Homeಕರ್ನಾಟಕಕರ್ನಾಟಕ ಇತಿಹಾಸದಲ್ಲಿ ಅರಸು ಎಂಬ ನಕ್ಷತ್ರ

ಕರ್ನಾಟಕ ಇತಿಹಾಸದಲ್ಲಿ ಅರಸು ಎಂಬ ನಕ್ಷತ್ರ

- Advertisement -
- Advertisement -

ಆಗಸ್ಟ್ ಇಪ್ಪತ್ತನೇ ತಾರೀಖು ದೇವರಾಜ ಅರಸು ಜನ್ಮದಿನ. ಈ ದಿನವನ್ನು ಸರಕಾರ ಅರಸು ಜನ್ಮ ದಿನಾಚರಣೆಯೆಂದು ಆಚರಿಸುತ್ತಿದೆ. ಅರಸು ರಾಜಕಾರಣದ ಫಲಾನುಭವಿಗಳು ಮರೆಯದೆ ಅವರನ್ನು ನೆನಪಿಸಿಕೊಳ್ಳಬೇಕಿರುವ ಪರಿಸ್ಥಿತಿ ಮತ್ತು ಸಂದರ್ಭದಲ್ಲಿ ನಾವಿದ್ದೇವೆ. ಅರಸು ಯುಗವನ್ನು ನೆನೆಸಿಕೊಂಡಾಗ, ಕುರುಕ್ಷೇತ್ರ ಯುದ್ಧದ ಪ್ರಸಂಗದ ಕೊನೆಯ ಅಂಶವೊಂದು ನೆನೆಪಿಗೆ ಬರುತ್ತದೆ. ಕುರುವಂಶ ನಾಶವಾಗಿದೆ ಕೃಷ್ಣನ ಕುತಂತ್ರದಿಂದ ದುರ್ಯೋಧನ ತೊಡೆಮುರಿದುಕೊಂಡು ಮಲಗಿದ್ದಾನೆ. ತಲೆ ಹತ್ತಿರ ಬಂದ ಕೃಷ್ಣ “ಮಾತನಾಡು ದುರ್ಯೋಧನ” ಎನ್ನುತ್ತಾನೆ. ಆಗ ದುರ್ಯೋಧನ “ವಂಚಕ, ನನ್ನ ಇಂತಹ ಅಸಹಾಯಕ ಸ್ಥಿತಿಗಾಗಿ ಕಾಯುತ್ತಿದ್ದೆಯ? ನನ್ನ ಪತನ ನಿನಗೆ ಸಮಾಧಾನ ತಂದಿತೇ” ಎನ್ನುತ್ತಾನೆ. “ಇದು ಪತನವಲ್ಲ ದುರ್ಯೋಧನ ಉತ್ಥಾನ” ಎನ್ನುತ್ತಾನೆ ಕೃಷ್ಣ. “ಅದು ಹೇಗೆ” ಎನ್ನುತ್ತಾನೆ ದುರ್ಯೋಧನ. “ಈ ಕುರುಕ್ಷೇತ್ರ ಯುದ್ದದಲ್ಲಿ ನೀನು ಛಲ ಬಿಡದೆ ಹೋರಾಡಿ ವೀರ ಸ್ವರ್ಗದ ಹಾದಿಯಲ್ಲಿರುವೆ. ಈ ಯುದ್ಧದಲ್ಲಿ ನಿನ್ನ ಬಂಧು ಬಾಂಧವ ಮಹಾರಥರೆಲ್ಲ ಮಡಿದಿದ್ದಾರೆ; ಮುಂದೆ ಪಾಂಡವರೂ ಕೂಡ ಮಡಿಯುವವರೆ. ಆದರೆ ಕುರುಕ್ಷೇತ್ರ ಯುದ್ಧದಲ್ಲಿ ಅವರೆಲ್ಲಾ ನಿನ್ನ ಸುತ್ತ ತಿರುಗುವ ಗ್ರಹಗಳಾಗಿರುವಾಗ ನೀನು ಮಾತ್ರ ನಕ್ಷತ್ರದಂತೆ ಹೊಳೆಯುವೆ. ನೀನು ಯಾವತ್ತಿಗೂ ಹೊಳೆಯುವೆ” ಎನ್ನುತ್ತಾನೆ. ಇದರಿಂದ ಸಂತೃಪ್ತಿಗೊಂಡ ದುರ್ಯೋಧನ ಸಾವನ್ನು ಎದುರಿಸಲು ತಯಾರಾಗುತ್ತಾನೆ. ಕುರುಕ್ಷೇತ್ರದ ಈ ಪ್ರಸಂಗ ನುಡಿಯುವಂತೆಯೇ ದೇವರಾಜ ಅರಸು ನೆನಪಿಗೆ ಬರುತ್ತಾರೆ.

