Homeಚಳವಳಿರಕ್ತವನ್ನು ಚೆಲ್ಲುತ್ತೇವೆ, ಒಳಮೀಸಲಾತಿ ಪಡೆಯುತ್ತೇವೆ: ಬೆಂಗಳೂರಿನಲ್ಲಿ ಭೀಮಸೈನಿಕರ ಘರ್ಜನೆ

ರಕ್ತವನ್ನು ಚೆಲ್ಲುತ್ತೇವೆ, ಒಳಮೀಸಲಾತಿ ಪಡೆಯುತ್ತೇವೆ: ಬೆಂಗಳೂರಿನಲ್ಲಿ ಭೀಮಸೈನಿಕರ ಘರ್ಜನೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಂದು ನಮ್ಮ ಹಕ್ಕೊತ್ತಾಯ ಆಲಿಸುವವರೆಗೂ ನಾವು ಮನೆಗಳಿಗೆ ಹೋಗುವುದಿಲ್ಲ. ಡಿಸೆಂಬರ್ 28ರವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ...

- Advertisement -
- Advertisement -

ರಕ್ತವನ್ನು ಚೆಲ್ಲುತ್ತೇವೆ – ಒಳಮೀಸಲಾತಿ ಪಡೆಯುತ್ತೇವೆ, ಹಂಚಿ ತಿನ್ನುವುದು ಅಂಬೇಡ್ಕರ್ ವಾದ – ಕಿತ್ತು ತಿನ್ನುವುದು ಮನುವಾದ, ಸರ್ವರಿಗೂ ಸಮಪಾಲು -ಸರ್ವರಿಗೂ ಸಮಬಾಳು, ಮೀಸಲಾತಿ ವರ್ಗೀಕರಣ ಆಗಲೇಬೇಕು, ಸದಾಶಿವ ಆಯೋಗದ ವರದಿ ಚರ್ಚೆಯಾಗಲಿ ಮತ್ತು ಜಾರಿಯಾಗಲಿ.. ಜೈ ಮಾದಿಗ, ಜೈ ಜೈ ಮಾದಿಗ… ಇವು ಇಂದು ಬೆಂಗಳೂರಿನಲ್ಲಿ ಭೀಮಸಾಗರದಲ್ಲಿ ಮೊಳಗಿದ ಘೋಷಣೆಗಳು.

‘ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿ’ ಹಮ್ಮಿಕೊಂಡಿದ್ದ ಸಾಮಾಜಿಕ ನ್ಯಾಯಕ್ಕಾಗಿ ಒಳಮೀಸಲಾತಿ ಜಾರಿಯಾಗಲಿ ಹೋರಾಟಕ್ಕೆ ರಾಜ್ಯದ ಮೂಲೆ-ಮೂಲೆಗಳಿಂದ  ಶೋಷಿತ ಸಮುದಾಯಗಳ ಜನಸಾಗರವೇ ಹರಿದುಬಂದಿತ್ತು. ಸಹಸ್ರಾರು ಜನರ ಒಡಲಾಳದ ಕಿಚ್ಚು ಪ್ರವಾಹವಾಗಿ ಹರಿಯಿತು. ಮಳೆ-ಚಳಿ-ಗಾಳಿಯನ್ನು ಲೆಕ್ಕಿಸದೆ ಹಾಡುತ್ತ, ಕುಣಿಯುತ್ತ, ಘೋಷಣೆ ಕೂಗುತ್ತಾ ಒಳ ಮೀಸಲಾತಿ ಜಾರಿಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಕ್ರಾಂತಿವೀರ ಸಂಗೊಳ್ಳಿ ರೈಲು ನಿಲ್ದಾಣದಿಂದ ಮೆರವಣಿಗೆ ಹೊರಟು ಫ್ರೀಡಂ ಪಾರ್ಕ್ ಎದುರಿನ ರಸ್ತೆಯಲ್ಲಿ ಸಮಾವೇಶಗೊಳ್ಳಲಾಯಿತು. ಹಿರಿಯ ಹೋರಾಟಗಾರ ಅಂಬಣ್ಣ ಅರೋಲಿಕರ್‌ರವರ ನೇತೃತ್ವದಲ್ಲಿ ನವೆಂಬರ್ 28ರಿಂದ ಹರಿಹರದಲ್ಲಿರುವ ದಸಸಂ ಸಂಸ್ಥಾಪಕರಾದ ಬಿ.ಕೃಷ್ಣಪ್ಪನವರ ಚೈತ್ಯಭೂಮಿಯಿಂದ ಪಾದಯಾತ್ರೆ ಹೊರಟಿದ್ದ ನೂರಕ್ಕೂ ಹೆಚ್ಚು ಪಾದಯಾತ್ರಿಗಳು ಹೋರಾಟದ ಸಾಗರ ಸೇರಿಕೊಂಡರು.

