Homeನ್ಯಾಯ ಪಥವಿದ್ಯಾರ್ಥಿಗಳ ನೆಚ್ಚಿನ, ಜನಪ್ರಿಯ ಪ್ರಾಧ್ಯಾಪಕ ಡಾ. ಹನಿ ಬಾಬು ಬಂಧನದಲ್ಲಿ...

ವಿದ್ಯಾರ್ಥಿಗಳ ನೆಚ್ಚಿನ, ಜನಪ್ರಿಯ ಪ್ರಾಧ್ಯಾಪಕ ಡಾ. ಹನಿ ಬಾಬು ಬಂಧನದಲ್ಲಿ…

ಅಂಬೇಡ್ಕರ್‌ವಾದದ ಬಹಳ ಆಳವಾದ ಅಭ್ಯಾಸಿಯಾಗಿದ್ದ ಡಾ. ಹನಿ ಬಾಬುರವರು ಎಲ್ಲರಿಗೂ ಸಂವಿಧಾನದ ನಿಜವಾದ ಆಶಯಗಳ ಬಗ್ಗೆ ತಿಳಿದುಕೊಳ್ಳಲು ಪ್ರೇರೇಪಿಸುತ್ತಿದ್ದರು.

- Advertisement -
- Advertisement -

ಕಳೆದ ವರ್ಷ ನನ್ನ ತಂದೆ ನನಗೆ ಕರೆ ಮಾಡಿ “ದೆಹಲಿ ವಿಶ್ವವಿದ್ಯಾಲಯದ ಯಾರೋ ಒಬ್ಬ ಪ್ರೊಫೆಸರ್ ಅವರ ಮನೆ ಮೇಲೆ ಪೊಲೀಸ್ ದಾಳಿ ನಡೆದಿದೆ ಎಂದು ಟಿವಿಗಳಲ್ಲಿ ವರದಿ ಬರುತ್ತಿದೆ” ಎಂದು ಹೇಳಿದರು. ತಕ್ಷಣವೇ ನಾನು “ಡಾ. ಹನಿ ಬಾಬು ಅವರ ಮನೆ ಮೇಲೆಯೇ?” ಎಂದು ಕೇಳಿದೆ. ನನ್ನ ಮನಸ್ಸಿಗೆ ಯಾಕೆ ಹಾಗನ್ನಿಸಿತೆಂದು ಗೊತ್ತಿಲ್ಲ. ಬಹುಶಃ ಡಾ. ಹನಿ ಬಾಬುರವರು ದೆಹಲಿ ವಿಶ್ವವಿದ್ಯಾಲಯದ ಮತ್ತೊಬ್ಬ ಪ್ರೊಫೆಸರ್ ಜಿ.ಎನ್.ಸಾಯಿಬಾಬಾ ಅವರನ್ನು ಪೊಲೀಸರು ಬಂಧಿಸಿದಾಗ ರಚನೆಯಾಗಿದ್ದ ಸಾಯಿಬಾಬಾ ಬೆಂಬಲ ಸಮಿತಿಯ ಅಧ್ಯಕ್ಷರಾಗಿ, ಅತಿ ದೊಡ್ಡ ಅಪಾಯಕಾರಿ ಹೊಣೆಗಾರಿಕೆಯನ್ನು ಹೊತ್ತುಕೊಂಡದ್ದು ಅದಕ್ಕೆ ಕಾರಣವಿರಬಹುದು. (ಜಿ.ಎನ್.ಸಾಯಿಬಾಬಾ ಅವರನ್ನು ಸರ್ಕಾರ ಮಾವೋಯಿಸ್ಟ್ ಪಕ್ಷದ ಜೊತೆ ಸಂಬಂಧ ಹೊಂದಿರುವ ಆರೋಪದ ಮೇಲೆ ಬಂಧಿಸಿತ್ತು ಮತ್ತು 2017ರಲ್ಲಿ ಅವರಿಗೆ ಶಿಕ್ಷೆ ವಿಧಿಸಲಾಯಿತು. ಅವರ ಮೇಲಿನ ಆರೋಪಗಳ ವಿರುದ್ಧ ಸತ್ಯಸಂಗತಿಗಳನ್ನು ಹೊರಜಗತ್ತಿಗೆ ತಿಳಿಸುವ ಮತ್ತು ಜಿ.ಎನ್.ಸಾಯಿಬಾಬಾ ಅವರ ಪ್ರಜಾತಾಂತ್ರಿಕ ಹಕ್ಕುಗಳನ್ನು ರಕ್ಷಿಸುವ ಉದ್ದೇಶದಿಂದ ರಚಿಸಲಾದ ಸಮಿತಿಯ ಅಧ್ಯಕ್ಷತೆಯನ್ನು ಡಾ. ಹನಿ ಬಾಬು ಅವರು ವಹಿಸಿಕೊಂಡಿದ್ದರು. ವಹಿಸಿಕೊಂಡಿದ್ದಷ್ಟೇ ಅಲ್ಲದೆ, ನಿರಂತರವಾಗಿ ಅತ್ಯಂತ ಧೈರ್ಯದಿಂದ ಅವರು ನಡೆಸಿದ ಪ್ರಯತ್ನಗಳ ಫಲವಾಗಿ, ಶೇ.90ರಷ್ಟು ಅಂಗವಿಕಲತೆ ಹೊಂದಿರುವ, ವ್ಹೀಲ್ ಚೇರ್ ಮೇಲೆ ಮಾತ್ರವೇ ಓಡಾಡಲು ಸಾಧ್ಯವಿರುವ, ಪ್ರಖರ ಚಿಂತಕರೂ ಜನಪರ ಬುದ್ಧಿಜೀವಿಯೂ ಆದ ಜಿ.ಎನ್.ಸಾಯಿಬಾಬಾ ಅವರ ಮೇಲಿನ ಪ್ರಭುತ್ವದ ದಾಳಿಯ ಪ್ರಯತ್ನಗಳು ಸಾರ್ವಜನಿಕರಿಗೆ ತಿಳಿಯುವಂತಾಯಿತು).’ ಎಂದು ನೆನಪಿಸಿಕೊಳ್ಳುತ್ತಾರೆ ದೆಹಲಿ ಗಲಭೆಯ ಪ್ರಕರಣದಲ್ಲಿ ವಿಚಾರಣೆಯೆಂಬ ಪ್ರಹಸನದಲ್ಲಿ ದೆಹಲಿ ಪೊಲೀಸರಿಂದ ಸ್ವತಃ ಮಾನಸಿಕ ಹಿಂಸೆಗೆ ಗುರಿಯಾಗಿರುವ ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಅಪೂರ್ವಾನಂದ ಅವರು.


