Homeಮುಖಪುಟವೈದಿಕರಿಂದ ಗೌತಮ ಬುದ್ಧನ ಅಪಹರಣ

ವೈದಿಕರಿಂದ ಗೌತಮ ಬುದ್ಧನ ಅಪಹರಣ

- Advertisement -
- Advertisement -

ವೈದಿಕರಲ್ಲದ ಶಿವ ಹಾಗೂ ಕೃಷ್ಣರನ್ನು ಅಪಹರಿಸಿ ತಮ್ಮ ವೈದಿಕ ಪರಂಪರೆಯಲ್ಲಿ ಸೇರಿಸಿಕೊಂಡಂತೆ, ಬುದ್ಧನನ್ನೂ ಅಪಹರಿಸಿ ಅವನೂ ವಿಷ್ಣುವಿನ ಒಂದು ಅವತಾರವೆಂದು ಹೇಳುತ್ತ ವೈದಿಕರು ಬಹಳ ಗೊಂದಲವನ್ನು ಉಂಟುಮಾಡಿಕೊಂಡಿದ್ದಾರೆ.

ವೈದಿಕರು ತಮ್ಮ ಶಾಸ್ತ್ರಗಳನ್ನು ಸಂಸ್ಕೃತದಲ್ಲಿ ಬರೆದಿದ್ದುದಲ್ಲದೇ, ಅದು ದೇವ ಭಾಷೆ ಎಂದು ಹೇಳುತ್ತ ಜನಸಾಮಾನ್ಯರಿಗೆ ಕಲಿಸದೇ ತಮ್ಮ ಶಾಸ್ತ್ರಗಳನ್ನು ಅವರಿಂದ ಗುಪ್ತವಾಗಿಟ್ಟುಕೊಂಡಿರುತ್ತಿದ್ದರು. ಬುದ್ಧ ಇತರ ಬೌದ್ಧ ಭಿಕುಗಳೊಂದಿಗೂ ಬೆರೆತು ತಾನೂ ಒಬ್ಬ ಸಾಮಾನ್ಯ ಭಿಕ್ಕುವಿನ ಹಾಗೆ ಇರುತ್ತಿದ್ದ. ಒಂದು ಬಾರಿ ಅಜಾತಶತ್ರು ಅವನನ್ನು ಭೇಟಿಯಾಗಲು ಸಂಘಕ್ಕೆ ಬಂದಾಗ ಅಲ್ಲಿದ್ದ ಭಿಕ್ಕುಗಳಲ್ಲಿ ಬುದ್ಧನನ್ನು ಗುರುತಿಸಲು ಸಾಧ್ಯವಾಗದೇ, ಅವರಲ್ಲಿ ಬುದ್ಧ ಯಾರು ಎನ್ನುವುದನ್ನು ತೋರಿಸಲು ತನ್ನ ಮಂತ್ರಿಯನ್ನು ಕೇಳಿದ್ದನೆಂದು ದಾಖಲಿಸುತ್ತದೆ ಬೌದ್ಧರ ಗ್ರಂಥ ದಿಘ ನಿಕಾಯ. ಬುದ್ಧ ವೈದಿಕರ ಸಂಸ್ಕೃತವನ್ನು ತ್ಯಜಿಸಿ ಜನಸಾಮಾನ್ಯರ ಭಾಷೆ ಪಾಳಿಯಲ್ಲಿಯೇ ತನ್ನ ಧರ್ಮವನ್ನು ಪ್ರಚಾರ ಮಾಡಿದ; ಅಷ್ಟೇ ಅಲ್ಲದೇ ವೇದಗಳನ್ನು ನಿರಾಕರಿಸಿದ, ಯಜ್ಞಗಳಲ್ಲಿ ನಡೆಯುತ್ತಿದ್ದ ಪ್ರಾಣಿವಧೆಯನ್ನು ಖಂಡಿಸಿದ; ವೈದಿಕರ ವರ್ಣ ವ್ಯವಸ್ಥೆಯನ್ನು ಖಂಡಿಸಿದ. ಹೀಗೆ ಬುದ್ಧ ಜನಸಾಮಾನ್ಯರೊಂದಿಗೆ ಬೆರೆತುಕೊಂಡಿದ್ದ. ಆದುದರಿಂದ ಜನಸಾಮಾನ್ಯರೂ ಬುದ್ಧನೊಂದಿಗೆ ಬೆರೆತುಕೊಂಡರು. ಪರಿಣಾಮವಾಗಿ ಬುದ್ಧ ಧರ್ಮ ಭಾರತದಲ್ಲಿ ಪ್ರಖಂಡವಾಗಿ ಬೆಳೆಯಿತು. ಇದರಿಂದಾಗಿ ವೈದಿಕರು ನಿರ್ಮಿಸಿದ್ದ ಜಾತಿಗಳನ್ನು, ಅಸ್ಪೃಶ್ಯತೆಯನ್ನು ಮೀರಿ ಎಲ್ಲಾ ಜನಸಾಮಾನ್ಯರು ಬುದ್ಧನ ಅನುಯಾಯಿಗಳಾದರು.

ಬುದ್ಧನ ವಿಚಾರಗಳ ಮತ್ತು ಅವನ ಅನುಯಾಯಿಗಳ ಈ ಪ್ರಚಾರ-ಪ್ರಸಾರಗಳನ್ನು ಅರಗಿಸಿಕೊಳ್ಳಲಾಗದ ವೈದಿಕರು ಬುದ್ಧನ ಹಾಗೂ ಬೌದ್ಧರ ವಿರುದ್ಧ ಎರಡು ನೆಲೆಗಳಲ್ಲಿ ಯುದ್ಧ ಸಾರಿದರು. ಬುದ್ಧನ ಧರ್ಮಕ್ಕೆ ಮನ್ನಣೆ ನೀಡಿದ ಮೌರ್ಯರ ಸಾಮ್ರಾಜ್ಯವನ್ನು ವೈದಿಕ ಪುಶ್ಯಮಿತ್ರ ಶುಂಗ ಮೋಸದಿಂದ ಕಬಳಿಸಿ ವೈದಿಕರ ವರ್ಚಸ್ಸನ್ನು ಹೆಚ್ಚಿಸಿದ. ಇನ್ನೊಂದೆಡೆಗೆ ವೈದಿಕರು ಬುದ್ಧನನ್ನು ವಿಷ್ಣುವಿನ ಅವತಾರವೆಂದೇ ಸಾಧಿಸಿ ಬುದ್ಧನನ್ನೇ ಕಬಳಿಸಲು ಪ್ರಯತ್ನಿಸಿದರು. ಆದಿ ಶಂಕರಾಚಾರ್ಯರನ್ನು ಪ್ರಚ್ಛನ್ನಬುದ್ಧ ಎಂದು ಕರೆಯುವುದರಲ್ಲಿ ಕಣ್ಣಿಗೆ ಕಾಣುವುದಕ್ಕಿಂತ ಹೆಚ್ಚಿನ ಸತ್ಯವಿದೆ.

ಬೌದ್ಧರ ಥೇರಾವಾದದಲ್ಲಿರುವ ಬುದ್ಧನ ಬಗೆಗಿನ ಮಿಥ್ಯಗಳು ಹಾಗೂ ಪುರಾಣಗಳಲ್ಲಿರುವ ವಿಷ್ಣುವಿನ ಬಗೆಗಿನ ಮಿಥ್ಯಗಳಲ್ಲಿ ಬಹಳಷ್ಟು ಸಾಮ್ಯಗಳಿವೆ ಎನ್ನುತ್ತಾರೆ ’ದ ಬುದ್ಧಿಸ್ಟ್ ವಿಷ್ಣು’ ಎಂಬ ಪುಸ್ತಕ ಬರೆದಿರುವ ಕೊಲಂಬಿಯಾ ವಿಶ್ವವಿದ್ಯಾಲಯದ ತಜ್ಞ ಜಾನ್.ಸಿ.ಹೋಲ್ಟ. ಉದಾಹರಣೆಗೆ ಥೇರಾವಾದದಲ್ಲಿ ಬುದ್ಧ ತನ್ನ ಎರಡು ಹೆಜ್ಜೆಗಳಲ್ಲಿ 68 ಲಕ್ಷ ಯೋಜನೆಗಳನ್ನು ಅಳೆದು ಆಕ್ರಮಿಸಿ, ನಂತರ ತನ್ನ ಬಲಗಾಲನ್ನು ಯುಗಂಧರನ ತಲೆಯ ಮೇಲೆ ಇಡುತ್ತಾನೆ. ಇದು ಋಗ್ವೇದದಲ್ಲಿ ಹಾಗೂ ಪುರಾಣಗಳಲ್ಲಿ ಹೇಳಲಾದ ವಿಷ್ಣುವಿನ ವಾಮನ ಅವತಾರವನ್ನು ಹೋಲಿಸಿದರೆ, ಧರ್ಮದ ಅವನತಿ ಆದಾಗಲೆಲ್ಲ ಬುದ್ಧ ಜನ್ಮ ತಾಳುತ್ತಾನೆ ಎಂದು ಥೇರಾವಾದ ಹೇಳುವುದು ಭಗವದ್ಗೀತೆಯಲ್ಲಿ ಕೃಷ್ಣ ಹೇಳುವ “ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ, ಅಭ್ಯುತ್ಥಾನಮಧರ್ಮಸ್ಯ ತದಾತ್ಮ್ಯಾನಂ ಸೃಜಾಹ್ಯಮಂ” ಎಂದು ಹೇಳಿದುದನ್ನು ಹೋಲುತ್ತದೆ. ಬಹುಶಃ ಇಂತಹ ಸಾಮ್ಯಗಳೇ ಬುದ್ಧನನ್ನು ಅಪಹರಿಸಲು ವೈದಿಕರನ್ನು ಪ್ರಚೋದಿಸಿರಬಹುದು, ಪ್ರೋತ್ಸಾಹಿಸಿರಬಹುದು.

