Homeಮುಖಪುಟ‘ನೂರು ಜನರ ಗುಂಪು ಹಲ್ಲೆ ಮಾಡಿತು; ಜೈ ಶ್ರೀರಾಮ್‌ ಎಂದಿತು, ಊರು ಬಿಡುವಂತೆ ಸೂಚಿಸಿತು’

‘ನೂರು ಜನರ ಗುಂಪು ಹಲ್ಲೆ ಮಾಡಿತು; ಜೈ ಶ್ರೀರಾಮ್‌ ಎಂದಿತು, ಊರು ಬಿಡುವಂತೆ ಸೂಚಿಸಿತು’

- Advertisement -
- Advertisement -

“ನೂರು ಜನರ ಗುಂಪು ಹಲ್ಲೆ ಮಾಡಿತು, ಜೈ ಶ್ರೀರಾಮ್‌ ಎಂದಿತು, ಊರು ಬಿಡುವಂತೆ ಎಚ್ಚರಿಸಿತು” – ಹೀಗೆ ಮಧ್ಯಪ್ರದೇಶದ ಮುಸ್ಲಿಂ ಕುಟುಂಬವೊಂದು ಆರೋಪಿಸಿದೆ.

ಮಧ್ಯಪ್ರದೇಶದ ಇಂದೋರ್‌ ಸಮೀಪದ ಕಂಪೆಲ್‌ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ವಾಸವಿರುವ ಏಳು ಜನರಿರುವ ಮುಸ್ಲಿಂ ಕುಟುಂಬದ ಮೇಲೆ ಶನಿವಾರ ರಾತ್ರಿ 8.30ರ ವೇಳೆಗೆ ಸುಮಾರು ನೂರು ಜನರಿದ್ದ ಕೇಸರಿಪಡೆ ಹಲ್ಲೆ ನಡೆಸಿದೆ. ಅಲ್ಲದೆ ಮನೆ ಖಾಲಿ ಮಾಡಿ, ಊರು ಬಿಡುವಂತೆ ಹಲ್ಲೆಕೋರ ಗುಂಪು ಮುಸ್ಲಿಂ ಕುಟುಂಬಕ್ಕೆ ಧಮ್ಕಿ ಹಾಕಿದೆ.

ಒಂದು ತಿಂಗಳ ಹಿಂದೆಯೇ ಊರು ಬಿಡುವಂತೆ ಈ ಹಲ್ಲೆಕೋರ ಗುಂಪು ಎಚ್ಚರಿಸಿತ್ತು. ಶನಿವಾರದೊಳಗೆ ಮನೆ ಖಾಲಿ ಮಾಡುವಂತೆ ಎಚ್ಚರಿಸಿತ್ತು. ಕುಟುಂಬ ಊರು ಬಿಟ್ಟು ಹೋಗಲಿಲ್ಲವೆಂದು ಶನಿವಾರ ದಾಳಿ ಮಾಡಿರುವ ಹಲ್ಲೆಕೋರರು, `ಜೈಶ್ರೀರಾಮ್‌’ ಎಂದು ಘೋಷಣೆ ಕೂಗಿದ್ದಾರೆ ಎಂದು ದಾಳಿಗೊಳಗಾದ ಕುಟುಂಬ ಆರೋಪಿಸಿದೆ. ಆದರೆ, “ಎರಡು ಗುಂಪುಗಳ ನಡುವೆ ಹಣದ ವಿಚಾರವಾಗಿ ಜಗಳವಾಗಿದೆ. ಎರಡು ಗುಂಪುಗಳಿಂದಲೂ ದೂರುಗಳು ಬಂದಿವೆ” ಎಂದು ಪೊಲೀಸರು ಹೇಳಿದ್ದಾರೆ.

ಈ ಕುಟುಂಬವು ಎರಡು ವರ್ಷಗಳ ಹಿಂದೆ ನೀಮಾರ್‌ನಿಂದ ಕಂಪೇಲ್‌ಗೆ ಬಂದು ನೆಲೆಸಿತ್ತು. ಜೀವನೋಪಾಯಕ್ಕಾಗಿ ಟ್ರಾಲಿಗಳು ಹಾಗೂ ಇತರ ಕೃಷಿ ಉಪಕರಣಗಳನ್ನು ತಯಾರಿಸಿ ಮಾರುತ್ತಿತ್ತು ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಇದನ್ನೂ ಓದಿರಿ: ಮೋರಲ್‌ ಪೊಲೀಸಿಂಗ್‌‌: ಕರಾವಳಿ ಕರ್ನಾಟಕದಲ್ಲಿ ಆಗುತ್ತಿರುವ ನಷ್ಟವೆಷ್ಟು?

