Homeಕರ್ನಾಟಕಇಂದಿನಿಂದ ಔಷಧಗಳ ಬೆಲೆ ಶೇ.12.12ರಷ್ಟು ಹೆಚ್ಚಳ: ಬಿಜೆಪಿ ವಿರುದ್ಧ ಕಿಡಿಕಾರಿದ ವಿಪಕ್ಷಗಳು

ಇಂದಿನಿಂದ ಔಷಧಗಳ ಬೆಲೆ ಶೇ.12.12ರಷ್ಟು ಹೆಚ್ಚಳ: ಬಿಜೆಪಿ ವಿರುದ್ಧ ಕಿಡಿಕಾರಿದ ವಿಪಕ್ಷಗಳು

- Advertisement -
- Advertisement -

ಏಪ್ರಿಲ್‌ 1 ರಿಂದ ಔಷಧಗಳ ಬೆಲೆಯನ್ನು ಶೇ.12.12ರಷ್ಟು ಹೆಚ್ಚಿಸಲು ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರ ಅನುಮೋದನೆ ನೀಡಿದೆ. ಈ ಕುರಿತು ಕಾಂಗ್ರೆಸ್ ಹಾಗೂ ಜೆಡಿಎಸ್‌ ವಿರೋಧ ವ್ಯಕ್ತಪಡಿಸಿ ಟ್ವೀಟ್‌ ಮಾಡಿವೆ.

ಯಾವ ಯಾವ ಔಷಧಗಳ ಬೆಲೆ ಏರಿಕೆಯಾಗಲಿದೆ?

ಪ್ಯಾರಸಿಟಮಲ್ ಸೇರಿದಂತೆ 800ಕ್ಕೂ ಹೆಚ್ಚು ಅತ್ಯಗತ್ಯ ಔಷಧಗಳ ಬೆಲೆ ಏರಿಕೆಯಾಗಲಿದೆ. ಪ್ರಮುಖವಾಗಿ ಅಲರ್ಜಿ, ಸೋಂಕು, ಜ್ವರ, ಚರ್ಮ ರೋಗ, ಹೃದ್ರೋಗ, ರಕ್ತಹೀನತೆ, ಅಧಿಕ ರಕ್ತದೊತ್ತಡವನ್ನು ಗುಣಪಡಿಸಲು ಬಳಸುವ ಔಷಧಿಗಳ ಬೆಲೆಗಳು ಹೆಚ್ಚಾಗಲಿದೆ. ಬೆಲೆ ಏರಿಕೆಯಾಗುವ ಔಷಧಗಳ ಪಟ್ಟಿಯಲ್ಲಿ ಅಜಿಥ್ರೊಮೈಸಿನ್, ಸಿಪ್ರೊಫ್ಲೋಕ್ಸಾಸಿನ್ ಹೈಡ್ರೋಕ್ಲೋರೈಡ್, ಮೆಟ್ರೋನಿಡಜೋಲ್, ಪ್ಯಾರೆಸಿಟಮಾಲ್, ಫೆನೋಬಾರ್ಬಿಟೋನ್ ಮತ್ತು ಫೆನಿಟೋಯಿನ್ ಸೋಡಿಯಂನಂತಹ ಔಷಧಗಳ ಬೆಲೆ ಹೆಚ್ಚಳವಾಗಲಿ ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ಕಾಂಗ್ರೆಸ್ ಪಕ್ಷ ವಿರೋಧ ವ್ಯಕ್ತಪಡಿಸಿದ್ದು, ”ಅಗತ್ಯ ಜೀವರಕ್ಷಕ ಔಷಧಗಳ ಬೆಲೆ 12% ಏರಿಕೆಯಾಗುತ್ತಿದೆ. ಕೋವಿಡ್ ಸಾಂಕ್ರಾಮಿಕದ ಸಂಕಷ್ಟ ಎದುರಿಸಿದ ಜನತೆಗೆ ಮೋದಿ ಸರ್ಕಾರದಿಂದ ಮತ್ತೊಂದು ಬೆಲೆ ಏರಿಕೆಯ ಕೊಡುಗೆ ಇದು. ಜನಸಾಮಾನ್ಯರ ಸುಲಿಗೆಯ ಬಗ್ಗೆ ಬಿಜೆಪಿ ನಾಯಕರು ಏಕೆ ಮಾತಾಡುತ್ತಿಲ್ಲ? ಮತ ಕೇಳಲು ಹೋದಾಗ ಜನರಲ್ಲಿ ಬೆಲೆ ಏರಿಕೆಯ ಸಾಧನೆಯನ್ನು ಹೇಳಿಕೊಳ್ಳುವಿರಾ?” ಎಂದು ರಾಜ್ಯ ಬಿಜೆಪಿಗೆ ಪ್ರಶ್ನೆ ಮಾಡಿದೆ.

ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಲೇ ದೇಶದ ಜನರು ಈಗಾಗಲೇ ಹೈರಾಣಾಗಿದ್ದು, ಔಷಧ ಬೆಲೆ ಹೆಚ್ಚಿಸಿ ಮತ್ತಷ್ಟು ಆಘಾತ ನೀಡುತ್ತಿದೆ. ಈ ಮೂಲಕ ವಿಕೃತ ಜನದ್ರೋಹಿ ಮನಸ್ಥಿತಿಯನ್ನು ಕೇಂದ್ರ ಸರ್ಕಾರ ತೋರುತ್ತಿದೆ ಎಂದು ಜೆಡಿಎಸ್ ಕಿಡಿಕಾರಿದೆ.

ಇದನ್ನೂ ಓದಿ: ‘ಬಿಜೆಪಿಗೆ ಮತ ಹಾಕಲ್ಲ’: ಎನ್‌ಎಚ್‌ಎಂ ಒಳಗುತ್ತಿಗೆ ನೌಕರರ ಪ್ರತಿಜ್ಞೆ

ಈ ಬಗ್ಗೆ ಗುರುವಾರ ಸರಣಿ ಟ್ವೀಟ್‌ ಮಾಡಿರುವ ಜೆಡಿಎಸ್‌, ”ಆಕಾಶದೆತ್ತರಕ್ಕೆ ಏರಿರುವ ಅಗತ್ಯ ವಸ್ತುಗಳ ಬೆಲೆಯ ಮಧ್ಯೆ ಜನತೆಗೆ ಮತ್ತೊಂದು ಆಘಾತ ಕೊಡಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸಿದ್ಧವಾಗಿದೆ. ಸಾಮಾನ್ಯ ಬಳಕೆಯ ಔಷಧಿಗಳ ಬೆಲೆಯನ್ನು 12%ಕ್ಕೂ ಅಧಿಕವಾಗಿ ಹೆಚ್ಚಿಸಲು ಔಷಧ ಕಂಪನಿಗಳಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಹೈರಾಣಾಗಿರುವ ಜನತೆಯ ಮೇಲೆ ಮತ್ತೊಂದು ಹೊರೆ” ಎಂದು ಆಕ್ರೋಶ ವ್ಯಕ್ತಪಡಿಸಿದೆ.

”ನೋವು ನಿವಾರಕ, ಆ್ಯಂಟಿ ಬಯಾಟಿಕ್, ಉರಿಯೂತ ನಿವಾರಕ ಔಷಧಿ ಸೇರಿದಂತೆ ಜನಸಾಮಾನ್ಯರು ಹೆಚ್ಚು ಬಳಸುವ 800ಕ್ಕೂ ಹೆಚ್ಚು ಔಷಧಿಗಳ ಬೆಲೆ ಏಪ್ರಿಲ್ ತಿಂಗಳಿಂದ ಏರಿಕೆಯಾಗಲಿದೆ. ಕಳೆದ ವರ್ಷವೂ‌ 10% ಕ್ಕಿಂತ ಹೆಚ್ಚು ಏರಿಸಲಾಗಿತ್ತು. ಮೊಟ್ಟಮೊದಲ ಬಾರಿ ಈ ಪ್ರಮಾಣದಲ್ಲಿ ಸಾಮಾನ್ಯ ಔಷಧಿಗಳ ಬೆಲೆ ಏರಿಕೆ ಮಾಡಲಾಗುತ್ತಿದೆ” ಎಂದು ಹೇಳಿದೆ.

”ಯಾರೂ ಕೂಡ ಬದುಕಲು ಬಿಡಬಾರದು ಎಂಬ ದುಷ್ಟ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಬಂದಂಗಿದೆ. ಬಳಕೆಯ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿರುವುದರಿಂದ ಜನತೆಯ ಜೇಬು ಖಾಲಿಯಾಗಿ, ಬಡವರು ಇನ್ನಷ್ಟು ಬಡವರಾಗಿ, ಹಸಿವಿಗೆ ದೂಡಲ್ಪಡುತ್ತಿದ್ದಾರೆ. ಇಷ್ಟು ವಿಕೃತ ಜನದ್ರೋಹಿ ಮನಸ್ಥಿತಿ ದೇಶದ ಇತಿಹಾಸದಲ್ಲೇ ಯಾವ ಸರ್ಕಾರಕ್ಕೂ ಇರಲಿಲ್ಲ!” ಎಂದು ಕಿಡಿಕಾರಿದೆ.

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read