Homeಅಂಕಣಗಳುರಾಜ್ಯ ಸರ್ಕಾರದ ಅಸಡ್ಡೆಗೆ ಆಕ್ರೋಶಗೊಂಡ ಒಳಮೀಸಲಾತಿ ಕೂಗು

ರಾಜ್ಯ ಸರ್ಕಾರದ ಅಸಡ್ಡೆಗೆ ಆಕ್ರೋಶಗೊಂಡ ಒಳಮೀಸಲಾತಿ ಕೂಗು

- Advertisement -
- Advertisement -

ಡಿಸೆಂಬರ್‌ನಲ್ಲಿ ಈ ದೇಶದ ಸಾಕ್ಷಿಪ್ರಜ್ಞೆಯಂತಿರುವ ದಲಿತ ಸಮುದಾಯ ತನ್ನ ಮುಂದಾಳತ್ವದಲ್ಲಿ ಬೃಹತ್ ಸಮಾವೇಶವೊಂದನ್ನು ಮತ್ತು ಒಂದು ಸುದೀರ್ಘ ಹೋರಾಟದ ಜಾಥಾವನ್ನು ಆಯೋಜಿಸಿತ್ತು. ಡಿಸೆಂಬರ್ 6, ಬಾಬಾಸಾಹೇಬರ ಪರಿನಿಬ್ಬಾಣ ದಿನದಂದು ನಡೆದ ದಲಿತರ ಸಾಂಸ್ಕೃತಿಕ ಪ್ರತಿರೋಧ ಮತ್ತು ಹಲವು ದಲಿತ ಸಂಘರ್ಷ ಸಮಿತಿಗಳ ಒಗ್ಗೂಡುವಿಕೆ ಸಮಾವೇಶ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನೀಲಿ ಸಾಗರಕ್ಕೆ ಕಾರಣವಾಯ್ತು. ವೇದಿಕೆಯ ಹಿಂಭಾಗಕ್ಕೆ ಹಾಕಿದ್ದ ಬೃಹತ್ ಫ್ಲೆಕ್ಸ್‌ನಲ್ಲಿ ಇದ್ದ ಸಾಂಸ್ಕೃತಿಕ-ರಾಜಕೀಯ ಐಕಾನ್‌ಗಳ ಫೋಟೋ ಕೊಲಾಜ್ ಈ ಪ್ರತಿರೋಧ ಸಮಾವೇಶದ ಆಶಯವನ್ನು ಸಮಗ್ರವಾಗಿ ಹಿಡಿದಿಟ್ಟಿತ್ತು. ಬುದ್ಧ, ಬಸವ, ಜ್ಯೋತಿಬಾ ಫುಲೆ, ಸಾವಿತ್ರಿ ಬಾಯಿ, ಬಾಬಾಸಾಹೇಬ ಅಂಬೇಡ್ಕರ್, ಶಾಹು ಮಹಾರಾಜ್, ನಾಲ್ವಡಿ ಕೃಷ್ಣರಾಜ ಒಡೆಯರ್, ಟಿಪ್ಪು ಸುಲ್ತಾನ, ಪೆರಿಯಾರ್, ನಾರಾಯಣ ಗುರು, ಕನಕದಾಸ, ಕುವೆಂಪು ಮತ್ತು ಬಿ. ಕೃಷ್ಣಪ್ಪನವರ ಫೋಟೋ ಹೊತ್ತ ವೇದಿಕೆ, ಈ ಮಹನೀಯರ ಚಿಂತನೆಗಳನ್ನು ಮಣ್ಣುಪಾಲಾಗಿಸಿ ಈ ನಾಡಿನಲ್ಲಿ ಆಗುತ್ತಿರುವ ಅನಾಹತಗಳಿಗೆ ಬರಬೇಕಿದ್ದ ಪ್ರತಿರೋಧವನ್ನು ನಾವೇ ಪ್ರಾರಂಭಿಸುತ್ತೇವೆ ಎಂದು ಗುಡುಗಿದ್ದಕ್ಕೆ ಸಾಕ್ಷಿಯಾಯಿತು. ದಲಿತರ ದೌರ್ಜನ್ಯ, ರೈತರ ಮೇಲಿನ ದೌರ್ಜನ್ಯ, ಬಿಲ್ಕಿಸ್ ಬಾನೋ ಪ್ರಕರಣ, ಇಡಬ್ಲ್ಯುಎಸ್ ಮೀಸಲಾತಿ, ಸಂಘ ಪರಿವಾರದ ಕೋಮು ದ್ವೇಷದ ಹುನ್ನಾರ ಸೇರಿದಂತೆ ದೇಶದ ಅಲ್ಪಸಂಖ್ಯಾತರು, ಹೋರಾಟಗಾರರು ಹಾಗೂ ಚಿಂತಕರ ಮೇಲೆ ಎಸಗಲಾಗುತ್ತಿರುವ ಆಡಳಿತ-ಸಾಮಾಜಿಕ ವ್ಯವಸ್ಥೆಗಳ ದಮನಕ್ಕೆ ಪಾಠ ಕಲಿಸಲಿದ್ದೇವೆ ಎಂಬ ಗಟ್ಟಿ ಸಂದೇಶವನ್ನು ನೀಡಲಾಯಿತು. ಅಲ್ಲಿ ನೆರೆದಿದ್ದ ಜನರ ಆಕ್ರೋಶವನ್ನು ಆ ವೇದಿಕೆ ಪ್ರತಿಧ್ವನಿಸುತ್ತಿತ್ತು. ಈ ಸಮಾವೇಶದ ಬಗ್ಗೆ ಹಲವು ಟೀಕೆ-ಟಿಪ್ಪಣಿಗಳು ಕೂಡ ಬರದೆ ಇರಲಿಲ್ಲ. ಅದರಲ್ಲಿ ಒಂದು, ಇಲ್ಲಿ ನೆರದಿದ್ದ ಮುಖಂಡರು ಒಳಮೀಸಲಾತಿಯ ಬಗ್ಗೆ ಯಾವ ನಿರ್ಧಾರವನ್ನು ತಳೆದಿದ್ದಾರೆ ಎಂಬುದು; ಇಂತಹ ಸಕಾಲಿಕ ಟೀಕೆಯನ್ನು ಸಂವಾದ ರೂಪದಲ್ಲಿ ಬಗೆಹರಿಸಿದ ಸಮಾವೇಶ ತಾನು ಮಂಡಿಸಿದ ನಿರ್ಣಯಗಳಲ್ಲಿ ಒಳಮೀಸಲಾತಿ ಜಾರಿ ಮಾಡಬೇಕೆಂದು ಆಗ್ರಹಿಸಿದ್ದು ಪ್ರಮುಖವಾಗಿತ್ತು. ಡಿಸೆಂಬರ್ 11ರಂದು ಬೆಂಗಳೂರಿನಲ್ಲಿ ಸೇರಲಿದ್ದ ಒಳಮೀಸಲಾತಿ ಆಗ್ರಹದ ಹೋರಾಟಕ್ಕೆ ಜತೆಯಾಗುವ ಭರವಸೆಯನ್ನು ಅಲ್ಲಿ ನೆರೆದಿದ್ದ ದಲಿತ ಮುಖಂಡರು ನೀಡಿದರು.

ದಲಿತ ಸಂಘರ್ಷ ಸಮಿತಿ ಸಂಸ್ಥಾಪಕರಲ್ಲಿ ಒಬ್ಬರಾದ ಪ್ರೊ.ಬಿ. ಕೃಷ್ಣಪ್ಪನವರ ಹರಿಹರದ ಸ್ಮಾರಕದಿಂದ ಆರಂಭವಾದ ಒಳ ಮೀಸಲಾತಿ ಹೋರಾಟದ ಪಾದಯಾತ್ರೆ ಡಿಸೆಂಬರ್ 11ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ಬಳಿ ನೆರೆಯಿತು. ಬೃಹತ್ ಸಂಖ್ಯೆಯಲ್ಲಿ ಆಗಮಿಸಿದ ಒಳಮೀಸಾತಿ ಬೇಡಿಕೆಯ ಹೋರಾಟಗಾರರ ಜೊತೆಗೆ ಸಾಮಾಜಿಕ ನ್ಯಾಯದ ಬಗ್ಗೆ ನಂಬಿಕೆಯುಳ್ಳ ಸಾವಿರಾರು ಜನ ಸೇರಿಕೊಂಡರು. ಒಳಮೀಸಲಾತಿ ನೀತಿಯನ್ನು ಬರಲಿರುವ ಚಳಿಗಾಲದ ಬೆಳಗಾವಿ ಅಧಿವೇಶನದಲ್ಲಿ ಮಂಡಿಸಿ, ಸದಾಶಿವ ಆಯೋಗದ ವರದಿಯ ಶಿಫಾರಸ್ಸುಗಳನ್ನು ಕೂಡಲೇ ಜಾರಿ ಮಾಡುವಂತೆ ಹೋರಾಟಗಾರರು ಸರ್ಕಾರಕ್ಕೆ ಆಗ್ರಹಿಸಿದರೂ, ಹಿಂದಿನ ಸರ್ಕಾರಗಳು ಅನುಸರಿಸಿದ್ದ ದಮನ ಮತ್ತು ಕಣ್ಣೊರೆಸುವ ತಂತ್ರಗಳಿಗೇ ಸದರಿ ಸರ್ಕಾರವೂ ಮೊರೆಹೋಗಿರುವುದು ದುರಂತ.

