Homeಪುಸ್ತಕ ವಿಮರ್ಶೆರಾಜೇಶ್ವರಿ ತೇಜಸ್ವಿಯವರ ಹೊಸ ಪುಸ್ತಕದ ಆಯ್ದ ಭಾಗ - 'ನನ್ನ ಡ್ರೈವಿಂಗ್ ಡೈರಿ'

ರಾಜೇಶ್ವರಿ ತೇಜಸ್ವಿಯವರ ಹೊಸ ಪುಸ್ತಕದ ಆಯ್ದ ಭಾಗ – ‘ನನ್ನ ಡ್ರೈವಿಂಗ್ ಡೈರಿ’

- Advertisement -
- Advertisement -

ನಾನು ಬೆಂಗಳೂರಿನವಳು. ಮಹಾರಾಣಿಯವರ ಕಾಲೇಜಿನಲ್ಲಿ 1958ರಲ್ಲಿ ಬಿ.ಎ. ಮಾಡಿದೆ. ಮನೆಯಲ್ಲಿ ಸುಮ್ಮನೆ ಕೂರುವುದು ಬೇಡವೆಂದು ನನ್ನ ದೊಡ್ಡಣ್ಣನವರ ಒತ್ತಾಯಕ್ಕೆ ಮಣಿದು ಮೈಸೂರಿಗೆ ಓದು ಮುಂದುವರೆಸಲು ಬಂದೆನು. ನೇರವಾಗಿ ಎರಡನೆಯ ಆನರ್‍ಸ್‌ಗೆ ಸೀಟು ಕೊಟ್ಟರು ಬಿ.ಎ. ಓದಿದ್ದರಿಂದ. ತತ್ತ್ವಶಾಸ್ತ್ರ ನನ್ನ ಆಯ್ಕೆಯ ವಿಷಯವಾಗಿತ್ತು. ಮಹಾರಾಜ ಕಾಲೇಜಿನಲ್ಲಿ ತರಗತಿಗಳು ನಡೆಯುತ್ತಿದ್ದವು. ಕೆಲವು ಸಮಯದನಂತರ ಮಾನಸ ಗಂಗೋತ್ರಿಗೆ ಶಿಫ್ಟ್ ಆಯ್ತು. ಎಲ್ಲರೂ ಮಹಾರಾಣಿ ಹಾಸ್ಟೆಲ್‌ನಿಂದ ನಡೆದೇ ಹೋಗುತ್ತಿದ್ದೆವು.

ಆ ಹೊತ್ತಿಗೆ ಮೈಸೂರು ರಾಜ್ಯಕ್ಕೆಲ್ಲ ಒಂದೇ ಆಗಿದ್ದ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಆರ್ಟ್ಸ್ ವಿಭಾಗದಲ್ಲಿ ಮೂರು ವರ್ಷದ ಆನರ್‍ಸ್ ಮತ್ತು ಒಂದು ವರ್ಷದ ಎಂ.ಎ. ಇತ್ತು. ಸೈನ್ಸ್ ವಿಭಾಗ ಬೆಂಗಳೂರಿನಲ್ಲಿತ್ತು. ಈ ಸಂದರ್ಭದಲ್ಲಿ ಮಾನಸಗಂಗೋತ್ರಿಗೆ ಒಂದೊಂದೇ ಡಿಪಾರ್ಟ್‌ಮೆಂಟುಗಳು ಶಿಫ್ಟ್ ಆದುವು. ಈಗ ಸಮಸ್ಯೆ ಶುರುವಾಯ್ತು. ಅಷ್ಟು ದೂರ ನಡೆದುಕೊಂಡೇ ಹೋಗಬೇಕಿತ್ತು.

