Homeಕರ್ನಾಟಕದಲಿತ ಮಹಿಳೆಗೆ ಥಳಿಸಿದ ಸಚಿವ ಸೋಮಣ್ಣರನ್ನು ಸಂಧಾನಕ್ಕೆ ಕಳಿಸ್ತೀರಾ? ಒಳಮೀಸಲಾತಿ ಹೋರಾಟಗಾರರ ಆಕ್ರೋಶ

ದಲಿತ ಮಹಿಳೆಗೆ ಥಳಿಸಿದ ಸಚಿವ ಸೋಮಣ್ಣರನ್ನು ಸಂಧಾನಕ್ಕೆ ಕಳಿಸ್ತೀರಾ? ಒಳಮೀಸಲಾತಿ ಹೋರಾಟಗಾರರ ಆಕ್ರೋಶ

- Advertisement -
- Advertisement -

ಒಳಮೀಸಲಾತಿ ಜಾರಿಗಾಗಿ ಹೋರಾಟ ತೀವ್ರವಾಗಿದ್ದು, ಬೆಂಗಳೂರಿನ ಫ್ರೀಡಂಪಾರ್ಕ್‌‌ಗೆ ಇಂದು ಹೋರಾಟಗಾರರು ಕಾಲಿಟ್ಟಿದ್ದಾರೆ. ಜಿಟಿಜಿಟಿ ಮಳೆಯನ್ನೂ ಲೆಕ್ಕಿಸದೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ ದಲಿತರು ಒಳಮೀಸಲಾತಿ ಜಾರಿಗಾಗಿ ಘೋಷಣೆ ಮೊಳಗಿಸಿದ್ದಾರೆ.

ಮೂವತ್ತು ವರ್ಷಗಳ ಹೋರಾಟಕ್ಕೆ ಯಾವುದೇ ಪಕ್ಷಗಳು ಸ್ಪಂದಿಸಲಿಲ್ಲ. ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಪಕ್ಷಗಳೆಲ್ಲವೂ ಭರವಸೆಯನ್ನು ನೀಡಿ ವಂಚಿಸಿದ್ದು ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ. ಒಳಮೀಸಲಾತಿ ಜಾರಿಗೊಳಿಸುವವರೆಗೂ ವಿರಮಿಸುವುದಿಲ್ಲ ಎಂದು ಹೋರಾಟಗಾರರು ಪಟ್ಟು ಹಿಡಿದಿದ್ದಾರೆ.

ಸುರಿವ ಮಳೆಯನ್ನೂ ಲೆಕ್ಕಿಸದೆ ಜೈಭೀಮ್‌, ಜೈ ದಲಿತ ಎಂಬ ಘೋಷಣೆಗಳನ್ನು ಕೂಗಿದ ಹೋರಾಟಗಾರರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸ್ಥಳಕ್ಕೆ ಬರಬೇಕು ಎಂದು ಆಗ್ರಹಿಸಿದರು.

ಸರ್ಕಾರದ ಪ್ರತಿನಿಧಿಯಾಗಿ ವಸತಿ ಸಚಿವ ವಿ.ಸೋಮಣ್ಣ ಆಗಮಿಸುವಾಗಿ ಹೇಳಿದ ಕೂಡಲೇ ನೆರೆದಿದ್ದ ಯುವಕರು, ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು. ಸಾವಿರಾರು ಸಂಖ್ಯೆಯಲ್ಲಿ ದಲಿತ ಸಮುದಾಯ ಸೇರಿದ್ದರೂ ಮುಖ್ಯಮಂತ್ರಿಯವರು ಬರುತ್ತಿಲ್ಲ ಎಂದು ಧಿಕ್ಕಾರ ಕೂಗಿದರು.

ಜೋರು ಮಳೆ ಆರಂಭವಾಗುವ ಮುನ್ನ ಸಚಿವ ವಿ.ಸೋಮಣ್ಣ ಅವರು ಫ್ರೀಡಂ ಪಾರ್ಕಿಗೆ ಬಂದರು. ಸಂಚಾರಿ ವೇದಿಕೆಯನ್ನು ಏರಿ ಸೋಮಣ್ಣ ಮಾತನಾಡಲಾರಂಭಿಸಿದರು. ಆದರೆ ಸೋಮಣ್ಣ ಮಾತು ಶುರು ಮಾಡಿದ ಕೂಡಲೇ ಗದ್ದಲು ಉಂಟಾಯಿತು. ಸೋಮಣ್ಣ ವೇದಿಕೆಯಿಂದ ಕೆಳಗಿಳಿಯಬೇಕು, ಮುಖ್ಯಮಂತ್ರಿ ಬರಬೇಕು ಎಂದು ಧಿಕ್ಕಾರ ಕೂಗಿದರು. ನೀಲಿ ಪತಾಕೆಗಳು ಹಾರಾಡತೊಡಗಿದವು.

