Homeಪುಸ್ತಕ ವಿಮರ್ಶೆ’ಹಿಂದೂ ಎಂದು ಕರೆದುಕೊಳ್ಳುವ ವ್ಯಕ್ತಿಯಾಗಿ ನಾನು ಸಾಯುವುದಿಲ್ಲ!’ - ಬಿ.ಆರ್. ಅಂಬೇಡ್ಕರ್

’ಹಿಂದೂ ಎಂದು ಕರೆದುಕೊಳ್ಳುವ ವ್ಯಕ್ತಿಯಾಗಿ ನಾನು ಸಾಯುವುದಿಲ್ಲ!’ – ಬಿ.ಆರ್. ಅಂಬೇಡ್ಕರ್

- Advertisement -
- Advertisement -

ಅಶೋಕ್ ಗೋಪಾಲ್ ರಚಿಸಿರುವ ಬಾಬಾಸಾಹೇಬ್ ಅವರ ಹೊಸ ಜೀವನ ಚರಿತ್ರೆ ’ಎ ಪಾರ್ಟ್ ಅಪಾರ್ಟ್’ ಪುಸ್ತಕದಿಂದ ಆಯ್ದ ಭಾಗ

ಪರಿಚಯ:

1935ರ ದಸರಾ ಮುಗಿದು ಒಂದು ವಾರದ ಬಳಿಕ ಬಿ.ಆರ್. ಅಂಬೇಡ್ಕರ್ ಅವರು ’ಆಘಾತಕಾರಿ’ ಸುದ್ದಿ ಎನ್ನಲಾದ ಹೇಳಿಕೆಯೊಂದನ್ನು ನೀಡಿದರು. 13 ಅಕ್ಟೋಬರ್ 1935ರಂದು, ಯೆವಲಾದ ಸಭೆಯನ್ನುದ್ದೇಶಿಸಿ, ’ತನ್ನನ್ನು ತಾನು ಹಿಂದೂ ಎಂದು ಕರೆದುಕೊಳ್ಳುವ ವ್ಯಕ್ತಿಯಾಗಿ ನಾನು ಸಾಯುವುದಿಲ್ಲ!’ ಎಂದು ಘೋಷಿಸಿದರು. ಕೆಲವೇ ಕೆಲವು ಮಾಧ್ಯಮಗಳು ಮಾತ್ರ ಸುದ್ದಿಯನ್ನು ಪ್ರಕಟಿಸಿದವು. ಏಪ್ರಿಲ್ 14ರಂದು ಬಾಬಾಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನದ ಸಂದರ್ಭದಲ್ಲಿ ಬಿಡುಗಡೆಗೊಳ್ಳುತ್ತಿರುವ ಅಶೋಕ್ ಗೋಪಾಲ್ ಅವರು ಬರೆದಿರುವ ’ಎ ಪಾರ್ಟ್ ಅಪಾರ್ಟ್: ದಿ ಲೈಫ್ ಅಂಡ್ ಥಾಟ್ ಆಫ್ ಬಿ.ಆರ್.ಅಂಬೇಡ್ಕರ್’ (A Part Apart: The Life and Thought of B.R. Ambedkar), ಪುಸ್ತಕದ ಮೊದಲ ಅಧ್ಯಾಯದಿಂದ ಆಯ್ದ ಭಾಗದ ಅನುವಾದವನ್ನು ನಮ್ಮ ಓದುಗರಿಗೆ ನೀಡಲಾಗಿದೆ. ಪ್ರಸ್ತುತ ಲೇಖನವು 1935ರ ಘೋಷಣೆಯು ಅಂಬೇಡ್ಕರ್ ಅವರ ಜೀವನದಲ್ಲಿ ಏಕೆ ಮುಖ್ಯವೆನಿಸುತ್ತದೆ ಎಂಬುದರ ಬಗ್ಗೆ ಬೆಳಕು ಚೆಲ್ಲುತ್ತದೆ.

1935ರ ಅಕ್ಟೋಬರ್ 13ರ ರಾತ್ರಿ, ಅಂದಿನ ಬಾಂಬೆ ಪ್ರಾಂತ್ಯಕ್ಕೆ ಸೇರಿದ್ದ ನಾಸಿಕ್‌ನ ಸಮೀಪವಿರುವ ಯೆವಲಾ ಎಂಬ ಪುಟ್ಟ ಪಟ್ಟಣವೊಂದರಲ್ಲಿ ತಮ್ಮ ಸಾವಿರಾರು ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುತ್ತಾ, ಬಿ.ಆರ್. ಅಂಬೇಡ್ಕರ್ ಅವರು ಹಿಂದೂ ಧರ್ಮವನ್ನು ತ್ಯಜಿಸುವುದಾಗಿ ಘೋಷಿಸಿದರು.

