Homeಸಾಹಿತ್ಯ-ಸಂಸ್ಕೃತಿಕಥೆರಾಜಶೇಖರ ಹಳೆಮನೆ ಅವರ ಹೊಸ ಸಣ್ಣ ಕಥೆ 'ಸೂತಕ'

ರಾಜಶೇಖರ ಹಳೆಮನೆ ಅವರ ಹೊಸ ಸಣ್ಣ ಕಥೆ ‘ಸೂತಕ’

- Advertisement -
- Advertisement -

nಹೆಣಕ್ಕೆ ಹೊದಿಸಿದ ಬಿಳಿಬಟ್ಟೆಯಂತೆ ಬೆಳದಿಂಗಳು ಚೆಲ್ಲಿತ್ತು. ಗಿಡಗಳು ಕಪ್ಪಾಗಿ ಪ್ರೇತಗಳಂತೆ ನೆಲಕ್ಕೆ ಚಿತ್ತಾರ ಬರೆದಿದ್ದವು. ನರಿಗಳು ಕಿವಿ ತೂತಾಗುವಂತೆ ಊಳಿಡುತ್ತಿದ್ದವು. ಬಾವಲಿಗಳು ತಲೆ ಮೇಲೆ ಕಪ್ಪು ಬಟ್ಟೆ ಹೊದ್ದಂತೆ ಓಡಾಡುತ್ತಿದ್ದವು. ಗೂಬೆಗಳು ಗುಕ್… ಗುಕ್… ಎಂದು ನನ್ನನ್ನು ಕರೆಯುತ್ತಿದ್ದವು. ಅವುಗಳ ಹೊಳೆವ ಕಣ್ಣುಗುಡ್ಡೆಗಳು ನನ್ನನ್ನು ಇರಿಯುತ್ತಿದ್ದವು. ಕಣ್ಣು ಮುಳುಗುವರೆಗೆ ಬಯಲೋ ಬಯಲು. ಮೆಣಸಿನ ಗಿಡಗಳು, ಹತ್ತಿ ಗಿಡಗಳು, ತೊಗರಿ ಗಿಡಗಳು, ಕತ್ತರಿಸಿದ ಭತ್ತದ ಗದ್ದೆಗಳು ಬೆಳದಿಂಗಳಲ್ಲಿ ಬೋಳಾಗಿ ನಿಂತಿದ್ದವು. ಯಾವ ಬೆಳೆಯು ಇಲ್ಲದ್ದರಿಂದ ಹೊಲಗಳೆಲ್ಲಾ ರಕ್ತ ಹೀರಿದ ಅಸ್ತಿಪಂಜರದಂತೆ ಕಾಣುತ್ತಿದ್ದವು. ಮೈಯೆಲ್ಲಾ ಕಣ್ಣು ಮಾಡಿಕೊಂಡು ಸುತ್ತಮುತ್ತ ನೋಡುತ್ತಾ ನಡೆಯುತ್ತಿದ್ದೆ. ನಡೆದಂತೆ ನನ್ನ ನೆರಳು ನನ್ನನ್ನು ನುಂಗುತ್ತಿದೆ ಅನಿಸುತಿತ್ತು. ಅಷ್ಟು ತಂಪಾದ ಬೆಳದಿಂಗಳು ಉಕ್ಕಿ ಹರಿಯುತ್ತಿದ್ದರೂ ಮನಸ್ಸು ಬೆಂಕಿ ಹೊತ್ತಿದಂತೆ ಉರಿಯುತ್ತಿತ್ತು. ಪ್ರತಿ ಹೆಜ್ಜೆಯು ಬೆಟ್ಟದಷ್ಟೂ ಭಾರವಾಗುತಿತ್ತು. ಅಣ್ಣನನ್ನು ನೆನಪಿಸಿಕೊಂಡಂತೆ ಕೆಂಡದಲ್ಲಿ ಬಿದ್ದಷ್ಟೂ ಸಂಕಟವಾಗುತಿತ್ತು.