ಇದನ್ನೂ ಓದಿ: ಜನಸಂಕಷ್ಟಕ್ಕೆ ದನಿಯಾದ ಜೀವನಾಡಿಗಳು


‘ನಮ್ಮ ತರಗತಿಗಳಿಗೆ ಹೋಗುವ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಕಿಕ್ಕಿರಿದು ತುಂಬಿರುವ ಹನಿ ಬಾಬು ಅವರ ತರಗತಿಗಳೊಳಗೆ ವಿಶ್ವವಿದ್ಯಾಲಯದ ಕಾರಿಡಾರ್‌ನಿಂದ ಇಣುಕಿ ನೋಡುವ ಮತ್ತು ಅಷ್ಟೆಲ್ಲ ವಿದ್ಯಾರ್ಥಿಗಳನ್ನು ಮಂತ್ರಮುಗ್ಧಗೊಳಿಸುವ ಅವರ ಮಾತುಗಳನ್ನು ಕೇಳುವ ಅವಕಾಶ ಮತ್ತೆಂದು ಸಿಗುವುದೋ ಎಂಬ ನೋವು ಜುಲೈ 28ರಂದು ಹನಿ ಬಾಬು ಅವರ ಬಂಧನವಾದಾಗ ಕಾಡಿತು. ಒಂದಾದ ಮೇಲೊಂದು ತರಗತಿಗೆ ಚುರುಕಿನಿಂದ ಓಡಾಡುವ ಅವರನ್ನು ಆಕಸ್ಮಿಕವಾಗಿ ಕಾರಿಡಾರ್‌ನಲ್ಲಿ ಭೇಟಿಯಾದಾಗ ಕಾಣುವ ಅವರ ನಗುಮುಖವನ್ನು ಸದ್ಯಕ್ಕೆ ಕಾಣುವುದು ಸಾಧ್ಯವಿಲ್ಲವಲ್ಲ ಎನಿಸಿದಾಗ ದಟ್ಟವಾದ ವಿಷಾದದ ಛಾಯೆ ಮನಸ್ಸನ್ನು ಆವರಿಸಿತು.’

