Homeಪುಸ್ತಕ ವಿಮರ್ಶೆFurrows in a Field: ಜನಾಭಿಪ್ರಾಯ-ಗ್ರಹಿಕೆಗಳ ಆಚೆಗಿನ ದೇವೇಗೌಡ

Furrows in a Field: ಜನಾಭಿಪ್ರಾಯ-ಗ್ರಹಿಕೆಗಳ ಆಚೆಗಿನ ದೇವೇಗೌಡ

- Advertisement -
- Advertisement -

ಪತ್ರಕರ್ತ, ರಾಜಕೀಯ ವಿಶ್ಲೇಷಕ ಸುಗತ ಶ್ರೀನಿವಾಸರಾಜು ಅವರು ಬರೆದಿರುವ ಹಿರಿಯ ರಾಜಕಾರಣಿ ಎಚ್.ಡಿ ದೇವೇಗೌಡರ ಜೀವನಚರಿತ್ರೆ ‘Furrows in a Field- The Unexplored Life of H D Devegowda’ ಇಂದಿನ ಸಾಮಾಜಿಕ-ರಾಜಕೀಯ ಕಾಲಕ್ಕೆ ಬಹು ಅಗತ್ಯದ ಕೃತಿ.

ಮಾಧ್ಯಮಗಳು ತಮ್ಮ ವಿವಿಧ ತಂತ್ರಗಳ ಮೂಲಕ ಜನರ ಆಲೋಚನೆಗಳನ್ನೇ ನಿರ್ದೇಶಿಸುವ ಈ Post-Truth ಕಾಲಘಟ್ಟದಲ್ಲಿ, ಅವು ಜನರ ಮನಸ್ಸಿನಲ್ಲಿ ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಪಾಸಿಟಿವ್ ಅಥವಾ ನೆಗೆಟಿವ್ ಆಗಿ ನೆಲೆಯೂರಿಸಬಲ್ಲ ಸಾಮರ್ಥ್ಯವುಳ್ಳವು ಎಂಬುದನ್ನು ನಾವು ಗುರುತಿಸಬೇಕಿದೆ. ಈ ರೀತಿ ಮಾಧ್ಯಮಗಳಿಂದ ಜನಮಾನಸದಲ್ಲಿ ಬಹಳಷ್ಟು ಬಾರಿ ನೆಗೆಟಿವ್ ಆಗಿಯೇ ದಾಖಲಾದ ಮಾಜಿ ಪ್ರಧಾನಿ ದೇವೇಗೌಡರ ವ್ಯಕ್ತಿತ್ವದ ಹರವು, ಅಂತಹ ಪೂರ್ವಾಗ್ರಹಗಳ ಹಾಗೂ ಗ್ರಹಿಕೆಗಳ ಆಚೆಗೂ ಬಹಳಷ್ಟು ಇದೆ ಎಂಬುದಕ್ಕೆ, ಪತ್ರಕರ್ತರೊಬ್ಬರ ಸೂಕ್ಷ್ಮ ವಿಮರ್ಶಾತ್ಮಕ ಶೈಲಿಯ ಈ ಕೃತಿ ಬೆಳಕು ಚೆಲ್ಲುತ್ತದೆ. 550 ಪುಟಗಳಷ್ಟು ವಿಸ್ತಾರದ ಈ ಪುಸ್ತಕ, ದೇವೇಗೌಡರ ಜೀವನದ ಕಥೆಗಳ ಜೊತೆಗೆ ಆಯಾ ಕಾಲ-ಸನ್ನಿವೇಶಗಳ ರಾಜಕೀಯ-ಸಾಮಾಜಿಕ ಭಾರತದ ಒಂದು ವಿವರಣಾತ್ಮಕ ದಾಖಲೆ ಕೂಡ ಹೌದು. ನೈಜ ಸಾಧನೆ ಏನಿಲ್ಲದಿದ್ದರೂ ತನ್ನ ಇಮೇಜ್ ಕಾಪಾಡಿಕೊಳ್ಳಲು ಎಂತಹುದೇ ಪ್ರೊಪಗಾಂಡಾ ಬಳಸಲು ಲವಲೇಶವೂ ಹಿಂಜರಿಯದ ಇಂದಿನ ಪ್ರಧಾನಿಯವರನ್ನು ನೋಡಿದಾಗ, ಪಬ್ಲಿಕ್ ಪರ್ಸೆಪ್ಷನ್ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಳ್ಳದ, ಒಂದು ನಯಾಪೈಸೆಯನ್ನೂ ಅದಕ್ಕೆ ವಿನಿಯೋಗಿಸದ ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಹಲವು ಕುತೂಹಲದ ಮಾಹಿತಿಗಳನ್ನು ಸುಗತ ಇಲ್ಲಿ ಹೊರಹಾಕುತ್ತಾರೆ. ತನ್ನ ಮುಖಕ್ಕೆ ಬೆಳಕು ಸರಿಯಾಗಿ ಬೀಳುತ್ತಿದೆಯೇ, ತಾನು ಕ್ಯಾಮೆರಾವನ್ನು ಸಂಪೂರ್ಣವಾಗಿ ಆವರಿಸಿಬಿಟ್ಟಿದ್ದೇನೆಯೇ ಎಂಬುದನ್ನು ಕೂಡಾ ಕೂಲಂಕಷವಾಗಿ ಗಮನಹರಿಸುವ ರಾಜಕಾರಣಿಗಳಿರುವ ಈ ಕಾಲದಲ್ಲಿ, ತನ್ನದೇ ಜೀವನಚರಿತ್ರೆ ಇದಾಗಿದ್ದರೂ ಬಿಡುಗಡೆಗೆ ಮುಂಚೆ ಒಮ್ಮೆಯೂ ಪುಸ್ತಕದ ಹಸ್ತಪ್ರತಿಯನ್ನು ಓದುವುದು ಬಿಡಿ, ಅದನ್ನು ತನ್ನಲ್ಲಿ ಹಂಚಿಕೊಳ್ಳುವಂತೆಯೂ ಕೇಳಿಕೊಳ್ಳದ ದೇವೇಗೌಡರದು ಸೋಜಿಗದ ವ್ಯಕ್ತಿತ್ವವಾಗಿ ಇಂದು ಕಾಣುತ್ತದೆ!