ಗುಡಿಸಲು ಸಮೀಪಿಸಿದಂತೆ ಭಯ ಕಡಿಮೆಯಾಯಿತು. ಅಪ್ಪ ನೆಟ್ಟ ಐದಾರು ಮಾವಿನ ಮರಗಳು ಹಾಗೆ ಇದ್ದವು. ಅವು ಚಿಗುರೊಡೆದು ನಳನಳಿಸುತ್ತಿದ್ದವು. ಆ ತಂಗಾಳಿಯಲ್ಲಿ ಮಾವಿನ ಮರದಿಂದ ಬಂದ ಗಾಳಿ ಗಮ್ಮೆಂದು ಮೂಗಿಗೆ ಬಡಿದು ಸ್ವಲ್ಪ ಹಿತವೆನಿಸಿತು. ಬೆಳದಿಂಗಳು ಸುಳಿಸುಳಿಯಾಗಿ ಬೆಳ್ಳಗೆ ಕಣ್ಣು ಮುಂದೆ ನಿಂತಿತು. ‘ಯಾಕೋ ಊರಿಗೆ ಬಂದಿ. ಅಲ್ಲೇ ಅಮೆರಿಕಾದಲ್ಲಿ ಹಾಯಾಗಿ ಇರಬಾರದೆ. ಇಲ್ಲಿಯ ಗೋಳು ನಿನಗ್ಯಾಕೆ. ಇವರು ಹೇಗಾದರೂ ಇರಲಿ. ಅವರನ್ನು ನೋಡಿಯಾದರೂ ನೀನೇನು ಮಾಡುವಿ. ಅಲ್ಲಿ ವೀಕೆಂಡ್ ಪಾರ್ಟಿ ಮಾಡಿಕೊಂಡು ಕುಡಿದು ತಿಂದು ಭೋಗಿಸಿ ಮಜವಾಗಿ ಇರಬಾರದೆ. ಹೋಗು ಹೋಗು…..’ ಎಂದಂತಾಯಿತು. ಬೆಳದಿಂಗಳ ಮಾತು ಕೇಳಿ ಎದೆ ನಡುಗಿತು.

ಗುಡಿಸಲು ಮುಂದೆ ರಾಶಿರಾಶಿಯಾಗಿ ಈರುಳ್ಳಿ, ಟೊಮ್ಯಟೊ, ಆಲುಗಡ್ಡೆ ಬಿದ್ದಿದ್ದವು. ಎಷ್ಟು ದಿವಸ ಆಗಿತ್ತೋ ರಾಶಿ ಹಾಕಿ ಕೊಳೆತು ದುರ್ನಾತ ಬರುತ್ತಿತ್ತು. ಆ ದುರ್ನಾತಕ್ಕೆ ಹೊಟ್ಟೆ ತೊಳಿಸಿದಂತಾಗಿ ವಾಂತಿ ಒತ್ತಿಕೊಂಡು ಬಂದಿತು. ಹೊಟ್ಟೆಯಲ್ಲಿ ಏನು ಇಲ್ಲದ್ದರಿಂದ ಸಂಕಟವಾಯಿತು. ಟೊಮ್ಯಟೊ ಹಣ್ಣು ಕೆಂಪಗೆ ಹಸಿ ಮಾಂಸದ ತುಣುಕಿನಂತೆ ಕಾಣುತ್ತಿದ್ದವು. ಕೊಳೆತು ಹೊಟ್ಟೆ ಹೊಡೆದು ರಸ ರಕ್ತದಂತೆ ಹರಿಯುತ್ತಿತ್ತು. ನೋಡಲು ಹೇಸಿಕೆಯೆನಿಸಿತು. ಇವನ್ನು ಮನೆ ಮುಂದೆ ಹಾಕಿಕೊಂಡು ಹೇಗೆ ಜೀವಿಸುವರೋ ಅನಿಸಿತು. ಆಲುಗಡ್ಡೆ ಈರುಳ್ಳಿಗಳು ತಲೆ ಸೀಳಿ ಮೆದುಳು ಹೊರಬಂದಂತೆ ಕಾಣುತ್ತಿದ್ದವು.

ಅಪ್ಪ ತಮ್ಮ ಹೊರಗೆ ಮಲಗಿದ್ದರು. ಅಪ್ಪ ತಲೆ ಪಕ್ಕದಲ್ಲಿ ಬಸವಣ್ಣನ ವಚನಗಳ ಪುಸ್ತಕ ಇಟ್ಟುಕೊಂಡಿದ್ದ. ಆತನಿಗೆ ಆ ಪುಸ್ತಕ ತಲೆ ಪಕ್ಕ ಇದ್ದರೆ ನಿದ್ದೆ ಬರುತ್ತಿತ್ತು. ಬೆಳ್ಳಗೆ ಹೊಳೆಯುತ್ತಿದ್ದ ಅಪ್ಪನ ಮುಖ ಕಪ್ಪಿಟ್ಟಿತ್ತು. ಊರಲ್ಲಿ ಎಷ್ಟೊ ಜನರ ದುಃಖದುಮ್ಮಾನಗಳಿಗೆ ಕೊರಳಾಗಿದ್ದವ. ಇಂದು ತನ್ನ ದುಃಖಕ್ಕೆ ಯಾರಿಲ್ಲದೆ ಮುಖ ಸುಟ್ಟ ಕೊರಡಿನಂತಾಗಿತ್ತು. ಯಾವ ವಚನಗಳು ಆತನ ವ್ಯಥೆಯನ್ನು ಸಮಧಾನ ಮಾಡಿರಲಿಕ್ಕಿಲ್ಲ. ತಮ್ಮನ ಮುಖ ಬಾಡಿ ಕಣ್ಣೆಲ್ಲಾ ಬತ್ತಿ ಹೋಗಿದ್ದವು. ತೊಯ್ದ ಗುಬ್ಬಿ ಮರಿಯಂತೆ ಕೈಕಾಲು ಮುದುರಿಕೊಂಡು ಮಲಗಿದ್ದ. ಅಮ್ಮ ಕಾಣಲಿಲ್ಲ. ಎದೆ ಒಡೆದುಕೊಳ್ಳುತ್ತಿತ್ತು. ಇವರನ್ನು ಹಗಲೊತ್ತು ಎದುರಿಸುವದು ಆಗುವದಿಲ್ಲವೆಂದು ರಾತ್ರಿ ಬಂದಿದ್ದೆ.

