Homeಮುಖಪುಟರಾಮ ಸೇತುವೆ ಎಂಬ ಹಗರಣ

ರಾಮ ಸೇತುವೆ ಎಂಬ ಹಗರಣ

- Advertisement -
- Advertisement -

ರಾಮಾಯಣ ಹಾಗೂ ಮಹಾಭಾರತಗಳು ಕಟ್ಟು ಕಥೆಗಳೋ, ಸೃಜನಶೀಲ ಕವಿತೆಗಳೋ ಅಥವಾ ನಿಜವಾಗಿಯೂ ನಡೆದುಹೋದ ಇತಿಹಾಸಗಳೋ ಎನ್ನುವುದು ಹಿಂದೂ ಮತಾಂಧರ ಮುಂದಿರುವ ಗಂಭೀರ ಸಮಸ್ಯೆಗಳಲ್ಲಿ ಒಂದು. ಇವರು ಇವುಗಳನ್ನು ’ಇತಿಹಾಸ’ ಎಂದೇ ಕರೆಯುತ್ತಾರೆ. ಇವುಗಳನ್ನು ಇತಿಹಾಸ ಎಂದು ರುಜುವಾತುಪಡಿಸಲು ತಲೆಕೆಳಗೆ ಮಾಡುತ್ತಾರೆ, ಇಲ್ಲದಿರುವ ಸಾಕ್ಷಿ-ಪುರಾವೆಗಳನ್ನು ಎಳೆದು ತಂದು ಹಿಗ್ಗಿಸಿ ತಮ್ಮ ವಿತಂಡವಾದಕ್ಕೆ ಪೂರಕ ಮಾಡಿಕೊಳ್ಳಲು ಹರಸಾಹಸ ಮಾಡುತ್ತಾರೆ. ರಾಮಾಯಣದ ’ಐತಿಹಾಸಿಕತೆ’ಯನ್ನು ರುಜುವಾತು ಮಾಡಲು ಇವರು ಬಳಸುತ್ತಿರುವ ಒಂದು ಸಾಧನವೆಂದರೆ ಭಾರತ ಮತ್ತು ಶ್ರೀಲಂಕೆಗಳ ನಡುವೆ ಇರುವ ಸೇತುವೆಯ ಥರದ ಸಂರಚನೆ. ಇದನ್ನು ತನ್ನ ವಾನರ ಸೇನೆಯನ್ನು ಲಂಕೆಗೆ ಕೊಂಡೊಯ್ಯಲು ರಾಮನೇ ನಿರ್ಮಿಸಿದ ಎನ್ನುವುದು ಇವರ ವಾದ. ಆದರೆ ಈ ವಾದದಲ್ಲಿ ಎಷ್ಟು ಹುರುಳಿದೆ?

ಇದನ್ನು ಎಡಮ್‌ನ ಸೇತುವೆ ಎಂದೂ ಕರೆಯುತ್ತಾರೆ. ಯೆಹೂದಿಗಳು, ಯೇಸೂವಿನ ಅನುಯಾಯಿಗಳು ಹಾಗೂ ಮುಸ್ಲಿಮರೆಲ್ಲರೂ ತಮ್ಮನ್ನು ಎಡಮ್‌ನ ಸಂತಾನ ಎಂದುಕೊಳ್ಳುತ್ತಾರೆ. ಜಗತ್ತಿನಲ್ಲಿ ಇವರೇ ಅತ್ಯಂತ ಹೆಚ್ಚು ಸಂಖ್ಯೆಯಲ್ಲಿರುವುದರಿಂದ ಹೆಚ್ಚು ಜನ ಈ ಸಂರಚನೆಯನ್ನು ಎಡಮ್‌ನ ಸೇತುವೆ ಎಂದೇ ಕರೆಯುತ್ತಾರೆ. ಇವರ ಪ್ರಕಾರಾ ದೇವರು ನಿರ್ಬಂಧಿಸಿದ ಹಣ್ಣನ್ನು ಎಡಮ್ ತಿಂದಿದ್ದರಿಂದ ಅವನನ್ನು ದೇವರು ಸ್ವರ್ಗದಿಂದ ಭೂಮಿಗೆ ಎಸೆಯುತ್ತಾನೆ. ಎಡಮ್ ಶ್ರೀಲಂಕಾದ ಕೇಂದ್ರದಲ್ಲಿರುವ ಒಂದು ಎತ್ತರದ ಪರ್ವತದ ತುದಿಯ ಮೇಲೆ ಬೀಳುತ್ತಾನೆ. ಅಲ್ಲಿ 1000 ವರ್ಷ ಪ್ರಾಯಶ್ಚಿತ್ತ ಮಾಡಿ ಆ ಸೇತುವೆಯ ಮೂಲಕ ಭಾರತವನ್ನು ಪ್ರವೇಶಿಸುತ್ತಾನೆ. ಆದುದರಿಂದ ಮುಸ್ಲಿಮರೂ ಇದನ್ನು ತಮ್ಮ ಐತಿಹಾಸಿಕ ಕುರುಹು ಎಂದು ವಾದಿಸುತ್ತಾರೆ.

