ಒಬ್ಬ ತಾಯಿ ಮಾತ್ರ ಮಾಡಲು ಸಾಧ್ಯವಾದ ಕೆಲಸ, ಅವರಿಗೊಂದು ಸೆಲ್ಯೂಟ್ ಇರಲಿ ಎಂದು ಮೆಚ್ಚುಗೆಗೆ ಪಾತ್ರವಾದ ಸಿಸಿಟಿವಿ ವಿಡಿಯೋವೊಂದು ಯೂಟ್ಯೂಬ್ ನಲ್ಲಿ ವೈರಲ್ ಆಗಿದೆ. ನಾಲ್ಕನೇ ಮಹಡಿ ಬಾಲ್ಕನಿಯಲ್ಲಿ ಆಟವಾಡಲು ಹೋಗಿ ಆಯ ತಪ್ಪಿ ಬೀಳುತ್ತಿದ್ದ ಮಗುವಿನ ಕಾಲನ್ನು ಅರ್ಧ ಸೆಕೆಂಡ್ ನಲ್ಲಿ ಒಂದೇ ಕೈ ಹಿಡಿದು ರಕ್ಷಿಸಿದ ವಿಡಿಯೋ ನೋಡಿದರೆ ಮೈ ಝಂ ಎನ್ನುವಂತಿದೆ. ಅದೃಷ್ಟವಶಾತ್ ಮಗುವಿಗೆ ಯಾವುದೇ ಗಾಯಗಳಾಗಿಲ್ಲದೇ ಸುರಕ್ಷಿತವಾಗಿರುವ ಆಕಸ್ಮಿಕ ಘಟನೆ ಕೊಲಂಬಿಯಾದಲ್ಲಿ ನಡೆದಿದೆ.
ವಿಡಿಯೋ ನೋಡಿ
ಕಳೆದ ಬುಧವಾರ ಕೊಲಂಬಿಯಾದ ಮೆಡೆಲಿನ್ ನಲ್ಲಿ ತಾಯಿ ಮಗು ಲಿಫ್ಟ್ ನಲ್ಲಿ ನಾಲ್ಕನೇ ಮಹಡಿ ತಲುಪಿ ಲಿಫ್ಟ್ ನಿಂದ ಹೊರಬಂದಿದ್ದಾರೆ. ನಂತರ ಆ ತಾಯಿ ಮೊಬೈಲ್‍ನಲ್ಲಿ ಏನನ್ನೋ ನೋಡುತ್ತಿದ್ದಾಗ ಮಗು ಬಾಲ್ಕನಿ ಕಡೆಗೆ ಧಾವಿಸಿದೆ. ಆದರೆ ಬಾಲ್ಕನಿಯ ನಾಲ್ಕೈದು ಸರಳುಗಳು ಕಿತ್ತುಹೋಗಿದ್ದನ್ನು ಗಮನಿಸದ ಮಗು ಅದನ್ನು ಹಿಡಿದುಕೊಳ್ಳಲು ಹೋಗಿ ಏನು ಸಿಗದಿದ್ದಾಗ ಆಯ ತಪ್ಪಿದೆ ಬಿದ್ದಿದೆ. ಅದನ್ನು ಗಮನಿಸದ ತಾಯಿ ಕ್ಷಣಾರ್ಧದಲ್ಲಿ ಅತ್ತ ಧಾವಿಸಿ ಎಡಗೈನಿಂದ ಬೀಳುತ್ತಿದ್ದ ಮಗುವಿನ ಕಾಲೋಂದನ್ನು ಹಿಡಿದುಕೊಂಡಿದ್ದಾರೆ. ನಂತರ ತಮ್ಮ ಬಲಗೈನಲ್ಲಿದ್ದ ಮೊಬೈಲ್ ಕೆಳಗಿಟ್ಟು ಎರಡೂ ಕೈಯಿಂದ ಮಗುವನ್ನು ಎತ್ತಲು ಪ್ರಯತ್ನಿಸುವಾಗ ಕೆಲವರು ಸಹಾಯಕ್ಕೆ ಬಂದು ಮಗು ಮೇಲತ್ತಿದ್ದಾರೆ.
ಸಿಸಿಟಿವಿಯಲ್ಲಿ ದಾಖಲಾಗಿರುವ ಈ ವಿಡಿಯೋ ವನ್ನು ಯೂಟ್ಯೂಬ್ ಗೆ ಅಪ್‍ಲೋಡ್ ಮಾಡಿದ ಒಂದೇ ದಿನದಲ್ಲಿ ಲಕ್ಷಾಂತರ ನೋಡುಗರನ್ನು ಸೆಳೆದು ಅಬ್ಬಾ ಅನಿಸಿದೆ. ಸಾವಿರಾರು ಜನರು ಇದನ್ನು ಷೇರ್ ಮಾಡಿಕೊಂಡಿದ್ದಾರೆ. ಈ ನಡುವೆ ಆ ತಾಯಿಗೆ ಬಹಳಷ್ಟು ಜನ ಮೆಚ್ಚುಗೆಯನ್ನು ತಿಳಿಸಿದ್ದಾರೆ. ಇನ್ನು ಕೆಲವರು ಆ ಕಟ್ಟಡದ ಮಾಲೀಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಾಲ್ಕನಿಯಲ್ಲಿ ಸರಳುಗಳಿಲ್ಲದೇ ಬಿಟ್ಟಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ. ತದನಂತರ ಆ ತಪ್ಪನ್ನು ತಿದ್ದಿಕೊಂಡು ಅಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ದಿ ಡೈಲಿ ಮೇಲ್ ಉಲ್ಲೇಖಿಸಿದೆ.