ಡಾ. ಅಪೂರ್ವಾನಂದ

‘ಹನಿ ಬಾಬು ಅವರ ಬಂಧನ ನನಗೆ ಅನಿರೀಕ್ಷಿತವಲ್ಲ. ಅವರು ದಲಿತ ಮತ್ತು ಶೋಷಿತ ಸಮುದಾಯದ ಸಂವಿಧಾನಾತ್ಮಕ ಹಕ್ಕುಗಳ ರಕ್ಷಣೆಯ ವಿಷಯಕ್ಕೆ ಹೊಂದಿದ್ದ ಬದ್ಧತೆ ಮತ್ತು ತಮ್ಮ ನಂಬಿಕೆಗೆ ಏನೇ ಅಡ್ಡಿಬಂದರೂ ಅದನ್ನು ಎದುರಿಸುವ ಅವರ ದಿಟ್ಟತನದ ಕಾರಣಕ್ಕೆ ಈಗಿನ ಪ್ರಭುತ್ವಕ್ಕೆ ಅವರು ಅಪಾಯಕಾರಿಯಾಗಿ ಕಾಣುವ ಸಾಧ್ಯತೆಯನ್ನು ಅವರ ಸ್ನೇಹಿತರೂ ಸಹೋದ್ಯೋಗಿಗಳೂ ಆಗಿದ್ದ ನಾವೆಲ್ಲವೂ ಬಹಳ ಹಿಂದೆಯೇ ಊಹಿಸಿದ್ದೆವು. ಆದರೆ, ಅವರ ಮನೆಯ ಮೇಲೆ 2019ರಲ್ಲಿ ಒಮ್ಮೆ ಮತ್ತು ಮೊನ್ನೆ ಆಗಸ್ಟ್ 20ರಂದು ಮತ್ತೊಮ್ಮೆ ದಾಳಿ ಮಾಡಲು, ಹಾಗೆಯೇ ವಿಚಾರಣೆಗೆಂದು ಕರೆದು ಅವರನ್ನು ಮುಂಬೈಯಲ್ಲಿ ಬಂಧಿಸಲು, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನೀಡಿರುವ ಕಾರಣ ನಮಗೆ ಬಹಳ ಆತಂಕಕಾರಿಯಾಗಿ ಕಾಣುತ್ತದೆ. ಎನ್‌ಐಎ ಪ್ರಕಾರ ಹನಿ ಬಾಬು ಅವರ ಬಂಧನಕ್ಕಿರುವ ಪ್ರಬಲವಾದ ಒಂದು ಕಾರಣ ಅವರು ಸರ್ಕಾರದ ವಿರುದ್ಧದ ಮತ್ತು ನಕ್ಸಲೀಯರಿಗೆ ಪರವಾದ ಸಿದ್ಧಾಂತಗಳನ್ನು ಹಬ್ಬಿಸುತ್ತಿದ್ದದ್ದು. ಈ ವಾದವೇ ನನಗೆ ಬಹಳ ವಿಚಿತ್ರವೆನಿಸುತ್ತದೆ. ಮೊದಲನೆಯದಾಗಿ ‘ನಕ್ಸಲೀಯರ ಪರವಾದ ವಾದ’ ಎಂದರೇನೆಂದು ಎನ್‌ಐಎ ಸ್ಪಷ್ಟಪಡಿಸಿಲ್ಲ; ಈ ವ್ಯಾಖ್ಯಾನ ಬಹಳ ಅಸ್ಪಷ್ಟವಾಗಿದೆ. ಸರ್ಕಾರದ ವಿರುದ್ಧದ ಹೋರಾಟದಲ್ಲಿ ತೊಡಗಿರುವ ಯಾರನ್ನು ಬೇಕಾದರೂ ಈ ವ್ಯಾಖ್ಯಾನದ ಕೆಳಗೆ ಬಹಳ ಸುಲಭವಾಗಿ ತಂದುಬಿಡಬಹುದು. ಹಾಗೆಯೇ ಸರ್ಕಾರದ ವಿರುದ್ಧವಾದ ವಿಷಯಗಳನ್ನು ಒಂದು ವೇಳೆ ಹನಿ ಬಾಬು ಅವರು ಎತ್ತುತ್ತಿದ್ದರೆ, ಅದು ಬಂಧನಕ್ಕೆ ಬೇಕಾದ ಕಾರಣ ಹೇಗಾಗುತ್ತದೆ?

