Homeಮುಖಪುಟವರ್ಗದ ಕುರಿತು ಬಾಬಾಸಾಹೇಬ ಅಂಬೇಡ್ಕರ್

ವರ್ಗದ ಕುರಿತು ಬಾಬಾಸಾಹೇಬ ಅಂಬೇಡ್ಕರ್

- Advertisement -
- Advertisement -

ಡಾ. ಆನಂದ್ ತೇಲ್‌ತುಂಬ್ಡೆಯವರ ’ರಿಪಬ್ಲಿಕ್ ಆಫ್ ಕ್ಯಾಸ್ಟ್’ನಿಂದ ಆಯ್ದ ಅಧ್ಯಾಯ

ಮಾರ್ಕ್ಸ್‌ನಂತೆ ಅಂಬೇಡ್ಕರ್ ಕೂಡ ವರ್ಗಗಳು ಸಮಾಜದ ಮೂಲ ಘಟಕಗಳೆಂದು ಬರೆಯುತ್ತಾರೆ. ’ಭಾರತದಲ್ಲಿ ಜಾತಿಗಳು: ಅವುಗಳ ಉಗಮ, ಕಾರ್ಯವಿಧಾನ ಮತ್ತು ವಿಕಾಸ’ ಎಂಬ ಅವರ ಮೊಟ್ಟಮೊದಲನೆಯ ಪ್ರಬಂಧದಲ್ಲಿಯೆ ಇದನ್ನು ಕಾಣಬಹುದು. ಅದು, ಅವರು 1916ರಲ್ಲಿ ಕೋಲಂಬಿಯಾ ಯುನಿವರ್ಸಿಟಿಯ ಮಾನವಶಾಸ್ತ್ರದ ಒಂದು ಸೆಮಿನಾರ್‌ನಲ್ಲಿ ಮಂಡಿಸಿದ್ದ ಪ್ರಬಂಧ; ಅದರಲ್ಲಿ, ಅವರು ಪ್ರತಿಪಾದಿಸಿದ್ದ ವಿಚಾರಗಳು ಇಂತಿವೆ:

ಸಮಾಜದಲ್ಲಿಯ ಪ್ರತಿಯೊಬ್ಬ ವ್ಯಕ್ತಿಯೂ ತನ್ನಷ್ಟಕ್ಕೆ ತಾನೇ ಒಂದು ಸ್ವಾಯತ್ತ ಸ್ವತಂತ್ರ ಘಟಕ; ಇಂಥ ಹಲವಾರು ಘಟಕಗಳ ಸಮೂಹವೇ ಒಂದು ಸಮಾಜವೆಂಬ ಪರಿಕಲ್ಪನೆಯನ್ನು ಬಹು ವ್ಯಾಪಕವಾಗಿ ಜನಪ್ರಿಯಗೊಳಿಸಲಾಗಿದೆ. ಅಥವಾ, ಅಸಹ್ಯವೆನಿಸುವಷ್ಟರ ಮಟ್ಟಿಗೆ ಅದನ್ನು ಅಪಭ್ರಂಶಗೊಳಿಸಲಾಗಿದೆ. ರಾಜಕೀಯ ವಾಗ್ಝರಿಯಲ್ಲಿ ಓತಪ್ರೋತವಾಗಿ ಹರಿಯುವ ಈ ಪರಿಕಲ್ಪನೆಯು ಒಂದು ಮಹಾಮೋಸವಾಗಿದೆ; ತಳಬುಡವಿಲ್ಲದ ನಯವಂಚನೆಯ ಆಷಾಡಭೂತಿಯ ಮಾತಾಗಿದೆ. ವ್ಯಕ್ತಿಗಳ ಸಮೂಹವೇ ಸಮಾಜ ಎಂಬ ಮಾತು ಕ್ಷುಲ್ಲಕವಾದದ್ದು, ಅರ್ಥಹೀನವಾದದ್ದು. ಯಾಕೆಂದರೆ ಒಂದು ಸಮಾಜ ಯಾವಾಗಲೂ ವರ್ಗಗಳಿಂದ ಕೂಡಿರುತ್ತದೆ. ವರ್ಗಸಂಘರ್ಷದ ಸಿದ್ಧಾಂತವನ್ನು ಒತ್ತಿ ಹೇಳುವುದು ಉತ್ಪ್ರೇಕ್ಷೆ ಎನಿಸಬಹುದಾದರು ಒಂದು ಸಮಾಜದಲ್ಲಿ ನಿರ್ದಿಷ್ಟ ವರ್ಗಗಳು ಅಸ್ತಿತ್ವದಲ್ಲಿರುತ್ತವೆ ಎಂಬುವುದು ಮಾತ್ರ ಅಲ್ಲಗೆಳೆಯಲಾಗದ ಸತ್ಯ. ಅಂಥ ವರ್ಗಗಳ ಬುನಾದಿ, ನೆಲೆಗಟ್ಟು ಬಿನ್ನ ವಿಭಿನ್ನವಾಗಿರಬಹುದು; ಆ ನೆಲೆಗಟ್ಟು ಆರ್ಥಿಕ ಸ್ವರೂಪದ್ದಾಗಿರಬಹುದು ಭೌದ್ಧಿಕತೆಯ ರೂಪದ್ದಾಗಿರಬಹುದು ಅಥವಾ ಸಾಮಾಜಿಕ ಸ್ವರೂಪದ್ದಾದರೂ ಇರಬಹುದು. ಇದೇನೆ ಇದ್ದರು ಒಂದು ಸಮಾಜದಲ್ಲಿನ ಯಾವುದೇ ಒಬ್ಬ ವ್ಯಕ್ತಿ ಸದಾ ಒಂದಿಲ್ಲೊಂದು ವರ್ಗದ ಸದಸ್ಯನಾಗಿರುತ್ತಾನೆ. ಇದೊಂದು ಸಾರ್ವತ್ರಿಕ ಸತ್ಯ. ಹಾಗಾಗಿ, ಪ್ರಾಚೀನ ಹಿಂದೂ ಸಮಾಜ ಈ ನಿಯಮಕ್ಕೆ ಹೊರತಾಗಿರಲು ಸಾಧ್ಯವಿರಲಿಲ್ಲ. ನಿಜವೆಂದರೆ, ನಮಗೆ ಗೊತ್ತಿರುವಂತೆ ಅದು ಈ ನಿಯಮಕ್ಕೆ ಹೊರತಾಗಿಯೂ ಇರಲಿಲ್ಲ. ಈ ಸಾಮಾನ್ಯ ತತ್ವವನ್ನು ನೆನಪ್ಪಿಟ್ಟುಕೊಂಡರೆ ಸಾಕು, ಜಾತಿ ವ್ಯವಸ್ಥೆಯ ಉಗಮದ ಕುರಿತು ನಮ್ಮ ಅಧ್ಯಯನ ತುಂಬಾ ಅನುಕೂಲಕರವಾಗಿ ಪರಿಣಮಿಸುತ್ತದೆ. ಯಾಕೆಂದರೆ ಆರಂಭದಲ್ಲಿ ವರ್ಗವಾಗಿದ್ದುದ್ದನ್ನು ಜಾತಿಯನ್ನಾಗಿ ಮಾರ್ಪಡಿಸಿದ ಸಂಗತಿ ಯಾವುದೆಂಬುದನ್ನು ಗುರುತಿಸಿದರೆ ಸಾಕು ಜಾತಿಯ ಮೂಲ ಯಾವುದೆಂಬುದನ್ನು ಸರಳವಾಗಿ ಶೋಧಿಸಿ ಹಿಡಿಯಬಹುದು. ಕಾರಣವಿಷ್ಟೇ: ವರ್ಗ ಮತ್ತು ಜಾತಿಗಳು ಪರಸ್ಪರ ನೆರೆಮನೆಯ ನಿವಾಸಿಗಳು. ಅವುಗಳ ನಡುವೆ ಇರುವ ಅಂತರ ಒಂದು ಮೊಳದಷ್ಟೊ ಅಥವಾ ಒಂದು ಮಾರಿನಷ್ಟೋ; ಒಂದು ಜಾತಿಯೆಂಬುದು ತನ್ನ ಸೂತ್ತಲೂ ಕಾಪುಗೋಡೆಯನ್ನು ಕಟ್ಟಿಕೊಂಡ ಒಂದು ವರ್ಗ; ಒಂದು ಜಾತಿಯಲ್ಲಿ ಹುಟ್ಟಿದವನು ಅದರಿಂದ ಹೊರಹೋಗುವಂತಿಲ್ಲ; ಹಾಗೆಯೇ ಹೊರಗಿನ ಯೊವೊಬ್ಬನು ಆ ಜಾತಿಯ ಗೊಡೆಯನ್ನು ಭೇದಿಸಿ ಒಳಬರುವಂತಿಲ್ಲ. (ಎ ಕಾಸ್ಟ್ ಇಸ್ ಅನ್ ಎನ್‌ಕ್ಲೋಸ್ಡ ಕ್ಲಾಸ್- ಅಂಬೇಡ್ಕರ್‌ರ ಕೃತಿಗಳು ಮತ್ತು ಭಾಷಣಗಳು ಸಂಪುಟ 1, ಪುಟ 15)

