Homeಚಳವಳಿಅಜೀವಪರ್ಯಂತ ಮಾನವಹಕ್ಕುಗಳ ಹೋರಾಟಗಾರ ರೋಣ ವಿಲ್ಸನ್

ಅಜೀವಪರ್ಯಂತ ಮಾನವಹಕ್ಕುಗಳ ಹೋರಾಟಗಾರ ರೋಣ ವಿಲ್ಸನ್

ಭಾರತದಲ್ಲಿ ಆಳುವ ವರ್ಗಗಳು ಹಿಂದುತ್ವದ ಶಕ್ತಿಗಳನ್ನು ಬಲಪಡಿಸುವ ಸಲುವಾಗಿ "ಇಸ್ಲಾಮೋಫೋಬಿಯಾ"ವನ್ನು ಒಂದು ಸಿದ್ಧಾಂತವಾಗಿ ಬಳಸುತ್ತಿದೆ ಎಂದು ಅವರ ಸಂಶೋಧನಾ ಪ್ರಬಂಧವು ಚರ್ಚಿಸುತ್ತದೆ.

- Advertisement -
- Advertisement -

ರೋಣ ವಿಲ್ಸನ್ ಒಬ್ಬ ಸಂಶೋಧನಾ ವಿದ್ವಾಂಸರಾಗಿದ್ದು, ರಾಜಕೀಯ ಕೈದಿಗಳ ಸ್ಥಿತಿಗತಿ ಮತ್ತು ಕಾನೂನುಬಾಹಿರ ಚಟುವಟಿಕೆ ತಡೆ ಕಾಯಿದೆ (ಯುಎಪಿಎ) ಹಾಗೂ ಇತರ ಕರಾಳ ಕಾನೂನುಗಳ ಬಳಕೆಯ ಕುರಿತು ಕೆಲಸ ಮಾಡಿದ್ದಾರೆ. ಮಧ್ಯ ಭಾರತದ ಅಂಚಿಗೆ ಸರಿಸಲ್ಪಟ್ಟ ಶೋಷಿತ ಆದಿವಾಸಿ ಸಮುದಾಯಗಳ ಮೇಲೆ ಸರಕಾರ ಹೂಡಿದ್ದ ಅಪರೇಷನ್ ಗ್ರೀನ್ ಹಂಟ್ ಯುದ್ಧನೀತಿಯ ವಿರುದ್ಧ ಮಾತನಾಡಿದ್ದಕ್ಕಾಗಿ ಬಂಧಿತರಾದ ಪ್ರೊ. ಜಿ.ಎನ್. ಸಾಯಿಬಾಬಾ, ಹೇಮ್ ಮಿಶ್ರಾ ಅವರಂತಹ ರಾಜಕೀಯ ಕೈದಿಗಳ ಪರವಾಗಿ ಅವರು ಸಕ್ರಿಯವಾಗಿ ಆಂದೋಲನ ನಡೆಸಿದ್ದಾರೆ.

ಸಂಸತ್ ಮೇಲಿನ ದಾಳಿ ಪ್ರಕರಣದಲ್ಲಿ ಅನ್ಯಾಯವಾಗಿ ಬಂಧಿತರಾಗಿ, ಚಿತ್ರಹಿಂಸೆ ಮತ್ತು ಅಮಾನವೀಯ ವರ್ತನೆಗೆ ಗುರಿಪಡಿಸಲಾದ ಕಾಶ್ಮೀರಿ ವಿದ್ವಾಂಸ ಮತ್ತು ಪ್ರಾಧ್ಯಾಪಕ ಎಸ್.ಎ.ಆರ್. ಗಿಲಾನಿ ಅವರ ಬಿಡುಗಡೆಗಾಗಿ ನಡೆದ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲುಗೊಂಡಂದಿನಿಂದ ರೋಣ ಅವರಿಗೆ ರಾಜಕೀಯ ಕೈದಿಗಳ ಜೊತೆ ಕೆಲಸ ಮಾಡುವ ಆಸಕ್ತಿ ಹುಟ್ಟಿಕೊಂಡಿತ್ತು. ವಾಸ್ತವವಾಗಿ ಪ್ರೊ. ಗಿಲಾನಿ ಅವರು ಆರೋಪಮುಕ್ತರಾಗಿ ಬಿಡುಗಡೆಯಾದ ಬಳಿಕ ರೋಣ ಮತ್ತು ಪ್ರೊ. ಗಿಲಾನಿ ಇತರ ಸಾಮಾಜಿಕ ಕಾರ್ಯಕರ್ತರ ಜೊತೆಸೇರಿ ’ಕಮಿಟಿ ಫಾರ್ ರಿಲೀಸ್ ಆಫ್ ಪೊಲಿಟಿಕಲ್ ಪ್ರಿಸ್‌ನರ್ಸ್’ (ಸಿಆರ್‌ಪಿಪಿ – ರಾಜಕೀಯ ಕೈದಿಗಳ ಬಿಡುಗಡೆಗಾಗಿ ಸಮಿತಿ) ಎಂಬ ಸಂಘಟನೆಯನ್ನು ರೂಪಿಸಿದ್ದರು.

