ಮಂಗಳೂರಿನಲ್ಲಿರುವ ಅವ್ಯವಸ್ಥೆಯ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಾಗೂ ಅಭಿವೃದ್ಧಿಯತ್ತ ಜನಪ್ರತಿನಿಧಿಗಳ ಗಮನ ಸೆಳೆಯಲು ವಿಶೇಷವಾದ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.
ಮಂಗಳೂರಿನ ನಿವಾಸಿ, ಹೋರಾಟಗಾರ ಸುನಿಲ್ ಬಜಿಲಕೇರಿಯವರು ಈ ಸ್ಪರ್ಧೆಯನ್ನು ಆಯೋಜಿಸಿದ್ದು, ನಗರದ ಸಮಸ್ಯೆಗಳ ಕುರಿತು ವಿಡಿಯೊ ಮಾಡಿ ಕಳುಹಿಸುವಂತೆ ಕೋರಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಗುಂಪು ಹಾಗೂ ವೈಯಕ್ತಿಕ ವಿಭಾಗದಲ್ಲಿ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಗುಂಪು ಸ್ಪರ್ಧೆಗೆ 10,000 ರೂ. ಪ್ರಥಮ ಬಹುಮಾನ, 5,000 ರೂ. ದ್ವಿತೀಯ ಬಹುಮಾನ, ವೈಯಕ್ತಿಕ ಸ್ಪರ್ಧೆಗೆ ಮೊದಲ ಬಹುಮಾನ 5,000 ರೂ., ಎರಡನೇ ಬಹುಮಾನ 2,500 ರೂ. ನಿಗದಿ ಮಾಡಲಾಗಿದೆ.
ಏನಿದು ಸ್ಪರ್ಧೆ?
ನಿಮ್ಮ ಗಮನಕ್ಕೆ ಬರುವ ರೋಡು, ತೋಡು, ಒಳಚರಂಡಿ ಇತ್ಯಾದಿ ಯಾವುದೇ ಸಮಸ್ಯೆ ಇದ್ದರೂ ಅದನ್ನು 3 ನಿಮಿಷಗಳ ವಿಡಿಯೋ ಮಾಡಿ, ನಿಮ್ಮ ಫೇಸ್‌ಬುಕ್ ಅಥವಾ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಬೇಕು.
ಇಲ್ಲಿ ನೀವು ವೈಯಕ್ತಿಕವಾಗಿ ಪೋಸ್ಟ್ ಹಾಕಿದರೆ, ವೈಯಕ್ತಿಕ ಸ್ಪರ್ಧೆ ಎಂದು ಪರಿಗಣಿಸಲಾಗುವುದು. ಒಂದು ಊರಿನವರು/ ಸಂಸ್ಥೆಯವರು/ ಗುಂಪಿನವರು ಭಾಗವಹಿಸಿ ಹಾಕಿದರೆ ಅದನ್ನು ಗುಂಪು ಸ್ಪರ್ಧೆ ಎಂದು ಪರಿಗಣಿಸಲಾಗುವುದು.
ನೀವು ಪೋಸ್ಟ್ ಮಾಡಿದ ಬಳಿಕ ಪೋಸ್ಟ್‌ನ ಲಿಂಕ್‌ಅನ್ನು ವಾಟ್ಸಾಪ್ ನಂಬರ್ +91 99166 91455ಕ್ಕೆ ಕಳುಹಿಸಬೇಕು. ಇದು ಮಂಗಳೂರು ಮಹಾನಗರ ಪಾಲಿಕೆಯ 60 ವಾರ್ಡ್‌ಗಳಿಗೆ ಮಾತ್ರ ಸೀಮಿತವಾದ ಸ್ಪರ್ಧೆ. ಯಾವುದೇ ವ್ಯಕ್ತಿ ನಿಂದನೆ, ಜಾತಿ, ಮತದ ವಿಷಯದ ಮಾತುಗಳಿದ್ದರೆ ತಿರಸ್ಕರಿಸಲಾಗುವುದು.
“ಯಾರ ಪೋಸ್ಟ್ ಗೆ ಹೆಚ್ಚು ಲೈಕ್ ಬಂದಿದೆಯೋ ಅವರಿಗೆ ಈ ಎರಡು ಪ್ರಶಸ್ತಿ ನೀಡಲಾಗುವುದು. ದಿನಾಂಕ 21-7-22 ರಿಂದ 25-7-22ರ ತನಕ ನೀವು ಪೋಸ್ಟ್ ಮಾಡಿ ಲಿಂಕ್ ಕಳಿಸಬಹುದು. ಆನಂತರ ಸ್ವೀಕರಿಸಲಾಗದು. ನೀವು ಪೋಸ್ಟ್ ಮಾಡಿದ ದಿನಾಂಕದಿಂದ ಒಂದು ವಾರಗಳ ಕಾಲದ ಲೈಕ್ಅನ್ನು ಪರಿಗಣಿಸಿ ಬಹುಮಾನ ನೀಡಲಾಗುವುದು” ಎಂದು ಸುನಿಲ್ ಮಾಹಿತಿ ನೀಡಿದ್ದಾರೆ.

‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಸುನಿಲ್ ಬಜಿಲಕೇರಿ ಅವರು, “ಮಂಗಳೂರಿನಲ್ಲಿ ಆಗಬೇಕಿರುವ ಅಭಿವೃದ್ಧಿಗಳ ಕುರಿತು ಗಮನ ಸೆಳೆಯಲು ಈ ಸ್ಪರ್ಧೆಯನ್ನು ಆಯೋಜಿಸಿದ್ದೇನೆ. ಜನ ಜಾಗೃತಿ ಮತ್ತು ನಮ್ಮ ಊರಿನ ಅಭಿವೃದ್ಧಿ ವಿಷಯದಲ್ಲಿ ಜನ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ” ಎಂದು ತಿಳಿಸಿದರು.
“ಸ್ಪರ್ಧೆಯನ್ನು ಘೋಷಿಸಿದ ಬಳಿಕ ಕರೆಗಳು ಬರಲು ಶುರುವಾಗಿವೆ. ಇದು ಜನರಿಂದ ಜನರಿಗಾಗಿ ಜನರಿಗೋಸ್ಕರವೇ ಮಾಡಿರುವ ಸ್ಪರ್ಧೆ” ಎಂದರು.


