(ಈ ವರದಿಯಲ್ಲಿ ಮಹಾಪ್ರಾಣ ಬಳಕೆ ಕಡಿತಗೊಳಿಸಲಾಗಿದೆ)
ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ವಾರ ಬಂದನಕ್ಕೊಳಗಾಗಿದ್ದ ಪತ್ರಕರ್‍ತ ಸಜಾದ್ ಗುಲ್ ಅವರನ್ನು ಕೂಡಲೇ ಬಿಡುಗಡೆ ಮಾಡುವಂತೆ ಕಾಶ್ಮೀರ ಪ್ರೆಸ್ ಕ್ಲಬ್ ಸೋಮವಾರ ಆಗ್ರಹಿಸಿದೆ. ಗುಲ್ ಅವರ ವಿರುದ್ದದ ಎಲ್ಲಾ ಪ್ರಕರಣಗಳನ್ನು ಕೈಬಿಡುವಂತೆ ಅದಿಕಾರಿಗಳಲ್ಲಿ ಪ್ರೆಸ್ ಕ್ಲಬ್ ಒತ್ತಾಯಿಸಿದೆ.
ಶ್ರೀನಗರದಲ್ಲಿ ಗುಂಡಿನ ಚಕಮಕಿಯಲ್ಲಿ ತಮ್ಮ ಸಂಬಂದಿಕರು ಸಾವನ್ನಪ್ಪಿದ ನಂತರ ಕುಟುಂಬವೊಂದು ಬಾರತ ವಿರೋದಿ ಗೋಶಣೆಗಳನ್ನು ಕೂಗಿತ್ತು. ಅದರ ವೀಡಿಯೊವನ್ನು ‘ಕಾಶ್ಮೀರ ವಾಲ್ಲಾ’ದಲ್ಲಿ ಉದ್ಯೋಗದಲ್ಲಿರುವ ಪತ್ರಕರ್‍ತ ಗುಲ್ ಪೋಸ್ಟ್ ಮಾಡಿದ್ದರು. ನಂತರ ಅವರನ್ನು ಬಂದಿಸಲಾಯಿತು.
ಜಮ್ಮು ಮತ್ತು ಕಾಶ್ಮೀರದಲ್ಲಿ ಸೋಮವಾರ (ಜನವರಿ 3) ಬದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಹತ್ಯೆಯಾದ ವ್ಯಕ್ತಿಯು ಶಂಕಿತ ಲಶ್ಕರ್-ಎ-ತೊಯ್ಬಾದ ಉಗ್ರನೆಂದು ಪೊಲೀಸರು ತಿಳಿಸಿದ್ದಾರೆ. ಶ್ರೀನಗರದ ಹೊರವಲಯದಲ್ಲಿರುವ ಹರ್ವಾನ್ ಪ್ರದೇಶದಲ್ಲಿ ಗುಂಡಿನ ಚಕಮಕಿ ನಡೆದಿತ್ತು. ಈ ಹತ್ಯೆಯ ವಿರುದ್ದ ನಡೆದ ಪ್ರತಿಬಟನೆಯ ವಿಡಿಯೊವನ್ನು ಗುಲ್ ಪೋಸ್ಟ್ ಮಾಡಿದ್ದರು.
ಗುಲ್ ವಿರುದ್ದ ಬಾರತೀಯ ದಂಡ ಸಂಹಿತೆಯ ಸೆಕ್ಶನ್ 120ಬಿ (ಅಪರಾದದ ಪಿತೂರಿ), 153ಬಿ (ಆರೋಪಗಳು, ರಾಶ್ಟ್ರೀಯ ಏಕೀಕರಣಕ್ಕೆ ಪೂರ್ವಾಗ್ರಹ ಉಂಟುಮಾಡುವುದು), 505ಬಿ (ಸಾರ್ವಜನಿಕರಿಗೆ ಬಯ ಅತವಾ ಎಚ್ಚರಿಕೆ) ಅಡಿಯಲ್ಲಿ ಪ್ರಕರಣ ದಾಕಲಿಸಲಾಗಿದೆ.
ಕಾಶ್ಮೀರ ಪ್ರೆಸ್ ಕ್ಲಬ್ ತನ್ನ ಹೇಳಿಕೆಯಲ್ಲಿ, “ಗುಲ್ ಬಂದನದಿಂದ ವಿಚಲಿತವಾಗುವಂತಾಗಿದೆ. ಕಾಶ್ಮೀರದಲ್ಲಿ ಪತ್ರಿಕೋದ್ಯಮವನ್ನು ಅಪರಾದೀಕರಿಸುವ ಗುರಿಯನ್ನು ಈ ಬಂದನವು ಹೊಂದಿದೆ” ಎಂದು ಅಬಿಪ್ರಾಯಪಟ್ಟಿದೆ.