ರೋಣ ಅವರು ಸಿಆರ್‌ಪಿಪಿಯ ಸಾರ್ವಜನಿಕ ಸಂಪರ್ಕ ಕಾರ್ಯದರ್ಶಿಯಾಗಿದ್ದಾಗ, ಸಿಆರ್‌ಪಿಪಿಯ ಮೂಲಕವೇ ಪ್ರೊ. ಗಿಲಾನಿ ಅವರೊಂದಿಗೆ, ಪ್ರೊ. ಸಾಯಿಬಾಬಾ ಪ್ರಕರಣದದಲ್ಲಿ ಆಸಕ್ತಿವಹಿಸಿ, ಅವರ ಬಿಡುಗಡೆಗಾಗಿ ಹೋರಾಟ ನಡೆಸಿದ್ದರು. ಸಿಆರ್‌ಪಿಪಿಯ ಭಾಗವಾಗಿ ಅವರು ಯುಎಪಿಎ, ರಾಷ್ಟ್ರೀಯ ಭದ್ರತಾ ಕಾಯಿದೆ (ಎನ್‌ಎಸ್‌ಎ), ಆರ್ಮ್‌ಡ್ ಫೋರ್ಸಸ್ ಸ್ಪೆಷಲ್ ಪವರ್ಸ್ ಆಕ್ಟ್ (ಎಎಫ್‌ಎಸ್‌ಪಿಎ – ಸಶಸ್ತ್ರ ಪಡೆಗಳ ವಿಶೇಷ ಅಧಿಕಾರಗಳ ಕಾಯ್ದೆ) ಮತ್ತು ವಿವಿಧ ರಾಜ್ಯ ಮಟ್ಟದ ಸಾರ್ವಜನಿಕ ಭದ್ರತಾ ಕಾಯಿದೆ (ಪಿಎಸ್‌ಎ)ಗಳು ಮುಂತಾದ ಕರಾಳ ಕಾಯಿದೆಗಳ ಅಸಾಂವಿಧಾನಿಕ ಸ್ವರೂಪ, ಮರಣ ದಂಡನೆಯನ್ನು ವಿವೇಚನೆಯಿಲ್ಲದೆ ಬಳಸುವುದರ ವಿರುದ್ಧ ಮತ್ತು ಈ ದೇಶದಲ್ಲಿ ದಲಿತರು ಮತ್ತು ಮುಸ್ಲಿಮರೇ ಅತೀ ಹೆಚ್ಚಿನ ಪ್ರಮಾಣದಲ್ಲಿ ಅದಕ್ಕೆ ಗುರಿಯಾಗುವುದರ ಬಗ್ಗೆ ಅವರು ಹಲವಾರು ಸಮಾವೇಶಗಳನ್ನು ಆಯೋಜಿಸಿದ್ದರು. ವಿಪರ್ಯಾಸವೆಂದರೆ ಅವರು ಈಗ ಅದೇ ಕರಾಳ ಯುಎಪಿಎ ಅಡಿ ರಾಜಕೀಯ ಬಂಧಿಯಾಗಿದ್ದಾರೆ.

ಕೈದಿಗಳ ಕುರಿತ ವಿಶ್ವಸಂಸ್ಥೆಯ ಒಪ್ಪಂದವನ್ನು ಅನುಷ್ಟಾನಗೊಳಿಸಬೇಕು ಎಂದು ಒತ್ತಾಯಿಸಿರುವ ಸಿಆರ್‌ಪಿಪಿ, “ಅನಾನುಕೂಲಕರ ಪರಿಸ್ಥಿತಿಯಲ್ಲಿರುವ; ಅಥವಾ ಮಾಧ್ಯಮಗಳ ಪ್ರಚಾರ, ಪೊಲೀಸ್, ಸೇನೆ ಅಥವಾ ಪ್ರಭುತ್ವದ ನ್ಯಾಯಸಮ್ಮತವಲ್ಲದ ಅಪಪ್ರಚಾರಗಳ ಕಾರಣದಿಂದಾಗಿ ನಿಷ್ಪಕ್ಷಪಾತಿ ವಿಚಾರಣೆ ನಡೆಯದಂತೆ ತಾರತಮ್ಯಕ್ಕೆ ಒಳಗಾಗಿರುವವರಿಗೆ ಕಾನೂನು ನೆರವು ಒದಗಿಸಬೇಕು” ಎಂದು ವಾದಿಸಿದೆ.