ನನಗೆ ಸೈಕಲ್ ಕಲಿಯುವ ಆಸೆ ಶುರುವಾಯ್ತು. ಬೆಂಗಳೂರಿನಿಂದ ಒಂದು ಸೆಕೆಂಡ್‌ಹ್ಯಾಂಡ್ ರ್‍ಯಾಲಿ ಬೈಸಿಕಲ್ ತರಿಸಿಕೊಂಡೆ. ನಾನು ಮೈಸೂರು ಮಹಾರಾಣಿ ಹಾಸ್ಟೆಲ್‌ನಲ್ಲಿದ್ದೆ. ಅಂಗಳವೂ ಅಗಲವಾಗಿ ದೊಡ್ಡದಿತ್ತು. ಸೈಕಲ್ ಬಿಡುವುದು ಕಲಿತೆನಾದರೂ ಹತ್ತಲು-ಇಳಿಯಲು ನಾಜೂಕಿಲ್ಲದೆ ಕಷ್ಟಪಡುತ್ತಿದ್ದೆ. ಮಾನಸ ಗಂಗೋತ್ರಿಯಲ್ಲಿ ಯಾವ ಡಿಪಾರ್ಟ್‌ಮೆಂಟಿನ ಕಟ್ಟಡವೂ ಇರಲಿಲ್ಲ. ನಮ್ಮ ತರಗತಿಗಳೆಲ್ಲ ಜಯಲಕ್ಷ್ಮಿ ಅರಮನೆಯಲ್ಲಿಯೇ ನಡೆಯುತ್ತಿದ್ದುದು. ಕಟ್ಟಡ ಎಬ್ಬಿಸಲು ಅಂಗಳದ ತುಂಬೆಲ್ಲ ಕಲ್ಲು, ಮರಳು, ಇಟ್ಟಿಗೆಯ ಬೆಟ್ಟವೇ ಬಂದು ಬಿದ್ದಿತ್ತು. (ಆ ಅರಮನೆ ಇವತ್ತಿಗೆ ಪ್ರಖ್ಯಾತ ಮ್ಯೂಸಿಯಂ ಆಗಿದೆ).

ಅರಮನೆಯ ಬಾಗಿಲು ಬಳಿ ಒಂದು ಕಟ್ಟೆ ಇತ್ತು. ಅಲ್ಲಿ ಸೈಕಲ್ ನಿಲ್ಲಿಸಿಕೊಂಡು ದುಪ್ಪಂತ ಇಳಿಯೋದು, ಅದೇ ಕಟ್ಟೆಯ ಬಳಿ ನಿಂತು ಸೈಕಲ್ ಹತ್ತಿಕೊಂಡು ಹಾಸ್ಟೆಲ್‌ಗೆ ವಾಪಸಾಗೋದು. ಅಂತೂ ಸೈಕಲ್ ಬಿಡುತ್ತಿದ್ದೆ.

ಎಂ.ಎ ಮುಗಿಯಿತು. ಪ್ರೀತಿ ಪ್ರೇಮ ಆಯ್ತು. 1966ರಲ್ಲಿ ಮದುವೇನೂ ಆಯ್ತು. ತೇಜಸ್ವಿಗೆ ನಾನು ಸೈಕಲ್ ಬಿಡ್ತೀನಿ ಅನ್ನೋದು ಗೊತ್ತಿತ್ತು.

1967ನೆಯ ಇಸವಿ. ಮದುವೆಯಾದ ಹೊಸದು. ‘ಹೇಗೂ ಸೈಕಲ್ ಬಿಡ್ತೀಯ, ಸ್ಕೂಟರ್ ಬಿಡೋದು ಸುಲಭ’ ಎಂದು ಕಲಿಸಲಿಕ್ಕೆ ಶುರು ಮಾಡಿದ್ರು- ಚಿತ್ರಕೂಟದ ಅಂಗಳದಲ್ಲಿ. ಸ್ಕೂಟರ್ ರೌಂಡು ಹೊಡೆಸೋರು. ಕಾಲೇಜಿನ ದಿನಗಳಲ್ಲಿ ಸೈಕಲನ್ನು ಅಸಡಬಸಡ ಬಿಡುತ್ತಿದ್ದ ನನಗೆ, ಸ್ಕೂಟರ್ ಬಿಡೋದು ಕಡೆಗೂ ಬರಲಿಲ್ಲ. ನಾನು ಕಲಿಯಲೇ ಇಲ್ಲ. ‘ನಿಮಗೆ ಹೇಳಿಕೊಡೋಕೆ ಗೊತ್ತಿಲ್ಲ’ ಎಂದು ಅವರಿಗೇ ಹೇಳಿದೆ.