“ಚಾಮರಾಜನಗರದಲ್ಲಿ ದಲಿತ ಮಹಿಳೆಗೆ ಥಳಿಸಿದ ಸಚಿವ ಸೋಮಣ್ಣನವರನ್ನು ನಮ್ಮೊಂದಿಗೆ ಮಾತನಾಡಲು ಕಳಿಸಲಾಗಿದೆ. ಇದೆಂಥಾ ಅಸಡ್ಡೆ. ಚಳಿ, ಮಳೆಯೆನ್ನದೆ ಹೋರಾಟ ಮಾಡುತ್ತಿದ್ದೇವೆ, ಮೂವತ್ತು ವರ್ಷಗಳಿಂದಲೂ ನಾವು ಹೋರಾಟ ನಡೆಸುತ್ತಲೇ ಇದ್ದೇವೆ. ಮುಖ್ಯಮಂತ್ರಿಯವರು ಬರಬೇಕೆಂಬ ಸಾಮಾನ್ಯ ಪ್ರಜ್ಞೆ ಇಲ್ಲವೇ? ಸೋಮಣ್ಣ ಅವರು ವಾಪಸ್ ತೆರಳಿ ಮುಖ್ಯಮಂತ್ರಿಯವರನ್ನು ಸ್ಥಳಕ್ಕೆ ಕಳುಹಿಸಬೇಕು” ಎಂದು ಹೋರಾಟಗಾರರು ಆಗ್ರಹಿಸಿದರು. “ಡೌನ್‌ ಡೌನ್‌ ಸೋಮಣ್ಣ” ಎಂಬ ಘೋಷಣೆಗಳನ್ನು ಜನರು ಕೂಗಿದರು.

ಬಂದ ದಾರಿಗೆ ಸುಂಕವಿಲ್ಲವೆಂಬಂತೆ, ಧಿಕ್ಕಾರಗಳಿಂದ ಮುಜುಗರಗೊಂಡ ಸೋಮಣ್ಣ ಅವರು ಸಂಚಾರಿ ವೇದಿಕೆಯಿಂದ ಕೆಳಗಿಳಿದು ಕಾರು ಹತ್ತಿದರು. ಸೋಮಣ್ಣ ವಾಪಸ್ ಆದ ಬಳಿಕ ಮತ್ತೆ ಜೈ ಭೀಮ್‌ ಘೋಷಣೆಗಳು ಮೊಳಗಿದವು. “ಒಳಮೀಸಲಾತಿ ಜಾರಿಯಾಗಲೇಬೇಕು” ಎಂಬ ಆಗ್ರಹ ಮುಗಿಲುಮುಟ್ಟಿತು. ಬಾಬಾ ಸಾಹೇಬ್ ಡಾ.ಬಿ.ಆರ್‌.ಅಂಬೇಡ್ಕರ್‌, ಬಾಬು ಜಗಜೀವನರಾಮ್‌, ಬಿ.ಕೃಷ್ಣಪ್ಪ ಅವರ ಚಿತ್ರಗಳನ್ನೊಳಗೊಂಡ ನೀಲಿ ಬಾವುಟಗಳು ಹಾರಾಡತೊಡಗಿದವು. ಒಂದೇ ಸಮನೇ ಘೋಷಣೆಗಳು ಮೊಳಗಿದವು.

ಮೋಹನ್‌ ರಾಜ್ ಮಾತನಾಡಿ, “ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ ಎಲ್ಲರೂ ಒಳಮೀಸಲಾತಿ ವಿಚಾರದಲ್ಲಿ ವಂಚನೆ ಮಾಡಿದ್ದಾರೆ. ತುರ್ತಾಗಿ ಎ.ಜೆ.ಸದಾಶಿವ ಆಯೋಗದ ವರದಿ ಜಾರಿಯಾಗಬೇಕು. ಪಿಟಿಸಿಎಲ್‌ ಕಾಯ್ದೆಗೆ ತಿದ್ದುಪಡಿ ತಂದು ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು” ಎಂದು ಒತ್ತಾಯಿಸಿದರು.

ಒಳಮೀಸಲಾತಿ ಜಾರಿಗಾಗಿ ನಡೆದ ಪಾದಯಾತ್ರೆಯ ಮುಂದಾಳತ್ವ ವಹಿಸಿದ್ದ ಅಂಬಣ್ಣ ಅರೋಲಿಕರ್‌ ಮಾತನಾಡಿ, “ಬಸವರಾಜ ಬೊಮ್ಮಾಯಿಯವರು ಬಂದು ನಮ್ಮ ಹಕ್ಕೋತ್ತಾಯಗಳನ್ನು ಆಲಿಸುವವರೆಗೂ ನಾವು ಮನೆಗಳಿಗೆ ಹೋಗಲ್ಲ” ಎಂದು ಗುಡುಗಿದರು.

ಹೋರಾಟಗಾರ ಕರಿಯಪ್ಪ ಗುಡಿಮನಿ ಮಾತನಾಡಿ, “ಮುಖ್ಯಮಂತ್ರಿ ಇಲ್ಲಿ ಬಂದು ಸಮಾಧಾನ ಮಾಡೋದಲ್ಲ. ವಿಧಾನಸೌಧದಲ್ಲಿ ಕೊಳೆಯುತ್ತಿರುವ ಸದಾಶಿವ ಆಯೋಗದ ವರದಿಯ ಗಂಟು ಬಿಚ್ಚಬೇಕು” ಎಂದು ಆಗ್ರಹಿಸಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...