ಅಣ್ಣನ ಹಾಸಿಗೆ ದಿಂಬು ಮೂಲೆಯಲ್ಲಿ ಕಳೆಬರದಂತೆ ಬಿದ್ದಿದ್ದವು. ಅವನ ಬಟ್ಟೆಗಳನ್ನು ಹುಣಸೆಮರಕ್ಕೆ ಒಣ ಹಾಕಿದ್ದರು. ಅವನ ಚೆಪ್ಪಲಿ ಅನಾಥವಾಗಿ ನನ್ನನ್ನು ನೋಡುತ್ತಿದ್ದವು. ನನಗಿಂತಲೂ ಅವನ ಕಾಲು ಮೂರು ಇಂಚು ದೊಡ್ಡವು. ಎಲ್ಲಿಯಾದರೂ ಇವು ಅಣ್ಣನ ಚೆಪ್ಪಲಿ ಎಂದು ಗುರುತು ಸಿಗುತ್ತಿದ್ದವು. ಅವನು ಮಲಗುತ್ತಿದ್ದ ಜಾಗದಿಂದ ಮೈ ವಾಸನೆ ನನ್ನನ್ನು ಅಪ್ಪಿಕೊಂಡಿತು. ‘ಅಯ್ಯೋ… ಅಣ್ಣಾ… ಹೀಗೇಕೆ ಮಾಡಿದೆ…’ ಎಂದು ಚೀರಬೇಕೆನಿಸಿತು. ಗಂಟಲು ಬಿಗಿಯಾಗಿ ಉಸಿರು ಹೊರಬರಲಿಲ್ಲ. ಅವನ ಇಡೀ ಆಕಾರ ಕಣ್ಣ ಮುಂದೆ ಬಂದು ಕಣ್ಣೀರು ಧಾರಾಕಾರವಾಗಿ ಹರಿದವು.

ಅಮ್ಮ ಒಳಗೆ ಮಲಗಿರಬೇಕೆಂದು ಬೇವಿನ ಮರದ ಹಾಗೆ ಕಟ್ಟಿಗೆ ಸುಮ್ಮನೆ ಕುಳಿತೆ. ಸುತ್ತಲು ನೋಡಿದೆ. ಎಲ್ಲೆಲ್ಲೂ ಬೆಳೆಗಳಿಗೆ ಔಷಧಿ ಹೊಡೆದು ಬಿಸಾಕಿದ ಡಬ್ಬಿಗಳು. ಪ್ರತಿ ಡಬ್ಬಿಯ ಮೇಲೆ ತಲೆಬುರುಡೆಯ ಚಿತ್ರ ಇತ್ತು. ಆ ಚಿತ್ರಗಳು ನನಗಾಗಿ ಕಾಯುತ್ತಿರುವಂತೆ ಎದ್ದು ಬಂದವು. ‘ಓ ನೀನು ಬಂದೆಯಾ ಹೊಸ ಜೀವ. ಬಾ ಬಾ… ನಮ್ಮನ್ನು ಕುಡಿ ನಮ್ಮಂತಾಗು. ಎಲ್ಲರನ್ನೂ ನಮ್ಮಂತೆ ಡಿಂಬಗಳನ್ನಾಗಿ ಮಾಡುವುದೇ ನಮ್ಮ ಗುರಿ.. ಆ….’ ಎಂದು ನನ್ನನ್ನು ನುಂಗಲು ಬರುತ್ತಿವೆ ಅನಿಸಿ ಅಲ್ಲಿಂದ ಎದ್ದು ಬಂದೆ.

