Homeಮುಖಪುಟನಿರಂಕುಶಾಧಿಕಾರ ಎಂಬ ತೋಳ ಮತ್ತು ಕುರಿಮರಿಗಳಂತಿರುವ ಸಾಮಾನ್ಯರು: ಎ ನಾರಾಯಣ

ನಿರಂಕುಶಾಧಿಕಾರ ಎಂಬ ತೋಳ ಮತ್ತು ಕುರಿಮರಿಗಳಂತಿರುವ ಸಾಮಾನ್ಯರು: ಎ ನಾರಾಯಣ

ಸಂವಿಧಾನ ಸೃಷ್ಟಿಸಿದ ಎಲ್ಲಾ ಸಂಸ್ಥೆಗಳು ತಮ್ಮ ಅಣತಿಯಂತೆ ನಡೆದುಕೊಳ್ಳುತ್ತಿರುವಾಗ, ಸಂವಿಧಾನವನ್ನು ಬಗಲಿಗೆ ಕಟ್ಟಿಕೊಂಡೇ ಮಾಡುವುದನ್ನೆಲ್ಲಾ ಮಾಡಬಹುದು ಎನ್ನುವುದು ಅಧಿಕಾರ ದುರ್ಬಳಕೆಯ ರೌದ್ರನಾಟಕದ ಹೊಸ ಅಧ್ಯಾಯ. ಕ್ರೌರ್ಯ ಮತ್ತು ನಯವಂಚನೆಯ ಭಯಾನಕ ಮಿಶ್ರಣ ಇದು.

- Advertisement -
- Advertisement -

ಆಳುವವರ ಅನ್ಯಾಯಗಳನ್ನು ಪ್ರಶ್ನಿಸಿದವರೆಲ್ಲಾ ಹೀಗೆ ಗೊತ್ತುಗುರಿ ಇಲ್ಲದೆ ಜೈಲು ಪಾಲಾಗುತ್ತಿರುವುದನ್ನು ನೋಡುತಿದ್ದರೆ ಸಣ್ಣ ತರಗತಿಯಲ್ಲಿ ಓದಿದ ಈಸೋಪನ ಕತೆಯೊಂದು ನೆನಪಾಗುತ್ತದೆ.