ಕರ್ನಾಟಕದಲ್ಲಿ ಈವರೆಗೆ ಇಪ್ಪತ್ತೆರಡು ಮಂದಿ ಮುಖ್ಯಮಂತ್ರಿಗಳು ಆಗಿಹೋಗಿದ್ದಾರೆ. ಅವರೆಲ್ಲಾ ಅರಸುರವರ ಸುತ್ತಲು ಗ್ರಹಗಳಂತೆ ಸುತ್ತುತ್ತಿದ್ದಾರೆ ಹೊರತು, ಅರಸುವಿನಂತೆ ನಕ್ಷತ್ರವಾಗಲಿಲ್ಲ. ಈ ಮುಖ್ಯಮಂತ್ರಿಗಳ ಪೈಕಿ ಕೆಲವರು ಪ್ರಾಮಾಣಿಕರಿದ್ದರು; ದಕ್ಷತೆಯಿಂದ ಆಡಳಿತ ನಡೆಸಿದವರೂ ಇದ್ದರು, ಭ್ರಷ್ಟರೂ ಇದ್ದಾರೆ. ಆದರೆ, ಬಹುತೇಕರು ಈ ವ್ಯವಸ್ಥೆಯನ್ನು ಅಲುಗಾಡಿಸಲಾಗದ ಯಥಾಸ್ಥಿತಿವಾದಿಗಳಾಗಿದ್ದರು.