ಅವರ ಹೇಳಿಕೆಯನ್ನು ಟಿಪ್ಪಣಿ ಮಾಡಿಕೊಳ್ಳಲು ಪತ್ರಕರ್ತರ ದಂಡೇನು ಅಲ್ಲಿ ನೆರೆದಿರಲಿಲ್ಲ. ಪ್ರಾಂತ್ಯದ ಮರಾಠಿ ಭಾಷಿಕರಿದ್ದ ಪ್ರದೇಶಗಳಲ್ಲಿ ಪ್ರಕಟಗೊಳ್ಳುತ್ತಿದ್ದ ಪತ್ರಿಕೆಗಳಲ್ಲಿ ಹೆಚ್ಚಿನವು ರಾಜಕೀಯ ವಾರಪತ್ರಿಕೆಗಳೇ ಆಗಿದ್ದವು ಮತ್ತು ಅವುಗಳು ವರದಿಗಾರರ ದೊಡ್ಡ ತಂಡಗಳನ್ನೇನು ಹೊಂದಿರಲಿಲ್ಲ. ಮೇಲಾಗಿ, ಅಂದಿನ ಪತ್ರಿಕೆಗಳ ಕೇಂದ್ರಸ್ಥಾನಗಳಾಗಿದ್ದ ಮುಂಬೈ ಅಥವಾ ಪುಣೆಯಿಂದ ಇನ್ನೂರು ಕಿಲೋಮೀಟರ್ ದೂರದಲ್ಲಿರುವ ಸಣ್ಣ ಪಟ್ಟಣವೊಂದರಲ್ಲಿ ಅಂಬೇಡ್ಕರ್ ಭಾಗವಹಿಸಬೇಕಿದ್ದ ಸಮಾವೇಶಕ್ಕೆ ತೆರಳಿ ಸುದ್ದಿಮಾಡುವಂತೆ ವರದಿಗಾರರನ್ನು ಒತ್ತಾಯಿಸಲು ಬಹುತೇಕ ಪತ್ರಿಕೆಗಳಿಗೆ ಯಾವುದೇ ಬಲವಾದ ಕಾರಣಗಳೂ ಇರಲಿಲ್ಲ. ಅಂದಿಗೆ ಅಂಬೇಡ್ಕರರು ರಾಷ್ಟ್ರೀಯ ನಾಯಕರೇ ಆಗಿದ್ದರೂ, ಅವರು ಗಾಂಧಿವಾದಿಗಳು, ಕಾಂಗ್ರೆಸ್ಸಿಗರು (ಎಲ್ಲರೂ ಗಾಂಧಿವಾದಿಗಳಾಗಿರಲಿಲ್ಲ), ಹಿಂದೂ ಮಹಾಸಭಾ, ಮುಸ್ಲಿಂ ಲೀಗ್, ಕಮ್ಯುನಿಸ್ಟರು, ಕಾಂಗ್ರೆಸ್ ಸಮಾಜವಾದಿಗಳು ಅಥವಾ ಮತ್ತಿತರ ಸುಧಾರಣಾವಾದಿಗಳು (Moderates) ಹೀಗೆ ಯಾವುದೇ ಪ್ರಮುಖ ರಾಜಕೀಯ ಬಣಗಳೊಂದಿಗೆ ಗುರುತಿಸಿಕೊಂಡಿರಲಿಲ್ಲ. ಪರಿಶಿಷ್ಟ ಜಾತಿ ಎಂಬ ಹೆಸರು ಅಧಿಕೃತವಾಗಿ ಬರುವ ಮೊದಲು ಡಿಪ್ರೆಸ್ಡ್ ಕ್ಲಾಸಸ್ ಎಂದು ಕರೆಯಲಾಗುತ್ತಿದ್ದ ಸಮುದಾಯದಾಚೆಗೆ ಅವರು ಜನಪ್ರಿಯ ವ್ಯಕ್ತಿಯಾಗಿರಲಿಲ್ಲ. ಅಂದಿನ ಭಾರತೀಯ ಇಂಗ್ಲಿಷ್ ದಿನಪತ್ರಿಕೆಗಳು ಅಂಬೇಡ್ಕರರಿಗೆ ’ಭಾರತೀಯ ಸ್ವಾತಂತ್ರ್ಯದ ಶತ್ರುವಿನಿಂದ (ಬ್ರಿಟಿಷರಿಂದ) ಶೋಷಣೆಗೊಳಗಾಗಲು ಸಿದ್ಧವಾಗಿರುವವ’. ’ಕೆರಿಯರಿಸ್ಟ್’ (Careerist ವೃತ್ತಿಜೀವನ ಕಟ್ಟಿಕೊಳ್ಳುವುದರ ಬಗ್ಗೆಯಷ್ಟೇ ಆಸಕ್ತನಾಗಿರುವ)’, ’ನಂಬಲಾಗದಂತೆ ತೋರಿಕೆಯ ವ್ಯಕ್ತಿಯಾಗಿದ್ದು’ ಬ್ರಿಟಿಷ್ ಸರ್ಕಾರದಿಂದ ’ನಾಮನಿರ್ದೇಶಿಸಲ್ಪಟ್ಟವ’ ಮತ್ತು ಸಾಮೂಹಿಕ ಬೆಂಬಲವೇ ಇಲ್ಲದೇ ’ತನ್ನ ಬಗ್ಗೆಯೇ ಹೊಗಳಿಕೊಳ್ಳುವ ವ್ಯಕ್ತಿ’ ಎಂದು ಹಣೆಪಟ್ಟಿ ಕಟ್ಟಿದವು. (SM: 41–42, 54, 57, 68).

ಮಾಧ್ಯಮಗಳ ಪ್ರಕಾರ ಇದಕ್ಕಿಂತಲೂ ಪ್ರಮುಖ ಘಟನೆಗಳು ಜಗತ್ತಿನೆಲ್ಲೆಡೆ ನಡೆಯುತ್ತಿದ್ದವು. ಮುಸೊಲಿನಿಯ ಪಡೆಗಳು ಅಬಿಸ್ಸಿನಿಯಾ (ಇಥಿಯೋಪಿಯಾ) ಮೇಲೆ ಹಾದುಹೋಗಿದ್ದವು ಹಾಗೂ ಯುರೋಪಿನಲ್ಲಿ ಯುದ್ಧದ ಭೀತಿ ಮನೆಮಾಡಿತ್ತು. ಇನ್ನು ಭಾರತದ ಮಟ್ಟಿಗೆ ಎಲ್ಲರ ಗಮನವೂ, ಇನ್ನೇನು ನಡೆಯಲಿದ್ದ ಪ್ರಾಂತೀಯ ಚುನಾವಣೆಗಳ ನಂತರ, ಸ್ವಾತಂತ್ರ್ಯ ಚಳವಳಿಯನ್ನು ಮುನ್ನಡೆಸುತ್ತಿದ್ದ ಅತಿದೊಡ್ಡ ರಾಜಕೀಯ ಪಕ್ಷವಾಗಿದ್ದ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ (ಐ.ಎನ್.ಸಿ) ಅಧಿಕಾರದ ಸ್ಥಾನಗಳನ್ನು ಹೊಂದಬೇಕೇ ಎಂಬುದರ ಬಗ್ಗೆ ಮುಂಬರುವ ಅಖಿಲ ಭಾರತ ಕಾಂಗ್ರೆಸ್ ಸಮಿತಿಯಲ್ಲಿ (ಎ.ಐ.ಸಿ.ಸಿ) ನಿರ್ಧಾರ ಕೈಗೊಳ್ಳುವ ಕಡೆಗಿತ್ತು. ಯೆವಲಾ ಘಟನೆಯ ಎರಡು ದಿನಗಳ ನಂತರ, ಮುಂಬೈನಿಂದ ಪ್ರಕಟವಾಗುತ್ತಿದ್ದ ಪ್ರಮುಖ ಇಂಗ್ಲಿಷ್ ದೈನಿಕ ದಿ ಬಾಂಬೆ ಕ್ರಾನಿಕಲ್ (The Bombay Chronicle) ತನ್ನ ಮೊದಲನೇ ಪುಟದಲ್ಲಿಯೇ “Nemesis overtakes Hindu Orthodoxy? Ambedkar throws bombshell” ಅಥವಾ “ಹಿಂದೂ ಸಂಪ್ರದಾಯದ ವಿರುದ್ಧ ಪ್ರತೀಕಾರ? ಸಿಡಿಮದ್ದು ಸಿಡಿಸಿದ ಅಂಬೇಡ್ಕರ್ ಎಂಬ ಶೀರ್ಷಿಕೆಯನ್ನು ಪ್ರಕಟಿಸಿತು. ಆದರೆ, ಅವರ ಭಾಷಣದ ಬಗೆಗಿನ ವರದಿಯು ಸಂಕ್ಷಿಪ್ತವಾಗಿತ್ತು. ಅಬಿಸ್ಸಿನಿಯಾ ಮತ್ತು ಎಐಸಿಸಿ ವಿಚಾರವೇ ಜಾಗವನ್ನು ನುಂಗಿತ್ತು.