ಟೈಟಲ್ ಸೂಚಿಸುವಂತೆ ಇಲ್ಲಿಯವರೆಗೂ ಅಜ್ಞಾತವಾಗಿ ಉಳಿದಿದ್ದ ದೇವೇಗೌಡರ ಬದುಕನ್ನು (unexplored life) ಕಾಲಾನುಕ್ರಮವಾಗಿ, ಬಹಳ ನಾಜೂಕಿನಿಂದ ದುರ್ಬೀನು ಹಾಕಿ ಹುಡುಕಿನೋಡುತ್ತದೆ ಈ ಕೃತಿ. ಪ್ರತಿಯೊಬ್ಬ ರಾಜಕೀಯದ ತಿಳಿವಳಿಕೆಯ ಇಚ್ಛಯುಳ್ಳ ವ್ಯಕ್ತಿ, ಅದರಲ್ಲೂ ನನ್ನಂತ 90ರ ದಶಕದಲ್ಲಿ ಹುಟ್ಟಿದ Millennial /Gen Z ಪೀಳಿಗೆಯವರು ಓದಲೇಬೇಕಾದ ಪುಸ್ತಕ ಇದು. ಇಲ್ಲದಿದ್ದರೆ, ದಕ್ಷಿಣ ಭಾರತದ ಬಡ ಗ್ರಾಮೀಣ ಪರಿಸರದ, ಶೂದ್ರ ಕುಟುಂಬದ ಒಬ್ಬ ವ್ಯಕ್ತಿ ಹೇಗೆ ಒಂದೊಂದೇ ರಾಜಕೀಯ ಮೆಟ್ಟಿಲುಗಳನ್ನು ಹತ್ತಿ, ಅತ್ಯುನ್ನತ ಪ್ರಧಾನಿ ಪಟ್ಟದವರೆಗೆ ತಲುಪಿ ಮುತ್ಸದ್ಧಿಯಾದರೆಂಬುದನ್ನು ತಿಳಿಯುವುದು ಸುಲಭವಲ್ಲ. ಹೆಚ್ಚಿನ ಜನರ ತಲೆಯಲ್ಲಿ ಬಿತ್ತಲಾಗಿರುವ ಮಾಧ್ಯಮ-ಉತ್ಪಾದಿತ (media-manufactured) ದೇವೇಗೌಡರ ಇಮೇಜ್ ಖಂಡಿತ ಅವರ ಬದುಕು ಮತ್ತು ಕೆಲಸಗಳಿಗೆ ನ್ಯಾಯ ಒದಗಿಸಿಲ್ಲ.