ಬಾಬಾಸಾಹೇಬರು ಭಾರತದ ಜಾತಿ ವ್ಯವಸ್ಥೆಯನ್ನು ಶ್ರೇಣೀಕೃತ ಅಸಮಾನತೆ ಎಂದದ್ದು ಈ ವ್ಯವಸ್ಥೆಯ ಎಲ್ಲಾ ಹಂತಗಳಿಗೂ ಅನ್ವಯವಾಗುತ್ತದೆ. ಆದರೆ ಅದರ ಬಗ್ಗೆ ಈ ದೇಶದ ಜನಸಾಮಾನ್ಯರಿಗೆ ತಿಳಿವು ಮೂಡಿಸುವ ಕೆಲಸಗಳು ಆದದ್ದು ಅತ್ಯಲ್ಪ. ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಹಿಂದುಳಿದ ಹಾಗೂ ಈ ವ್ಯವಸ್ಥೆ ಅಸ್ಪೃಶ್ಯ ಎಂದು ಶೋಷಿಸಿದ್ದ ಸಮುದಾಯಗಳಿಗೆ ಒಂದು ಮಟ್ಟದ ಪರಿಣಾಮಕಾರಿ ಎನ್ನಬಹುದಾದ ಮೀಸಲಾತಿ ಕಲ್ಪಿಸಲು ಮಂಡಲ್ ಆಯೋಗ ರಚಿಸಿ, ಅದು ಶಿಫಾರಸ್ಸು ನೀಡಿ, ನೂರಾರು ಅಡೆತಡೆಗಳನ್ನು ದಾಟಿ, ಜಾರಿಮಾಡಲು 90ರ ದಶಕದವರೆಗೆ ಕಾಯಬೇಕಾಯ್ತು. ಅದು ಕೂಡ ಸಮರ್ಪಕವಾದ ಸಾಮಾಜಿಕ ನ್ಯಾಯವನ್ನು ಒದಗಿಸಲು ಸಾಧ್ಯವಾಗಿಲ್ಲ ಮತ್ತು ಶಿಕ್ಷಣ-ಉದ್ಯೋಗ-ರಾಜಕೀಯ ಕ್ಷೇತ್ರಗಳಲ್ಲಿ ಪ್ರಾತಿನಿಧ್ಯವನ್ನು ಸರಿಪಡಿಸಲಾಗಿಲ್ಲ ಎಂಬ ಅಧ್ಯಯನಗಳು ಮೂಡಿಬರುತ್ತಲೇ ಇವೆ. ಪ್ರಾತಿನಿಧ್ಯ ಮತ್ತು ಸಾಮಾಜಿಕ ನ್ಯಾಯ ಇನ್ನೂ ಸಾಕಾರಗೊಂಡಿಲ್ಲದಿರುವಾಗಲೇ, ಮೀಸಲಾತಿ ಕಲ್ಪನೆಯನ್ನು ಬುಡಮೇಲು ಮಾಡುವಂತಹ, ಮೇಲ್ಜಾತಿಗಳ ಪ್ರಾತಿನಿಧ್ಯವನ್ನು ಇನ್ನಷ್ಟು ಹೆಚ್ಚಿಸುವ ಹುನ್ನಾರದ ಇಡಬ್ಲ್ಯುಎಸ್ ಮೀಸಲಾತಿಯನ್ನು ಮೋದಿ ಸರ್ಕಾರ ಜಾರಿಗೆ ತಂದಿದೆ. ಸಂಸತ್ತಿನಲ್ಲಿ ಯಾವ ಚರ್ಚೆಯನ್ನೂ ಮಾಡದೆ ಸುಗ್ರೀವಾಜ್ಞೆ ಮೂಲಕ ಇದನ್ನು ಜಾರಿ ಮಾಡಿ ಸುಪ್ರೀಂ ಕೋರ್ಟ್‌ನ ಪರೀಕ್ಷೆಯನ್ನೂ ಪಾಸು ಮಾಡಿಸಲಾಗಿದೆ. ಆದರೆ ಪರಿಶಿಷ್ಟ ಜಾತಿ ಮೀಸಲಾತಿಯಲ್ಲಿ ತೀರ ಹಿಂದುಳಿದ ಸಮುದಾಯಗಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ದೇಶದಾದ್ಯಂತ ನಡೆದ ಚಳವಳಿಗಳಿಗೆ ರಾಜಕೀಯ ಪಕ್ಷಗಳು, ಸರ್ಕಾರಗಳು, ಕೋರ್ಟ್‌ಗಳು ಎಲ್ಲವೂ ತಮ್ಮತಮ್ಮ ಅಧಿಕಾರ ಮಿತಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಅಡ್ಡಿಪಡಿಸುತ್ತಿವೆ.

ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಒಳಮೀಸಲಾತಿ ಜಾರಿಗೊಳಿಸುತ್ತೇವೆ: ಸಿದ್ದರಾಮಯ್ಯ

ಕರ್ನಾಟಕದ ಉದಾಹರಣೆಯನ್ನೇ ನೋಡುವುದಾದರೆ, ಒಳಮೀಸಲಾತಿಗಾಗಿ ರಚಿಸಿದ ಆಯೋಗ ಅಧ್ಯಯನ ನಡೆಸಿ ವರದಿ ನೀಡಲು ಹಲವು ವರ್ಷಗಳ ಕಾಲ ಹಿಡಿಯಿತು. ಸದಾಶಿವ ಆಯೋಗ ವರದಿಯ ಸಾರ್ವಜನಿಕ ಚರ್ಚೆಗೂ ಅನುವು ಮಾಡಿಕೊಡದೆ ಹತ್ತಾರು ವರ್ಷಗಳ ಕಾಲ ಕತ್ತಲಲ್ಲಿ ಇಡಲಾಯಿತು. ಅದರಲ್ಲಿ ಏನಾದರು ಬದಲಾವಣೆ ಬೇಕಿದ್ದರೆ ಸುಲಭವಾಗಿ ಪರಿಹರಿಸಿಕೊಳ್ಳುವ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಲಾಯಿತು. ಉಪಸಮಿತಿಗಳನ್ನು ರಚಿಸುವ ನೆಪದಲ್ಲಿ ಒಳಮೀಸಲಾತಿ ಜಾರಿಯನ್ನು ಅನಿರ್ಧಿಷ್ಟ ಕಾಲದವರೆಗೆ ಮುಂದೂಡುತ್ತಲೇ ಬರಲಾಯಿತು. ಸದರಿ ಬಸವರಾಜ ಬೊಮ್ಮಾಯಿ ಸರ್ಕಾರ ಕೂಡ ಇದೇ ತಂತ್ರವನ್ನು ಅನುಸರಿಸಿ ಆಕ್ರೋಶಕ್ಕೆ ಗುರಿಯಾಗಿದೆ. ಸಚಿವ ಜೆ.ಸಿ. ಮಾಧುಸ್ವಾಮಿ ಅಧ್ಯಕ್ಷತೆಯಲ್ಲಿ, ಸಚಿವರುಗಳಾದ ಗೋವಿಂದ ಕಾರಜೋಳ, ಎಸ್ ಅಂಗಾರ, ಪ್ರಭು ಚವ್ಹಾಣ್, ಕೆ ಸುಧಾಕರ್ ಅವರನ್ನೊಳಗೊಂಡ ಉಪಸಮಿತಿ ರಚಿಸಿ ಪರಿಶಿಷ್ಟ ಜಾತಿಗಳ ವರ್ಗೀಕರಣ ಕುರಿತು ಶಿಫಾರಸ್ಸುಗಳನ್ನು ನೀಡಲು ಹೇಳಿದೆ. ಆದರೆ ಇದಕ್ಕೆ ಸಮಯನ್ನು ನಿಗದಿಪಡಿಸಿರುವ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿಯಿಲ್ಲ. ಈಗಾಗಲೇ ತಮಿಳು ನಾಡು ರಾಜ್ಯದಲ್ಲಿ ಜಾರಿ ಮಾಡಿರುವ ಒಳ ಮೀಸಲಾತಿ ಮಾದರಿಯಲ್ಲಿ ಸದಾಶಿವ ಆಯೋಗದ ಶಿಫಾರಸ್ಸುಗಳನ್ನು ಅನುಸರಿಸಿ ಎಡಗೈ ಸಮುದಾಯದ ಬೇಡಿಕೆಯನ್ನು ಪೂರೈಸುವ ಸರಳ ಅವಕಾಶವನ್ನು ಹಿಂದಿನ ಹಲವು ಸರ್ಕಾರಗಳು ಕೈಚೆಲ್ಲಿದಂತಯೇ, ಸದರಿ ಬೊಮ್ಮಾಯಿ ಸರ್ಕಾರ ಕೂಡ ಈ ಬೇಡಿಕೆಯನ್ನು ವಿಳಂಬಿಸಲು ಮುಂದಾಗಿರುವುದು ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ, ಹೋರಾಟಗಾರರ ಮೇಲೆ ಪ್ರಕರಣಗಳನ್ನು ದಾಖಲಿಸಿ ಪೊಲೀಸ್ ಕ್ರಮಕ್ಕೆ ಮುಂದಾಗಿದ್ದೂ ಕೂಡ ಅಕ್ಷಮ್ಯ. ಪ್ರತಿಭಟನೆಯನ್ನು ಅನಿರ್ದಿಷ್ಟ ಕಾಲದವರೆಗೆ ನಡೆಸಲು ಹೋರಾಟಗಾರಾರರು ನಿರ್ಧರಿಸಿದ್ದಾರೆ.