ಯೆವಲಾದಲ್ಲಿ ಅಂಬೇಡ್ಕರ್ ಅವರು ಮಾಡಿದ ಭಾಷಣವನ್ನು ವಿಸ್ತಾರವಾಗಿ ವರದಿಮಾಡಿದ್ದು ಮುಂಬೈನಿಂದ ಪ್ರಕಟವಾದ ವಿವಿಧ್ ವೃತ್ತ (ವೈವಿಧ್ಯಮಯ ಸುದ್ದಿ) ಎಂಬ ಮರಾಠಿ ವಾರಪತ್ರಿಕೆ ಮಾತ್ರವೇ. ಗಾಂಧಿಯನ್ನು ವಿರೋಧಿಸಿದ ಸುಧಾರಣಾವಾದಿ ಹಾಗೂ ಈ ಪತ್ರಿಕೆಯ ಸ್ಥಾಪಕ-ಸಂಪಾದಕರಾದ ರಾಂಭಾವು ತಟ್ನಿಸ್ ಅವರು ಅಂಬೇಡ್ಕರರನ್ನು ಬೆಂಬಲಿಸಿದ ಕೆಲವೇ ಸವರ್ಣೀಯ ಮಹಾರಾಷ್ಟ್ರಿಗರಲ್ಲಿ ಒಬ್ಬರು. ಅಂಬೇಡ್ಕರ್ ಅವರು ತಟ್ನಿಸ್‌ರನ್ನು ಬಲ್ಲವರಾಗಿದ್ದರು ಮತ್ತು 20 ಅಕ್ಟೋಬರ್ 1935ರಂದು ವಿವಿಧ್ ವೃತ್ತದಲ್ಲಿ ಪ್ರಕಟವಾದ ವರದಿಯ ಮೂಲ ನಿಸ್ಸಂಶಯವಾಗಿ ಅವರೇ ಆಗಿದ್ದರು. ಆ ಲೇಖನದ ಪ್ರಕಾರ, ಅಂಬೇಡ್ಕರರು ತಮ್ಮ ಭಾಷಣದಲ್ಲಿ ಈ ಕೆಳಗಿನ ಹೇಳಿಕೆಗಳನ್ನು ನೀಡಿದ್ದರು:

“’ಅಸ್ಪೃಶ್ಯ ಹಿಂದೂ’ ಎಂಬ ಕಳಂಕದೊಂದಿಗೆ ಹುಟ್ಟುವ ದೌರ್ಭಾಗ್ಯ ನನ್ನದಾಗಿತ್ತು; ಅದು ನನ್ನ ಕೈಯಲ್ಲಿರಲಿಲ್ಲ. ಅದೇನೇ ಇದ್ದರೂ, ನಾನು ಈ ಅವಮಾನಕರ ಸ್ಥಿತಿಯಿನ್ನು ಪಲ್ಲಟಗೊಳಿಸಿ ನನ್ನ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಬಹುದು. ನಾನದನ್ನು ಮಾಡಬಲ್ಲೆ ಎಂಬುದರ ಬಗ್ಗೆ ಸಣ್ಣ ಅನುಮಾನವೂ ನನಗಿಲ್ಲ. ನಾನು ಸ್ಪಷ್ಟಪಡಿಸುತ್ತೇನೆ: ತನ್ನನ್ನು ಹಿಂದೂ ಎಂದು ಕರೆದುಕೊಳ್ಳುವ ವ್ಯಕ್ತಿಯಾಗಿ ನಾನು ಸಾಯುವುದಿಲ್ಲ!” (BAWS 18-1: 432)

ಘೋಷಣೆಯ ಮೊದಲ ಭಾಗದಲ್ಲಿ ಒಬ್ಬನ ಜನ್ಮಾಧಾರಿತ ಸ್ಥಿತಿಯನ್ನು ಬದಲಾಯಿಸುವ ಸಾಮರ್ಥ್ಯವನ್ನು, ವಿಶ್ವದಲ್ಲಿನ ಯಾವುದೇ ಶಕ್ತಿಯನ್ನೂ ಮೀರಿದ ಆಯ್ಕೆಗಿದೆ ಎಂದು ಹೇಳುವ ಮೂಲಕ ಅಂಬೇಡ್ಕರರು ಮಾನವ ಸ್ವಾತಂತ್ರ್ಯದ ಅಗಾಧತೆಯನ್ನು ಸೂಚಿಸುತ್ತಾರೆ .ಆದರೆ, ಘೋಷಣೆಯ ಕೊನೆಯ ಭಾಗವು ಅವರ ಮಾತುಗಳಲ್ಲಿನ ತೂಕವನ್ನು ಇಲ್ಲವಾಗಿಸುತ್ತದೆ.

ಮುಂಬೈ ಮೂಲದ ಸಮರ್ಥ ಜೀವನ ಚರಿತ್ರೆಕಾರರಾದ ಧನಂಜಯ್ ಕೀರರು ಬರೆದ ಹಾಗೂ ಇಂಗ್ಲಿಷಿನಲ್ಲಿ ಪ್ರಕಟಗೊಂಡ ಅಂಬೇಡ್ಕರರ ಮೊದಲ ಜೀವನಚರಿತ್ರೆಯಾದ ’ಡಾ. ಅಂಬೇಡ್ಕರ್: ಲೈಫ್ ಅಂಡ್ ಮಿಷನ್’ (Dr.Ambedkar: Life and Mission) ಪುಸ್ತಕದಲ್ಲಿ: ’ನಾನು ಹಿಂದೂವಾಗಿ ಸಾಯುವುದಿಲ್ಲ (1954/2002: 253) ಎಂದು ಉಲ್ಲೇಖಿಸಲಾಗಿದೆ. 1935ರ ಹೊತ್ತಿಗೆ ಕೀರರಿಗೆ ಇಪ್ಪತ್ತರ ಹರೆಯ. ಆಗ ಅವರು ಅಂಬೇಡ್ಕರರೊಂದಿಗೆ ಅಥವಾ ಯೆವಲಾದೊಂದಿಗೆ ಯಾವುದೇ ಸಂಪರ್ಕ ಹೊಂದಿರಲಿಲ್ಲ. ಆದಾಗ್ಯೂ, ನಂತರದ ಕೆಲವು ದಶಕಗಳವರೆಗೂ ಅಂಬೇಡ್ಕರರ ಬಗ್ಗೆ ಇಂಗ್ಲಿಷ್‌ನಲ್ಲಿ ಲಭ್ಯವಿದ್ದ ಏಕೈಕ ಪುಸ್ತಕವಾಗಿದ್ದ ಕಾರಣಕ್ಕೆ, ’ನಾನು ಹಿಂದೂವಾಗಿ ಸಾಯುವುದಿಲ್ಲ’ ಎಂಬ ಹೇಳಿಕೆಯು ಹಲವಾರು ಪ್ರಕಟಣೆಗಳಲ್ಲಿ ಪದೇಪದೇ ಉಲ್ಲೇಖವಾಗುತ್ತದೆ.

’ನಾನು ಹಿಂದೂವಾಗಿ ಸಾಯುವುದಿಲ್ಲ’ ಎಂಬ ಹೇಳಿಕೆಯು ಧಾರ್ಮಿಕ ನಂಬಿಕೆಯನ್ನೂ ಮತ್ತು/ಅಥವಾ ಸಾಮಾಜಿಕ ಸಂಬಂಧಗಳನ್ನೂ ಸೂಚಿಸುತ್ತದೆ. ಆದರೆ ವಿವಿಧ್ ವೃತ್ತದಲ್ಲಿ ಕಂಡುಬರುವ (ಮೇ ಹಿಂದೂ ಮ್ಹನ್ವತ್ ಮರ್ನರ್ ನಹಿ) ಎಂಬ ಉಲ್ಲೇಖವು ಅಂಬೇಡ್ಕರರು ಮಾತನಾಡುತ್ತಿದ್ದದ್ದು ತಮ್ಮ ಧಾರ್ಮಿಕ ನಂಬಿಕೆಗಳ ಬಗ್ಗೆಯಲ್ಲ; ಬದಲಿಗೆ, ಒಂದು ಸಮುದಾಯದೊಂದಿಗೆ ತಾವು ಅರಸದಿದ್ದರೂ ಕಟ್ಟಲಾಗುತ್ತಿದ್ದ ಬಾಂಧವ್ಯದ ಬಗ್ಗೆ. ಅವರು ಮಾತನಾಡುತ್ತಿದ್ದದ್ದು ತಮ್ಮನ್ನು ಹಿಂದೂಗಳು ಎಂದು ಕರೆದುಕೊಳ್ಳುವ ಭಾರತೀಯರೆಂಬ ದೊಡ್ಡಗುಂಪಿನಿಂದ ಸಾರ್ವಜನಿಕವಾಗಿ ಬೇರ್ಪಡುವ ಮೂಲಕ ಅವರಿಗೆ ನೀಡಲಾಗುತ್ತಿದ್ದ ಬಂಧಗಳನ್ನು ತಿರಸ್ಕರಿಸುವ ಬಗ್ಗೆ. ಡಿಪ್ರೆಸ್ಡ್ ಕ್ಲಾಸಸ್ (DCs) ಎಂದು ಕರೆಯಲ್ಪಡುತ್ತಿದ್ದ ಜನರನ್ನು ತನ್ನೊಂದಿಗೆ ಮತ್ತೊಂದು ಧರ್ಮಕ್ಕೆ ಕೊಂಡುಹೋಗುವುದರ ಬಗ್ಗೆ ಅವರು ಮಾತನಾಡಲಿಲ್ಲ. ಆದರೂ, ಡಿಪ್ರೆಸ್ಡ್ ಕ್ಲಾಸಸ್‌ಗಳ ನಡುವೆ ಅವರಿಗಿದ್ದ ಸ್ಥಾನಮಾನದಿಂದಾಗಿ ಇದು ಸಾಮುದಾಯಿಕ ಬಾಂಧವ್ಯಗಳ ಸಾಮೂಹಿಕ ಬದಲಾವಣೆಯನ್ನು ಸೂಚಿಸಿತು. ಯೆವಲಾದಲ್ಲಿ ಅವರು ಅಂಗೀಕರಿಸಿದ ನಿರ್ಣಯದ ಸಾರಾಂಶ 1935ರ ಅಕ್ಟೋಬರ್ 15ರಂದು ದಿ ಬಾಂಬೆ ಕ್ರಾನಿಕಲ್‌ನಲ್ಲಿ ವರದಿಯಾಗಿತ್ತು. ಅದು ’ಹಿಂದೂ ಮಡಿಲಿನಿಂದ ಡಿಪ್ರೆಸ್ಡ್ ಕ್ಲಾಸಸ್‌ಗಳ ಸಂಪೂರ್ಣ ಬೇರ್ಪಡಿಕೆ ಮತ್ತು ಅವರಿಗೆ ಸಮಾನ ಸ್ಥಾನಮಾನವನ್ನು ಒದಗಿಸುವ ಹಾಗೂ ಆ ಧರ್ಮದ ಇತರರಂತೆಯೇ ನಡೆಸಿಕೊಳ್ಳುವ ಯಾವುದೇ ಇತರೆ ಧರ್ಮದ ಸ್ವೀಕರಿಕೆ.’

ಅಂದಿನ ಕೋಮುವಾದಿ ಕಾಲಘಟ್ಟದಲ್ಲಿ, ಎಲ್ಲೆಡೆಗೆ ಸುದ್ದಿ ವೇಗವಾಗಿ ಹರಡಿತು. ಇದಕ್ಕೆ ಮೊಟ್ಟಮೊದಲು ಪ್ರತಿಕ್ರಿಯಿಸಿದವರಲ್ಲಿ ’ಮಹಾತ್ಮ’ ಗಾಂಧಿ ಕೂಡ ಒಬ್ಬರು. ಯೆವಲಾದಲ್ಲಿ ಘೋಷಣೆ ಮೊಳಗಿದ ಮರುದಿನ ’ಡಾ. ಅಂಬೇಡ್ಕರ್ ಅವರು ಮಾಡಿದ್ದಾರೆ ಎನ್ನಲಾದ ಭಾಷಣವನ್ನು ನಂಬಲಾಗುತ್ತಿಲ್ಲ’ ಎಂದು ಅಸೋಸಿಯೇಟೆಡ್ ಪ್ರೆಸ್ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯೆ ನೀಡಿದ್ದರು (SM: 134).

ಇದನ್ನೂ ಓದಿ: ವರ್ಗದ ಕುರಿತು ಬಾಬಾಸಾಹೇಬ ಅಂಬೇಡ್ಕರ್

ಗಾಂಧೀಜಿ ಆಘಾತಕ್ಕೊಳಗಾಗಲು ಕಾರಣವಿತ್ತು. ಇದಕ್ಕೆ ಮೂರು ವರ್ಷಗಳ ಹಿಂದೆಯಷ್ಟೆ ಪೂನಾ ಒಪ್ಪಂದ ಎಂದು ಕರೆಯಲ್ಪಡುವ ಜಾತಿ ಹಿಂದೂಗಳು ಮತ್ತು ಡಿಪ್ರೆಸ್ಡ್ ಕ್ಲಾಸಸ್‌ಗಳ ನಡುವಿನ ಒಪ್ಪಂದದ ಬಗ್ಗೆ ಗಾಂಧಿ ಮತ್ತು ಅಂಬೇಡ್ಕರರು ಚರ್ಚಿಸಿದ್ದರು. ಸಾಂವಿಧಾನಿಕ ದೃಷ್ಟಿಕೋನದಿಂದ ನೋಡಿದಲ್ಲಿ ಈ ಒಪ್ಪಂದದ ಚರ್ಚೆಗಳು ನಡೆದದ್ದು ಶಾಸಕಾಂಗದಲ್ಲಿ ಡಿಪ್ರೆಸ್ಡ್ ಕ್ಲಾಸಸ್‌ಗಳ ಪ್ರಾತಿನಿಧ್ಯವನ್ನು ಯಾವ ಮಾದರಿಯ ಮತಕ್ಷೇತ್ರವು ಖಾತ್ರಿಪಡಿಸುತ್ತದೆ ಎಂಬುದರ ಬಗ್ಗೆ. ಜಂಟಿ ಮತಕ್ಷೇತ್ರ ಮತ್ತು ಪ್ರತ್ಯೇಕ ಮತಕ್ಷೇತ್ರದ ನಡುವೆ ಆಯ್ಕೆಗಳು ಲಭ್ಯವಿದ್ದವು. ಎರಡೂ ಮಾದರಿಯಲ್ಲಿ ಮೀಸಲಿರಿಸಲಾಗಿದ್ದ ಸ್ಥಾನಗಳಿಗೆ ಡಿಪ್ರೆಸ್ಡ್ ಕ್ಲಾಸಸ್‌ಗಳ ಅಭ್ಯರ್ಥಿಗಳು ಮಾತ್ರವೇ ಸ್ಪರ್ಧಿಸಬಹುದಾಗಿತ್ತು. ಜಂಟಿ ಮತಕ್ಷೇತ್ರದಲ್ಲಿ, ಮೀಸಲು ಕ್ಷೇತ್ರಗಳಲ್ಲಿನ ಎಲ್ಲಾ ಮತದಾರರು ಡಿಪ್ರೆಸ್ಡ್ ಕ್ಲಾಸಸ್‌ಗಳ ಅಭ್ಯರ್ಥಿಗಳಿಗೆ ಮತ ಚಲಾಯಿಸುವ ಹಕ್ಕನ್ನು ಹೊಂದಿದ್ದರೆ; ಪ್ರತ್ಯೇಕ ಮತಕ್ಷೇತ್ರದ ಅಡಿಯಲ್ಲಿ ಡಿಪ್ರೆಸ್ಡ್ ಕ್ಲಾಸಸ್‌ಗಳು ಮಾತ್ರವೇ ಮತ ಚಲಾಯಿಸುವ ಹಕ್ಕನ್ನು ಹೊಂದಿರುತ್ತಿದ್ದರು. ಅಂಬೇಡ್ಕರರು ಪ್ರತ್ಯೇಕ ಮತಕ್ಷೇತ್ರಕ್ಕಾಗಿ ಒತ್ತಾಯಿಸುತ್ತಿದ್ದರು. ಆದರೆ, ಇದು ಡಿಪ್ರೆಸ್ಡ್ ಕ್ಲಾಸಸ್‌ಗಳನ್ನು ಇತರ ಹಿಂದೂಗಳಿಂದ ಪ್ರತ್ಯೇಕಿಸುತ್ತದೆ ಎಂಬ ಕಾರಣಕ್ಕಾಗಿ ಪ್ರತ್ಯೇಕ ಮತಕ್ಷೇತ್ರದ ಕಲ್ಪನೆಯನ್ನೂ, ಅದರ ಎಲ್ಲಾ ಮಾದರಿಗಳನ್ನೂ ಗಾಂಧಿ ಕಟುವಾಗಿ ವಿರೋಧಿಸಿದರು. ಆಗಸ್ಟ್ 1932ರಲ್ಲಿ, ಬ್ರಿಟಿಷ್ ಸರ್ಕಾರವು ಡಿಪ್ರೆಸ್ಡ್ ಕ್ಲಾಸಸ್‌ಗಳಿಗೆ ಪ್ರತ್ಯೇಕ ಮತಕ್ಷೇತ್ರ ಯೋಜನೆಯನ್ನು ಜಾರಿಗೊಳಿಸುವುದಾಗಿ ಘೋಷಿಸಿತು. ಇದರ ವಿರುದ್ಧ ಪುಣೆಯ ಯರವಾಡದ ಕೇಂದ್ರ ಕಾರಾಗೃಹದ ಬಂಧನದಲ್ಲಿದ್ದ ಗಾಂಧಿ ಆಮರಣಾಂತ ಉಪವಾಸ ಮಾಡುವುದಾಗಿ ಘೋಷಿಸಿದರು. ಅಂಬೇಡ್ಕರರು ಯರವಾಡ ಜೈಲಿಗೆ ಭೇಟಿ ನೀಡಿ ಗಾಂಧಿಯವರೊಂದಿಗೆ ಮಾತುಕತೆ ನಡೆಸುವಂತೆ ಒತ್ತಾಯಿಸಲಾಯಿತು. ಅವರು 24 ಸೆಪ್ಟೆಂಬರ್ 1932ರಂದು ಸಹಿ ಮಾಡಿಲಾದ ಒಪ್ಪಂದದ ಅಡಿಯಲ್ಲಿ, ಅಂಬೇಡ್ಕರ್ ಅವರು ಪ್ರತ್ಯೇಕ ಮತಕ್ಷೇತ್ರದ ಬೇಡಿಕೆಯನ್ನು ಕೈಬಿಟ್ಟರು ಮತ್ತು ಜಂಟಿ ಮತಕ್ಷೇತ್ರದ ಸಂಕೀರ್ಣ ಯೋಜನೆಯೊಂದಕ್ಕೆ ಒಪ್ಪಿಗೆ ಸೂಚಿಸಿದರು.

ಇದು ಗಾಂಧಿಯವರ ಜಯ ಎಂದು ಮಾಧ್ಯಮಗಳಲ್ಲಿ ಬಿಂಬಿಸಲಾಯಿತು. ಆದರೆ, ಉಪವಾಸವನ್ನು ಕೈಗೊಳ್ಳುವ ಮೊದಲೇ ಗಾಂಧಿಯವರು ತಮ್ಮ ಮತ್ತೊಂದು ಗುರಿಗೆ ಹೋಲಿಸಿದಲ್ಲಿ ಚುನಾವಣಾ ವಿಚಾರಗಳು ತಮಗೆ ಹೆಚ್ಚು ಮುಖ್ಯವಲ್ಲ ಎಂದು ಘೋಷಿಸಿದರು. ಅಸ್ಪೃಶ್ಯರು ಮತ್ತು ಹಿಂದೂಗಳ ನಡುವಿನ ಗೋಡೆಗಳನ್ನು ಹೊಡೆದುರುಳಿಸುವುದನ್ನು ಅವರು ಬಯಸಿದ್ದರು. ಅಸ್ಪೃಶ್ಯರನ್ನು ಇನ್ನು ಮುಂದೆ ಹರಿಜನರು (’ದೇವರ ಮಕ್ಕಳು’) ಎಂದು ಕರೆಯಲಾಗುವುದು ಎಂದವರು ಆಗಲೇ ಘೋಷಿಸಿದ್ದರು. ಪೂನಾ ಒಪ್ಪಂದದ ನಂತರ, ಅವರು ಹರಿಜನ್ ವಾರಪತ್ರಿಕೆಯನ್ನು ಸ್ಥಾಪಿಸಿದರು, ಹರಿಜನ ಸೇವಕ ಸಂಘ ಎಂಬ ಸಂಘಟನೆಯ ಸ್ಥಾಪಿಸುವ ಸಂದರ್ಭದಲ್ಲಿ ಅದರ ಮೇಲ್ವಿಚಾರಣೆಯನ್ನು ವಹಿಸಿದ್ದರು, ಅಸ್ಪೃಶ್ಯರಿಗೆ ದೇವಾಲಯಗಳಿಗೆ ಪ್ರವೇಶವನ್ನು ನೀಡಬೇಕೆಂಬ ವಿಚಾರದ ಬಗ್ಗೆ ಹಿಂದೂ ಧಾರ್ಮಿಕ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸಿದರು, ಅಸ್ಪೃಶ್ಯತೆಯ ವಿರುದ್ಧದ ಅಭಿಯಾನದಲ್ಲಿ. ’ಸ್ವಯಂ ಮತ್ತು ಸಹವರ್ತಿಗಳ ಶುದ್ಧೀಕರಣ’ಕ್ಕಾಗಿ ಇಪ್ಪತ್ತೊಂದು ದಿನಗಳ ಉಪವಾಸವನ್ನು ಕೈಗೊಂಡರು (CWMG 55: 74) ಮತ್ತು ಹರಿಜನ ಸೇವಕ ಸಂಘಕ್ಕೆ ದೇಣಿಗೆ ಸಂಗ್ರಹಿಸಲು ಎಂಟು ತಿಂಗಳ ಕಾಲ ದೇಶಾದ್ಯಂತ ಪ್ರವಾಸ (1933-34) ಕೈಗೊಂಡರು. ಅನೇಕ ಸಾಂಪ್ರದಾಯಿಕವಾದಿ ಹಿಂದೂಗಳು ಗಾಂಧಿಯವರ ಕ್ರಮಗಳನ್ನು ವಿರೋಧಿಸಿದರು. ಅವರ ಹರಿಜನ ಪ್ರವಾಸದ ಸಂದರ್ಭದಲ್ಲಿ ವ್ಯಕ್ತವಾಗಿದ್ದ ವಿರೋಧವು ಹಲವಾರು ಸ್ಥಳಗಳಲ್ಲಿ ಹಿಂಸಾತ್ಮಕ ರೂಪವನ್ನು ಪಡೆದುಕೊಂಡಿತು;

ಪುಣೆಯಲ್ಲಿ, ಅವರ ಅಶ್ವದಳದ ಮೇಲೆ ಬಾಂಬ್ ಎಸೆಯಲಾಯಿತು. ಆದರೆ, ಹಲವಾರು ಹಿಂದೂಗಳು ದೇವಾಲಯಗಳನ್ನು ಅಸ್ಪೃಶ್ಯರಿಗೆ ತೆರೆದು ಪ್ರವೇಶ ಕಲ್ಪಿಸಿದ ಹಲವಾರು ವರದಿಗಳೂ ಇದ್ದವು. ಇದು ಗಾಂಧೀಜಿಯವರಿಗೆ ಅಸ್ಪೃಶ್ಯತೆಯು ’ಕೊನೆಯುಸಿರೆಳೆಯುವ ಹಂತ’ದಲ್ಲಿದೆ ಎಂಬುದರ ಸೂಚನೆಯಾಗಿತ್ತು (SM: 134).

ಅಂಬೇಡ್ಕರರ ಯೆವಲಾ ಘೋಷಣೆಯು ಅಸ್ಪೃಶ್ಯರ ವಿರುದ್ಧದ ’ದೌರ್ಜನ್ಯ’ ವರದಿಗಳಿಗೆ ಉದ್ವೇಗದ, ಕೋಪದ ಪ್ರತಿಕ್ರಿಯೆಯಾಗಿದೆ ಎಂದು ಗಾಂಧೀಜಿ ಸೂಚಿಸಿದರು. ಈ ರೀತಿಯ ದೌರ್ಜನ್ಯ ಘಟನೆಗಳಲ್ಲಿಯೇ ಅತಿ ಹೆಚ್ಚು ಪ್ರಚಾರ ಪಡೆದುಕೊಂಡ ಘಟನೆ ಗುಜರಾತ್‌ನ ಇಂದಿನ ಆನಂದ್ ಜಿಲ್ಲೆಯ ಕವಿತಾ ಎಂಬ ಹಳ್ಳಿಯಲ್ಲಿ ನಡೆದಿತ್ತು. ಆಗಸ್ಟ್ 1935ರಲ್ಲಿ ಅಸ್ಪೃಶ್ಯರು ತಮ್ಮ ಮಕ್ಕಳನ್ನು ಸರ್ಕಾರಿ ನಿಧಿಯಿಂದ ನಡೆಸಲಾಗುತ್ತಿದ್ದ ಹಳ್ಳಿಯ ಶಾಲೆಗೆ ಕಳುಹಿಸಿದ್ದರು. ಗ್ರಾಮದ ಹಿಂದೂಗಳು ತಮ್ಮ ಮಕ್ಕಳು ಶಾಲೆಗೆ ಹೋಗುವುದನ್ನು ತಡೆಹಿಡಿದು, ಅಸ್ಪೃಶ್ಯರನ್ನು ಥಳಿಸುವ ಮೂಲಕ, ಅವರ ಮನೆಗೆ ನುಗ್ಗಿ ಅವರ ಮನೆಯ ವಸ್ತುಗಳನ್ನು ಧ್ವಂಸಗೊಳಿಸುವುದು ಹಾಗೂ ಅವರ ಮೇಲೆ ಸಾಮಾಜಿಕ ಬಹಿಷ್ಕಾರವನ್ನು ಜಾರಿಗೊಳಿಸಿದರು. ಅಸ್ಪೃಶ್ಯರಿಗೆ ಕೂಲಿ ಕೆಲಸವನ್ನು ನಿರಾಕರಿಸಲಾಯಿತು ಹಾಗೂ ಅವರು ತಮ್ಮ ಜಾನುವಾರುಗಳನ್ನು ಮೇಯಿಸದಂತೆ ತಡೆಹಿಡಿಯಲಾಯಿತು. ಆಗ, ಅಸ್ಪೃಶ್ಯರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂಬ ಭರವಸೆಯನ್ನು ನೀಡಿದರು. ಆದರೂ, ಗಾಂಧಿಯವರ ಹರಿಜನ್ ಪತ್ರಿಕೆಯಲ್ಲಿ (24 ಆಗಸ್ಟ್, 31 ಆಗಸ್ಟ್, 5 ಅಕ್ಟೋಬರ್ 1935) ವರದಿಯಾದಂತೆ ಬಹಿಷ್ಕಾರವನ್ನು ಮುಂದುವರಿಸಲಾಯಿತು ಮತ್ತು ಅಸ್ಪೃಶ್ಯರು ಬಳಸುವ ಬಾವಿಗಳಿಗೆ ಸೀಮೆ ಎಣ್ಣೆಯನ್ನು ಸುರಿಯಲಾಯಿತು. ಗಾಂಧಿಯವರು ಈ ಕೃತ್ಯಗಳನ್ನು ಹಿಂದೂ ಧರ್ಮದ ಕೆಲವು ’ವಿಶ್ವಾಸದ್ರೋಹಿ ಅನುಯಾಯಿಗಳ’ ’ದೌರ್ಬಲ್ಯ’ವೆಂದರು; ಅವರ ಕೃತ್ಯಗಳನ್ನು ಬಳಸಿ ಧರ್ಮದ ಬಗ್ಗೆ ಶರಾ ಬರೆಯಬಾರದೆಂದರು (SM: 135).