ರಸಾಯನಿಕ ಔಷಧಿ ಸಿಂಪಡಿಸುವ ಗನ್ ಟ್ಯಾಂಕುಗಳನ್ನು ಹುಣಸೆಗಿಡದ ಕೆಳಗೆ ಸಾಲಾಗಿ ಜೋಡಿಸಿದ್ದರು. ಅದರಿಂದ ವಿಷ ಉಕ್ಕಿ ಹರಿದು ಬಂದಂತೆ ಭಾಸವಾಯಿತು. ವಿಷದ ನೆರಳು ಮನದ ಮುಂದೆ ಕುಣಿದು ಕುಪ್ಪಳಿಸಿತು. ನೋಡುನೋಡುತ್ತಾ ಕಣ್ಣಿಗೆ ಕತ್ತಲು ಆವರಿಸಿತು. ಯಾರನ್ನಾದರು ಎಬ್ಬಿಸಬೇಕೆಂದು ಕಣ್ಣುತೆರೆದೆ.

ಮೋಡದಿಂದ ಇಳಿದ ಬೆಳದಿಂಗಳಂತೆ ಅಮ್ಮ ಗಿಡ-ಗಂಟೆಯನ್ನೆಲ್ಲಾ ಒಗ್ಗೂಡಿಸಿ ಆಕಾಶದೆತ್ತರ ತೊಟ್ಟಿಲು ಮಾಡಿ ನನ್ನನ್ನು ಅಪ್ಪಿಕೊಂಡು ಮಗನೇ… ಮಗನೆ… ಸುಖವಾಗಿರಲು ಎಲ್ಲೋಗಿದ್ದೋ…ಬಾರೋ ನಿನ್ನನ್ನು ತೂಗುತ್ತೇನೆ. ಹಾಡುತ್ತೇನೆ. ನಲಿಸುತ್ತೇನೆ. ಸುಖ ನಿದ್ರೆಗೆ ಒಯ್ಯುತ್ತೇನೆಂದು ಅನಾಮತ್ತಾಗಿ ಎತ್ತಿಕೊಂಡು ತೊಟ್ಟಿಲಲ್ಲಿ ಮಲಗಿಸಿದಳು. ಆಕಾಶದೆತ್ತರಕ್ಕೆ ತೂಗಿದಳು. ನೋಡೋ… ನಿಮ್ಮಣ್ಣನನ್ನೂ ಹೀಗೆ ತೂಗಲಿಲ್ಲ… ತೂಗಲಿಲ್ಲ… ಎಂದು ಅಳಲು ಆರಂಭಿಸಿದಳು. ಆಕೆಯ ಕಣ್ಣೀರು ಕಡಲಾಗಿ ಹರಿದು ತೊಟ್ಟಿಲು ಮುಳುಗಿ ತೇಲಿ ಹೋಗುತ್ತಿತ್ತು. ‘ಅಮ್ಮಾ… ನೀನು ಕಣ್ಣೀರುಗರೆಯಬೇಡಮ್ಮ ನಿಲ್ಲಿಸಮ್ಮ. ನಾನು ಕೊಚ್ಚಿಕೊಂಡು ಹೋಗ್ತೀನಿ…’ ಎಂದು ಚಿಟ್ಟನೆ ಚೀರಿದೆ.

