ಸುಬ್ಬಯ್ಯನವರ ದನಿ ಮುಳುಗಿಹೋಗಿದೆ. ಸದ್ಯದ ದೇಶದ ಸ್ಥಿತಿ ಗಮನಿಸಿದರೆ, ಅಂತಹ ದನಿಯೊಂದು ಮತ್ತೆ ಕೇಳಲಾರದೇನೋ ಅನ್ನಿಸುತ್ತೆ. ಸುಬ್ಬಯ್ಯ ಅಂತಿಮವಾಗಿ ತಮ್ಮ ದನಿ ನಿಲ್ಲುವವರೆಗೂ ಆತ್ಮಸಾಕ್ಷಿಗನುಗುಣವಾಗಿ ಬದುಕಿದವರು, ಮಾತಾಡಿದವರು. ಶಿವಮೊಗ್ಗದ ವಕೀಲರಾದ ಶ್ರೀಪಾಲ್ ಮತ್ತು ದಲಿತ ಸಂಘದ ಲೀಡರ್ ಗುರುಮೂರ್ತಿ ಜೊತೆಯಲ್ಲಿ ಸುಬ್ಬಯ್ಯನವರನ್ನ ಅವರ ಗ್ರಾಮವಾದ ಹುದಿಕೇರಿಯಲ್ಲಿ ನೋಡಲು ಹೊರಟಾಗ, ಸುಬ್ಬಯ್ಯನವರ ಸಾಹಸಗಳು ಮನಸ್ಸನ್ನು ಮುತ್ತಿದವು. ಎಂಭತ್ತನೆ ಇಸವಿಯ ಕರ್ನಾಟಕದ ರಾಜಕಾರಣ ಕ್ಷೋಭೆಗೆ ತುತ್ತಾಗಿತ್ತು. ಕರ್ನಾಟಕದ ಸ್ವಾಭಿಮಾನವನ್ನೇ ಕೆಣಕುವಂತೆ ಇಂದಿರಾಗಾಂಧಿ ಗುಂಡೂರಾಯರನ್ನ ಕರ್ನಾಟಕದ ಮೇಲೆ ಹೇರಿದ್ದರು. ಗುಂರನ್ನು ಪೂರ್ಣ ಅರ್ಥಮಾಡಿಕೊಂಡಿದ್ದ ಸುಬ್ಬಯ್ಯ, ಗುಂರ ಆಳ್ವಿಕೆಯನ್ನೇ ಒಂದು ಸವಾಲಾಗಿ ತೆಗೆದುಕೊಂಡು ಹೋರಾಡತೊಡಗಿದ್ದರು. ವಾಸ್ತವವಾಗಿ ಮುಂದೆ ಅಧಿಕಾರಕ್ಕೆ ಬರಲಿದ್ದ ಜನತಾ ಪಕ್ಷದ ಅಧ್ಯಕ್ಷರಾಗಿದ್ದ ದೇವೇಗೌಡರು ಹಿನ್ನೆಲೆಗೆ ಸರಿದಿದ್ದರು. ಅರಸು ಟೀಕಾಕಾರರಾಗಿದ್ದ ಅವರು ಗುಂಡೂರಾಯರ ಆಡಳಿತವನ್ನು ಒಳಗೊಳಗೇ ಮೆಚ್ಚಿ ಹೊಳೆನರಸೀಪುರಕ್ಕೆ ಮುಖ್ಯಮಂತ್ರಿ ಕರೆದು ಗಾಡಿಯಲ್ಲಿ ಕೂರಿಸಿ ಮೆರವಣಿಗೆ ಮಾಡಿದ್ದರು. ಇದರಿಂದ ಗುಂಡೂರಾಯರನ್ನು ಟೀಕಿಸುವ ನೈತಿಕತೆ ಕಳೆದುಕೊಂಡಿದ್ದರು. ಆದ್ದರಿಂದ ಸುಬ್ಬಯ್ಯನವರೇ ಗುಂಡೂರಾಯರನ್ನ ನೇರವಾಗಿ ಎದುರಿಸಿ, ಒಂದು ರೀತಿಯ ಸಮರವನ್ನೇ ಸಾರಿದ್ದರು. ಇದರ ಪರಿಣಾಮ ಒಮ್ಮೆ ಸದನದಲ್ಲಿ ಕೈಕೈ ಮಿಲಾವಣೆಯ ಹಂತವೂ ನಡೆಯುವುದರಲ್ಲಿತ್ತು.