ಬಹುಮಂದಿಗೆ ಗೊತ್ತಿರಬಹುದಾದ ಈ ಕತೆಯಲ್ಲಿ ಹರಿಯುತ್ತಿರುವ ತೊರೆಯೊಂದರ ಬಳಿ ತೋಳವೊಂದು ಕುರಿಮರಿಯನ್ನು ಅಡ್ಡಗಟ್ಟಿ ಕೊಲ್ಲುವುದಾಗಿ ಬೆದರಿಕೆ ಹಾಕುತ್ತದೆ. ‘ನೀನು ನನಗೆ ದ್ರೋಹವೆಸಗಿದ್ದೀ ಅದಕ್ಕೆ ನಿನ್ನನ್ನು ಕೊಲ್ಲುತಿದ್ದೇನೆ’ ಎನ್ನುತ್ತದೆ ತೋಳ. ಆಗ ಕುರಿಮರಿಯು ‘ನಾನು ನಿನ್ನನ್ನು ನೋಡುತ್ತಿರುವುದು ಇದೇ ಮೊದಲು. ಹಾಗಿರುವಾಗ ನಿನಗೆ ದ್ರೋಹವೆಸಗುವ ಪ್ರಶ್ನೆ ಎಲ್ಲಿ ಬಂತು?’ ಎಂದು ಕೇಳುತ್ತದೆ. ‘ನಾನು ಈ ತೊರೆಯ ಬಳಿ ನೀರು ಕುಡಿಯಲು ಮುಂದಾದಾಗ ನೀನು ನೀರನ್ನು ಕದಡಿರುವೆ. ನಾನು ಕೊಳಕು ನೀರು ಕುಡಿಯುವ ಹಾಗೆ ಮಾಡಿರುವೆ’ ಅಂತ ತೋಳ ಆಪಾದಿಸುತ್ತದೆ. ಕುರಿ ಮರಿ ಹೇಳುತ್ತದೆ: ‘ನೀನು ತೊರೆಯ ಎತ್ತರದ ಭಾಗದಲ್ಲಿ ಇದ್ದಿ. ನಾನು ನಿನಗಿಂತ ಎಷ್ಟೋ ತಗ್ಗಿನ ಸ್ಥಳದಲ್ಲಿದ್ದೇನೆ. ನಾನು ನೀರು ಕದಡಿಸಿದ್ದೇ ಆದರೂ ಅದು ನಿನ್ನತ್ತ ಹೇಗೆ ಬರಲು ಸಾಧ್ಯ? ನೀರು ಕೆಳಗಿನಿಂದ ಮೇಲೆ ಹರಿಯುವುದಿಲ್ಲ ತಾನೇ?’. ಒಂದಿಷ್ಟೂ ವಿಚಲಿತನಾಗದ ತೋಳ, ‘ನನ್ನನ್ನೇ ಪ್ರಶ್ನಿಸಲು, ನನಗೇ ಬುದ್ಧಿ ಹೇಳಲು ನಿನಗೆಷ್ಟು ಪೊಗರು. ನೀನಲ್ಲದಿದ್ದರೆ, ನಿನ್ನ ಅಪ್ಪನೋ, ನಿನ್ನ ಅಜ್ಜನೋ ನಾನು ಕುಡಿಯುವ ನೀರನ್ನು ಮೇಲೆ ನಿಂತು
ಕದಡಿದ್ದಾರೆ. ಆದ ಕಾರಣ ನಿನಗೆ ಶಿಕ್ಷೆ ಆಗಲೇ ಬೇಕು’ ಅಂತ ವಿತಂಡ ವಾದ ಮಂಡಿಸಿ ಕುರಿಮರಿಯ ಮೇಲೆರಗಿ ಅದನ್ನು ಕೊಲ್ಲುತ್ತದೆ.

ನಿರಂಕುಶಾಧಿಕಾರ (tyranny) ಎನ್ನುವುದು ಯಾವತ್ತೂ ಹೀಗೇ ವರ್ತಿಸುವುದು. ಅದು ತನಗಾಗದವರರು ಎಷ್ಟೇ ನ್ಯಾಯಯುತವಾಗಿ ನಡೆದುಕೊಂಡರೂ ಇಲ್ಲ ಸಲ್ಲದ ಕಾರಣಗಳನ್ನು ನೀಡಿ ಅವರನ್ನು ಹಿಂಸಿಸುತ್ತದೆ. ಸುಳ್ಳು ಅಥವಾ ಆಯ್ದ ಅರೆ-ಸತ್ಯಗಳನ್ನು ಬಳಸಿಕೊಂಡು, ಕಾನೂನುಗಳನ್ನು ಯಾವತ್ತೂ ಬಳಸಿಕೊಂಡೇ ಅನ್ಯಾಯ ಮಾಡುತ್ತದೆ. ಅಧಿಕಾರದ ಕುರಿತಂತೆ ಇವೆಲ್ಲಾ ಸಾರ್ವಕಾಲಿಕ ಸತ್ಯಗಳು. ಆದುದರಿಂದಲೇ ಮೇಲಿನ ಕತೆಯು ಬೇರೆ ಬೇರೆ ರೂಪಗಳಲ್ಲಿ ಬೇರೆ ಬೇರೆ ಪಾತ್ರಗಳನ್ನು ಒಳಗೊಂಡು ಪ್ರಪಂಚದ ಬಹುತೇಕ ದೇಶಗಳ ಲಿಖಿತ-ಅಲಿಖಿತ ಸಾಹಿತ್ಯ ಪರಂಪರೆಗಳಲ್ಲಿ ಕಂಡುಬರುತ್ತಿರುವುದು. ಅನಿಯಂತ್ರಿತ ಅಧಿಕಾರದ ಬಗೆಗಿನ ಕೆಲವು ಸತ್ಯಗಳು ಕಾಲ, ದೇಶ, ಸನ್ನಿವೇಶಗಳನ್ನು ನೋಡಿ ಬದಲಾಗುವುದಿಲ್ಲ. ಅಧಿಕಾರ ಅತಿಯಾದಾಗ ಅದು ವರ್ತಿಸುವ ರೀತಿ ಅನಾಗರಿಕ ಪ್ರಾಣಿ ಪ್ರಪಂಚದಲ್ಲೂ ಒಂದೇ, ಮುಕ್ಕೋಟಿ ದೇವಾನುದೇವತೆಗಳನ್ನೂ, ಅದಕ್ಕಿಂತ ನೂರ್ಮಡಿ ಹೆಚ್ಚು ಸಂಖ್ಯೆಯ ಧರ್ಮಗ್ರಂಥಗಳನ್ನೂ ಹೊಂದಿರುವ ಸನಾತನ ಭೂಮಿಯಲ್ಲೂ ಒಂದೇ.