ತನ್ನ ಸಾಮಾಜಿಕ-ಆರ್ಥಿಕ-ಭೌಗೋಳಿಕ-ಸಾಂಸ್ಕೃತಿಕ-ರಾಜಕೀಯ ಐಡೆಂಟಿಟಿಗಳೆಲ್ಲವೂ ತನ್ನ ಬೆಳವಣಿಗೆಗೆ ವಿರುದ್ಧವಾಗಿದ್ದರೂ ಹೇಗೆ ಒಬ್ಬ ಮನುಷ್ಯನ ಛಲ-ನಿಷ್ಠೆ-ಶ್ರಮ-ಅಧ್ಯಯನ ಹಾಗೂ ಒಂದಷ್ಟು ಅದೃಷ್ಟ ಆತನನ್ನು ಎತ್ತರಕ್ಕೆ ಕೊಂಡೊಯ್ಯಬಲ್ಲದು ಎಂಬ rags to riches ಕಥೆಯ ರೀತಿಯಲ್ಲಿ ಈ ಪುಸ್ತಕ ಸಾಗುತ್ತದೆ. ಆದರೆ ಇದು ಜನಪ್ರಿಯ ಮಾದರಿ ಕಥೆ-ಕಾದಂಬರಿಯಲ್ಲಿ ಸಿಗುವ happily ever after ಎಂಬ ಕ್ಲೈಮಾಕ್ಸ್ ಕಾಣದೇ, ಮಾನವ ಬದುಕಿನ ಏಳುಬೀಳುಗಳನ್ನು ಅನಾವರಣಗೊಳಿಸುತ್ತದೆ. ತನ್ನ ಹಿನ್ನೆಲೆಯಲ್ಲಿ ಸ್ವಾಭಾವಿಕವಾದ ಬಡತನದ ಬಾಲ್ಯದಲ್ಲಿಯೂ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಪಡೆಯುವ ದೇವೇಗೌಡ, ಡಿಪ್ಲೋಮಾ ಪದವಿಯ ನಂತರ ಆಗಿನ ಕಾಂಗ್ರೆಸ್ ಪಕ್ಷದ ಮೂಲಕ ರಾಜಕೀಯಕ್ಕೆ ಇಳಿದರೂ, ಮುಂದೆ ನಡೆಯುವ ಕೆಲವು ಘಟನೆಗಳಿಂದ ಪಕ್ಷೇತರನಾಗಿ ಕರ್ನಾಟಕ ಶಾಸನಸಭೆಗೆ ಚುನಾಯಿತರಾಗುತ್ತಾರೆ. 1970ರ ದಶಕದಲ್ಲಿ ದೇವರಾಜ್ ಅರಸ್ ಸರ್ಕಾರದ ಆಡಳಿತ ಸಮಯದಲ್ಲಿ ಯುವ ನಾಯಕ ದೇವೇಗೌಡ ವಿರೋಧ ಪಕ್ಷದ ನಾಯಕನಾಗುತ್ತಾರೆ. ಅವರ ರಾಜಕೀಯ ಜ್ಞಾನ-ಅಧ್ಯಯನಗಳನ್ನು ಗಮನಿಸಿ ಅರಸ್ ಕೂಡ ವಿಧಾನಸಭೆಯಲ್ಲಿ ಬಹಳ ಗೌರವ ನೀಡುತ್ತಿದ್ದರಂತೆ. ಆಮೇಲೆ ಮೊರಾರ್ಜಿ ದೇಸಾಯಿ-ಚಂದ್ರಶೇಖರ್ ಅವರ ಒಡನಾಟಕ್ಕೆ ಬರುವ ಗೌಡರು ಜನತಾ ಪರಿವಾರದಲ್ಲಿ ಮೆಟ್ಟಿಲುಗಳನ್ನು ಏರುತ್ತಾ, ತುರ್ತು ಪರಿಸ್ಥಿತಿಯಲ್ಲಿ ಜೈಲುವಾಸ ಅನುಭವಿಸುತ್ತಾರೆ.