ಹಲ್ಲೆಗೊಳಗಾದ 46 ವರ್ಷದ ಫಾರುಕ್‌ ಲೋಹರ್‌ ಅವರ ಪುತ್ರ ಶಾರುಖ್‌ ಲೋಹರ್‌‌ ಅವರು ‘ದಿ ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ಪ್ರತಿಕ್ರಿಯಿಸಿದ್ದು, “ಅವರು ಒಳಗೆ ನುಗ್ಗಿ ರಾಡ್‌ಗಳನ್ನು ಬಳಸಿ ನಮ್ಮನ್ನು ಹೊಡೆಯಲು ಪ್ರಾರಂಭಿಸಿದರು. ಅವರು ನನ್ನ ತಂದೆಯನ್ನು ಪದೇ ಪದೇ ಹೊಡೆಯಲು ಪ್ರಾರಂಭಿಸಿದರು. ನನ್ನ ಚಿಕ್ಕಪ್ಪ ಮಧ್ಯಪ್ರವೇಶಿಸಿದಾಗ ಅವರನ್ನೂ ಹೊಡೆದರು. ‘ನಾವು ನಿಮಗೆ ಖಾಲಿ ಮಾಡುವಂತೆ ಹೇಳಿದ್ದೆವು, ಇಲ್ಲದಿದ್ದರೆ ಭೀಕರ ಪರಿಣಾಮಗಳನ್ನು ಎದುರಿಸಬೇಕೆಂದು ಎಚ್ಚರಿಸಿದ್ದೆವು’ ಎಂಬುದಾಗಿ ಹೇಳಿದರು” ಎಂದು ಶಾರುಖ್‌ ಆರೋಪಿಸಿದ್ದಾರೆ.

ಕುಟುಂಬವನ್ನು ನೋಡಲು ಬಂದಿದ್ದ ಶಾರುಖ್‌ ಅವರ ಸಹೋದರಿ ಫೌಸಿಯಾ ಕೂಡ ಘಟನೆ ವೇಳೆ ಸ್ಥಳದಲ್ಲಿದ್ದು, ಅವರು ಕೂಡ ಪತ್ರಿಕೆಯೊಂದಿಗೆ ಮಾತನಾಡಿದ್ದಾರೆ. “ಕಾರಿನಲ್ಲಿ ಬಂದ ಈ ಜನರ ಕೈಯಲ್ಲಿ ರಾಡುಗಳು ಇದ್ದವು. ಈ ಘಟನೆಯ ಚಿತ್ರೀಕರಣ ಮಾಡಲು ನಾನು ಮೊಬೈಲ್‌ ತೆಗೆದುಕೊಂಡಾಗ ನನ್ನ ಕೈ ಹಿಡಿದು ಎಳೆದು ಮೊಬೈಲ್‌ ಕಿತ್ತುಕೊಂಡು ಪುಡಿಪುಡಿ ಮಾಡಿದರು” ಎಂದು ಆಪಾದಿಸಿದ್ದಾರೆ.

ಸುಮಾರು 25 ನಿಮಿಷಗಳ ಕಾಲ ಘಟನೆ ನಡೆದಿದೆ. ನಂತರ ಕುಟುಂಬವು ಖುಡೆಲ್ ಪೊಲೀಸ್ ಠಾಣೆಗೆ ಧಾವಿಸಿದೆ, ಅಲ್ಲಿಂದ ಅವರನ್ನು ವೈದ್ಯಕೀಯ ಪರೀಕ್ಷೆಗಾಗಿ ಇಂದೋರ್‌ನ ಮಹಾರಾಜ ಯಶವಂತರಾವ್ ಆಸ್ಪತ್ರೆಗೆ ಕಳುಹಿಸಲಾಯಿತು. ನಂತರ ಅವರ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.

“ಕಳೆದ ತಿಂಗಳು ಅದೇ ಯುವಕರು ಬಂದು ಊರು ಬಿಟ್ಟು ಹೋಗುವಂತೆ ನಮಗೆ ಸೂಚಿಸಿದ್ದರು. ನಾವು ನಮ್ಮ ಮನೆಯ ಹತ್ತಿರ ನಿವೇಶನ ಖರೀದಿಸಲಿದ್ದೇವೆ ಎಂದು ಅವರಿಗೆ ತಿಳಿದಿತ್ತು. ಅವರು ಅದನ್ನು ಇಷ್ಟಪಡಲಿಲ್ಲ. ನಾವು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರಿಂದ, ಮನೆಯ ಹತ್ತಿರದಲ್ಲಿ ಒಂದು ನಿವೇಶನ ಖರೀದಿಸಬೇಕೆಂದಿದ್ದೆವು. ಆದರೆ ಅವರ ಬೆದರಿಕೆಯ ನಂತರ, ನಾವು ಭೂ ಒಪ್ಪಂದವನ್ನು ರದ್ದುಗೊಳಿಸಿದೆವು. ಪ್ಲಾಟ್ ಅನ್ನು ಖರೀದಿಸಲಿಲ್ಲ. ಆದರೆ ಸರ್ಪಂಚ್ ಅವರು ಬಂದು -ಆ ಹುಡುಗರು ಕೇವಲ ಬಿಸಿ ರಕ್ತದವರು. ಚಿಂತೆ ಮಾಡಬೇಡಿ- ಎಂದು ಹೇಳಿದ್ದರಿಂದ ನಾವು ಮನೆ ಖಾಲಿ ಮಾಡಲಿಲ್ಲ” ಎಂದು ಶಾರುಖ್ ಹೇಳಿಕೆ ನೀಡಿದ್ದಾರೆ.