ತಮಿಳುನಾಡಿನಲ್ಲಿ ನಡೆದ ಹಲವು ದಶಕಗಳ ಸುದೀರ್ಘ ಹೋರಾಟದ ನಂತರ 2008ರಲ್ಲಿ ಅಂದಿನ ಮುಖ್ಯಮಂತ್ರಿ ಎಂ. ಕರುಣಾನಿಧಿ, ನ್ಯಾಯಮೂರ್ತಿ ಜನಾರ್ಧನಂ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದ್ದರು. ಅದರ ಪ್ರಕಾರ ಅಲ್ಲಿ ಅರುಂಧತಿಯಾರ್ ಎಂಬ ಎಡಗೈ ಪರಿಶಿಷ್ಟ ಸಮುದಾಯಕ್ಕೆ 3% ಒಳಮೀಸಲಾತಿಯನ್ನು ಕಲ್ಪಿಸಿ ಜಾರಿ ಮಾಡಲಾಗಿದೆ. 2020ರಲ್ಲಿ ’ದ ಫೆಡೆರಲ್’ ಎಂಬ ಆನ್‌ಲೈನ್ ಸುದ್ದಿತಾಣದಲ್ಲಿ ಮಾಡಿದ್ದ ಒಂದು ವರದಿಯಲ್ಲಿ ಅರುಂಧತಿಯಾರ್ ಒಳಮೀಸಲಾತಿಗಾಗಿ ಹೋರಾಡಿದ್ದ ಅಥಿಯಮಾನ್ ಅವರು ಹೀಗೆ ಹೇಳುತ್ತಾರೆ: “ಒಳ ಮೀಸಲಾತಿಗೂ ಮುಂಚೆ ನಮ್ಮ ಸಮುದಾಯದಿಂದ ಪ್ರತಿ ವರ್ಷ ಕೇವಲ 20 ಜನ ಎಂಬಿಬಿಎಸ್ ಪದವೀಧರರು ಹೊರಬರುತ್ತಿದ್ದರು. ಆದರೆ ಒಳಮೀಸಲಾತಿ ಸಿಕ್ಕ ನಂತರ ಈ ಸಂಖ್ಯೆ 100ಕ್ಕೆ ಏರಿದೆ. ಹಾಗೆಯೇ, ಎಂಜಿನಿಯರ್‌ಗಳ ಸಂಖ್ಯೆ 35೦ರಿಂದ 1500ಕ್ಕೆ ಏರಿದೆ. ಈಗ ನಮ್ಮ ಸಮುದಾಯದಲ್ಲಿ ಸುಮಾರು 10 ಮೆಜೆಸ್ಟ್ರೆಟ್‌ಗಳು ಮತ್ತು ಸರ್ಕಾರಿ ಕಾಲೇಜುಗಳ 100 ಸಹ ಪ್ರಾಧ್ಯಾಪಕರಿದ್ದಾರೆ” ಎಂದು. ಆದರೆ ಈ ಒಳಮೀಸಲಾತಿಯನ್ನು 3%ಇಂದ 6%ಗೆ ಹೆಚ್ಚಿಸುವ ಹೋರಾಟ ಇನ್ನು ಮುಂದುವರಿದೇ ಇದೆ.