ಅಂಬೇಡ್ಕರ್‌ರವರ ಹಾಡು ಹಾಡುವ ಮೂಲಕ ಹೋರಾಟಕ್ಕೆ ಚಾಲನೆ ನೀಡಿ ಮಾತನಾಡಿದ ಅಂಬಣ್ಣನವರು, “ನೊಂದ ಜನರು ಮೂರು ದಶಕದಿಂದ ಒಳಮೀಸಲಾತಿಗಾಗಿ ಹೋರಾಡುತ್ತಿದ್ದಾರೆ. ಆದರೆ ಮೂರು ಪಕ್ಷಗಳು ಆಶ್ವಾಸನೆ ನೀಡಿದವು ಹೊರತು, ಜಾರಿ ಮಾಡಲಿಲ್ಲ. ಜಸ್ಟೀಸ್ ಸದಾಶಿವ ಆಯೋಗವನ್ನು ಕಾಂಗ್ರೆಸ್ ಸರ್ಕಾರ ನೇಮಿಸಿತು. ಬಿಜೆಪಿ ಸರ್ಕಾರ ಅದಕ್ಕೆ ಅನುದಾನ ನೀಡಿತು. ಜೆಡಿಎಸ್ ತನ್ನ ಪ್ರಣಾಳಿಕೆಯಲ್ಲಿ ಒಳಮೀಸಲಾತಿ ಜಾರಿಗೊಳಿಸುವುದಾಗಿ ಹೇಳಿಕೊಂಡಿತು. ಆದರೆ ಯಾರೂ ಸಹ ವರದಿಯನ್ನು ಬಿಡುಗಡೆ ಮಾಡಲಿಲ್ಲ, ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಈಗ ಮತ್ತೊಂದು ಚುನಾವಣೆ ಬಂದಿದೆ. ನಿಮ್ಮ ಭರವಸೆಗಳು ಸಾಕು. ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಿ ಹಾಗೂ ಕೇಂದ್ರ ಸರ್ಕಾರವು ಸಂವಿಧಾನದ ಅನುಚ್ಛೇದ 341(3)ಕ್ಕೆ ತಿದ್ದುಪಡಿ ತರಬೇಕು. ಆಗ ನಾವು ವೋಟು ಯಾರಿಗಾಗಬೇಕೆಂದು ತೀರ್ಮಾನ ಮಾಡ್ತೀವಿ. ಇಲ್ಲದಿದ್ದರೆ ನೋಟಾ ಒತ್ತಬೇಕಾಗುತ್ತದೆ” ಎಂದು ಎಚ್ಚರಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಂದು ನಮ್ಮ ಹಕ್ಕೊತ್ತಾಯ ಆಲಿಸುವವರೆಗೂ ನಾವು ಮನೆಗಳಿಗೆ ಹೋಗುವುದಿಲ್ಲ. ಡಿಸೆಂಬರ್ 28ರವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ ಎಂದರು.