ಗುಂಡೂರಾಯರ ಸಂಪುಟದಲ್ಲಿದ್ದ ಸಿ.ಎಂ.ಇಬ್ರಾಹಿಂ ಕಟ್ಟಿದ್ದ ರೋಲೆಕ್ಸ್ ಗಡಿಯಾರದ ವಿಷಯ ಒಂದು ಹಗರಣದ ರೂಪ ಪಡೆದುಕೊಂಡಿತು. ಅಷ್ಟೊಂದು ಮುಖ್ಯವಲ್ಲದ ಸಂಗತಿ ಬೃಹದಾಕಾರ ತಾಳಲು ಕಾರಣವೆಂದರೆ ಈ ನಾಡಿನಲ್ಲಿ ಇಬ್ರಾಹಿಂ ಬಗ್ಗೆ ಅಸಮಾಧಾನ ಭುಗಿಲೆದ್ದಿತ್ತು. ಮೊನ್ನೆಮೊನ್ನೆಯವರೆಗೂ ಕಾಂಗ್ರೆಸ್ಸು, ಅರಸು ಮತ್ತು ಇಂದಿರಾಗಾಂಧಿಯನ್ನ ಅವಾಚ್ಯ ಶಬ್ದಗಳಿಂದಲೇ ನಿಂದಿಸುತ್ತಾ, ಜನತಾ ಪಾರ್ಟಿಯ ಜನರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದ ಇಬ್ರಾಹಿಂ, ಬೆಳಗಾಗುವುದರಲ್ಲಿ ಕಾಂಗ್ರೆಸ್ ಸೇರಿ, ಗುಂ ಸಂಪುಟದಲ್ಲಿ ಸಚಿವರಾಗಿದ್ದರು. ವಿಚಿತ್ರವೆಂದರೆ ಇಂತದೇ ಕೆಲಸ ಮಾಡಿದ ವೀರೇಂದ್ರ ಪಾಟೀಲರ ಬಗ್ಗೆ ಈ ನಾಡು ಸುಮ್ಮನಿತ್ತು. ಆದರೆ ಇಬ್ರಾಹಿಂ ಬಗೆಗಿನ ಚಳವಳಿಗಳು ಭುಗಿಲೆದ್ದಾಗ ಅವರ ರಾಜೀನಾಮೆ ಪಡೆಯಲಾಯ್ತು. ಇದು ಆ ಸಂದರ್ಭದ ಬಿಜೆಪಿ ಅಧ್ಯಕ್ಷರಾಗಿದ್ದ ಸುಬ್ಬಯ್ಯನವರ ಗೆಲುವಾಗಿತ್ತು.
ಆನಂತರ ಅವರ ಹೋರಾಟ ಗುಂ ವಿರುದ್ಧ. ಅವರು ಸೋಮವಾರಪೇಟೆಯಲ್ಲಿ ಜೀವಿಜಯನ ಎದುರು ಸೋಲುವವರೆಗೂ ನಡೆಯಿತು. ಅದು ಮೊದಲಬಾರಿಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡ ಕಾಲ. ತಳಮಟ್ಟದವರೆಗೂ ಆ ಪಾರ್ಟಿಯನ್ನು ಬೇರುಬಿಡಿಸಿದ್ದ ಅರಸು ಇಲ್ಲವಾಗಿದ್ದರು. ಈ ನಾಡಿನ ತುಂಬ ರೈತ ಚಳವಳಿ, ಭಾಷಾ ಚಳವಳಿ, ಕಳ್ಳಬಟ್ಟಿ ದುರಂತ, ವೀನಸ್ ಸರ್ಕಸ್ ನೋಡಲು ಹೋಗಿದ್ದ ಮಕ್ಕಳು ಬೆಂಕಿಗೆ ಆಹುತಿಯಾದ ದುರಂತ, ಶೇಷಗಿರಿಯಪ್ಪನ ಕೊಲೆ ಇವೆಲ್ಲಾ ಸೇರಿ ಗುಂಡೂರಾಯರ ಸರಕಾರ ಸೋಲಬೇಕಾಯ್ತು. ಬಹುಮತ ಪಡೆಯದ ಜನತಾ ಪಾರ್ಟಿ ಅಧಿಕಾರದ ಗದ್ದುಗೆ ಸಮೀಪವಿದ್ದಾಗ ಧುತ್ತನೆ ರಾಮಕೃಷ್ಣ ಹೆಗಡೆ ಉದ್ಭವಿಸಿದರು. ಅಷ್ಟಲ್ಲದೆ ಅವರು ತಮ್ಮ ಸರಕಾರ ರಚನೆಗೆ ಬೆಂಬಲ ಕೋರಿ ವಾಜಪೇಯಿಯನ್ನ ಸಂಪರ್ಕಿಸಿದರು. ವಾಜಪೇಯಿ ಹಿಂದುಮುಂದು ನೋಡದೆ ಬೆಂಬಲ ಘೋಷಣೆ ಮಾಡಿದರು.
ಕರ್ನಾಟಕದಲ್ಲಿ ಸುಬ್ಬಯ್ಯನವರ ಹೋರಾಟದ ಫಲವಾಗಿ ಭಾರತೀಯ ಜನತಾಪಾರ್ಟಿ ಹದಿನೆಂಟು ಸೀಟು ಗೆದ್ದಿತ್ತು. ಇಂತಹ ಸಾಹಸದ ರೂವಾರಿಯಾದ ಸುಬ್ಬಯ್ಯನವರನ್ನು ಒಂದು ಮಾತೂ ಕೇಳದೆ ವಾಜಪೇಯಿ ರಾಮಕೃಷ್ಣ ಹೆಗಡೆಗೆ ಬೆಂಬಲ ಘೋಷಿಸಿದ್ದು ಸುಬ್ಬಯ್ಯ ಕೆರಳುವಂತೆ ಮಾಡಿತು. ಅವರು ರಾಮಕೃಷ್ಣ ಹೆಗಡೆಯವರನ್ನು ಒಪ್ಪಲಿಲ್ಲ. ಕರ್ನಾಟಕದಲ್ಲಿ ನಡೆದ ಚುನಾವಣೆಯಲ್ಲಿ ಶ್ರಮಹಾಕಿದ ದೇವೇಗೌಡ, ಬಂಗಾರಪ್ಪ ಅಥವಾ ಇನ್ನಾರಾದರೂ ಮುಖ್ಯಮಂತ್ರಿಯಾಗಬಹುದಿತ್ತು ಎಂಬುದು ಸುಬ್ಬಯ್ಯನವರ ಅಭಿಪ್ರಾಯವಾಗಿತ್ತು. ಇದು ರಾಮಕೃಷ್ಣ ಹೆಗಡೆ ಸುಬ್ಬಯ್ಯನವರ ಮೇಲೆ ಕಣ್ಣಿಡುವಂತೆ ಮಾಡಿತು. ಆದ್ದರಿಂದ ಬಿ.ಜೆ.ಪಿಯೂ ಮೆಚ್ಚುವಂತ ಮುಖ್ಯಮಂತ್ರಿಯಾಗಿದ್ದ ಹೆಗಡೆ ಕುತಂತ್ರದಿಂದ ಸುಬ್ಬಯ್ಯನವರನ್ನು ಬಿಜೆಪಿ ಪಾರ್ಟಿಯಿಂದ ಉಚ್ಚಾಟಿಸಲಾಯಿತು.