ಹಿಂದೂಗಳ ಹಲವಾರು ಪುರಾಣಗಳಲ್ಲಿ ವಿಷ್ಣುವಿನ ಹಲವು ಅವತಾರಗಳ ಬಗ್ಗೆ ಹೇಳಲಾಗಿದೆ. ಆದರೆ ಋಗ್ವೇದದಲ್ಲಿ ಬರಿ ವಾಮನನ ಬಗ್ಗೆ ಮಾತ್ರ ಪ್ರಸ್ತಾಪವಿದೆಯೇ ಹೊರತು ಬೇರ್‍ಯಾವ ಅವತಾರಗಳ ಬಗೆಗೂ ಪ್ರಸ್ತಾಪವಿಲ್ಲ. ವಿಷ್ಣುವಿನ ಮೊದಲ ಪ್ರಸ್ತಾಪ ಬರುವುದೂ ವಾಮನನಿಗೆ ಸಂಬಂಧಪಟ್ಟಂತೆಯೇ. ಅದೂ ಅವತಾರದ ರೂಪದಲ್ಲಲ್ಲ, ವಿಷ್ಣುವಿನ ಒಂದು ಲೋಕಕಲ್ಯಾಣದ ಕೆಲಸದ ರೂಪದಲ್ಲಿ. ಋಗ್ವೇದದ ಮೊದಲ ಮಂಡಲದ 22ನೆಯ ಸೂಕ್ತದ 16, 17 ಹಾಗೂ 18ನೆಯ ಮಂತ್ರಗಳು ಹೀಗೆ ಹೇಳುತ್ತವೆ: “ಅತೋ ದೇವಾ ಅವಂತು ನೋ ಯತೋ ವಿಷ್ಣುರ್ವಿಚಕ್ರಮೇ ಪೃಥಿವ್ಯಾಃ ಸಪ್ತ ಧಾಮಭಿಃ. ಇದಂ ವಿಷ್ಣುರ್ವಿಚಕ್ರಮೇ ತ್ರೇಧಾ ನಿ ದಧೇ ಪದಂ, ಸಮೂಳ್ಹಮಸ್ಯ ಪಾಂಸುರೇ, ತ್ರೀಣಿ ಪದಾ ವಿ ಚಕ್ರಮೇ ವಿಷ್ಣುರ್ಗೋಪಾ ಅದಾಭ್ಯಃ ಅತೋ ಧರ್ಮಾಣಿ ಧಾರಯನ್. ಋಗ್ವೇದವನ್ನು ಕನ್ನಡಕ್ಕೆ ಅನುವಾದಿಸಿ ಭಾಷ್ಯ ಬರೆದಿರುವ ಎಚ್.ಪಿ.ವೆಂಕಟರಾಯರು ಈ ಮಂತ್ರಗಳನ್ನು “ವಿಷ್ಣುವು ತ್ರಿವಿಕ್ರಮನಾಗಿ ಹೆಜ್ಜೆಗಳನ್ನಿಡುವಾಗ ಯಾವ ಭೂಪ್ರದೇಶದಿಂದ ಗಾಯತ್ರ್ಯಾದಿ ಛಂದೋಪೇತನಾಗಿ ಹೊರಟನೋ ಆ ಭೂಪ್ರದೇಶದಲ್ಲಿರುವ ನಮ್ಮನ್ನು ದೇವತೆಗಳು ರಕ್ಷಿಸಲಿ, ವಿಷ್ಣುವು (ತ್ರಿವಿಕ್ರಮಾವತಾರ ಮಾಡಿ) ಈ ಸಮಸ್ತ ಜಗತ್ತನ್ನು ಮೂರು ವಿಧವಾದ ಪಾದಪ್ರಕ್ಷೇಪಣಗಳಿಂದ ಆಕ್ರಮಿಸಿದನು. ಆ ವಿಷ್ಣುವಿನ ಧೂಳಿಯುಕ್ತವಾದ ಪಾದಸ್ಥಾನದಲ್ಲಿ ಈ ಜಗತ್ತು ಮುಚ್ಚಿಹೋಗಿ ಕಾಣದಂತಾಯಿತು. ವಿಷ್ಣುವನ್ನು ಹಿಂಸಿಸಲು ಯಾರಿಂದಲೂ ಶಕ್ಯವಿಲ್ಲ. ಇವನು ಸಮಸ್ತ ಜಗತ್ತಿಗೂ ರಕ್ಷಕನು, ಆದುದರಿಂದ ಅಗ್ನಿಹೋತ್ರಾದಿ ಧರ್ಮಗಳ ಪಾಲನೆಗಾಗಿ ವಿಷ್ಣುವು ಮೂರು ಪಾದವಿಕ್ಷೇಪವನ್ನು ಮಾಡಿದನು” ಎಂದು ಅರ್ಥೈಸುತ್ತಾರೆ.

ಋಗ್ವೇದದ ಎಂಟನೆಯ ಮಂಡಲದ 12ನೆಯ ಸೂಕ್ತದ 27ನೆಯ ಮಂತ್ರ ಇದೇ ಇಂಗಿತವನ್ನು ಸೂಚಿಸುತ್ತದೆ. “ಯದಾ ತೇ ವಿಷ್ಣುರೋಜಸಾ ತ್ರೀಣಿ ಪದಾ ವಿಚಕ್ರಮೇ ಆದಿತ್ತೇ ಹರ್ಯತಾ ಹರೀ ವವಕ್ಷತುಃ”. ಇದನ್ನು ವೆಂಕಟರಾಯರು ಹೀಗೆ ಅರ್ಥೈಸುತ್ತಾರೆ: “ಇಂದ್ರನೇ, ನಿನ್ನ ಅನುಜನಾದ ವಿಷ್ಣುವು ತನ್ನ ಪರಾಕ್ರಮದಿಂದ ಯಾವಾಗ ತನ್ನ ಮೂರು ಪಾದಗಳನ್ನು ಮೂರು ಲೋಕಗಳಿಗೂ ಹರಡಿ ಮೂರೂ ಲೋಕಗಳನ್ನು ಆಕ್ರಮಿಸಿದನೋ ಆ ಒಡನೆಯೇ ನಿನ್ನ ಅಶ್ವಗಳು ನಿನ್ನನ್ನು ವಹಿಸಿದವು”.

ಆದರೆ ವಾಮನಾವತಾರವೂ ಸೇರಿದಂತೆ ಹಲವು ಪುರಾಣಗಳಲ್ಲಿ ವಿಷ್ಣುವಿನ 6, 10, 12 ಮತ್ತು ಭಾಗವತದಲ್ಲಿ ವಿಷ್ಣುವಿನ 24 ಅವತಾರಗಳ ಬಗ್ಗೆ ಹೇಳಲಾಗಿದೆ. ಈ ಅವತಾರಗಳಲ್ಲೂ ಬುದ್ಧನ ಬಗ್ಗೆ ಗೊಂದಲವಿದೆ. ಹಲವು ಪುರಾಣಗಳು ಬುದ್ಧನನ್ನು ವಿಷ್ಣುವಿನ ಒಂದು ಅವತಾರವೆಂದು ಹೇಳಿದರೆ ಇನ್ನೂ ಹಲವು ಪುರಾಣಗಳಲ್ಲಿ ವಿಷ್ಣುವಿನ ಅವತಾರಗಳ ಪಟ್ಟಿಯಲ್ಲಿ ಬುದ್ಧನ ಪ್ರಸ್ತಾಪವೇ ಇಲ್ಲ. ಹಾಗೆ ನೋಡಿದರೆ ಹಲವು ಪುರಾಣಗಳಲ್ಲಿ ವಿಷ್ಣುವಿನ ಅವತಾರಗಳ ರೂಪದಲ್ಲಿ ಬಲರಾಮನ, ವಿಠೋಬಾನ, ಜಗನ್ನಾಥನ ಪ್ರಸ್ತಾಪಗಳಿವೆ.