ಹರಿಹರದಿಂದ ಪಾದಯಾತ್ರೆಯಲ್ಲಿ ಭಾಗವಹಿಸಿರುವ ಮಾದಿಗ ರಕ್ಷಣಾ ವೇದಿಕೆ ಮತ್ತು ಕರ್ನಾಟಕ ಜನಶಕ್ತಿಯ ಮುಖಂಡರಾದ ಕರಿಯಪ್ಪ ಗುಡಿಮನಿಯವರು ಮಾತನಾಡಿ, “ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಲ್ಲಿ ಬಂದು ನಮ್ಮನ್ನು ಸಮಾಧಾನ ಮಾಡಿದರೆ ಪ್ರಯೋಜನವಾಗದು. ವಿಧಾನಸೌಧದಲ್ಲಿ ಕೊಳೆಯುತ್ತಿರುವ ಸದಾಶಿವ ಆಯೋಗದ ವರದಿಯ ಗಂಟು ಬಿಚ್ಚಬೇಕು. ಆ ಕುರಿತು ಚರ್ಚೆ ನಡೆದು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು. ನೊಂದ ಜನರಿಗೆ ನ್ಯಾಯ ಸಿಗಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ” ಎಂದರು.

ಆರ್ ಮೋಹನ್‌ರಾಜ್‌ರವರು ಮಾತನಾಡಿ, “ಬಾಬಾಸಾಹೇಬರ ಆಶಯ ಸಾಮಾಜಿಕ ನ್ಯಾಯ. ಶೋಷಣೆಗೆ ಒಳಗಾದವರಿಗೆ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಸಿಗಬೇಕು ಎಂಬುದಾಗಿದೆ. ಆದರೆ ಮೂರು ಪರ್ಸೆಂಟ್ ಇರುವ ಜನರಿಗೆ 10% ಇಡಬ್ಲೂಎಸ್ ಮೀಸಲಾತಿಯನ್ನು ಏಕಾಏಕಿ ಜಾರಿಗೊಳಿಸಲಾಗಿದೆ. 25 % ಇರುವ ನಾವು ಹಂಚಿಕೊಳ್ಳುತ್ತೇವೆ, ಮೀಸಲಾತಿ ವರ್ಗೀಕರಣ ಮಾಡಿ ಎಂದರೆ ಮೀನಾಮೇಷ ಎಣಿಸಲಾಗುತ್ತಿದೆ” ಎಂದು ಕಿಡಿಕಾರಿದರು.

ಸರ್ಕಾರದ ಒಡೆದು ಆಳುವ ನೀತಿಗೆ ವಿರುದ್ಧವಾಗಿ ನಮ್ಮ ಹೋರಾಟ ನಡೆಯುತ್ತಿದೆ. ಮೀಸಲಾತಿ ವರ್ಗೀಕರಣದ ಮೂಲಕ ಅನ್ಯಾಯವಾದ ಸಮುದಾಯಕ್ಕೆ ಸಮಪಾಲು ದಕ್ಕಬೇಕು. ಒಳ ಮೀಸಲಾತಿಗಾಗಿ ರಾಜಕೀಯ ಪಕ್ಷಗಳು ಸಬ್‌ ಕಮಿಟಿ ರಚಿಸುವುದು ನಮಗೆ ಬೇಕಾಗಿಲ್ಲ. ಬದಲಾಗಿ ಮುಂಬರುವ ಅಧಿವೇಶನದಲ್ಲಿ ಘೋಷಣೆ ಮಾಡಬೇಕು, ಎಲ್ಲಾ ಪಕ್ಷಗಳು ಸರ್ವಾನುಮತದಿಂದ ಅಂಗೀಕರಿಸಬೇಕು. ಸುಳ್ಳು ಜಾತಿ ಪತ್ರ ಪಡೆದವರಿಗೆ ಕಠಿಣ ಶಿಕ್ಷೆಯಾಗಬೇಕು, ಪಿಟಿಸಿಎಲ್ ಕಾಯ್ದೆ ಬಲಪಡಿಸಬೇಕು ಎಂದು ಒತ್ತಾಯಿಸಿದರು.