ಅಪ್ಪ ತಮ್ಮ ‘ಯಾರದು ಯಾರದು’ ಎಂದು ಗಡಬಡಾಸಿ ಎದ್ದು ನನ್ನನ್ನು ನೋಡಿದರು. ನಾನು ಹೌದು ಅಲ್ಲೋ ಎಂದು ನಂಬದಾದರು. ಎಂಟು ವರ್ಷಗಳ ಮೇಲೆ ನೋಡಿದ್ದು. ‘ಏ ನಿನ್ನ, ಹೇಳಿ ಬರಬೇಕೋ ಬ್ಯಾಡ. ಒಮ್ಮೆಲೆ ಹೀಂಗ ಬಂದು ಕುಂತರಾ… ನಡಿ ನಡಿ ಮುಖ ತೊಳಕ ನಡಿ. ಅವನ ಹಣೆಬರಹದಲ್ಲಿ ಅಷ್ಟೇ ಬರದಿತ್ತು. ಏನು ಮಾಡೋದು’ ಎಂದು ಅಪ್ಪ ಮುಖಕ್ಕೆ ಅಂಗವಸ್ತ್ರ ಇಟ್ಟುಕೊಂಡು ಅಳಲು ಸುರುವು ಮಾಡಿದ. ಅಪ್ಪ ಹೀಗೆ ಅತ್ತದ್ದು ನಾನು ನೋಡಿದ್ದು ಮೊದಲು. ಹೆತ್ತ ಕರುಳು ಏನೂ ಮಾಡೀತೂ… ಹೇಗೆ ಸಮಾಧಾನಿಸುವುದು. ಸುಮ್ಮನೆ ಮೂಕನಂತೆ ಕುಳಿತೆ. ತಮ್ಮ ನನ್ನನ್ನು ತಬ್ಬಿಕೊಂಡು ‘ಅಣ್ಣಾ…..’ ಎಂದು ಕಣ್ಣೀರಿನಿಂದ ಎದೆ ತೋಯಿಸಿದ. ಗುಡಿಸಲು ಒಳಗಿದ್ದ ಅತ್ತಿಗೆ ಹೊರಗೆ ಬಂದು ನನ್ನನ್ನು ನೋಡುತ್ತಾ ಸುಮ್ಮನೆ ನಿಂತಳು. ಅತ್ತೂ ಅತ್ತೂ ಕಣ್ಣಲ್ಲಿ ನೀರುಬತ್ತಿ ಬಿಳಿಪೇರಿದ್ದವು. ಮುಖದಲ್ಲಿ ಬೆಳ್ಳಗೆ ಕಣ್ಣೊಂದೆ ಕಾಣುತ್ತಿದ್ದವು. ಕರ್ರಗೆ ಕಣ್ಣುಗುಡ್ಡೆಗಳು ನಿಸ್ತೇಜವಾಗಿ ನಿತ್ರಾಣಗೊಂಡಿದ್ದವು. ದುಃಖ ಒತ್ತಿ ಹಿಡಿದಿದ್ದರಿಂದ ಗಂಟಲ ನರಗಳು ಉಬ್ಬಿರುವುದು ಕಾಣುತಿತ್ತು. ಜೋರಾಗಿ ಅಳಬೇಕೆಂದರೂ ಧ್ವನಿ ಬರುತ್ತಿರಲಿಲ್ಲ. ಧ್ವನಿ ಉಸಿರನ್ನೇ ಕಳೆದುಕೊಂಡಿತ್ತು. ನಾನು ಕೈ ಮುಗಿದು ಸುಮ್ಮನೆ ತಲೆತಗ್ಗಿಸಿ ಕುಳತೆ.

ಅಮ್ಮ ಕಾಣುತ್ತಿರಲಿಲ್ಲ, ಎಲ್ಲಿಯಂತ ನೋಡುತ್ತಿದ್ದೆ. ‘ನಿಮ್ಮಮ್ಮ ಎಷ್ಟು ಹೇಳಿದರಾ ಕೇಳವಳ್ಳಲಪಾ… ಅಲ್ಲೇ ಸಮಾಧಿತಕ ಹೋಗಿ ಕುಂತುಬುಡ್ತಾಳ.’ ಎಂದು ಅಪ್ಪ ಸಮಾಧಿ ಕಡೆ ಕೈ ತೋರಿಸಿದ. ಗುಡಿಸಿಲಿಂದ ಸ್ವಲ್ಪ ದೂರದಲ್ಲಿ ಬಿಲ್ವಪತ್ರೆ ಗಿಡ ಇತ್ತು. ಅಲ್ಲಿ ಅಜ್ಜಿಯ ಸಮಾಧಿಯಿತ್ತು. ಅಲ್ಲೇ ಅಣ್ಣನನ್ನು ಸಮಾಧಿ ಮಾಡಿದ್ದರು. ನನಗೆ ಆ ಕಡೆ ನೋಡಲು ಭಯವಾಯಿತು.

‘ಹೋಗಪ್ಪಾ ಹೋಗು. ನಿಮ್ಮಮ್ಮನ ನೋಡು. ಎರಡು ದಿನದಿಂದ ಊಟಿಲ್ಲ ನಿದ್ದಿಲ್ಲ. ಎಷ್ಟೂ ಸಮಾಧಾನ ಮಾಡಿದರೂ ಸುಮ್ಮನಾಗವಲ್ಲಳು. ಅತ್ತೂ ಅತ್ತೂ ಕಣ್ಣೂ ಕತ್ತರಿಸಿ ಬೀಳಂಗ ಆಗ್ಯಾವ. ಬಂದದ್ದು ಅನುಭವಿಸಬೇಕು’ ಎಂದು ನನ್ನ ಕೈ ಹಿಡಕಂಡು ‘ಬೆಳದ ಮಗ ಕಣ್ಣೆದುರಿಗೆ ಹೀಂಗಾದನಲ್ಲಾ. ನೆನಿಸಿಗಂಡರ ಹೊಟ್ಟ್ಯಾಗಾ ಬೆಂಕಿ ಬಿದ್ದಾಂಗ ಆತದ. ಇದೆಲ್ಲಾ ನೋಡಾಕ ದೇವರು ನಮ್ಮನ್ನು ಉಳಿಸ್ಯಾನಪ್ಪಾ….’ ಎಂದು ಇನ್ನಷ್ಟೂ ಕೈಯನ್ನು ಒತ್ತಿಹಿಡಿದರು. ಅಪ್ಪನ ಕಣ್ಣೀರು ನನ್ನ ಅಂಗೈಯನ್ನು ತೋಯಿಸುತ್ತಿತ್ತು.