ನಿಜಲಿಂಗಪ್ಪ

ಕರ್ನಾಟಕ ರಾಜಕಾರಣದಲ್ಲಿ ಅರಸುರವರ ದೊಡ್ಡ ಇತಿಹಾಸವಿದೆ. ಇದು ಆರಂಭವಾಗುವುದು ಅವರು ಬಿ.ಎಸ್ಸಿ ಪದವಿ ಮುಗಿಸಿ ಸ್ವಗ್ರಾಮ ಕಲ್ಲಳ್ಳಿಗೆ ಬಂದು ವ್ಯವಸಾಯ ಆರಂಭಿಸಿದಾಗ. ಬಲಿಷ್ಠವಾದ ಎತ್ತುಗಳೊಂದಿಗೆ ಸ್ಪುರದ್ರೂಪಿ ಯುವಕನೊಬ್ಬ ಹೊಲ ಉಳುತ್ತಿದ್ದಾನೆ ಎಂಬ ಸುದ್ದಿಯೇ ಹುಣುಸೂರು ಪ್ರದೇಶದಲ್ಲಿ ಹರಡಿ ತಮಗೊಬ್ಬ ನಾಯಕ ಸಿಕ್ಕನೆಂದು ಸಂಭ್ರಮಗೊಳ್ಳುತ್ತಾರೆ. ನ್ಯಾಯ ಪಂಚಾಯ್ತಿ ಕುಟುಂಬದ ವ್ಯಾಜ್ಯಗಳು, ದನಕರು ಕೊಳ್ಳುವ ವಿಷಯಗಳೆಲ್ಲಾ ಅರಸುರವರನ್ನು ಮುತ್ತಿಕೊಳ್ಳುತ್ತವೆ. ಆ ಕಾರಣವಾಗಿ ಒಕ್ಕಲಿಗರೇ ಪ್ರಧಾನವಾಗಿರುವ ಹುಣಸೂರು ಕ್ಷೇತ್ರದಲ್ಲಿ ಸ್ವಜಾತಿಯ ಅಭ್ಯರ್ಥಿಯನ್ನು ಸೋಲಿಸಿ ಅರಸುರವರನ್ನು ಕಡೆಯವರೆಗೂ ಗೆಲ್ಲಿಸುತ್ತಾರೆ. 1962ರಲ್ಲಿ ಅವಿರೋಧವಾಗಿ ಆಯ್ಕೆ ಮಾಡುತ್ತಾರೆ. ಹೀಗೆ ಜನಾನುರಾಗಿಯಾದ ಅರಸು ಅಂದಿನ ಸರಕಾರಕ್ಕೆ ಬೇಡದವರಾಗಿರುತ್ತಾರೆ. ಅವರ ಧೀಮಂತಿಕೆ, ವಿನಾಕಾರಣ ಯಾರನ್ನೂ ಓಲೈಸದ ನಿಷ್ಟುರ ನಡವಳಿಕೆಯನ್ನು ಗ್ರಹಿಸಿದ ನಿಜಲಿಂಗಪ್ಪನವರು ಅರಸರನ್ನು ಸಂಪುಟಕ್ಕೆ ಸೇರಿಸಿಕೊಳ್ಳುತ್ತಾರೆ. ವಾರ್ತಾಮಂತ್ರಿ, ಸಾರಿಗೆ ಸಚಿವ, ಕಾರ್ಮಿಕ ಮಂತ್ರಿಯಾಗಿ ತಮ್ಮ ಕರ್ತವ್ಯ ನಿರ್ವಹಿಸಿದ ಅರಸು ಅತೃಪ್ತಿ ಮತ್ತು ದುಗುಡದಿಂದಲೇ ಇರುತ್ತಾರೆ. ಅವರನ್ನು ಕಾಡುತ್ತಿದ್ದ ಜಾತೀಯತೆಗೆ ಜ್ವಲಂತ ಸಾಕ್ಷಿಯೆಂಬಂತೆ, ನಿಜಲಿಂಗಪ್ಪನವರು ತಮ್ಮ ಅಧಿಕಾರ ಬಿಟ್ಟು ದೆಹಲಿ ಕಡೆ ಹೊರಟಾಗ ವೀರೇಂದ್ರ ಪಾಟೀಲರನ್ನು ಮುಖ್ಯಮಂತ್ರಿ ಮಾಡುತ್ತಾರೆ. ವಿರೇಂದ್ರ ಪಾಟೀಲರು ತಮ್ಮದೇ ಸಂಪುಟ ರಚನೆ ಮಾಡಿಕೊಂಡಾಗ ಅರಸುರವರನ್ನು ಸೇರಿಸಿಕೊಳ್ಳುವುದಿಲ್ಲ. ಸರಕಾರಿ ಬಂಗಲೆ ತೊರೆದು ಮಲ್ಲೇಶ್ವರದಲ್ಲಿ ಮನೆ ಮಾಡಿದ ಅರಸು ಇನ್ನೂ ಹೆಚ್ಚು ಸ್ವತಂತ್ರಗೊಂಡವರಂತೆ ನಾಲ್ಕು ಜರ್ಸಿ ಹಸು ಕಟ್ಟಿಕೊಂಡು ಹೊಸ ಶೈಲಿಯ ರಾಜಕಾರಣ ಆರಂಭಿಸುತ್ತಾರೆ. ಈ ಸಮಯದಲ್ಲಿ ಅವರು ಪ್ರಧಾನವಾಗಿ ಜನರ ಮುಂದಿಡುತ್ತಿದ್ದ ವಿಷಯ ಯಾವುದೆಂದರೆ, ’ಮೇಲುಜಾತಿಯ ಜನ ಎಷ್ಟು ಸಂಖ್ಯೆಯಲ್ಲಿದ್ದಾರೆ? ಅದೇ ಹಿಂದುಳಿದ ಜನಗಳು ಒಟ್ಟಾದರೆ ಅವರ ಸಂಖ್ಯೆಯ ಕೇವಲ ಕಾಲು ಭಾಗವಿರುವ ಮುಂದುವರಿದ ಜಾತಿ ಜನರಿಂದ ಬಹುಸಂಖ್ಯಾತ ಹಿಂದುಳಿದವರು ಆಳಿಸಿಕೊಳ್ಳಲು ನಾಚಿಕೆಯಾಗುವುದಿಲ್ಲವೆ’ ಎಂಬುದು. ಇದರ ಜೊತೆಗೆ ಹಿಂದುಳಿದವರು ಮತ್ತು ಮುಂದುವರಿದವರ ನಡುವೆ ನಡೆಯುವ ವರ್ಗ ಹೋರಾಟದ ಮಾತನ್ನು ಆಡಿದರು. ಅರಸು ಮಾತಿನಲ್ಲಿ ಸತ್ಯ ಕಂಡುಕೊಂಡ ಮೇಲುಜಾತಿ ಬಡವರೂ ಕೂಡ ಅರಸು ಮಾತನ್ನು ಒಪ್ಪಿಕೊಂಡರು.