ರಾಮಾಯಣದ ಪ್ರಕಾರ ದಕ್ಷಿಣ ಭಾರತದಲ್ಲಿ ಚೋಳರಿದ್ದರು, ಪಾಂಡ್ಯರಿದ್ದರು, ಆಂಧ್ರರಿದ್ದರು, ಕೇರಳಿಗರಿದ್ದರು, ಆದರೆ ಕರ್ಣಾಟಕವಿರಲಿಲ್ಲ. ಕಿಷ್ಮಿಂಧೆ ಇತ್ತು, ಅಲ್ಲಿ ವಾನರರಿದ್ದರು ಅಥವಾ ಕೋತಿಗಳಿದ್ದವು. ಸುಗ್ರೀವ ವಾನರರಿಗೆ ಸೀತೆಯನ್ನು ಎಲ್ಲೆಲ್ಲಿ ಹುಡುಕಬೇಕು ಎಂದು ಆದೇಶ ಕೊಡುವಾಗ “ನದೀಮ್ ಗೋದಾವರೀಮ್ ಚೈವ ಸರ್ವಮ್ ಏವ ಅನುಪಶ್ಯತ, ತಥೈವ ಆಂಧ್ರಾನ್, ಪುಂಡ್ರಾನ್, ಚ ಚೋಲಾನ್ ಪಾಂಡ್ಯಾನ್ ಕೇರಲಾನ್” (ವಾಲ್ಮೀಕೀ ರಾಮಾಯಣ: 4.41.12) ಎಂದು ಹೇಳುತ್ತಾನೆ. ಅಲ್ಲಿ ಕರ್ಣಾಟಕದ ಪ್ರಸ್ತಾಪವಿಲ್ಲ; ಆದರೂ ಕನ್ನಡಿಗರು ಇಂದಿಗೂ ರಾಮಾಯಣವನ್ನು ಅತ್ಯಂತ ಪೂಜ್ಯ ಭಾವನೆಯಿಂದ ನೋಡುತ್ತಾರೆ; ಅದು ಹಾಗಿರಲಿ.

ಭಾರತದ ತಮಿಳುನಾಡಿನ ದಕ್ಷಿಣ-ಪೂರ್ವ ಕೊನೆಯಲ್ಲಿರುವ ರಾಮೇಶ್ವರಮ್ ಅಥವಾ ಪಂಬನ್ ನಡುಗಡ್ಡೆಯಿಂದ ಶ್ರೀಲಂಕೆಯ ಉತ್ತರ-ಪಶ್ಚಿಮ ಮೂಲೆಯಲ್ಲಿರುವ ಮನ್ನಾರ್ ನಡುಗಡ್ಡೆಗಳ ನಡುವೆ ಸುಮಾರು 48 ಕಿಲೋಮೀಟರುಗಳ ಅಂತರವಿದೆ. ಆ ಅಂತರದಲ್ಲಿ ಆಳ ಬರಿ ಸುಮಾರು 3 ಅಡಿ ಇರುತ್ತದೆ. ಈ ಅಂತರದಲ್ಲಿ ಸುಮಾರು 103 ಸಣ್ಣ ಸಣ್ಣ ಬಂಡೆ-ಮರಳುಸಾಲುಗಳಿವೆ. ಇವುಗಳಲ್ಲಿ ಐದು ಮಾತ್ರ ಭಾರತದ ಪ್ರತ್ಯೇಕ ಆರ್ಥಿಕ ಪ್ರದೇಶದಲ್ಲಿ ಬರುತ್ತವೆ. ಇವುಗಳನ್ನೇ ಹಿಂದೂ ಮತಾಂಧರು ರಾಮ ಸೇತುವೆ ಎಂದು ಸಾಧಿಸಲು ಪ್ರಯತ್ನಿಸುತ್ತಿದ್ದಾರೆ.

ರಾಮ ಸೇತುವೆ ಎಂದು ಹೇಳಲಾಗುತ್ತಿರುವ ಈ ಸಂರಚನೆಯ ಬಗ್ಗೆ ರಾಮಾಯಣ ಏನು ಹೇಳುತ್ತದೆ? ರಾಮಾಯಣದ ಯುದ್ಧ ಕಾಂಡದ ಅಧ್ಯಾಯ 22ರ ಶ್ಲೋಕ 74 ಹೀಗೆ ಹೇಳುತ್ತದೆ: “ದಶಯೋಜನವಿಸ್ತೀರ್ಣಮ್ ಶತಯೋಜನಮಾಯತಮ್”, ಅಂದರೆ ಈ ಸೇತುವೆಯು ಹತ್ತು ಯೋಜನ ಅಗಲ ಮತ್ತು 100 ಯೋಜನ ಉದ್ದ ಇತ್ತು ಎಂದು. ಒಂದು ಯೋಜನ ಎಂದರೆ ಕಿಲೋಮೀಟರ್ ಲೆಕ್ಕದಲ್ಲಿ ಎಷ್ಟು ಕಿಲೋಮೀಟರ್ ಆಗುತ್ತದೆ? ಇದು ಹಿಂದೂ ಶಾಸ್ತ್ರಗಳಲ್ಲಿ ಸಿಕ್ಕುವುದಕ್ಕೆ ಸಾಧ್ಯವಿಲ್ಲ; ಯಾಕೆಂದರೆ ಆಗ ಕಿಲೋಮೀಟರ್ ಚಾಲ್ತಿಯಲ್ಲಿರಲಿಲ್ಲ. ಆದರೆ ಇದು ರಾಮ ಕಟ್ಟಿದ ಸೇತುವೆ ಎಂದು ಹಿಂದು ಮತಾಂಧರ ಹೇಳಿಕೆಯನ್ನು ಒಪ್ಪುವುದಾದರೆ ಈ ಸೇತುವೆಯ ಉದ್ದ ಬರಿ 48 ಕಿಲೋಮೀಟರ್ ಆಗಿರುವುದರಿಂದ 1 ಯೋಜನ ಬರಿ ಅರ್ಧ ಕಿಲೋಮೀಟರ್ ಆಗುತ್ತದೆ. ಇದನ್ನು ಸರಿ ಎಂದು ಒಪ್ಪಿದರೆ ಸರಿಸುಮಾರು ಎಲ್ಲಾ ಹಿಂದೂ ಗ್ರಂಥಗಳಲ್ಲಿ ಬರುವ ಯೋಜನಗಳ ಲೆಕ್ಕಾಚಾರ ತಲೆಕೆಳಗಾಗುತ್ತದೆ.