ಒಳಮೀಸಲಾತಿಯ ಒಂದು ಕ್ರಮ ಪ್ರಾತಿನಿಧ್ಯದಲ್ಲಿ ತರಬಹುದಾದ ಬದಲಾವಣೆಗೆ ಇದೊಂದು ಸಣ್ಣ ಉದಾಹರಣೆಯಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕದ ಮಾದಿಗ ಸಮುದಾಯದ ಕೂಗು ಸತತ ಸರ್ಕಾರಗಳ ಮತ್ತು ರಾಜಕಾರಣಿಗಳ ಕಿವುಡು ಕಿವಿಗಳಿಗೆ ಕೇಳಿಸುತ್ತಲೇ ಇಲ್ಲ. 101 ಸಮುದಾಯಗಳನ್ನು ಹೊಂದಿರುವ ಪರಿಶಿಷ್ಟ ಜಾತಿ ವರ್ಗದಲ್ಲಿ ಬರುವ ಎಲ್ಲ ಜಾತಿಗಳು ’ಏಕರೂಪ’ವಾದವು ಎಂಬ ತಿಳಿವಳಿಕೆ ಉಂಟುಮಾಡಿದ ಸಮಸ್ಯೆ ಜನಸಾಮಾನ್ಯರು, ಕೆಲವು ದಲಿತ ಮುಖಂಡರು, ರಾಜಕಾರಣಿಗಳು, ನ್ಯಾಯಾಧೀಶರು ಹೀಗೆ ಹಲವು ವಲಯಗಳನ್ನು ದಾರಿತಪ್ಪಿಸಿತ್ತು. ಅದಕ್ಕೆ ಒಂದು ಸಣ್ಣ ಉದಾಹರಣೆಯೆಂದರೆ, ಆಂಧ್ರ ಪ್ರದೇಶದಲ್ಲಿ ಮಾದಿಗ ಸಮುದಾಯಕ್ಕೆ ನೀಡಲಾಗಿದ್ದ ಒಳಮೀಸಲಾತಿ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬಂದಾಗ ನ್ಯಾಯಾಧೀಶರು ನೀಡಿದ್ದ ತೀರ್ಪು ಹೇಗೆ ಪರಿಶಿಷ್ಟ ವರ್ಗದ ಜಾತಿಗಳ ಬಗೆಗಿನ ಸಾಮಾಜಿಕ ಅಧ್ಯಯನಗಳನ್ನು ನಿರ್ಲಕ್ಷಿಸಿತ್ತೆಂಬುದು.

ಇದನ್ನೂ ಓದಿ: ಜಿಟಿಜಿಟಿ ಮಳೆಯ ನಡುವೆ ಮುಗಿಲು ಮುಟ್ಟಿದ ಜೈಭೀಮ್ ಘೋಷಣೆ: ಒಳಮೀಸಲಾತಿಗಾಗಿ ಹರಿದು ಬಂತು ಭೀಮಸಾಗರ

ಆಂಧ್ರದಲ್ಲಿ ಮಾದಿಗ ರಿಸರ್ವೇಶನ್ ಪೋರಾಟ ಸಮಿತಿ (ಎಂಆರ್‌ಪಿಎಸ್) ಮೊದಲ ಬಾರಿಗೆ ಎಸ್‌ಸಿ ವರ್ಗದಲ್ಲಿ ಮಾದಿಗ ಒಳಮೀಸಲಾತಿಯ ಬೇಡಿಕೆಯಿಟ್ಟಿತ್ತು. ಎಸ್‌ಸಿ ಪ್ರವರ್ಗದಲ್ಲಿ ಮೀಸಲಾತಿಯ ಹೆಚ್ಚಿನ ಉಪಯೋಗವನ್ನು ಮಾಲ ಸಮುದಾಯ ಪಡೆದುಕೊಳ್ಳುತ್ತಿತ್ತು. ಇದರಿಂದ ಅಂದಿನ ಆಂಧ್ರಪ್ರದೇಶ ಸರ್ಕಾರ ರಾಮಚಂದ್ರ ರಾಜು ಸಮಿತಿಯನ್ನು ರಚಿಸಿ ಎಸ್‌ಸಿ ಪಟ್ಟಿಯಲ್ಲಿರುವ ಸಮುದಾಯಗಳಿಗೆ ಮೀಸಲಾತಿ ಹೇಗೆ ಹಂಚಿಕೆಯಾಗಿದೆ ಎಂದು ಅಧ್ಯಯನ ಮಾಡಿ, ಅಸಮಾನತೆ ಸರಿಪಡಿಸಲು ಪರಿಹಾರ ಸೂಚಿಸಲು ಹೇಳಿತ್ತು. ಆಗ ಸಮಿತಿ ಎಸ್‌ಸಿ ಸಮುದಾಯಗಳನ್ನು ನಾಲ್ಕು ಪಂಗಡಗಳನ್ನಾಗಿ ಗುರುತಿಸಿ ಮಾದಿಗ ಸಮುದಾಯಕ್ಕೆ 