Homeಕರ್ನಾಟಕಹಳತು-ವಿವೇಕ; ದೇವರಾಜ ಅರಸು ಭಾಷಣದಿಂದ ಆಯ್ದ ಭಾಗ; ಗೇಣಿದಾರರ ಹಿತಸಾಧನೆ

ಹಳತು-ವಿವೇಕ; ದೇವರಾಜ ಅರಸು ಭಾಷಣದಿಂದ ಆಯ್ದ ಭಾಗ; ಗೇಣಿದಾರರ ಹಿತಸಾಧನೆ

- Advertisement -
- Advertisement -

ಇವತ್ತು ಮುಖ್ಯವಾಗಿ ನಾವು ನೀವು ಎಲ್ಲರೂ ಸೇರಿರತಕ್ಕದ್ದು ಭೂಸುಧಾರಣೆಯ ವಿಚಾರವಾಗಿ ಮಾತನಾಡುವುದಕ್ಕೋಸ್ಕರ. ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚು ಭೂಮಿ ಒಂದು ಕಾಲಕ್ಕೆ ಪಾಳೇಗಾರರ ಹಾಗೂ ರಾಜರ ಕೈಯಲ್ಲಿತ್ತು. ಅಲ್ಲಿಂದ ಮುಂದೆ ಜಮೀನುದಾರರ ಮತ್ತು ಜಹಗೀರುದಾರರ ಕೈಗೆ ಹೋಗಿ, ಅನಂತರ ಪಟೇಲರ ಹಾಗೂ ಶಾನುಭೋಗರ ಕೈಯಲ್ಲಿ ಸೇರಿತು. ಇದರ ಫಲವಾಗಿ ಇಲ್ಲಿ ಗೇಣಿದಾರರ ಅಂದರೆ ಕೆಲಸಮಾಡತಕ್ಕ ಜನರ ಅಥವಾ ಉಳುಮೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಶಿವಮೊಗ್ಗ ಜಿಲ್ಲೆಯ ಕೆಲವು ತಾಲ್ಲೂಕುಗಳಲ್ಲಿ ಬಹುಭಾಗ ಈ ಗೇಣಿದಾರರೇ ಇದ್ದಾರೆ. ಈ ಗೇಣಿದಾರರ ಪರವಾಗಿ ಹಿಂದೆಲ್ಲಾ ನಾನಾ ರೀತಿ ಹೋರಾಟ ನಡೆದಿತ್ತು. ಅದನ್ನೆಲ್ಲಾ ಈಗತಾನೆ ವಿವರಿಸಿದ್ದಾರೆ. ಭೂಮಿಯಲ್ಲಿ ಕೆಲಸಮಾಡಿ ಎಷ್ಟೇ ಶ್ರಮಪಟ್ಟು ಅಹಾರ ಧಾನ್ಯಗಳನ್ನು ಬೆಳೆದರೂ ಅದರಲ್ಲಿ ಅವರಿಗೆ ನ್ಯಾಯವಾಗಿ ಸಲ್ಲತಕ್ಕ ಭಾಗ ದೊರೆಯದೇ ಇರತಕ್ಕ ವಿಚಾರದ ಬಗ್ಗೆ ಏನು ಹೋರಾಟ ನಡೆದಿತ್ತು, ಇದು ಕೇವಲ ಶಿವಮೊಗ್ಗ ಜಿಲ್ಲೆಗೆ ಮಾತ್ರ ಸೀಮಿತವಾಗಿರಲಿಲ್ಲ; ಇಡೀ ಮೈಸೂರು ರಾಜ್ಯದಲ್ಲೇ ಆ ರೀತಿ ನಡೆದಿತ್ತು. ಶೋಷಣೆ ತಪ್ಪಬೇಕು ಎಂದು ಈ ದೇಶದಲ್ಲಿ ಯಾವ ಒಂದು ಹೋರಾಟ ನಡೆದುಕೊಂಡು ಬಂದಿತ್ತೋ ಆ ಶೋಷಣೆ ತಪ್ಪುವಂತಹ ಕಾಲ ನಮ್ಮ ಮುಂದಿದೆ. ಅದಕ್ಕೆ ಈ ಸಭೆಯಲ್ಲಿ ನಾವು ಇಂದು ನಾಂದಿ ಹಾಡುತ್ತಿದ್ದೇವೆ. ಇದೇ ಸಂದರ್ಭದಲ್ಲಿ ನಮ್ಮ ಮೈಸೂರು ರಾಜ್ಯದ ವಿಧಾನಸಭೆಯಲ್ಲಿ ಈ ಭೂಸುಧಾರಣೆ ಕಾನೂನು ಇನ್ನು ಐದಾರು ದಿವಸಗಳಲ್ಲಿ ಪಾಸ್ ಆಗುವುದಿದೆ. ಆ ಕಾನೂನು ಪಾಸಾಗಬೇಕಾದರೆ ಕೇಂದ್ರ ಸರ್ಕಾರದಲ್ಲಿ ಅದು ಒಪ್ಪಿಗೆ ಪಡೆಯಬೇಕು ಎಂದು ಇದೆ. ಅದಾದನಂತರ ಅದನ್ನು ಜಾರಿಗೆ ಕೊಡಲು ನಮಗೆ ಸಾಧ್ಯವಾಗುತ್ತದೆ. ಆಗ ಈ ಕಾನೂನಿನರೀತ್ಯಾ ನಿಮ್ಮಲ್ಲಿ, ಊರುಗಳಲ್ಲಿ, ಇರತಕ್ಕ ಗೇಣಿದಾರರು ತಾವು ಉಳುತ್ತಿರುವ ಭೂಮಿಗೆ ಒಡೆಯರಾಗುತ್ತಾರೆ. ಅಂದರೆ ನಾವು ಉಳುಮೆ ಮಾಡುತ್ತಿರತಕ್ಕಂಥ ಭೂಮಿ ತಮ್ಮ ಸ್ವಂತ ಭೂಮಿಯೆಂದು ತಿಳಿಯಬೇಕು. ಇದೇ ಕಾನೂನು ನಾವು ಇಂದು ತರುತ್ತಿರುವುದು. ಈ ವಿಷಯವನ್ನು ತಿಳಿದು ನೀವೆಲ್ಲರೂ ಬಹಳ ಸಂತೋಷಪಡುತ್ತಿದ್ದೀರಿ.

ಆದರೆ ನಾನು ಈ ವಿಷಯವನ್ನು ತಿಳಿಸಿ ಈ ಹರ್ಷವನ್ನುಂಟುಮಾಡಿದ್ದರೂ, ಇದನ್ನು ಜಾರಿಗೆ ಕೊಡುವಲ್ಲಿ ಎಷ್ಟು ಕಷ್ಟವಿದೆ ಎಂಬುದು ನನಗೆ ತಿಳಿದಿದೆ. ಇದಕ್ಕೆ ಕಾರಣವೇನೆಂದರೆ, ಮೊದಲನೆಯದಾಗಿ ಈ ಭೂಮಿಯನ್ನು ಮಾಡತಕ್ಕ ಜನರಿಗೆ ಅಷ್ಟಾಗಿ ತಿಳಿವಳಿಕೆ ಇರಲಿಲ್ಲ; ಅನೇಕರು ವಿದ್ಯಾವಂತರೂ ಅಲ್ಲ ಹಾಗೂ ಒಗ್ಗಟ್ಟಿನಿಂದ ಹೋರಾಟ ಮಾಡುವ ಶಕ್ತಿಯೂ ಅವರಲ್ಲಿ ಇಲ್ಲ. ಆದರೆ ಈ ಭೂಮಾಲೀಕರು ತುಂಬ ತಿಳಿವಳಿಕಸ್ಥರಾಗಿದ್ದಾರೆ ಹಾಗೂ ಅವರಿಗೆ ಕಾನೂನುಗಳನ್ನು ಸುಲಭವಾಗಿ ತಿಳಿದುಕೊಳ್ಳುವ ಶಕ್ತಿ ಇದೆ; ಕೋರ್ಟುಕಚೇರಿಗಳಿಗೆ ಹೋಗಿ ತಮಗೆ ಒಪ್ಪಿಗೆಯಾದ ರೀತಿಯಲ್ಲೇ ಕೆಲಸ ಮಾಡಿಸಿಕೊಳ್ಳಬಲ್ಲರು; ಶಾನುಭೋಗರು