ಮಾನವಕೋಟಿ ಪ್ರಜಾಸತ್ತೆ ಎನ್ನುವ ಒಂದು ವ್ಯವಸ್ಥೆಯನ್ನು ಆವಿಷ್ಕರಿಸಿಕೊಂಡದ್ದು ನಿರಂಕುಶಾಧಿಕಾರ ಎಂಬ ತೋಳದಿಂದ ಕುರಿಮರಿಗಳಂತಿರುವ ಸಾಮಾನ್ಯ ಪ್ರಜೆಗಳನ್ನು ರಕ್ಷಿಸುವುದಕ್ಕೋಸ್ಕರ. ಪ್ರಜಾಸತ್ತೆಯಲ್ಲಿ ಒಂದು ಸಂವಿಧಾನ, ಒಂದು ಶಾಸಕಾಂಗ, ಒಂದು ನ್ಯಾಯಾಂಗ, ಒಂದು ಮಾಧ್ಯಮಾಂಗ ಅಂತೆಲ್ಲಾ ಇರುವುದು ಅಧಿಕಾರಸ್ಥರ ತೋಳ-ನೀತಿ ಮತ್ತು ತೋಳ-ಪ್ರವೃತ್ತಿಗಳ ಮೇಲೆ ಒಂದು ನಿಗಾ ಇರಿಸುವುದಕ್ಕೋಸ್ಕರ. ಆದರೇನು ಮಾಡುವುದು, ಪ್ರಜಾಸತ್ತೆ ಇದ್ದರೂ ಕೆಲವು ದೇಶಗಳಲ್ಲಿ, ಕೆಲ ಕಾಲಘಟ್ಟಗಳಲ್ಲಿ ಈ ಶಾಸಕಾಂಗ, ನ್ಯಾಯಾಂಗ, ಮಾಧ್ಯಮಾಂಗಗಳೆಲ್ಲಾ ಅಧಿಕಾರವೆಂಬ ತೋಳದ ಹಲ್ಲುಗಳಾಗಿಯೋ, ಉಗುರುಗಳಾಗಿಯೋ, ಬಾಲಗಳಾಗಿಯೋ ಕೆಲಸ ಮಾಡುತ್ತವೆ. ಸಂವಿಧಾನ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ಸ್ಥಿತಿ ಬರುತ್ತದೆ.

