ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ಶೋಲಾವರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ 26 ವರ್ಷದ ಯುವಕನನ್ನು 19 ವರ್ಷದ ಯುವತಿ ಕೊಲೆ ಮಾಡಿದ್ದಾರೆ. ಮದ್ಯಪಾನ ಮಾಡಿದ್ದ ಯುವಕ ತನಗೆ ಲೈಂಗಿಕ ಕಿರುಕುಳ ನೀಡಿ, ಚಾಕು ತೋರಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದನು ಎಂದು ಬಾಲಕಿಯು ಆರೋಪಿಸಿದ್ದಾರೆ.
ಇದನ್ನೂ ಓದಿ: ಹತ್ರಾಸ್ ಅತ್ಯಾಚಾರ-ಕೊಲೆ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಮ್ಯಾಜಿಸ್ಟ್ರೇಟ್ ವರ್ಗಾವಣೆ!
ಪೊಲೀಸರ ಪ್ರಕಾರ, “ತಿರುವಳ್ಳೂರಿನ ಯುವತಿಯು ಶೋಲಾವರಂನಲ್ಲಿ ವಾಸಿಸುತ್ತಿರುವ ತನ್ನ ಚಿಕ್ಕಮ್ಮನನ್ನು ನೋಡಲು ಬಂದಿದ್ದಳು. ಸಂಜೆ ತನ್ನ ಚಿಕ್ಕಮ್ಮನ ಮನೆಯ ಪಕ್ಕದ ಕುದುರೆ ಫಾರ್ಮ್ ಬಳಿಯ ಶೌಚಾಲಯಕ್ಕೆ ಹೊರಟಾಗ, ಅಜಿತ್ ಅಲಿಯಾಸ್ ಕಿಲ್ಲಿ ಅಜಿತ್ ಅವಳನ್ನು ತಡೆದಿದ್ದನು.
ಮದ್ಯಪಾನ ಮಾಡಿದ ಸ್ಥಿತಿಯಲ್ಲಿ ಅವನು, ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಮತ್ತು ಚಾಕು ತೋರಿಸಿ ಅತ್ಯಾಚಾರಕ್ಕೆ ಯತ್ನಿಸಿದನು. ಆತ್ಮರಕ್ಷಣೆಗಾಗಿ, ಹುಡುಗಿ ಅವನನ್ನು ದೂರ ತಳ್ಳಿದಳು. ಅವನು ಕೆಳಗೆ ಬೀಳುತ್ತಿದ್ದಂತೆ ಅವನಿಂದ ಚಾಕುವನ್ನು ಕಸಿದುಕೊಂಡು, ಯುವಕನ ಮುಖ ಮತ್ತು ಕುತ್ತಿಗೆಗೆ ಇರಿದಳು. ಅಜಿತ್ ಸ್ಥಳದಲ್ಲೇ ಮೃತಪಟ್ಟನು” ಎಂದು ಪೊಲೀಸ್ ಅಧಿಕಾರಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ’ದಿ ಹಿಂದು’ ವರದಿ ಮಾಡಿದೆ.
ಶೋಲಾವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್ಸ್‌ಪೆಕ್ಟರ್ ನಾಗಲಿಂಗಂ ಪ್ರಕರಣದ ತನಿಖೆ ಆರಂಭಿಸಿದ್ದಾರೆ. “ನಾವು ಪ್ರಕರಣವನ್ನು ದಾಖಲಿಸಿ, ತನಿಖೆಯನ್ನು ಪ್ರಾರಂಭಿಸಿದ್ದೇವೆ. ಯುವತಿಯ ಆವೃತ್ತಿಯನ್ನು ಪಡೆದ್ದೇವೆ. ದೃಕ್ ಸಾಕ್ಷಿಗಳು ಇದ್ದಾರೆಯೇ ಎಂದು ನಾವು ತನಿಖೆ ನಡೆಸುತ್ತಿದ್ದೇವೆ. ಘಟನೆಯ ಬಗ್ಗೆ ವಿವರವಾದ ತನಿಖೆ ನಡೆಸಲಾಗುವುದು. ಮೃತಪಟ್ಟ ಅಜಿತ್ ಬಾಲಕಿಗೆ ಸಂಬಂಧಿ ಎಂದು ಹೇಳಲಾಗಿದೆ” ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಬಿಹಾರ: 3 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಕೊಲೆ – ಅಪರಾಧಿಗೆ ಮರಣದಂಡನೆ