ರಾತ್ರಿ ಎರಡು ಗಂಟೆಯಾಗಿರಬೇಕು, ಚಂದ್ರ ಕೆಳಗೆ ಇಳಿಯುತ್ತಿದ್ದ. ಪೂರ್ಣ ಬೆಳದಿಂಗಳು ಇದ್ದುದರಿಂದ ಬೆಳಕು ಇತ್ತು. ಅಮ್ಮನ ಮುಖವೂ ಬೆಳದಿಂಗಳಂತೆ ಪೂರ್ಣ ದುಂಡು ಮುಖ. ಹೊಳೆಯುವ ಕಣ್ಣುಗಳು. ಎಲ್ಲವನ್ನು ಸಂತೈಸುವ ಮುಖಭಾವ. ಏನು ಬಂದರೂ ನುಂಗಿಕೊಂಡು ಸಂಸಾರವನ್ನು ಸಂಭಾಳಿಸಿದ ಮಹಾಮಾತೆ. ಅಣ್ಣನು ಅಮ್ಮನಂತೆ. ಅಮ್ಮನಿಗೆ ತುಂಬಾ ಪ್ರೀತಿಯ ಮಗ. ನಮ್ಮನ್ನು ಎಷ್ಟೇ ಪ್ರೀತಿ ಮಾಡಿದರೂ ಮೊದಲ ಆದ್ಯತೆ ಅಣ್ಣನಿಗೆ. ಅಣ್ಣ ಸದಾ ಅಮ್ಮನ ಜೊತೆಗೆ ಇರಬೇಕು. ಅಮ್ಮನಿಗೆ ಅವನನ್ನು ಬಿಟ್ಟಿರಲು ಆಗುತ್ತಿರಲಿಲ್ಲ. ಈಗೆಷ್ಟೂ ತಾಪ ಪಡುವಳೋ ದೇವಾ…… ಹೇಗೆ ಸಂತೈಸುವದು, ಕಾಲು ಮೇಲೇಳುತ್ತಲೇ ಇಲ್ಲ. ಬಾಯಿ ಒಣಗಿ ನೀರು ಕುಡಿಯಬೇಕೆನಿಸಿತು. ಗುಡಿಸಲು ಒಳಗೋಗಿ ಗಡಗಿಯಲ್ಲಿದ್ದ ನೀರು ತುಂಬಿಕೊಂಡು ನೀರು ಬಾಯಿಗಿಟ್ಟೆ. ವಿಷ ತಗುಲಿದಂತಾಯಿತು. ಮೊದಲಿನ ರುಚಿ ನೀರಿಗೆ ಇರಲಿಲ್ಲ. ಎಂಟು ವರ್ಷದಲ್ಲಿ ನೀರಿನ ರುಚಿ ಬದಲಾಗಿತ್ತು. ಹೊರಗೆ ಬಂದೆ. ನಾನು ಮುಖ ಕಿವುಚಿಕಂಡದ್ದನ್ನು ನೋಡಿದ ಅಪ್ಪ ‘ಇಲ್ಲಪ್ಪಾ ಈಗ ಮೊದಲಿನಂಗ ನೀರಿಲ್ಲ. ಎಲ್ಲಾ ಕೆಟ್ಟು ಹೋಗ್ಯಾವ. ಕುಡುದರ ನಂಜು ಕುಡುದಂಗ ಆತದ. ಏನು ಮಾಡಬೇಕು. ನೀರೆ ಹೀಂಗಾದರ ಏನು ಕುಡಿಬೇಕಪ. ನಮಗಂತು ರೂಢಿ ಆಗ್ಯಾದ. ಅಮ್ಮನ ಮಾತಾಡಸು ನಡಿ’ ಎಂದ ಅಪ್ಪನ ಕಾಲುಗಳು ಸ್ವಲ್ಪ ಸೊಟ್ಟ ಆಗಿದ್ದವು. ಕಾಲು ಅಗಲಿಸಿ ನಡೆಯುತ್ತಿದ್ದ. ಹೆಜ್ಜೆ ಕಿತ್ತಿಡಲು ಕಷ್ಟ ಪಡುತ್ತಿದ್ದ. ಮುಖ ಮುಚ್ಚಿಕೊಂಡು ದುಃಖಿಸುತ್ತಿದ್ದ ಅತ್ತಿಗೆಯ ನೆರಳು ಕಾಣುತ್ತಿತ್ತು.