ಉದಾಹರಣೆಗೆ ಹಿಂದೂಗಳ ಖಗೋಳ ಶಾಸ್ತ್ರದ ಗ್ರಂಥ ಸೂರ್ಯ ಸಿದ್ಧಾಂತದ ಮೊದಲ ಅಧ್ಯಾಯದ 59ನೆಯ ಶ್ಲೋಕ ಭೂಮಿಯ ವ್ಯಾಸವನ್ನು 1600 ಯೋಜನಗಳು ಎಂದು ಹೇಳುತ್ತದೆ. “ಯೋಜನಾನಿ ಶತನ್ಯಷ್ಟೌ ಭೂಕರ್ಣೊ ದ್ವಿಗುಣಾನಿ, ತದ್ವರ್ಗೋ ದಶಗಣಾತ್ಪದಂ ಭೂಪರಿಧಿರ್ಭವೇತ್. ಅಂದರೆ ಭೂಮಿಯ ವ್ಯಾಸ ಎರಡು ಬಾರಿ ಎಂಟು ನೂರು (1600) ಯೋಜನಗಳಾಗಿದೆ. ಅಂದರೆ ಒಂದು ಯೋಜನ ಎಂದರೆ ಬರಿ ಅರ್ಧ ಕಿಲೋಮೀಟರ್ ಆಗುತ್ತದೆ ಎಂದಾದರೆ ಇದರ ಪ್ರಕಾರ ಭೂಮಿಯ ವ್ಯಾಸ ಬರಿ 800 ಕಿಲೋಮೀಟರುಗಳಾಗುತ್ತದೆ. ಆದರೆ ಭೂಮಿಯ ವ್ಯಾಸ 12,742 ಕಿಲೋ ಮೀಟರ್ ಎಂದು ವಿಜ್ಞಾನ ಹೇಳುತ್ತದೆ. ಹಾಗಾಗಿ ಗೊಂದಲಗಳು ಉಳಿಯುತ್ತವೆ.

ಸೂರ್ಯ ಸಿದ್ಧಾಂತ ಸರಿ ಎನ್ನುವುದಾದರೆ ಒಂದು ಯೋಜನ ಕಿಲೋಮೀಟರ್ ಲೆಕ್ಕದಲ್ಲಿ 7.95 ಕಿ.ಮೀ ಆಗುತ್ತದೆ. (12742/1600). ಈ ಲೆಕ್ಕಾಚಾರದಲ್ಲಿ ರಾಮಾಯಣ ಹೇಳುವ ಸೇತುವೆಯ ಉದ್ದ 795 ಕಿ.ಮೀ ಹಾಗೂ ಅಗಲ 79.5 ಕಿ.ಮೀ ಆಗುತ್ತದೆ. ಆದರೆ ಈ ಹಿಂದೂ ಮತಾಂಧರ ದುರಾದೃಷ್ಟವೆಂದರೆ ಭಾರತದ ಪಂಬನ್ ನಡುಗಡ್ಡೆಯಿಂದ ಶ್ರೀಲಂಕೆಯ ಮನ್ನಾರ್ ನಡುಗಡ್ಡೆಗಳ ನಡುವಣ ಅಂತರ ಬರಿ 48 ಕಿ.ಮೀ ಮಾತ್ರ. ಹಾಗೂ ನೀವು ಎಲ್ಲಾದರೂ (ರಾಮಾಯಣ ಹೊರತುಪಡಿಸಿ) 795 ಕಿ.ಮೀ ಉದ್ದದ ಹಾಗೂ 79.5 ಕಿ.ಮೀ ಅಗಲದ ಸೇತುವೆಯ ಬಗ್ಗೆ ಕೇಳಿದ್ದೀರಾ? ಇದನ್ನೆಲ್ಲ ನಂಬಬೇಕಾ?