ಜನತಾ ಪಕ್ಷದಿಂದ ಮತೀಯ ರಾಜಕಾರಣದ ಅಜೆಂಡಾವನ್ನೇ ಹಿಡಿದು ಹೊರಬಿದ್ದು ಭಾರತೀಯ ಜನತಾ ಪಾರ್ಟಿ ಎಂಬ ಹೆಸರಿನೊಂದಿಗೆ ಉದ್ಘಾಟನೆಗೊಂಡ ಬಿಜೆಪಿಯ ಮೊದಲ ಅಧ್ಯಕ್ಷ ಎ.ಕೆ ಸುಬ್ಬಯ್ಯನವರಾಗಿದ್ದರು. ಅವರ ಹೋರಾಟದ ಫಲವಾಗಿ ಬಿಜೆಪಿ ಕರ್ನಾಟಕದಲ್ಲಿ ನೆಲೆ ಕಂಡುಕೊಂಡಿತ್ತು. ಆದರೂ ಬಿಜೆಪಿಯ ರಾಜಕೀಯ ನಡೆಯನ್ನು ಕಟುವಾಗಿ ಟೀಕಿಸಿದ್ದಕ್ಕೆ ಅವರನ್ನು ಉಚ್ಚಾಟಿಸಲಾಯ್ತು. ತಮ್ಮ ನ್ಯಾಯನಿಷ್ಠುರ ನಡವಳಿಕೆ ವಿಷಯದಲ್ಲಿ ಎಂದೂ ರಾಜಿಯಾಗದ ಸುಬ್ಬಯ್ಯನವರು ಬಿಜೆಪಿಯ ಬೇರುಗಳಾದ ಆರೆಸೆಸ್ಸಿನ ಅಂತರಂಗವನ್ನು ಯಾವ ಮುಲಾಜೂ ಇಲ್ಲದೆ ಅನಾವರಣ ಮಾಡಿ “ಆರೆಸೆಸ್ಸ್ ಅಂತರಂಗ” ಪುಸ್ತಕ ಬರೆದರು. ಅದರ ವಿರುದ್ಧ ಚೆಡ್ಡಿಗಳು ಉಸಿರೆತ್ತಲಿಲ್ಲ. ಹಿಂದಿನಿಂದಲೂ ಸುಬ್ಬಯ್ಯನವರ ಟೀಕೆ ಗುಂಡು ಹೊಡೆದಂತಿತ್ತು. ಅವರಿಂದ ಟೀಕಿಸಿಕೊಂಡವರು ಮರುಮಾತನಾಡುತ್ತಿರಲಿಲ್ಲ. ಏಕೆಂದರೆ ಸಾಕ್ಷ್ಯಾಧಾರಗಳು ಸುಬ್ಬಯ್ಯನವರ ಬಳಿ ಇರುತ್ತಿದ್ದವು.
ನಂತರ ಯಾವ ಪಾರ್ಟಿಗೂ ಒಗ್ಗದಿದ್ದ ಈ ನಿಷ್ಠುರವಾದಿ ಅಂದು ಗೋಕಾಕ್ ಚಳವಳಿಯ ಕಾರಣಕ್ಕೆ ಜನಪ್ರಿಯತೆಯ ಉತ್ತುಂಗದಲ್ಲಿದ್ದ ಡಾ. ರಾಜ್‍ಕುಮಾರ್ ಅವರು ರಾಜಕಾರಣಕ್ಕೆ ಬಂದರೆ ನಾನು ಕುದುರೆಯಾಗಿ, ಅವರು ಸವಾರರಾದರೇ ಕನ್ನಡನಾಡು ಪಕ್ಷವನ್ನು ಮುನ್ನಡೆಸಬಹುದು ಎಂಬ ಆಹ್ವಾನವಿತ್ತರು. ಅದಕ್ಕೆ ರಾಜ್‍ಕುಮಾರ್ ಸಮ್ಮತಿಸಲಿಲ್ಲ. ಆ ಸಮಯದಲ್ಲೇ ಬೆಂಗಳೂರಲ್ಲಿ ರಾಜ್ ಅಭಿಮಾನಿ ಸಂಘದವರು ದಾಂಧಲೆ ನಡೆಸುತ್ತಿದ್ದರು. ಅವರನ್ನ ನೇರವಾಗಿ ಟೀಕಿಸಿದ ಸುಬ್ಬಯ್ಯನವರು ಜೇನುಗೂಡಿಗೆ ಕಲ್ಲು ಬೀಸಿದ್ದರು. ಆದರೂ ತಮ್ಮ ಪ್ರಖರ ಮಾತು ಮತ್ತು ಸಕಾರಣ ಕೊಟ್ಟು ಸಮರ್ಥಿಸಿಕೊಂಡಿದ್ದ ಈ ಕೊಡಗಿನ ವೀರನಿಗೆ ತನ್ನ ಹೋರಾಟದ ಅವಧಿಯಲ್ಲಿ ಯಾರ ಭಯವೂ ಇರಲಿಲ್ಲ. ಬಿಜೆಪಿ ಅಧ್ಯಕ್ಷರಾಗಿ ಹೋರಾಡುತ್ತಿದ್ದವರು ಕಡೆಗೆ ಏಕಾಂಗಿಯಾಗಿ ಅದೇ ಹೋರಾಟ ಮಾಡಿದರು.