ಕೇರಳದ ಕೊಲ್ಲಂನಲ್ಲಿ ಹುಟ್ಟಿದ ರೋಣ, ಪ್ರಾಣಿಶಾಸ್ತ್ರದಲ್ಲಿ ಪದವಿ ಪಡೆಯುವವರೆಗೆ ಅಲ್ಲಿಯೇ ವಾಸಿಸುತ್ತಿದ್ದರು. ನಂತರ ಅವರು ರಾಜಕೀಯ ವಿಜ್ಞಾನ ಮತ್ತು ಅಂತರರಾಷ್ಟ್ರೀಯ ಸಂಬಂಧಗಳು ವಿಷಯದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗಕ್ಕಾಗಿ ಪುದುಚೆರಿಯ ಸೆಂಟಲ್ ಯುನಿವರ್ಸಿಟಿ (ಪಿಸಿಯು)ಗೆ ಹೋದರು. ಅಲ್ಲಿಂದ ದೆಹಲಿಯ ಜವಾಹರಲಾಲ್ ನೆಹರೂ ಯುನಿವರ್ಸಿಟಿ (ಜೆಎನ್‌ಯು)ಗೆ ತೆರಳಿ ಸ್ನಾತಕೋತ್ತರ ಎಂ.ಫಿಲ್ ಪದವಿಯನ್ನು ಗಳಿಸಿದರು. ಫುಟ್ಬಾಲ್ ಪ್ರೇಮಿಯಾದ ಅವರು, ಮುಖ್ಯವಾಗಿ ಲ್ಯಾಟಿನ್ ಅಮೇರಿಕಾ ದೇಶಗಳ ಆಟವನ್ನು ನಿಕಟವಾಗಿ ಅನುಸರಿಸುತ್ತಾರೆ.

ಇದನ್ನೂ ಓದಿ: ನ್ಯಾಯಕ್ಕಾಗಿ ಎದೆಯುಬ್ಬಿಸಿ ನಿಲ್ಲುವ ವರ್ನನ್ ಗೊನ್ಸಾಲ್ವೆಸ್ ಜೈಲಿನಲ್ಲಿ…

ಇತ್ತೀಚೆಗೆ ಅವರನ್ನು ಡಾಕ್ಟರೇಟ್ ಪದವಿಗಾಗಿ ಇಂಗ್ಲೆಂಡ್‌ನ ಸರ್ರ್‍ಏ ಮತ್ತು ಲೀಸೆಸ್ಟರ್ ವಿಶ್ವವಿದ್ಯಾಲಯಗಳು ಸ್ವೀಕರಿಸಿದ್ದವು. ಅವರ ಪ್ರಸ್ತಾಪಿತ ವಿಷಯವು “ದಿ ಫಿಕ್ಷನ್ ಆಫ್ ದಿ ಮುಸ್ಲಿಂ ಅದರ್: ಸ್ಟೇಟ್, ಲಾ ಎಂಡ್ ಪಾಲಿಟಿಕ್ಸ್ ಆಫ್ ನೇಮಿಂಗ್ ಇನ್ ಕಂಟೆಂಪರರಿ ಇಂಡಿಯಾ” (ಅನ್ಯ ಮುಸ್ಲಿಂ ಎಂಬ ಕಟ್ಟುಕತೆ: ಪ್ರಭುತ್ವ, ಕಾನೂನು ಮತ್ತು ಸಮಕಾಲೀನ ಭಾರತದಲ್ಲಿ ಹೆಸರಿಸುವ ರಾಜಕೀಯ”). ಭಾರತದಲ್ಲಿ ಆಳುವ ವರ್ಗಗಳು ಹಿಂದುತ್ವದ ಶಕ್ತಿಗಳನ್ನು ಬಲಪಡಿಸುವ ಸಲುವಾಗಿ “ಇಸ್ಲಾಮೋಫೋಬಿಯಾ”ವನ್ನು ಒಂದು ಸಿದ್ಧಾಂತವಾಗಿ ಬಳಸುತ್ತಿದೆ ಎಂದು ಅವರ ಸಂಶೋಧನಾ ಪ್ರಬಂಧವು ಚರ್ಚಿಸುತ್ತದೆ.