ಕಾರ್ಲ್ ಮಾರ್ಕ್ಸ್

ಈ ವರ್ಗಗಳು ಹೇಗೆ ತಮ್ಮ ಸುತ್ತಲೂ ಕಾಪುಗೋಡೆಯನ್ನು ಕಟ್ಟಿಕೊಂಡವು ಎಂಬುವುದರ ಕುರಿತು ಚರ್ಚಿಸುತ್ತಾ ಅಂಬೇಡ್ಕರ್‌ರು ಕೆಲವು ಸಂಗತಿಗಳನ್ನು ಗುರುತಿಸುತ್ತಾರೆ. ಉದಾಹರಣಿಗೆ: ’ಪ್ರಾಚೀನ ನಾಗರಿಕತೆಗಳಲ್ಲಿಯ ರೂಢಿ ಪದ್ಧತಿಗಳು ಮತ್ತು ಪುರೋಹಿತಶಾಹಿ ವರ್ಗದ ಕಪೋಲಕಲ್ಪಿತ ಸಾಮಾಜಿಕ ಶ್ರೇಷ್ಠತೆ’ ಇತ್ಯಾದಿಗಳೇ ಈ ’ಅಸಹಜ ಸಂಸ್ಥೆಯ’ ಅಂದರೆ, ಜಾತಿಯ ಉಗಮಕ್ಕೆ ಕಾರಣವಾದವು. ಮತ್ತು ಅಸಹಜ ಸಾಧನಗಳ ಮೂಲಕವೇ ಆ ಜಾತಿಯನ್ನು ಪಾಲಿಸಿ ಪೋಷಿಸಿಕೊಂಡು ಬರಲಾಯಿತು ಎಂಬುದನ್ನು ಪ್ರತಿಪಾದಿಸಿದ್ದರು. ಅವರು ಚಾತುವರ್ಣ ವಿಭಜನೆಯನ್ನು ಸ್ವತಃ ಒಂದು ವರ್ಗವ್ಯವಸ್ಥೆಯೆಂದೇ ಕರೆಯುತ್ತಾರೆ. ಅದೇ ವರ್ಗ ವ್ಯವಸ್ಥೆ ಕಾಲಕ್ರಮದಲ್ಲಿ ತನ್ನ ಸುತ್ತಲಿನ ಗೋಡೆಯ ಬಾಗಿಲನ್ನು ಭದ್ರಪಡಿಸಿಕೊಂಡು ಜಾತಿಯಾಯಿತು ಎಂಬುವುದನ್ನು ವಿವರಿಸುತ್ತಾರೆ. ಅದಕ್ಕೆ ಮೂಲಕಾರಣ ಸ್ವತಃ ಪುರೋಹಿತಶಾಹಿ ವರ್ಗವೇ; ಅಂದರೆ ಸ್ವತಃ ಬ್ರಾಹ್ಮಣರೆ ಒಂದು ಜಾತಿಯಾಗಿ ತಮ್ಮ ಸುತ್ತಲೂ ಗೋಡೆ ಕಟ್ಟಿಕೊಂಡೂ ಜಾತಿಯ ಎಲ್ಲ ಲಕ್ಷಣಗಳುಳ್ಳ ಒಂದು ಘಟಕವಾಗಿ ಮಾರ್ಪಟ್ಟರು. ಆಗ ಉಳಿದ ವರ್ಗಗಳು ಸಾಮಾಜಿಕ ಶ್ರಮ ವಿಭಜನೆಯ ನಿಯಮಕ್ಕೆ ಅಧೀನವಾಗಿದ್ದುದ್ದರಿಂದ ಅವು ಕೂಡ ಪರಸ್ಪರ ಪ್ರತ್ಯೇಕಗೊಂಡು ಕೆಲವು ದೊಡ್ಡ ಗುಂಪುಗಳಾಗಿಯೂ ಮತ್ತು ಕೆಲವು ಸಣ್ಣ ಗುಂಪುಗಳಾಗಿಯೂ, ಇನ್ನೂ ಕೆಲವರು ತೀರ ಸಣ್ಣ ಗುಂಪುಗಳಾಗಿಯೂ ಪರಸ್ಪರ ಪ್ರತ್ಯೇಕಗೊಂಡು ತಮ್ಮ ಗುಂಪುಗಳ ಸುತ್ತಲೂ ಗೋಡೆ ಕಟ್ಟಿಕೊಂಡವು. ಹೀಗೆ ಈ ರೀತಿಯಾಗಿ ಗೋಡೆ ಕಟ್ಟಿಕೊಂಡ ಸಾಮಾಜಿಕ ವ್ಯವಸ್ಥೆಯಲ್ಲಿ ಉಳಿದವರೂ ಅದೇ ರೀತಿಯಲ್ಲಿ ತಮ್ಮತಮ್ಮ ಸುತ್ತಲೂ ಗೋಡೆಗಳನ್ನು ಕಟ್ಟಿಕೊಂಡು ಪರಸ್ಪರರಿಂದ ಪ್ರತ್ಯೇಕಗೊಳ್ಳುವ ಪದ್ಧತಿಯನ್ನು ಅಳವಡಿಸಿಕೊಂಡ ವಿಷಯವನ್ನು ವಿವರಿಸಲು ಅಂಬೇಡ್ಕರ್‌ರು ಮನಃಶಾಸ್ತ್ರದ ಮತ್ತು ಮಾರ್ಕ್ಸಿಸ್ಟರ ಬಹುತೇತರ ಸಂಗತಿಗಳನ್ನೇ ಬಳಸುತ್ತಾರೆ.

ಯಾವುದೇ ಒಂದು ಸಮಾಜದ ವಿಭಜನೆ, ಉಪ ವಿಭಜನೆ ತೀರ ಸಹಜವಾದದ್ದು. ಅದರೆ, ಈ ಉಪವಿಭಾಗಗಳ ಅಸಹಜ ಸಂಗತಿಯೆಂದರೆ ಅವು ತಮ್ಮ ಮುಕ್ತದ್ವಾರದ ಸ್ವಭಾವ ಗುಣಲಕ್ಷಣಗಳನ್ನು ಕಳೆದುಕೊಂಡು ವರ್ಗ ವ್ಯವಸ್ಥೆಗೆ ವ್ಯತಿರಿಕ್ತವಾಗಿ ಪರಿಣಮಿಸಿದ್ದುದ್ದು. ಅಂದರೆ, ಹಿಂದೆ ಯಾವುದೇ ವರ್ಗದವರನ್ನು ಅವರ ಅರ್ಹತೆಗನುಗುಣವಾಗಿ ತನ್ನೊಳಗೆ ಮುಕ್ತವಾಗಿ ಬರಮಾಡಿಕೊಳ್ಳುತ್ತಿದ್ದ ವರ್ಗ ವ್ಯವಸ್ಥೆಗೆ ಪ್ರತಿಯಾಗಿ, ಜಾತಿ ವ್ಯವಸ್ಥೆಯು ತನ್ನ ಉಪ ವಿಭಾಗಗಳ ಬಾಗಿಲನ್ನು ಮುಚ್ಚಿಕೊಂಡು ತನ್ನಷ್ಟಕ್ಕೆ ತಾನು ಒಂದು ಸ್ವತಂತ್ರ ಸ್ವಾಯತ್ತ ಘಟಕವಾಗಿಬಿಟ್ಟಿತು. ಇಲ್ಲಿ ಏಳುವ ಒಂದು ಮಹತ್ವದ ಪ್ರಶ್ನೆಯೆಂದರೆ, ಈ ಸಾಮಾಜಿಕ ಘಟಕಗಳು ತಮ್ಮ ಬಾಗಿಲನ್ನು ಭದ್ರವಾಗಿ ಮುಚ್ಚಿಕೊಂಡು ತಮ್ಮೊಳಗೆ ಯಾರನ್ನು ಬಿಟ್ಟುಕೊಡದಂಥ ಪ್ರಮೇಯ ಉದ್ಭವಿಸಿದ್ದು ಹೊರಗಿನ ಯಾವುದಾದರೂ ಒಂದು ಒತ್ತಡದಿಂದಲೋ ಅಥವಾ ಯಾವುದೆ ಒತ್ತಾಯ, ಒತ್ತಾಸೆಯಿಲ್ಲದ ಸ್ವಯಂ ಸ್ಫೂರ್ತಿಯಿಂದಲೋ? ಇಲ್ಲಿ ಎರಡು ವಿಧದ ಉತ್ತರಕ್ಕೆ ಅವಕಾಶವಿದೆಯೆಂಬುವುದು ನನ್ನ ಅಭಿಪ್ರಾಯ: ಕೆಲವು ತಮ್ಮ ಬಾಗಿಲನ್ನು ತಾವೇ ಮುಚ್ಚಿಕೊಂಡವು. ಇನ್ನೂ ಕೆಲವು ಘಟಕಗಳಿಗೆ ಇತರರು ತಮಗಾಗಿ ಬಾಗಿಲು ಮುಚ್ಚಿದ್ದು ಮನವರಿಕೆಯಾಯಿತು. ಒಂದು ಮಾನಸಿಕ ಸ್ಥಿತಿಯ ವ್ಯಾಖ್ಯಾನವಾದರೆ ಇನ್ನೊಂದು ಯಾಂತ್ರಿಕ ಪ್ರಕ್ರಿಯೆಯ ಸ್ಥಿತಿಯಾಗಿತ್ತು. ಇದೇನೇ ಇದ್ದರೂ ಅವು ಪರಸ್ಪರ ಪೂರಕವಾಗಿದ್ದವು. ಜಾತಿ ವ್ಯವಸ್ಥೆಯ ರಚನಾ ವಿದ್ಯಮಾನವನ್ನು ಸಮಗ್ರವಾಗಿ ವಿವರಿಸಲು ಈ ಎರಡೂ ಸಂಗತಿಗಳು ಅಷ್ಟೇ ಅವಶ್ಯಕವಾಗಿವೆ (ಅಂಬೇಡ್ಕರ್ ಬರಹ ಮತ್ತು ಭಾಷಣಗಳು: ಸಂಪುಟ 1, ಪುಟ 18)

ಇದನ್ನೂ ಓದಿ: ಆನಂದ್ ತೇಲ್ತುಂಬ್ಡೆ ಜಾಮೀನು ತೆರೆದಿಟ್ಟ ಪ್ರಶ್ನೆಗಳಿಗೆ ಉತ್ತರ ಹುಡುಕುವುದೆಲ್ಲಿ?

ಅಂಬೇಡ್ಕರ್‌ರು ತಮ್ಮ ಇಡೀ ಪ್ರಬಂಧದ ಸಾರಾಂಶವನ್ನು ನಾಲ್ಕು ಪ್ರಧಾನ ಸಂಗತಿಗಳಲ್ಲಿ ಕ್ರೋಢೀಕರಿಸಿದ್ದಾರೆ: ’ನನ್ನ ಈ ಅಧ್ಯಯನವು ನಾಲ್ಕು ಅಂಶಗಳನ್ನು ಒಳಗೊಂಡಿದೆ: 1. ಹಿಂದೂ ಜನಪದರ ಸಾಮಾಜಿಕ ಸಂಯುಕ್ತ ಸ್ವರೂಪದ ಹೊರತಾಗಿಯೂ ಅವರ ಮಧ್ಯದಲ್ಲಿ ಪ್ರಗಾಢವಾದ ಸಾಂಸ್ಕೃತಿಕ ಏಕತೆಯಿದೆ; 2. ಜಾತಿಯೆಂದರೆ, ಒಂದು ದೊಡ್ಡ ಸಾಂಸ್ಕೃತಿಕ ಘಟಕದ ತುಂಡುಗಳ ಕಂತೆ; 3. ಆರಂಭದಲ್ಲಿ ಒಂದೇ ಒಂದು ಜಾತಿಯಿತ್ತು; 4. ಮೂಲದಲ್ಲಿದ್ದ ವರ್ಗಗಳೇ ಅನುಕರಣೆ ಮತ್ತು ಬಹಿಷ್ಕಾರದ ಕ್ರಮಗಳ ಮೂಲಕ ಜಾತಿ ವಿಜಾತಿಗಳಾಗಿ ಒಡೆದು ಹೋಗಿವೆ;’ (ಪುಟ 22)

ಭಾರತದಲ್ಲಿ ಜಾತಿಗಳು ಎಂಬ ಪ್ರಬಂಧ ಮಂಡಿಸಿದ 22 ವರ್ಷಗಳ ನಂತರ ಅಂಬೇಡ್ಕರ್‌ರು ಜಾತಿ ವಿನಾಶವೆಂಬ ಕೃತಿಯನ್ನು ರಚಿಸಿದರು. ಅಷ್ಟೊತ್ತಿಗಾಗಲೇ ಹಿಂದೂ ಧರ್ಮದ ಪರಿಧಿಯಲ್ಲಿಯೇ ಸಾಮಾಜಿಕ ಸುಧಾರಣೆ ಸಾಧ್ಯವಿಲ್ಲ ಎಂಬ ಸತ್ಯವನ್ನು ಅವರು ಅತ್ಯಂತ ನೋವಿನಿಂದ ಮನಗಂಡಿದ್ದರು. (ಅಂಬೇಡ್ಕರ್‌ರ ಬರಹ ಮತ್ತು ಭಾಷಣಗಳು ಸಂಪುಟ 1, ಪುಟ 38). 1930ರ ದಶಕದಲ್ಲಿ ಕಾಣಿಸಿಕೊಂಡ ರಾಜಕೀಯ ಸುಧಾರಣೆಯ ಬೆಳವಣಿಗೆಯನ್ನು ಗಮನಿಸಿದ ಅವರು ಒಂದು ಅನಿವಾರ್ಯ ಒತ್ತಾಸೆಗೆ ಒಳಗಾದರು. ಅದರ ಪರಿಣಾಮವಾಗಿ ತಮ್ಮ ಹೋರಾಟದ ಸಾಮಾಜಿಕ ನೆಲೆಯಾಗಿದ್ದ ದಲಿತ ಸಮುದಾಯದಿಂದ ಕಾರ್ಮಿಕ ವರ್ಗಕ್ಕೆ ಹೋರಾಟವನ್ನು ವಿಸ್ತರಿಸಿದರು. ಹಾಗಾಗಿ, ಬ್ರಾಹ್ಮಣಶಾಹಿ ಮತ್ತು ಬಂಡವಾಳಶಾಹಿಗಳು ತಮ್ಮ ಇಬ್ಬರು ವಿರೋಧಿಗಳೆಂದು ಸ್ಪಷ್ಟವಾಗಿ ಗುರುತಿಸಿ ಮಾತಾಡಲಾರಂಭಿಸಿದರು. ಆ ಮೂಲಕ, ದಲಿತ ಜನಾಂಗದ ಆಚೆಗೆ ಇರುವ ಬೃಹತ್ ಕಾರ್ಮಿಕವರ್ಗದ ಮನಗೆಲ್ಲಲು ಯತ್ನಿಸಿದರು; ಆ ದಾರಿಯಲ್ಲಿಯೇ ಮುಂದಡಿಯಿಟ್ಟು 1936ರಲ್ಲಿ ಇಂಡಿಂಪೆಡೆಂಟ್ ಲೇಬರ್ ಪಾರ್ಟಿ (ಐ.ಎಲ್.ಪಿ) ಸ್ಥಾಪಿಸಿದರು. ಮರು ವರ್ಷ ಇಂಡಿಯಾ ಆಕ್ಟ್ 1935ಕ್ಕೆ ಅನುಗುಣವಾಗಿ ನಡೆಯಲ್ಲಿದ್ದ ಪ್ರಾಂತೀಯ ಶಾಸನಸಭೆಯ ಚುನಾವಣೆಗಳಲ್ಲಿ ಸ್ಪರ್ಧಿಸುವುದು ಅವರ ಉದ್ದೇಶವಾಗಿತ್ತು. ಈ ಪಕ್ಷವನ್ನು ಅದೇ ಹೆಸರಿನ ಇಂಗ್ಲೆಂಡ್‌ನಲ್ಲಿನ ಪಕ್ಷದ ಮಾಡೆಲ್ ಆಗಿ ಇಟ್ಟುಕೊಂಡು ರೂಪಿಸಲಾಗಿತ್ತು. ಅದರ ಮೇಲೆ ಫೇಬಿಯನ್ ಸಮಾಜವಾದಿಗಳ ಅಪಾರ ಪ್ರಭಾವವಿತ್ತು ಎಂಬುವುದು ಕೂಡಾ ಅಷ್ಟೇ ನಿಜವಾದ ಸಂಗತಿ. ಆದರೆ, ಅಂಬೇಡ್ಕರ್‌ರ ಇಂಡೆಪೆಂಡೆಂಟ್ ಲೇಬರ್ ಪಾರ್ಟಿಯ ನೆಲೆಯು ಅವರ ಸ್ವಂತ ಜಾತಿಯಿಂದ ಆಚೆಗೆ ಚಾಚಿಕೊಂಡು ವಿಸ್ತರಿಸಲು ಸಾಧ್ಯವಾಗಲಿಲ್ಲ. 1937ರಲ್ಲಿ ನಡೆದ ಚುನಾವಣೆಗಳ ಕಣಕ್ಕೆ ಇಳಿಸಲಾಗಿದ್ದ ಅವರ ಪಕ್ಷದ ಅಭ್ಯರ್ಥಿಗಳಲ್ಲಿ ಹೆಚ್ಚಿನವರು ಮಹಾರ್‌ರೆ ಆಗಿದ್ದರು; ಮಹಾರ್‌ರ ಅಂದೋಲನದ-ಅದು ಆನಂತರ ದಲಿತ ಎಂದಾಗಲಿತ್ತು- ಚರಿತ್ರೆಕಾರರಾಗಿರುವ ಎಲೆನಾರ್ ಜೆಲಿಯಟ್ ದಾಖಲಿಸಿರುವ ಸಂಗತಿಯಿದು. ಅಂಬೇಡ್ಕರ್‌ರ ಇಂಡಿಪೆಂಡೆಂಟ್ ಲೇಬರ್ ಪಾರ್ಟಿಯು 1937ರಲ್ಲಿ ಚುನಾವಣೆಗೆ ಕಣಕ್ಕಿಳಿಸಿದ್ದ ಒಟ್ಟು 17 ಅಭ್ಯರ್ಥಿಗಳಲ್ಲಿ ಒಬ್ಬನೇ ಒಬ್ಬ ಮಾತ್ರ ಮಾಂಗ ಜಾತಿಗೆ ಸೇರಿದವನಾಗಿದ್ದನು. ಇನ್ನೊಬ್ಬ ಮಹಾರೇತರ ಅಸ್ಪೃಶ್ಯ ಜಾತಿಯ ಅಭ್ಯರ್ಥಿ ಗುಜರಾತಿನವನಾಗಿದ್ದನು (1970- ಪುಟ 26, ಮತ್ತು 69). ಮಾಂಗ ಮತ್ತು ಮಹಾರ್‌ರಿಗಿಂತ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ತುಸು ಉತ್ತಮ ಸ್ಥಿತಿಯಲ್ಲಿದ್ದ ಚಾಂಬಾರರನ್ನು ಪ್ರತಿನಿಧಿಸುವ ಯಾವೊಬ್ಬ ವ್ಯಕ್ತಿಯೂ ಪಕ್ಷದಲ್ಲಿರಲಿಲ್ಲ. ಈ ಕುರಿತು ಕ್ರಿಸ್ಟಾಫ್ ಜಾಫ್ರೆಲಾಟ್ ಹೇಳಿದ ಮಾತಿದು: ಚಾಂಬಾರರ ಅಥವಾ ಮಾಂಗರ ಬೆಂಬಲವನ್ನು ಆಕರ್ಷಿಸುವಲ್ಲಿ ಅಂಬೇಡ್ಕರ್‌ರು ನಿಜವಾಗಿಯೂ ಅನೇಕ ಸಮಸ್ಯೆಗಳನ್ನು ಎದುರಿಸಿದ್ದರು. ಏಕೆಂದರೆ ಅವರೆಲ್ಲಾ ಅಂಬೇಡ್ಕರ್‌ರನ್ನು ಒಬ್ಬ ಮಹಾರ ನೇತಾರನೆಂದೇ ಭಾವಿಸಿದ್ದರು’ (2005, ಪುಟ 76-77).

ಆಮೇಲೆ ಎಷ್ಟೋ ವರುಷಗಳ ನಂತರ 1946ರಲ್ಲಿ ಅಂಬೇಡ್ಕರ್‌ರು ಸ್ಟೇಟ್ಸ್ ಆಂಡ್ ಮೈನಾರಿಟೀಸ್ ಎಂಬ ಸುದೀರ್ಘ ಲೇಖನದ ಮೂಲಕ ಸ್ಟೇಟ್ ಸೋಸಿಯಲಿಸಂನ ಒಂದು ಮಾದರಿಯನ್ನು ಪ್ರಸ್ತಾಪಿಸಿದಾಗಲೂ ಕೂಡ ಅವರು ಮತ್ತೆ ವರ್ಗ ಪದವನ್ನು ಬಳಸಿದ್ದರು. ಹಾಗೆ, ನೋಡಿದರೆ ಆ ಲೇಖನವನ್ನು ಅವರು ಜಾತಿ ಆಧಾರಿತ ಪಕ್ಷವಾಗಿದ್ದ ದ ಶ್ಯೆಡ್ಯುಲ್ಡ್ ಕಾಸ್ಟ್ ಫೆಡರೇಶನ್ ಪರವಾಗಿಯೇ ಬರೆದಿದ್ದರು.

ಜಾನ್ ಡ್ಯೂಯಿ

ದಲಿತರ ಮೇಲಿನ ದೌರ್ಜನ್ಯಗಳ ವಿರುದ್ಧ ಹೋರಾಟ ಮಾಡುವಾಗಲೆಲ್ಲಾ ಅಂಬೇಡ್ಕರ್‌ರು ಜಾತಿ ಆಧಾರಿತ ಪದಪುಂಜಗಳನ್ನು ಬಳಸುತ್ತಿರಲಿಲ್ಲ. ಅನೇಕ ಸಮುದಾಯಗಳ ಬಗ್ಗೆ ಪ್ರಸ್ತಾಪಿಸಿ ಮಾತಾಡುವಾಗಲೆಲ್ಲಾ ಅವರು ಆ ಸಮುದಾಯಗಳನ್ನು ವರ್ಗಗಳೆಂದೆ ಕರೆಯುತ್ತಿದ್ದರು. ಇದನ್ನು ತಿಳಿದುಕೊಳ್ಳಲು ಬಹುದೂರ ಹೋಗಬೇಕಿಲ್ಲ. ಹೋರಾಟದ ಸಂದರ್ಭದಲ್ಲಿಯ ಅವರ ಮಾತುಗಳನ್ನು ಗಮನಿಸಿದರೆ ಸಾಕು ನಾವಿದನ್ನು ಸ್ಪಷ್ಟವಾಗಿ ಕಾಣಬಹುದು. ಎಲ್ಲ ಅಸ್ಪೃಶ್ಯ ಜಾತಿಗಳನ್ನು ಒಂದೆಡೆಗೆ ತಂದು ಅವುಗಳನ್ನು ದಮನಿತ ವರ್ಗಗಳೆಂದೊ ಅಥವಾ ದಲಿತರೆಂದೊ ಕರೆಯುವ ಬಯಕೆ ಅವರದ್ದಾಗಿತ್ತು ಎಂಬುವುದು ಇದರಿಂದ ಪ್ರತಿಬಿಂಬಿತವಾಗುತ್ತದೆ. ಈ ರೀತಿಯ ಪದಗಳನ್ನು ಬಳಸಿದರೂ ಕೂಡ ಅವರ ಸ್ವಂತ ಜಾತಿಯವರ ಹೊರತಾಗಿ, ಅದರಿಂದ ಇನ್ನಿತರ ಅಸ್ಪೃಶ್ಯ ಜಾತಿಗಳಿಗೆ ಅವರ ಅಂದೋಲನದ ಸತ್ವ ಸ್ವರೂಪದಲ್ಲಿ ಹೆಚ್ಚಿನ ವ್ಯತ್ಯಾಸವೇನೂ ತೋರುತ್ತಿರಲಿಲ್ಲ. ಅವರನ್ನು ಅನುಸರಿಸುತ್ತಿದ್ದ ಇತರ ಜಾತಿಯ ಜನರು ತೀರ ಕಡಿಮೆ ಸಂಖ್ಯೆಯಲ್ಲಿ ಇರುತ್ತಿದ್ದರು- ಒಂದು ನಿಯಮಕ್ಕೆ ಅಪವಾದವಿದ್ದಂತೆ.

ಮಾರ್ಕ್ಸ್ ಮತ್ತು ಅಂಬೇಡ್ಕರ್‌ರ ವರ್ಗದ ಪರಿಕಲ್ಪನೆಗಳ ನಡುವೆ ವ್ಯತ್ಯಾಸವಿತ್ತು ಯಾಕೆಂದರೆ ಆ ಸಮಸ್ಯಯೆಡೆಗೆ ಅವರು ಅನುಸರಿಸಿದ ಮಾರ್ಗಗಳು ಬಿನ್ನವಾಗಿದ್ದವು. ಮಾರ್ಕ್ಸ್‌ನ ದೃಷ್ಟಿಯಲ್ಲಿ ವರ್ಗವೆಂದರೆ ಸ್ವತಃ ಮತ್ತು ಸಾರ್ವತ್ರಿಕವಾದ ಒಂದು ಶಕ್ತಿ. ಅದು, ಚರಿತ್ರೆಯ ಉದ್ದಕ್ಕೂ ಅನೇಕ ಕ್ರಾಂತಿಗಳಿಗೆ ಕಾರಣೀಭೂತವಾಗುತ್ತ ಕ್ರಾಂತಿಯ ಮೂಲಕವೇ ಹಾಯ್ದು ಬಂದಿತ್ತು. ಆದರೆ, ಅಂಬೇಡ್ಕರ್ ದೃಷ್ಟಿಯಲ್ಲಿ ವರ್ಗದ ಪರಿಕಲ್ಪನೆ ಬೇರೆಯೇ ಆಗಿತ್ತು. ಅದು, ಒಂದು ಸಂಸ್ಕೃತಿ ವಿಶಿಷ್ಟವಾದ ಹಿತಾಸಕ್ತಿಯ ಗುಂಪು. ಪರಿಸ್ಥಿತಿಯಲ್ಲಿ ಹಲವಾರು ಬದಲಾವಣೆಗಳನ್ನುಂಟು ಮಾಡುವ ಮೂಲಕ, ಆ ಬದಲಾವಣೆಗಳಿಗೆ ಆಗ್ರಹಪೂರ್ವಕ ಒತ್ತಾಸೆಯಾಗಿ ನಿಲ್ಲುವ ಮೂಲಕ ಅದು ತನ್ನ ಗುರಿಯನ್ನು ಸಾಧಿಸಿಕೊಳ್ಳುವ ಆಸಕ್ತಿಯ ಗುಂಪು ಎಂಬುದು ಅಂಬೇಡ್ಕರ್‌ರ ನಿಲುವಾಗಿತ್ತು. ಪ್ರಪಂಚದ ಬದಲಾವಣೆಗಾಗಿ ಯತ್ನಿಸುವ ಜನರಿಗೆ ಮಾರ್ಗದರ್ಶನ ಮಾಡಬಲ್ಲ ಒಂದು ಸರ್ವಗ್ರಾಹಿ ಸಿದ್ಧಾಂತವನ್ನು ರಚಿಸಲು ಮಾರ್ಕ್ಸ್ ಯತ್ನಿಸಿದನು. ಹಾಗೆಯೇ ಬದಲಾಗಬಹುದಾದ ಹೊಸ ಪ್ರಪಂಚದಲ್ಲಿ ಮಾನವರು ತಮ್ಮ ನೈಜ ಮಾನನತ್ವವನ್ನು ಅದರಿಂದ ಉದಯಿಸುವ ಮಾನವೀಯತೆಯನ್ನು ಸಾಕ್ಷಾತ್ಕರಿಸಕೊಳ್ಳಬಲ್ಲರು ಎಂಬುದು ಅವರ ಅಭಿಲಾಷೆಯಾಗಿತ್ತು. ಇದಕ್ಕೆ ವ್ಯತಿರಿಕ್ತವಾಗಿ ಅಂಬೇಡ್ಕರ್‌ರ ಮಾರ್ಗವು ಪ್ರಯೋಜನವಾದಿ-ವಾಸ್ತವವಾದಿ (ಪ್ರಾಗ್ಮಾಟಿಕ್) ಸ್ವರೂಪದಾಗಿತ್ತು. ಅವರು ಕೊಲಂಬಿಯಾ ಮತ್ತು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಅಧ್ಯಯನ ಮಾಡುತ್ತಿದ್ದಾಗ ಅಲ್ಲಿಯ ಫೇಬಿಯನ್ ತತ್ವಜ್ಞಾನಿಗಳ ಬಾರೀ ಪ್ರಭಾವಕ್ಕೆ ಅವರು ಒಳಗಾಗಿದ್ದರು. ಶಾಂತಿಯುತವಾದ ಮಾರ್ಗದ ಮೂಲಕ ಅಂದರೆ ಮಾರ್ಕ್ಸ್ ಪ್ರತಿಪಾದಿಸಿದ್ದ ಹಿಂಸಾತ್ಮಕ ಕ್ರಾಂತಿಗೆ ಪ್ರತಿಯಾಗಿ ಕ್ರಮಕ್ರಮೇಣವಾಗಿ ಸಮಾಜವಾದಿ ವ್ಯವಸ್ಥೆಯನ್ನು ಸ್ಥಾಪಿಸಬಹುದೆಂಬುವುದು ಫೇಬಿಯನ್ ಸಮಾಜವಾದಿಗಳ ನಂಬಿಕೆಯಾಗಿತ್ತು. ಅದು ಕೂಡಾ ಮಧ್ಯಮ ವರ್ಗದ ಪ್ರಬುದ್ಧ ಬುದ್ಧೀಜೀವಿಗಳು ಉಂಟುಮಾಡಬಹುದಾದ ಬದಲಾವಣೆಯೆಂಬುದು ಅವರ ನಂಬಿಕೆಯಾಗಿತ್ತು. ಅಂದರೆ, ಕಮ್ಯುನಿಸ್ಟ್ಟ್ ಮುಂಚೂಣಿ ಶಕ್ತಿಯಾಗಿರುವ ಕಾರ್ಮಿಕ ವರ್ಗಕ್ಕೆ ಬದಲಾಗಿ ಮಧ್ಯಮ ವರ್ಗದ ಬುದ್ಧಿಜೀವಿಗಳು ಭೂಮಿ ಮತ್ತು ಬಂಡವಾಳವನ್ನು ಧನಿಕರಿಂದ ವಿಮೋಚನೆ ಮಾಡಬಹುದೆಂದು ಭಾವಿಸಿದ್ದರು. ಕಾರ್ಮಿಕವರ್ಗದ ವಿಮೋಚನೆಗೆ ಬದಲಾಗಿ ಭೂಮಿ ಮತ್ತು ಬಂಡವಾಳದ ವಿಮೋಚನೆಯಲ್ಲಿಯೇ ಅವರಿಗೆ ಆಸಕ್ತಿಯಿತ್ತು. ಫೇಬಿಯನ್ ನಿಲುವಿನ ಪ್ರಭಾವವು ಅಂಬೇಡ್ಕರ್‌ರಲ್ಲಿ ಮಾರ್ಕ್ಸ್‌ವಾದದ ಬಗ್ಗೆ ಒಂದು ಮಟ್ಟದ ಗಂಭೀರವಾದ ಸಂಶಯ, ಅಪನಂಬಿಕೆ ಮತ್ತು ಭೀತಿಭರಿತ ಅನುಮಾನಗಳನ್ನು ಹುಟ್ಟಿಸಿತು. ಈ ಪ್ರಭಾವದ ಕುರಿತು ಅವರು ಎಲ್ಲಿಯೂ ಒಪ್ಪಿಕೊಳ್ಳುವದಿಲ್ಲ. ಇದಕ್ಕೆ, ಒಂದೇ ಒಂದು ಅಪವಾದವೆಂಬಂತೆ ಅವರು ಜಾನ್ ಡ್ಯೂಯಿಯ ಪ್ರಭಾವದ ಕುರಿತು ಮಾತ್ರ ಒಪ್ಪಿಕೊಂಡಿದ್ದಾರೆ. ಜಾನ್ ಡ್ಯೂಯಿ ಆ ಕಾಲದ ಅಮೆರಿಕದ ವಿಖ್ಯಾತ ಫೇಬಿಯನ್ ಚಿಂತಕನಾಗಿದ್ದನು; ಪ್ರಯೋಜನವಾದಿ (ಪ್ರಾಗ್ಮಾಟಿಕ್) ತತ್ವಶಾಸ್ತ್ರದ ಪ್ರಮುಖ ಪ್ರತಿಪಾದಕನಾಗಿದ್ದನು. ಜೊತೆಗೆ ಪ್ರಗತಿಪರ ಶಿಕ್ಷಣದ ಹರಿಕಾರನಾಗಿದ್ದನು ಫೇಬಿಯನ್ ಪ್ರಭಾವದ ಬಗ್ಗೆ ಅಂಬೇಡ್ಕರ್‌ರು ವ್ಯಕ್ತವಾಗಿ ಒಪ್ಪಿಕೊಳ್ಳಲಿ ಬಿಡಲಿ, ಆದರೆ ಅದು ಉದ್ದಕ್ಕೂ ಅವರ ಕ್ರಿಯೆ ಮತ್ತು ಕಾರ್ಯಾಚರಣೆಗಳಲ್ಲಿ ಪ್ರತಿಬಿಂಬಿತವಾಗುತ್ತಲೇ ಇತ್ತು. ಉದಾಹರಣೆಗೆ: ಅವರು ಸ್ಥಾಪಿಸಿದ ಇಂಡಿಪೆಂಡೆಂಟ್ ಲೇಬರ್ ಪಾರ್ಟಿ ಮತ್ತು ಪ್ರತಿಪಾದಿಸಿದ್ದ ಸ್ಟೇಟ್ ಸೋಶಿಯಲಿಸಮ್- ಮುಂತಾದವುಗಳನ್ನು ಪರಿಶೀಲಿಸಬಹುದು. ಅಷ್ಟೇ ಏಕೆ, ಅವರು ತಮ್ಮ ಬದುಕಿನುದ್ದಕ್ಕೂ ಅಳವಡಿಸಿಕೊಂಡು ಆಚರಿಸಿದ ವಿಶಾಲ ನೆಲೆಯ ಉದಾರವಾದದಲ್ಲಿಯೂ ನಾವು ಆ ಪ್ರಭಾವವನ್ನು ಕಾಣಬಹುದು. ಅವರ ಬರವಣಿಗೆಗಳು ಕೂಡ ಅವರ ಮೇಲಾಗಿದ್ದ ಫೇಬಿಯನ್ ಪ್ರಭಾವಕ್ಕೆ ಸಾಕ್ಷಿ ನುಡಿಯುತ್ತದೆ. ನಿದರ್ಶನಕ್ಕೆ: ಮಹಾಡ್ ಹೋರಾಟದ ನಂತರ ಅಂಬೇಡ್ಕರ್‌ರಿಗೆ ಮನವರಿಕೆಯಾಗಿದ್ದ ಸಂಗತಿ ಇದು:

ಇದನ್ನೂ ಓದಿ: ’ಹಿಂದುತ್ವಕ್ಕೆ ಮರುಳಾಗಿರುವ “ಜಾತಿ” ಬಿಜೆಪಿಯ ಜತೆಗೆ ಇದೆ’; ಗುಜರಾತ್ ಕಾಂಗ್ರೆಸ್ ಮುಖಂಡ ಜಿಗ್ನೇಶ್ ಅವರೊಂದಿಗೆ…

ಬುದ್ಧಿಜೀವಿ ವರ್ಗಕ್ಕೆ ಮುಂದಾಲೋಚನೆಯ ಶಕ್ತಿಯಿರುತ್ತದೆ, ಅದಕ್ಕೆ ಮಾತ್ರ ಸೂಕ್ಷ್ಮವಾದ ಒಳನೋಟಗಳು ಹಾಗೂ ಮುನ್ನೋಟಗಳು ಸಾಧ್ಯವಾಗಿರುತ್ತವೆ, ಹಾಗಾಗಿ, ಆ ವರ್ಗ ಮಾತ್ರ ಸಾಮಾಜಿಕ ಮುನ್ನಡೆಗೆ ಸಲಹೆ ಸೂಚನೆಗಳನ್ನು ಕೊಡಬಲ್ಲದು; ಸಮಾಜದ ಮುನ್ನಡೆಯ ದಾರಿಯಲ್ಲಿ ನೇತೃತ್ವ ವಹಿಸಬಲ್ಲದು; ಯಾವುದೇ ದೇಶದಲ್ಲಾಗಲಿ, ಜನಸಾಮಾನ್ಯರು ಯಾವಾಗಲೂ ವಿವೇಕಪೂರ್ಣವಾದ ಚಿಂತನೆ ಹಾಗೂ ಕ್ರಿಯೆಯಿಂದೊಡಗೂಡಿದ ಬದುಕನ್ನು ನಡೆಸುವುದಿಲ್ಲ, ನಡೆಸಲಾರರು ಕೂಡ. ಆದ್ದರಿಂದ ಅವರು ಬಹುಮಟ್ಟಿಗೆ ಬುದ್ಧಿಜೀವಿ ವರ್ಗವನ್ನು ಅನುಕರಿಸುತ್ತಾರೆ, ಅನುಸರಿಸುತ್ತಾರೆ. ಹಾಗಾಗಿ, ಇಡೀ ರಾಷ್ಟ್ರದ ಭವಿಷ್ಯತ್ತು ಅದರ ಬುದ್ಧಿಜೀವಿ ವರ್ಗವನ್ನು ಅವಲಂಬಿಸಿರುತ್ತದೆ ಎಂದು ಹೇಳಿದರೆ, ಉತ್ಪ್ರೇಕ್ಷೆಯಾಗಲಿಕ್ಕಿಲ್ಲ. ಯಾವುದೇ ದೇಶದ ಬುದ್ಧಿಜೀವಿ ವರ್ಗ ಪ್ರಾಮಾಣಿಕವಾಗಿದ್ದರೆ, ನಿಸ್ವಾರ್ಥಭಾವದಿಂದಿದ್ದು ಸ್ವತಂತ್ರ ಮನೋಧರ್ಮ ಉಳ್ಳದ್ದಾಗಿದ್ದರೆ ಅದು ರಾಷ್ಟ್ರಬದುಕಿನ ಸಂದರ್ಭದಲ್ಲಿ ಬಿಕ್ಕಟ್ಟುಗಳು ಕಾಣಿಸಿಕೊಂಡಾಗ ಸ್ವತಃ ತಾನೇ ಮುತುವರ್ಜಿವಹಿಸಿ ಸಮರ್ಥ ನೇತೃತ್ವ ಕೊಡಬಲ್ಲದು. (ಜಾತಿ ವಿನಾಶ, ಬಾಬಾ ಸಾಹೇಬರ ಬರವಣಿಗಳು ಮತ್ತು ಭಾಷಣಗಳು, ಸಂಪುಟ 1, ಪುಟ 71)

ಮಧ್ಯಮ ವರ್ಗಗಳೇ ಸಮಾಜವನ್ನು ಮುನ್ನಡೆಸಬಲ್ಲವು ಎಂಬ ಪ್ರತಿಪಾದನೆಯಲ್ಲಿ ಫೇಬಿಯನ್ ಪ್ರಭಾವ ಸ್ಪಷ್ಟವಾಗಿ ಎದ್ದು ಕಾಣುತ್ತದೆ. ಅದರಲ್ಲಿಯೂ, ವಿಶೇಷವಾಗಿ ಜಾನ್ ಡ್ಯೂಯಿಯ ಪ್ರಭಾವವಿದ್ದುದ್ದು ನಿಚ್ಚಳವಾಗಿ ಕಂಡುಬರುತ್ತದೆ. ಅವನೂ ಕೂಡ ಪ್ರಗತಿಪರ ಶಿಕ್ಷಣವನ್ನು ಪಡೆದುಕೊಂಡ ಬುದ್ಧಿಜೀವಿಗಳ ಸಾಮಾಜಿಕ ಮಹತ್ವದ ಕುರಿತು ಸಾಕಷ್ಟು ಒತ್ತಿಹೇಳಿದ್ದನು.

