Homeಮುಖಪುಟಸನಾತನ ಧರ್ಮ ಮತ್ತು ಇಸ್ಲಾಂ ಧರ್ಮ ಮೂಲ ಸಿದ್ಧಾಂತದಲ್ಲಿ ಒಂದೇನಾ?

ಸನಾತನ ಧರ್ಮ ಮತ್ತು ಇಸ್ಲಾಂ ಧರ್ಮ ಮೂಲ ಸಿದ್ಧಾಂತದಲ್ಲಿ ಒಂದೇನಾ?

- Advertisement -
- Advertisement -

ಹೌದು. ನಿಮಗೆ ಆಶ್ಚರ್ಯವಾಗಬಹುದು ಆದರೆ ಇದು ನಿಜ. ಮೂಲಭೂತ ಸಿದ್ಧಾಂತಗಳನ್ನು ನೋಡಿದರೆ ಇದು ನಿಜ ಎನ್ನುವುದು ನಿಮಗೂ ಗೊತ್ತಾಗಬಹುದು.

’ಹಿಂದೂ’ ಎಂಬ ಹೆಸರನ್ನು ಹಿಂದೂಗಳಿಗೆ ಮುಸಲ್ಮಾನರು ಅಥವಾ ಭಾರತದ ಹೊರಗಿನವರು ಕೊಟ್ಟರು ಎಂಬ ಕಾರಣದಿಂದ ಇತ್ತೀಚಿಗೆ ಹಿಂದೂಗಳು ತಮ್ಮನ್ನು ’ಸನಾತನಿ’ಗಳೆಂದು ಕರೆದುಕೊಳ್ಳಲು ಪ್ರಾರಂಭಿಸಿದ್ದಾರೆ. ತಮ್ಮ ಧರ್ಮ ಅನಾದಿಕಾಲದಿಂದ ಬಂದಿದ್ದು ಎನ್ನುತ್ತಾರೆ. ಆದರೆ ಸನಾತನ ಎನ್ನುವುದು ಒಂದು ವಿಶೇಷಣವೇ ಹೊರತು ನಾಮವಲ್ಲ. ಅಂದರೆ ಇಂದಿಗೂ ಅವರ ಧರ್ಮಕ್ಕೊಂದು ಹೆಸರು ಸಿಕ್ಕಿಲ್ಲ. ಜೊತೆಗೆ ಇಸ್ಲಾಂ ಧರ್ಮ ಇತ್ತೀಚೆಗೆ ಅಂದರೆ ಸುಮಾರು 1400 ವರ್ಷಗಳ ಹಿಂದೆ ಮಾತ್ರ ಹುಟ್ಟಿತು ಎಂದು ಅವರು ವಾದಿಸುತ್ತಾರೆ. ಯಾಕೆಂದರೆ ಪ್ರವಾದಿ ಮೊಹಮ್ಮದರು ಬದುಕಿದ್ದು ಸುಮಾರು ಅಷ್ಟು ವರ್ಷಗಳ ಹಿಂದೆ. ಆದರೆ ಇಸ್ಲಾಂ ಕೂಡ ’ಸನಾತನ’ವೇ, ಅಂದರೆ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದ ಧರ್ಮವೇ ಎಂದು ವಾದಿಸುತ್ತಾರೆ ಮುಸ್ಲಿಮರು. ಮುಸ್ಲಿಮರ ಪ್ರವಾದಿ ಮೊಹಮ್ಮದರ ತಂದೆಯ ಹೆಸರು ಅಬ್ದುಲ್ಲಾ ಎಂದಿತ್ತು. ಅಬ್ದುಲ್ಲಾ ಎಂದರೆ ಅಲ್ಲಾಹುವಿನ ಗುಲಾಮ ಎಂದು ಅರ್ಥ. ಅಂದರೆ ಮೊಹಮ್ಮದರಿಗಿಂತ ಹಿಂದಿನಿಂದಲೂ ಅಲ್ಲಾ ಒಬ್ಬ ದೇವರಾಗಿದ್ದ ಎಂದಾಯಿತು. ಮುಸ್ಲಿಮರು ತಮ್ಮ ಮೂಲವನ್ನು ಇತರ ಅಬ್ರಹಾಮನ ಧರ್ಮಗಳಾದ ಯೆಹೂದಿ ಹಾಗೂ ಕ್ರಿಶ್ಚಿಯನ್ ಧರ್ಮಗಳಂತೆ ಎಡಮ್‌ನಲ್ಲಿ ಕಾಣುತ್ತಾರೆ. ಅಂದರೆ ಅವರ ಪ್ರಕಾರ ಇಸ್ಲಾಂ ಹುಟ್ಟಿದ್ದು ಮಾನವರ ಮೂಲಪುರುಷನಾದ ಎಡಮ್‌ನ ಕಾಲದಲ್ಲಿ. ಅವರ ಪ್ರಕಾರ ಎಡಮ್ ಮೊದಲ ಪ್ರವಾದಿ. ಆದುದರಿಂದ ಅದೂ ಕೂಡ ಸನಾತನ ಧರ್ಮವೇ.