‘ರಾಷ್ಟ್ರೀಯ ಸ್ವಯಂಸೇವಕ ಸಂಘ’ದ ಪ್ರಮುಖರು ಮತ್ತು ಪ್ರಭುತ್ವದ ಮುಂದಾಳುಗಳಿಗೆ, ತಾವು ಸುದೀರ್ಘ 30 ವರ್ಷಗಳ ಕಾಲ ಇಲ್ಲಿ ಆಳ್ವಿಕೆಯಲ್ಲಿದ್ದ ಬೇರೆ ಬೇರೆ ಸರ್ಕಾರಗಳಿಗೆ ವಿರುದ್ಧವಾದ ವಿಷಯಗಳನ್ನು ಪ್ರಚಾರಪಡಿಸುತ್ತಾ ಬಂದಿದ್ದೇವೆಂಬುದು ಮತ್ತು ಪ್ರಜಾತಾಂತ್ರಿಕ ಹಕ್ಕುಗಳನ್ನು ಅನುಭವಿಸುತ್ತಿದ್ದಾರೆಂಬುದೂ ಏಕೆ ಮರೆತುಹೋಗುತ್ತದೆ? ಹಾಗೆಯೇ ಎನ್‌ಐಎ ಮಾಡಿರುವ ಮತ್ತೊಂದು ಆರೋಪ, ಹನಿ ಬಾಬು ಅವರ ಮನೆಯಿಂದ ಪಡೆದುಕೊಂಡ ಕಂಪ್ಯೂಟರ್ ಹಾರ್ಡ್ ಡಿಸ್ಕ್‌ನಲ್ಲಿ ಮಾವೋಯಿಸ್ಟರೊಂದಿಗೆ ಸಂಪರ್ಕದ ಸಾಕ್ಷಿಗಳು ಮತ್ತು ಸರಕಾರವನ್ನು ಬುಡಮೇಲು ಮಾಡುವ ಕೃತ್ಯಗಳ ಯೋಜನೆಗಳು ದೊರೆತಿವೆ ಎಂಬುದು. ತಮ್ಮ ಕಂಪ್ಯೂಟರ್‌ನ್ನು ಪ್ರವೇಶಿಸಲು ಪಾಸ್‌ವರ್ಡ್ ಕೂಡಾ ದಾಖಲಿಸದೆ ಬಿಟ್ಟಿದ್ದ ಪ್ರೊಫೆಸರ್ ಒಬ್ಬರ ಡೆಸ್ಕ್ಟಾಪ್ ಮೇಲೆ ಅವರು ರೂಪಿಸುತ್ತಿದ್ದ ‘ಅತ್ಯಂತ ಅಪಾಯಕಾರಿ ವಿಧ್ವಂಸಕಾರಿ ಯೋಜನೆ’ಯ ನೀಲನಕ್ಷೆ ಇತ್ತು ಎಂದು ನಾವು ನಂಬಬೇಕೆಂದು ಎನ್‌ಐಎ ಬಯಸುತ್ತದೆ. ನೇರವಾಗಿಯೇ ಈ ಚಿಂತಕರನ್ನು ಸಿಲುಕಿಸುವ ಉದ್ದೇಶದಿಂದ ಇಂತಹ ಯೋಜನೆಯನ್ನು ರೂಪಿಸಲಾಗಿರುವುದು, ಇನ್ನಿತರ ಎಲ್ಲ ಬಂಧಿತ ಚಿಂತಕರು ಮತ್ತು ಹೋರಾಟಗಾರರ ವಿಚಾರದಲ್ಲೂ ಇಂತಹುವೇ ಆರೋಪಗಳನ್ನು ಮಾಡಲಾಗಿರುವುದನ್ನು ನಾವು ಕಾಣಬಹುದು.’ ಎಂಬುವು ಅಪೂರ್ವಾನಂದ ಅವರ ಮಾತುಗಳು.

