂದರು. ಭೂಮಿಗೆ ಬೆಲೆ ಬಂದಿರುವ ಈ ಸಮಯದಲ್ಲಿ ಒಂದು ಎಕರೆಗೆ ಲಕ್ಷ ಕೊಡುವುದು ದುಬಾರಿಯಾಗಿ ಕಾಣತ್ತಿರಲಿಲ್ಲ. ಅದಕ್ಕಾಗಿ ರೈತರು ಲಂಚಕೊಡಲು ನೂಕು ನುಗ್ಗಲಾದರು. ಇಂತಹ ಜಾತ್ರೆಯಲ್ಲಿ ತಹಸೀಲ್ದಾರ ನಮ್ಮ ಎನ್.ಒ.ಸಿ.ಗೆ ಸಹಿಮಾಡಲಾರ ಎಂದು ಅವರ ಪಿ.ಎ ಬಳಿ ಹೋದೆವು. ಆತ, ’ಸಹಿ ಮಾಡಿಸಿಟ್ಟಿರುತ್ತೇನೆ ನಾಳೆ ಬನ್ನಿ’ ಎಂದ. ವೈಯಕ್ತಿಕ ವಿಷಯ ಕೆದಕಲಾಗಿ, ಊರು ಹೂವಿನ ಹಡಗಲಿ ಎಂದು ಗೊತ್ತಾಯಿತು. ಎಂ.ಪಿ. ಪ್ರಕಾಶ್ ಮತ್ತು ನನ್ನ ಸಂಬಂಧ ಹೇಳಿದ್ದಲ್ಲದೆ, ’ಒಂದು ಪೋನ್ ಕರೆಗೆ ಓಗೊಟ್ಟು ಬಂದು, ನಮ್ಮೊಡನೆ ನಾಟಕ ಮಾಡಿ ಹೋದ ಅಪರೂಪದ ರಾಜಕಾರಣಿ; ಅಂತಹ ಒಬ್ಬನೇ ಒಬ್ಬ ರಾಜಕಾರಣಿ ಈಗಿಲ್ಲ, ಎಂದು ಮನಮುಟ್ಟುವಂತೆ ಕೊರೆದೆ’. ಆತನೂ ಮೆಚ್ಚುಗೆ ವ್ಯಕ್ತಪಡಿಸಿದ. ಆದರೆ ಗೆಳೆಯ ಧನಂಜಯ, ’ಗೌಡ್ರೇ ನಿಮ್ಮ ಇಂತಹ ಅನುಭವ ಈ ತಾಲ್ಲೂಕಾಫೀಸಲ್ಲಿ ನ್ಯಡಿಯಲ್ಲ, ಅದೇನು ಮಾತಾಡಿ’ ಎಂದ.

ನನಗೆ ಲಂಚಾವತಾರ ಅರಿವಿಗೆ ಬಂದು, “ನೋಡಿ ಇವರೆ ನಮ್ಮ ಪಕ್ಕದ ಕೋಳಿ ಫಾರಂನವುನು ಐದು ಸಾವಿರ ಕೊಟ್ಟು ಎನ್.ಒ.ಸಿ ತಂದವುನೆ. ನಮಿಗೂ ಅಂಗೆ ಮಾಡಿ’ ಎಂದೆ. ಆತ ಕೂಡಲೇ ಅರ್ಜಿ ಹಿಡಿದು ತಹಸೀಲ್ದಾರ ಛೇಂಬರಿಗೆ ಹೋಗಿ, ಹತ್ತೇ ನಿಮಿಷದಲ್ಲಿ ಸಹಿ ಮಾಡಿಸಿಕೊಂಡು ಬಂದ. ಆಗ ನಾನು ಮತ್ತೆ, ’ನೀವು ಎಂ.ಪಿ. ಪ್ರಕಾಶರ ಕ್ಷೇತ್ರದಿಂದ ಬಂದಿದ್ದೀರಿ. ಅವರ ಹೆಸರು ಹೇಳಿದ್ರೆ ಸಾಕು ಈ ನಾಡಲ್ಲಿ ನಿಮಗೆ ಗೌರವ ಸಿಗುತ್ತೆ. ಇಂತ ಜಾಗದಲ್ಲಿರದ್ದಕ್ಕಿಂತ ಅವರ ಕ್ಷೇತ್ರದ ಕಡೆ ಹೋಗಿ. ಬರ್ಲಾ ಸಾರ್ ಥ್ಯಾಂಕ್ಸ್” ಎಂದು ಹೇಳಿ ಎನ್.ಒ.ಸಿ ಹಿಡಿದು ಹೊರಟುಬಿಟ್ಟೆವು. ಆತ ಇನ್ನ ಮುಂದೆ ತಹಸೀಲ್ದಾರರ ಸಹಿಗೂ ಮೊದಲೇ ಬರಬೇಕಾದ ಬಾಕಿ ವಸೂಲಿ ಮಾಡಬೇಕೆಂದು ಆಲೋಚಿಸುತ್ತ ನಿಂತಂತೆ ಕಾಣಿಸಿತು.