ಇಸ್ಲಾಂ ಎಂದರೆ ಶರಣು ಎಂದು ಅರ್ಥ. ಅಂದರೆ ದೇವರಿಗೆ ತನ್ನನ್ನು ಒಪ್ಪಿಸುವುದು ಎಂದರ್ಥ. “ವಿಧೇಯನಾಗು ಎಂದು ಅವರೊಡನೆ (ಇಬ್ರಾಹೀಮರೊಡನೆ) ತನ್ನ ಪ್ರಭು ಹೇಳಿದಾಗ; ‘ಸರ್ವಲೋಕ ಪರಿಪಾಲಕನಾದ ಒಡೆಯನಿಗೆ ನಾನು ಶರಣಾಗಿದ್ದೇನೆ’ ಎಂದು ಅವರು ಹೇಳಿದರು” ಎನ್ನುತ್ತದೆ ಕುರಾನ್ 2.132. ಹಾಗೆಯೇ ಕುರಾನ್ 2.134ನಲ್ಲಿ “ಏನು, ಯಾಕೂಬನಿಗೆ ಮರಣ ಸಮೀಪಿಸಿದಾಗ ನೀವು ಅಲ್ಲಿ ಸನ್ನಿಹಿತರಾಗಿದ್ದಿರೋ?”, “ನನ್ನ ನಂತರ ನೀವು ಏನನ್ನು ಆರಾಧಿಸುವಿರಿ” ಎಂದು ಅವರು ತನ್ನ ಮಕ್ಕಳೊಡನೆ ಕೇಳಿದಾಗ, “ನಾವು ನಿಮ್ಮ ದೇವನನ್ನು, ನಿಮ್ಮ ಪಿತ್ರುಗಳಾದ ಇಬ್ರಾಹೀಂ, ಇಸ್ಮಯಿಲ್ ಮತ್ತು ಇಶಾಖರವರ ದೇವನಾದ ಏಕದೇವನನ್ನು ಆರಾಧಿಸುವೆವು. ಅವನಿಗೆ ಮಾತ್ರ ನಾವು ಶರಣರಾಗುವೆವು ಎಂದು ಅವರು ಉತ್ತರಿಸಿದರು” ಎನ್ನುತ್ತದೆ.

ಅಲ್ಲಾನಲ್ಲಿ ನಂಬಿಕೆ ಇರುವವರು ಅಲ್ಲಾನಿಗೆ ಶರಣಾಗುವುದಾಗಿ ಕುರಾನಿನಲ್ಲಿ ಹೇಳಿದರೆ, ಭಗವದ್ಗೀತೆಯಲ್ಲಿ ಕೃಷ್ಣ ನನಗೆ ಶರಣಾಗು ಎಂದು ಹೇಳುತ್ತಾನೆ. “ಸರ್ವಧರ್ಮಾನ್ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ, ಅಹಂ ತ್ವಾಂ ಸರ್ವಪಾಪೆಭ್ಯೊ ಮೊಕ್ಷಯಿಷ್ಯಾಮಿ ಮಾ ಶುಚಃ”: ಅಂದರೆ ಎಲ್ಲಾ ರೀತಿಯ ಧರ್ಮಗಳನ್ನು ತ್ಯಜಿಸಿ ನನಗೆ ಮಾತ್ರ ಶರಣು ಹೋಗು, ನಾನು ಎಲ್ಲ ಪಾಪಗಳಿಂದ ನಿನ್ನನ್ನು ಮುಕ್ತಗೊಳಿಸುತ್ತೇನೆ, ಹೆದರಬೇಡ ಎನ್ನುತ್ತಾನೆ ಕೃಷ್ಣ. (ಗೀತಾ 18.66)

ತನ್ನನ್ನು ದೇವರಿಗೆ ಒಪ್ಪಿಸಬೇಕಾದರೆ ಇಸ್ಲಾಂ ಪ್ರಕಾರ ಒಬ್ಬ ವ್ಯಕ್ತಿ ಮನಸ್ಸಿನಿಂದ ಕಲ್ಮಾ ಹೇಳಬೇಕು. ಇದನ್ನು ಶಹಾದಾ ಎನ್ನುತ್ತಾರೆ. ಕಲ್ಮಾ ಎಂದರೆ “ಲಾ ಇಲಾಹಾ ಇಲ್ಲಿಲ್ಲಾಹ್, ಮೊಹಮ್ಮದ ರಸೂಲಲ್ಲಾಹ್” – ಅಂದರೆ ’ಅಲ್ಲಾಹನ ಹೊರತು ಬೇರೆ ದೇವರಿಲ್ಲ, ಮತ್ತು ಮೊಹಮ್ಮದ ಅವನ ಪ್ರವಾದಿ’. ಇಲಾಹಾ ಎನ್ನುವುದು ಈ ದೇವರ ಹೆಸರು. ಯಹೂದಿಗಳಿಗೂ, ಯೇಸುಕ್ರಿಸ್ತನ ಅನುಯಾಯಿಗಳಿಗೂ ಹಾಗೂ ಮುಸ್ಲಿಮರಿಗೂ ಈತನೇ ದೇವರು. ಯೇಸುಕ್ರಿಸ್ತ ಕೂಡ ತನ್ನ ದೇವರನ್ನು ಇಲಾಹಿ ಎಂದೇ ಕರೆಯುತ್ತಿದ್ದ. ಕ್ರಿಸ್ತನನ್ನು ಶಿಲುಬೆಯ ಮೇಲೆ ಏರಿಸಿದಾಗ ಆತ ’ಇಲಾಹಿ, ಇಲಾಹಿ, ಯಾಕೆ ನನ್ನ ತ್ಯಜಿಸಿದೆ’ (ಮಥಾಯ 27.46) ಎನ್ನುತ್ತಾನೆ. ’ಅಲ್ಲಾ’ ಎನ್ನುವುದು ಈ ’ಇಲಾಹಿ’ ಎನ್ನುವುದರ ಅರಬ್ಬೀಕರಣ- ಮುಂಬಯಿಯನ್ನು ಇಂಗ್ಲಿಷರು ಬೊಂಬೇ ಎಂದ ಹಾಗೆಯೇ.

ಸನಾತನ ಹಾಗೂ ಇಸ್ಲಾಂ ಎರಡೂ ಏಕದೇವೋಪಾಸಕ ಧರ್ಮಗಳು

ಆಶ್ಚರ್ಯವೆಂದರೆ ಮುಸ್ಲಿಮರಂತೆ ದೇವರು ಒಬ್ಬನೇ, ಇನ್ನೊಬ್ಬನಿಲ್ಲ ಎನ್ನುವುದನ್ನು ಹಿಂದೂಗಳೂ ಹೇಳುತ್ತಾರೆ. ಆದರೆ ಅವನನ್ನು ಬೇರೆ ಬೇರೆಯವರು ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ ಎಂದು ಹೇಳುತ್ತಾರೆ.