ದೆಹಲಿ ಮಟ್ಟದ ರಾಜಕಾರಣ ಕವಲು ದಾರಿ ಕಂಡು ಸಂಸ್ಥಾ ಕಾಂಗ್ರೆಸ್ಸಿನ ಪ್ರಾಮಾಣಿಕ ವಯೋವೃದ್ಧರೊಂದು ಕಡೆ, ಇಂದಿರಾ ಗಾಂಧಿ ಒಂದು ಕಡೆ ಎಂದು ಇಬ್ಬಾಗವಾಯ್ತು. ದೇವರಾಜ ಅರಸು ಇಂದಿರಾ ಗಾಂಧಿಯನ್ನು ಬೆಂಬಲಿಸಿದರು. ಕರ್ನಾಟಕದಲ್ಲಿ ವಿರೇಂದ್ರ ಪಾಟೀಲರ ಸರಕಾರ ಪತನವಾಗಿ ರಾಷ್ಟ್ರಪತಿ ಆಡಳಿತ ಜಾರಿಗೆ ಬಂತು. ಆ ಅವಧಿಯಲ್ಲಿ ಅರಸು ರಾಜಕಾರಣದ ಭೂಮಿಕೆ ಸಿದ್ಧವಾಯ್ತು. ರಾಷ್ಟ್ರಪತಿ ಆಡಳಿತ ಮುಗಿದು ಚುನಾವಣೆ ಬಂತು. ಮೊದಲ ಬಾರಿಗೆ ಅಲ್ಪಸಂಖ್ಯಾತ ಸಮುದಾಯಗಳ ಅನಾಮಧೇಯ ಮುಖಂಡರಿಗೆಲ್ಲಾ ಅರಸು ಟಿಕೆಟ್ ಕೊಟ್ಟರು; ಅವರು ಲಿಂಗಾಯಿತರು ಮತ್ತು ಒಕ್ಕಲಿಗರ ಸಮುದಾಯಗಳಲ್ಲಿಯೂ ಅವಕಾಶವಂಚಿತರನ್ನು ಗುರುತಿಸಿ ಟಿಕೆಟ್ ಕೊಟ್ಟು ಗೆಲ್ಲಿಸಿಕೊಂಡು ಬಂದರು. ಅರಸು ಆಶಯಕ್ಕೆ ಒತ್ತಾಸೆಯಾಗಿ ಇಂದಿರಾ ಗಾಂಧಿಯ ಗರೀಭಿ ಹಠಾವೋ ಮತ್ತು ಹೊಸತನದ ರಾಜಕಾರಣ ಅವರ ಬೆನ್ನಿಗಿತ್ತು. ಒಂದು ಹೊಸ ಯುಗ ಆರಂಭಗೊಂಡಿತ್ತು. ಮೊದಲ ಬಾರಿಗೆ ಸರಕಾರದ ನೇಮಕಾತಿಯಲ್ಲಿ ಹಿಂದುಳಿದವರು ದುರ್ಬಲರು ಮತ್ತು ತಬ್ಬಲಿ ಜಾತಿಯ ಜನ ಪಾಲು ಪಡೆದರು. ಕರ್ನಾಟಕಕ್ಕೆ ನಿಜಕ್ಕೂ ಒಬ್ಬ ಅರಸು ಸಿಕ್ಕಿದ್ದ.

ಹಿಂದುಳಿದವರನ್ನು ಮೇಲೆತ್ತಲು ಒಂದು ಸಮಗ್ರ ಮಾನದಂಡದ ಅವಶ್ಯಕತೆಯಿದ್ದುದರಿಂದ ಹಿಂದುಳಿದ ವರ್ಗದ ಮೀಸಲಾತಿ ಜಾರಿಗೆ ವರದಿ ತಯಾರಿಸುವಂತೆ ಹಾವನೂರರನ್ನು ನೇಮಿಸಿದರು. ಈ ಹಾವನೂರು ಅಂದು ಪತ್ರಕರ್ತರಿಗೆ ಗೇಲಿಯ ವ್ಯಕ್ತಿಯಾಗಿದ್ದರು. ಏಕೆಂದರೆ ಅಂದಿಗೆ ಅವರೊಬ್ಬ ಅನಾಮಧೇಯ ವಕೀಲ. ಬೇಡ ಜನಾಂಗದ ಹಾವನೂರರಿಂದ ವರದಿ ತಯಾರಿಸಿ ಅವರನ್ನು ವಾಲ್ಮೀಕಿಯಂತೆ ಅಜರಾಮರಗೊಳಿಸಿದರು.