ಇದನ್ನೂ ಓದಿ: ಅಜೀವಪರ್ಯಂತ ಮಾನವಹಕ್ಕುಗಳ ಹೋರಾಟಗಾರ ರೋಣ ವಿಲ್ಸನ್

ಹಿಂದಿನ ಕಾಲದಲ್ಲಿ ಪ್ರಜಾತಂತ್ರ ವ್ಯವಸ್ಥೆಯೊಳಗೆ ಅಧಿಕಾರವನ್ನು ಬೇಕಾಬಿಟ್ಟಿ ಬಳಸಬೇಕು ಎಂದು ಅಧಿಕಾರಸ್ಥರಿಗೆ ತೋರಿದರೆ ಸಂವಿಧಾನವನ್ನು ಅಮಾನತ್ತಿನಲ್ಲಿಟ್ಟು ತುರ್ತುಪರಿಸ್ಥಿತಿ ಘೋಷಿಸುವ ಪದ್ಧತಿಯಾದರೂ ಇತ್ತು. ಈ ಕಾಲದ ನಿರಂಕುಶ ನಾಯಕತ್ವಕ್ಕೆ ಆ ಅಗತ್ಯವೂ ಕಾಣುತ್ತಿಲ್ಲ. ಸಂವಿಧಾನ ಸೃಷ್ಟಿಸಿದ ಎಲ್ಲಾ ಸಂಸ್ಥೆಗಳು ತಮ್ಮ ಅಣತಿಯಂತೆ ನಡೆದುಕೊಳ್ಳುತ್ತಿರುವಾಗ, ಸಂವಿಧಾನವನ್ನು ಬಗಲಿಗೆ ಕಟ್ಟಿಕೊಂಡೇ ಮಾಡುವುದನ್ನೆಲ್ಲಾ ಮಾಡಬಹುದು ಎನ್ನುವುದು ಅಧಿಕಾರ ದುರ್ಬಳಕೆಯ ರೌದ್ರನಾಟಕದ ಹೊಸ ಅಧ್ಯಾಯ. ಕ್ರೌರ್ಯ ಮತ್ತು ನಯವಂಚನೆಯ ಭಯಾನಕ ಮಿಶ್ರಣ ಇದು.

ಭಾರತದ ಸಂವಿಧಾನದ ವಿಚಾರದಲ್ಲಿ ಹೇಳುವುದಾದರೆ ವೈಯ್ಯಕ್ತಿಕ ಸ್ವಾತಂತ್ರ‍್ಯದ ಹಕ್ಕನ್ನು ಮತ್ತು ಬದುಕುವ ಹಕ್ಕನ್ನು ಖಾತರಿಗೊಳಿಸುವ ಅದರ 21ನೆಯ ಪರಿಚ್ಛೇದವು ಬೇರೆ ಬೇರೆ ಸಂದರ್ಭಗಳಲ್ಲಿ ನ್ಯಾಯಾಂಗದ ವ್ಯಾಖ್ಯಾನದ ಮೂಲಕ ವಿಸ್ತಾರವಾಗುತ್ತಾ ಅದೆಷ್ಟು ಉದಾರವಾದ ಆಯಾಮ ಪಡೆದಿದೆ ಎಂದರೆ ಅದನ್ನು ತತ್ವಶಃ ಅಳವಡಿಸಿದರೆ ತಪ್ಪು ಮಾಡದ ಯಾರೂ ತಮ್ಮ ವಿರುದ್ಧ ಯಾರೋ ರಾಜಕೀಯ ಅಧಿಕಾರವನ್ನು ದುರ್ಬಳಕೆ ಮಾಡುವ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾದದ್ದೇ ಇಲ್ಲ.