ಕಾಶ್ಮೀರದಲ್ಲಿ ಪತ್ರಕರ್‍ತರ ಮೇಲೆ ಪೊಲೀಸರಿಂದಾಗುತ್ತಿರುವ ಕಿರುಕುಳ, ಕಾನೂನು ಕ್ರಮಗಳ ಕುರಿತು ಪತ್ರಕರ್‍ತರು ಆತಂಕ ವ್ಯಕ್ತಪಡಿಸಿದ್ದಾರೆ. ಮಾದ್ಯಮದ ಪ್ರತಿನಿದಿಗಳಿಗೆ ಬೆದರಿಕೆ, ಸಮನ್ಸ್ ನೀಡಲಾಗುತ್ತಿದೆ ಎಂಬ ಆಕ್ಶೇಪಗಳು ಬಂದಿವೆ.
2019ರಲ್ಲಿ ಸಂವಿದಾನದ 370ನೇ ವಿದಿಯನ್ನು ಕೇಂದ್ರ ಸರ್ಕಾರ ರದ್ದುಮಾಡಿದ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಪತ್ರಕರ್‍ತರು ಹೆಚ್ಚಿನ ಬೆದರಿಕೆ ಮತ್ತು ಕಿರುಕುಳವನ್ನು ಎದುರಿಸಿದ್ದಾರೆ ಎಂದು ವರದಿಯಾಗಿದೆ.
ಕಳೆದ ವರ್ಶದಿಂದ ಗುಲ್ ಅವರು ಅನೇಕ ಸಂದರ್ಬಗಳಲ್ಲಿ ಪೊಲೀಸರ ಕ್ರಮಗಳನ್ನು ಎದುರಿಸಿದ್ದಾರೆ ಎಂದು ವರದಿಗಳಾಗಿವೆ.
2021ರ ಪೆಬ್ರವರಿ 9ರಂದು ದಿ ಕಾಶ್ಮೀರ್ ವಾಲಾಗೆ ಬರೆದ ಲೇಖನದ ಕಾರಣಕ್ಕಾಗಿ “ಗಲಬೆ, ಅತಿಕ್ರಮಣ ಮತ್ತು ಹಲ್ಲೆ” ಆರೋಪವನ್ನು ಗುಲ್ ಮೇಲೆ ಹೊರಿಸಲಾಗಿದೆ ಎಂದು ವರದಿಯಾಗಿದೆ. ತಹಸೀಲ್ದಾರ್ ಹಾಜಿನ್ ಗುಲಾಮ್ ಮೊಹಮ್ಮದ್ ಬಟ್ ಅವರು ತೆರವು ಕಾರ್ಯಾಚರಣೆ ನಡೆಸಿ ಕಿರುಕುಳ ಮತ್ತು ಬೆದರಿಕೆ ಹಾಕುತ್ತಿದ್ದಾರೆ ಎಂದು ಬಂಡಿಪೋರಾದ ಗ್ರಾಮಸ್ಥರು ಆರೋಪಿಸಿದ್ದರು. ಈ ವರದಿಯನ್ನು ಗುಲ್ ಮಾಡಿದ್ದರು.
ವರದಿ ಹಾಗೂ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊಗೆ ಸಂಬಂದಿಸಿದಂತೆ ವಿಚಾರಣೆಗಾಗಿ ಬಂಡಿಪೋರಾ ಜಿಲ್ಲೆಯ ಹಾಜಿನ್ ಪೊಲೀಸ್ ಟಾಣೆಗೆ ಗುಲ್ ಅವರನ್ನು ಕರೆಸಲಾಗಿತ್ತು.
ಮೌಂಟೇನ್ ಇಂಕ್ ಮ್ಯಾಗಜೀನ್‌ನಲ್ಲಿ ಪ್ರಕಟವಾದ ವರದಿಯು ಗುಂಡಿನ ಚಕಮಕಿಯಲ್ಲಿ ಸಾವನ್ನಪ್ಪಿದ 25 ವರ್ಷದ ವ್ಯಕ್ತಿಯ ಕುರಿತ್ತಾಗಿತ್ತು. ಇಮ್ತಿಯಾಜ್ ಅಹ್ಮದ್ ಕಕ್ರೂ ನಿರಪರಾದಿಯಾಗಿದ್ದು, ‘ನಕಲಿ ಎನ್ಕೌಂಟರ್’ನಲ್ಲಿ ಅವರನ್ನು ಪೊಲೀಸರು ಕೊಂದಿದ್ದಾರೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದನ್ನು ಗುಲ್ ವರದಿ ಮಾಡಿದ್ದರು.
ಇದನ್ನೂ ಓದಿರಿ: ನಕಲಿ ಅಬಿಯಾನ, ದ್ವೇಶ ರಾಜಕಾರಣಕ್ಕೆ ಬಿಜೆಪಿ ಬಳಸಿದ ಅಪ್ಲಿಕೇಶನ್ ಹೆಸರು ‘Tek Fog’: ‘ದಿ ವೈರ್’ ಸ್ಪೋಟಕ ವರದಿ