ಶೇಕದಾರರಿಂದ ತಮ್ಮ ಇಷ್ಟದಂತೆ ಅವರು ಬರೆಸಬಲ್ಲರು. ಆದ್ದರಿಂದ ಈಗ ನಿಮಗೆ ಭೂಮಿಯನ್ನು ಕೊಡುತ್ತೇವೆಂದರೆ ಅದು “ಮಕ್ಕಳ ಕೈಯಲ್ಲಿ ಕಜ್ಜಾಯ ಕೊಟ್ಟರೆ, ಅದನ್ನು ರಸ್ತೆಯಲ್ಲಿ ಹೋಗುವ ಕಾಗೆ ಹಾರಿಸಿಕೊಂಡು ಹೋಯಿತು” ಎನ್ನುವಂತೆ ಆಗುತ್ತದೆಂದು ನನ್ನ ಭಾವನೆ. ಇದನ್ನು ತಪ್ಪಿಸುವ ಮಾರ್ಗ ಹೇಗೆ ಹಾಗೂ ನಿಮಗೆ ರಕ್ಷಣೆ ಕೊಡುವುದು ಹೇಗೆ ಎನ್ನುವ ಚಿಂತನೆ ನನ್ನ ಮನಸ್ಸಿನಲ್ಲಿ ಪ್ರಬಲವಾಗಿ ಉಳಿದಿದೆ. ಇಂಥ ಅನ್ಯಾಯವನ್ನು ಬಗೆಹರಿಸುವುದಕ್ಕೆ ಈಗ ಇರತಕ್ಕಂತಹ ಕಾನೂನುರೀತ್ಯಾ ಮುನ್ಸಿಫ್ ಕೋರ್ಟ್, ಸಬ್ ಡಿವಿಷನ್ ಕೋರ್ಟ್, ರೆವೆನ್ಯೂ ಕೋರ್ಟ್, ಹೈಕೋರ್ಟ್, ಸುಪ್ರೀಂ ಕೋರ್ಟ್- ಹೀಗೆ ಗೇಣಿದಾರರು ಅಲೆಯುವಂತಾದರೆ ಅವರು ರಕ್ಷಣೆಯನ್ನಾದರೂ ಎಲ್ಲಿ ಪಡೆಯಲು ಸಾಧ್ಯ? ಆತನ ಜೀವಮಾನವೆಲ್ಲಾ ಕೋರ್ಟು ಕಚೇರಿ ಅಲೆಯುವಂತಾಗಬಹುದು. ಇದನ್ನು ತಪ್ಪಿಸುವುದಕ್ಕೋಸ್ಕರವೇ ಈ ಕಾನೂನಿನಲ್ಲಿ ಕೋರ್ಟುಗಳು ಅಂದರೆ ತಾಲ್ಲೂಕು ಮಟ್ಟದಿಂದ ಮುಂದಕ್ಕೆ ಹೋಗಬಾರದು ಎಂದು ಆಯಾ ಸ್ಥಳದಲ್ಲಿರತಕ್ಕ ರೈತರ ಒಂದು ಪಂಚಾಯಿತಿ ಮಾಡಿದಂತೆ ಮಾಡಿ ಅದರಲ್ಲಿ ಸಾರ್ವಜನಿಕರ ಮುಖಂಡರನ್ನು ಸೇರಿಸಿ ಈ ವಿಚಾರಗಳೆಲ್ಲ ಅಲ್ಲಿಯೇ ಇತ್ಯರ್ಥವಾಗುವಂತೆ ಮಾಡಬೇಕು. ಇದು ಹೆಚ್ಚುಕಡಿಮೆ ನಮ್ಮ ಹಳ್ಳಿ ಪಂಚಾಯಿತಿ ಇದ್ದ ಹಾಗೆ. ಹೀಗೆ ಮಾಡಿದರೆ ಜಮೀನುದಾರರ ಕೈವಾಡದಿಂದ ಗೇಣಿದಾರರು ತಪ್ಪಿಸಿಕೊಂಡು ಸುಗಮವಾಗಿ ಅವರ ಗೇಣಿ ಜಮೀನುಗಳನ್ನು ಪಡೆಯಲು ಅನುಕೂಲವಾಗುತ್ತದೆ ಹಾಗೂ ಇವರಿಬ್ಬರ ನಡುವೆಯೇನಾದರೂ ತಕರಾರುಗಳು ಬಂದರೆ ಈ ಪಂಚಾಯಿತಿಗಳು ನ್ಯಾಯವಾಗಿ ಪರಿಹರಿಸಬಲ್ಲವು.