1950ರ ದಶಕದ ಎ.ಕೆ. ಗೋಪಾಲನ್ ಪ್ರಕರಣದಲ್ಲಿ 21ನೆಯ ಪರಿಚ್ಛೇದವನ್ನು ಬಹಳ ಸೀಮಿತ ಅರ್ಥದಲ್ಲಿ ವ್ಯಾಖ್ಯಾನಿಸಿದ್ದ ನ್ಯಾಯಾಂಗ ಮುಂದಿನ ಹಲವಾರು ಪ್ರಕರಣಗಳಲ್ಲಿ ಅಧಿಕಾರ ದುರ್ಬಳಕೆಯ ವಿರುದ್ಧ ಸಾಮಾನ್ಯ ಜನರಿಗೆ ಬಹುದೊಡ್ಡ ರಕ್ಷಣೆ ಒದಗಿಸುವ ರೀತಿಯಲ್ಲಿ ಆ ಪರಿಚ್ಛೇದವನ್ನು ಸಿದ್ಧಗೊಳಿಸಿತ್ತು. ಆದರೇನು ಮಾಡುವುದು, 21ನೇ ಪರಿಚ್ಛೇದವನ್ನು ಹಿಗ್ಗಿಸುವಷ್ಟು ಹಿಗ್ಗಿಸಿ, ವಿಸ್ತರಿಸಬಹುದಾದಷ್ಟು ವಿಸ್ತರಿಸಿ ವ್ಯಕ್ತಿ ಸ್ವಾತಂತ್ರ‍್ಯ ಮತ್ತು ಬದುಕುವ ಹಕ್ಕನ್ನು ಅಧಿಕಾರಸ್ಥರ ಹದ್ದಿನ ಕಣ್ಣುಗಳಿಂದ ರಕ್ಷಿಸಿದ ಅದೇ ನ್ಯಾಯಾಂಗ ಬರಬರುತ್ತಾ ತನ್ನ ತೀರ್ಪುಗಳನ್ನು ತಾನೇ ಧಿಕ್ಕರಿಸುತ್ತಿದೆಯೋ ಎನ್ನುವ ರೀತಿಯಲ್ಲಿ ಈಗ ನಡೆದುಕೊಳ್ಳುತ್ತಿದೆ ಎನ್ನುವ ಸಂಶಯ ಮೂಡುತ್ತಿದೆ. ಆ ಸಂಶಯದಿಂದ ಜನ ಈಗ ಬಹಿರಂಗವಾಗಿ ಆಡಿಕೊಂಡು ನ್ಯಾಯಾಂಗ ನಿಂದನೆಯ ಆಪಾದನೆಯನ್ನು ಮೈಮೇಲೆ ಎಳೆದುಕೊಳ್ಳಬೇಕಾದಷ್ಟು ಪರಿಸ್ಥಿತಿ ಕೆಟ್ಟು ಹೋಗಿದೆ.

ಅಧಿಕಾರಸ್ಥರನ್ನು ಎದುರು ಹಾಕಿಕೊಂಡ ಪ್ರಜ್ಞಾವಂತರನ್ನು ಒಂದಲ್ಲ, ಎರಡಲ್ಲ, ಬಾರಿ ಬಾರಿ ಪೊಲೀಸ್ ವ್ಯವಸ್ಥೆ ವಿನಾ ಕಾರಣ ಬೇಟೆಯಾಡುತ್ತಿದೆ ಎನ್ನುವುದು ಕಾನೂನು ಓದದ ಪಾಮರನಿಗೂ ಸ್ಪಷ್ಟವಾಗಿ ಗೋಚರಿಸುತ್ತಿದ್ದರೆ, ನ್ಯಾಯಾಂಗದ ಕಡೆಯಿಂದ ಇತ್ತೀಚಿಗಿನ ದಿನಗಳಲ್ಲಿ ಒಂದೇ ಒಂದು ಭರವಸೆಯ ತೀರ್ಪು ಬಂದಿದ್ದರೆ ಹೇಳಿ. ಬೇಡ, ಒಂದು ಭರವಸೆಯ ಮಾತು ಕೇಳಿಸಿದ್ದರೆ ಹೇಳಿ. ಅಂತಹ ತುರ್ತುಪರಿಸ್ಥಿತಿಯ ಕಾಲದಲ್ಲೂ ಒಬ್ಬ ನ್ಯಾಯದೀಶ (ಹೆಚ್.ಆರ್. ಖನ್ನಾ) ತನ್ನ ವೃತ್ತಿ ಬದುಕನ್ನೇ ಪಣಕ್ಕಿಟ್ಟು ವ್ಯಕ್ತಿ ಸ್ವಾತಂತ್ರ‍್ಯವನ್ನು ಮತ್ತು ಬದುಕುವ ಹಕ್ಕನ್ನು ಅಧಿಕಾರಸ್ಥರು ಬೇಕಾಬಿಟ್ಟಿ ಕಿತ್ತುಕೊಳ್ಳುವ ಹಾಗಿಲ್ಲ ಅಂತ ತೀರ್ಪು ನೀಡಿದ್ದು ಇತಿಹಾಸ. ಆ ಕಾರಣಕ್ಕಾಗಿ ಮುಖ್ಯನ್ಯಾಯಾಧೀಶರಾಗುವ ಅವಕಾಶದಿಂದ ವಂಚಿತರಾಗಿ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬಂದ ಆ ನ್ಯಾಯಮೂರ್ತಿಯ ಕತೆ ಇದೇ ದೇಶದಲ್ಲಿ ನಡೆದದ್ದು ಎನ್ನುವುದು ಈಗಿನ ಸ್ಥಿತಿ ನೋಡಿದ ನಂತರ ಒಂದು ಮಹಾನ್ ಸೋಜಿಗವಾಗಿ ಕಾಣುತ್ತದೆ. ವಿಧಿವತ್ತಾಗಿ ಅರ್ಜಿ ಸಲ್ಲಿಸದೆ, ನಿಗದಿತವಾದ ಶುಲ್ಕ ತೆರದೆ ‘ಅನ್ಯಾಯವಾಗಿದೆ’ ಅಂತ ಸಾಮಾನ್ಯ ಮನುಷ್ಯ ಬರೆದ ನಾಲ್ಕು ಸಾಲು ಪತ್ರಗಳನ್ನೇ ಹಿಡಿದುಕೊಂಡು ಅಧಿಕಾರಸ್ಥರು ಬೆವರುವಂತಹ ತೀರ್ಪುಗಳನ್ನು ನೀಡುತಿದ್ದ ನ್ಯಾಯಾಂಗ ಈ ದೇಶದಲ್ಲೇ ಇತ್ತು ಎನ್ನುವುದು ಈಗ ಯಾವುದೋ ಅಸ್ಪಷ್ಟ ಕನಸಿನಂತೆ ಭಾಸವಾಗುತ್ತದೆ.