ಇದಾದ ಹತ್ತು ವರ್ಷಗಳ ನಂತರ ಚಿತ್ರಕೂಟ ತೋಟ ಮಾರಿದೆವು. ಕೆಲವು ಕಾಲ ಮೈಸೂರಿನಲ್ಲಿ ಇದ್ದೆವು. ಆಗ ತೇಜಸ್ವಿ ಹೊಸ ಲೂನಾ ಕೊಂಡರು. ನಾನು ಸ್ಕೂಟರ್ ಬಿಡುವುದು ಕಲಿಯಬಹುದೇನೋ ಅಂತ ಅವರಿಗೆ. ಆದರೆ ನನ್ನ ಕಷ್ಟ ನನಗೊಬ್ಬಳಿಗೇ ತಿಳಿದಿತ್ತು. ಮನೆಯಲ್ಲಿ ಎಲ್ಲರಿಗೂ ಖುಷಿಯೋ ಖುಷಿ! ಲೂನಾ!

ಆ ಹೊತ್ತಿಗೆ ಒಂಟಿಕೊಪ್ಪಲಿನಲ್ಲಿ ಟ್ರಾಫಿಕ್ ಕಡಿಮೆ ಇತ್ತೆಂದೇ ಹೇಳಬಹುದು. ಲೂನಾ ಬಂದು ಮನೆ ಮುಂದೆ ಗೇಟಿನ ಬಳಿ ನಿಂತಿತು. ತೇಜಸ್ವಿ ನನ್ನನ್ನು ಕೂರಿಸಿ ಸ್ಟಾರ್ಟ್ ಮಾಡಿ ‘ಮುಂದಕ್ಕೆ ಹೋಗು’ ಎಂದು ದೂಕಿದರು. ನಾನು ಇದನ್ನು ನಿರೀಕ್ಷಿಸಿರಲಿಲ್ಲ. ‘ಆಗಲ್ಲ ಆಗಲ್ಲ ಅಯ್ಯೋ…’ ಅಂತನೇ ಮುಂದಕ್ಕೆ ಹೋದೆ. ಹೋಗಿ ಟರ್ನ್ ಮಾಡಿ ಬರುವಾಗ ಅಲ್ಲೊಂದು ಮುನಿಸಿಪಾಲಿಟಿಯವರ ಕಸದ ತೊಟ್ಟಿ ಕಸ ತುಂಬಿಕೊಂಡು ಇದ್ದಿದು ಕಂಡಿತು. ಅದಕ್ಕೆ ಡಿಕ್ಕಿ ಕೊಟ್ರೆ ಎನ್ನುವ ಭಯದಲ್ಲೇ ಡಿಕ್ಕಿಕೊಟ್ಟು ಬಿದ್ದೇಬಿಟ್ಟೆ. ದಬಾರನೆ ಬಿದ್ದೆ. ‘ಎಬ್ಬಿಸಲು ತೇಜಸ್ವಿ ಓಡಿ ಬಂದ್ರು. ‘ನಿಮ್ಮಿಂದಲೆ ಬಿದ್ದಿದ್ದು’ ಎಂದೆ. ’ನಿನ್ನ ತಲೆ’ ಅಂತ ಬೈದ್ರು. ಅಲ್ಲಿಗೆ ನಿಂತಿತು ನನ್ನ ಸ್ಕೂಟರ್ ಸವಾರಿ ಕಲಿಯೋದು

****************

ಈಗ ಮನೆಗೆ ಬಂತು ಹೊಸ ಪ್ರೀಮಿಯರ್ ಪದ್ಮಿನಿ ಫಿಯಟ್ ಹಸಿರು ಕಾರು. ನನಗೆ ಕಾರು ಕಲಿಸಬೇಕೆನ್ನುವುದು ತೇಜಸ್ವಿ ಇರಾದೆ. ಪ್ರಯತ್ನ ಶುರುವಾಯ್ತು. ನನಗೊ ಹೆದರಿಕೆಯಿಂದ ‘ಏಕೆ ಕಲಿಯಬೇಕಪ್ಪ’ ಎನ್ನುವ ಮನಸ್ಸು. ಆದರೆ ತೇಜಸ್ವಿ ಬಿಡಬೇಕಲ್ಲ. ‘ನೀನು ಸ್ಟೇರಿಂಗ್ ಹಿಡಿ, ನಾನು ಆಕ್ಸಿಲೇಟರ್ ಮೇಲೆ ಕಾಲಿಟ್ಟುಕೊಂಡಿರ್‍ತೀನಿ. ಕಾರು ಬಿಡು’ ಎಂದರು. ಹೀಗೆ ಮೈಸೂರಿನಿಂದ ಮೂಡಿಗೆರೆಯ ತೋಟದತನಕ ನಮ್ಮ ಜರ್ನಿ. ಎಷ್ಟು ದೂರ ಬಿಟ್ಟೆನೋ ನೆನಪಿಲ್ಲ. ಇಷ್ಟಾದರೂ ನಾನು ಕಲಿಯಲಿಲ್ಲ. ‘ನಿಮಗೆ ಕಾರು ಹೇಳಿಕೊಡಲು ಬರೋಲ್ಲ’ ಎಂದು ಮತ್ತೆ ಹಳೇ ಆರೋಪ ಮಾಡಿದೆ.