ಆದ್ದರಿಂದ ಈ ರೀತಿ ಮಾಡಿ ಗೇಣಿದಾರರಿಗೆ ರಕ್ಷಣೆ ಕೊಡುವುದು ಒಳ್ಳೆಯದೆಂದು ಕಾನೂನನ್ನು ಆಳವಡಿಸುವುದಕ್ಕೆ ಪ್ರಯತ್ನ ಮಾಡಿದ್ದೇವೆ. ಒಟ್ಟಿನಲ್ಲಿ ಈ ಭೂಸುಧಾರಣೆ ಕಾನೂನಿನಿಂದ ನಾವು ಯಾರ ಹಿತವನ್ನು ಸಾಧನೆ ಮಾಡುವುದಕ್ಕೆ ಹೊರಟಿದ್ದೇವೋ ಆ ಜನರಿಗೆ ಕಾನೂನಿನ ಮೂಲಕ ರಕ್ಷಣೆ ದೊರಕಿಸಿಕೊಡಬೇಕು ಎಂಬುದು ನಮ್ಮ ಉದ್ದೇಶ. ಇದರಲ್ಲಿ ನಮ್ಮ ತಾಲ್ಲೂಕಿನ ಮಟ್ಟದಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಇರತಕ್ಕ ಎಲ್ಲ ಮುಖಂಡರು ಸಹಕಾರ ನೀಡಬೇಕೆಂದು ತನ್ನ ಇಚ್ಛೆ. ಬೇರೆ ಪಕ್ಷದವರು ಏನು ಹೇಳುತ್ತಾರೋ ತಿಳಿದಿಲ್ಲ. ನಮ್ಮ ಪಕ್ಷದಲ್ಲಿ ಕೆಲಸಮಾಡತಕ್ಕ ಮುಖಂಡರು ಕಾರ್ಯಕರ್ತರು ಪ್ರಾಮಾಣಿಕವಾಗಿ ನಾವು ಏನು ಕಾನೂನು ಮಾಡಿದ್ದೇವೆ ಆ ಕಾನೂನಿನಂತೆ ವ್ಯವಹಾರಗಳು ನಡೆಯುವಂತೆ ಏರ್ಪಾಡು ಮಾಡುವುದು ತಮ್ಮ ಕರ್ತವ್ಯವೆಂದು ಭಾವಿಸಬೇಕು. ನಮ್ಮಲ್ಲಿ ಭೂಮಾಲೀಕರ ಪರ ಇರುವ ಜನ ಇದ್ದರೆ, ಕಾನೂನಿನಂತೆ ನಡೆಯಲು ಅವರಿಗೆ ಇಷ್ಟವಿಲ್ಲದಿದ್ದರೆ, ಅಂಥವರು ನಮ್ಮ ಪಕ್ಷವನ್ನು ಬಿಟ್ಟುಹೋಗಬೇಕು. ಇದಕ್ಕೆ ಬೇರೆ ದಾರಿಯೇ ಇಲ್ಲ. ಪಕ್ಷದಲ್ಲೂ ಇರುತ್ತೇವೆ ಹಾಗೂ ಜಮೀನನ್ನು ಉಳಿಸಿಕೊಳ್ಳುತ್ತೇವೆ ಅನ್ನುವುದಾದರೆ ಇಂದಲ್ಲ ನಾಳೆಯಾದರೂ ನೀವು ಹೊರಗೆ ಹೋಗಲೇಬೇಕಾಗುತ್ತದೆ. ಇದಕ್ಕೆ ಒಂದು ಭೂಮಿಕೆಯನ್ನು ಮೊದಲು ನಾವು ತಯಾರು ಮಾಡಿಕೊಳ್ಳಬೇಕು. ನಿಮ್ಮ ಭೂಮಿಯನ್ನು ಸ್ವಂತ ಸಾಗುವಳಿಗೆ ತೆಗೆದುಕೊಳ್ಳುವುದಕ್ಕೆ ಕಾನೂನು ಇತ್ತು. ಇಡೀ ಕರ್ನಾಟಕ ರಾಜ್ಯದಲ್ಲಿ ಆ ಅಧಿಕಾರವನ್ನು ಪಡೆಯುವುದಕ್ಕಾಗಿ ಒಂದು ಲಕ್ಷ ಜನ ಅರ್ಜಿ ಹಾಕಿದ್ದರು. ಈಗ ಅದು 7-8 ವರ್ಷಗಳ ಮೇಲಾಗಿರಬಹುದು. ಆದರೆ ಎಲ್ಲಾ ಅರ್ಜಿಗಳನ್ನು ತೀರ್ಮಾನ ಮಾಡುವುದಕ್ಕಾಗಲಿಲ್ಲ. ಇನ್ನೂ 50 ಸಾವಿರ ಅರ್ಜಿಗಳು ತೀರ್ಮಾನವಾಗದೆ ಹಾಗೆ ಇವೆ. ಅದಕ್ಕೆ ಆ ಅರ್ಜಿಗಳನ್ನು ಈ ಕಾನೂನುಪ್ರಕಾರ ರದ್ದು ಮಾಡಿದ್ದು ಆಯಿತು. ಯಾರು ಗೇಣಿದಾರರಿದ್ದಾರೆ ಅವರಿಗೆ ಭೂಮಿಯನ್ನು ಕೊಡುವಂತೆ ಹಾಗೂ ಅದನ್ನು ಹಿಂದಕ್ಕೆ ಮಾಲೀಕರಿಗೆ ಕೊಡದಂತೆ ಈಗ ಕಾನೂನು ಮಾಡಿದ್ದೇವೆ. ಇದನ್ನು ಜನರು ಅರ್ಥಮಾಡಿಕೊಳ್ಳಬೇಕು. ಈ ಸಭೆ ಏರ್ಪಾಡು ಮಾಡಿರುವುದು ಬಹಿರಂಗವಾಗಿ ಜನರಿಗೆ ಈ ವಿಷಯವನ್ನು ತಿಳಿಯುವಂತೆ ಹೇಳಬೇಕೆಂಬ ಉದ್ದೇಶದಿಂದಲೆ.