’ಹಿಸ್ಟರಿ ಎಂಡ್ ಕಲ್ಚರ್ ಆಫ್ ಇಂಡಿಯನ್ ಪೀಪಲ್’ ಎಂಬ ಭಾರತೀಯ ವಿದ್ಯಾ ಭವನ ಪ್ರಕಟಿಸಿದ 11 ಸಂಪುಟಗಳ ಇತಿಹಾಸದ ’ದಿ ಏಜ್ ಆಫ್ ಇಂಪೀರಿಯಲ್ ಯುನಿಟಿ’ ಎಂಬ ಶೀರ್ಷಿಕೆಯ 2ನೇ ಸಂಪುಟದಲ್ಲಿ ದಕ್ಷಿಣ ಭಾರತ ಮತ್ತು ಸಿಲೋನ್ ಕುರಿತು ಒಂದು ಅಧ್ಯಾಯವನ್ನು ಬರೆದ ಮದ್ರಾಸ ವಿಶ್ವವಿದ್ಯಾಲಯದ ಭಾರತೀಯ ಇತಿಹಾಸ ಮತ್ತು ಪುರಾತತ್ತ್ವ ಶಾಸ್ತ್ರದ ನಿವೃತ್ತ ಪ್ರಾಧ್ಯಾಪಕರಾದ ಪ್ರಸಿದ್ಧ ’ಬಲ’ಪಂಥೀಯ ಇತಿಹಾಸಕಾರ, ದಿವಾನ್ ಬಹದ್ದೂರ್ ಎಸ್.ಕೃಷ್ಣಸ್ವಾಮಿ ಅಯ್ಯಂಗಾರ್, ಈ ಬಗ್ಗೆ ಹೀಗೆ ದಾಖಲಿಸಿದ್ದಾರೆ: “ರಾಮಾಯಣ ಮತ್ತು ಇತರ ದಾಖಲೆಗಳ ಪ್ರಕಾರ ರಾಕ್ಷಸರ ರಾಜ್ಯವಾದ ಲಂಕೆಯನ್ನು ಸಾಂಪ್ರದಾಯಿಕವಾಗಿ ಲಂಕಾ ದ್ವೀಪದೊಂದಿಗೆ ಗುರುತಿಸಲಾಗಿದೆ. ಆದರೆ ರಾಮಾಯಣದಲ್ಲಿನ ವಿವರವಾದ ಹೇಳಿಕೆಗಳ ಪ್ರಕಾರ, ರಾವಣನ ರಾಜಧಾನಿಯನ್ನು ಒಳಗೊಂಡಿರುವ ದ್ವೀಪವು ಸಿಲೋನ್‌ನಿಂದ ಬಹಳ ದೂರದಲ್ಲಿರಬೇಕು ಮತ್ತು ಖಗೋಳದ ಹೇಳಿಕೆಗಳ ಆಧಾರದ ಮೇಲೆ ಅದು ಕೇಪ್ ಕೊಮೊರಿನ್‌ನ ದಕ್ಷಿಣಕ್ಕೆ ಸಮಭಾಜಕದಲ್ಲಿ ಇದ್ದಿರಬೇಕು”. (ಪುಟ 234)

ಇದನ್ನೂ ಓದಿ: ವೈದಿಕರಿಂದ ಗೌತಮ ಬುದ್ಧನ ಅಪಹರಣ

ಅದೂಅಲ್ಲದೇ ರಾಮ ಈ ಸೇತುವೆಯನ್ನು ಕಟ್ಟುವ ಆವಶ್ಯಕತೆ ಇತ್ತೇ? ಇರಲಿಲ್ಲ ಎಂದು ವಾಲ್ಮೀಕಿ ರಾಮಯಣ ಹಾಗೂ ಪದ್ಮ ಪುರಾಣಗಳು ಸೂಚಿಸುತ್ತವೆ.

ತನಗೆ ಹಾಗೂ ತನ್ನ ವಾನರ ಸೈನ್ಯಕ್ಕೆ ಲಂಕೆಗೆ ಹೋಗಲು ದಾರಿ ಕೊಡಬೇಕೆಂದು ರಾಮ ಕೇಳಿಕೊಂಡರೂ ಸಮುದ್ರ ತನ್ನ ಮುಂದೆ ಪ್ರತ್ಯಕ್ಷನಾಗದೇ ಇದ್ದಾಗ ರಾಮ ಕೋಪಗೊಂಡು ತಾನು ಮತ್ತು ತನ್ನ ವಾನರ ಸೇನೆ ಸಮುದ್ರವನ್ನು ಕಾಲ್ನಡಿಗೆಯಲ್ಲಿಯೇ ದಾಟಿ ಲಂಕೆಗೆ ಹೋಗಲು ಸಾಧ್ಯವಾಗುವಂತೆ ತನ್ನ ಬಾಣಗಳಿಂದ ಸಮುದ್ರದ ನೀರನ್ನು ಒಣಗಿಸಿ ಬಿಡುವುದಾಗಿ ಸಮುದ್ರವನ್ನು ಹೆದರಿಸುತ್ತಾನೆ. “ಸಮುದ್ರಮ್ ಶೋಷಯಿಷ್ಯಾಮಿ ಪದಾಭ್ಯಾಮ್ ಯಾಂತು ಪ್ಲವಂಗಮಾಃ”. (6.21.22) ಇದರಿಂದ ಹೆದರಿದ ಸಮುದ್ರ, ರಾಮನ ಮುಂದೆ ಬಂದು ಕೈಮುಗಿದುಕೊಂಡು ನಿಂತಾಗಲೂ ರಾಮ ಅದೇ ಬೆದರಿಕೆಯನ್ನು ಪುನರುಚ್ಚರಿಸುತ್ತಾನೆ: “ಮತ್ಕಾರ್ಮುಕನಿಸೃಷ್ಟೇನ ಶರವರ್ಷೇಣ ಸಾಗರ, ರ, ತೀರಮ್ ಗಮಿಶ್ಯಂತಿ ಪದ್ಭಿರೇವ ಪ್ಲವಂಗಾಮಾಃ” – ಅಂದರೆ ನನ್ನ ಬಿಲ್ಲಿನಿಂದ ಹೊರಡುವ ಬಾಣಗಳ ಪ್ರವಾಹದಿಂದ ನನ್ನ ಕೋತಿಗಳು ಕಾಲ್ನಡಿಗೆಯಲ್ಲಿಯೇ ಆಚೆ ಕಡೆಯ ದಂಡೆಯನ್ನು ತಲುಪಬಲ್ಲವು” ಎನ್ನುತ್ತಾನೆ. ಹಾಗಾದರೆ ಇಷ್ಟೊಂದು ಮರಗಳನ್ನು ಕಡಿದು ಅವುಗಳನ್ನೂ ಕಲ್ಲುಬಂಡೆಗಳನ್ನೂ ಸಮುದ್ರದಲ್ಲಿ ಹಾಕಿ ಪಾಪ ಆ ವಾನರ ಸೇನೆಗೆ ಅಷ್ಟೊಂದು ಕಷ್ಟ ಕೊಟ್ಟು ಸೇತುವೆ ಕಟ್ಟುವ ಆವಶ್ಯಕತೆ ಏನಿತ್ತು?