ಗುಡಿಸಲು ಪಕ್ಕ ಇನ್ನೊಂದು ಸಣ್ಣ ಗುಡಿಸಲು ಕಟ್ಟಿದ್ದರು. ಮೊದಲು ಅಲ್ಲಿ ಸಣ್ಣ ಹೂವಿನ ತೋಟವಿತ್ತು. ಕನಕಾಂಬರಿ, ಮಲ್ಲಿಗೆ, ಚಂಡೆ, ದಾಸವಾಳ, ಕಣಗಲೆ ಹೂಗಳು ಅರಳಿರುತ್ತಿದ್ದವು. ಅಪ್ಪ ಅವೆ ಹೂಗಳಿಂದ ದೇವರಿಗೆ ಪೂಜೆ ಮಾಡುತ್ತಿದ್ದ. ಆ ಸಣ್ಣ ಗುಡಿಸಲು ಕಡೆ ನೋಡಿದೆ. ‘ಅದನ್ನೇನು ನೋಡುತ್ತೆಪಾ. ಅದ್ರಾಗ ಹೊಲಕ್ಕ ಹೊಡಿಯೋ ಔಷಧಿ ತುಂಬಿಟ್ಟಾರ. ಈ ಔಷಧಿ ಇಲ್ಲಿ ತುಂಬಿಡುಬ್ಯಾಡರೋ ಎಲ್ಲ್ಯಾರ ಸುಡುಗಾಡದಾಗ ಇಡರಿ. ಅದರ ವಾಸನಿ ನನಗ ಆಗದಿಲ್ಲಂದೆ. ಅಯ್ಯೋ ಅವು ಸಾವಿರಾರು ರುಪಾಯಿ ಬಾಳವು. ನಮ್ಮ ಕಣ್ಣು ಎದುರಿಗೆ ಇರಬೇಕು. ಯಾರನ ತಗಂಡ ಹೋತರಂದು, ಆ ಹೂವಿನ ತೋಟ ಕೆಡಿಸಿ ಈ ಗುಡಿಸಲು ಕಟ್ಟಿದರು. ಅದ್ರಾಗ ಹತ್ತಿ, ಮೆಣಸಿನಕಾಯಿ, ತೊಗರಿ, ತರಕಾರಿ ಎಲ್ಲಾ ಬೆಳೆಗಳಿಗೆ ಹೊಡಿಯೋ ಔಷಧಿ ತುಂಬಿಟ್ಟಾರ. ಅದೊಂದು ವಿಷದ ಕೊಠಡಿ ಆಗ್ಯಾದ. ಈ ಸುಡುಗಾಡು ವಿಷ ಹಾಕಲಾರದ ಯಾವ ಬೆಳೆನು ಬೆಳೋದಿಲ್ಲ. ಈ ವಿಷ ಕೊಂಡುಕೊಳ್ಳಾಕ ಸಾಲ ಮಾಡೀವಿ’ ನಿಧಾನಕ್ಕೆ ಹೆಜ್ಜೆ ಕಿತ್ತಿಟ್ಟು ಮುಂದಕ್ಕೆ ನಡೆದ. ನಾನು ಆತನ ನೆರಳಿನ ಮೇಲೆ ಹೆಜ್ಜೆ ಇಡುತ್ತಾ ಹೊರಟೆ.