ಈ ವಿಷಯಗಳು ಕೇವಲ ಹನಿ ಬಾಬು ಅವರ ಸ್ನೇಹಿತರು ಮತ್ತು ಹಿತೈಶಿಗಳಿಗೆ ಮಾತ್ರವಲ್ಲದೆ ಈ ದೇಶದ ಎಲ್ಲ ನಾಗರಿಕರಿಗೆ ಭಾರತದ ಸಂವಿಧಾನ ಕೊಡಮಾಡಿರುವ ಹಕ್ಕುಗಳ ಬಗ್ಗೆ ಗೌರವವಿರುವ ಎಲ್ಲರನ್ನೂ ಚಿಂತನೆಗೆ ಹಚ್ಚಬೇಕು. ಯಾವುದೇ ಸರ್ಕಾರದ ನೀತಿಗಳ ವಿರುದ್ಧ ಅಥವಾ ಸರ್ಕಾರಕ್ಕೆ ಹತ್ತಿರವಾದವರ ಮತ್ತು ಆಡಳಿತಾರೂಢ ಪಕ್ಷದ ಸಿದ್ಧಾಂತಗಳ ವಿರುದ್ಧ ಮಾತನಾಡುವುದು, ಸರ್ಕಾರದಿಂದ ದಮನಕ್ಕೊಳಗಾಗುತ್ತಿರುವವರ ಪರವಾಗಿ ದನಿಯೆತ್ತುವುದು ಬಂಧನಕ್ಕೆ ಕಾರಣವಾಗುವ ಪದ್ಧತಿ ಸಮಾಜದಲ್ಲಿ ಚಾಲ್ತಿಗೆ ಬಂದದ್ದೇ ಆದರೆ, ಆಗ ನಮ್ಮಲ್ಲಿ ಯಾವಾಗ ಯಾರು ಬೇಕಾದರೂ ಇಂತಹ ದುಷ್ಟಪದ್ಧತಿಗಳಿಗೆ ಬಲಿಯಾಗಬಹುದು. ಇದು ನಮಗೆ ಅರಿವಿರಬೇಕು. ಆದ್ದರಿಂದ, ಇಂತಹ ಸಂದರ್ಭದಲ್ಲಿ ನಮ್ಮ ಆಪ್ತರಲ್ಲೊಬ್ಬರಾಗಿದ್ದ ಹನಿ ಬಾಬು ಅವರ ಬಂಧನದ ವಿರುದ್ಧ ದನಿಯೆತ್ತುವುದು ಮತ್ತು ಅವರ ಕುರಿತ ವಾಸ್ತವಾಂಶಗಳನ್ನು ಸಮಾಜದ ಮುಂದೆ ತೆರೆದಿಡುವುದು ಎಲ್ಲ ಪ್ರಜಾತಂತ್ರವಾದಿಗಳ ಕರ್ತವ್ಯ.