7% ಒಳಮೀಸಲಾತಿಯನ್ನು ನಿಗದಿಪಡಿಸಿತು. ಇದನ್ನು ಜಾರಿಗೆ ತರಲು ಆಂಧ್ರ ಸರ್ಕಾರ ’ಆಂಧ್ರ ಪ್ರದೇಶ ಶೆಡ್ಯೂಲ್ಡ್ ಕ್ಯಾಸ್ಟ್ಸ್ (ರೇಶನಲೈಸೇಶನ್ ಆಫ್ ರಿಸರ್ವೇಶನ್) ಆಕ್ಟ್, 2000’ ಜಾರಿಗೆ ತಂತು. ಇದು ಆಂಧ್ರ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿ, ಐವರು ನ್ಯಾಯಾಧೀಶರ ಪೀಠ 4-1 ಆಧಾರದಲ್ಲಿ ಅರ್ಜಿಯನ್ನು ವಜಾಗೊಳಿಸತು. ಅರ್ಜಿದಾರ ಸುಪ್ರೀಂ ಕೋರ್ಟ್‌ನಲ್ಲಿ ಇದನ್ನು ಪ್ರಶ್ನಿಸಿದರು ’ಇ.ವಿ ಚೆನ್ನಯ್ಯ ವರ್ಸಸ್ ಸ್ಟೇಟ್ ಆಫ್ ಆಂಧ್ರಪ್ರದೇಶ’ ಪ್ರಕರಣದಲ್ಲಿ ಹೈಕೊರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ಹೊಡೆದುಹಾಕಿತು. ನ್ಯಾ. ಸಂತೋಷ್ ಹೆಗಡೆ, ನ್ಯಾ. ಎಸ್ ಬಿ ಸಿನ್ಹಾ, ನ್ಯಾ. ಎಚ್ ಕೆ ಸೇಮ ಅವರುಗಳನ್ನೊಳಗೊಂಡ ಪೀಠ ಪರಿಶಿಷ್ಟ ಜಾತಿ ವರ್ಗ ’ಏಕರೂಪ’ದ ಜಾತಿಗಳನ್ನು ಒಳಗೊಂಡಿರುವ ಸಮುದಾಯ ಎಂದು ಪರಿಗಣಿಸಿ ಪರಿಶಿಷ್ಟರಲ್ಲಿ ಇರುವ ಸಾಮಾಜಿಕ ಅಸಮಾನತೆಗೆ ಕಣ್ಣುಮುಚ್ಚಿತು. ಇನ್ನೂ ಹಲವು ವರ್ಷಗಳ ಕಾಲ ಒಳಮೀಸಲಾತಿಯ ಹಿನ್ನೆಡೆಗೆ ಕಾರಣವಾಯಿತು.

ಮಹಾರಾಷ್ಟ್ರದಲ್ಲಿ ಮಾಂಗ್ ಮತ್ತು ಮಹಾರ್ ಸಮುದಾಯಗಳ ನಡುವೆ, ಪಂಜಾಬ್‌ನಲ್ಲಿ ಮಝಾಬಿ ಮತ್ತು ರಾಮ್‌ದಾಸಿ ಹಾಗೂ ಚಮಾರ್ ಸಮುದಾಯಗಳ ನಡುವೆ, ತಮಿಳುನಾಡಿನಲ್ಲಿ ಅರುಂಧತಿಯಾರ್ ಮತ್ತು ಪಲ್ಲಾರ್ ಹಾಗೂ ಪರಾಯಾರ್ ಸಮುದಾಯಗಳ ನಡುವೆ, ಕರ್ನಾಟಕದಲ್ಲಿ ಮಾದಿಗ ಮತ್ತು ಹೊಲೆಯ ಹಾಗು ಎಸ್‌ಸಿಯಲ್ಲಿ ಸೇರಿರುವ ಹಲವು ಸ್ಪೃಶ್ಯ ಸಮುದಾಯಗಳ ನಡುವೆ ಇರುವಂತೆಯೇ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಗಳು ಢಾಳವಾಗಿವೆ. ಇದನ್ನು ಈಗಾಗಲೇ ಹಲವು ಅಧ್ಯಯನಗಳು ಗುರುತಿಸಿದ್ದು ಉಳಿದ ಸಮುದಾಯಗಳಿಗೆ ತಿಳಿವಳಿಕೆ ನೀಡುವ ಕೆಲಸಗಳು ನಡೆಯಬೇಕಿದೆ. ಆದರೆ ಅದಕ್ಕೂ ಮೊದಲು ಒಳಮೀಸಲಾತಿಯನ್ನು ಜಾರಿ ಮಾಡಿ ನಂತರ ಮುಂದಿನ ಕೆಲಸಗಳನ್ನು ಮಾಡುವುದು ಸೂಕ್ತ.