ರಾಮಕೃಷ್ಣ ಹೆಗಡೆ ಹಾಗೂ ದೇವೇಗೌಡರ ಸಿಹಿ-ಕಹಿ ಮಿಶ್ರಿತ ರಾಜಕೀಯ ಸಂಬಂಧ-ತಿಕ್ಕಾಟಗಳೇ ದೇವೇಗೌಡರ ನೆಗೆಟಿವ್ ಇಮೇಜ್‌ಗೆ ಪ್ರಾರಂಭದ ಪ್ರಬಲ ಕಾರಣ ಎಂದು ಗುರುತಿಸುವ ಲೇಖಕ, ಹೆಗಡೆ ಅವರ ಮಾಧ್ಯಮ ಸ್ನೇಹಿ (media friendly) ವ್ಯಕ್ತಿತ್ವಕ್ಕೆ ಹೇಗೆ ಅವರ ಜಾತಿ-ಭಾಷೆ-ಶಿಕ್ಷಣ-ವರ್ಚಸ್ಸಿನ ಹಿನ್ನೆಲೆ ಸಹಕರಿಸಿತು ಎಂದು ವಿಸ್ತಾರವಾಗಿ ಪರಾಮರ್ಶಿಸುತ್ತಾರೆ. 45 ಪುಟಗಳಷ್ಟು ಇರುವ ‘The epic battle with Ramakrishna Hegde’ ಎಂಬ ಈ ಅಧ್ಯಾಯದಲ್ಲಿ ಒಂದು ಒಳ್ಳೆಯ ಸಿನಿಮಾ ತೆಗೆಯಬಹುದಾದಷ್ಟು ವಿಷಯಗಳಿವೆ!