ಇಡೀ ದೇಶದ ಶೋಷಿತ ಮತ್ತು ದಮನಿತ ಜನತೆ ಹೊಸ ಹೋರಾಟಗಳ ಪರಿಭಾಷೆ ಮತ್ತು ತಮ್ಮದೇ ಆದ ಅಸ್ತಿತ್ವವನ್ನು ಕಂಡುಕೊಳ್ಳುತ್ತಿದ್ದ ಸಂದರ್ಭದಲ್ಲಿ ಕೇರಳ ಮೂಲದ ಹನಿ ಬಾಬುರವರು 1971ರಲ್ಲಿ ಜನಿಸಿದರು. ಕ್ಯಾಲಿಕಟ್ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯ ಮತ್ತು ಭಾಷಾಶಾಸ್ತ್ರದ ವಿಷಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದ ಹನಿ ಬಾಬುರವರು, ಸಂಶೋಧನೆಗೆ ಆಯ್ದುಕೊಂಡದ್ದು ಹೈದರಾಬಾದ್‌ನ ಪ್ರತಿಷ್ಠಿತ ‘ಸೆಂಟ್ರಲ್ ಇನ್ಟ್ಸಿಟ್ಯೂಟ್ ಆಫ್ ಫಾರಿನ್ ಲ್ಯಾಂಗ್ವೇಜಸ್’ ಸಂಸ್ಥೆಯನ್ನು. ಅಲ್ಲಿ ಇಂಗ್ಲಿಷ್ ಭಾಷಾಶಾಸ್ತ್ರ ಮತ್ತು ಧ್ವನಿಸ್ತ್ರದಲ್ಲಿ ಸಂಶೋಧನೆ ನಡೆಸಿ ಉತ್ತಮ ಶ್ರೇಣಿಯಲ್ಲಿ ಪಿಎಚ್‌ಡಿ ಪಡೆದುಕೊಂಡ ಹನಿಬಾಬು ಅವರಿಗೆ, ಸದಾಕಾಲ ಭಾರತದ ಶೋಷಿತ ಸಮುದಾಯಗಳು ಮತ್ತು ಇಂಗ್ಲಿಷ್ ಭಾಷೆಯ ಸಂಬಂಧದ ಬಗ್ಗೆ ಅಪರಿಮಿತವಾದ ಆಸಕ್ತಿಯಿತ್ತು. ಅವರು ಸದಾ ಬಯಸಿದ್ದು ಹಿನ್ನೆಲೆ ಮತ್ತು ಅನುಕೂಲಗಳ ಅಡ್ಡಿಗಳನ್ನು ಮೀರಿ ಎಲ್ಲರೂ ಸುಲಲಿತವಾಗಿ ಇಂಗ್ಲಿಷನ್ನು ಕಲಿಯುವಂತೆ ಬೋಧಿಸುವ ಕೆಲಸವನ್ನು. ಅಂತೆಯೇ ಹೈದರಾಬಾದ್‌ನಲ್ಲಿ ತಾವು ಸಂಶೋಧನೆ ನಡೆಸಿದ ಸಂಸ್ಥೆಯಲ್ಲೇ 2007ರವರೆಗೆ ಅಧ್ಯಾಪನ ವೃತ್ತಿ ಕೈಗೊಂಡ ಹನಿಬಾಬುರವರು ನಂತರ ದೆಹಲಿ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರಾದರು.

ಅಂಬೇಡ್ಕರ್‌ವಾದದ ಬಹಳ ಆಳವಾದ ಅಭ್ಯಾಸಿಯಾಗಿದ್ದ ಡಾ. ಹನಿ ಬಾಬುರವರು ಎಲ್ಲರಿಗೂ ಸಂವಿಧಾನದ ನಿಜವಾದ ಆಶಯಗಳ ಬಗ್ಗೆ ತಿಳಿದುಕೊಳ್ಳಲು ಪ್ರೇರೇಪಿಸುತ್ತಿದ್ದರು. ಅವರ ಮಾರ್ಗದರ್ಶನದಲ್ಲಿ ದೆಹಲಿ ವಿಶ್ವವಿದ್ಯಾಲಯದಿಂದ ಎಂಫಿಲ್ ಪದವಿ ಪಡೆದ ಸೌರದೀಪ್ ರಾಯ್ ನೆನಪಿಸಿಕೊಳ್ಳುವಂತೆ ‘ಸಂವಿಧಾನದ ಪ್ರಗತಿಶೀಲ ಮತ್ತು ಪರಿವರ್ತನೆಯ ಸಾಮರ್ಥ್ಯದ ಬಗ್ಗೆ ಹನಿ ಬಾಬುರವರಿಗೆ ಗಾಢವಾದ ನಂಬಿಕೆಯಿತ್ತು. ಸಂವಿಧಾನವನ್ನು ಭಾರತದ ಸಾಮಾಜಿಕ ವಾಸ್ತವಗಳೊಂದಿಗೆ ಹೊಂದಿಸಿ ನೋಡುತ್ತಾ ಅಧ್ಯಯನ ಮಾಡುವಂತೆ ಅವರು ನಮ್ಮಂತಹ ಎಲ್ಲ ವಿದ್ಯಾರ್ಥಿಗಳನ್ನೂ ಉತ್ತೇಜಿಸುತ್ತಿದ್ದರು. ಅಂಬೇಡ್ಕರ್ ಅವರ ಚಳವಳಿ ಮತ್ತು ಬೋಧನೆ ಅವರ ಹೃದಯಕ್ಕೆ ಅತ್ಯಂತ ಹತ್ತಿರವಾಗಿದ್ದ
ಸಂಗತಿಯಾಗಿತ್ತು.’ ಎನ್ನುತ್ತಾರೆ.