ಲಂಕೇಶರು ಪತ್ರಿಕೆ ಮುಖಾಂತರ ಮಾಡುತ್ತಿದ್ದ ಕೆಲಸವನ್ನು ಸುಬ್ಬಯ್ಯ ತಮ್ಮ ಹರಿತವಾದ ನಾಲಿಗೆ ಮುಖಾಂತರ ಮಾಡುತ್ತಿದ್ದರು. ಕೆಂಗಲ್ ಹನುಮಂತಯ್ಯ, ನಿಜಲಿಂಗಪ್ಪ ಮುಖ್ಯಮಂತ್ರಿಯಾಗಿದ್ದಾಗ ಶಾಂತವೇರಿ ಗೋಪಾಲಗೌಡರಿಗೆ ಹೆದರುತ್ತಿದ್ದಂತೆ, ಗುಂಡೂರಾಯರು ಮತ್ತು ರಾಮಕೃಷ್ಣ ಹೆಗಡೆ ಸದನದಲ್ಲಿ ಸುಬ್ಬಯ್ಯನನ್ನ ಎದುರಿಸಲಾರದೆ ತತ್ತರಿಸುತ್ತಿದ್ದರು. ಆಗ ಸದನದ ಗ್ಯಾಲರಿ ತುಂಬಿರುತ್ತಿತ್ತು. ಇಂತಹ ಸುಬ್ಬಯ್ಯ ಅದಾಗಲೇ ಕೆಟ್ಟು ಹೋಗುತ್ತಿದ್ದ ಯಾವ ಪಾರ್ಟಿಗೂ ಬೇಕಿರಲಿಲ್ಲ. ತಮ್ಮ ಸಾರ್ವಜನಿಕ ನಡವಳಿಕೆಯಲ್ಲಿ ಪಾರದರ್ಶಕತೆ ಕಾಪಾಡಿಕೊಂಡಿದ್ದ ಸುಬ್ಬಯ್ಯ, ಚಿಕ್ಕಮಗಳೂರು ಉಪಚುನಾವಣೆಯಲ್ಲಿ ಇಂದಿರಾಗಾಂಧಿ ಸ್ಪರ್ಧಿಸಿದಾಗ ಸಾರ್ವಜನಿಕರಿಂದ ವಂತಿಗೆ ಪಡೆದು ಚುನಾವಣೆ ಮುಗಿದನಂತರ ಖರ್ಚುವೆಚ್ಚ ಕಳೆದು ಉಳಿದ ಎಂಬತ್ತೈದು ಸಾವಿರವನ್ನ ಅಂದಿನ ಜನತಾಪಕ್ಷದ ಅಧ್ಯಕ್ಷರಾದ ದೇವೇಗೌಡರಿಗೆ ಕೊಟ್ಟರು. ದೇವರಾಜ ಅರಸು ಕೊಡಲು ಬಂದ ಸೂಟ್‍ಕೇಸನ್ನ ನಿರಾಕರಿಸಿದೆ ಎಂದು ಹೇಳುವ ದೇವೇಗೌಡರು ಸುಬ್ಬಯ್ಯ ಕೊಟ್ಟ ಕಾಣಿಕೆ ವಿಷಯದಲ್ಲಿ ಈವರೆಗೆ ಬಾಯಿಬಿಟ್ಟಿಲ್ಲ. ತಮ್ಮ ಒಡನಾಟಕ್ಕೆ ಬಂದ ಎಲ್ಲಾ ರಾಜಕಾರಣಿಗಳ ಯೋಗ್ಯತೆಯನ್ನ ಅಳೆದುಸುರಿದು ಜಾಡಿಸುತ್ತಿದ್ದ ಸುಬ್ಬಯ್ಯನವರು ಎಲ್ಲರಿಗೂ ಅಪಥ್ಯವಾಗಿದ್ದರು. ಒಂದಿಷ್ಟು ರಾಜಿಯಾಗಿದ್ದರೂ ಸಾಕು ಇಂದಿನ ಯಾವ ಪಾರ್ಟಿಯಲ್ಲಾದರೂ ಇರಬಹುದಿತ್ತು.
