ಅಸ್ಸಾಂ ರಾಜ್ಯದಲ್ಲಿ ದಾಖಲೆ ಸಂಖ್ಯೆಯಲ್ಲಿ ಒಮೈಕ್ರಾನ್ ಹೆಚ್ಚುತ್ತಿರುವ ಮಧ್ಯೆ ರಾಜ್ಯ ಸರ್ಕಾರವು, ಕೊರೊನಾ ಲಸಿಕೆ ಪಡೆಯದ ಜನರನ್ನು ಸಾರ್ವಜನಿಕ ಪ್ರದೇಶಗಳಿಂದ ನಿಷೇಧಿಸಲು ನಿರ್ಧರಿಸಿದೆ. ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ‘ಲಸಿಕೆ ಹಾಕುವುದು ಕಡ್ಡಾಯವಲ್ಲ, ಆದರೆ ಲಸಿಕೆ ಹಾಕಲು ಇಚ್ಛಿಸದ ಜನರು ಮನೆಯಲ್ಲಿಯೇ ಇರಬೇಕು’ ಎಂದು ಹೇಳಿದ್ದಾರೆ.
“ಕೊರೊನಾ ವಿರುದ್ಧ ವ್ಯಾಕ್ಸಿನೇಷನ್ ಕಡ್ಡಾಯವಲ್ಲ. ಆದರೆ ಲಸಿಕೆ ಪಡೆಯದವರು ಸಭೆಗಳಿಗೆ ಹಾಜರಾಗಲು ಸಾಧ್ಯವಿಲ್ಲ. ಕಚೇರಿಗಳು ಮತ್ತು ರೆಸ್ಟೋರೆಂಟ್‌ಗಳಿಗೆ ಪ್ರವೇಶಿಸಲು ಸಾಧ್ಯವಿಲ್ಲ. ಲಸಿಕೆ ಹಾಕಲು ಇಷ್ಟಪಡದ ಜನರು ಮನೆಯಲ್ಲಿಯೇ ಇರಬಹುದು” ಎಂದು ಅವರು ಸೋಮವಾರ ಹೇಳಿದ್ದಾರೆ.
ರಾಜ್ಯದಲ್ಲಿ ಸೋಮವಾರದಂದು 6,982 ಹೊಸ ಕೊರೊನಾ ಪ್ರಕರಣ ದಾಖಲಾಗಿದೆ. ಇದು ರಾಜ್ಯದ ಇತಿಹಾಸದಲ್ಲೇ ದಾಖಲಾದ ಅತಿ ಹೆಚ್ಚಿನ ಏರಿಕೆಯಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಇದನ್ನೂ ಓದಿ:ಕೊರೊನಾ ಚಿಕಿತ್ಸೆ: ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ ಮಾಡಿದ ಆರೋಗ್ಯ ಸಚಿವಾಲಯ
ಆಸ್ಪತ್ರೆಗಳನ್ನು ಹೊರತುಪಡಿಸಿ, ಸಾರ್ವಜನಿಕ ಸ್ಥಳಗಳಾದ ರೆಸ್ಟೋರೆಂಟ್‌ಗಳು, ಮಾರುಕಟ್ಟೆಗಳು, ಮಾಲ್‌ಗಳು ಮತ್ತು ಇತರ ಸ್ಥಳಗಳಲ್ಲಿ ಕೊರೊನಾ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದುಕೊಳ್ಳದ ಜನರಿಗೆ ರಾಜ್ಯದಲ್ಲಿ ನಿಷೇಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎರಡು ಬಾರಿ ಲಸಿಕೆ ಹಾಕಿದ ಸರ್ಕಾರಿ ನೌಕರರು ಮಾತ್ರ ಕಚೇರಿಗಳಿಗೆ ಹಾಜರಾಗಲು ಸಾಧ್ಯವಾಗುತ್ತದೆ ಎಂದು ಅಧಿಕೃತ ಆದೇಶದಲ್ಲಿ ಹೇಳಲಾಗಿದೆ.
“ಅಸ್ಸಾಂನಲ್ಲಿ, ಅಗತ್ಯವಿದ್ದರೆ, ಕೊರೊನಾ ಲಸಿಕೆ ಪ್ರಮಾಣಪತ್ರವನ್ನು ತೋರಿಸಬೇಕಾಗುತ್ತದೆ. ಸಾರ್ವಜನಿಕ ವಿರೋಧಿ ಕೆಲಸವನ್ನು ನಾವು ಅನುಮತಿಸುವುದಿಲ್ಲ” ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಸೋಮವಾರ ರಾತ್ರಿ ರಾಜ್ಯದಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 23,948 ಕ್ಕೆ ಏರಿದೆ. ಸುಗ್ಗಿ ಹಬ್ಬದ ಆಚರಣೆ ನಂತರ ರಾಜ್ಯಾದ್ಯಂತ ಕೊರೊನಾ ಪ್ರಕರಣಗಳು ಹೆಚ್ಚಳವಾಗಿದೆ. ಕಳೆದ ಎರಡು ವಾರಗಳಲ್ಲಿ ಅಸ್ಸಾಂನಲ್ಲಿ 25,000 ಹೊಸ ಪ್ರಕರಣಗಳು ಪತ್ತೆಯಾಗಿವೆ.
ಇದನ್ನೂ ಓದಿ:ಕೊರೊನಾ ಸಾಂಕ್ರಾಮಿಕದಿಂದ ಮಾರಾಟದಲ್ಲಿ ದಾಖಲೆ ಬರೆದ ಡೋಲೊ-650