ಡಾ ಹನಿ ಬಾಬುರವರು ಇತ್ತೀಚೆಗೆ ಬರೆದಿದ್ದ ಕೆಲವು ಬರಹಗಳನ್ನು ನೋಡಿದರೆ ನಮಗೆ ಅವರ ಸಾಮಾಜಿಕ ಕಾಳಜಿಯ ಹತ್ತಿರದ ಪರಿಚಯವಾಗುತ್ತದೆ. ಅವರ ಕೆಲವು ಪುಸ್ತಕಗಳು ಇಲ್ಲಿವೆ.

‘ಚಾತುರ್ವರ್ಣ ಭಾಷಾಪದ್ಧತಿಯನ್ನು ಮುರಿಯುವುದು: ಭಾಷಾನೀತಿಯನ್ನು ಮರುರೂಪಿಸುವ ಅಗತ್ಯ’
(“Breaking the Chaturvarna system of languages: The need to overhaul the language policy”. Economic and Political Weekly June 10, 2017, LII 23:112-119.);

‘ಸೇರಿಕೊಳ್ಳುವ ಹೋರಾಟಗಳು ಮತ್ತು ಭಿನ್ನ ಹಿತಾಸಕ್ತಿಗಳು: ವಿಶ್ವವಿದ್ಯಾಲಯಗಳಲ್ಲಿನ ಇತ್ತೀಚಿನ ಅಶಾಂತಿಯ ಬಗ್ಗೆ ಒಂದು ನೋಟ’ (“Converging struggles and diverging interests: A look at the recent unrest in universities.”

September 15, Café Dissensius.

‘ಅಸಮಾನ ಹಕ್ಕುಗಳು: ನಾಗರೀಕರು ಮತ್ತು ‘ಅನ್ಯರ’ ಸ್ವಾತಂತ್ಯ್ರ, ಸಮಾನತೆ, ಬದುಕು ಮತ್ತು
ಬಿಡುಗಡೆ’ ;'(“Unequal rights: Freedom, equality, life and liberty of citizens and “others”).

ಈ ಬರಹಗಳನ್ನು ನೋಡಿದರೆ ಸಮಕಾಲೀನ ವಿಷಯಗಳಿಗೆ ಅವರ ತೀಕ್ಷ್ಣ ಪ್ರತಿಕ್ರಿಯೆಯನ್ನು ನಾವು ಅರಿಯಬಹುದು.