ಅವತಾರಗಳ ಬಗೆಗಿನ ಅತ್ಯಂತ ಪ್ರಾಚೀನ ಶಿಲಾಲೇಖ ಸುಮಾರು 7ನೆಯ ಶತಮಾನಕ್ಕೆ ಸಂಬಂಧಿಸಿದುದು. ಇದರಲ್ಲಿ ವಿಷ್ಣುವಿನ 10 ಅವತಾರಗಳ ಬಗ್ಗೆ ಹೇಳಲಾಗಿದೆ. ಇದರಲ್ಲಿ ಬುದ್ಧನನ್ನೂ ವಿಷ್ಣುವಿನ ಒಂದು ಅವತಾರವೆಂದು ಹೇಳಲಾಗಿದೆಯಲ್ಲದೇ ಕೃಷ್ಣನ ಬದಲಿಗೆ ಬಲರಾಮನನ್ನು ಸೂಚಿಸಿ ಕೃಷ್ಣನನ್ನು ವಿಷ್ಣುವಿನ ಅವತಾರವಲ್ಲ, ವಿಷ್ಣುವೆಂದೇ ಹೇಳಲಾಗಿದೆ.

ರಾಮಾಯಣದಲ್ಲಿ ಬುದ್ಧ

ವಾಲ್ಮೀಕಿ ತನ್ನ ರಾಮಾಯಣದಲ್ಲಿ ’ಬುದ್ಧ’ ಶಬ್ದವನ್ನು ಬಳಸಿದ್ದರೂ ಅದನ್ನು ಗೌತಮ ಬುದ್ಧನನ್ನು ಸೂಚಿಸಲು ಉಪಯೋಗಿಸದೇ ನಿರೀಶ್ವರವಾದಿಗಳನ್ನು ಸೂಚಿಸಲು ಬಳಸಲಾಗಿದೆ. ತಂದೆಯ ಮಾತನ್ನು ಕೇಳುವ ಆವಶ್ಯಕತೆ ಇಲ್ಲ, ಮರಳಿ ಅಯೋಧ್ಯೆಗೆ ಬಂದು ರಾಜಸುಖವನ್ನು ಅನುಭೋಗಿಸಬೇಕು ಎಂದು ಜಾಬಾಲಿ ಎಂಬ ಒಬ್ಬ ಬ್ರಾಹ್ಮಣ ರಾಮನನ್ನು ಕೇಳಿಕೊಂಡಾಗ ರಾಮ ಅವನನ್ನು ಕುರಿತು “ಬುದ್ಧ್ಯಾನಯೈವಂವಿಧಯಾ ಚರಂತಂ, ಸುನಾಸ್ತಿಕಂ ಧರ್ಮಪಥಾದಪೇತಮ್ (ವಾಲ್ಮೀಕಿ ರಾಮಾಯಣ 2.109.33), ನಿನ್ನ ಬುದ್ಧಿವಂತಿಕೆ ತಪ್ಪು ದಾರಿಗೆಳೆಯುವಂತಹುದು. ಸತ್ಯಮಾರ್ಗದಿಂದ ಪತಿತನಾದ ಪ್ರಖರ ನಿರೀಶ್ವರವಾದಿ ನೀನು” ಎಂದು ಅವನನ್ನು ಹೀಗಳೆಯುತ್ತಾನೆ. “ಯಥಾ ಹಿ ಚೋರಃ ಸ ತಥಾ ಹಿ ಬುದ್ಧ, ಸ್ತಥಾಗತಂ ನಾಸ್ತಿಕಮತ್ರ ವಿದ್ಧಿಃ. ತಸ್ಮಾದ್ಧಿ ಯಃ ಶಂಕ್ಯತಮಃ ಪ್ರಜಾನಾಮ್. ನ ನಾಸ್ತಿ ಕೇನಾಭಿಮುಖೋ ಬುಧಃ ಸ್ಯಾತ್ (ವಾಲ್ಮೀಕಿ ರಾಮಾಯಣ 2.109.34); “ಬರಿ ಬುದ್ಧಿವಂತರಾಗಿದ್ದವರನ್ನು ಕಳ್ಳರನ್ನು ಶಿಕ್ಷಿಸಿದ ಹಾಗೆ ಶಿಕ್ಷಿಸಬೇಕು, ಯಾಕೆಂದರೆ ಬರಿ ಬುದ್ಧಿವಂತರು ನಿರೀಶ್ವರವಾದಿಗಳಿದ್ದಂತೆ. ಆದ್ದರಿಂದ ಅವರು ಅತ್ಯಂತ ಸಂಶಯಾಸ್ಪದರು ಆಗಿದ್ದು ಜನಸಾಮಾನ್ಯರ ಒಳಿತಿಗಾಗಿ ಅವರನ್ನು ಶಿಕ್ಷಿಸಬೇಕು. ಯಾವುದೇ ಪರಿಸ್ಥಿತಿಯಲ್ಲಿ ಜಾಣನೊಬ್ಬ ನಿರೀಶ್ವರವಾದಿಯೊಂದಿಗೆ ಸೇರಿಕೊಳ್ಳಬಾರದು” ಎನ್ನುತ್ತಾನೆ. ಮಹಾಭಾರತದಲ್ಲಿ ವಿಷ್ಣುವಿನ ಹಯಗ್ರೀವ, ಪರಶುರಾಮ, ರಾಮ, ವರಾಹ ಮತ್ತು ಕಲ್ಕಿ ಈ ಅವತಾರಗಳ ಉಲ್ಲೇಖವಿದೆ, ಆದರೆ ಬುದ್ಧನ ಅವತಾರದ ಪ್ರಸ್ತಾಪವಿಲ್ಲ.

ವಿಷ್ಣುವಿನ ಪ್ರತಿಯೊಂದು ಅವತಾರವೂ ಒಂದೊಂದು ವಿಶಿಷ್ಟ ಉದ್ದೇಶಗಳನ್ನು ಹೊಂದಿತ್ತು. ಉದಾಹರಣೆಗೆ ರಾಮನ ಅವತಾರ ರಾವಣನನ್ನು ಕೊಲ್ಲುವ, ವಾಮನ ಅವತಾರ ಬಲಿ ಚಕ್ರವರ್ತಿಯನ್ನು ಪಾತಾಳಕ್ಕೆ ಮೆಟ್ಟುವ ಉದ್ದೇಶ ಹೊಂದಿತ್ತು. ಬುದ್ಧನ ಅವತಾರದ ಉದ್ದೇಶವೇನಿತ್ತು? ಹನ್ನೆರಡನೆಯ ಶತಮಾನದ ಕವಿ ಜಯದೇವ ತನ್ನ ಒಂದು ಅಷ್ಟಪದಿಯ ಮೂಲಕ ಬುದ್ಧ ವಿಷ್ಣುವಿನ ಅವತಾರವಾಗಿದ್ದ ಎಂಬುದನ್ನು ಪುನರುಚ್ಚರಿಸುತ್ತಾನೆ. “ನಿಂದಸಿ ಯಜ್ಞ-ವಿಧೇರಹದಿ ಶ್ರುತಿ ಜಾತಂ, ಸದಯ ಹೃದಯ ದರ್ಶಿತ ಪಶು ಘಾತಮ್, ಕೇಶವ ಧೃತ ಬುದ್ಧ ಶರೀರ ಜಯ ಜಗದೀಶ ಹರೇ” ಎಂದು ಬರೆಯುತ್ತಾನೆ. ಅಂದರೆ ಯಜ್ಞಗಳಲ್ಲಿ ಆಗುತ್ತಿದ್ದ ಪ್ರಾಣಿವಧೆಯನ್ನು ನಿಂದಿಸಿ ಸಹೃದಯನಾಗಿ ವಿಷ್ಣು ಬುದ್ಧನ ಅವತಾರವನ್ನು ಹೊಂದಿದ ಎನ್ನುತ್ತಾನೆ ಜಯದೇವ. ಆದರೆ ಬಹುಶಃ ಜಯದೇವ ವಿಷ್ಣು ಪುರಾಣವನ್ನು ಓದಿರಲಿಲ್ಲ ಎಂದು ತೋರುತ್ತದೆ. ಯಾಕೆಂದರೆ ಜಯದೇವ ಹೇಳುವ ಕಾರಣಕ್ಕೂ, ವಿಷ್ಣು ಪುರಾಣ ಹೇಳುವ ಕಾರಣಕ್ಕೂ ಅಜಗಜಾಂತರ ವ್ಯತ್ಯಾಸವಷ್ಟೇ ಅಲ್ಲ, ವಿರೋಧಾಭಾಸವೂ ಇದೆ.