ಅಂಬೇಡ್ಕರ್ ಗಾಂಧಿಯವರ ವ್ಯಾಖ್ಯಾನವನ್ನು ತಿರಸ್ಕರಿಸಿದರು. 15 ಅಕ್ಟೋಬರ್ 1935ರಂದು ದಿ ಬಾಂಬೆ ಕ್ರಾನಿಕಲ್ ಜೊತೆ ಮಾತನಾಡುತ್ತಾ: “ಕವಿತಾ ಅಥವಾ ಇನ್ನ್ಯಾವುದೇ ಸ್ಥಳದಲ್ಲಿ ಡಿಪ್ರೆಸ್ಡ್ ಕ್ಲಾಸಸ್‌ಗಳನ್ನು ದಬ್ಬಾಳಿಕೆಗೆ ಗುರಿಮಾಡಿರುವ ಬಗ್ಗೆ, ನಡೆಸಿಕೊಂಡಿರುವ ರೀತಿಯ ಬಗ್ಗೆ ಕೋಪದಿಂದ ನಾನಿದನ್ನು [ಯೆವಲಾದಲ್ಲಿನ ಘೋಷಣೆ] ಮಾಡಿದ್ದೇನೆ ಎಂದು ಯಾರೂ ಭಾವಿಸಬೇಡಿ. ಕವಿತಾ ಒಂದು ಪ್ರತ್ಯೇಕ ಘಟನೆಯಲ್ಲ, ಬದಲಿಗೆ ಅದು ಹಿಂದೂಗಳ ಪೂರ್ವಜರ ಧರ್ಮದಲ್ಲಿ ಸ್ಥಾಪಿಸಲಾದ [ಜಾತಿ] ವ್ಯವಸ್ಥೆಯ ಆಧಾರವೇ ಆಗಿದೆ. (“Ambedkar: made up my mind” 1935, emphasis added)

ಅಂಬೇಡ್ಕರರು ಆ ರೀತಿಯ ತೀರ್ಮಾನಕ್ಕೆ ಬಂದದ್ದು ಹೇಗೆ? ಇದು, ಅವರ ಉಳಿದ ಆಲೋಚನೆಗಳೊಂದಿಗೆ ಮತ್ತು ಸಾರ್ವಜನಿಕ ವ್ಯಕ್ತಿಯಾಗಿ ಅವರು ಕೈಗೊಂಡ ಇತರೆ ಕೆಲಸಗಳೊಂದಿಗೆ ಹೇಗೆ ಹೊಂದುತ್ತದೆ? 14 ಅಕ್ಟೋಬರ್ 1956ರಂದು ನಾಗಪುರದಲ್ಲಿ ಅವರ ನೇತೃತ್ವದಲ್ಲಿ ಬೌದ್ಧ ಧರ್ಮವನ್ನು ಸಾಮೂಹಿಕವಾಗಿ ಸ್ವೀಕರಿಸಿದ ಘಟನೆಗೆ ಇದು ಹೇಗೆ ಸಂಬಂಧಿಸಿದೆ?

ಈ ಪ್ರಶ್ನೆಗಳಿಗೆ ಉತ್ತರಗಳನ್ನು ಒದಗಿಸಲು ’ಎ ಪಾರ್ಟ್ ಅಪಾರ್ಟ್’ ಪ್ರಯತ್ನಿಸುತ್ತದೆ. 1940ರ ದಶಕದ ಆರಂಭದ ವೇಳೆಗೆ, ಅಂಬೇಡ್ಕರರು ಬೌದ್ಧ ಗ್ರಂಥಗಳ ಆಳವಾದ ಅಧ್ಯಯನದಲ್ಲಿ ತೊಡಗಿಸಿಕೊಂಡು, ಬುದ್ಧನ ಸಂದೇಶಗಳನ್ನು ತಮ್ಮದೇ ಆದ ಅನನ್ಯ ರೀತಿಯಲ್ಲಿ ಓದಿ-ಅರ್ಥೈಸಿಕೊಳ್ಳುವ ಮೂಲಕ ಪ್ರಜಾಪ್ರಭುತ್ವದ ಬಗ್ಗೆ ನೈತಿಕ ಪರಿಕಲ್ಪನೆಯೊಂದನ್ನು ಸಿದ್ಧಿಸಿಕೊಂಡಿದ್ದರು. ಅಂಬೇಡ್ಕರರೇ ಸ್ಥಾಪಿಸಿದ ನಿಯತಕಾಲಿಕೆ ಜನತಾ ಪತ್ರಿಕೆಯ 7 ಮೇ 1941ರ ಸಂಚಿಕೆಯಲ್ಲಿ ಪ್ರಕಟವಾದ “ಬುದ್ಧ ಜಯಂತಿ ಆನಿ ಟೀಚೆ ರಾಜಕೀಯ ಮಹತ್ವ (ಬುದ್ಧ ಜಯಂತಿ ಮತ್ತು ಅದರ ರಾಜಕೀಯ ಮಹತ್ವ) ಎಂಬ ಲೇಖನದಲ್ಲಿ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ತತ್ವಗಳ ತದ್ವಿರುದ್ಧವಾಗಿರುವ, ಜಾತಿಯನ್ನು ಸಮರ್ಥಿಸುವ, ಚಾತುರ್ವರ್ಣ್ಯ ಸಿದ್ಧಾಂತವನ್ನು ಪೋಷಿಸುವ ಬ್ರಾಹ್ಮಣ್ಯ ಧರ್ಮದ ವಿರುದ್ಧ ’ಕ್ರಾಂತಿಕಾರಿ ನಿಲುವು’ ತೆಗೆದುಕೊಂಡಿದ್ದನು ಎಂದು ಬರೆದಿದ್ದಾರೆ. ಆ ಕಾರಣಕ್ಕಾಗಿ, ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಸ್ಥಾಪಿಸಲು ಬುದ್ಧನ ಧರ್ಮದ ಅಗತ್ಯವಿತ್ತು ಅದು ಪ್ರಜಾಪ್ರಭುತ್ವವನ್ನು ಸರ್ಕಾರದ ಸ್ವರೂಪವೆಂದು ತಿಳಿಯುವ ಬದಲಿಗೆ ಸಮಾಜದ ರೂಪವಾಗಿ ಅರ್ಥೈಸಿಕೊಳ್ಳುತ್ತದೆ (BAWS 20: 331-35). ಆ ಸಮಯದಲ್ಲಿ ಅವರು ಮಾಡಿದ ವಾದ ಮತ್ತದಕ್ಕೆ ಪೂರಕವಾಗಿದ್ದ ಕೆಲವನ್ನು ನಂತರದ ವರ್ಷಗಳಲ್ಲಿ ಇನ್ನಷ್ಟು ಬೆಳೆಸಿದರು. ಇದು 1957ರಲ್ಲಿ ಅಂಬೇಡ್ಕರರ ಮರಣದ ನಂತರ The Buddha and His Dhamma (ಬುದ್ಧ ಮತ್ತು ಅವನ ಧಮ್ಮ) ಹೆಸರಿನಲ್ಲಿ ಪ್ರಕಟಗೊಂಡಿತು (BAWS 11).

ಮರಾಠಿ ಮತ್ತು ಇಂಗ್ಲಿಷ್ ಪಠ್ಯಗಳೆರಡನ್ನೂ ಒಟ್ಟಾಗಿರಿಸಿ, ಮುಂದಿನ ಅಧ್ಯಾಯಗಳಲ್ಲಿ ಅಂಬೇಡ್ಕರರ ಚಿಂತನೆಯು ಹೇಗೆ ಅವರ ಆರಂಭಿಕ ವರ್ಷಗಳಿಂದ ಅವರ ಜೀವನದ ಕೊನೆಯ ದಿನಗಳವರೆಗೆ ವಿಕಸನಗೊಳ್ಳುತ್ತಾ ಸಾಗುತ್ತದೆ ಎಂಬುದನ್ನು ಕಟ್ಟಿಕೊಡುತ್ತದೆ. ಈ ಕಥೆಯು ಅಂಬೇಡ್ಕರರ ಜೀವನದ ಅತ್ಯಂತ ಪ್ರಸಿದ್ಧ ಕೃತಿ, Annihilation of Caste ಜಾತಿ ವಿನಾಶ (1936) ಹಾಗೂ ಅತ್ಯಂತ ಕಾಳಜಿವಹಿಸಿ ಉತ್ತರಕ್ಕಾಗಿ ಶೋಧ ನಡೆಸುತ್ತಿದ್ದ ಪ್ರಶ್ನೆಯಾದ: ಜಾತಿಯನ್ನು ನಾಶಪಡಿಸುವ ಬಗೆ ಮತ್ತು ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ತತ್ವಗಳ ಆಧಾರದ ಮೇಲೆ ಪ್ರಜಾಪ್ರಭುತ್ವ ಸಮಾಜವನ್ನು ನಿರ್ಮಿಸುವ ಬಗೆಯೇನು? ಎಂಬುದರ ಸುತ್ತಲೇ ಸುತ್ತುತ್ತದೆ.

Abbreviations:
BAWS— Dr Babasaheb Ambedkar Writings and Speeches, multiple volumes
CWMG — Collected Works of Mahatma Gandhi, multiple volumes
SM — Source Material on Dr Babasaheb Ambedkar and the Movement of the
Untouchables, Volume 1

ಗ್ರಂಥಸೂಚಿ:

“Ambedkar: made up my mind to change my religion” 1935, October 16. The Bombay Chronicle.
Keer, Dhananjay. 1954/2002. Dr Babasaheb Ambedkar: Life and Mission. Reprint of third edition.
Mumbai: Popular Prakashan.

ಈ ಅಧ್ಯಾಯವನ್ನು ನವಯಾನ ಪ್ರಕಾಶನದ ಅನುಮತಿ ಪಡೆದು ಪ್ರಕಟಿಸಲಾಗಿದೆ. ಈ ಹಾರ್ಡ್‌ಬೌಂಡ್ ಪುಸ್ತಕದ ಬೆಲೆ 999/-

ಕನ್ನಡಕ್ಕೆ: ಶಶಾಂಕ್ ಎಸ್ ಆರ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದಲಿತ ಸಮುದಾಯದ ಆಕ್ರೋಶಕ್ಕೆ ಮಣಿದ ರಾಜ್ಯ ಸರ್ಕಾರ; ‘ಪ್ರಬುದ್ಧ’ ಯೋಜನೆ ಪುನರಾರಂಭ

0
ಎಸ್‌ಸಿ-ಎಸ್‌ಟಿ ಮತ್ತು ಇತರ ದುರ್ಬಲ ಸಮುದಾಯಗಳ ವಿದ್ಯಾರ್ಥಿಗಳು ತಮ್ಮ ಸ್ನಾತಕೋತ್ತರ ಮತ್ತು ಪಿಎಚ್‌ಡಿ ಕೋರ್ಸ್‌ಗಳನ್ನು ವಿದೇಶದ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ನಡೆಸಲು ಸಮಾಜ ಕಲ್ಯಾಣ ಇಲಾಖೆಯಿಂದ ನೀಡುವ ಆರ್ಥಿಕ ಯೋಜನೆಯಾದ 'ಪ್ರಬುದ್ಧ' ಕಾರ್ಯಕ್ರಮವನ್ನು ನಿಲ್ಲಿಸಿದ್ದ...