ಸುಬ್ಬಯ್ಯನವರು ರಿಸ್ಕ್ ತೆಗೆದುಕೊಳ್ಳುವ ರಾಜಕಾರಣಿಯಾದ್ದರಿಂದ ಸದನದ ಒಳಗೆ ಮಾಡುವ ಕೆಲಸವನ್ನೆ ಹೊರಗೂ ಪ್ರಾರಂಭಿಸಿದ್ದರು. ಆದ್ದರಿಂದ ಅದಾಗ ಕಣ್ಣುಬಿಡುತ್ತಿದ್ದ ಬಿಎಸ್‍ಪಿ ಎಂಬ ಪಾರ್ಟಿಯಲ್ಲಿ ಹಲವು ಬಾಲಗ್ರಹದಂತ ಕಾಯಿಲೆಗಳಿರುವುದು ಗೋಚರಿಸಿ ಅಲ್ಲಿಂದಲೂ ನಿರ್ಗಮಿಸಿದರು. ಲಂಕೇಶ್ ಪತ್ರಿಕೆ ಆಗ ಸುಬ್ಬಯ್ಯನವರ ಪರ ನಿಂತಿತು. ಆ ನಂತರ ಅವರು ಕಾಂಗ್ರೆಸ್ ಸೇರಿದಾಗ ಲಂಕೇಶ್ ಇದೊಂದು ಮನಕರಗಿಸುವ ಸಂಗತಿ ಎಂದು ಬರೆದರು. ಈ ವಿಷಯವಾಗಿ ಸುಬ್ಬಯ್ಯನವರು ಸಮಜಾಯಿಷಿ ನೀಡಿದರು. ಅವಾಗಲೇ ಕಾಂಗ್ರೆಸ್ ಸೇರಿದ್ದ ವೀರೇಂದ್ರ ಪಾಟೀಲರು ಸುಬ್ಬಯ್ಯನವರನ್ನ ಹೆಗಡೆ ವಿರುದ್ಧ ಮಾತನಾಡಲು ಉತ್ತೇಜಿಸಿದ್ದರು. ಆಗೊಮ್ಮೆ ದೇವೇಗೌಡರು ಸುಬ್ಬಯ್ಯನ ಪರ ಇದ್ದರು. ಆದರೆ ಸುಬ್ಬಯ್ಯನವರಿಗೆ ದೇವೇಗೌಡರ ಬಗ್ಗೆ ಅನುಮಾನಗಳಿದ್ದವು. ಮುಂದೆ ದೇವೇಗೌಡರು ಸಿದ್ಧರಾಮಯ್ಯನನ್ನು ಪಾರ್ಟಿಯಿಂದ ಹೊರಹಾಕಿದಾಗ ದಳದ ಲೀಡರುಗಳೆಲ್ಲಾ ಸೇರಿ ದೇವೇಗೌಡನನ್ನ ಹೊರಗಾಕಿದರೆ ದಳವನ್ನ ಉಳಿಸಿಕೊಳ್ಳಬಹುದೆಂಬ” ಸಲಹೆ ಕೊಟ್ಟರು.