ಕೇವಲ ಬರಹ ಮತ್ತು ಅಧ್ಯಾಪನದಲ್ಲಿ ಮಾತ್ರವಲ್ಲ, ಸಾಮಾಜಿಕ ಚಳುವಳಿಗಳಲ್ಲೂ ಡಾ.ಹನಿ ಬಾಬುರವರದ್ದು ನಿರಂತರ ಪಾಲ್ಗೊಳ್ಳುವಿಕೆ ಇತ್ತು. ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ತಮ್ಮ ಹಕ್ಕೊತ್ತಾಯಗಳಿಗಾಗಿ ನಡೆಸುತ್ತಿದ್ದ ಧರಣಿಗಳು ಮತ್ತು ಉಪವಾಸ ಸತ್ಯಾಗ್ರಹಗಳ ಟೆಂಟುಗಳಲ್ಲಿ ದಿನದ ಯಾವುದಾದರೂ ಒಂದು ಸಮಯದಲ್ಲಾದರೂ ಡಾ.ಹನಿ ಬಾಬುರವರ ಉಪಸ್ಥಿತಿಯನ್ನು ಕಾಣಬಹುದಿತ್ತು. ಅವರು ಯಾರಿಗೂ ಬೆದರದ ದಿಟ್ಟ ದನಿಯಾಗಿದ್ದರು. ತಮ್ಮದೇ ವಿಭಾಗದ ಕೆಲವು ಸಹೋದ್ಯೋಗಿಗಳ ಮೇಲೆ ಲೈಂಗಿಕ ಕಿರುಕುಳದ ಆರೋಪ ಬಂದಾಗಲೂ ಯಾವ ಮುಚ್ಚುಮರೆ ಮಾಡದೆ ಸಹೋದ್ಯೋಗಿಗಳನ್ನು ರಕ್ಷಿಸಲು ಪ್ರಯತ್ನಿಸದೆ ಸತ್ಯದ ಪರವಾಗಿ ನಿಂತವರು.

ಇಂತಹ ದಿಟ್ಟ ದನಿಗಳು ಇಂದಿಗೂ ಮತ್ತು ಮುಂದಕ್ಕೂ ಭಾರತಕ್ಕೆ ಅಗತ್ಯ.

(ಡಾ. ಅಪೂರ್ವಾನಂದ, ಪ್ರಾಧ್ಯಾಪಕರು, ದೆಹಲಿ ವಿಶ್ವವಿದ್ಯಾಲಯ; ಸೌರದೀಪ್, ಬರಹಗಾರರು ಮತ್ತು ಅಶೋಕ ವಿ.ವಿಯ ಅಧ್ಯಾಪಕರಾಗಿದ್ದವರು; ಅಖಿಲ ಭಾರತದ ಶಿಕ್ಷಣ ಹಕ್ಕು ವೇದಿಕೆಯ ಖಂಡನಾ ಹೇಳಿಕೆ; ಇವೇ ಮೊದಲಾದ ಬರಹಗಳ ಸಂಗ್ರಹ)

  • ಮಲ್ಲಿಗೆ ಸಿರಿಮನೆ.

ಇದನ್ನೂ ಓದಿ: ಜೈಲಿನ ಬಾಗಿಲು ತೆರೆಯುತ್ತದೆ, ನೀವು ನಮ್ಮ ಬಳಿಗೆ ಹಿಂತಿರುಗುತ್ತೀರಿ: ಜೈಲಲ್ಲಿರುವ ಸ್ನೇಹಿತ ಸಾಯಿಬಾಬಾಗೆ ಅರುಂಧತಿ ರಾಯ್ ಬರೆದ ಭಾವನಾತ್ಮಕ ಪತ್ರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಜಾಗತಿಕ ಮಾದ್ಯಮಗಳಲ್ಲಿ ಸುದ್ದಿಯಾದ ಪ್ರಧಾನಿಯ ದ್ವೇಷ ಭಾಷಣ: ಅಂತರಾಷ್ಟ್ರೀಯ ಮಟ್ಟದಲ್ಲಿ ಮತ್ತೆ ಟೀಕೆಗೆ ಗುರಿಯಾದ...

0
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರಾಜಸ್ಥಾನದ ಬನ್ಸ್ವಾರಾದಲ್ಲಿ ಮುಸ್ಲಿಮರ ವಿರುದ್ಧ ಮಾಡಿದ್ದ ದ್ವೇಷ ಭಾಷಣ ಜಾಗತಿಕ ಮಾದ್ಯಮಗಳಲ್ಲಿ ಭಾರೀ ಸುದ್ದಿಯಾಗಿದ್ದು, ಮೋದಿ ಮತ್ತೆ ಅಂತರಾಷ್ಟ್ರೀಯ ಮಟ್ಟದಲ್ಲಿ ಟೀಕೆಗೆ ಗುರಿಯಾಗಿದ್ದಾರೆ. 'ಕೊಳಕು ಭಾಷಣ’ ಆದರೆ...