ಪೊಲೀಸರನ್ನು ಛೂಬಿಟ್ಟು, ನ್ಯಾಯಾಂಗಕ್ಕೆ ಅದೇನೋ ಮಂಕುಬೂದಿ ಎರಚಿ, ಮಾಧ್ಯಮಗಳನ್ನು ಖರೀದಿಸಿ, ಬೆದರಿಸಿ ತಮಗಾಗದವರನ್ನು ಕಾನೂನು ಬಾಹಿರವಾಗಿ ಮಟ್ಟಹಾಕುತ್ತಿರುವ ಅಧಿಕಾರಸ್ಥರು ಕೇವಲ ಒಂದಷ್ಟು ವ್ಯಕ್ತಿಗಳನ್ನು ಮಾತ್ರ ಕಾಡುತಿದ್ದಾರೆ. ಅವರ ತಂಟೆಗೆ ಹೋಗದಿದ್ದರೆ ನಮಗೇನೂ ತಕರಾರಿಲ್ಲ ಅಂತ ಭಾವಿಸಿ ಕಣ್ಣು ಮುಚ್ಚಿಕೊಳ್ಳುವ ವಿದ್ಯಾವಂತ ಸಮೂಹ, ಮಧ್ಯಮ ವರ್ಗ ಮತ್ತು ಮಾಧ್ಯಮದ ಮಂದಿ ಒಂದು ವಿಷಯವನ್ನು ತಿಳಿದುಕೊಳ್ಳಬೇಕು. ಒಬ್ಬ ವ್ಯಕ್ತಿಯನ್ನು ವಿನಾ ಕಾರಣ, ಬಂಧಿಸಿ, ಹಿಂಸಿಸಿ, ಕಾರಾಗೃಹದಲ್ಲಿ ಕೊಳೆಯಿಸುವ ಇಡೀ ಪ್ರಕ್ರಿಯೆಯಲ್ಲಿ ಕೇವಲ ಕೆಲವೇ ಕೆಲವು ವ್ಯಕ್ತಿಗಳ ಬದುಕಷ್ಟೇ ಛಿದ್ರವಾಗುವುದಲ್ಲ, ಇಡೀ ಕಾನೂನಾತ್ಮಕ-ಆಡಳಿತ (Rule of Law) ವ್ಯವಸ್ಥೆಯೇ ನಲುಗುತ್ತದೆ.