ಪ್ರತಿಭಾವಂತರನ್ನು ಗುರುತಿಸಿ ಅವಕಾಶ ನೀಡಿ ದುಡಿಸಿಕೊಳ್ಳುವುದರಲ್ಲಿ ಅರಸು ನಿಸ್ಸೀಮರು. ಅವರು ನೇಮಕ ಮಾಡಿಕೊಂಡ ಘೋರ್ಪಡೆ ಕರ್ನಾಟಕದ ಈವರೆಗೆ ಕಂಡರಿಯದ ಅತ್ಯುತ್ತಮ ಅರ್ಥಮಂತ್ರಿಗಳಲ್ಲಿ ಒಬ್ಬರು. ಆಕ್ಸ್‌ಫೆರ್ಡ್ ಯೂನಿವರ್ಸಿಟಿಯಿಂದ ಬಂದಿದ್ದ ಘೋರ್ಪಡೆ ನಮ್ಮ ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌ರ ಶಿಕ್ಷಣಕ್ಕೆ ಆರ್ಥಿಕ ಸಹಾಯ ಮಾಡಿದ್ದವರು. ಹೀಗೆ ಅರಸು ಕಟ್ಟಿದ ಒಂದು ಸಮರ್ಥ ಮಂತ್ರಿ ಮಂಡಲ ಕರ್ನಾಟಕದಲ್ಲಿ ಹೊಸ ಯುಗವನ್ನೇ ಆರಂಭಿಸಿತ್ತು. ಸಹಜವಾಗಿ ಅರಸು ಮೇಲ್ವರ್ಗದ ಜನರ ನಿಂದನೆಗೆ ಗುರಿಯಾಗಿದ್ದರು. ಪತ್ರಕರ್ತರೂ ಕೂಡ ಸಣ್ಣಪುಟ್ಟ ದೋಷಗಳನ್ನು ದೊಡ್ಡದು ಮಾಡಿ ಬಿಂಬಿಸುತ್ತಿದ್ದರು. ಆದರೆ, ಅವರ ಆಡಳಿತದ ಕಾರಣವಾಗಿ ಅದಾಗಲೇ ಕರ್ನಾಟಕ ಆರ್ಥಿಕ ಮತ್ತು ಸಾಮಾಜಿಕವಾಗಿ ಮುನ್ನಡೆಯತೊಡಗಿದ್ದರಿಂದ ಅರಸು ಯಾರಿಗೂ ಹೆಚ್ಚು ಕೇರ್ ಮಾಡುತ್ತಿರಲಿಲ್ಲ.

ವೀರೇಂದ್ರ ಪಾಟೀಲ

ಅರಸು ಆಡಳಿತ ಆರಂಭವಾದ ಕೂಡಲೇ ಆರಂಭಿಸಿದ್ದು ಉಳುವವನೇ ಹೊಲದೊಡೆಯ ಎಂಬ ಭೂ ಸುಧಾರಣೆ ಕಾನೂನು. ಇದು ಭಾರತದಲ್ಲಿಯೇ ಕ್ರಾಂತಿಕಾರವಾದ ಕಾನೂನು; ಇದರಿಂದ ಮೇಲ್ವರ್ಗದ ಜನ ಸಿಟ್ಟಾದರು. ಅರಸು ಆತ್ಮೀಯ ಗೆಳೆಯ ಎಂ.ಬಿ ದೇಸಾಯಿ ಎಂಬ ಬೀಳಗಿ ಶಾಸಕರೊಬ್ಬರ ಆರು ಸಾವಿರ ಎಕರೆ ಜಮೀನು ಉಳುವವರ ಪಾಲಾಯ್ತು. ಆದರೂ ಅವರು ಉಸಿರೆತ್ತಲಿಲ್ಲ. ಅರಸು ಸುಧಾರಣೆ ಮೆಚ್ಚಿದ ಇಂತಹ ಹಲವರಿದ್ದರು.

ಕ್ರಮೇಣ ಒಂದೊಂದೇ ಕಾನೂನುಗಳು ಜಾರಿಯಾದವು. ಭೂ ಮಾಲೀಕರು ಶ್ರೀಮಂತರ ಮನೆಯಲ್ಲಿದ್ದ ಜೀತಗಾರರು ಬಿಡುಗಡೆಗೊಂಡರು. ಅವರಿಗೆ ಕನಿಷ್ಟ ಕೂಲಿ ನಿಗದಿ ಮಾಡಿದರು. ಬಡವರು ಶ್ರೀಮಂತರಿಂದ ಪಡೆದ ಸಾಲ ಕಟ್ಟಲಾಗದೆ ಅಸಲಿನ ಎರಡರಷ್ಟು ಬಡ್ಡಿ ಕಟ್ಟಿದ್ದವರು ಋಣ ಪರಿಹಾರದ ಕಾಯ್ದೆಯಿಂದ ನಿಟ್ಟುಸಿರು ಬಿಟ್ಟರು. ಜೊತೆಗೆ ವೃದ್ಧಾಪ್ಯ ವೇತನ, ಪದವೀಧರ ನಿರುದ್ಯೋಗಿಗಳಿಗೆ ಸ್ಟೈಫಂಡ್ ವ್ಯವಸ್ಥೆ, ಬಡವರಿಗೆಲ್ಲಾ ಜನತಾ ಮನೆ ಕಟ್ಟಿಕೊಟ್ಟಿದ್ದೂ ಅಲ್ಲದೆ, ಭಾಗ್ಯಜ್ಯೋತಿ ಒದಗಿಸುವ ನೀತಿಯನ್ನು ಜಾರಿಮಾಡಿದರು; ಈ ಎಲ್ಲಾ ಕಾರ್ಯಕ್ರಮಗಳ ಕಟ್ಟುನಿಟ್ಟಿನ ಜಾರಿಯಿಂದ ಇಡೀ ದೇಶವೇ ನಿಬ್ಬೆರಗಾಯ್ತು. ಅದಕ್ಕಾಗಿ ತುರ್ತು ಸ್ಥಿತಿ ನಂತರ ಭಾರತದ ಎಲ್ಲಾ ರಾಜ್ಯಗಳಲ್ಲಿ ಕಾಂಗ್ರೆಸ್ ಸೋತರೆ ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ಬಂತು.