ದೇವೇಗೌಡರ ರಾಜಕೀಯ ಆಡಳಿತದ ಮುಖ್ಯವಾದ ಕೊಡುಗೆಗಳಲ್ಲಿ ಒಂದಾಗಿರುವ ನೀರಾವರಿ ಕ್ಷೇತ್ರದ ಬಗ್ಗೆ ಬರೆಯುವ ಲೇಖಕರು ಕೃಷ್ಣಾ-ಕಾವೇರಿ ನದಿ ನೀರು ಹಂಚಿಕೆಯಲ್ಲಿ ಗೌಡರ ಪಾತ್ರವನ್ನು ಕೂಲಂಕಷವಾಗಿ ದಾಖಲಿಸುತ್ತಾರೆ. ತನ್ನ ಮೇಲೆ ಭ್ರಷ್ಟಾಚಾರದ ಆರೋಪಗಳು ಕೇಳಿಬರುತ್ತಿದ್ದರೂ, ವಾಸ್ತವದಲ್ಲಿ ಹೇಗೆ ಅವರ ಆರ್ಥಿಕ ಪರಿಸ್ಥಿತಿ ಅದಕ್ಕೆ ತದ್ವಿರುದ್ಧವಾಗಿರುತ್ತಿತ್ತು ಮತ್ತು 1978 ಹಾಗೂ 1989ರ ಚುನಾವಣಾ ಸೋಲಿನ ನಂತರದಲ್ಲಿ ಅವರು ಸಾಲದಲ್ಲಿ ಮುಳುಗಿ ಏಕಾಂಗಿಯಾಗಿ ಕೃಷಿ ಜೀವನದಲ್ಲಿ ತೊಡಗಿದ್ದರು ಎಂಬ ಹೆಚ್ಚು ಗೊತ್ತಿರದ ವಿಷಯಗಳನ್ನು ಓದುಗರಿಗೆ ಲೇಖಕರು ಕಟ್ಟಿಕೊಡುತ್ತಾರೆ. ಇದು ಕೇವಲ ಒಂದು ಮೂಲದಿಂದ ಮಾತ್ರ ಸಂಗ್ರಹಿಸಿದ ವಿಷಯಗಳ ದಾಖಲೆಯಾಗಿರದೆ, ಬೇರೆಬೇರೆ ಮೂಲಗಳಿಂದ ಪರಿಶೀಲಿಸಿ ಬರೆದ journalistic ಕೃತಿಯಾಗಿದೆ. ಹಿಂದೆ ನಾಲ್ಕು ಬಾರಿ ಕೈತಪ್ಪಿದ್ದ ಮುಖ್ಯಮಂತ್ರಿ ಸ್ಥಾನ ಕೊನೆಗೂ 1994ರಲ್ಲಿ ದೇವೇಗೌಡರಿಗೆ ದೊರಕಿ, ಕರ್ನಾಟಕದ ಆಡಳಿತದಲ್ಲಿ ಅವರು ಭದ್ರವಾಗಿ ನೆಲೆಗೊಳ್ಳುತ್ತಿದ್ದ ಸಂದರ್ಭಕ್ಕೆ ಸರಿಯಾಗಿ 1996ರಲ್ಲಿ ಆಕಸ್ಮಿಕವೋ, ಅಥವಾ ಅವರೇ ನಂಬುವಂತೆ ವಿಧಿ ಲಿಖಿತವೋ ಎಂಬಂತೆ, ತಮಗೆ ಇಷ್ಟವಿಲ್ಲದಿದ್ದರೂ, 13 ಪಕ್ಷಗಳನ್ನು ಒಳಗೊಂಡ ಸಮ್ಮಿಶ್ರ ಸರಕಾರ ಅವರನ್ನು ನಾಯಕನನ್ನಾಗಿಸಿದ್ದರಿಂದ, ಪ್ರಧಾನಿ ಪಟ್ಟ ದೊರಕುತ್ತದೆ. ಅದರ ಸುತ್ತಮುತ್ತ ನಡೆದ ಘಟನಾ ಸರಣಿಗಳನ್ನು ಇಲ್ಲಿ ವಿವರಿಸುವುದಕ್ಕಿಂತ, ಅವುಗಳನ್ನು ಪುಸ್ತಕದಲ್ಲೇ ಓದಿದರೆ ಸಮಂಜಸ.