ಪುರಾಣಗಳಲ್ಲಿ ಬುದ್ಧನ ಅವತಾರ

ವಿಷ್ಣು ಯಾಕೆ ಹಾಗೂ ಹೇಗೆ ಬುದ್ಧನ ಅವತಾರವನ್ನು ತಳೆದ ಎಂಬ ಬಗ್ಗೆ ವಿಷ್ಣು ಪುರಾಣದ ಅಂಶ 3ರ ಅಧ್ಯಾಯ 17 ಮತ್ತು 18ರಲ್ಲಿ ಮೈತ್ರೇಯ ಹಾಗೂ ಪರಾಶರರ ನಡುವಿನ ಒಂದು ಸಂವಾದದಲ್ಲಿ ವಿವರವಾದ ಕಥೆಯೊಂದಿದೆ. ಯಾರನ್ನು ’ನಗ್ನರು’ ಎನ್ನಲಾಗುತ್ತದೆ ಎಂದು ಮೈತ್ರೇಯರು ಕೇಳಿದಾಗ ಪರಾಶರರು ಋಗ್ವೇದ, ಸಾಮವೇದ ಮತ್ತು ಯಜುರ್ವೇದ ಈ ಮೂರು ವೇದಗಳೇ ವಸ್ತ್ರಗಳಿದ್ದಂತೆ, ಅಂದರೆ ರಕ್ಷಾ ಕವಚಗಳಿದ್ದಂತೆ, ತಮ್ಮ ಅಜ್ಞಾನದ ಕಾರಣಕ್ಕಾಗಿ ಅವುಗಳಿಂದ ಚ್ಯುತರಾಗುವವರನ್ನು ’ನಗ್ನರು’ ಎಂದು ಕರೆಯಲಾಗುತ್ತದೆ ಎಂದು ವಿವರಿಸುತ್ತಾರೆ. ನಂತರ ವಿಷ್ಣು ಹೇಗೆ ಮತ್ತು ಯಾಕೆ ಬುದ್ಧನ ಅವತಾರ ತಾಳಿದ ಎಂಬ ಬಗ್ಗೆ ವಶಿಷ್ಠರು ಭೀಷ್ಮನಿಗೆ ಹೇಳಿದ ಕಥೆಯನ್ನು ತಾವು ಕೇಳಿದುದಾಗಿ ಹೇಳಿ ಆ ಕಥೆಯನ್ನು ವಿವರಿಸುತ್ತಾರೆ.

ಹಿಂದೆ ದೇವತೆಗಳಿಗೂ, ರಾಕ್ಷಸರಿಗೂ ಒಂದು ನೂರು ವರ್ಷಗಳವರೆಗೆ ಯುದ್ಧವಾಯಿತು. ಆ ಯುದ್ಧದಲ್ಲಿ ಹ್ರಾದ ಮುಂತಾದ ರಾಕ್ಷಸರು ದೇವತೆಗಳನ್ನು ಸೋಲಿಸಿದರು. ಆಗ ದೇವತೆಗಳು ವಿಷ್ಣುವಿನ ಮೊರೆಹೊಕ್ಕರು. ವಿಷ್ಣುವು ಪ್ರತ್ಯಕ್ಷನಾದಾಗ ತಮ್ಮ ಸೋಲಿನ ಬಗ್ಗೆ ಹೇಳಿ ಆ ರಾಕ್ಷಸರನ್ನು ಕೊಲ್ಲುವ ಉಪಾಯವನ್ನು ಹೇಳು ಎಂದರು. (“ತಮುಪಾಯಮ-ಶೇಷಾತ್ಮನ್ನಸ್ಮಾಕಂ ದಾತುಮರ್ಹಸಿ, ಯೇನ ತಾನಸುರಾನ್ ಹಂತುಂ ಭವೇಮ ಭಗವನ್ ಕ್ಷಮಾಃ”). ಆಗ ವಿಷ್ಣುವು ’ಮಾಯಾಮೋಹನ’ ಎಂಬುವವನನ್ನು ಸೃಷ್ಟಿಸಿ ದೇವತೆಗಳಿಗೆ ಕೊಟ್ಟು ಇವನು ಆ ರಾಕ್ಷಸರನ್ನು ವೇದಮಾರ್ಗದಿಂದ ದೂರ ಮಾಡುತ್ತಾನೆ, ಆಗ ನೀವು ಅವರನ್ನು ಕೊಲ್ಲಬಹುದು ಎಂದು ಹೇಳಿದ. (“ಮಾಯಾಮೋಹೋಯಮಖಿಲಾನ್ ದೈತ್ಯಾಂಸ್ತಾನ್ಮೋಹಯಿಶ್ಯತಿ, ತತೋ ವಧ್ಯಾ ಭವಿಶಂತಿ ವೇದಮಾರ್ಗಬಹಿಷ್ಕೃತಾಃ”).

ಇದನ್ನೂ ಓದಿ: ವೈದಿಕರಿಂದ ’ಕೃಷ್ಣ’ನ ಅಪಹರಣ

ನಂತರ “ಬೋಳುತಲೆಯುಳ್ಳವನೂ, ದಿಗಂಬರನೂ, ನವಿಲುಗರಿಯ ಕಂತೆಯನ್ನು ಹಿಡಿದುಕೊಂಡಿರುವವನೂ ಆಗಿ ಜೈನ ಸನ್ಯಾಸಿಯ ವೇಷದಿಂದ ಆ ರಾಕ್ಷಸರನ್ನು ಕುರಿತು ಹೀಗೆ ಹೇಳಿದನು: ’ನಿಮಗೆ ಮುಕ್ತಿ ಬೇಕಿದ್ದರೆ ನಾನು ಹೇಳುವ ಮಾರ್ಗದಲ್ಲಿ ನಡೆಯಿರಿ, ನಾನು ಹೇಳುವ ಧರ್ಮ ಮುಕ್ತಿಗೆ ಮಾರ್ಗವಾದುದು. ಇದಕ್ಕಿಂತ ಶ್ರೇಷ್ಠವಾದ ಮತ್ತೊಂದು ಧರ್ಮವಿಲ್ಲ ಎಂದು ಹೇಳುತ್ತ ಅನೇಕಾಂತವಾದವನ್ನು ವಿವರಿಸಿದನು. (“ತತೋ ದಿಗಂಬರೋ ಮುಂಡೋ ಬರ್ಹಿಪಿಂಛಧರೋ ದ್ವಿಜ, ಮಾಯಾಮೋಹೋಸುರಾನ್ ಶ್ಲಕ್ಷ್ಣಮಿದಂ ವಚನಬ್ರವೀತ್”).

ಅಸುರರು ಆ ಧರ್ಮವನ್ನು ಆಚರಿಸಲು ಅರ್ಹರೆಂದು ಮಾಯಾಮೋಹ ಹೇಳಿದುದರಿಂದ ಅವರು ಅರ್ಹಂತರೆಂದು ಹೆಸರು ಪಡೆದರು. (“ಅರ್ಹತೈತಮಥೋ ಧಮಂ ಮಾಯಾಮೋಹೇನ ತೇಯತಃ, ಪ್ರೋಕ್ತಾಸ್ತಮಾಶ್ರಿತಾ ಧರ್ಮಮಹಂತಸ್ತೇನ ತೇ ಭವನ್). ಈ ರೀತಿ ಮಾಯಾಮೋಹ ಆ ಅಸುರರನ್ನು ವೇದಮಾರ್ಗದಿಂದ ತಪ್ಪಿಸಿದ.