ಇಡೀ ತಾಲ್ಲೂಕು ಆಫೀಸುಗಳ ಲಂಚಮಯವಾಗಿ ಅಮೇಧ್ಯದ ವಾಸನೆ ಬೀರತೊಡಗಿವೆ. ಇವುಗಳನ್ನ ಸರಿ ಮಾಡುವ ಶಕ್ತಿ ಶಾಸಕರಿಗಿದೆ. ಅವರು ವಾರಕ್ಕೊಮ್ಮೆ ತಾಲ್ಲೂಕಾಫೀಸಿನ ಆವರಣದಲ್ಲಿ ಬಂದು ಕುಳಿತರೆ ಸಾಕು ಜನರ ಕೆಲಸಗಳಾಗುತ್ತವೆ. ಸರಕಾರದ ಸಹವಾಸವೇ ಇಲ್ಲದೆ ಬದುಕುತ್ತಿದ್ದ ಕಾಲ ಹೋಯ್ತು; ಈಗ ಹಳ್ಳಿಗರಿಗಾಗಿ ಬಲೆ ಹೆಣೆದುಕೊಂಡು ಕುಳಿತ ಸರಕಾರಿ ಜೇಡಗಳು ಅಮಾನುಷವಾಗಿವೆ.

ನಾನು ಸರಕಾರದಿಂದ ಎನ್.ಒ.ಸಿ ಪಡೆದು ಅದನ್ನು ಪಂಚಾಯ್ತಿ ಆಫೀಸಿನಿಂದ ಪರವಾನಗಿಗೆ ಒಪ್ಪಿಸಿ ಕಾಯುತ್ತಿರುವಾಗಲೇ ಕೋಳಿ ಫಾರಂಗೆ ಮುಂದಾಲೋಚನೆಯಿಂದ ಬಹುದೊಡ್ಡ ನಾಗರಹಾವೊಂದು ಬಂದು ಸೇರಿಕೊಂಡಿತು. ನಮ್ಮನ್ನ ನೋಡಿ ಅದು ಯಾವ ಗಡಿಬಿಡಿಯನ್ನೂ ತೋರಲಿಲ್ಲ. ತಾನೇ 130 ಅಡಿ ಮನೆಕಟ್ಟಿಸಿಕೊಂಡ ಮಾಲೀಕನ ಗತ್ತಿನಲ್ಲಿ ವಿಹರಿಸುತ್ತಿದೆ. ತನ್ನಲ್ಲಿ ವಿಷವಿರುವ ಬಗ್ಗೆ ಅದಕ್ಕೆಷ್ಟು ಧಿಮಾಕಿದೆಯೆಂದರೆ ನನ್ನನ್ನು ಕೆಣಕಿದರೆ ಹುಷಾರು ಎಂಬಂತೆ ಬುಸುಗರಿದು ಫಾರಂ ಒಳಗಿರುವ ಕಲ್ಲಿನ ಪೊಟರೆಗೆ ಸಾವಧಾನವಾಗಿ ಹೋಗುತ್ತದೆ. ಇದನ್ನ ಕಂಡ ಉತ್ಸಾಹಿ ತರುಣ, ಕೋಳಿ ಫಾರಂ ನಡೆಸುತ್ತೇನೆ ಎಂದು ಮತ್ತೆ ಹೇಳಲಿಲ್ಲ. ಅವನು ಈಚೆಗೆ ನನಗೆ ಕಾಣಿಸುತ್ತಿಲ್ಲ!

ಬಿ. ಚಂದ್ರೇಗೌಡ

ಬಿ. ಚಂದ್ರೇಗೌಡ
ಲಂಕೇಶ್‌ರ ಪತ್ರಿಕೆಯಲ್ಲಿ ಬಯಲುಸೀಮೆಯ ಕಟ್ಟೆ ಪುರಾಣದ ಮೂಲಕ ಕನ್ನಡಿಗರೆಲ್ಲರ ಗಮನಕ್ಕೆ ಬಂದ ಚಂದ್ರೇಗೌಡರು ನಾಟಕಕಾರರು, ನಟರಷ್ಟೇ ಅಲ್ಲ ವಿಶಿಷ್ಟ ರಾಜಕೀಯ ನೋಟವುಳ್ಳವರೂ ಸಹಾ.
ಕರ್ನಾಟಕದ ಸಾಂಸ್ಕೃತಿಕ ಹಾಗೂ ರಾಜಕೀಯ ಇತಿಹಾಸದ ಆಗುಹೋಗುಗಳು ಅವರಲ್ಲಿ ದಾಖಲಾಗಿರುವ ಬಗೆಯೂ ವಿಶಿಷ್ಟವೇ..

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಉತ್ತರಪ್ರದೇಶ: ಕ್ಷೌರ ಮಾಡಲು ತಡವಾಗಿ ಬಂದ ಕ್ಷೌರಿಕನನ್ನು ಲಾಕಪ್‌ನಲ್ಲಿ ಕೂಡಿ ಹಾಕಿದ ಪೊಲೀಸ್‌ ಅಧಿಕಾರಿ

0
ಕ್ಷೌರಕ್ಕಾಗಿ ಮನೆಗೆ ಕ್ಷೌರಿಕ ತಡವಾಗಿ ಬಂದ ಎಂದು ಪೊಲೀಸ್‌ ಅಧಿಕಾರಿಯೋರ್ವ ಕ್ಷೌರಿಕನನ್ನು ಲಾಕಪ್‌ನಲ್ಲಿ ಕೂಡಿ ಹಾಕಿರುವ ಅಮಾನವೀಯ ಘಟನೆ ಬಿಜೆಪಿ ಆಡಳಿತದ ಉತ್ತರಪ್ರದೇಶದ ಬುದೌನ್‌ನ ಪೊಲೀಸ್ ಠಾಣೆಯೊಂದರಲ್ಲಿ ನಡೆದಿದೆ. ಸರ್ಕಲ್ ಆಫೀಸರ್(ಸಿಒ) ಸುನೀಲ್ ಕುಮಾರ್...