ಕೊನೆಗೆ ಕಾರು ಬಿಡೋದು ಕಲಿಯಲೇಬೇಕೆಂದು ನಿರ್ಧರಿಸಿದೆ. ಅನಿವಾರ್ಯನೂ ಆಗಿತ್ತು. ಮಕ್ಕಳನ್ನು ಸ್ಕೂಲಿಗೆ ಬಿಡಬೇಕಿತ್ತು. ನಾನು, ನಾದಿನಿ ತಾರಿಣಿ ಡ್ರೈವಿಂಗ್ ಸ್ಕೂಲು ಸೇರಿಕೊಂಡೆವು. ತಾರಿಣಿ ಚಿಕ್ಕವರು, ಧೈರ್ಯ ಚೆನ್ನಾಗಿತ್ತು ನನಗೆ ಸ್ವಲ್ಪ ಅಳುಕು ಭಯ.

ಮೊದಲನೆಯ ದಿನ ಡ್ರೈವಿಂಗ್ ಟೀಚರ್ ಫಸ್ಟ್ ಗೇರ್ ಇಲ್ಲದ ಗಾಡಿ ತಂದ್ರು. ಒಂದು ವಾರ ಹಾಗೇ ಸುಧಾರಿಸಿಕೊಂಡು ಕಾರು ಬಿಡೋದು ಕಲಿಸಿದ್ರು, ವಾರದ ನಂತರ ಸರಿಯಾದ ಕಾರು ತಂದರು. ಆಗೊಂದು ಕಥೆ.

ನರಸಿಂಹರಾಜ ಮೊಹಲ್ಲ ಗೊತ್ತಲ್ಲ- ಸ್ವಲ್ಪ ಕಿರಿದಾದ ರಸ್ತೆಯ ಮೇಲೆ ಟೀಚರು ಕಾರು ಬಿಡಲು ಹೇಳಿದರು. ನನಗೆ ಅಪರಿಚಿತ ಜಾಗ ಬೇರೆ. ಅಲ್ಲೊಂದು ಖಾಲಿ ಸೈಟಿನಲ್ಲಿ ಕೆಡವಿದ ಮನೆಯ ಮಣ್ಣುದಿಬ್ಬ ಇತ್ತು. ಟೀಚರ್ ‘ಬಲಗಡೆ ತಗೊಳ್ಳಿ’ ಎಂದರು. ಗಾಬರಿಯಲ್ಲಿ ಎಡಗಡೆಗೇ ಕಾರು ತಿರುಗಿಸಿದೆ ನೋಡಿ ಕಾರು ಮಣ್ಣಿನ ದಿಬ್ಬವನ್ನು ಹತ್ತಿ ನಿಂತಿತು. ಅದು ಹೇಗೋ ಗೊತ್ತಿಲ್ಲ! ಇಷ್ಟಕ್ಕೆ ಸುಮ್ಮನಾಗಲಿಲ್ಲ. ಆಮೇಲೆ ಮಾನಸ ಗಂಗೋತ್ರಿಯಲ್ಲಿ ರಿವರ್ಸ್ ತಗೊಳ್ಳೋದನ್ನು ಕಲಿತೆ. ಅಂತೂ ಕಲಿತೆ ಎಂದುಕೊಂಡೆ.