ಇದನ್ನೂ ಓದಿ: ಹಳತು-ವಿವೇಕ; ದೇವರಾಜ ಅರಸು ಭಾಷಣದಿಂದ ಆಯ್ದ ಭಾಗ; ಗೇಣಿದಾರರ ಹಿತಸಾಧನೆ

ಕೇಂದ್ರದಲ್ಲಿ ಜನತಾ ಪಕ್ಷ ಅಧಿಕಾರಕ್ಕೆ ಬಂದು ಮೂರಾರ್ಜಿ ದೇಸಾಯಿ ಪ್ರಧಾನಿಯಾದರೆ ಕರ್ನಾಟಕದಲ್ಲಿ ಅರಸು ಅಧಿಕಾರಕ್ಕೆ ಬಂದು ತಮ್ಮ ಸಾಮಾಜಿಕ ಪರಿವರ್ತನೆ ಕಾರ್ಯಗಳನ್ನು ತೀವ್ರಗೊಳಿಸಿದರು. ಆಗೊಮ್ಮೆ ದೆಹಲಿಯಲ್ಲಿ ಇಂದಿರಾ ಗಾಂಧಿ ಅವರ ಮನೆಗೆ ಹೋದಾಗ ಮನೆಯ ಹೊರಗಡೆ ಮೊಮ್ಮಗು ರಾಹುಲ ಗಾಂಧಿ ಕೈ ಹಿಡಿದು ಆಟವಾಡಿಸುತ್ತಿದ್ದ ಇಂದಿರಾ ಗಾಂಧಿಯವರನ್ನು ಸಾಮಾನ್ಯ ಮಹಿಳೆಯಂತೆ ನೋಡಿ ಅಚ್ಚರಿಗೊಳ್ಳುತ್ತಾರೆ. ಅವರ ರಾಜಕೀಯ ಜೀವನ ಇನ್ನೂ ಉಳಿದಿದೆ ಎಂದು ಅವರಿಗೆ ಅನ್ನಿಸುತ್ತದೆ. ಅರಸುರನ್ನು ನೋಡಿದ ಇಂದಿರಾ ಗಾಂಧಿ “ಅರಸು ಈ ಜನತಾ ಪಾರ್ಟಿಯವರು ನನ್ನನ್ನು ಸುಮ್ಮನೆ ಬಿಡಲಾರರು; ನಾನು ದೇಶವನ್ನೇ ಬಿಟ್ಟು ಹೋಗುವಂತೆ ಮಾಡುತ್ತಾರೆ” ಎಂದು ಕಷ್ಟ ಹೇಳಿಕೊಳ್ಳುತ್ತಾರೆ. ಹೆದರಬೇಡಿ, ಕರ್ನಾಟಕದಿಂದ ನಿಮ್ಮನ್ನು ಮತ್ತೆ ಆರಿಸಿ ಸಂಸತ್ ಭವನಕ್ಕೆ ಕಳುಹಿಸುತ್ತೇನೆ ಎಂದು ಸಮಾಧಾನ ಮಾಡಿ ಬಂದ ಅರಸು ಚಿಕ್ಕಮಗಳೂರಿನಿಂದ ಸಂಸದರಾಗಿದ್ದ ಡಿ.ಬಿ ಚಂದ್ರೇಗೌಡರಿಂದ ರಾಜೀನಾಮೆ ಕೊಡಿಸಿ, ಇಂದಿರಾ ಗಾಂಧಿ ಚಿಕ್ಕಮಗಳೂರಿಗೆ ಬಂದು ನಾಮಪತ್ರ ಸಲ್ಲಿಸುವಂತೆ ಮಾಡುತ್ತಾರೆ. ಅವರ ಎದುರು ವಿರೇಂದ್ರ ಪಾಟೀಲರು ಅಭ್ಯರ್ಥಿ; ಅವರು ನೆಪಕ್ಕೆಂಬಂತೆ ಇದ್ದರೆ ಹಿನ್ನೆಲೆಯಲ್ಲಿ ಜಾರ್ಜ್ ಫರ್ನಾಂಡಿಸ್ ಹೋರಾಡುತ್ತಾರೆ. ಆದರೆ ಅರಸು ಮತ್ತವರ ಕಾರ್ಯಕ್ರಮಗಳು ಇಂದಿರಾ ಗಾಂಧಿ ಎಪ್ಪತ್ತೇಳು ಸಾವಿರದಲ್ಲಿ ಗೆಲ್ಲುವಂತೆ ಮಾಡುತ್ತದೆ.