ಯಾಕೆಂದರೆ ರಾಜಕೀಯ ಅಧಿಕಾರವನ್ನು ದುರ್ಬಳಕೆ ಮಾಡುತ್ತಿರುವ ದುಷ್ಟಕೂಟವು ಯಾವತ್ತೂ ಪೊಲೀಸರನ್ನು, ಅಧಿಕಾರಿಗಳನ್ನು, ಅಭಿಯೋಜಕ (prosecution) ವ್ಯವಸ್ಥೆಯಲ್ಲಿರುವ ನ್ಯಾಯವಾದಿಗಳನ್ನು, ಹೀಗೆ ಯಾರ್ಯಾರು ಕಾನೂನು ರೀತಿ ಕೆಲಸ ಮಾಡಬೇಕೋ ಅವರಿಗೆಲ್ಲಾ ಕಾನೂನನ್ನು ಕಡೆಗಣಿಸಿ ಕೆಲಸ ಮಾಡುವಂತೆ ಪ್ರೇರೇಪಿಸುತ್ತದೆ ಅಥವಾ ಬೆದರಿಕೆಯೊಡ್ಡುತ್ತದೆ. ಹೀಗೆಲ್ಲಾ ಆಗುವಾಗ ಆಡಳಿತ ವ್ಯವಸ್ಥೆ ಒಳಗೊಳಗೇ ಶಿಥಿಲವಾಗುತ್ತಲೂ, ಭ್ರಷ್ಟವಾಗುತ್ತಲೂ, ಕ್ರೂರವಾಗುತ್ತಲೂ ಸಾಗುತ್ತದೆ. ಕಾನೂನನ್ನು ಬಳಸಿಕೊಂಡೇ ಯಾರನ್ನಾದರೂ ಪಳಗಿಸಬಹುದು ಮತ್ತು ಹಾಗೆ ಮಾಡಿಯೂ ಬಚಾವಾಗಬಹುದು ಎನ್ನುವ ಧೈರ್ಯ ಒಮ್ಮೆ ಪೊಲೀಸ್ ವ್ಯವಸ್ಥೆಗೆ ಬಂದುಬಿಟ್ಟರೆ ಅದು ಮನುಷ್ಯರ ರಕ್ತದ ರುಚಿ ಹತ್ತಿದ ಹುಲಿಯಂತೆ. ಅಂತಹ ಪೊಲೀಸ್ ವ್ಯವಸ್ಥೆಯನ್ನು ಹೊಂದಿರುವ ನಾಡಿನಲ್ಲಿ ಯಾರ ಬದುಕೂ ಸುಭದ್ರವಲ್ಲ. ನೆನಪಿರಲಿ..

ಎ ನಾರಾಯಣ 
ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ `ರಾಜಕೀಯ ತತ್ವಶಾಸ್ತ್ರ, ಭಾರತದ ರಾಜಕೀಯ, ಕಾನೂನು ಮತ್ತು ಆಡಳಿತ ಹಾಗೂ ಭಾರತದಲ್ಲಿ ಆಡಳಿತದ ಸವಾಲುಗಳು’ ವಿಷಯವನ್ನು ಬೋಧಿಸುವ ನಾರಾಯಣ ಅವರು ಕನ್ನಡದ ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಪ್ರಚಲಿತ ವಿದ್ಯಮಾನಗಳ ಬಗ್ಗೆ ಲೇಖನಗಳನ್ನು ಬರೆಯುತ್ತಿದ್ದಾರೆ


ಇದನ್ನೂ ಓದಿ: ಬೆಳದಿಂಗಳು ಕತ್ತಲೆಗೆ ಜಾರಿದಾಗ : ಕ್ರಾಂತಿಕಾರಿ ಕವಿ ವರವರ ರಾವ್ ಜೀವನ ಚಿತ್ರಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...