ವಾಲ್ಮೀಕಿಯ ಕತೆ ಹೀಗಾದರೆ ಪದ್ಮ ಪುರಾಣ ಬೇರೊಂದು ಕತೆ ಹೇಳುತ್ತದೆ. (5.116). ಇಲ್ಲಿಯ ಕಥೆ ಬೇರೊಂದು ’ಕಲ್ಪ’ದಲ್ಲಿ ನಡೆದ ರಾಮಾಯಣವಂತೆ. ಇದನ್ನು ಈ ಕಲ್ಪದ ರಾಮನೇ ಕೇಳಿಸಿಕೊಂಡನಂತೆ. ಸಮುದ್ರವನ್ನು ದಾಟಿ ಲಂಕೆಯನ್ನು ಸೇರಲು ಉಪಾಯವನ್ನು ಹೇಳಬೇಕೆಂದು ರಾಮ ಶಿವನನ್ನು ಕೇಳುತ್ತಾನೆ. ಅದಕ್ಕೆ ಶಿವ “ನನ್ನ ಬಳಿ ಅಜಗವ ಬಿಲ್ಲು ಇದೆ; ಅದು ಸಮಯಕ್ಕೆ ಅನುಗುಣವಾಗಿ ರೂಪ ತಾಳುತ್ತದೆ. (ಅಂದರೆ ಸ್ವತಃ ಬದಲಾಗುತ್ತದೆ) ಮತ್ತು ಅದಕ್ಕೆ ಯಾವುದೇ ಪರ್ಯಾಯವಿಲ್ಲ. ಅದರ ಮೇಲೆ ಹತ್ತಿ, ಸಾಗರವನ್ನು ದಾಟಿ, ಲಂಕಾವನ್ನು ತಲುಪು” ಎಂದು ಹೇಳುತ್ತಾನೆ (ಮಮಾಜಗವಂ ಧನುರಸ್ತಿ ತತ್ಕಾಲರೂಪಮವಿಕಲ್ಪಂ ವಾ ಭವತಿ, ತದಾರುಹ್ಯ ಸಮುದ್ರಂ ತೀರ್ತ್ವಾ ಲಂಕಾಮಾಪ್ನುಹಿ. ಪದ್ಮ ಪುರಾಣ 5.116.213). ಇದಕ್ಕೆ ರಾಮ, ’ಸರಿ’ ಎಂದು ಹೇಳಿ ಅಜಗವವನ್ನು ಸ್ಮರಿಸುತ್ತಾನೆ. ಆಗ ಬಿಲ್ಲು ಪ್ರತ್ಯಕ್ಷವಾಗುತ್ತದೆ. ಆಗ ಶಿವನು ಆ ಬಿಲ್ಲನ್ನು ತೆಗೆದುಕೊಂಡು ರಾಮನಿಗೆ ಕೊಡುತ್ತಾನೆ. ರಾಮನು ಅದನ್ನು ಸಾಗರಕ್ಕೆ ಎಸೆಯುತ್ತಾನೆ. ನಂತರ ಎಲ್ಲಾ ವಾನರರು ಮತ್ತು ರಾಮ ಮತ್ತು ಲಕ್ಷ್ಮಣರು ಸಹ ಅದರ ಮೇಲೆ ಹತ್ತುತ್ತಾರೆ. ಆಗ ಅದು ರಾಮನ ಬಯಕೆಯಂತೆ ಆಚೆಯ ದಡವನ್ನು (ಅಂದರೆ ಲಂಕೆಯನ್ನು) ತಲುಪುತ್ತದೆ.” (ಆರುರುಹುಸ್ಸರ್ವೇ ವಾನರಾ ರಾಮಲಕ್ಷ್ಮಣೌ ಚ ಷಷ್ಟಿ ಪರಾರ್ಧಂ ತೇಷಾಮಸಂಖ್ಯೇಷು ವಾನರೇಷು ಧನುರಾರೂಢೇಷು ನಿಕಾಮಂ ಯಯೌ ಧನುಸ್ತಟಂ ವಾನರಾಶ್ಚ ತಟಸ್ತತೋ ಗತ್ವಾ ನಿರೀಕ್ಷಯಾಮಾಸುಃ ಪದ್ಮ ಪುರಾಣ 5.116.218). ಹಿಂದಿನ ಕಲ್ಪದಲ್ಲಿ ಸಲೀಸಾಗಿ ಸಮುದ್ರ ಲಂಘನ ಮಾಡಿದ ರಾಮ ಈ ಕಲ್ಪದಲ್ಲಿ ಆ ಸುಲಭ ಉಪಾಯವನ್ನು ಏಕೆ ಅನುಸರಿಸಲಿಲ್ಲ! ಇರಲಿ.

ಇದಿಷ್ಟು ಕಥೆಗಳಾಯಿತು ವಾಸ್ತವಿಕತೆ ಏನು?