ಕಲಿತಾ ಕಲಿತಾ ನನಗೆ ಬಂತು ಕಷ್ಟ. ಹೆದರಿಕೆಯಿಂದಲೇ ಬಿಡುತ್ತಿದ್ದೆ. ಸುಸ್ಮಿತಾಳನ್ನು ಗಂಗೋತ್ರಿ ಸ್ಕೂಲಿಗೆ ಬಿಡಲು ಕಾರಲ್ಲೇ ಹೋಗುತ್ತಿದ್ದೆ. ಪ್ರಖ್ಯಾತ ಪ್ರೀಮಿಯರ್ ಸ್ಟುಡಿಯೋ ಮುಂದೆ ಹೋಗುವಾಗ ಇಬ್ಬರು ಸೈಕಲ್ ಮೇಲೆ ಡಬ್ಬಲ್ ರೈಡ್ ಮಾಡಿಕೊಂಡು ಹೋಗುತ್ತಿದ್ದರು. ನನಗೆ ಲೈಸನ್ಸ್ ಸಿಕ್ಕಿ ಒಂದು ತಿಂಗಳಾಗಿತ್ತು. ಅಷ್ಟೇ ಸಡನ್ನಾಗಿ ಸೈಕಲ್ಲಿಗೆ ಕಾರು ತಾಗಿಸಿದೆ. ಗಡಿಬಿಡಿ, ಅವರಿಬ್ಬರು ಬಿದ್ದರು. ಮುಂದೆ ಹೋಗಿ ಕಾರು ನಿಲ್ಲಿಸಿದೆ. ಇಬ್ಬರೂ ಕೂಗಾಟ ಶುರು ಮಾಡಿಬಿಡುವುದೆ? ನಾನು ‘ಮನೆಗೆ ಬನ್ನಿ ಅಣ್ಣ (ಕುವೆಂಪು) ಇರ್‍ತಾರೆ ಮಾತಾಡಬಹುದು’ ಎಂದೆ. ಅವರಿಬ್ಬರೂ ಸೈಕಲ್ ಹತ್ತಿಕೊಂಡು ಮನೆಗೆ ಬಂದು ಅದೇ ಕೂಗಾಟ ಮುಂದುವರೆಸಿದರು. ಅಣ್ಣ ತಮ್ಮ ಇಬ್ಬರೂ ಬಂದ್ರು ಮಾತಾಡಲು. ‘ಸುಮ್ಮನೆ ಕಾರು ತಾಗ್ತು ಅಣ್ಣ ಅಷ್ಟೆ’ ಅಂದೆ. ‘ವೀಲ್ ಬೆಂಡ್ ಆಗಿದೆ, ಸ್ಪೋಕ್ಸ್ ಬೆಂಡಾಗಿದೆ ರಿಪೇರಿಗೆ ದುಡ್ಡು ಕೊಡಿ ಸಾರ್’ ಎಂದು ಪೀಡಿಸಲಿಕ್ಕೆ ಹತ್ತಿದರು. ನಾನು ‘ಬೇಡ’ ಎಂದೆ. ಕೊನೆಗೆ ಅಣ್ಣ ‘ದುಡ್ಡು ಕೊಟ್ಟು ಕಳಿಸು’ ಎಂದರು. ಕೊಟ್ಟೆ. ಒಂದು ರೀತಿಯ ಮುಖಭಂಗವಾದಂತಾಯ್ತು.

ಆಮೇಲೆ ಮೂಡಿಗೆರೆಯ ‘ನಿರುತ್ತರ’ ತೋಟಕ್ಕೆ ಬಂದೆವು. ಈಗ ಪುಟಾಣಿ ಈಶಾನ್ಯೆಯನ್ನು ಮೂಡಿಗೆರೆ ಸ್ಕೂಲಿಗೆ ಬಿಡುವ ಕೆಲಸ ನನ್ನ ಕಾರಿನ ಪಾಲಾಯಿತು. ತೋಟದಿಂದ ಮೂರು ಕಿಲೋಮೀಟರ್ ದೂರ ಇತ್ತು. ಅಪ್ ಅಂಡ್ ಡೌನ್ ದಾರಿ. ಅವಳ ಸ್ಕೂಲು ಸೆಂಟ್ ಮಾರ್ಥಾಸ್ ಶಾಲೆ ಎದುರೇ ಸರ್ಕಾರಿ ಕಾಲೇಜು ಇತ್ತು. ಎಲ್ಲ ಹುಡುಗರು ‘ಹೆಂಗಸು ಕಾರು ಬಿಡ್ತಾಳೆ’ ಎಂದು ಕುತೂಹಲದಿಂದ ನೋಡುತ್ತ ನಿಲ್ಲುತ್ತಿದ್ದರು.

ಹೀಗೇ ವರ್ಷವೇ ಕಳೆಯಿತು. ಒಂದು ದಿನ ಮನೆಗೆ ವಾಪಸ್ಸಾಗುವ ಸಮಯ. ರಿವರ್ಸ್ ಗೇರು ಹಾಕಿ ಕಾರು ಹಿಂದಕ್ಕೆ ತೆಗೆದುಕೊಂಡೆ. ಕಾಲೇಜಿನ ಮುಂದೆ ರಸ್ತೆ ಕಡೆಯಿಂದ ತಗ್ಗು ಇತ್ತು. (ತುಸು ಹೆಚ್ಚೇ ಇತ್ತು) ತಗ್ಗಿಗೇ ಕಾರು ಇಳಿಯುತ್ತಾ ಇದೆ! ಜೀವ ಹೋದಂತಾಯ್ತು. ‘ದೇವ್ರೇ…’ ಎಂದು ಅತ್ತಿತ್ತ ನೋಡುತ್ತಿದ್ದೆ. ಅಷ್ಟರಲ್ಲೇ ಆ ಹೊತ್ತಿಗೆ ಅದೆಲ್ಲಿಂದಲೋ ಗಡ್ಡದಾರಿ ಹುಡುಗನೊಬ್ಬ ಪ್ರತ್ಯಕ್ಷನಾದ. ‘ಹೀಗೀಗಾಯ್ತು’ ಎಂದು ವಿವರಿಸಲು ಬಾಯಿಬಿಟ್ಟಾಗ ‘ಚುಪ್, ನಾನು ಹೇಳ್ದಾಗೆ ಮಾಡ್ರೀ….’ ಅಂತಾನೆ! ‘ರಿವರ್ಸ್ ಗೇರಿಗೆ ಹಾಕಿ, ನಾನು ಲಿಫ್ಟ್ ಮಾಡುವೆನು’ ಎಂದ. ಹಾಗೂ ಹೀಗೂ ಸಹಾಯ ಮಾಡಿದ ಅವನಿಗೆ ವಂದನೆ ಹೇಳಿದೆ. ‘ಅಯ್ಯಪ್ಪಂತ’ ನಾನು ನಿಟ್ಟುಸಿರು ಬಿಡುತ್ತಿದ್ದಾಗ ಅವನು ನಾಪತ್ತೆ! ಮನೆಗೆ ಬಂದು ತೇಜಸ್ವಿಗೆ ಹೀಗಾಯ್ತೆಂದು ಹೇಳಲಿಲ್ಲ.

ತೇಜಸ್ವಿ ಕಾರು ಚೆನ್ನಾಗಿ ಓಡಿಸುತ್ತಿದ್ದರು. ನಮ್ಮದು ಆಗ ಹೊಸ ಬಿಳಿ ಪ್ರೀಮಿಯರ್ ಪದ್ಮಿನಿ ಫಿಯೆಟ್ ಕಾರು. ಅವರು ಕಾರು ಬಿಟ್ಟ ಹಾಗೆ ನಾನು ಬಿಡಬೇಕು ಎನ್ನುವುದು ನನ್ನ ಗುರಿ. ಒಮ್ಮೊಮ್ಮೆ ನಾನು ಬಿಡುತ್ತಿದ್ದರೆ ‘ಈಗ ಪರವಾಗಿಲ್ಲ’ ಎನ್ನುವರು. ನನ್ನ ಪಕ್ಕದ ಸೀಟಿನಲ್ಲಿ ಕೂರುತ್ತಿದ್ದರು. ಎಷ್ಟು ಸೂಕ್ಷ್ಮವಾಗಿರುತ್ತಿದ್ದರೆಂದರೆ – ನಾನು ‘ಚಕ್’ ಎಂದು ಗೇರು ಬದಲಾಯಿಸಿದರೆ ‘ಲಿವರ್ ಸವೆದುಹೋಗುತ್ತೆ’ ಎನ್ನುವರು. ಸಡನ್ನಾಗಿ ಬ್ರೇಕ್ ಹಾಕಿದಾಗ್ಲೂ ‘ಬ್ರೇಕ್ ಡ್ರಮ್ ಗತಿ ಏನು’ ಎಂದು ಕಾಮೆಂಟ್ ಮಾಡೋರು. ಹೀಗೆ… ಸುಧಾರಿಸಿತು ನನ್ನ ಡ್ರೈವಿಂಗ್.

ಈಗ ಮೂಡಿಗೆರೆಯಲ್ಲಿನ ಕೆಲಸವೆಲ್ಲ ನನ್ನ ಜವಾಬ್ದಾರಿಯಾಯ್ತು. ಎಲೆಕ್ಟ್ರಿಕ್ ಬಿಲ್ ಕಟ್ಟೋದು, ತರಕಾರಿ ತರೋದು, ಮನೆ ದಿನಸಿ ಸಾಮಾನು ತರೋದು, ಮಕ್ಕಳನ್ನು ಸ್ಕೂಲಿಗೆ ಬಿಡೋದು, ಡಾಕ್ಟರಲ್ಲಿಗೆ ಕರೆದುಕೊಂಡು ಹೋಗುವುದು, ಯೂರಿಯಾ ಗೊಬ್ಬರದ ಮೂಟೆ ತರುವುದು, ಶುಕ್ರವಾರದ ಸಂತೆಗೆ, ಮಟನ್ ಸ್ಟಾಲ್‌ಗೂ ವಿಸಿಟ್. ಹೀಗೆ ಕಾರಿನ ನನ್ನ ಓಡಾಟ ದಿನನಿತ್ಯದ ಭಾಗವೇ ಆಗಿಹೋಯ್ತು.

ಹೀಗೇ ಉತ್ಸಾಹದಲ್ಲಿದ್ದಾಗ ಒಮ್ಮೆ ಮೂಡಿಗೆರೆಯಿಂದ ಬಂದವಳು ಷೆಡ್ಡಿನಲ್ಲಿ ಕಾರು ನಿಲ್ಲಿಸಲು ತೇಜಸ್ವಿ ಮಾಡಿದ ಹಾಗೇ ಮಾಡುವುದೆಂದು ಸ್ಪೀಡಿನಲ್ಲಿ ‘ರೊಯ್’ ಅಂತ ಸ್ಟೇರಿಂಗ್ ತಿರುಗಿಸಿದೆ. ನೆಟ್ಟಗೆ ಹೋಗಿ ಕಂಬಕ್ಕೆ ಬಡಿಯಿತು. ಜೋರಾದ ಸದ್ದಾಯ್ತು. ಹೆಡ್‌ಲೈಟು ನುಜ್ಜುಗುಜ್ಜಾಗಿ ಒಳಹೊಕ್ಕಿತು, ಬಂಪರ್‌ಗೆ ಗುನ್ನಾ ಬಿದ್ದು ಅದೂ ಒಳಗೆ ಹೋಗಿತ್ತು. ತೇಜಸ್ವಿ ತುಂಬಾ ಬೈತಾರೆಂದು ಸುಮ್ಮನೆ ನಿಂತೇ ಇದ್ದೆ. ಬಂದು ನೋಡಿದವರೇ ‘ಏನು ಮಾರಾಯ್ತಿ, ಅಷ್ಟು ಗೊತ್ತಾಗೋದು ಬೇಡ್ವಾ’ ಎಂದರು. ಕೂಡಲೇ ಮೈಸೂರಿಗೆ ಹೊರಟೆವು ರಿಪೇರಿ ಮಾಡಿಸಲು. ಅವಸರ ಅವಸರದಲ್ಲೇ ನಾನು ಸಾಮಾನು ಸರಂಜಾಮು ಪ್ಯಾಕ್ ಮಾಡಿದೆ. ಕಾರು ಸರಿಮಾಡಿಸಿದ್ದೇ ತೋಟಕ್ಕೆ ವಾಪಸಾದೆವು. ಅವರಿಗೆ ಕಾರು ಯಾವಾಗಲೂ ನೀಟಾಗಿರಬೇಕಿತ್ತು.

ನಮ್ಮ ಬಿಳಿ ಫಿಯೆಟ್ ಕಾರಿನ ನಂಬರ್ ಎಂಇವೈ-501 ಇದು ಊರಿನವರಿಗೆಲ್ಲ ಬಾಯಿಪಾಠ ಆಗಿತ್ತು. ನಾನು ಹೋದಲ್ಲೆಲ್ಲಾ 501 ಅಂತಲೇ ಕರೀತಿದ್ದರು. ಹೀಗೆ ನನ್ನ ಡ್ರೈವಿಂಗ್ ಪ್ರಸಿದ್ಧಿಗೆ ಬಂದಿತ್ತು. ಸ್ಕೂಲು ಮಕ್ಕಳಂತೂ ನಮ್ಮ ಕಾರು ನೋಡುತ್ತಿದ್ದಂತೆ ’501’ ಎಂದು ಕೂಗಿಕೊಳ್ಳುವರು. ಮೂಡಿಗೆರೆಯಲ್ಲಿ ನಾನೇ ಮೊಟ್ಟಮೊದಲ ಮಹಿಳಾ ಡ್ರೈವರ್ ಆಗಿದ್ದೆ. ಹೀಗೇ ಒಮ್ಮೆ ಬೇರೆ ಊರಿನಿಂದ ಬಂದವರು ಮೂಡಿಗೆರೆಯಲ್ಲಿ ತೇಜಸ್ವಿಯವರ ತೋಟ ಎಲ್ಲಿ ಅಂತ ದಾರಿಯಲ್ಲಿ ಹೋಗುತ್ತಿದ್ದ ಮಹಿಳೆಯೊಬ್ಬರನ್ನು ಕೇಳಿದರಂತೆ. ಆಕೆ ‘ಬಿಳಿ ಕಾರು ಬಿಟ್ಕೊಂಡು ಓಡಾಡ್ತರಲ್ಲ ಒಬ್ಬರು ಅಮ್ಮ, ಅವ್ರ ಗಂಡನಾ’ ಎಂದು ಕೇಳಿದರಂತೆ. ಮನೆಗೆ ಬಂದ ಅತಿಥಿಗಳು ತೇಜಸ್ವಿ ಹತ್ತಿರ ಹೇಳಿಕೊಂಡು ನಗುತ್ತಿದ್ದರು.

ಈಗ ಕಾಲು ಶತಮಾನವೇ ಕಳೆದಿದೆ. ಆ ಕಾಲೇಜು ಕಾರಿಡಾರಿನಲ್ಲಿ ನಿಂತು ನೋಡುತ್ತಿದ್ದ ಹುಡುಗರು ದೊಡ್ಡವರಾಗಿದ್ದಾರೆ. ಮನೆಗೆ ಬಂದಾಗ ಈಗಲೂ ಕಾರಿನ ನೆನಪುಗಳನ್ನು ಮೆಲುಕು ಹಾಕುವರು.

(ಅಭಿನವ ಪ್ರಕಟಿಸುತ್ತಿರುವ ‘ನನ್ನ ಡ್ರೈವಿಂಗ್ ಡೈರಿ’ (ಕೆಲವು ನೆನಪು – ಸಂದರ್ಶನಗಳು) ಪುಸ್ತಕದ ಅದೇ ಹೆಸರಿನ ಅಧ್ಯಾಯದ ಆಯ್ದ ಭಾಗ.)

ನನ್ನ ಡ್ರೈವಿಂಗ್ ಡೈರಿ
ಮೊದಲ ಮುದ್ರಣ 2021, ಪುಟಗಳು 132, ಬೆಲೆ ರೂ 150/-
ಪ್ರ: ಅಭಿನವ ಪ್ರಕಾಶನ


ಇದನ್ನೂ ಓದಿ: ರೈತ ಹೋರಾಟ ಮಾದರಿಯಲ್ಲೇ ಕಾರ್ಮಿಕ ಹೋರಾಟಕ್ಕೆ ವೇದಿಕೆ ಸಜ್ಜು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸ್ವಾತಿ ಮಲಿವಾಲ್ ಮೇಲಿನ ಹಲ್ಲೆ ಪ್ರಕರಣ: ಕೇಜ್ರಿವಾಲ್ ಸಹಾಯಕ ಬಂಧನ

0
ಎಎಪಿ ಸಂಸದೆ ಸ್ವಾತಿ ಮಲಿವಾಲ್ ಅವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಮತ್ತು ಮಾಜಿ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್ ಅವರನ್ನು ಶನಿವಾರ ದೆಹಲಿ...