ಪ್ರಧಾನಿಯಾಗಿ ಕಾಶ್ಮೀರ ಹಾಗೂ ಈಶಾನ್ಯ ರಾಜ್ಯಗಳೊಂದಿಗಿನ ಅವರ ತೊಡಗಿಕೊಳ್ಳುವಿಕೆ ಇಂದಿಗೂ ನೆನಪಿನಲ್ಲಿ ಉಳಿದಕೊಂಡಿರುವಂತಹದ್ದು. ಪ್ರಧಾನಿ ಸ್ಥಾನದಿಂದ ಕೆಳಗಿಳಿದ ನಂತರದ ವಿಷಯಗಳಲ್ಲಿ ಒಂದನ್ನು ಬರೆಯಬೇಕಾಗಿರುವುದು ಈ ಕಾಲದ ತುರ್ತು. 2002ರ ಗುಜರಾತ್‌ನಲ್ಲಿ ನಡೆದ ಮುಸ್ಲಿಂ ನರಮೇಧದ ಸಮಯದಲ್ಲಿ ಗುಜರಾತ್‌ಗೆ ಪ್ರಯಾಣ ಬೆಳೆಸಿ, ಪರಿಹಾರ ಶಿಬಿರಗಳ ಭೇಟಿ ನೀಡಿದ ದೇವೇಗೌಡರ ನಡೆ ಹಾಗೂ ಕೇಂದ್ರದ ವಾಜಪೇಯಿ ಸರ್ಕಾರಕ್ಕೆ ಬರೆದ ಆಕ್ರೋಶಭರಿತ ಪತ್ರಗಳನ್ನು, ಇಂದು ಅದೇ ’ಗುಜರಾತ್ ಮಾಡೆಲ್’ಅನ್ನು ದೇಶದೆಲ್ಲೆಡೆ ಕಾರ್ಯರೂಪಕ್ಕೆ ತರುತ್ತಿರುವ ವೇಳೆಯಲ್ಲಿ ಮತ್ತೆಮತ್ತೆ ಅವಲೋಕಿಸುವ ತುರ್ತು ನಮಗಿದೆ. ತನ್ನ ಪ್ರತಿಯೊಂದು ಹೆಜ್ಜೆಯಲ್ಲಿಯೂ ಜ್ಯೋತಿಷ್ಯ, ಮಠ-ಮಂದಿರಗಳ ಭೇಟಿ, ಪೂಜೆ-ಪುನಸ್ಕಾರದಂತಹ ಧಾರ್ಮಿಕತೆಯನ್ನು ಪಾಲಿಸುವ ದೇವೇಗೌಡರು ತಮ್ಮ ಸೆಕ್ಯುಲರ್ ಸ್ವಭಾವವನ್ನು ಒಂದು ಜೀವನ ವಿಧಾನ (way of life) ಎಂಬಂತೆ ಸಾಮಾನ್ಯಗೊಳಿಸಿದ್ದು ನಿಜಕ್ಕೂ ಶ್ಲಾಘನೀಯ. ಪುಸ್ತಕದ ಲೇಖಕರು ಒಂದೆಡೆ ಹೇಳಿದಂತೆ ದೇವೇಗೌಡರ ಬಹು ದೊಡ್ಡ ಸಾಧನೆ ಏನೆಂದರೆ ಅವರಲ್ಲಿದ್ದ ಪ್ರಜಾಸತ್ತೀಯ ತೊಡಗಿಕೊಳ್ಳುವಿಕೆ (Democratic Engagement). ಪ್ರಜಾಪ್ರಭುತ್ವದ ನಿಧಾನ ಸಾವು (slow death) ಅಂತಿಮ ಹಂತಕ್ಕೆ ಬಂದಿರುವ ಇಂದಿನ ಈ ಕಾಲಘಟ್ಟದಲ್ಲಿ ಪ್ರಜಾಪ್ರಭುತ್ವದ ಪಾಠ ಹಿಂದೆಂದಿಗಿಂತಲೂ ಹೆಚ್ಚು ಅಗತ್ಯವಾಗಿದೆ.