2002 ರಲ್ಲಿ ಅಮೆರಿಕದ ನಾಸಾ ಸಂಸ್ಥೆ (National Aeronautics and Space Administration) ಉಪಗ್ರಹದ ಮೂಲಕ ವಿವಿಧ ಸಮಯಗಳಲ್ಲಿ ತೆಗೆದ ಪಾಕ್ ಕೊಲ್ಲಿಯ ಮರಳು ದಿಬ್ಬಗಳು ಅಥವಾ ಆಳವಿಲ್ಲದ ಸರಪಳಿಯ ಚಿತ್ರಗಳನ್ನು ಬಿಡುಗಡೆ ಮಾಡಿತು. ಅದು ಹಾಗೆ ಮಾಡಿದ್ದೇ ತಡ ಹಿಂದೂ ಮತಾಂಧರ ಗುಂಪು ರಾಮಾಯಣದ ಐತಿಹಾಸಿಕತೆಯ ಪುರಾವೆ ಸಿಕ್ಕಿತು ಎಂದು ಅರಚಲು ಪ್ರಾರಂಭಿಸಿತು. ಈ ಚಿತ್ರಗಳು ರಾಮ ಸೇತುವಿನ ಚಿತ್ರಗಳು ಎಂದು ವಾದ ಮಾಡಲು ಪ್ರಾರಂಭಿಸಿತು. ಇದಕ್ಕೆ ಉತ್ತರವಾಗಿ ನಾಸಾದ ಅಧಿಕೃತ ವಕ್ತಾರ ಮಾರ್ಕ್ ಹೆಸ್ ನಂತರ ಹೀಗೆ ಹೇಳಬೇಕಾಗಿ ಬಂತು: “ದೂರ ಸಂವೇದೀ ಚಿತ್ರಗಳು (remote sensing) ಅಥವಾ ಛಾಯಾಚಿತ್ರಗಳು ಆ ದ್ವೀಪಗಳ ಸರಪಳಿಯ ಮೂಲ ಅಥವಾ ಅವುಗಳ ವಯಸ್ಸಿನ ಬಗ್ಗೆ ನೇರ ಮಾಹಿತಿಯನ್ನು ಒದಗಿಸಲು ಸಾಧ್ಯವಿಲ್ಲ, ಮತ್ತು ಅವು ಮಾನವನಿರ್ಮಿತವೇ ಎಂದು ಖಂಡಿತವಾಗಿಯೂ ನಿರ್ಧರಿಸಲು ಸಾಧ್ಯವಿಲ್ಲ. ವೆಬ್‌ಸೈಟ್‌ಗಳಲ್ಲಿ ಪದೇಪದೇ ಪುನರ್‌ಪ್ರಕಟಿಸಲಾಗುತ್ತಿರುವ ಚಿತ್ರಗಳು ನಮ್ಮದಾಗಿರಬಹುದು, ಆದರೆ ಅವುಗಳ ವ್ಯಾಖ್ಯಾನವು ಖಂಡಿತವಾಗಿಯೂ ನಮ್ಮದಲ್ಲ. ಆದರೂ ಇಂದಿಗೂ ಹಿಂದೂ ಮತಾಂಧರು ನಾಸಾ ಕೂಡ ಇದು ಮಾನವನಿರ್ಮಿತ ರಚನೆ ಎಂದು ಒಪ್ಪಿಕೊಂಡಿದೆ ಎಂದೂ, ರಾಮಾಯಣದ ಐತಿಹಾಸಿಕತೆಯನ್ನು ನಾಸಾ ಕೂಡ ರುಜುವಾತು ಪಡಿಸಿದೆ ಎಂದೂ ವಾದಿಸುತ್ತಾರೆ.

ಫಿಲಿಪೈನ್ಸ್, ಜಪಾನ್, ಹವಾಯಿ ದ್ವೀಪಗಳು, ಕೆರಿಬಿಯನ್ ಮತ್ತು ದಕ್ಷಿಣ ಅಮೆರಿಕಾದ ದಕ್ಷಿಣ ತುದಿಯೂ ಸೇರಿದಂತೆ ಪ್ರಪಂಚದಾದ್ಯಂತ ಇಂತಹ ಅನೇಕ ರಚನೆಗಳು ಇವೆ ಎಂದೂ ನಾಸಾ ಸ್ಪಷ್ಟಪಡಿಸಿದೆ. ಸದ್ಯ, ನಮ್ಮ ಹಿಂದೂ ಮತಾಂಧರು ನಮ್ಮ ಅಖಂಡ ಭಾರತದ ವ್ಯಾಪ್ತಿಯನ್ನು ಇವು ತೋರಿಸುತ್ತವೆ ಎಂದೂ, ರಾಮ ವಿಶ್ವದ ಎಲ್ಲೆಡೆಗಳಲ್ಲಿ ಸೇತುವೆಗಳನ್ನು ಕಟ್ಟಿದ್ದ ಎಂದು ವಾದಿಸುತ್ತಿಲ್ಲವಲ್ಲ!

ಈ ರಾಮ ಸೇತುವೆಯ ಬಗ್ಗೆ ಹಲವಾರು ವೈಜ್ಞಾನಿಕ ಸಂಸ್ಥೆಗಳು, ವಿಜ್ಞಾನಿಗಳೂ ಹಲವಾರು ಅಧ್ಯಯನಗಳನ್ನು ನಡೆಸಿದ್ದಾರೆ. ಎರಡು ಸ್ವತಂತ್ರ ವೈಜ್ಞಾನಿಕ ಸಂಸ್ಥೆಗಳಾದ ಭೂವೈಜ್ಞಾನಿಕ ಸಮೀಕ್ಷೆ (Geological Survey of India) ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (Indian Space Research Organization) ಬಾಹ್ಯಾಕಾಶ ಅನ್ವಯಿಕೆಗಳ ಕೇಂದ್ರಗಳು (Space Applications Centre), ರಾಮ ಸೇತುವೆ ಮತ್ತು ಸಂಬಂಧಪಟ್ಟ ಎಲ್ಲಾ ಭೌಗೋಳಿಕ ರಚನೆಗಳ ಬಗ್ಗೆ ವಿವರವಾದ ಅಧ್ಯಯನಗಳನ್ನು ನಡೆಸಿ ರಾಮ ಸೇತು ಮಾನವ ನಿರ್ಮಿತ ರಚನೆಯಲ್ಲ ಎಂದು ನಿರ್ಣಾಯಕವಾಗಿ ಹೇಳಿವೆ.

ಪೂರ್ವ ಭಾರತದಿಂದ ಪಶ್ಚಿಮ ಭಾರತಕ್ಕೆ ಸಮುದ್ರದ ಮೂಲಕ ಬರಬೇಕಾದರೆ ಶ್ರೀಲಂಕೆಯನ್ನು ಸುತ್ತುವರಿದು ಬರಬೇಕಾಗುತ್ತದೆ. ಇದರಿಂದಾಗಿ ಸುಮಾರು 400 ಸಾಮುದ್ರಿಕ ಮೈಲಿಗಳಷ್ಟು ಪ್ರಯಾಣ ಹೆಚ್ಚಾಗುತ್ತದೆ. ಆದುದರಿಂದ ಇಂದು ರಾಮ ಸೇತುವೆ ಇರುವ ಜಾಗದಲ್ಲಿ ಸುಮಾರು 83 ಕಿಲೋಮೀಟರ್ ಉದ್ದದ 300 ಮೀಟರ್ ಅಗಲದ ಹಾಗೂ ದೊಡ್ಡ ಹಡಗುಗಳಿಗೆ ಹೋಗಲು ಅನುಕೂಲವಾಗುವಂತೆ 12 ಮೀಟರ್ ಆಳದ ಒಂದು ಕಾಲುವೆಯನ್ನು ಕೊರೆಯಬೇಕೆಂದು ಸೂಚಿಸಲಾಯಿತು. ಇದನ್ನು ಸರಕಾರ ಒಪ್ಪಿಕೊಂಡು ಅಂದಿನ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರು ಯೋಜನೆಗೆ ನಾಂದಿ ಕೂಡ ಹಾಡಿದರು. ಆದರೆ ನಂತರ ಇದರಿಂದ ರಾಮ ಸೇತುವಿಗೆ ಧಕ್ಕೆಯಾಗುವುದೆಂದೂ, ಇದು ಹಿಂದೂಗಳ ನಂಬಿಕೆಗೆ ಆಘಾತವನ್ನುಂಟುಮಾಡುತ್ತದೆಂದೂ ಹೇಳಿ ಹಿಂದೂ ಮತಾಂಧರು ಈ ಯೋಜನೆಯನ್ನು ವಿರೋಧಿಸಿದರು. ಕೊನೆಗೆ ಯೋಜನೆ ಸರ್ವೋಚ್ಚ ನ್ಯಾಯಾಲಯದವರೆಗೂ ಹೋಗಿ ಇಂದಿಗೂ ನೆನೆಗುದಿಗೆ ಬಿದ್ದಿದೆ.

ಸರ್ವೋಚ್ಚ ನ್ಯಾಯಾಲಯದಲ್ಲಿ ಭಾರತದ ಪುರಾತತ್ವ ಸಮೀಕ್ಷೆಯ ಇಲಾಖೆ (Archaeological Survey of India) ಈ ಬಗ್ಗೆ ಒಂದು ಪ್ರಮಾಣಪತ್ರವನ್ನು ಸಲ್ಲಿಸಿತ್ತು. ಅದರಲ್ಲಿ ತಾನು ನಡೆಸಿದ ವೈಜ್ಞಾನಿಕ ಅಧ್ಯಯನದ ಬೆಳಕಿನಲ್ಲಿ ಈ ರಚನೆಯನ್ನು ಮಾನವನಿರ್ಮಿತ ಎಂದು ಹೇಳಲಾಗದು ಎಂದು ಸ್ಪಷ್ಟವಾಗಿ ತಿಳಿಸಿತ್ತು. ಅದನ್ನೊಂದು ಬರಿ ಮರಳಿನ ಹಾಗೂ ಹವಳದ (coral) ನೈಸರ್ಗಿಕ ಸಂರಚನೆ ಎಂದು ಹೇಳಿತ್ತು. ಆದುದರಿಂದ ಇದಕ್ಕೆ ಯಾವ ಐತಿಹಾಸಿಕ, ಪುರಾತತ್ವಶಾಸ್ತ್ರೀಯ, ಅಥವಾ ಕಲಾತ್ಮಕ ಮಹತ್ವ ಇರುವುದಿಲ್ಲವೆಂದೂ, ಆದುದರಿಂದ ಇದನ್ನು ಒಂದು ಪ್ರಾಚೀನ ಸ್ಮಾರಕ ಎಂದಾಗಲೀ ’ಸುರಕ್ಷಿತ’ ಸ್ಮಾರಕ ಎಂದಾಗಲೀ, ’ಏನ್ಷಿಯೆಂಟ್ ಮಾನ್ಯುಮೆಂಟ್ಸ್ ಆರ್ಕಿಯಾಲಾಜಿಕಲ್ ಸೈಟ್ಸ್ ಎಂಡ್ ರಿಮೇನ್ಸ್’ ಕಾನೂನು 1958ರ ಅಡಿಯಲ್ಲಿ ಘೋಷಿಸುವುದು ಸಾಧ್ಯವಿಲ್ಲ ಎಂದೂ ಹೇಳಿತ್ತು. “ಸುಮಾರು 6000-7000 ವರ್ಷಗಳ ಹಿಂದೆ ಸಮುದ್ರದ ಪಾತಳಿ ಇಂದಿನದಕ್ಕಿಂತ ಸುಮಾರು 17 ಮೀಟರ್ ಕೆಳಗಿತ್ತು ಇದರಿಂದಾಗಿ ಸಮುದ್ರತಳ ಭಾಗಶಃ ಕಾಣಿಸುತ್ತಿತ್ತು. ಸುಮಾರು ಹತ್ತು ಸಾವಿರ ವರ್ಷಗಳ ಹಿಂದೆ ಈ ಪಾತಳಿ ಸುಮಾರು 60 ಮೀಟರ್‌ಗಳಷ್ಟು ಕೆಳಗೆ ಇದ್ದಿರಬಹುದು. ಆದುದರಿಂದ ರಾಮೇಶ್ವರಂ ಮತ್ತು ತಲೈಮನ್ನಾರ್ ಮಧ್ಯದ ಜಮೀನು 18000 ಹಾಗೂ 7000 ವರ್ಷಗಳ ಮಧ್ಯೆ ಬಹಿರಂಗವಾಗಿ ಕಾಣಿಸುತ್ತಿರಬಹುದು” ಎಂದು ಅದು ಹೇಳಿತ್ತು. ಆದುದರಿಂದ ಸರ್ವೋಚ್ಚ ನ್ಯಾಯಾಲಯವು ರಾಮ ಸೇತುವೆ ಇದ್ದ ಜಾಗದಲ್ಲಿ ಹೂಳೆತ್ತಲು ಸರಕಾರಕ್ಕೆ ಅನುಮತಿ ನೀಡಿತ್ತು. ಆಗ ಭಾರತೀಯ ಜನತಾ ಪಕ್ಷದ ಲಾಲ ಕೃಷ್ಣ ಅಡ್ವಾಣಿ ಹಾಗೂ ಇನ್ನಿತರರು ಈ ಪ್ರಮಾಣಪತ್ರ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ದೊಡ್ಡ ಗಲಾಟೆ ಮಾಡಿದರು. ಕೊನೆಗೆ ಸರಕಾರ ಪ್ರಮಾಣಪತ್ರವನ್ನು ಹಿಂತೆಗೆದುಕೊಂಡಿತು.

ಇಷ್ಟೆಲ್ಲ ರಾಮ ಸೇತುವೆಯ ಬಗ್ಗೆ ವಿವರಗಳು ಇದ್ದರೂ, ಹಿಂದೂ ಮತಾಂಧರು ಇಂದೂ ಕೂಡ ಅದು ರಾಮ ನಿರ್ಮಿಸಿದ ಸೇತುವೆ ಎಂದೇ ಸಾಧಿಸಲು ಪ್ರಯತ್ನಿಸುತ್ತಾರೆ. ಇಂದಿಗೂ ಹಿಂದೂ ಮತಾಂಧರು ಹಿಂದೂಗಳ ಮತೀಯ ಭಾವನೆಗಳನ್ನು ಕೆರಳಿಸುವುದಕ್ಕಾಗಿ ಮೇಲಿಂದಮೇಲೆ ರಾಮ ಸೇತುವಿನ ವಿಷಯವನ್ನು ಎತ್ತುತ್ತಿರುತ್ತಾರೆ. ಧರ್ಮದ ಬಗೆಗಿನ ಕುರುಡುತನ, ಅಂಧಶ್ರದ್ಧೆ ಹೇಗೆ ಸತ್ಯಕ್ಕೂ ಪ್ರಗತಿಗೂ ಮಾರಕವಾಗಬಹುದು ಎನ್ನುವುದಕ್ಕೆ ಈ ರಾಮ ಸೇತುವೆಯ ಹಗರಣ ಒಂದು ಜ್ವಲಂತ ನಿದರ್ಶನ.

ಬಾಪು ಹೆದ್ದೂರಶೆಟ್ಟಿ

ಬಾಪು ಹೆದ್ದೂರಶೆಟ್ಟಿ
ವಕೀಲರು ಹಾಗೂ ಸಮಾಜವಾದಿ ಚಿಂತಕ-ಲೇಖಕ-ಚಳವಳಿಕಾರ. ’ಲೋಹಿಯಾ? ವ್ಯಕ್ತಿ ಮತ್ತು ವಿಚಾರ’, ’ಗಾಂಧಿ-ಅಂಬೇಡ್ಕರ್ ಮತ್ತು ಸಮಾಜವಾದ’, ’ಸಮಾಜವಾದ: ವಾದ-ವಿವಾದ’ ಅವರ ಪುಸ್ತಕಗಳಲ್ಲಿ ಕೆಲವು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಜ್ರಿವಾಲ್ ವಿರುದ್ಧ ಎನ್ಐಎ ತನಿಖೆಗೆ ಶಿಫಾರಸು ಮಾಡಿದ ದೆಹಲಿ ಲೆಫ್ಟಿನೆಂಟ್ ಗವರ್ನರ್

0
ನಿಷೇಧಿತ ಭಯೋತ್ಪಾದಕ ಸಂಘಟನೆ 'ಸಿಖ್ಸ್ ಫಾರ್ ಜಸ್ಟೀಸ್' ನಿಂದ ತಮ್ಮ ಪಕ್ಷಕ್ಕೆ ದೇಣಿಗೆ ಪಡೆದ ಆರೋಪದ ಮೇಲೆ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಎನ್ಐಎ ತನಿಖೆಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ...