ಮಧ್ಯಪ್ರದೇಶದ ಬಿಜೆಪಿ ಸರ್ಕಾರದ ಕೃಷಿ ಸಚಿವ ಕಮಲ್ ಪಟೇಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ದೇವರ ಅವತಾರ’ ಎಂದು ಸೋಮವಾರ ಬಣ್ಣಿಸಿದ್ದಾರೆ. ಶ್ರೀರಾಮ ಮತ್ತು ಶ್ರೀಕೃಷ್ಣನಂತೆಯೇ, ಕಾಂಗ್ರೆಸ್ ನಡೆಸಿದ ದೌರ್ಜನ್ಯಗಳು, ಭ್ರಷ್ಟಾಚಾರ ಮತ್ತು ದೇಶದ ಸಂಸ್ಕೃತಿಯ ನಾಶದ ಹೆಚ್ಚಳದಿಂದಾಗಿ ಉಂಟಾದ ಹತಾಶೆಯ ವಾತಾವರಣವನ್ನು ಕೊನೆಗೊಳಿಸಲು ಮೋದಿ ಅವತಾರವೆತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ರಾಜ್ಯದ ಹರ್ದಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಮಲ್ ಪಟೇಲ್, “ಭಾರತವನ್ನು ವಿಶ್ವಗುರುವಾಗಿಸುವ ಹಾದಿಯಲ್ಲಿ ಮುನ್ನಡೆಸುವುದು, ದೇಶವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸುವುದು ಮತ್ತು ಸಾರ್ವಜನಿಕ ಕಲ್ಯಾಣವನ್ನು ಖಾತರಿಪಡಿಸುವಂತಹ ಪ್ರಧಾನಿ ಮೋದಿ ಸಾಧಿಸಿದ ಕಾರ್ಯಗಳು ಸಾಮಾನ್ಯ ವ್ಯಕ್ತಿಯಿಂದ ಸಾಧಿಸಲಾಗುತ್ತಿರಲಿಲ್ಲ” ಎಂದು ಹೇಳಿದ್ದಾರೆ.
ಇದನ್ನೂ ಓದಿ:ಬಿಜೆಪಿ, ಮೋದಿ ವಿರುದ್ಧ ಪೋಸ್ಟ್: ಧಾರಾವಾಹಿಯಿಂದ ಮರಾಠಿ ನಟ ಹೊರಕ್ಕೆ, ಗ್ರಾಮದಲ್ಲಿ ಚಿತ್ರೀಕರಣ ಬೇಡ ಎಂದ ಗ್ರಾಮಸ್ಥರು
“ಯಾವುದೇ ಬಿಕ್ಕಟ್ಟು ಉಂಟಾದಾಗ, ದೌರ್ಜನ್ಯ ಹೆಚ್ಚಾದಾಗ, ದೇವರು ಮಾನವ ರೂಪದಲ್ಲಿ ಅವತಾರವೆತ್ತಿ ಬರುತ್ತಾನೆ ಎಂದು ನಮ್ಮ ಧರ್ಮ ಮತ್ತು ಸಂಸ್ಕೃತಿಯಲ್ಲಿ ಹೇಳಲಾಗುತ್ತದೆ” ಎಂದು ಕಮಲ್ ಪಟೇಲ್ ಹೇಳಿದ್ದಾರೆ.
ಭಗವಾನ್ ರಾಮನು ಮಾನವ ರೂಪದಲ್ಲಿ ಅವತಾರವೆತ್ತಿ ಬಂದನು ಮತ್ತು ರಾಕ್ಷಸ ರಾವಣನನ್ನು ಕೊಂದು ಇತರ ದುಷ್ಟ ಶಕ್ತಿಗಳನ್ನು ಸೋಲಿಸುವ ಮೂಲಕ ಮತ್ತು ಜನರನ್ನು ರಕ್ಷಿಸುವ ಮೂಲಕ ‘ರಾಮರಾಜ್ಯ’ವನ್ನು ಸ್ಥಾಪಿಸಿದನು. ಕಂಸನ ದೌರ್ಜನ್ಯಗಳು ಹೆಚ್ಚಾದಾಗ, ಶ್ರೀಕೃಷ್ಣನು ಜನ್ಮ ತಳೆದು ಅವನ ಕ್ರೌರ್ಯವನ್ನು ಕೊನೆಗೊಳಿಸಿದನು ಎಂದು ಅವರು ಹೇಳಿದ್ದಾರೆ.
“ಅದೇ ರೀತಿ ಕಾಂಗ್ರೆಸ್ ದೌರ್ಜನ್ಯಗಳು ಹೆಚ್ಚಾದಾಗ… ಭ್ರಷ್ಟಾಚಾರ, ಜಾತೀಯತೆ ಹೆಚ್ಚಾದಾಗ, ದೇಶದ ಸಂಸ್ಕೃತಿ ನಾಶವಾಗಿ ಎಲ್ಲೆಡೆ ಹತಾಶೆಯ ವಾತಾವರಣ ನಿರ್ಮಾಣವಾದಾಗ ಅದನ್ನು ಕೊನೆಗಾಣಿಸಲು ನರೇಂದ್ರ ಮೋದಿ ಹುಟ್ಟಿದ್ದಾರೆ” ಎಂದು ಕಮಲ್ ಪಟೇಲ್ ಹೇಳಿದ್ದಾರೆ.
ಭ್ರಷ್ಟಾಚಾರ ಮುಕ್ತ ಸರ್ಕಾರ ನೀಡಿದ ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಭಾರತ ವಿಶ್ವ ಗುರು ಆಗುತ್ತಿದೆ ಮತ್ತು ಸಾಮಾನ್ಯ ಜನರ ಕಲ್ಯಾಣವನ್ನು ಖಾತರಿಪಡಿಸುತ್ತಿದೆ ಎಂದು ಅವರು ಹೇಳಿದ್ದಾರೆ.
“ಇವುಗಳು ಸಾಮಾನ್ಯ ವ್ಯಕ್ತಿಯಿಂದ ಸಾಧಿಸಲು ಸಾಧ್ಯವಿಲ್ಲದ ಕಾರ್ಯಗಳು. ಸಾಧ್ಯವಾಗಿದ್ದರೆ 60 ವರ್ಷಗಳಲ್ಲಿ ಇದು ಸಂಭವಿಸಬಹುದಿತ್ತು. ಆದ್ದರಿಂದ, ಪ್ರಧಾನಿ ನರೇಂದ್ರ ಮೋದಿ ಅವರು ‘ಅವತಾರಿ ಪುರುಷ’ (ಅವತಾರ) ಮತ್ತು ಅಸಾಧ್ಯವಾದ ಕೆಲಸಗಳನ್ನು ಮಾಡಿದ್ದಾರೆ. ಅವರು ದೇವರ ಅವತಾರ” ಎಂದು ಕಮಲ್ ಪಟೇಲ್ ಹೇಳಿದ್ದಾರೆ.
ವಿಶೇಷವೇನೆಂದರೆ, ಸಚಿವ ಕಮಲ್ ಪಟೇಲ್ ಅವರು ಕಳೆದ ನವೆಂಬರ್‌ನಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಬುಡಕಟ್ಟು ಜನರ ನಾಯಕ ತಾಂತ್ಯ ಭಿಲ್ ಅವರ ಅವತಾರ ಎಂದು ಬಣ್ಣಿಸಿದ್ದರು.
ಇದನ್ನೂ ಓದಿ:ಕಳೆದ ವರ್ಷವೇ ‘ದೀದಿ’ ಉದ್ಘಾಟಿಸಿದ್ದ ಆಸ್ಪತ್ರೆಯನ್ನು ಮತ್ತೆ ಉದ್ಘಾಟಿಸಿದ ‘ಮೋದಿ’: ಆರೋಪ