ಲೋಹರ್‌ ಕುಟುಂಬದ ದೂರಿನ ಅನ್ವಯ ಖುದೀಲ್‌‌ ಪೊಲೀಸರು 9 ಮಂದಿಯ ಮೇಲೆ ಎಫ್‌ಐಆರ್‌ ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್‌ 323, 506 , 29, 427, 147, 148 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಸಬ್ ಇನ್ಸ್‌ಪೆಕ್ಟರ್ ವಿಶ್ವಜೀತ್ ತೋಮರ್ ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಪ್ರತಿಕ್ರಿಯಿಸಿದ್ದು, “ಲೋಹರ್ ಕುಟುಂಬಕ್ಕೆ ಟ್ರಾಲಿ ನಿರ್ಮಿಸಲು ಇತರ ಗುಂಪಿನಿಂದ ಸ್ವಲ್ಪ ಹಣವನ್ನು ನೀಡಲಾಗಿತ್ತು. ಆದರೆ ಅವರು ಟ್ರಾಲಿಯನ್ನು ತಯಾರಿಸಲಿಲ್ಲ ಅಥವಾ ಹಣವನ್ನು ಹಿಂದಿರುಗಿಸಲಿಲ್ಲ, ಅದು ಘಟನೆಯನ್ನು ಪ್ರಚೋದಿಸಿದಂತೆ ತೋರುತ್ತದೆ. ಎರಡು ಗುಂಪುಗಳು ಜಗಳವಾಡಿಕೊಂಡಿವೆ. ಹಳ್ಳಿಯ ಬಳಿ ವಾಸಿಸುತ್ತಿರುವ ವಿಕಾಸ್ ಪಟೇಲ್ ದೂರಿನ ಆಧಾರದ ಮೇಲೆ ಪ್ರತಿದೂರು ದಾಖಲಿಸಲಾಗಿದೆ” ಎಂದಿದ್ದಾರೆ.

“ಈ ಹಲ್ಲೆಕೋರರು ಆರ್‌ಎಸ್‌ಎಸ್‌ಗೆ ಸೇರಿದವರು ಮತ್ತು ಒಂದು ತಿಂಗಳ ಹಿಂದೆ ಗ್ರಾಮವನ್ನು ತೊರೆಯುವಂತೆ ಬೆದರಿಕೆ ಹಾಕಿದ್ದಾರೆ” ಎಂದು ಕುಟುಂಬದ ಆರೋಪದ ಬಗ್ಗೆ ಕೇಳಿದಾಗ ಇನ್‌ಸ್ಪೆಕ್ಟರ್‌ ತೋಮರ, “ಅಂತಹ ಯಾವುದೇ ಮಾಹಿತಿ ನಮಗೆ ದೊರೆತ್ತಿಲ್ಲ. ಎಫ್‌ಐಆರ್ ನೋಂದಾಯಿಸುವಾಗ ಈ ಮಾಹಿತಿಯನ್ನು ನಮಗೆ ನೀಡಲಾಗಿಲ್ಲ. ನಮಗೆ ಅದರ ಅರಿವಿಲ್ಲ” ಎಂದಿದ್ದಾರೆ.

ಇದನ್ನೂ ಓದಿರಿ: ಮುಸ್ಲಿಂ ಮತಗಳು ಬೇಕಾಗಿಲ್ಲ; ಅದಕ್ಕಾಗಿ ಅವರ ಬಳಿ ಹೋಗುವುದಿಲ್ಲ: ಅಸ್ಸಾಂ ಸಿಎಂ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಮುಸ್ಲಿಂ ಕುಟುಂಬದ ಮೇಲೆ ಹಲ್ಲೆ ಮಾಡಿ, ಅವರನ್ನು ಊರು ಬಿಡುವಂತೆ ಬೆದರಿಕೆ ಹಾಕಿರುವ ಈ ದುರ್ಘಟನೆ ಖಂಡನಾರ್ಹ.

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...