ದಲಿತ ಶಾಸಕರು, ಸಂಸದರು, ರಾಜಕಾರಣಿಗಳನ್ನು ತರಾಟೆಗೆ ತೆಗೆದುಕೊಂಡ ಅವರು, ಹರಿದಿರುವ ಚಡ್ಡಿ ಹೊತ್ತು ಓಡಾಡುವುದನ್ನು ನಿಲ್ಲಿಸಿ… ನಮ್ಮ ನ್ಯಾಯಯುತ ಪಾಲು ಪಡೆಯಲು ಹೋರಾಡಿ. ಇಲ್ಲದಿದ್ದರೆ ಪಾಠ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿಯ ಕಾರ್ಯದರ್ಶಿ ಎಸ್ ಮಾರಪ್ಪನವರು, ವೆಂಕಟಗಿರಿಯಯ್ಯನವರು, ಬಿ.ಆರ್ ಭಾಸ್ಕರ್ ಪ್ರಸಾದ್, ಬಸವರಾಜ್ ಕೌತಾಳ್, ದಾನಪ್ಪ ಸಿ ನೀಲೋಗಲ್, ಎಂ.ಆರ್ ಭೇರಿ ಸೇರಿದಂತೆ ಹಲವು ಮುಖಂಡರು ಮಾತನಾಡಿದರು.

ಗೋ ಬ್ಯಾಕ್ ಸೋಮಣ್ಣ ಎಂದ ಪ್ರತಿಭಟನಾಕಾರರು

ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ವಸತಿ ಸಚಿವ ವಿ.ಸೋಮಣ್ಣ ಭೇಟಿ ನೀಡಿದರು.  ವೇದಿಕೆಯ ಹಿಂಭಾಗಕ್ಕೆ ಆಗಮಿಸಿದ ಅವರನ್ನು ವೇದಿಕೆಯ ಬಳಿ ಹೋಗಲು ಬಿಡದೆ ಪ್ರತಿಭಟನಾಕಾರರು ತಡೆದರು. ನೀವೇಕೆ ಬಂದೀರಿ? ನೀವು ನಮಗಾಗಿ ಏನು ಮಾಡಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಬೊಮ್ಮಾಯಿಯವರನ್ನು ಕರೆದುಕೊಂಡು ಬನ್ನಿ ಎಂದು ತಾಕೀತು ಮಾಡಿದರು. ಸುಮಾರು 15 ನಿಮಿಷ ಕಾದ ನಂತರ ಸೋಮಣ್ಣ ಪೊಲೀಸರ ಸಹಾಯದೊಂದಿಗೆ ಜನರ ವಿರೋಧದ ನಡುವೆಯೂ ವೇದಿಕೆ ಏರಿದರು. ಆದರೆ ಜನರು ಗೋ ಬ್ಯಾಕ್ ಸೋಮಣ್ಣ, ಸಿಎಂ ಬೊಮ್ಮಾಯಿ ಬರಲೇಬೇಕು ಎಂದು ಜೋರಾಗಿ ಘೋಷಣೆ ಕೂಗಿದರು. ಸೋಮಣ್ಣನವರು ಮಾತನಾಡಲು ಬಿಡದೇ ಜನರು ಜೋರಾಗಿ ಘೋಷಣೆ ಕೂಗುತ್ತಲೇ ಇದ್ದರು. ಕಡೆಗೆ ಸಚಿವ ಸೋಮಣ್ಣ ದಾರಿಕಾಣದೆ ವೇದಿಕೆ ಇಳಿದು ವಾಪಸ್ ಹೋದರು.

ಇದನ್ನೂ ಓದಿ; ಒಳಮೀಸಲಾತಿಯೇ ಸಾಮಾಜಿಕ ನ್ಯಾಯವಾಗುವ ಜಾಯಮಾನದಲ್ಲಿದ್ದೇವೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...