ಋಗ್ವೇದದ ಮೊದಲ ಮಂಡಲದ 164ನೆಯ ಸೂಕ್ತದ 46ನೆಯ ಮಂತ್ರ ’ದೇವರು ಒಬ್ಬನೇ’ (ಕಲ್ಮಾದ ’ಲಾ ಇಲಾಹಾ’) ಎನ್ನುವ ತತ್ವವನ್ನು ಸ್ಪಷ್ಟಪಡಿಸುತ್ತದೆ: “ಇಂದ್ರಂ, ಮಿತ್ರಂ, ವರುಣಮಗ್ನಿಮಾಹುರಥೋ ದಿವ್ಯಃ ಸ ಗರುತ್ಮಾನ್, ಏಕಂ ಸದ್ವಿಪ್ರಾ ಬಹುಧಾ ವದಂತ್ತ್ಯಗ್ನಿಂ ಯಮಂ ಮಾತರಿಶ್ವಾನಮಾಹುಃ” ಎಂದು ಹೇಳುತ್ತದೆ. ಋಗ್ವೇದವನ್ನು ಕನ್ನಡಕ್ಕೆ ಅನುವಾದಿಸಿ ಭಾಷ್ಯ ಬರೆದಿರುವ ಎಚ್.ಪಿ.ವೆಂಕಟರಾಯರು ಈ ಮಂತ್ರವನ್ನು ಹೀಗೆ ಅನುವಾದಿಸಿದ್ದಾರೆ: “ಒಬ್ಬನೇ ಆದ ಆದಿತ್ಯನನ್ನು ಇಂದ್ರನೆಂದೂ, ಮಿತ್ರನೆಂದೂ, ವರುಣನೆಂದೂ, ಅಗ್ನಿಯೆಂದೂ ಕರೆಯುತ್ತಾರೆ, ಅಲ್ಲದೇ ಇವನೇ ದಿವ್ಯಾತ್ಮನೂ ಶ್ರೇಷ್ಠವಾದ ಪತನವುಳ್ಳವನೂ, ಆದ ಗರುತ್ಮಂತನಾಗಿದ್ದಾನೆ. ಮೇಧಾವಿಗಳಾದ ವಿಪ್ರರು ಏಕಾತ್ಮನಾದ ಒಬ್ಬ ಪರಮಾತ್ಮನನ್ನೇ ಅಗ್ನಿಯೆಂದೂ, ಯಮನೆಂದೂ, ಮಾತರಿಶ್ವನೆಂದೂ ನಾನಾ ವಿಧವಾಗಿ ಕರೆಯುತ್ತಾರೆ”. ಬಹುಶಃ ಈ ಮಂತ್ರವನ್ನು ರಚಿಸುವಾಗ ಇಸ್ಲಾಂ ಪ್ರಚಲಿತದಲ್ಲಿದ್ದರೆ ಇಂದ್ರ, ವರುಣ ಮುಂತಾದ ಹೆಸರುಗಳೊಂದಿಗೆ ’ಅಲ್ಲಾಹ್’ ಹೆಸರನ್ನೂ ಸೇರಿಸುತ್ತಿದ್ದರೋ ಏನೋ. ಹಿಂದೂಗಳ ಹಾಗೆಯೇ ಮುಸ್ಲಿಮರು ಕೂಡ ಅಲ್ಲಾನಿಗೆ 99 ಹೆಸರುಗಳಿರುವುದಾಗಿ ಹೇಳುತ್ತಾರೆ. ಟಿಪ್ಪು ಸುಲ್ತಾನ ತನ್ನ ಖಡ್ಗದ ಹಿಡಿಕೆಯ ಮೇಲೆ ಅಲ್ಲಾನ ಹಲವಾರು ಹೆಸರುಗಳನ್ನು ಬರೆಸಿದ್ದ – ಯಾ ನಾಸೂರು, ಯಾ ಫತೇಹೂ, ಯಾ ನಾಸಿರೂ, ಯಾ ಮುಆಇನೂ, ಯಾ ಅಲ್ಲಾಹು ಇತ್ಯಾದಿ.

ಹಿಂದುಗಳೂ ತಮ್ಮ ದೇವರುಗಳಿಗೆ ಬರಿ 99 ಅಲ್ಲ, ಸಾವಿರ ಸಾವಿರ ಹೆಸರುಗಳಿರುವುದಾಗಿ ಹೇಳುತ್ತಾರೆ. ಮಹಾಭಾರತದಲ್ಲಿ, ಹಲವಾರು ಪುರಾಣಗಳಲ್ಲಿ ಶಿವನಿಗೆ, ವಿಷ್ಣುವಿಗೆ ಸಾವಿರ ಹೆಸರುಗಳಿರುವುದನ್ನು ಹೇಳಲಾಗಿದೆ. ಹೆಣ್ಣು ದೇವತೆಯಾದ ಲಲಿತಳಿಗೂ ಸಾವಿರ ಹೆಸರುಗಳಿವೆ- ಲಲಿತಾ ಸಹಸ್ರನಾಮ. ಹಿಂದೂಗಳ ಇತ್ತೀಚಿನ ಧಾರ್ಮಿಕ ಆವೃತ್ತಿಯಾದ ದಯಾನಂದ ಸರಸ್ವತಿ ಪ್ರಾರಂಭಿಸಿದ ಆರ್ಯ ಸಮಾಜ ಕೂಡ ’ದೇವರು’ ಒಬ್ಬನೇ ಎಂದೂ, ಆದರೆ ಇಂದ್ರ ಮೊದಲಾದವುಗಳೆಲ್ಲ ಆ ದೇವರ ವಿವಿಧ ’ಅಂಶ’ ಗಳೆಂದೂ ಹೇಳುತ್ತದೆ.