ನಂತರ ಬೌದ್ಧ ಭಿಕ್ಷುವಿನ ವೇಷದಲ್ಲಿ ಬಂದು “ನಿಮಗೆ ನಿರ್ವಾಣದ ಅಪೇಕ್ಷೆ ಇದ್ದರೆ ಯಜ್ಞದಲ್ಲಿ ಪಶುಬಲಿ ಕೊಡುವ ದುಷ್ಟ ಧರ್ಮವನ್ನು ಬಿಟ್ಟುಬಿಡಿ ಎಂದು ಹೇಳಿ ಅಸುರರು ದ್ವಿಜ ಧರ್ಮವನ್ನು ತ್ಯಜಿಸುವಂತೆ ಮಾಡಿದನು. (“ಪುನಶ್ಚ ರಕ್ತಾಂಬರಧೃತ್ ಮಾಯಾಮೋಹೋ ಜಿತೇಂದ್ರಿಯಃ, ಅನ್ಯಾನಾಹಾಸುರಾನ್ಗತ್ವಾಮೃದ್ವಲ್ಪಂ ಮಧುರಾಕ್ಷರಂ. ಸ್ವರ್ಗಾಥಂ ಯದಿ ವೋ ವಾಂಛಾ ನಿರ್ವಾಣಾರ್ಥಮತೋಸುರಾಃ, ತದಲಂ ಪಶುಭೂತಾದಿ ದುಷ್ಟಧರ್ಮೈರ್ನಿಬೋಧತ”). ಹೀಗೆ ಸನಾತನ ಧರ್ಮವನ್ನು ತ್ಯಜಿಸಿದ ಅಸುರರು ಅದನ್ನು ಹೀಗಳೆಯಲು ಪ್ರಾರಂಭಿಸಿದರು. ಹಲವರು ವೇದಗಳನ್ನು, ಇನ್ನೂ ಹಲವರು ವೈದಿಕ ದೇವತೆಗಳನ್ನು ಇನ್ನೂ ಹಲವರು ಯಜ್ಞಗಳನ್ನೂ ನಿಂದಿಸಲು ಪ್ರಾರಂಭಿಸಿದರು. ಯಜ್ಞದಲ್ಲಿ ಬಲಿ ಕೊಡಲಾದ ಪಶುಗಳು ನೇರವಾಗಿ ಸ್ವರ್ಗಕ್ಕೆ ಹೋಗುವುದಾದರೆ ಯಜ್ಞ ಮಾಡುವ ಯಜಮಾನ ತನ್ನ ತಂದೆಯನ್ನೇ ಏಕೆ ಬಲಿ ಕೊಟ್ಟು ಅವನು ಸ್ವರ್ಗ ಸೇರುವಂತೆ ಮಾಡುವುದಿಲ್ಲ ಎಂದು ಆ ಅಸುರರು ಪ್ರಶ್ನಿಸಿದರು. (“ಕೇಚಿದ್ವಿನಿಂದಾಂ ವೇದಾನಾಂ ದೇವಾನಾಮಪರೇ ದ್ವಿಜ, ಯಜ್ಞಕರ್ಮಕಲಾಪಸ್ಯ ತಥಾನ್ಯೇ ಚ ದ್ವಿಜನ್ಮನಾಂ. ನಿಹತಸ್ಯ ಪಶೋರ್ಯಜ್ಞೆ ಸ್ವರ್ಗಪ್ರಾಪ್ತಿರ್ಯದೀಷ್ಯತೇ, ಸ್ವಪಿತಾ ಯಜಮಾನೇನ ಕಿನ್ನು ತಸ್ಮಾನ್ನ ಹನ್ಯತೆ”).

ಈ ರೀತಿ ವಿಷ್ಣುವಿನಿಂದ ದಾರಿ ತಪ್ಪಿಸಿದವರಾಗಿ ವೇದನಿಂದನೆ ಮಾಡಿ ರಾಕ್ಷಸರಾದ ಜೈನರು ಮತ್ತು ಬೌದ್ಧರು ವೇದಮಾರ್ಗದಿಂದ ವಂಚಿತರಾಗಿ ’ನಗ್ನ’ರಾದರು ಹಾಗೂ ಆ ಕಾರಣದಿಂದ ಅವರಿಗೆ ವೇದಗಳ ರಕ್ಷಣೆ ದೊರೆಯದೇ ಇದ್ದುದರಿಂದ ದೇವತೆಗಳಿಂದ ಯುದ್ಧದಲ್ಲಿ ಸೋತರು. (“ಸದ್ಧರ್ಮಕವಚಸ್ತೇಷಾಮಭೂದ್ಯಃ ಪ್ರಥಮಂ ದ್ವಿಜತೇನ ರಕ್ಷಾಭವತ್ಪೂವಂ ನೇಶುರ್ನಷ್ಟೇ ಚ ತತ್ರ ತೇ”).

ಜನಪದದಲ್ಲಿ ಬುದ್ಧಾವತಾರ

ಸುಮಾರು ಇಂಥದೇ ವಿವರಣೆ ಜನಪದದಲ್ಲಿಯೂ ಪ್ರಚಲಿತವಾಗಿತ್ತು ಎಂದು ತೋರುತ್ತದೆ. ಟಿಪ್ಪು ಮರಣದ ನಂತರ ಆತನ ಅಧೀನದಲ್ಲಿದ್ದ ಹಲವು ಪ್ರದೇಶಗಳು ಬ್ರಿಟಿಷರ ಆಡಳಿತಕ್ಕೆ ಒಳಪಟ್ಟವು. ಆ ಪ್ರದೇಶಗಳಲ್ಲಿರುವ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿಗಳನ್ನು ಅಭ್ಯಸಿಸಿ ಒಂದು ವರದಿ ನೀಡುವಂತೆ ಲಾರ್ಡ ವೆಲ್ಲೆಸ್ಲಿ 1800ರಲ್ಲಿಯೇ ಪ್ರಾನ್ಸಿಸ್ ಬುಕನಿನ್ ಎಂಬುವವನನ್ನು ನೇಮಿಸಿದ. ಆತ ಮೂರು ಸಂಪುಟಗಳ ಒಂದು ವರದಿಯನ್ನು ಸಲ್ಲಿಸಿದ. ತನ್ನ ಆ ವರದಿಯ ಮೊದಲ ಸಂಪುಟದ 144ನೆಯ ಪುಟದಲ್ಲಿ ಬ್ರಾಹ್ಮಣರು ಯಾಕೆ ವಿಷ್ಣುವಿನ ಅವತಾರವಾದ ಬುದ್ಧನನ್ನು ಆರಾಧಿಸುವುದಿಲ್ಲ ಎಂಬ ಬಗ್ಗೆ ಪ್ರಚಲಿತವಾಗಿದ್ದ ಒಂದು ಜಾನಪದ ಆಖ್ಯಾನವನ್ನು ದಾಖಲಿಸುತ್ತಾನೆ: “ತ್ರಿಪುರ ಹೆಸರಿನ ಒಬ್ಬ ಅಸುರ ಒಂದು ನಗರವನ್ನು ಹೊಂದಿದ್ದ. ಅದರ ನಿವಾಸಿಗಳು ಬ್ರಹ್ಮಲೋಕದ ನಿವಾಸಿಗಳಿಗೆ ತುಂಬಾ ತೊಂದರೆ ಕೊಡುತ್ತಿದ್ದರು. ಆದುದರಿಂದ ಬ್ರಹ್ಮ ಆ ನಗರವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದ್ದ. ಆದರೆ ವಿಫಲನಾಗಿದ್ದ. ಯಾಕೆಂದರೆ ಆ ನಗರದಲ್ಲಿಯ ಹೆಂಗಸರು ಎಲ್ಲಿಯವರೆಗೆ ತಮ್ಮ ಚಾರಿತ್ರ್ಯವನ್ನು ಕಾಪಾಡಿಕೊಂಡಿರುತ್ತಾರೋ ಅಲ್ಲಿಯವರೆಗೆ ಆ ನಗರವನ್ನು ವಶಪಡಿಸಿಕೊಳ್ಳುವುದು ಅಸಾಧ್ಯವಾಗಿತ್ತು. ಇದುವರೆಗೂ ಆ ನಗರದ ಹೆಂಗಸರು ತಮ್ಮ ಚಾರಿತ್ರ್ಯವನ್ನು ಕಾಪಾಡಿಕೊಂಡು ಬಂದಿದ್ದರು. ಆಗ ದೇವತೆಗಳು ವಿಷ್ಣುವಿನ ಮೊರೆಹೊಕ್ಕರು. ವಿಷ್ಣು ಆಗ ಅತ್ಯಂತ ಸುಂದರವಾದ ಒಬ್ಬ ಗಂಡಸಿನ ರೂಪ ತಳೆದು ಬುದ್ಧನಾಗಿ ಆ ನಗರವನ್ನು ಪ್ರವೇಶಿಸಿದ. (ದಿಘ ನಿಕಾಯ ಹಾಗೂ ಅಂಗುತ್ತರ ನಿಕಾಯಗಳು ಬುದ್ಧ ಅತ್ಯಂತ ಸುಂದರ ಹಾಗೂ ಬಿಳಿ ಬಣ್ಣ ಹೊಂದಿದ್ದನೆಂದು ವಿವರಿಸುತ್ತವೆ). ನಂತರ ಆತ ಆ ಹೆಂಗಸರ ಮುಂದೆ ಬೆತ್ತಲೆಯಾಗಿ ಕುಣಿದ ಹಾಗೂ ಅವರನ್ನು ಶಿಥಿಲ ಆಸೆಗಳೊಂದಿಗೆ ಪ್ರೇರೇಪಿಸಿದ. ಇದರಿಂದಾಗಿ ಆ ನಗರಕ್ಕೆ ಆ ಹೆಂಗಸರ ಚಾರಿತ್ರ್ಯದ ರಕ್ಷಣೆ ತಪ್ಪಿಹೋದುದರಿಂದ ಅದು ದೇವತೆಗಳ ವಶವಾಯಿತು. ಆದರೆ ಬ್ರಾಹ್ಮಣರಿಗೆ ವಿಷ್ಣುವಿನ ಈ ಕೃತ್ಯವನ್ನು ಸಮರ್ಥಿಸುವುದು ಅಸಾಧ್ಯವಾದುದರಿಂದ ಅವರು ಬುದ್ಧನ ಹೆಸರನ್ನೂ ತೆಗೆದುಕೊಳ್ಳುವುದಿಲ್ಲ ಹಾಗೂ ಬುದ್ಧನ ಅವತಾರದ ರೂಪದಲ್ಲಿ ವಿಷ್ಣುವಿನ ಆರಾಧನೆಯನ್ನೂ ಮಾಡುವುದಿಲ್ಲ.

ಒಂದೆಡೆ ಬುದ್ಧನನ್ನು ವಿಷ್ಣುವಿನ ಒಂದು ಅವತಾರವೆಂದು ಹೇಳುತ್ತ ಇನ್ನೊಂದೆಡೆಗೆ ಬುದ್ಧನನ್ನು ಪೂಜಿಸದೇ ಇರುವ ಈ ಮುಜುಗರದಿಂದ ತಪ್ಪಿಸಿಕೊಳ್ಳಲು ಹಲವು ಸನಾತನಿಗಳು ಇಬ್ಬರು ಬುದ್ಧರಿದ್ದರೆಂದೂ, ಒಬ್ಬ ಭಾಗವತದಂತಹ ಪುರಾಣಗಳಲ್ಲಿ ಉಲ್ಲೇಖಿಸಲಾದ ವಿಷ್ಣುವಿನ ಅವತಾರವಾದ ’ಪೌರಾಣಿಕ ಬುದ್ಧ’ನೆಂದೂ ಹಾಗೂ ಇನ್ನೊಬ್ಬ ’ಐತಿಹಾಸಿಕ ಬುದ್ಧ’ನೆಂದೂ ವಾದಿಸುತ್ತಾರೆ. ಆದರೆ ಗೊಂದಲವೇನೆಂದರೆ ಐತಿಹಾಸಿಕ ಬುದ್ಧ ವೈದಿಕ ಧರ್ಮವನ್ನು ಧಿಕ್ಕರಿಸಿ ಬುದ್ಧಧರ್ಮವನ್ನು ಬೋಧಿಸಿದ, ವಿಷ್ಣುವಿನ ಅವತಾರವಾದ ಬುದ್ಧನೂ ಪುರಾಣಗಳ ಪ್ರಕಾರ ಅದನ್ನೇ ಮಾಡಿದ. ವ್ಯತ್ಯಾಸವೆಂದರೆ ಐತಿಹಾಸಿಕ ಬುದ್ಧ ಮಾನವನನ್ನು ನಿರ್ವಾಣದೆಡೆಗೆ ಕೊಂಡೊಯ್ಯಲು ತನ್ನ ಧರ್ಮವನ್ನು ಪ್ರತಿಪಾದಿಸಿದ ಆದರೆ ಪೌರಾಣಿಕ ಬುದ್ಧ ಬೌದ್ಧರನ್ನು ಸನಾತನ ಧರ್ಮದಿಂದ ಚ್ಯುತಮಾಡಲು ಬೌದ್ಧ ಧರ್ಮವನ್ನು ಪ್ರತಿಪಾದಿಸಿದ.

ಒಟ್ಟಿನಲ್ಲಿ ಇದು ಆ ದಿನಗಳಲ್ಲಿ ಪ್ರಚಲಿತವಾಗಿದ್ದ ವೈದಿಕರು ಮತ್ತು ಬೌದ್ಧರ ನಡುವಿನ ಪ್ರತಿಸ್ಪರ್ಧೆಯನ್ನು ಬಿಂಬಿಸುತ್ತದೆ. ಇಂಥದೇ ಇನ್ನೊಂದು ಪ್ರತಿಸ್ಪರ್ಧಾತ್ಮಕ ಘಟನೆಯನ್ನು ಚೀನೀ ಪ್ರಯಾಣಿಕ ಫಾಯಿಯಾನ್ ಪ್ರಸ್ತಾಪಿಸುತ್ತಾನೆ. ಬುದ್ಧ ಧರೆಗೆ ಅವತರಿಸಿದಾಗ “ಅಸಂಖ್ಯಾತ ದೇವತೆಗಳು ಬುದ್ಧನನ್ನು ಅವನ ಅವತರಣದಲ್ಲಿ ಅನುಸರಿಸಿದರು. ಅವನು ಕೆಳಗಿಳಿದು ಬಂದಾಗ, ಏಳು ಮೆಟ್ಟಿಲುಗಳನ್ನು ಹೊರತುಪಡಿಸಿ, ಮೂರು ಮೆಟ್ಟಿಲುಗಳು ನೆಲದಲ್ಲಿ ಕಣ್ಮರೆಯಾದವು. ಆ ಏಳು ಮೆಟ್ಟಿಲುಗಳು ಮಾತ್ರ ಗೋಚರಿಸುತ್ತಿದ್ದವು. ನಂತರ ರಾಜ ಅಶೋಕನು ಆ ಮರೆಯಾದ ಮೆಟ್ಟಿಲುಗಳು ಎಲ್ಲಿ ಕೊನೆಗೊಳ್ಳುತ್ತವೆ ಎಂದು ತಿಳಿಯಲು ಬಯಸಿ, ಭೂಮಿಯನ್ನು ಅಗೆದು ಪರೀಕ್ಷಿಸಲು ಜನರನ್ನು ಕಳುಹಿಸಿದನು. (ಆಗ) ಮತ್ತೊಂದು ಸಿದ್ಧಾಂತದ ಕೆಲವು ಪ್ರತಿಪಾದಕರು (ಇವರು ಯಾವುದೇ ಪಂಗಡದ ಬೌದ್ಧರಾಗಿರದೇ ಬ್ರಾಹ್ಮಣರು ಅಥವಾ ಇತರೆ ಯಾವುದೋ ತಪ್ಪು ಸಿದ್ಧಾಂತದ ಅನುಯಾಯಿಗಳಾಗಿರಬೇಕು) ಶ್ರಮಣರೊಂದಿಗೆ ಈ ಸ್ಥಳದ ಹಕ್ಕಿನ ಬಗ್ಗೆ ವಿವಾದ ಹೂಡಿದರು. ನಂತರ ಒಂದು ಷರತ್ತನ್ನು ಇಬ್ಬರೂ ಒಪ್ಪಿಕೊಂಡರು; ಅದೇನೆಂದರೆ ಆ ಸ್ಥಳವು ನಿಜವಾಗಿಯೂ ಶ್ರಮಣರಿಗೆ ಸೇರಿದ್ದೇ ಆದರೆ ಅದಕ್ಕೆ ಅದ್ಭುತವಾದ ದೃಢೀಕರಣ ಇರಬೇಕು ಎನ್ನುವುದು. ಈ ಮಾತುಗಳನ್ನು ಹೇಳಿದಾಗ ಕಂಬದ ಮೇಲೆ ಸ್ಥಾಪಿಸಲಾಗಿದ್ದ ಸಿಂಹವು ಘರ್ಜನೆಯನ್ನು ಮಾಡುವ ಮೂಲಕ ದೃಢೀಕರಣವನ್ನು ನೀಡಿತು. ಇದರಿಂದಾಗಿ ಶ್ರಮಣರ ವಿರೋಧಿಗಳು ಭಯಭೀತರಾದರು ಮತ್ತು ಆ ನಿರ್ಧಾರಕ್ಕೆ ತಲೆಬಾಗಿ ಹಿಂದೆ ಸರಿದರು”. (ಎ ರೆಕಾರ್ಡ್ ಆಫ್ ಬುದ್ಧಿಸ್ಟಿಕ್ ಕಿಂಗ್ಡಮ್ಸ್- ದಿ ಟ್ರಾವೆಲ್ಸ್ ಆಫ್ ಫಾಹಿನ್, ಅನುವಾದ ಜೇಮ್ಸ್ ಲೆಗ್ಗೆ. ಪುಟ. 50). ಫಾಹಿಯಾನ ಇಂತಹ ಹಲವು ಉದಾಹರಣೆಗಳನ್ನು ಕೊಡುತ್ತಾನೆ. ತನ್ನ ಅದೇ ಪುಸ್ತಕದ ಪುಟ 56ರಲ್ಲಿ ಕೋಸಲದ ಹಲವು ಪ್ರದೇಶಗಳಲ್ಲಿ ಅಂಗುಲಿಮಾಲನ ಶರೀರವನ್ನು ಸುಟ್ಟುಹಾಕಿದ ಮೊದಲಾದ ಸ್ಥಳಗಳಲ್ಲಿ ಬೌದ್ಧರು ತಮ್ಮ ತೋಪುಗಳನ್ನು ನಿರ್ಮಿಸಿಕೊಂಡಿದ್ದುದರ ಬಗ್ಗೆ ಹೀಗೆ ಬರೆಯುತ್ತಾನೆ: “ಬುದ್ಧ ಧರ್ಮಕ್ಕೆ ವಿರುದ್ಧವಾದ ತಮ್ಮ ಧರ್ಮದಿಂದಾಗಿ ಬ್ರಾಹ್ಮಣರು ತಮ್ಮ ಹೃದಯದಲ್ಲಿ ದ್ವೇಷ ಮತ್ತು ಅಸೂಯೆಯನ್ನು ತುಂಬಿಕೊಂಡು ಆ ತೋಪುಗಳನ್ನು ನಾಶಮಾಡಬಯಸಿದರು. ಆದರೆ ಆಗ ಆಕಾಶದಿಂದ ಅಪ್ಪಳಿಸುವ ಗುಡುಗು ಮತ್ತು ಮಿಂಚುಗಳ ಚಂಡಮಾರುತ ಬಂದಿತು. ಇದರಿಂದಾಗಿ ಕೊನೆಗೆ ಬ್ರಾಹ್ಮಣರಿಗೆ ತಮ್ಮ ಉದ್ದೇಶವನ್ನು ಸಾಧಿಸುವುದು ಸಾಧ್ಯವಾಗಲಿಲ್ಲ ಎನ್ನುತ್ತಾನೆ.

ಹ್ಯುಯೆನ್ ತ್ಸಾಂಗ್

ಬೌದ್ಧರ ಬಗೆಗಿನ ವೈದಿಕರ ಈ ದ್ವೇಷದ ಬಗ್ಗೆ ಇನ್ನೊಬ್ಬ ಚೀನೀ ಪ್ರಯಾಣಿಕ ಹ್ಯುಯೆನ್ ತ್ಸಾಂಗ್ ಹೀಗೆ ಬರೆಯುತ್ತಾನೆ: “ಶಶಾಂಕ-ರಾಜ, ಧರ್ಮದ್ರೋಹದಲ್ಲಿ ನಂಬಿಕೆಯುಳ್ಳವನಾಗಿದ್ದನು, ಆತ ಬುದ್ಧನ ಧರ್ಮವನ್ನು ನಿಂದಿಸಿದನು ಮತ್ತು ಅಸೂಯೆಯಿಂದ ಅವರ ವಿಹಾರಗಳನ್ನು ನಾಶಪಡಿಸಿದನು ಮತ್ತು ಬುದ್ಧ ಗಯಾದಲ್ಲಿರುವ ಬೋಧಿವೃಕ್ಷವನ್ನು ಕಡಿದುಹಾಕಲು ಪ್ರಯತ್ನಿಸಿ ಭೂಮಿಯನ್ನು ಆಳವಾಗಿ ಅಗೆದನು; ಆದರೆ ಅವನು ಅದರ ಬುಡಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಆದುದರಿಂದ ನಂತರ ಅವನು ಅದನ್ನು ಸಂಪೂರ್ಣವಾಗಿ ನಾಶಪಡಿಸಿ ಅದರ ಒಂದು ಕುರುಹೂ ಇಲ್ಲದಂತೆ ಮಾಡುವ ಉದ್ದೇಶದಿಂದ ಅದನ್ನು ಬೆಂಕಿಯಿಂದ ಸುಟ್ಟು ಅದಕ್ಕೆ ಕಬ್ಬಿನ ರಸವನ್ನು ಸಿಂಪಡಿಸಿದನು”. ಉದಯನ ರಾಜ್ಯದಲ್ಲಿ 1400 ವಿಹಾರಗಳಿದ್ದುದಾಗಿಯೂ ಕಾಶ್ಮೀರದಲ್ಲಿ 100 ವಿಹಾರಗಳಿದ್ದುದಾಗಿಯೂ, ಅಶೋಕ ಕಟ್ಟಿಸಿದ ನಾಲ್ಕು ಬೃಹತ್ ಸ್ತೂಪಗಳ ಬಗ್ಗೆ ಹಾಗೂ ಕನಿಷ್ಕ ಕಟ್ಟಿಸಿದ ಹಲವಾರು ವಿಹಾರಗಳ ಬಗ್ಗೆಯೂ ಆತ ಬರೆಯುತ್ತಾನೆ. ಆದರೆ ಇಂದು ಇವಾವುವೂ ಅಸ್ತಿತ್ವದಲ್ಲಿ ಇಲ್ಲ. ಮಿಹಿರಕುಲ 1600 ಸ್ತೂಪಗಳನ್ನು ಹಾಗೂ ವಿಹಾರಗಳನ್ನು ಹಾಳುಗೆಡವಿದ ಬಗ್ಗೆಯೂ ಹ್ಯುಯೆನ್ ತ್ಸಾಂಗ್ ಬರೆಯುತ್ತಾನೆ. ಇವೆಲ್ಲವನ್ನೂ ಅಂದಿನ ವೈದಿಕರು ನಷ್ಟಪಡಿಸಿರಬೇಕು.

ಬೌದ್ಧ ವಿಹಾರಗಳನ್ನು ನಷ್ಟಪಡಿಸಿ ವೈದಿಕರು ಅವುಗಳಿದ್ದ ಸ್ಥಳಗಳಲ್ಲಿ ಮಂದಿರಗಳನ್ನು ರಚಿಸಿದ ಇಂತಹುದೇ ಇನ್ನೊಂದು ಉದಾಹರಣೆಯನ್ನು ಇತಿಹಾಸಕಾರರಾದ ರೂಪಾ ಗುಪ್ತಾ ಮತ್ತು ಗೌತಮ್ ಗುಪ್ತಾ, ತಮ್ಮ ಪುಸ್ತಕ ’ಮರೆತುಹೋದ ನಾಗರಿಕತೆಗಳು-ದಿ ರಿಡಿಸ್ಕವರಿ ಆಫ್ ಇಂಡಿಯಾಸ್ ಲಾಸ್ಟ್ ಹಿಸ್ಟರಿ’ನಲ್ಲಿ ದಾಖಲಿಸಿದ್ದಾರೆ: “ಶತಮಾನಗಳ ಹಿಂದೆ ದೊಡ್ಡ ಬೌದ್ಧ ಮಠವಾದ ಯಾಸಾ ವಿಹಾರ ಅಸ್ತಿತ್ವದಲ್ಲಿದ್ದ ಸ್ಥಳದಲ್ಲಿ ಕೇಶವ ದೇವ ದೇವಾಲಯವನ್ನು ನಿರ್ಮಿಸಲಾಗಿದೆ ಎಂದು ಕೆಲವೇ ಜನರಿಗೆ ತಿಳಿದಿತ್ತು. ಭಾರತೀಯ ಪುರಾತತ್ತ್ವ ಶಾಸ್ತ್ರದ ಪ್ರವರ್ತಕ ಸರ್ ಅಲೆಕ್ಸಾಂಡರ್ ಕನ್ನಿಂಗ್‌ಹ್ಯಾಮ್ ಅವರು ಯಾಸಾ ವಿಹರವು ಕುಶಾನರ ಅವಧಿಗೆ ಸಂಬಂಧಿಸಿದ್ದು ಎಂದು ಮೊಟ್ಟಮೊದಲು ಸೂಚಿಸಿದರು. ಆ ಸ್ಥಳದಲ್ಲಿ ಕಂಡುಬರುವ ಶಾಸನಗಳಿಂದ ಗುಪ್ತರ ಸಾಮ್ರಾಜ್ಯದ ದಿನಗಳಲ್ಲಿಯೂ ಅದು ಅಸ್ತಿತ್ವದಲ್ಲಿತ್ತು ಎಂದು ದೃಢಪಡಿಸಿದವು. ಮಥುರಾ ಮತ್ತು ಸುತ್ತಮುತ್ತಲಿನ ಪ್ರಾಚೀನ ದಿಬ್ಬಗಳಲ್ಲಿ ಗ್ರೋಸ್ ಅವರು ನಡೆಸಿದ ಉತ್ಖನನಗಳು ಕನ್ನಿಂಗ್‌ಹ್ಯಾಮ್‌ನ ಸಿದ್ಧಾಂತವನ್ನು ಮತ್ತಷ್ಟು ಪುನರ್‌ಸ್ಥಾಪಿಸಿದವು”. ನಂತರ ಕೇಶವದೇಬ ಎಂದು ಕರೆಯಲಾಗುತ್ತಿದ್ದ ಆ ಕೃಷ್ಣ ಮಂದಿರದ ಜಾಗದಲ್ಲಿ ಮಸೀದಿಯನ್ನು ಕಟ್ಟಲಾಯಿತು.

ಮಾತುಮಾತಿಗೆ ತಮ್ಮ ಶಾಸ್ತ್ರಗಳು ವೈಜ್ಞಾನಿಕವಾಗಿವೆ, ತಮ್ಮ ಶಾಸ್ತ್ರಗಳಲ್ಲಿನ ಮಾತುಗಳನ್ನು ವೈಜ್ಞಾನಿಕವಾಗಿ ರುಜುವಾತು ಮಾಡಬಹುದು ಎಂದೆಲ್ಲ ಕೊಚ್ಚಿಕೊಳ್ಳುವ ಈ ಸನಾತನಿಗಳನ್ನು ವಿಷ್ಣುವಿನ ಈ ದಶಾವತಾರದ ಕಥೆ ವಿಜ್ಞಾನಕ್ಕೆ ಸಂಬಂಧಿಸಿದಂತೆ ಒಂದು ವಿಚಿತ್ರ ವಿರೋಧಾಭಾಸಕ್ಕೆ ತಳ್ಳುತ್ತಿದೆ. ಒಂದು ಕಡೆ ಡಾರ್ವಿನ್‌ನ ವಿಕಾಸವಾದವನ್ನೇ ಅಲ್ಲಗಳೆಯುವ ಈ ಸನಾತನಿಗಳು ಇನ್ನೊಂದು ಕಡೆ ವಿಷ್ಣುವಿನ ಅವತಾರಗಳು ಡಾರ್ವಿನ್‌ನ ವಿಕಾಸವಾದವನ್ನು ಸಾವಿರಾರು ವರ್ಷಗಳ ಮೊದಲೇ ಮುಂಗಾಣಿದ್ದವು ಎಂದೂ ಕೊಚ್ಚಿಕೊಳ್ಳುತ್ತಾರೆ!

ಆದರೆ ಅವರ ಈ ವಾದ ಅವರನ್ನು ಒಂದು ವಿಚಿತ್ರ ವಿರೋಧಾಭಾಸಕ್ಕೆ, ಸಂಕಟಕ್ಕೆ, ಸಿಕ್ಕಿಸುತ್ತಿದೆ. ಮತ್ಸ್ಯಾವತಾರದಿಂದ ಕಲ್ಕಿಯವರೆಗಿನ ಅವತಾರಗಳು ’ವಿಕಾಸ’ವನ್ನು ಸೂಚಿಸುತ್ತವೆ ಎನ್ನುವುದಾದರೆ ರಾಮನ ನಂತರ ಕೃಷ್ಣನ ಅವತಾರವಾಗಿದ್ದುದರ ಅರ್ಥ ರಾಮನಿಗಿಂತ ಕೃಷ್ಣ ಹೆಚ್ಚು ವಿಕಸಿತ ಅವತಾರ ಎಂದಾಗುತ್ತದೆ ಅಲ್ಲವೇ? ಹಾಗೆಯೇ ಕೃಷ್ಣನ ನಂತರ ಬುದ್ಧನ ಅವತಾರವಾಯಿತು ಎನ್ನುವುದಾದರೆ ರಾಮ ಹಾಗೂ ಕೃಷ್ಣರಿಗಿಂತ ಬುದ್ಧ ಇನ್ನೂ ಹೆಚ್ಚು ವಿಕಸಿತ ಅವತಾರವಾಗುತ್ತಾನೆ ಅಲ್ಲವೇ? ಇದನ್ನು ಒಪ್ಪಿಕೊಳ್ಳುವುದು ಈ ಸನಾತನಿಗಳಿಗೆ ಕಷ್ಟವಾಗುತ್ತಿದೆ. ಆದರೆ ಬುದ್ಧನನ್ನು ರಾಮ-ಕೃಷ್ಣರಿಗಿಂತ ಕಡಿಮೆ ವಿಕಸಿತವಾದ ಹಿಂದಿನ ಅವತಾರವೆಂದು ಹೇಳಿದರೆ ಬುದ್ಧ ರಾಮ ಮತ್ತು ಕೃಷ್ಣರಿಗಿಂತ ಪ್ರಾಚೀನನಾಗಿದ್ದ ಎಂಬುದನ್ನು ಸನಾತನಿಗಳು ಒಪ್ಪಿಕೊಳ್ಳಬೇಕಾಗುತ್ತದೆ. ಇದೂ ಅವರಿಗೆ ನುಂಗಲಾರದ ತುತ್ತಾಗುತ್ತದೆ.

ಈ ರೀತಿ ಈ ಸನಾತನಿಗಳು ಬುದ್ಧನನ್ನು ಹಿಡಿದುಕೊಳ್ಳಲೂ ಒಲ್ಲರು, ಬಿಡಲೂ ಒಲ್ಲರು. “ಬುದ್ಧನ ಈ ಅಪಹರಣ ಬುದ್ಧನ ಬಗೆಗೆ ಹಿಂದೂಗಳಿಗಿರುವ ಎಡಬಿಡಂಗಿತನವನ್ನು ಸೂಚಿಸುತ್ತದೆ” ಎನ್ನುತ್ತಾರೆ ಹೋಲ್ಟ.

ಬಾಪು ಹೆದ್ದೂರಶೆಟ್ಟಿ

ಬಾಪು ಹೆದ್ದೂರಶೆಟ್ಟಿ
ವಕೀಲರು ಹಾಗೂ ಸಮಾಜವಾದಿ ಚಿಂತಕ-ಲೇಖಕ-ಚಳವಳಿಕಾರ. ’ಲೋಹಿಯಾ? ವ್ಯಕ್ತಿ ಮತ್ತು ವಿಚಾರ’, ’ಗಾಂಧಿ-ಅಂಬೇಡ್ಕರ್ ಮತ್ತು ಸಮಾಜವಾದ’, ’ಸಮಾಜವಾದ: ವಾದ-ವಿವಾದ’ ಅವರ ಪುಸ್ತಕಗಳಲ್ಲಿ ಕೆಲವು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. The primordial antiquety of the indigenous culture of this country , called by different names, epithets at different periods of history , is unfathomable, forget it can be comprehended even by an iota in one’s lifetime. The Europeans were bewildered by the vast concepts of time and space in Hinduism and since these puranas vastly ante- dated the Semitic creation stories of 3000 BC or so , the Mecaulayns and their ardent followers viz., Romila Thapar and Communist ‘historians’ branded it as stories of fansy imagination. But as more and more Archaeological discoveries are evidencing
    the events in puranas are getting authenticated. As a Hindu of ShriVaisnava Brahmin sect we do worship and celebrate not only Lord Buddha but 12 Alwars who include among them saints belonging to ‘ lower castes’. Infact Buddist cosmology is based on Hindu cosmology. Anyway freedom is there for everyone to propound their views. All said and done , Rama or krishna, valmiki or vyasa are not Brahmins but are revered as Gods and Sages in Hindu Pantheon by Brahminical sects and other Hindus. Though Ravana and many a demons were Kashyapa or pulaystha Brahmins , they are not revered due to misdeeds overshadowing their other good qualities. Prahlada, Virochana and Bali are revered as revered, Lord Vishnu gate keeped Bali’s kingdom though Bali was deprieved of his heavenly domains. There are innumerable examples, better not to drive wedge between ageold beliefs and customs, for just to oppose the ideology of the Hinduthwa!

  2. I respect Bapu Heddurshetty’s views and scholarship, it makes for really interesting reading and open to further research. It is possible in Indian/ Hindu psche to be free to criticise their own gods, practices. It is no wonder so many cults and culture leaders are emerging in this soil there by inventing and reinventing the truth! But this is not there in semitic cultures. By opposing Hinduism they are trying to mould it into another semitic entity, thats it!

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...