ಸುಬ್ಬಯ್ಯ ಪ್ರಬುದ್ಧ ರಾಜಕಾರಣಿ. ಆದ್ದರಿಂದ ಅವರ ಹೋರಾಟ ರಾಜಕೀಯವಾದುದೇ ಹೊರತು, ವೈಯಕ್ತಿಕ ದ್ವೇಷದಿಂದ ಕೂಡಿರಲಿಲ್ಲ. ಇದಕ್ಕೆ ಸ್ಪಷ್ಟ ಉದಾಹರಣೆ ಕೊಡುವುದಾದರೆ ನಾವೆಲ್ಲಾ ಹುದಿಕೇರಿಗೆ ಹೋದಾಗ ಅಲ್ಲಿಗೆ ಸಿಎಂ ಇಬ್ರಾಹಿಂ ಬಂದರು. ಯಾರ ವಿರುದ್ಧ ರಾಜಕೀಯ ಇತಿಶ್ರೀಯಾಗುವಂತಹ ಹೋರಾಟ ಮಾಡಿದ್ದರೊ, ಅಂತಹ ಇಬ್ರಾಹಿಂ ಕಾಣಿಸಿಕೊಂಡಾಗ ನಮಗೆ ಸುಬ್ಬಯ್ಯನವರ ಹೋರಾಟದ ಮನಸ್ಸು ಅರ್ಥವಾಯ್ತು. ಆ ನಂತರ ಎಲ್ಲರಿಂದಲೂ ದೂರವಾದಂತಿದ್ದ ವಿಶ್ವನಾಥ್ ಬಂದರು. ಇಂತವರ ಬಂಧುಗಳಂತಿದ್ದ ಯು.ಟಿ.ಖಾದರ್ ವಿಶ್ವನಾಥ್‍ರನ್ನ ಮಾತನಾಡಿಸಿ ಬರಮಾಡಿಕೊಂಡರು. ಸುಬ್ಬಯ್ಯನವರನ್ನು ಮೈಸೂರಲ್ಲೇ ನೋಡಲು ತಯಾರಾಗಿದ್ದ ದೇವನೂರು “ಅವರಾಗಲೇ ಹೋಗಿಯಾಯ್ತು” ಎಂಬ ವಿಷಯ ಕೇಳಿ ಹಿಂದೆಯೇ ಓಡಿಬಂದಿದ್ದರು. ಆ ನಂತರ ರಮೇಶ್ ಕುಮಾರ್ ಬಂದರು. ಇದನ್ನ ಗ್ರಹಿಸಿದ್ದವರಂತೆ ವಿಶ್ವನಾಥ್ ಹೊರಟುಹೋಗಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಕೊಡಗಿನ ಬಡ ಆದಿವಾಸಿಗಳು ಅಲ್ಲಿ ನೆರೆದಿದ್ದರು. ಕಣ್ಣೀರು ಹಾಕಿದರು. ಅಂತೂ ಸುಬ್ಬಯ್ಯನನ್ನ ಪ್ರಾಮಾಣಿಕವಾಗಿ ಮೆಚ್ಚಿದ ಮನಸ್ಸುಗಳು ಮಳೆಯಲ್ಲೂ ಅವರು ಸಮಾಧಿಗೊಳ್ಳುವ ಜಾಗದವರೆಗೂ ನಡೆದರು. ಸುಬ್ಬಯ್ಯನವರ ಮರ್ಮಾಘಾತದ ಟೀಕೆಗೆ ಹೆದರಿದ್ದ ಬಿಜೆಪಿಗಳು ಅವರು ತೀರಿಕೊಂಡ ನಂತರ ಹತ್ತಿರ ಸುಳಿಯಲಿಲ್ಲ. ಸ್ಥಳೀಯ ಶಾಸಕ ಬೋಪಯ್ಯ ಹಿಂಗೆ ಬಂದಂತೆ ಮಾಡಿ, ಹೆಚ್ಚು ಹೊತ್ತು ನಿಲ್ಲದೇ ಹೋಗಿಬಿಟ್ಟರು. ಇದೊಂದು ರೀತಿ ಒಳ್ಳೆಯದೇ ಆಯ್ತು. ಯಾವುದೇ ಸಭೆ ಸಮಾರಂಭಕ್ಕೆ ಈ ಬಿಜೆಪಿಗಳು ಬಂದರೆ, ಅಲ್ಲೊಂದು ರೀತಿಯ ಅಸಹನೆ ವಾತಾವರಣ ಉಂಟಾಗುತ್ತದೆ. ಅವುಗಳು, ಅವುಗಳ ಸಭೆಗೆ ಸರಿಹೋಗುತ್ತವೆ. ಮಾನವತಾ ವಾತಾವರಣದ ಸಭೆಗೆ ಅದು ಸರಿಹೋಗುವುದಿಲ್ಲ. ಇದು ಅವಕ್ಕೂ ಗೊತ್ತಿರುವುದು ಸಮಾಧಾನದ ಸಂಗತಿ. ಅಂತೂ ನಮ್ಮೆಲ್ಲರ ಸುಬ್ಬಯ್ಯ ನಿರ್ಗಮಿಸಿದ್ದಾರೆ. ಬರಲಿರುವ ದಿನಗಳಲ್ಲಿ ಸುಬ್ಬಯ್ಯನಂತವರು ಮೂಡಿಬರುವುದು ಕಷ್ಟ.