ಇದನ್ನೂ ಓದಿ: ರಾಮ ಸೇತುವೆ ಎಂಬ ಹಗರಣ

ಕಲ್ಮಾನ ಎರಡನೆಯ ಭಾಗವಾದ “ಅಲ್ಲಾ ಹೊರತು ಬೇರೆ ದೇವರಿಲ್ಲ” ಎನ್ನುವುದನ್ನೂ ಹಿಂದೂಗಳು ಹೇಳುತ್ತಾರೆ. ಆದರೆ ಹಾಗೆ ಹೇಳುವಾಗ ’ಅಲ್ಲಾ’ ಎನ್ನುವ ಶಬ್ದ ಗೊತ್ತಿಲ್ಲದೇ ಇದ್ದುದರಿಂದ ಅವರು ಆ ಶಬ್ದವನ್ನು ಬಳಸುವುದಿಲ್ಲ. ತಾವು ದೇವರಿಗಾಗಿ ಬಳಸುತ್ತಿದ್ದ ಹೆಸರನ್ನು ಬಳಸುತ್ತಾರೆ, ಅದನ್ನು ಬ್ರಹ್ಮ ಎನ್ನುತ್ತಾರೆ.

ಋಗ್ವೇದದ ನಾಸದೀಯ ಸೂಕ್ತದ 2ನೆಯ ಮಂತ್ರ ಸ್ಪಷ್ಟವಾಗಿ ’ಆ ದೇವನಿಗೆ ಇನ್ನೊಬ್ಬನಿಲ್ಲ’ (ಕಲ್ಮಾದ ’ಇಲ್ಲಿಲ್ಲಾಹ್’) ಎಂದು ಹೇಳುತ್ತದೆ. “ನ ಮೃತ್ಯುರಾಸೀದಾಮೃತಂ ನ ತರ್ಹಿ ನ ರಾತ್ರ್ಯಾ ಅಹ್ನ ಆಸೀತ್ಪ್ರಕೇತಃ, ಆನೀದವಾತಂ ಸ್ವಧಯಾ ತದೇಕಂ ತಸ್ಮಾದ್ಧಾನ್ಯನ್ನ ಪರಃ ಕಿಂ ಚನಾಸ” ಎಂದು ಹೇಳುತ್ತದೆ. ಇದನ್ನು ವೆಂಕಟರಾಯರು ಹೀಗೆ ಅನುವಾದಿಸಿದ್ದಾರೆ: “ಸೃಷ್ಟಿಗೆ ಪೂರ್ವದಲ್ಲಿದ್ದ ಲಯಾವಸ್ಥೆಯಲ್ಲಿ ಮರಣವೂ, ಮರಣವಿಲ್ಲದಿರುವಿಕೆಯೂ ಇರಲಿಲ್ಲ, ರಾತ್ರಿ ಯಾವುದು ಹಗಲು ಯಾವುದು ಎಂಬ ಪರಿಜ್ಞಾನವಿರಲಿಲ್ಲ. ಸಮಸ್ತ ವೇದಾಂತಪ್ರಸಿದ್ಧವೂ ಅದ್ವಿತೀಯವೂ ಆದ ಬ್ರಹ್ಮತತ್ವ ಒಂದು ಮಾತ್ರವಿದ್ದು ಶ್ವಾಸೋಚ್ಛ್ವಾಸರಹಿತವಾದ ಎಂದರೆ ಜೀವವಿಲ್ಲದ ಜಡವಸ್ತುವನ್ನು ತನ್ನ ಮಾಯಾ ಎಂಬ ಸಾಮರ್ಥ್ಯಾತಿಶಯದಿಂದ ಸಚೇತನವನ್ನಾಗಿ ಮಾಡಿತು. ಆ ಸಾಮರ್ಥ್ಯವಿರುವ ಆ ಬ್ರಹ್ಮವಸ್ತುವಿಗಿಂತ ಇತರ ಬೇರೆ ಯಾವ ವಸ್ತುವೂ ಇರಲಿಲ್ಲ”. ಅನಂತರ ಸೃಷ್ಟಿಯಾದ ಈ ಜಗತ್ತು ಆಗ ಇರಲಿಲ್ಲ. ಈ ಬಗ್ಗೆ ಭಾಷ್ಯ ಬರೆಯುತ್ತ ಅವರು ಹೀಗೆ ಬರೆಯುತ್ತಾರೆ: “ಬ್ರಹ್ಮವಸ್ತುವಿಗೆ ಸರಿಸಮನಾದ ಅಥವಾ ಅಧಿಕವಾದ ಬೇರೆ ವಸ್ತುವಿಲ್ಲ, ಇದಕ್ಕೆ ಹೋಲಿಕೆಯಾಗುವ ವಸ್ತುವೂ ಇಲ್ಲ”.

ಯಜುರ್ವೇದ (32.3) ಕೂಡ ಇದೇ ತತ್ವವನ್ನು ಪುನರುಚ್ಚರಿಸುತ್ತದೆ; “ನ ತಸ್ಯ ಪ್ರತಿಮಾ ಅಸ್ತಿ ಯಸ್ಯ ನಾಮ ಮಹಾದ್ದಶಃ, ಹಿರಣ್ಯಗರ್ಭ ಇತ್ಯೇಷ ಮಾ ಮಾ ಹಿಂಸೀದಿತ್ಯೇಷಾ ಯಸ್ಮಾನ್ನ ಜಾತ ಇತ್ಯೇಷಃ”: ಅಂದರೆ ಅವನ ಎದುರಿಗೆ ಮತ್ತೊಬ್ಬನಿಲ್ಲ ಎನ್ನುತ್ತದೆ.