ಹಾಗಿಲ್ಲದಿದ್ದರೆ, ಹಾಗೆಹೀಗೆ ಎಂದು ಜನರಿಗೂ, ಗೇಣಿದಾರರಿಗೂ ಮಾಲೀಕರು ಮೋಸಮಾಡುವ ಸಂಭವ ಇದೆ. ಆದ್ದರಿಂದ ಈಗಲೇ ನಿಮ್ಮ ಮನಸ್ಸಿಗೆ ಸ್ಪಷ್ಟವಾಗುವಂತೆ ಹೇಳುತ್ತೇನೆ. ಯಾರು ಗೇಣಿದಾರರಾಗಿದ್ದಾರೋ ಅವರಿಂದ ಭೂಮಿಯನ್ನು ಮಾಲೀಕರು ಹಿಂದಕ್ಕೆ ಪಡೆಯುವಂತೆ ಇಲ್ಲ. ನೀವು ಭೂಮಿಯನ್ನು ಖಂಡಿತ ಕೊಡಬೇಡಿ. ಆದರೆ ಯಾರು ಮಿಲಿಟರಿಗೆ ಹೋಗಿರುವವರು ಇರುತ್ತಾರೆ ಅವರ ಭೂಮಿ ಒಂದು ಬಿಟ್ಟು ಮಿಕ್ಕವರಿಗೆಲ್ಲಾ ಈ ಕಾನೂನು ಅನ್ವಯಿಸುತ್ತದೆ. ಮತ್ತೆ ಈ ಭೂಮಿಗೆ ನೀವು ಕೊಡಬೇಕಾದ ಕಂದಾಯದ ಹಣದ ಬಗ್ಗೆ ನಿಮಗೆ ಅನುಕೂಲ ಮಾಡಿಕೊಡಲಾಗಿದೆ. ಏಕೆಂದರೆ ನಿಮ್ಮಲ್ಲಿ ಪೂರ್ಣವಾಗಿ ಬಡವರೇ ಇರುವುದರಿಂದ ಕಂದಾಯವನ್ನು ಕಂತಿನ ರೂಪದಲ್ಲಿ ತೀರಿಸುವದಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಅನಂತರ ಯಾರು ದೇವಸ್ಥಾನಗಳಿಗೆ ಸಂಬಂಧಪಟ್ಟ ಭೂಮಿಯನ್ನು ಗೇಣಿಮಾಡುತ್ತಿದ್ದಾರೆ ಅವರಿಗೂ ಈ ಕಾನೂನು ಅನ್ವಯಿಸುತ್ತದೆ, ಕೆಲವರು ಸರ್ಕಾರ ಕಾನೂನನ್ನು ದೇವರಿಗೂ ತಂದಿದೆ ಎಂದು ಹೇಳುತ್ತಿದ್ದಾರೆ. ದೇವರ ಹೆಸರಿನಲ್ಲಿದ್ದ ಭೂಮಿಯನ್ನು ಇಟ್ಟುಕೊಂಡು ಅದರಲ್ಲಿ ಬರತಕ್ಕ ಉತ್ಪತ್ತಿಯನ್ನು ಯಾರು ಸ್ವಾಹಾ ಮಾಡುತ್ತಿದ್ದಾರೋ ಅವರೇ ಈ ಮಾತನ್ನು ಹೇಳುತ್ತಿರುವುದು. ಆನೇಕ ಪೂಜಾರಿಗಳು ದೇವರ ಹೆಸರಿನಲ್ಲಿರತಕ್ಕ ಜಮೀನನ್ನು ಕ್ರಮೇಣ ತಮ್ಮ ಹೆಸರಿಗೆ ಬದಲಾವಣೆ ಮಾಡಿಕೊಂಡು ತಮ್ಮದೇ ಭೂಮಿಯೆಂದು ಆದರ ಆದಾಯವನ್ನೆಲ್ಲಾ ತಾವೇ ಪಡೆಯುತ್ತಿದ್ದಾರೆ ಹಾಗೂ ಗೇಣಿದಾರರಿಗೆ ದೇವರ ಹೆಸರಿನಲ್ಲಿ ಭಯ ಹುಟ್ಟಿಸುತ್ತಿದ್ದಾರೆ. ಇದು ಸರಿಯಲ್ಲ. ದೇವಸ್ಥಾನದ ಹೆಸರಿನಲ್ಲಿದ್ದು ಆ ಭೂಮಿಯನ್ನು ಅದಕ್ಕೆ ಸಂಬಂಧಪಟ್ಟ ಪೂಜಾರಿಯೇ ಗೇಣಿಮಾಡುತ್ತಿದ್ದರೆ ಆ ಭೂಮಿಯನ್ನು ಅವನಿಗೆ ಈ ಕಾನೂನಿನ ಪ್ರಕಾರ ಕೊಡಲಾಗುತ್ತದೆ, ಹಾಗಿಲ್ಲದೆ ಬೇರೆಯವರಿಗೆ ಗೇಣಿಗೆ ಕೊಟ್ಟಿದ್ದರೆ ಅದು ಗೇಣಿದಾರನಿಗೆ ಸೇರುತ್ತದೆ. ಇದರಿಂದ ದೇವಸ್ಥಾನದ ಪೂಜೆ ಪುನಸ್ಕಾರಗಳನ್ನು ನಿಲ್ಲಿಸುವಂತಾಗುತ್ತದೆಂದು ಅನೇಕ ವಿಧವಾಗಿ ಚರ್ಚೆ ಕೂಡ ನಡೆಯಿತು; ಆ ದೇವಸ್ಥಾನಗಳಲ್ಲಿ ಹಿಂದಿನಂತೆ ಪೂಜಾಕಾರ್ಯಕ್ರಮಗಳು ನಡೆದುಕೊಂಡು ಬರಲು ಸಹಾಯಕವಾಗುವಂತೆ ಸರ್ಕಾರದಿಂದ ಅದಕ್ಕಾಗಿ ಒಂದು ಕಾಯಂ ಆದ ಮೊಬಲಗನ್ನು ಕೊಡಿಸಲಾಗುತ್ತದೆ. ಆದ್ದರಿಂದ ಇದರ ಬಗ್ಗೆ ಯಾರೂ ಹೆಚ್ಚಿಗೆ ಯೋಚನೆ ಮಾಡಬೇಕಾಗಿಲ್ಲ.

ಒಟ್ಟಿನಲ್ಲಿ, ಈ ಎಲ್ಲದರ ಹಿನ್ನೆಲೆಯೇನೆಂದರೆ ನಮ್ಮ ದೇಶದಲ್ಲಿ ಬಡತನ ಬಹಳ ಇದೆ; ಈ ಬಡತನ ಹೋಗಲಾಡಿಸುವ ಜವಾಬ್ದಾರಿಯನ್ನು ಸರ್ಕಾರದ ಮೇಲೆ ಜನ ಹೊರಿಸಿದ್ದಾರೆ. ಸರ್ಕಾರ ಬಡತನ ಹೋಗಲಾಡಿಸತಕ್ಕಂತಹ ಮಾರ್ಗಗಳನ್ನು ಕಂಡುಹಿಡಿಯಬೇಕು; ಜನರಿಗೂ ಮಾರ್ಗದರ್ಶನ ಮಾಡಬೇಕು. ಕಾನೂನುಗಳನ್ನು ಮಾಡಬೇಕು; ನಮ್ಮ ಈ ಒಂದು ಕೆಲಸಕಾರ್ಯಗಳಿಗೆ ಅಡಚಣೆಗಳು ಇದ್ದರೆ ಅದನ್ನು ತೆಗೆಯಬೇಕು; ಇದೆಲ್ಲಾ ಜವಾಬ್ದಾರಿಯನ್ನು ಜನತೆ ಸರ್ಕಾರಕ್ಕೆ ಕೊಟ್ಟಿದೆ. ಅದೇ ಪ್ರಜಾಪ್ರಭುತ್ವ ಅನ್ನತಕ್ಕಂತಹದ್ದು. ನಾವು ನಿರ್ಭಯವಾಗಿ ಈ ಜವಾಬ್ದಾರಿಯನ್ನು ನಿರ್ವಹಿಸತಕ್ಕದ್ದು ನಮ್ಮ ಕೆಲಸವಾಗಿದೆ. ನಾವು ಹೇಳುವ ವಿಚಾರಗಳನ್ನು ನೀವು ತಿಳಿದುಕೊಳ್ಳಬೇಕಾದ್ದು ನಿಮ್ಮ ಜವಾಬ್ದಾರಿ. ಸರ್ಕಾರ ಯಾವುದೇ ಕೆಲಸ ಮಾಡಬೇಕಾದರೆ, ಸರ್ಕಾರಕ್ಕೆ ಸಹಾಯವಾಗಿ ನಡೆಯುವ, ಸರ್ಕಾರ ಮಾಡಿದ ಕಾನೂನಿನಂತೆ ನಡೆಯುವ ಮನೋಭಾವ ಸಾರ್ವಜನಿಕರಲ್ಲಿ ಬೆಳೆದರೆ ಆಗ ನಮ್ಮ ಕೆಲಸಕಾರ್ಯಗಳು ಸುಲಭವಾಗಿ ಆಗುತ್ತವೆ ಹಾಗೂ ನಮಗೆ ಇರತಕ್ಕ ಕಷ್ಟಗಳನ್ನು ಸುಲಭವಾಗಿ ಪರಿಹಾರ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.