ಪುಸ್ತಕದ ಕೆಲವು ಭಾಗಗಳಲ್ಲಿ ಸುಗತ ಅವರು ಫ್ಯಾಕ್ಟ್‌ಗಳ ಜೊತೆಯಲ್ಲಿ ಎಲ್ಲೋ ತಮ್ಮ ಅಭಿಮಾನದ adulatory ಟೋನ್‌ನಿಂದ ಹೊರಬರಲು ಸೋತು ಎಡವುತ್ತಿದ್ದಾರೇನೋ ಎಂದೂ ಅನ್ನಿಸುತ್ತದೆ. ಅದೇ ರೀತಿ, ದೇವೇಗೌಡರು ತಮ್ಮ ರಾಜಕೀಯದ ಶುರುವಿನಿಂದ ಅಂದರೆ 1950ರ ದಶಕದಿಂದ ಇಂದಿನವರೆಗೂ ಸುಮಾರು 60 ವರ್ಷಗಳ ಕಾಲ ತಮ್ಮ ಪ್ರಸ್ತುತತೆಯನ್ನು (relevance) ಕಾಪಾಡಿಕೊಂಡೇ ಬಂದಿದ್ದರೂ, ಈ ಪುಸ್ತಕ 2004ರವರೆಗಿನ ವಿದ್ಯಮಾನಗಳಿಗೆ ಮಾತ್ರ ಗಮನಹರಿಸಿ ನಿಲ್ಲುತ್ತದೆ. ನಂತರವೂ ಸುಮಾರು ಎರಡು ದಶಕಗಳ ಕಾಲ ಮುಂದುವರೆದಿರುವ ದೇವೇಗೌಡರ ರಾಜಕೀಯ ವಿಷಯಗಳ ಬಗ್ಗೆ ಮಾತನಾಡುವುದು ಬಹಳ ಶೀಘ್ರವೆನಿಸುತ್ತದೆ ಎನ್ನುವುದು ಲೇಖಕರ ಅನುಕೂಲಕರ ವಾದ ಎನಿಸುತ್ತದೆ. ಕನಿಷ್ಟ 2010ರ ತನಕವಾದರೂ ವಿಶ್ಲೇಷಣೆ ಮೂಡಿಬಂದಿದ್ದರೆ ಪುಸ್ತಕ ಇನ್ನೂ ಹತ್ತಿರವಾಗುತ್ತಿತ್ತು ಎಂಬುದು ನನ್ನ ಭಾವನೆ. ಜೆಡಿಎಸ್ ಒಂದು ಕುಟುಂಬ ನಾಯಕತ್ವಕ್ಕೆ ಸೀಮಿತವಾದ ಪಕ್ಷವಾಗಿ ತನ್ನ ಜಾತ್ಯತೀತ ರುಜುವಾತನ್ನು (secular credentials) ಕೂಡ ಕಾಂಪ್ರೊಮೈಸ್ ಮಾಡಿಕೊಂಡು ಅವಕಾಶವಾದಿ ರಾಜಕೀಯಕ್ಕೆ ಒಗ್ಗಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ, ಅದರಲ್ಲಿ ಗೌಡರ ಪಾತ್ರ-ಅಭಿಪ್ರಾಯ ಏನು ಎಂಬುದರ ಮೇಲೆ ಗಮನಹರಿಸಬೇಕಾದ ಅವಶ್ಯಕತೆಯೂ ಲೇಖಕರಿಗಿದೆ. ಇದೆಲ್ಲಾ ಪುಸ್ತಕದ ಮುಂದಿನ ಭಾಗದಲ್ಲಿ ಬರಬಹುದೇನೋ ಎಂಬ ನಿರೀಕ್ಷೆ ಖಂಡಿತ ಇದೆ.