ಇದೇ ತತ್ವವನ್ನು ಉಪನಿಷತ್ತುಗಳು ಕೂಡಾ ಪುನರುಚ್ಛರಿಸುತ್ತವೆ. ಶ್ವೇತಾಶ್ವತರ ಉಪನಿಷತ್ (4.19) ಯಜುರ್ವೆದದ ಶಬ್ದಗಳನ್ನೇ ಬಳಸಿ ಇದೇ ತತ್ವವನ್ನು ಪುನರುಚ್ಚರಿಸುತ್ತದೆ: “ನೈನಮೂರ್ಧ್ವೇ ನ ತಿರ್ಯಂಚ ನ ಮಧ್ಯೆ ಪರಿಜಗ್ರಭವತ್, ನ ತಸ್ಯ ಪ್ರತಿಮಾ ಅಸ್ತಿ ಯಸ್ಯ ನಾಮ ಮಹಾದ್ದಶಃ” ಎನ್ನುತ್ತದೆ. ಇದಕ್ಕೆ ಪೂರಕವಾಗಿ ಶ್ವೇತಾಶ್ವತರ ಉಪನಿಷತ್ (3.2) ಏಕೋ ಹಿ ರುದ್ರೊ ನ ದ್ವಿತೀಯಾಯ ತಸ್ಥುರ್ಯ ಇಮಾಂಲ್ಲೊಕಾನೀಶತ ಓಶನಿಭಿಃ, ಪ್ರತ್ಯಂ ಜನಾಸ್ತಿಷ್ಠತಿ ಸಂಚುಕೋಚಾಂತಕಾಲೆ ಸಂಸೃಜ್ಯ ವಿಶ್ವಾ ಭುವನಾನಿ ಗೋಪಾಃ ಎಂದು ಹೇಳುತ್ತದೆ. ಎಂದರೆ ರುದ್ರನೊಬ್ಬನೇ, ಇನ್ನೊಬ್ಬನಿಲ್ಲ, ಬ್ರಹ್ಮಜ್ಞಾನಿಗಳು ಇನ್ನೊಬ್ಬನ ಅಸ್ತಿತ್ವವನ್ನು ಒಪ್ಪಿಕೊಳ್ಳುವುದಿಲ್ಲ ಎನ್ನುತ್ತದೆ. ಹಾಗೆಯೇ ಛಾಂದೋಗ್ಯ ಉಪನಿಷತ್ (6.2.1) “ಸದೇವ ಸೋಮ್ಯೆದಮಗ್ರ ಆಸೀದೇಕಮೇವಾದ್ವಿತೀಯಂ” ಎನ್ನುತ್ತದೆ. ದೇವರಿಗೆ ಸರಿಸಾಟಿ ಇನ್ನೊಬ್ಬನಿಲ್ಲದಿದ್ದರೂ ಆ ದೇವರಿಗೆ ಹಲವಾರು ಹೆಸರುಗಳಿರುವುದಾಗಿ ಮುಸ್ಲಿಮರೂ ಸನಾತನಿಗಳಿಬ್ಬರೂ ಹೇಳುತ್ತಾರೆ.

ಸನಾತನ ಹಾಗೂ ಇಸ್ಲಾಂ ಎರಡರಲ್ಲೂ ಮೂರ್ತಿ ಪೂಜೆ ಇಲ್ಲ.

ಯೆಹೂದಿಗಳಲ್ಲಿ, ಕ್ರಿಶ್ಚಿಯನ್ನರಲ್ಲಿ, ಮುಸ್ಲಿಮರಲ್ಲಿ ಹಾಗೂ ಹಿಂದೂಗಳಲ್ಲಿ ಅಂದರೆ ಸನಾತನ ಧರ್ಮದಲ್ಲಿಯೂ ಮೂರ್ತಿ ಪೂಜೆಗೆ ಸ್ಥಾನವಿಲ್ಲ. ದೇವರು ನೀಡುವ ಹತ್ತು ಆದೇಶಗಳನ್ನು ಪಡೆಯಲು ಮೋಸಸ್ ಸೈನೈ ಬೆಟ್ಟವನ್ನು ಹತ್ತಿಹೋದಾಗ, ಬೆಟ್ಟದ ಕೆಳಗೆ ಅವನ ಅನುಯಾಯಿಗಳು ಒಂದು ಬಂಗಾರದ ಕರುವಿನ ಮೂರ್ತಿಯನ್ನು ಮಾಡಿ ಅದನ್ನು ಪೂಜಿಸಲು ಪ್ರಾರಂಭಿಸಿದ್ದರು. ಇದರಿಂದ ಕುಪಿತಗೊಂಡ ಮೋಸಸ್ ಹತ್ತು ಆದೇಶಗಳನ್ನು ಕೆತ್ತಿದ್ದ ಕಲ್ಲಿನ ಫಲಕಗಳನ್ನು ಎಸೆದುಬಿಟ್ಟಿದ್ದ. ಹಾಗೆ ನೋಡಿದರೆ ಆ ಹತ್ತು ಆದೇಶಗಳಲ್ಲಿ ಒಂದು- ನೀನು ಯಾವ ಚಿತ್ರವನ್ನೂ ಕೆತ್ತಕೂಡದು ಎಂದಿತ್ತು. ಬಹುಶಃ ಇದೇ ಮೂರ್ತಿ ಪೂಜೆಯ ಖಂಡನೆಗೆ ಮೂಲವಾಗಿತ್ತು.

