Homeಮುಖಪುಟಗುಂಪು ಹಲ್ಲೆ ಸರಣಿ ಮುಂದುವರಿಕೆ - ‘ಲವ್‌ ಜಿಹಾದ್‌’ ಆರೋಪದಲ್ಲಿ ಅಪ್ರಾಪ್ತ ಹಿಂದೂ ಬಾಲಕನಿಗೆ ಥಳಿತ

ಗುಂಪು ಹಲ್ಲೆ ಸರಣಿ ಮುಂದುವರಿಕೆ – ‘ಲವ್‌ ಜಿಹಾದ್‌’ ಆರೋಪದಲ್ಲಿ ಅಪ್ರಾಪ್ತ ಹಿಂದೂ ಬಾಲಕನಿಗೆ ಥಳಿತ

- Advertisement -
- Advertisement -

ದೇಶದಲ್ಲಿ ಗುಂಪು ಹಲ್ಲೆಗಳ ಸರಣಿ ಮುಂದುವರೆದಿದೆ. ಮಧ್ಯಪ್ರದೇಶದ ದೇವಾಸ್‌‌ನಲ್ಲಿ 16 ವರ್ಷ ಹಿಂದೂ ಬಾಲಕನನ್ನು ಮುಸ್ಲಿಂ ಎಂದು ಭಾವಿಸಿ ಗುಂಪೊಂದು ಅಮಾನುಷವಾಗಿ ಹಲ್ಲೆ ನಡೆಸಿದೆ. ಪೊಲೀಸರು ಬಾಲಕನನ್ನು ಹಲ್ಲೆ ನಡೆಸದಂತೆ ತಡೆಯುತ್ತಿದ್ದರೂ ದುಷ್ಕರ್ಮಿಗಳು ಅದನ್ನೂ ಮೀರಿ ಹಲ್ಲೆ ನಡೆಸಿದ್ದಾರೆ.

ಅಪ್ರಾಪ್ತ ವಯಸ್ಸಿನ ಬಾಲಕ ತನ್ನ ಗೆಳತಿಯೊಂದಿಗೆ ಉತ್ತರ ಪ್ರದೇಶದಿಂದ ಹೊರಟಿದ್ದರು. ಆದರೆ ಮಧ್ಯಪ್ರದೇಶದಲ್ಲಿ ದುಷ್ಕರ್ಮಿಗಳು, ಲವ್‌ ಜಿಹಾದ್‌ ಆರೋಪ ಹೊರೆಸಿ ಬಾಲಕನ ಮೇಲೆ ಪೊಲೀಸರ ಸಮ್ಮುಖದಲ್ಲೇ ಕ್ರೂರವಾಗಿ ಥಳಿಸಿದ್ದಾರೆ. ಘಟನೆಯ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ದೇವಾಸ್ ಜಿಲ್ಲಾ ಕೇಂದ್ರದಿಂದ ಸುಮಾರು 17 ಕಿಮೀ ದೂರದಲ್ಲಿರುವ ದೇವಾಸ್-ಭೋಪಾಲ್ ರಸ್ತೆಯಲ್ಲಿನ ಬೌಂರಸಾ ಟೋಲ್‌‌ನಲ್ಲಿ ನಾಲ್ಕು ದಿನಗಳ ಹಿಂದೆ ಈ ಘಟನೆ ನಡೆದಿದೆ.

ಇದನ್ನೂ ಓದಿ: 5 ಕೆಜಿ ಗೋಧಿ ಕದ್ದ ಆರೋಪ: ಉತ್ತರಪ್ರದೇಶದ 9 ವರ್ಷದ ಬಾಲಕನನ್ನು ಮರಕ್ಕೆ ಕಟ್ಟಿ ಥಳಿತ

“12 ವರ್ಷದ ಹಿಂದೂ ಹುಡುಗಿಯನ್ನು ತನ್ನೊಂದಿಗೆ ಕರೆದುಕೊಂಡು ಹೋಗುತ್ತಿದ್ದ 16 ವರ್ಷದ ಹಿಂದೂ ಬಾಲಕನನ್ನು ಆರೋಪಿಗಳು ಮುಸ್ಲಿಂ ಎಂದು ಭಾವಿಸಿದ್ದರು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಆದ್ದರಿಂದ ಅವರು ಬಾಲಕನನ್ನು ಥಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಇದುವರೆಗೂ ಯಾರನ್ನೂ ಬಂಧಿಸಲಾಗಿಲ್ಲ. ಹುಡುಗಿ ಮತ್ತು ಹುಡುಗ ಇಬ್ಬರೂ ಉತ್ತರ ಪ್ರದೇಶದ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ” ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

“ಹಲ್ಲೆ ಮಾಡಿದವರು ಇದು ಲವ್ ಜಿಹಾದ್ ಪ್ರಕರಣ ಎಂದು ಭಾವಿಸಿದ್ದಾರೆ. ಇಬ್ಬರೂ ಹಿಂದೂ ಸಮುದಾಯದವರು ಎಂದು ನಾವು ಅವರಿಗೆ ನಿರಂತರವಾಗಿ ಹೇಳುತ್ತಿದ್ದೆವು. ಆದರೆ ಅವರು ನಮ್ಮ ಮಾತನ್ನು ಕೇಳಲಿಲ್ಲ, ಬಾಲಕನಿಗೆ ಹಲ್ಲೆ ನಡೆಸುತ್ತಲೇ ಇದ್ದರು. ಈ ಘಟನೆ ನಾಲ್ಕು ದಿನಗಳ ಹಿಂದೆ ನಡೆದಿದ್ದು, ನಾವು ಆತನನ್ನು ರಕ್ಷಿಸದಿದ್ದರೆ, ಆತ ಸಾವಿಗೀಡಾಗುತ್ತಿದ್ದ” ಎಂದು ಹೆಸರು ಹೇಳಲು ಇಚ್ಚಿಸದ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ಜನತಾಕಾ ರಿಪೋರ್ಟರ್‌ ವರದಿ ಮಾಡಿದೆ.

ಇದನ್ನೂ ಓದಿ: ತೆಲಂಗಾಣ: ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಮಾಡಿದ ನಕಲಿ ಸಾಧು; ಸಾರ್ವಜನಿಕರಿಂದ ಥಳಿತ!

ಉತ್ತರ ಪ್ರದೇಶದ ಬಲಿಯಾದಿಂದ ತಪ್ಪಿಸಿಕೊಂಡು ಬಂದಿದ್ದ ಈ ಅಪ್ರಾಪ್ತ ಹುಡುಗ ಮತ್ತು ಹುಡುಗಿಯ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಸೊಂಕಾಚ್ ಉಪ-ವಿಭಾಗೀಯ ಪೊಲೀಸ್ ಪ್ರಶಾಂತ್ ಸಿಂಗ್ ಸೆಂಗಾರ್ ಹೇಳಿದ್ದಾರೆ. ಇಬ್ಬರನ್ನು ಪೋಲಿಸ್ ಕಸ್ಟಡಿಗೆ ತೆಗೆದುಕೊಳ್ಳಲು ಸ್ಥಳೀಯ ಪೋಲಿಸರಿಗೆ ಕೇಳಲಾಗಿದ್ದರಿಂದ, ಪೊಲೀಸ್ ತಂಡವು ಬೌಂರಸಾ ಟೋಲ್‌ ಗೇಟ್‌ನಲ್ಲಿ ಬಸ್‌ಗಳನ್ನು ನಿಲ್ಲಿಸಿ ಪರಿಶೀಲನೆ ನಡೆಸಿಸುತ್ತಿದ್ದರು.

ಉತ್ತರ ಪ್ರದೇಶದಿಂದ ಅಹಮದಾಬಾದ್‌‌ಗೆ ಹೋಗುವ ಬಸ್ ತಪಾಸಣೆಯ ವೇಳೆ ಈ ಇಬ್ಬರು ಅಪ್ರಾಪ್ತರು ಪತ್ತೆಯಾಗಿದ್ದಾರೆ ಎಂದು ಸೆಂಗಾರ್ ಹೇಳಿದ್ದಾರೆ. ಬಾಲಕನನ್ನು ಬಸ್ಸಿನಿಂದ ಇಳಿಸುತ್ತಿದ್ದಂತೆ, ಕಾರಿನಲ್ಲಿದ್ದ ಗುಂಪೊಂದು ಪೊಲೀಸರ ಸಮ್ಮುಖದಲ್ಲೆ ಬಾಲಕನ ಮೇಲೆ ಹಲ್ಲೆ ನಡೆಸಲು ಪ್ರಾರಂಭಿಸಿದೆ. ಗುಂಪಿನಿಂದ ಬಾಲಕನನ್ನು ರಕ್ಷಿಸಿದ ಪೊಲೀಸ್ ತಂಡವು ಪೊಲೀಸ್ ಠಾಣೆಗೆ ಕಳುಹಿಸಿದೆ ಎಂದು ಅವರು ಹೇಳಿದ್ದಾರೆ. ಅದೇ ಸಮಯದಲ್ಲಿ, ಹುಡುಗಿಯನ್ನು ಮಹಿಳಾ ಪೊಲೀಸ್ ಠಾಣೆಗೆ ಕಳುಹಿಸಲಾಗಿದೆ.

ಬಾಲಕನು ಆರೋಪಿಯಿಂದ ಹಲ್ಲೆ ಮಾಡಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ ಎಂದು ಸೆಂಗಾರ್ ಹೇಳಿದ್ದಾರೆ. ವೈರಲ್ ಆದ ವಿಡಿಯೋ ಆಧಾರದ ಮೇಲೆ, ಬೌಂರಸಾ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 353, 147, 323 ಮತ್ತು 294 ರ ಅಡಿಯಲ್ಲಿ ನಾಲ್ವರು ಆರೋಪಿಗಳ ಸಹಿತ 15 ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದುವರೆಗೂ ಯಾವುದೇ ಆರೋಪಿಯನ್ನು ಬಂಧಿಸಲಾಗಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಕೊರೊನಾ ಸಮಯದಲ್ಲಿ ಅಯೋಧ್ಯೆ ಕಾರ್ಯಕ್ರಮ ಬೇಕೆ?; ಬಂಗಾಳಿ ವಿದ್ಯಾರ್ಥಿಗೆ ಥಳಿತ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...