ಗುಮ್ಲಾ (ಜಾರ್ಖಂಡ್): ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ನಿಷೇಧಿತ ಮಾವೋವಾದಿ ಸಂಘಟನೆಯಿಂದ ಚದುರಿದ ಸಂಘಟನೆಯಾದ ಪೀಪಲ್ಸ್ ಲಿಬರೇಷನ್ ಫ್ರಂಟ್ ಆಫ್ ಇಂಡಿಯಾ (PLFI) ದ ಕಮಾಂಡರ್ ಹತನಾಗಿದ್ದಾನೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಈ ಮಾವೋವಾದಿಯ ತಲೆಗೆ ₹15 ಲಕ್ಷ ಬಹುಮಾನ ಘೋಷಿಸಲಾಗಿತ್ತು.
ಮಾವೋವಾದಿಗಳು ಮತ್ತು ಭದ್ರತಾ ಪಡೆಗಳ ನಡುವೆ ಮಂಗಳವಾರ ರಾತ್ರಿ 9.30ರ ಸುಮಾರಿಗೆ ಕಾಮ್ದಾರಾ ಪೊಲೀಸ್ ಠಾಣಾ ವ್ಯಾಪ್ತಿಯ ಚಂಗಾಬಡಿ ಉಪರ್ತೋಲಿ ಪ್ರದೇಶದಲ್ಲಿ ಗುಂಡಿನ ಚಕಮಕಿ ನಡೆದಿದೆ. ಈ ಪ್ರದೇಶದಲ್ಲಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಭದ್ರತಾ ಪಡೆಗಳು ಚಂಗಾಬಡಿ ಉಪರ್ತೋಲಿಗೆ ತಲುಪಿದಾಗ, ಮಾವೋವಾದಿಗಳು ಗುಂಡು ಹಾರಿಸಲು ಪ್ರಾರಂಭಿಸಿದರು. ಭದ್ರತಾ ಸಿಬ್ಬಂದಿಯೂ ತಿರುಗೇಟು ನೀಡಿದ್ದು, ಈ ವೇಳೆ PLFI ಕಮಾಂಡರ್ ಮಾರ್ಟಿನ್ ಕೆರ್ಕೆಟ್ಟಾ ಹತನಾದನು. ಆತನಿಂದ ಒಂದು ಆಯುಧವನ್ನು ವಶಪಡಿಸಿಕೊಳ್ಳಲಾಗಿದೆ” ಎಂದು ಗುಮ್ಲಾ ಪೊಲೀಸ್ ಅಧೀಕ್ಷಕ (SP) ಹರೀಶ್ ಬಿನ್ ಜಮಾನ್ ಪಿಟಿಐಗೆ ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ ಕೆಲವು ಮಾವೋವಾದಿಗಳ ಇರುವಿಕೆಯ ಬಗ್ಗೆ ಮಾಹಿತಿ ಸಿಕ್ಕಿತ್ತು. ಅದರಂತೆ, ಕಾರ್ಯಾಚರಣೆ ನಡೆಸಲು ವಿಶೇಷ ತಂಡವನ್ನು ರಚಿಸಲಾಗಿತ್ತು ಎಂದು ಗುಮ್ಲಾ ಎಸ್‌ಪಿ ಹೇಳಿದ್ದಾರೆ. ಶೋಧ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ಎಂದು ಎಸ್‌ಪಿ ತಿಳಿಸಿದ್ದಾರೆ.
ತರ್ನ್ ತಾರನ್ ನಕಲಿ ಎನ್‌ಕೌಂಟರ್‌ಗೆ 32 ವರ್ಷ: ಐವರು ಮಾಜಿ ಪೊಲೀಸ್ ಅಧಿಕಾರಿಗಳಿಗೆ ಜೀವಾವಧಿ ಶಿಕ್ಷೆ