ಮುಸ್ಲಿಂ ಪುರುಷನ್ನು “ಭಯೋತ್ಪಾದಕ”ನಾಗಿ ಪರಿಗಣಿಸುವ ಸಾಮಾಜಿಕ ಪರಿಗ್ರಹಣೆಯ ಕುರಿತು ಅಧ್ಯಯನ ಮಾಡುವ ಕಡೆಗೆ ಅವರ ಒಲವಿತ್ತು. ಕಾನೂನು ಹೇಗೆ ಒಬ್ಬ ಉಗ್ರವಾದಿ ಮುಸ್ಲಿಂ ಪುರುಷನ ಕಥಾನಕ ಕಟ್ಟಲು, ಭಯೋತ್ಪಾದಕ ಪುರುಷತ್ವವಾಗಿ ಬಿಂಬಿಸಿ ನಂತರ ಸೈದ್ಧಾಂತಿಕ ಪ್ರಭುತ್ವ ವ್ಯವಸ್ಥೆ ಅದನ್ನೇ ಬಳಸಿಕೊಂಡು ಬಹುಸಂಖ್ಯಾತ ಜನರಲ್ಲಿ ’ಅನ್ಯ ಮುಸ್ಲಿಂ’ ಎಂಬುದನ್ನು ಪುನರುಚ್ಚರಿಸಿ, ಅದೇ ಹೊತ್ತಿಗೆ, ಮುಸ್ಲಿಂ ಮಹಿಳೆಯರನ್ನು ಭಾರತ ಪ್ರಭುತ್ವದ ರಕ್ಷಣೆ ಅಗತ್ಯವಾಗಿರುವ, ವಿಧೇಯ ದೇಹಗಳಾಗಿ ಬಿಂಬಿಸುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಅವರ ಅಧ್ಯಯನದ ಉದ್ದೇಶವಾಗಿತ್ತು.

ಬಂಧನದ ನಂತರ ರೋಣ ತಮ್ಮ ಡಾಕ್ಟರೆಟ್ ಅಧ್ಯಯನವನ್ನು ಮುಂದುವರಿಸಲು ಸಾಧ್ಯವಾಗುತ್ತಿಲ್ಲ ಮಾತ್ರವಲ್ಲ ಅವರು ಇತರಿಗೆ ಒದಗಿಸುತ್ತಿದ್ದ ಕಾನೂನು ನೆರವನ್ನೂ ಕೂಡ ಕಡಿತಗೊಳಿಸಲಾಗಿದೆ.

ರೋಣ ಅಜೀವಪಯಂತ ಮಾನವಹಕ್ಕುಗಳ ಹೋರಾಟಗಾರ. ಜೈಲಿನ ಪರಿಮಿತಿಯೊಳಗಿಂದಲೇ ಅವರ ಹೋರಾಟ ಮುಂದುವರಿಯುತ್ತದೆ. ಒಬ್ಬ ವ್ಯಕ್ತಿಯನ್ನು ಗುರಿಯಾಗಿಸಿ, ಹಣೆಪಟ್ಟಿ ಹಚ್ಚಿ, ನ್ಯಾಯವನ್ನು ನಿರಾಕರಿಸುವುದೆಂದರೆ ಏನು ಎಂಬುದು ಅವರಿಗೆ ಚೆನ್ನಾಗಿ ತಿಳಿದಿದೆ.

ಕೃಪೆ: ಮುಂಬೈ ರೈಸಸ್ ಟು ಸೇವ್ ಡೆಮಾಕ್ರಸಿ

ಅನುವಾದ: ನಿಖಿಲ್ ಕೋಲ್ಪೆ


ಇದನ್ನೂ ಓದಿ: ವಿದ್ಯಾರ್ಥಿಗಳ ನೆಚ್ಚಿನ, ಜನಪ್ರಿಯ ಪ್ರಾಧ್ಯಾಪಕ ಡಾ. ಹನಿ ಬಾಬು ಬಂಧನದಲ್ಲಿ…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ಶಾಸಕ ಹೆಚ್‌.ಡಿ ರೇವಣ್ಣ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಆರೋಪಕ್ಕೆ ಹೊಂದಿಕೊಂಡಿರುವ ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸಿದ ಬೆನ್ನಲ್ಲೇ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ಪಡೆದಿದೆ. ಲೈಂಗಿಕ ದೌರ್ಜನ್ಯ ಪ್ರಕರಣದ...