ಮಾರ್ಕ್ಸ್ ಮತ್ತು ಮಾರ್ಕ್ಸ್‌ವಾದದ ಕುರಿತು ಅಂಬೇಡ್ಕರ್‌ರ ಅಭಿಪ್ರಾಯಗಳು ಒಡೆಯಲಾಗದ ಒಗಟಿನಂತಿವೆ. ಆದರೂ, ಅವರು ಆಗಾಗ ತಮ್ಮ ಬರೆವಣಿಗೆಗಳಲ್ಲಿ ಮಾರ್ಕ್ಸ್‌ನನ್ನು ಪ್ರಸ್ತಾಪಿಸುತ್ತಲೇ ಇದ್ದುದನ್ನು ಕಾಣಬಹುದು. ಮಾರ್ಕ್ಸ್‌ವಾದಿ ನೇತಾರರ ನಿರ್ಧಾರಗಳಿಗಿಂತಲೂ ತಮ್ಮ ತೀರ್ಮಾನಗಳು ಹೆಚ್ಚು ಸಮಂಜಸವಾಗಿವೆ, ಶ್ರೇಷ್ಠವಾಗಿವೆ ಎಂಬುವುದನ್ನು ಸಾಬೀತುಗೊಳಿಸಲು ಅವರು ಮೇಲಿಂದಮೇಲೆ ಮಾರ್ಕ್ಸ್‌ನ ಬಗ್ಗೆ ಪ್ರಸ್ತಾಪಿಸುತ್ತಲೇ ಇದ್ದರು. ಇದು ಮಾರ್ಕ್ಸ್‌ನನ್ನು ಕುರಿತು ಪ್ರತ್ಯಕ್ಷವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಶ್ಲಾಘನೆಯನ್ನು ಧ್ವನಿಸುತ್ತದೆ. ಮಾರ್ಕ್ಸ್‌ವಾದಿಗಳು ತಮ್ಮ ಸ್ಪರ್ಧಿಗಳೆಂದು ಅಂಬೇಡ್ಕರರು ಒಪ್ಪಿಕೊಳ್ಳುವಂತೆ ತೋರುತ್ತಾರೆ; ಅವರು ಉತ್ತಮರೇನೋ ಹೌದು. ಆದರೆ ಅವರಿಗೆ ತಮ್ಮ ನಂತರದ ಸ್ಥಾನವೆಂಬುದು ಅವರ ಅಭಿಪ್ರಾಯವಿದ್ದಂತೆ ತೋರುತ್ತದೆ. ಅದೇ ವೇಳೆಗೆ ಅವರು ತಮ್ಮ ಅನುಯಾಯಿಗಳಿಗೆ ಕಮ್ಯುನಿಸ್ಟರ ಬಗ್ಗೆ ಎಚ್ಚರ ನೀಡುತ್ತಿದ್ದರು ಎಂಬುವುದರಲ್ಲಿ ಎರಡು ಮಾತಿಲ್ಲ. ಕಮ್ಯುನಿಸ್ಟರು ಪ್ರತಿಪಾದಿಸುವ ವಿಮೋಚನೆಯು ಒಂದು ಭೂತವೆಂಬುವುದು ಅವರ ಅಭಿಪ್ರಾಯವಾಯಿತ್ತು. ಜಾತಿ ಸಮಸ್ಯೆಯ ಕುರಿತು ಹೋರಾಟ ಮಾಡುವುದಕ್ಕೆ ಮಾರ್ಕ್ಸ್‌ನಲ್ಲಿ ಏನೂ ದೊರೆಯುವುದಿಲ್ಲ, ಅವನಿಂದ ಯಾವುದೇ ಸಹಾಯವಾಗುವುದಿಲ್ಲ- ಎಂಬುದು ಅಂಬೇಡ್ಕರರ ನಿಲುವುವಾಗಿತ್ತು. ಅಂತೆಯೇ ಮಾರ್ಕ್ಸ್‌ವಾದವನ್ನು ಭಾರತೀಯ ಸಂದರ್ಭಕ್ಕೆ ಅನ್ವಯಿಸಿ ನೋಡಲು ಮಾಡಿದ ಯಾವುದೇ ಪ್ರಯತ್ನಕ್ಕೆ ಸಾಕ್ಷಿ ಪುರಾವೆಗಳಿಲ್ಲ. ಅವರು ಮುಂಬೈಯಲ್ಲಿದ್ದ ಕಮ್ಯುನಿಸ್ಟರ ಆಚಾರ ವಿಚಾರಗಳನ್ನೇ ಮಾರ್ಕ್ಸ್‌ವಾದವೆಂದು ಭಾವಿಸಿದ್ದರು; ತಮ್ಮ ಅಭಿಪ್ರಾಯದ ಸಮರ್ಥನೆಗೆ ಅಲ್ಲಿಯ ಮಾರ್ಕ್ಸ್‌ವಾದಿಗಳ ನಡೆನುಡಿಗಳನ್ನೇ ಸಾಕ್ಷಿಯಾಗಿ ಬಳಸುತ್ತಿದ್ದರು- ಮುಂಬೈ ನಗರದ ಕಮ್ಸುನಿಸ್ಟರಲ್ಲಿಯ ಬಹುಸಂಖ್ಯಾತರು ಬ್ರಾಹ್ಮಣರಾಗಿದ್ದರು. ಆ ಮಾರ್ಕ್ಸ್‌ವಾದಿಗಳು ಜಾತಿಯ ಪ್ರಶ್ನೆಯು ಒಂದು ಗಮನಾರ್ಹವಾದ ಸಮಸ್ಯೆಯೆಂದು ಪರಿಗಣಿಸಲೇ ಇಲ್ಲ. ಬದಲಾಗಿ, ಜಾತಿಯ ಸಮಸ್ಯೆ ಒಂದು ನೈಜ ಸಮಸ್ಯೆಯೆ ಅಲ್ಲ- ಎಂಬುವುದು ಅವರ ಮಾತು ರೀತಿ, ನೀತಿಗಳಲ್ಲಿ ಚಿಮ್ಮುತ್ತಿತ್ತು. ಆದರೆ, ಅಂಬೇಡ್ಕರ್‌ರಿಗೆ ಜಾತಿಯ ಸಮಸ್ಯೆಯೇ ಅವರ ಹೋರಾಟದ ಕೇಂದ್ರಬಿಂದುವಾಗಿತ್ತು, ಜೀವಜೀವಾಳವಾಗಿತ್ತು. ಜಾತಿ ವಿರೋಧಿ ಅಂದೋಲನವನ್ನು ಕಮ್ಯುನಿಸ್ಟರು ಗತ್ತಿನಲ್ಲಿ ತಿರಸ್ಕರಿಸುತ್ತಿದ್ದರು, ಏಕೆಂದರೆ, ಅವರ ದೃಷ್ಟಿಯಲ್ಲಿ ಜಾತಿ ವಿರುದ್ಧದ ಅಂದೋಲನಕ್ಕೆ ಗಟ್ಟಿಯಾದ ವೈಚಾರಿಕ ನೆಲೆಯಿರಲಿಲ್ಲ. ಅದು ಅವೈಜ್ಞಾನಿಕ ಹೋರಾಟವೆಂದು ಅವರು ಜರಿಯುತ್ತಿದ್ದರು, ಅದಕ್ಕೆ ಕಾರಣವಿಷ್ಟೇ ಜಾತಿ ವ್ಯವಸ್ಥೆಯ ವಿರುದ್ಧದ ಹೋರಾಟವು ಕಾರ್ಮಿಕರನ್ನು ಒಗ್ಗೂಡಿಸುವ ಬದಲು ವಿಭಜಿಸುತ್ತದೆ ಎಂಬುವುದು ಅವರ ಭಾವನೆಯಾಗಿತ್ತು. ಅದರಿಂದಾಗಿ, ಅಂಬೇಡ್ಕರ್‌ರು ಮಾರ್ಕ್ಸ್‌ವಾದದಿಂದ ಇನ್ನಷ್ಟು ದೂರ ಸರಿದರು. ತತ್‌ಪರಿಣಾಮವಾಗಿ ಅಂಬೇಡ್ಕರರು ಮತ್ತು ಕಮ್ಯುನಿಸ್ಟರ ನಡುವಿನ ಕಂದರ ಬೆಳೆಯುತ್ತಲೇ ಹೋಯಿತು.

(ಕನ್ನಡಕ್ಕೆ): ಆರ್.ಕೆ ಹುಡುಗಿ
ರಾಹು ಎಂತಲೇ ಜನಪ್ರಿಯವಾಗಿರುವ ಆರ್.ಕೆ ಹುಡುಗಿ ಇಂಗ್ಲಿಷ್ ಪ್ರಾಧ್ಯಾಪಕರು ಮತ್ತು ಸಾಹಿತಿ. ಅನುವಾದಗಳ ಮೂಲಕ ಹೆಚ್ಚು ಗಮನ ಸೆಳೆದಿರುವ ರಾಹು ’ಆರನೇ ಹೆಂಡತಿ ಆತ್ಮಕತೆ’, ’ಧರೆಹೊತ್ತಿ ಉರಿದಾಗ’ ಮುಂತಾದ ಪುಸ್ತಕಗಳನ್ನು ಅನುವಾದಿಸಿದ್ದಾರೆ.

ಡಾ. ಆನಂದ್ ತೇಲ್‌ತುಂಬ್ಡೆ

ಡಾ. ಆನಂದ್ ತೇಲ್‌ತುಂಬ್ಡೆ
ಅಂಬೇಡ್ಕರ್‌ವಾದಿ ಚಿಂತಕ. ’ದ ಪರ್ಸಿಸ್ಟೆನ್ಸ್ ಆಪ್ ಕ್ಯಾಸ್ಟ್’, ’ರಿಪಬ್ಲಿಕ್ ಆಫ್ ಕ್ಯಾಸ್ಟ್’, ’ಖೈರ್ಲಾಂಜಿ’ ಮುಂತಾದ ಪುಸ್ತಕಗಳನ್ನು ರಚಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...