ಬೆಂಗಳೂರಿನ ಹೃದಯ ಭಾಗದಲ್ಲಿರುವ ಸ್ಯಾಂಕಿ ರಸ್ತೆಯಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಬಾರದು, ಇಲ್ಲಿನ ಮರಗಳನ್ನು ಉಳಿಸಬೇಕು ಎಂದು ಆಗ್ರಹಿಸಿ ನಡೆದ ಶಾಂತಿಯುತ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ 70 ನಾಗರಿಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ.
ಸದಾಶಿವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಕ್ರಮಕ್ಕೆ ನಾಗರಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಫೆಬ್ರವರಿ 19, 2023ರಂದು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಸಂಚಾರ ವ್ಯವಸ್ಥೆಗೆ ಯಾವುದೇ ಧಕ್ಕೆಯಾಗದಂತೆ ಫುಟ್‌ಪಾತ್‌ನಲ್ಲಿ ಮೆರವಣಿಗೆ ನಡೆಸಲಾಗಿತ್ತು.
ಪ್ರತಿಭಟನಾ ಮೆರವಣಿಗೆಯ ನಂತರ, ಪೊಲೀಸರು 70 ನಾಗರಿಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಮತ್ತು ಅವರಲ್ಲಿ ಒಬ್ಬರನ್ನು ವಿಚಾರಣೆಗೆ ಕರೆಸಲಾಗಿದೆ. ಐಪಿಸಿ (ಭಾರತೀಯ ದಂಡ ಸಂಹಿತೆ)ಯ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಆರೋಪಗಳನ್ನು ಹೊರಿಸಲಾಗಿದೆ.
ಐಪಿಸಿ ಸೆಕ್ಷನ್ 341, 141, 149 ಮತ್ತು 283 ಅಡಿಯಲ್ಲಿ ಆರೋಪಗಳನ್ನು ಹೊರಿಸಲಾಗಿದ್ದು, ಅಕ್ರಮ ಬಂಧನ, ಕಾನೂನುಬಾಹಿರ ಸಭೆ ಮತ್ತು ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಪಡಿಸಲಾಗಿದೆ ಎಂದು ನೋಟೀಸ್ ನೀಡಲಾಗಿದೆ.
ಪ್ರತಿಭಟನೆಯ ಸಂದರ್ಭದಲ್ಲಿ ಪ್ರತಿಭಟನಾಕಾರರು ಈ ಸೆಕ್ಷನ್‌ಗಳನ್ನು ಉಲ್ಲಂಘಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರತಿಭಟನೆಯನ್ನು ಶಾಂತಿಯುತವಾಗಿ ನಡೆಸಲಾಗಿದೆ ಎಂದು ತೋರಿಸಲು ವೀಡಿಯೊ ಪುರಾವೆಗಳನ್ನು ಉಲ್ಲೇಖಿಸಿರುವ ನಾಗರಿಕರು ಈ ಆರೋಪಗಳನ್ನು ನಿರಾಕರಿಸಿದ್ದಾರೆ.
“ಸಾರ್ವಜನಿಕ ಮಾರ್ಗಕ್ಕೆ ಯಾವುದೇ ಅಡ್ಡಿ ಇಲ್ಲ, ಕಾನೂನುಬಾಹಿರ ಸಭೆ ಇಲ್ಲ, ಅಥವಾ ಯಾರನ್ನೂ ಅಕ್ರಮವಾಗಿ ಬಂಧಿಸಲಾಗಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ನೋಟಿಸ್‌ಗೆ ಒಳಗಾಗಿರುವ ಅವಿಜಿತ್ ಮೈಕೆಲ್ ಪ್ರತಿಕ್ರಿಯಿಸಿ, “ಈ ಸುಳ್ಳು ಆರೋಪಗಳಿಗೆ ನಾನು ಹೆದರುವುದಿಲ್ಲ. ನಮ್ಮ ಸ್ವಾತಂತ್ರ್ಯ ಹೋರಾಟಗಾರರಂತೆ ಹೋರಾಡಬೇಕಿದೆ. ನಮ್ಮ ಪರಿಸರ ಮತ್ತು ಮಕ್ಕಳ ಆರೋಗ್ಯದ ದೃಷ್ಟಿಯಲ್ಲಿ ಅನ್ಯಾಯದ ವಿರುದ್ಧ ಕೆಚ್ಚೆದೆಯ ನಿಲುವನ್ನು ಹೆಚ್ಚಿನ ಭಾರತೀಯರು ತೆಗೆದುಕೊಳ್ಳಬೇಕಿದೆ” ಎಂದಿದ್ದಾರೆ.
“ಪರಿಸರ ಮತ್ತು ಬೆಂಗಳೂರಿನ ನಾಗರಿಕರ ಆರೋಗ್ಯ, ನಮ್ಮ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವ ಮತ್ತು ಕಾನೂನು ಪಾಲಿಸುವ ನಾಗರಿಕ ನಾನು. ನನ್ನ ವಿರುದ್ಧ ಹೊರಿಸಲಾದ ಯಾವುದೇ ಆರೋಪಗಳನ್ನು ನಾನು ಸ್ವೀಕರಿಸುವುದಿಲ್ಲ, ಏಕೆಂದರೆ ಅವುಗಳಿಗೆ ಯಾವುದೇ ಮೌಲ್ಯ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಈ ಘಟನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಶಾಂತಿಯುತ ಪ್ರತಿಭಟನಾಕಾರರಿಗೆ ಪೊಲೀಸರು ಬೆದರಿಕೆ ಮತ್ತು ಕಿರುಕುಳ ನೀಡಿದ್ದಾರೆ ಎಂದು ಹಲವರು ಆರೋಪಿಸಿದ್ದಾರೆ. ಪೊಲೀಸರು ತಮ್ಮ ಕುತಂತ್ರಗಳ ಭಾಗವಾಗಿ ಅಮಾಯಕ ನಾಗರಿಕರ ಮೇಲೆ ಸುಳ್ಳು ಆರೋಪ ಹೊರಿಸುತ್ತಿದ್ದಾರೆ ಎಂಬ ಟೀಕೆಗಳು ವ್ಯಕ್ತವಾಗಿವೆ.