ಅಮ್ಮ ಬಿಲ್ವಪತ್ರೆ ಮರದ ಕೆಳಗಿದ್ದ ಅಣ್ಣನ ಸಮಾಧಿ ಮೇಲೆ ಮಲಗಿದ್ದಳು. ಸುಟ್ಟ ಕಟ್ಟಿಗೆಯಂತಾಗಿದ್ದಳು. ಕಣ್ಣಲ್ಲಿ ಜೀವ ಹಿಡಿದಂತೆ ಇದ್ದಳು. ಕಣ್ಣಲ್ಲಿ ಪಿಚ್ಚು ತುಂಬಿತ್ತು. ಕೈಕಾಲು ಸೆಟೆದುಕೊಂಡಿದ್ದವು. ಒಣ ಬೋಕಿಯಂತೆ ಮಲಗಿದ್ದಳು. ಬೆಳದಿಂಗಳಂತ ಅಮ್ಮ ಎಂಟು ವರ್ಷಗಳಲ್ಲಿ ಬಿರುಕುಬಿಟ್ಟ ನೆಲದಂತಾಗಿದ್ದಳು. ನನ್ನಿಂದ ನೋಡಲಾಗಲಿಲ್ಲ. ಕರುಳು ಕಿತ್ತು ಬಂದಂತಾಯಿತು. ರಕ್ತ ಬತ್ತಿದ ದೇಹದಂತಾದೆ. ಒಮ್ಮಲೇ ದುಃಖ ಒತ್ತರಿಸಿಕೊಂಡು ಬಂತು. ‘ಅಮ್ಮಾ…’ ಎಂದು ಬಾಚಿ ತಬ್ಬಿಕೊಂಡೆ. ಮಾತಾಡಲು ಉಸಿರಿಲ್ಲದಂತಾಗಿದ್ದ ಅಮ್ಮ ಪಿಳಿಪಿಳಿ ಕಣ್ಣುಬಿಟ್ಟು ನೋಡಿದಳು. ನನ್ನ ನೋಡಿದ್ದೆ ಜೀವ ಸಂಚಾರವಾದಂತೆ ನನಗಾಗಿ ಕಾದು ಕುಳಿತವಳಂತೆ ‘ಅಯ್ಯೋ… ಮಗನೆ ಬಂದೆಪ್ಪಾ… ನೋಡೋ ನಿಮ್ಮಣ್ಣನ… ಕಣ್ಣು ಮುಂದನೆ ಹೆಣಾಗಿಬಿಟ್ಟನಪ್ಪೋ. ನೋಡೋ ಈ ವಿಷದ ಬಾಟಲಿ… ಇಷ್ಟು ಗಟಗಟ ನೀರು ಕುಡುದಂಗ ಕುಡುದು ಕಣ್ಣು ಮುಚ್ಚಿದನಪ್ಪೋ… ನಮ್ಮ ಬೆಳೆ ವಿಷವುಂಡಾವಂತೇಳಿ ಯಾರು ತಗವಲ್ಲರಂತಪ್ಪೋ… ಹಿಂಗಾದರ ಹೆಂಗಪ್ಪೋ…’ ಎಂದು ನಿತ್ರಾಣಾಗಿ ನೆಲಕ್ಕ ಬಿದ್ದಳು. ‘ಅಮ್ಮಾ ಅಳುಬ್ಯಾಡಮ್ಮೋ ನಾನು ಬಂದೀನಿ’ ಎಂದು ತೊಡೆ ಮೇಲೆ ಮಲಗಿಸಿಕೊಂಡೆ. ‘ಸ್ವಲ್ಪ ನೀರು ಕುಡೆಮ್ಮೋ’ ಎಂದು ಮುಖದ ಮೇಲೆ ನೀರು ಹಾಕಿದೆ. ನೀರು ಬಿದ್ದದಕ್ಕೆ ಸ್ವಲ್ಪ ಅರೆಗಣ್ಣು ಬಿಟ್ಟಳು. ನಾಲ್ಕು ಗುಟುಕು ನೀರು ಕುಡಿದಳು. ಅಪ್ಪ ಅಮ್ಮನ ಕಾಲುಗಳನ್ನು ತೊಡೆ ಮೇಲೆ ಇಟ್ಟುಕೊಂಡು ತಿಕ್ಕಿದ. ಊಟ ನೀರು ನಿದ್ದೆ ಇಲ್ಲದೆ ಹೊಟ್ಟೆ ಬೆನ್ನಿಗತ್ತಿತ್ತು. ‘ಅಯ್ಯೋ… ಮಗನೇ ಎಂತ ಗತಿ ಬಂತಪ್ಪಾ… ಇದೆಲ್ಲಾ ನೋಡಾಕ ನಾವು ಇರಬೇಕನಪಾ… ದೇವರೇ ನಮ್ಮ ಜೀವ ತೆಗಿಬಾರದೇ…’ ಎಂದು ಅಳುವ ಶಕ್ತಿ ಇಲ್ಲದೆ ಕೋತಿ ಮರಿಯಂತೆ ನನ್ನನ್ನು ಅಪ್ಪಿಕೊಂಡಳು.

ಹಳೆಮನೆ ರಾಜಶೇಖರ
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (ಸ್ವಾಯತ್ತ), ಉಜಿರೆ


ಇದನ್ನೂ ಓದಿ: ಚಳ್ಳೆ ಹಣ್ಣಿನ ಮರದ ಮಹಿಮೆ: ಚಳ್ಳೆ ಹಣ್ಣಿನ ಉಪಯೋಗಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...