ನಮ್ಮಲ್ಲಿ ಕಾನೂನುಗಳನ್ನು ರಕ್ಷಣೆ ಮಾಡತಕ್ಕ ಮನೋಭಾವ ಎಲ್ಲರಲ್ಲೂ ಬೆಳೆಯಬೇಕಾದ್ದು ಬಹಳ ಅಗತ್ಯ. ನಾವು ಈ ಭೂಸುಧಾರಣಾ ಕಾನೂನು ತಂದಿದ್ದೇವೆ. ಉತ್ಪಾದನೆ ಮಾಡುವುದಕ್ಕೆ ಸಾಧನ ಯಾವುದಿದೆ ಅದು ನಿಮಗೆ ಸೇರಬೇಕೆಂಬುದು ಇದರ ಅರ್ಥ. ಧಾನ್ಯ, ಧವಸ, ಮರ, ಗಿಡಗಳೆಲ್ಲ ಉತ್ಪಾದನೆಯೆ. ಇವೆಲ್ಲವೂ ಮನುಷ್ಯನಿಗೆ ಉಪಯೋಗಕ್ಕೆ ಬೇಕಾದುವು. ಈ ಉತ್ಪಾದನೆಗಳು ನಮಗೆ ಬರುವುದು ಭೂಮಿಯಿಂದ. ಆದ್ದರಿಂದ ನಮಗೆ ಬೇಕಾದ ಆಹಾರಪದಾರ್ಥಗಳನ್ನು ಭೂಮಿಯಿಂದ ಪಡೆಯುವುದರಿಂದ ಈ ಭೂಮಿ ಒಂದು ಸಾಧನ. ಈ ಸಾಧನದ ಮಾಲೀಕತ್ವ ಯಾರಿಗೆ ಸಲ್ಲಬೇಕು ಎನ್ನುವ ತತ್ವವನ್ನು ನಾವು ಕಂಡುಕೊಂಡಿದ್ದೇವೆ. ಯಾರು ಭೂಮಿಯ ಮೇಲೆ ಇದುವರೆಗೆ ಸ್ವತಃ ನಿಂತು ಬೆವರು ಸುರಿಸಿ ಅದರಿಂದ ಉತ್ಪಾದನೆಯನ್ನು ಮಾಡುತ್ತಿದ್ದಾರೋ ಅವರಿಗೆ ಆ ಭೂಮಿಯು ಮಾಲೀಕತ್ವ ಸಲ್ಲಬೇಕು ಎಂಬುದೇ ಇದರ ಮುಖ್ಯ ತತ್ವ. ಇದಕ್ಕೆ ವಿರುದ್ಧವಾಗಿರುವ ಜನ ನಾನಾ ರೀತಿಯಲ್ಲಿ ಸಂಕಟಪಡುತ್ತಿದ್ದಾರೆ. ಯಾರು ಬೇರೆಯವರಿಂದ ದುಡಿಮೆ ಮಾಡಿಸಿಕೊಂಡು, ಅದರಿಂದ ಬಂದಂಥ ಉತ್ಪತ್ತಿಯ ಹೆಚ್ಚು ಭಾಗವನ್ನು ಊಟ ಮಾಡುತ್ತಿದ್ದರೋ ಆ ಜನರಿಗೆ ಈಗ ಸಂಕಟ ಬಂದಿದೆ. ಅದೇನೆಂದರೆ ಇಷ್ಟು ದಿವಸ ಕೂತಕಡೆ ಊಟ ಮಾಡುತ್ತಿದ್ದ ಈ ಜನ ಇನ್ನು ಮುಂದೆ ಅದಕ್ಕೆ ಅವಕಾಶವಿಲ್ಲವೆಂದೂ ಹಾಗೂ ಭೂಮಿಯನ್ನು ಕಳೆದುಕೊಳ್ಳುತ್ತೇವೆಂದೂ ಸಂಕಟಪಡುತ್ತಿದ್ದಾರೆ. ಇದರ ಬಗ್ಗೆ ಹೆಚ್ಚಿಗೆ ಹೇಳಬೇಕಾಗಿಲ್ಲ. ಯಾರು ಇದುವರೆಗೆ ಈ ಗೇಣಿದಾರರನ್ನು ಶೋಷಣೆ ಮಾಡಿ ಸುಖಪಡುತ್ತಿದ್ದರೋ ಆ ಜನ ತಮ್ಮ ಕಾಲ ಮುಗಿಯಿತೆಂದು ತಿಳಿಯಬೇಕು. ಇದುವರೆಗೆ ಅವರು