ಹಣ-ಗುರು-ಜಾತಿ-ನಾಮಬಲ ಯಾವುದೂ ಇಲ್ಲದ ’ಮರಳಿನ ಕಣಗಳಲ್ಲಿ ಪ್ರಪಂಚವನ್ನು ಕಾಣುವ’ (viewing the world through a grain of sand) ಒಬ್ಬ ಸಾಮಾನ್ಯ ರೈತ ಪರಿವಾರದ ವ್ಯಕ್ತಿ, ನೈಜ ಶ್ರಮದೊಂದಿಗೆ ಒಂದೊಂದೇ ಮಜಲುಗಳನ್ನು ಹತ್ತುತ್ತಾ, ಸೋಲು-ಗೆಲುವು, ಸುಖ-ದುಃಖ, ಏಳು-ಬೀಳುಗಳನ್ನು ಕಂಡು ದೇಶದ ಉನ್ನತ ಸ್ಥಾನಕ್ಕೆ ಏರಿದ್ದು ಒಂದು ದಂತಕಥೆಯೇ! ಇಷ್ಟೆಲ್ಲಾ ಇದ್ದರೂ ಈತನಕ ಆ ಸಾಧನೆಯ ಬಗ್ಗೆ ಒಂದು ಸರಿಯಾದ ಆಕರ ವಸ್ತು ಇಲ್ಲದೇ ಇದ್ದದ್ದು ನಿಜಕ್ಕೂ ಆಶ್ಚರ್ಯಕರ. ಈಗಷ್ಟೇ ಹೊರಬಂದಿರುವ- ‘Furrows in a field- The Unexplored Life of H D Devegowda’, ’ಹೊಲದ ಉಕ್ಕೆ ಸಾಲು: ಎಚ್ ಡಿ ದೇವೇಗೌಡರ ಕಾಣದ ಬದುಕು’ (ಟೈಟಲ್ ಅನುವಾದ – ಕೆ. ಫಣಿರಾಜ್)- ಈ ಕೃತಿಯ ಮೂಲಕ ಸುಗತ ಆ ಕೊರತೆಯನ್ನು ನೀಗಿಸಲು ತಮ್ಮ ಪ್ರಯತ್ನವನ್ನು ಮಾಡಿದ್ದಾರೆ. ದೇವೇಗೌಡರನ್ನು ಅಭಿಮಾನದ ಉತ್ಪ್ರೇಕ್ಷೆಯಲ್ಲಿ ಹೊಗಳದೇ ಅಥವಾ ಮೀಡಿಯಾ ಇಮೇಜ್ ನಂತೆ ಕಟುವಾಗಿ ತೆಗಳದೇ, ಅವರ ಬಗ್ಗೆ ಸರಿಯಾಗಿ ಓದಿಕೊಳ್ಳುವುದೇ ನಮಗೆ ಈ ದೇಶದ ಒಕ್ಕೂಟ ವ್ಯವಸ್ಥೆ ಹಾಗೂ ಪ್ರಜಾಪ್ರಭುತ್ವವನ್ನು ಬಲಪಡಿಸುವುದರ ಬಗ್ಗೆ ಚಿಂತಿಸಲು ಸಹಕರಿಸುತ್ತದೆ..

ವಿಜೇತ್ ಬಾಳಿಲ

ವಿಜೇತ್ ಬಾಳಿಲ
ದಕ್ಷಿಣ ಕನ್ನಡದ ಸುಳ್ಯದವರು. ಮಾಧ್ಯಮ-ಸಮೂಹ ಸಂವಹನ ಹಾಗೂ Ecosophical Aesthetics ಅಧ್ಯಯನ ಮಾಡಿದ್ದಾರೆ. ಸಿನಿಮಾ, ರಾಜಕೀಯ, ಸಮಾಜ, ಸಾಹಿತ್ಯ ಮತ್ತು ಕ್ರೀಡೆ ಆಸಕ್ತಿಯ ಕ್ಷೇತ್ರಗಳು.


ಇದನ್ನೂ ಓದಿ: ರಾಜೇಶ್ವರಿ ತೇಜಸ್ವಿಯವರ ಹೊಸ ಪುಸ್ತಕದ ಆಯ್ದ ಭಾಗ – ‘ನನ್ನ ಡ್ರೈವಿಂಗ್ ಡೈರಿ’

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...