ಮುಸ್ಲಿಮರು ತಮ್ಮ ದೇವಸ್ಥಾನಗಳ ಮೇಲೆ ದಾಳಿ ಮಾಡಿ ಅವುಗಳಲ್ಲಿದ್ದ ದೇವರ ಮೂರ್ತಿಗಳನ್ನು ನಷ್ಟಪಡಿಸಿದರು ಎಂದು ಸನಾತನಿಗಳು ಆಪಾದಿಸುತ್ತಾರೆ. ಆದರೆ ಮೊದಲನೆಯದಾಗಿ ಸನಾತನ ಧರ್ಮದಲ್ಲಿಯೂ ದೇವಸ್ಥಾನಗಳಿಗೆ, ಮೂರ್ತಿಗಳಿಗೆ ಸ್ಥಾನವಿಲ್ಲ. ಋಗ್ವೇದದಲ್ಲಿ, ರಾಮಾಯಣದಲ್ಲಿ ಮಹಾಭಾರತದಲ್ಲಿ ದೇವಸ್ಥಾನಗಳ, ಮೂರ್ತಿ ಪೂಜೆಯ ಪ್ರಸ್ತಾಪವಿಲ್ಲ. ದೇವಸ್ಥಾನಗಳನ್ನು ಮತ್ತು ಮೂರ್ತಿಪೂಜೆಯನ್ನು ಆರ್ಯರು ದ್ರಾವಿಡರಿಂದ ಎರವಲು ಪಡೆದರು ಎನ್ನುತ್ತಾರೆ ಇತಿಹಾಸಕಾರ ಎಸ್.ಕೆ.ಚಾಟರ್ಜೀ: “ಆರ್ಯರ ದೈವಾರಾಧನೆಯ ಸ್ವರೂಪ ಹೋಮ-ಹವನಗಳೆಂದೂ, ಪೂಜೆ ಎನ್ನುವುದು ಆರ್ಯರಿಗಿಂತ ಹಿಂದಿನ ಪದ್ಧತಿ, ಬಹುಶಃ ದ್ರಾವಿಡ ಪದ್ಧತಿ ಎನ್ನುವುದಕ್ಕೆ ಕಾರಣಗಳಿವೆ ಎಂದೂ ಸೂಚಿಸಲಾಗಿದೆ. ಹಾಗೂ ಇಡೀ ಆರಂಭಿಕ ವೈದಿಕ ಸಾಹಿತ್ಯದ ಉದ್ದಕ್ಕೂ, ಹೂವುಗಳನ್ನು ಒಳಗೊಂಡ ಮೂರ್ತಿ ಪೂಜೆಯ ಆಚರಣೆಯ ಪ್ರಸ್ತಾಪವಿಲ್ಲ. ಪೂಜ್ ಎಂಬ ಧಾತುವಿನಿಂದ ಹುಟ್ಟುವ ಪದ ಪೂಜಾ; ಆ ಪದವೇ ಸೂಚಿಸುವಂತೆ ಅದು ದ್ರಾವಿಡ ಮೂಲದ್ದು ಎಂದು ಕಂಡುಬರುತ್ತದೆ. ಈ ಪದ ಅಥವಾ ಮೂಲವು ಭಾರತದ ಹೊರಗಿನ ಯಾವುದೇ ಆರ್ಯನ್ ಅಥವಾ ಇಂಡೋ-ಯುರೋಪಿಯನ್ ಭಾಷೆಯಲ್ಲಿ ಕಂಡುಬರುವುದಿಲ್ಲ. (ಪುಟ. 163, ಭಾರತೀಯ ಜನರ ಇತಿಹಾಸ ಮತ್ತು ಸಂಸ್ಕೃತಿ, ಸಂಪುಟ 1, ವೈದಿಕ ಯುಗ, ಸಾಮಾನ್ಯ ಸಂಪಾದಕ ಡಾ.ಆರ್.ಸಿ.ಮಜುಂದಾರ್).

ಹಿಂದೂಗಳ ಧರ್ಮದ ಹೊಸ ಆವೃತ್ತಿಯಾದ ಆರ್ಯ ಸಮಾಜ ಕೂಡ ಮೂರ್ತಿ ಪೂಜೆಯನ್ನು ವಿರೋಧಿಸುತ್ತದೆ. ಆರ್ಯ ಸಮಾಜದಲ್ಲಿ ಮಂದಿರಗಳಿವೆ ಆದರೆ ಆ ಮಂದಿರಗಳಲ್ಲಿ ಮೂರ್ತಿ ಪೂಜೆ ಇರುವುದಿಲ್ಲ, ಯಜ್ಞ ಹವನಾದಿಗಳನ್ನು ಮಾಡಲಾಗುತ್ತದೆ. ನಂತರ ಹಿಂದೂಗಳು ಹವನ ಯಾಗಾದಿಗಳನ್ನು ನಿರ್ಲಕ್ಷಿಸಿ ಎಷ್ಟೊಂದು ಮೂರ್ತಿಪ್ರೇಮಿಗಳಾದರೆಂದರೆ, ಮೂರ್ತಿಗಳಿಗೆ ಭಂಗವಾದರೆ ರಾಜನಿಗೇ ತೊಂದರೆ, ದೇಶಕ್ಕೇ ತೊಂದರೆ ಎಂದು ಹೇಳಲು ಪ್ರಾರಂಭಿಸಿದರು. ವರಾಹಮಿಹಿರ ಬರೆದ ಬೃಹತ್ಸಂಹಿತೆಯಲ್ಲಿ (60.6), “ಮೂರ್ತಿಯಲ್ಲಿ ಭರ್ಚಿಯನ್ನು ಚುಚ್ಚಿದ್ದು ಕಂಡು ಬಂದರೆ ಅದರ ಯಜಮಾನ ತನ್ನ ಕುಟುಂಬದೊಂದಿಗೆ ನಾಶವಾಗುತ್ತಾನೆ; ಮೂರ್ತಿಗಳಲ್ಲಿ ರಂಧ್ರಗಳಿದ್ದರೆ, ಯಜಮಾನ ರೋಗಗಳಿಗೆ ಮತ್ತು ಕೊನೆಮೊದಲಿಲ್ಲದ ತೊಂದರೆಗಳಿಗೆ ಈಡಾಗುತ್ತಾನೆ” ಎನ್ನಲಾಗಿದೆ. (“ಶಂಕೂಪಹತಾ ಪ್ರತಿಮಾ ಪ್ರಧಾನಪುರುಷಂ ಕುಲಂ ಚ ಘಾತಯತಿ, ಶ್ವಭ್ರೊಪಹತಾ ರೋಗಾನುಪದ್ರವಾಂಶ್ಚ ಕ್ಷಯಂ ಕುರುತೆ”.)

ಎರಡನೆಯದಾಗಿ, ಮುಸ್ಲಿಮರು ಬರಿ ಹಿಂದೂಗಳ ಮೂರ್ತಿಗಳನ್ನಷ್ಟೇ ಅಲ್ಲ, ತಮ್ಮ ಜನ ಪೂಜಿಸುತ್ತಿದ್ದ ಮೂರ್ತಿಗಳನ್ನೂ ನಷ್ಟಪಡಿಸಿದ್ದರು. ಪ್ರವಾದಿ ಮೊಹಮ್ಮದ ಅರೇಬಿಯಾದ ಖುರೇಶ್ ಪಂಗಡಕ್ಕೆ ಸೇರಿದವರಾಗಿದ್ದು, ಅಂದು ಮೆಕ್ಕಾದಲ್ಲಿದ್ದ ಕಾಬಾದ ಮೇಲೆ ಖುರೇಶರ ಅಧಿಕಾರ-ಸ್ವಾಧೀನ ಇತ್ತು. ಕಾಬಾದಲ್ಲಿ ಅರೇಬಿಯಾದ ವಿವಿಧ ಪಂಗಡಗಳ 360 ಆರಾಧ್ಯ ದೈವಗಳ ಮೂರ್ತಿಗಳು ಇದ್ದವು. ಪ್ರತಿ ವರ್ಷ ಆಯಾ ಪಂಗಡದವರು ಬಂದು ತಮ್ಮತಮ್ಮ ದೈವಗಳನ್ನು ಆರಾಧಿಸುತ್ತಿದ್ದರು. ಆಗ ಅವರಲ್ಲಿ ಪರಸ್ಪರ ಯುದ್ಧ, ಗಲಾಟೆ ಮೊದಲಾದವುಗಳು ಆಗಬಾರದು ಎಂಬ ನಿಯಮವಿತ್ತು. ಆದುದರಿಂದ ಎಲ್ಲ ಪಂಗಡದವರೂ ಶಾಂತಿಯಿಂದ ತಮ್ಮ ತಮ್ಮ ದೈವಗಳನ್ನು ಆರಾಧಿಸುತ್ತಿದ್ದರು. ಹಾಗಿದ್ದರೂ ಖುರೇಶ ಪಂಗಡದವರನ್ನು ಯುದ್ಧದಲ್ಲಿ ಸೋಲಿಸಿ ಮೆಕ್ಕಾ ಮೇಲೆ ತನ್ನ ಅಧಿಪತ್ಯವನ್ನು ಸಾಧಿಸಿದ ನಂತರ. ಮೂರ್ತಿ ಪೂಜೆ ಮಾಡಕೂಡದು ಎಂದು ಹೇಳುತ್ತಿದ್ದ ಮೊಹಮ್ಮದ ಕಾಬಾದಲ್ಲಿದ್ದ ಮೂರ್ತಿಗಳನ್ನು ತೆಗೆದು ಹೊರಗೆ ಬಿಸಾಕಿದ್ದರು.

ಮೂರನೆಯದಾಗಿ ಹಲವು ಹಿಂದೂ ರಾಜರೂ ಮೂರ್ತಿಭಂಜಕರಾಗಿದ್ದರು. ಕಲ್ಹಣ ತನ್ನ ’ರಾಜತರಂಗಿಣಿ’ಯಲ್ಲಿ, ಹನ್ನೊಂದನೆಯ ಶತಮಾನದಲ್ಲಿ ಕಾಶ್ಮೀರದಲ್ಲಿ ರಾಜನಾಗಿದ್ದ ಹರ್ಷದೇವ ಒಂದು ಊರು, ಒಂದು ನಗರವನ್ನೂ ಬಿಡದೆ ದೇವಸ್ಥಾನಗಳನ್ನು ಲೂಟಿ ಮಾಡಿದ ಎಂದು ಹೇಳುತ್ತಾನೆ. “ಗ್ರಾಮೇ ಪುರೇಥ ನಗರೇ ಪ್ರಾಸಾದೋ ನ ತ ಕಷ್ವನ ಹರ್ಷರಾಜ ತುರುಷ್ಕೇಣ ನ ಯೊ ನಿಷ್ಪ್ರತಿಮಾಕೃತಃ” (ರಾಜತರಂಗಿಣಿ 7.1090-1008) ಎನ್ನುವ ಮೂಲಕ ಹರ್ಷನನ್ನು ’ತುರುಷ್ಕ’ (ತುರ್ಕ) ಎಂದು ಕರೆಯುತ್ತಾನೆ. ಈ ಹರ್ಷದೇವ ದೇವರ ವಿಗ್ರಹಗಳನ್ನು ನಷ್ಟಪಡಿಸಲೆಂದೇ ಒಬ್ಬ ಅಧಿಕಾರಿಯನ್ನೇ ನೇಮಿಸಿದ್ದ. ಅವನನ್ನು ’ದೇವೋತ್ಪಾಟನನಾಯಕ’ ಎಂದು ಕರೆಯಲಾಗುತ್ತಿತ್ತು. ಹಾಗೆಯೇ 9ನೆಯ ಶತಮಾನದಲ್ಲಿ ಕಾಶ್ಮೀರದಲ್ಲಿದ್ದ ಶಂಕರವರ್ಮ ಎಂಬ ರಾಜ 64 ದೇವಸ್ಥಾನಗಳನ್ನು ಲೂಟಿ ಮಾಡಿದುದಾಗಿ ಕಲ್ಹಣ ಹೇಳುತ್ತಾನೆ. (ರಾಜತರಂಗಿಣಿ 5.166-170).

ದೇವಸ್ಥಾನಗಳಿಗೆ ಹೋಗಿ ಮೂರ್ತಿ ಪೂಜೆ ಮಾಡುವ ಮೂಲಕ ಸನಾತನಿಗಳು ಧರ್ಮಪರಿವರ್ತನೆ ಮಾಡಿಕೊಂಡಿದ್ದಾರೆ ಎನ್ನುತ್ತಾರೆ ಆಂಧ್ರಪ್ರದೇಶದ ರಾಣಿ ನರಸಿಂಹ ಶಾಸ್ತ್ರಿಗಳು, ’ದಿ ಲಾಸ್ಟ್ ಬ್ರಾಹ್ಮಣ’ ಎಂಬ ತಮ್ಮ ಪುಸ್ತಕದಲ್ಲಿ. ಸನಾತನ ಬ್ರಾಹ್ಮಣರು ಆರ್ಯರ ಯಜನ ಧರ್ಮವನ್ನು ತ್ಯಜಿಸಿದ್ದಾರೆ ಮತ್ತು ಡ್ರಾವಿಡರ ’ಪೂಜನ ಧರ್ಮ’ವನ್ನು (ಅಂದರೆ ಪೂಜಾ ಪದ್ಧತಿ) ಅಳವಡಿಸಿಕೊಂಡಿದ್ದಾರೆ, ಹೀಗೆ ವೈದಿಕ ಸನಾತಾನ ಧರ್ಮದಿಂದ ’ಹಿಂದೂ’ ಧರ್ಮಕ್ಕೆ ಪರಿವರ್ತನೆ ಹೊಂದಿದ್ದಾರೆ ಎನ್ನುತ್ತಾರೆ. ಆದುದರಿಂದಲೇ ಶಾಸ್ತ್ರಿಗಳು ತಮ್ಮ ಜೀವಿತಾವಧಿಯಲ್ಲಿ ದೇವಾಲಯಗಳಿಗೆ ಹೋಗಲೇ ಇಲ್ಲ. ಹಾಗಾದರೆ ಮುಸ್ಲಿಮರು ಭಾರತದಲ್ಲಿ ದೇವಾಲಯಗಳನ್ನು ಹಾಗೂ ದೇವರ ಮೂರ್ತಿಗಳನ್ನು ನಷ್ಟ ಪಡಿಸುವ ಮೂಲಕ ಧರ್ಮ ಪರಿವರ್ತನೆ ಮಾಡಿಕೊಂಡು ಹಿಂದೂಗಳಾಗಿದ್ದ ಸನಾತನಿಗಳನ್ನು ಅವರ ಪ್ರಾಚೀನ ಸನಾತನ ಧರ್ಮಕ್ಕೆ ಹಿಂದಿರುಗುವಂತೆ ಮಾಡುತ್ತಿದ್ದರಲ್ಲವೇ? ಇದರಿಂದ ಸನಾತನಿಗಳು ಸಂತೋಷಪಡಬೇಕಲ್ಲವೇ? ಆದರೆ ಈ ಹಿಂದೂಗಳು ಇಂದು ಎಷ್ಟರಮಟ್ಟಿಗೆ ಹಿಂದೂಗಳಾಗಿದ್ದಾರೆ ಎಂದರೆ ತಮ್ಮ ಸನಾತನ ಧರ್ಮವನ್ನೇ ಮರೆತು ’ಹಿಂದೂ’ ಧರ್ಮವನ್ನೇ ’ಸನಾತನ’ ಧರ್ಮ ಎಂದು ನಂಬಿದ್ದಾರೆ, ಅದನ್ನೇ ಸನಾತನ ಧರ್ಮ ಎಂದು ಸಾಧಿಸುತ್ತಿದ್ದಾರೆ.

“ಹಿಂದೂ, ಬೌದ್ಧ, ಮೊಹಮ್ಮದನ್, ಅಥವಾ ಕ್ರಿಶ್ಚಿಯನ್ ಎಂದು ಕರೆಯಬಹುದಾದ ಯಾವುದೇ ಹೆಸರಿನ ಎಲ್ಲಾ ಧರ್ಮಗಳು ಒಂದೇ ದೇವರನ್ನು ಹೊಂದಿವೆ ಎಂದು ನಾವು ಇನ್ನೂ ಕಲಿಯಬೇಕಾಗಿದೆ” ಎನ್ನುತ್ತಾರೆ ಸ್ವಾಮಿ ವಿವೇಕಾನಂದ. (ಸಂಪೂರ್ಣ ಕೃತಿಗಳು ಸಂಪುಟ 1 ಪುಟ. 282) ಮುಂದುವರಿದು ಅವರು “ಅತ್ಯಂತ ಸಂಕುಚಿತ ಮಾಂತ್ರಿಕವಸ್ತುವಾದದ್ದರಿಂದ ಅತ್ಯುನ್ನತ ಪರಿಪೂರ್ಣತಾವಾದದವರೆಗಿನ ಎಲ್ಲಾ ಧರ್ಮಗಳು ಸಮಾನವಾಗಿ, ಅನಂತವನ್ನು ಗ್ರಹಿಸಲು ಮತ್ತು ಅರಿತುಕೊಳ್ಳಲು ಮಾನವ ಆತ್ಮದ ಹಲವು ಪ್ರಯತ್ನಗಳಾಗಿವೆ ಎಂದು ನಮಗೆ ತಿಳಿದಿದೆ. ಆದ್ದರಿಂದ, ನಾವು ಈ ಎಲ್ಲಾ ಹೂವುಗಳನ್ನು ಒಟ್ಟುಗೂಡಿಸುತ್ತೇವೆ ಮತ್ತು ಅವುಗಳನ್ನು ಪ್ರೀತಿಯ ಬಳ್ಳಿಯೊಂದಿಗೆ ಬಂಧಿಸಿ, ಅದ್ಭುತವಾದ ಆರಾಧನೆಯ ಪುಷ್ಪಗುಚ್ಛವನ್ನಾಗಿ ಮಾಡುತ್ತೇವೆ,” ಎನ್ನುತ್ತಾರೆ. (ಸಂಪೂರ್ಣ ಕೃತಿಗಳು ಸಂಪುಟ 2. ಪು. 422).

ಬಾಪು ಹೆದ್ದೂರಶೆಟ್ಟಿ

ಬಾಪು ಹೆದ್ದೂರಶೆಟ್ಟಿ
ವಕೀಲರು ಹಾಗೂ ಸಮಾಜವಾದಿ ಚಿಂತಕ-ಲೇಖಕ-ಚಳವಳಿಕಾರ. ’ಲೋಹಿಯಾ? ವ್ಯಕ್ತಿ ಮತ್ತು ವಿಚಾರ’, ’ಗಾಂಧಿ-ಅಂಬೇಡ್ಕರ್ ಮತ್ತು ಸಮಾಜವಾದ’, ’ಸಮಾಜವಾದ: ವಾದ-ವಿವಾದ’ ಅವರ ಪುಸ್ತಕಗಳಲ್ಲಿ ಕೆಲವು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೈಸೂರು-ಕೊಡಗು ಸಂಸದ ಯದುವೀರ್‌ ಒಡೆಯರ್‌ ಆಯ್ಕೆ ಅಸಿಂಧು ಕೋರಿ ಹೈಕೋರ್ಟ್‌ಗೆ ಅರ್ಜಿ

0
ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಯ್ಕೆ ಅಸಿಂಧುಗೊಳಿ, ಮರು ಚುನಾವಣೆ ನಡೆಸಲು ಕೋರಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ. ಸಕಾರಣವಿಲ್ಲದೆ ತನ್ನ ನಾಮಪತ್ರ...