ಅರಸು ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗುತ್ತಾರೆ. ಅವರ ಬೆಳವಣಿಗೆ ಇಂದಿರಾ ಗಾಂಧಿಯನ್ನೇ ಬಲಿ ತೆಗೆದುಕೊಳ್ಳುವಂತೆ ಕಾಣುತ್ತದೆ! ಅದಾಗಲೇ ಇಂದಿರಾ ಗಾಂಧಿ ಮಗ ಸಂಜಯಗಾಂಧಿ ಹೇಳಿದಂತೆ ಕೇಳುವ ಪ್ರಭಾವಕ್ಕೆ ಬಿದ್ದಿರುತ್ತಾರೆ. ಆದ್ದರಿಂದ ಗುಂಡೂರಾವ್ ಮತ್ತು ಎಫ್.ಎಂ ಖಾನ್ ಸಂಜಯ ಗಾಂಧಿಗೆ ಚಾಡಿ ಹೇಳಿ ಅರಸರನ್ನು ಪಾರ್ಟೀಯಿಂದಲೇ ತೆಗೆದುಹಾಕುವಂತೆ ಮಾಡುತ್ತಾರೆ. ಆಗ ಅರಸು ಅವಕಾಶ ಕೊಟ್ಟು ಮುಂದೆ ತಂದ ಅವರ ಹಿಂಬಾಲಕರೆಲ್ಲಾ ಗುಂಡೂರಾಯರ ಒಡ್ಡೋಲಗ ಸೇರಿಕೊಂಡು ಅರಸರನ್ನೇ ಮರೆತು ಬಿಡುತ್ತವೆ.

ಇಂದಿರಾ ಗಾಂಧಿ

ಅರಸರನ್ನು ತೆಗೆದ ಕ್ರಮಕ್ಕೆ ಇಂದಿರಾ ಕಾಂಗ್ರೆಸ್ ದೊಡ್ಡ ಬೆಲೆ ತೆರುತ್ತದೆ. ಮುಂದೆ ಆ ಪಕ್ಷ ಕರ್ನಾಟಕದಲ್ಲಿ ಸೋಲುಕಂಡು ಬೇರೆಬೇರೆ ಪಾರ್ಟಿಗಳೆಲ್ಲಾ ಅಧಿಕಾರಕ್ಕೆ ಬರುವಂತಾಗುತ್ತದೆ. ಗುಂಡೂರಾಯರ ನಂತರ ಅರಸು ಗುರುತಿಸಿ ಮುಂದೆ ತಂದ ಹಿಂದುಳಿದ ಜನಾಂಗದ ಬಂಗಾರಪ್ಪ ಮುಖ್ಯಮಂತ್ರಿಯಾಗುತ್ತಾರೆ. ತೀರ ಸಣ್ಣ ಸಂಖ್ಯೆಯ ಜನಾಂಗದ ವೀರಪ್ಪ ಮೊಯಿಲಿ ಮುಖ್ಯಮಂತ್ರಿಯಾಗುತ್ತಾರೆ. ಇಂದು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರುವುದು ಅರಸು ರಾಜಕಾರಣದ ಗೆಲುವೆಂದೇ ಬಗೆಯಬಹುದು. ಈ ಮೊದಲು ಮುಂದುವರಿದ ಜಾತಿಗಳು ಸರಕಾರ ರಚನೆ ಮಾಡಿಕೊಂಡಾಗ ಪ್ರಬಲ ಖಾತೆಗಳನ್ನು ತಾವು ಹಂಚಿಕೊಂಡು ಸಣ್ಣಪುಟ್ಟ ಖಾತೆಗಳನ್ನು ಶೋಷಿತ ಸಮುದಾಯಗಳ ಶಾಸಕರಿಗೆ ಹಂಚಿ ಕೈ ತೊಳೆದುಕೊಳ್ಳುತ್ತಿದ್ದರು. ಈ ಯಜಮಾನಿಕೆಯನ್ನು ಮುರಿದ ಅರಸು ದಮನಿತ ಸಮುದಾಯಗಳ ಶಾಸಕರಿಗೆ ಪ್ರಬಲ ಖಾತೆ ಕೊಟ್ಟು ನಾಂದಿ ಹಾಡಿದ ಫಲವನ್ನು ಅವರ ನಂತರವೂ ನೋಡಬಹುದು.