ಇದನ್ನೂ ಓದಿ: ರಕ್ತವನ್ನು ಚೆಲ್ಲುತ್ತೇವೆ, ಒಳಮೀಸಲಾತಿ ಪಡೆಯುತ್ತೇವೆ: ಬೆಂಗಳೂರಿನಲ್ಲಿ ಭೀಮಸೈನಿಕರ ಘರ್ಜನೆ

ಈ ಹೋರಾಟದ ಹಿನ್ನೆಲೆಯಲ್ಲಿಯೇ ನ್ಯಾ. ಸದಾಶಿವ ಆಯೋಗದ ಶಿಫಾರಸ್ಸುಗಳನ್ನು ಅವೈಜ್ಞಾನಿಕ ಮತ್ತು ಅವಾಸ್ತವಿಕ ಎಂದು ಕರೆದು ಅದನ್ನು ವಿರೋಧಿಸಲು ಭೋವಿ, ಬಂಜಾರ, ಕೊರಚ, ಕೊರಮ ಮತ್ತು ಚಲವಾದಿ ಸಮುದಾಯಗಳ ಮುಖಂಡರ ಸಭೆಯನ್ನು ಕರೆಯಲಾಗಿದೆ ಎಂಬ ಒಂದು ವಾಟ್ಸ್‌ಆಪ್ ಸಂದೇಶ ಹರಿದಾಡುತ್ತಿದೆ. ಈ ಸಭೆಯಲ್ಲಿ ಈ ಸಮುದಾಯದ ಮುಖಂಡರಿಗೆ ಯಾರಾದರೂ ಹಿರಿಯರು ವಾಸ್ತವ ಅಂಕಿಅಂಶಗಳನ್ನು ಒದಗಿಸಿ ಅವರ ನಿಲುವನ್ನು ಬದಲಿಸುವಂತೆ ಮಾಡುತ್ತಾರೆ ಎಂದು ಆಶಿಸೋಣ. ಹಾಗೆಯೇ ಈ ಎಲ್ಲಾ ಸಮುದಾಯಗಳು ಒಳಮೀಸಲಾತಿಯನ್ನು ಜಾರಿಮಾಡಲು ತುಂಬು ಹೃದಯದಿಂದ ಆಗ್ರಹಿಸುತ್ತವೆ ಎಂದು ಆಶಿಸೋಣ. ಪ್ರಾತಿನಿಧ್ಯವನ್ನು ಶ್ರೇಣೀಕರಣದ ಕಟ್ಟಕಡೆಯ ಸಮಾಜದವರೆಗೆ ವಿಸ್ತರಿಸುವವರೆಗೂ ಮೀಸಲಾತಿಯ ನಿಜ ಕಲ್ಪನೆ ಪೂರ್ಣಪ್ರಮಾಣದಲ್ಲಿ ಸಾಕಾರಗೊಳ್ಳುವುದಿಲ್ಲ. ಈ ನಿಟ್ಟಿನಲ್ಲಿ ಸಾಮಾಜಿಕ ನ್ಯಾಯದ ಪ್ರತಿನಿಧಿಗಳು ತಾವೆಂದು ಹೇಳಿಕೊಳ್ಳುವ ಕಾಂಗ್ರೆಸ್ ಪಕ್ಷದ ಸರ್ಕಾರಗಳಾದರೂ ಧೃಢ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಮೀಸಲಾತಿಯನ್ನು ಸಾಮಾನ್ಯವಾಗಿ ವಿರೋಧಿಸಿಕೊಂಡು ಬಂದಿದ್ದ ಸಂಘ ಪರಿವಾರ ಮತ್ತು ಬಿಜೆಪಿ ತನ್ನ ರಾಜಕೀಯ ಅವಕಾಶವಾದಕ್ಕಾಗಿ ಒಳಮೀಸಲಾತಿಯ ಬಗ್ಗೆ ಒಲವು ತೋರಿ ಈಗ ಮೂಗಿಗೆ ತುಪ್ಪ ಸವರುವ ಆಟವಾಡುತ್ತಿದೆ. ಅದೇ ಸಮಯದಲ್ಲಿ ಹೋರಟಗಾರರು ಕೂಗು ಜೋರಾಗುತ್ತಿದೆ. ಇತರ ಸಮುದಾಯಗಳು ಈ ಕೂಗಿಗೆ ತಮ್ಮ ಧ್ವನಿಯನ್ನು ಸೇರಿಸಿ, ಸದರಿ ಸರ್ಕಾರ ಕೂಡಲೇ ಒಳಮೀಸಲಾತಿ ಜಾರಿ ಮಾಡುವ ನಿರ್ಧಾರ ತೆಗೆದುಕೊಳ್ಳುವಂತೆ ಒತ್ತಡ ಹೇರಬೇಕಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...