ಅನುಭವಿಸಿದ ಸುಖ ಸಾಕು. ಇನ್ನು ಮುಂದೆ ದುಡಿಮೆಗಾರರ ಯುಗ. ಆದ್ದರಿಂದ ದುಡಿಯುವವರಿಗೆ ಈಗ ನೀವು ಅವಕಾಶ ಮಾಡಿಕೊಡಬೇಕು. ಮಾಡಿಕೊಡಿ. ಹಾಗೆ ಮಾಡಿ ಕೊಡುವುದರಿಂದ ನಿಮಗೆ ಯಾವ ರೀತಿಯ ತೊಂದರೆಗಳೂ ಆಗುವುದಿಲ್ಲ. ಏಕೆಂದರೆ ನಿಮಗೆ ಹಣ ಸಂಪಾದನೆ ಮಾಡಲು ಅನೇಕ ಮಾರ್ಗಗಳಿವೆ. ಅದರಲ್ಲಿ ನೀವು ಹೋಗಿ. ಈಗ ಭೂಮಿಯ ಮೇಲೆ ಕೆಲಸ ಮಾಡುವವರಿಗೆ ಅದರ ಮೇಲೆ ಮಾಲೀಕತ್ವ ಉಳಿಯಲಿ. ಅದರಲ್ಲಿ ನಿಮಗೆ ದೊರೆಯುತ್ತಿದ್ದ ಪಾಲು ತಪ್ಪಬೇಕು. ಇದು ನಾವು ಹಾಕಿಕೊಂಡು ಹೊರಟಿರತಕ್ಕ ನೀತಿ.

(ಭೂ ಸುಧಾರಣೆ ಕಾಯ್ದೆ ಜಾರಿ ಮಾಡುವುದಕ್ಕಿಂತಲೂ ಮುಂಚಿತವಾಗಿ, 12.05.1973ರಂದು ಶಿವಮೊಗ್ಗ ಜಿಲ್ಲೆಯ ವ್ಯವಸಾಯಗಾರರ ಸಭೆಯನ್ನು ಉದ್ದೇಶಿಸಿ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರು ಮಾಡಿದ ಭಾಷಣದ ಆಯ್ದ ಭಾಗವಿದು. ಇದನ್ನು ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಸಂಸ್ಥೆ ಪ್ರಕಟಿಸಿರುವ ’ಪ್ರಗತಿಪಥ – ಅರಸು ಅವರ ಆಯ್ದ ಐವತ್ತು ಭಾಷಣಗಳು’ ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಉತ್ತರಪ್ರದೇಶ: ಕ್ಷೌರ ಮಾಡಲು ತಡವಾಗಿ ಬಂದ ಕ್ಷೌರಿಕನನ್ನು ಲಾಕಪ್‌ನಲ್ಲಿ ಕೂಡಿ ಹಾಕಿದ ಪೊಲೀಸ್‌ ಅಧಿಕಾರಿ

0
ಕ್ಷೌರಕ್ಕಾಗಿ ಮನೆಗೆ ಕ್ಷೌರಿಕ ತಡವಾಗಿ ಬಂದ ಎಂದು ಪೊಲೀಸ್‌ ಅಧಿಕಾರಿಯೋರ್ವ ಕ್ಷೌರಿಕನನ್ನು ಲಾಕಪ್‌ನಲ್ಲಿ ಕೂಡಿ ಹಾಕಿರುವ ಅಮಾನವೀಯ ಘಟನೆ ಬಿಜೆಪಿ ಆಡಳಿತದ ಉತ್ತರಪ್ರದೇಶದ ಬುದೌನ್‌ನ ಪೊಲೀಸ್ ಠಾಣೆಯೊಂದರಲ್ಲಿ ನಡೆದಿದೆ. ಸರ್ಕಲ್ ಆಫೀಸರ್(ಸಿಒ) ಸುನೀಲ್ ಕುಮಾರ್...