ಮುಖ್ಯಮಂತ್ರಿಯಾಗಿ ದೇವರಾಜ ಅರಸು ಸಾಧನೆಗಳನ್ನು ಕರ್ನಾಟಕ ಮತ್ತೆಮತ್ತೆ ನೆನಪಿಸಿಕೊಳ್ಳಬೇಕಿದೆ. ಮೈಸೂರು ರಾಜ್ಯವನ್ನು ಕರ್ನಾಟಕವೆಂದು ನಾಮಕರಣ ಮಾಡಿದ್ದು ಕೂಡ ಒಂದು ಪ್ರಮುಖ ಸಂಗತಿ. ಭೂಸುಧಾರಣೆ ಜಾರಿ ಮಾಡುವ ಮೊದಲು ತಮ್ಮ ಜಮೀನನ್ನು ಉಳುವವರ ಹೆಸರಿಗೆ ಖಾತೆ ಮಾಡಿಸಿ ನಂತರ ಕಾನೂನು ಜಾರಿಗೊಳಿಸುತ್ತಾರೆ. ಈ ಸಾಮಾಜಿಕ ಪರಿವರ್ತನೆಯ ಹರಿಕಾರನ ಪ್ರೀತಿಯ ಮಗಳು ಶೋಷಿತ ಸಮುದಾಯದ ಹುಡುಗನನ್ನು ಪ್ರೀತಿಸಿದ್ದಾಳೆ ಎಂದು ಗೊತ್ತಾದಾಗ ಆ ಮದುವೆಗೆ ಸಹಕಾರ ನೀಡುತ್ತಾರೆ. ಹೀಗೆ ಅರಸು ಆಡಳಿತದ ಎಂಟು ವರ್ಷಗಳ ಅವಧಿ ನಿಜಕ್ಕೂ ಅರಸು ಯುಗ. ಮಗಳ ಅಕಾಲ ಮೃತ್ಯು, ಆಪ್ತರು ಬೆನ್ನಿಗೆ ಹಾಕಿದ ಚೂರಿಗಳ ನೋವು ಎಲ್ಲವನ್ನು ಸಹಿಸಿಕೊಂಡು ಬದುಕಿದ್ದ ಅರಸು ಅಸ್ತಂಗತರಾದಾಗ, ಸ್ಥಗಿತಗೊಂಡಿದ್ದ ಈ ಸಮಾಜದ ರಥವನ್ನು ಮುಂದೆ ನೂಕಿದ ವ್ಯಕ್ತಿ ಅರಸು ಎಂಬ ಭಾವನೆ ಕರ್ನಾಟದ ಜನರಲ್ಲಿ ಇತ್ತು. ಆದ್ದರಿಂದ ಅರಸರದ್ದು ಪತನವಲ್ಲ, ಅವರು ಮಾಡಿದ ಕೆಲಸಗಳು ಈ ನಾಡಿನ ನಿರಂತರ ಉತ್ಥಾನಕ್ಕೆ ನೆರವಾದವೆನ್ನಬಹುದು.

ಬಿ. ಚಂದ್ರೇಗೌಡ

ಬಿ. ಚಂದ್ರೇಗೌಡ
ಲಂಕೇಶರ ಪತ್ರಿಕೆಯಲ್ಲಿ ಬಯಲುಸೀಮೆಯ ಕಟ್ಟೆ ಪುರಾಣದ ಮೂಲಕ ಕನ್ನಡಿಗರೆಲ್ಲರ ಗಮನಕ್ಕೆ ಬಂದ ಚಂದ್ರೇಗೌಡರು, ನಾಟಕಕಾರರು, ನಟರಷ್ಟೇ ಅಲ್ಲ ವಿಶಿಷ್ಟ ರಾಜಕೀಯ ನೋಟವುಳ್ಳವರೂ ಸಹಾ. ಕರ್ನಾಟಕದ ಸಾಂಸ್ಕೃತಿಕ ಹಾಗೂ ರಾಜಕೀಯ ಇತಿಹಾಸದ ಆಗುಹೋಗುಗಳು ಅವರಲ್ಲಿ ದಾಖಲಾಗಿರುವ ಬಗೆಯೂ ವಿಶಿಷ್ಟವೇ..

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಓಂ ಬಿರ್ಲಾ ಪುತ್ರಿಯ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್; ಧ್ರುವ ರಾಠಿ ವಿರುದ್ಧ ಪ್ರಕರಣ ದಾಖಲು

0
ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರ ಪುತ್ರಿಯ ಬಗ್ಗೆ ಎಕ್ಸ್‌ನಲ್ಲಿ ಸಂದೇಶವನ್ನು ಪೋಸ್ಟ್ ಮಾಡಿದ ನಂತರ, ಮಹಾರಾಷ್ಟ್ರದ ಸೈಬರ್ ಪೊಲೀಸರು ಜನಪ್ರಿಯ ಯೂಟ್ಯೂಬರ್ ಧ್ರುವ ರಾಠಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಹಿರಿಯ...