Homeಚಳವಳಿಇಲ್ಲೇ ಇದ್ದೀರಿ ನಮ್ಮ ನೆನಪಿನ ಗುದ್ದಿನೊಳಗೆ: ಚಂಪಾರವರಿಗೆ ನುಡಿನಮನ

ಇಲ್ಲೇ ಇದ್ದೀರಿ ನಮ್ಮ ನೆನಪಿನ ಗುದ್ದಿನೊಳಗೆ: ಚಂಪಾರವರಿಗೆ ನುಡಿನಮನ

- Advertisement -

ಸಂಕ್ರಮಣಕ್ಕೆ ಮೂರು ದಿನದ ಮೊದಲು ಸಾಹಿತ್ಯ ಸಂಕ್ರಮಣ ಸರ್ಕಸ್ ಡೇರೆಯ ಊರುಗೋಲು ಕುಸಿದಿದೆ. ಈ ಸರ್ಕಸ್ ಡೇರೆಯಲ್ಲಿ ಹಲವು ವೇಷಗಳು ಪಾತ್ರಗಳಾಗಿ ಜೀವತಳೆದು ಕನ್ನಡ ಸಾಹಿತ್ಯ ಲೋಕದೊಳಗೆ ಲವಲವಿಕೆ ಸೃಷ್ಟಿಸಿದ್ದವು. ಕಾವ್ಯ, ನಾಟಕ, ಲಘುಧಾಟಿಯ ಸ್ವಗತಗಳು, ಹೋರಾಟದ ಹೆಜ್ಜೆಗಳು, ಆಗೀಗ ಕಚಗುಳಿ ಕೊಡುವ ಮೊನಚು ಮಾತಿನ ವ್ಯಂಗ್ಯ… ರಾಜಕೀಯ ಬದ್ಧತೆಯ ಸ್ಪಷ್ಟ ಕಲ್ಪನೆ ಸಂಕ್ರಮಣ ಸಾಹಿತ್ಯ ಪತ್ರಿಕೆಯ ಸೆಳೆತಗಳಾಗಿದ್ದವು. ಇದೆಲ್ಲದರ ಕೇಂದ್ರವೃತ್ತದ ಊರುಗೋಲು ಚಂಪಾ ಆಗಿದ್ದರು. ಭಾಷೆಯ ಸೊಗಸು ಆಡುವುದರಲ್ಲಷ್ಟೆ ಅಲ್ಲ ಬರೆಯುವುದರಲ್ಲೂ ಇದೆ ಎಂಬುದನ್ನ ಸಾಬೀತುಪಡಿಸಿದವರು.

ದೇಶ-ವಿದೇಶ ಸುತ್ತಿ ಬಂದರೂ, ಬೆಂಗಳೂರು ವಾಸದಲ್ಲಿದ್ದರು ಅವರ ಬಾಯೊಳಗೆ, ಬರಹದೊಳಗೆ ಹಾವೇರಿ ಹತ್ತಿಮತ್ತೂರಿನ ತಿರುಳ್ನುಡಿಯ ತೀಕ್ಷಣತೆಯನ್ನೇ ಉಳಿಸಿಕೊಂಡಿದ್ದರು. ಭಾಷೆಯನ್ನ ಕಾವ್ಯದ ಹಾಗೆ ಆಡುತ್ತಿದ್ದ ಚಂಪಾ ಅವರು ತಮ್ಮ ನಾಟಕ-ಕಾವ್ಯಗಳಲ್ಲಿ ಭಾಷೆಯ ವ್ಯಂಗ್ಯ, ದ್ವನಿ-ಕಾಕುಗಳನ್ನು ಸೊಗಸಾಗಿ ಹೆಣೆಯುತ್ತಿದ್ದರು. ಇಂದಿಗೂ ಅವರ ನಾಟಕಗಳ ದೊಡ್ಡ ಶಕ್ತಿ ಭಾಷೆಯೇ ಆಗಿದೆ. ಬೇರೆ ನಾಟಕಕಾರರು ಜಾನಪದ-ಪುರಾಣ-ಮಹಾಕಾವ್ಯಗಳೊಳಗೆ ಹೊಕ್ಕು ತಮ್ಮ ಅಭಿವ್ಯಕ್ತಿಗೆ ಪಾತ್ರಗಳನ್ನು, ಸನ್ನಿವೇಶ, ಸಂಗತಿ-ಸಂದರ್ಭಗಳನ್ನು ಹೆಕ್ಕಿ ತಂದರೆ ಚಂಪಾ ಮಾತ್ರ ಭಾಷೆಯೊಳಗೆ ಪಾತ್ರ-ನಾಟಕೀಯತೆಯನ್ನು ಹುಡುಕುತ್ತಿದ್ದರು. ಗೋಕರ್ಣದ ಗೌಡಶ್ಯಾನಿ ನಾಟಕವೊಂದನ್ನು ಹೊರತುಪಡಿಸಿ ಉಳಿದೆಲ್ಲ ನಾಟಕಗಳ ಸಂವೇದನೆ ಇರೋದೆ ಚಂಪಾ ಅವರ ಕ್ರಿಯಾಶೀಲತೆಗೆ ಕೈಗನ್ನಡಿ.

‘ಸರ್ ನಾಟಕಕಾರರಾಗಿ ನಿಮ್ಮ ಭಾಷೆ ಮತ್ತು ಅದರೊಳಗಿನ ನಾಟಕೀಯತೆ ನನಗೆ ಇಷ್ಟ’ ಎಂದೊಮ್ಮೆ ಅವರಿಗೆ ಹೇಳಿದಾಗ ನಗುತ್ತಲೇ…. ‘ನೀವು ನಾಟಕದವರು ಭಾಳ ಡಿಸ್ಟನ್ಸ್ ಮಾಡತಿರೆಪಾ… ಕೊರಿಯಾಗಿ ಉಳಿಸೀರಿ’ ಅಂತ ತಮ್ಮ ಯಾವತ್ತಿನ ಧಾಟಿಯೊಳಗ ಹೇಳಿದಾಗ ಯಾಕೋ ರಂಗಭೂಮಿಯವರ ಮ್ಯಾಲ ಅತೃಪ್ತರಾಗಿದಾರೆ ಅನಿಸಿತ್ತು. ಅವರ ಕುಂಟಕುಂಟ ಕುರುವತ್ತಿ ನಾಟಕವು ಕರ್ನಾಟಕ ರಂಗಭೂಮಿಯಲ್ಲಿ ಸಾವಿರಾರು ಪ್ರಯೋಗ ಕಂಡಿದೆ. ಅಪ್ಪ, ಕೊಡೆ, ಗುರ್ತಿನವರು, ಟಿಂಗರ ಬುಡ್ಡಣ್ಣ ನಾಟಕಗಳು ವಿಶಿಷ್ಟ ಶೈಲಿಯ ವಿನ್ಯಾಸ ಹೊಂದಿರುವ ನಾಟಕಗಳು. ಆದರೂ ಅವರು ತಮಗೆ ತಾವೇ ಕೊರಿ ಅಂದುಕೊಂಡದ್ದು ನನಗೆ ಯಾವತ್ತು ಕಾಡುತ್ತಿತ್ತು. ಫನ್ ಮಾಡುತ್ತಲೇ ಮಾತಿಗಾರಂಭಿಸಿ ಕಟ್ಟಕಡೆಯದ್ದೊಂದು ಕಡಕ್ ಫನ್ ಜೊತೆಗೆ ಮಾತು ಮುಗಿಸುತ್ತಿದ್ದ ಚಂಪಾ ಇಂದು ಎನ್ನುವುದನ್ನು ಗ್ರಹಿಸುತ್ತಿದ್ದ ರೀತಿ ಭಿನ್ನವಾಗಿರುತ್ತಿತ್ತು.

ನನಗೆ ಯಾವತ್ತೂ ನಿಮ್ಮ ನೆನಪೇ ಭಾಷೆ. ಆ ಭಾಷೆಯ ಬಂಧುಗಳು ನಾವು. ಅದಕ್ಕೂ ಮಿಗಿಲು ನಿಮ್ಮ ಬಂಡಾಯ ಪ್ರವೃತ್ತಿ ನನ್ನಂಥ ಅನೇಕರಿಗೆ ಮಾದರಿ. ನೀವೇ ಬರೆದಿದ್ದೀರಿ ಸರ್
ಸತ್ತವರು ಎಲ್ಲಿ ಹೋಗುತ್ತಾರೆ?
ಸತ್ತವರು ಎಲ್ಲೂ ಹೋಗುವುದಿಲ್ಲ…
ಇದ್ದವರ ನೆನಪಿನ ಗುದ್ದಿನಲ್ಲಿ
ಗುದ್ದಲಿಯಾಗುತ್ತಾರೆ.

ನಿಮಗೆ ಬುದ್ದ ಬಸವ ಬಾಬಾಸಾಹೇಬ ನಮನಗಳು ಸರ್…

  • ಮಹಾದೇವ ಹಡಪದ ನಟುವರ

(ರಂಗಕರ್ಮಿಗಳು, ಆಟ-ಮಾಟ ಸಾಂಸ್ಕೃತಿಕ ಪಥ ಎಂಬ ನಾಟಕ ತಂಡವನ್ನು ಹುಟ್ಟು ಹಾಕಿ ಸಕ್ರಿಯವಾಗಿದ್ದಾರೆ.)


ಇದನ್ನೂ ಓದಿ; ನುಡಿನಮನ: ಕಳಚಿತು ಜನಪರ ಚಳವಳಿಯ ಮತ್ತೊಂದು ಕೊಂಡಿ

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಭಾರತದ ಮಾತೃ ಭಾಷೆ ಸಂಸ್ಕೃತವೇ? ದ್ರಾವಿಡವೇ?

ಯಾವುದೇ ಭಾಷೆಯ ಮೂಲ ಉದ್ದೇಶ ಸಂವಹನ. ಸಂವಹನದ ಉದ್ದೇಶದಿಂದ ಬಳಸಲಾಗುವ ಯಾವುದೇ ಭಾಷೆಗಳಲ್ಲಿ ಮೇಲು ಕೀಳು ಎಂಬ ಭಾವವೇ ನಿಕೃಷ್ಟವಾದದ್ದು. ಜಗತ್ತಿನ ಮೂಲೆ ಮೂಲೆಗಳಲ್ಲಿ ಮನುಷ್ಯರು ಬಳಸುವ ಎಲ್ಲಾ ಭಾಷೆಗಳಿಗೂ ತನ್ನದೇ ಆದ...
Wordpress Social Share Plugin powered by Ultimatelysocial