Homeಅಂಕಣಗಳುನಮ್ಮ ತೋಟದ ಸಾಲಿಗೆ ನೀವೂ ಬನ್ನಿಚಳ್ಳೆ ಹಣ್ಣಿನ ಮರದ ಮಹಿಮೆ: ಚಳ್ಳೆ ಹಣ್ಣಿನ ಉಪಯೋಗಗಳು

ಚಳ್ಳೆ ಹಣ್ಣಿನ ಮರದ ಮಹಿಮೆ: ಚಳ್ಳೆ ಹಣ್ಣಿನ ಉಪಯೋಗಗಳು

ನಮ್ಮ ಹಳ್ಳಿಯವರು "ಸರಿಯಾಗಿ ಚಳ್ಳೆ ಹಣ್ಣು ತಿನ್ನಿಸಿದೆ” ಎಂಬ ನುಡಿಗಟ್ಟು ಬಳಸುತ್ತಾರೆ. ನಾನು ಯಾರಿಗೂ ಚಳ್ಳೆಹಣ್ಣು ತಿನ್ನಿಸಿಲ್ಲ, ಆದರೆ ..

- Advertisement -
- Advertisement -

ನಮ್ಮ ತೋಟದ ಸಾಲಿಗೆ ನೀವೂ ಬನ್ನಿ… ಭಾಗ-9 

ನಾವು ಈ ಮರವನ್ನು ಕಡಿಯದೆ ಉಳಿಸಿಕೊಂಡಿರುವುದಕ್ಕೆ ಜನ ನಗುತ್ತಾರೆ. ಈ ಮರವನ್ನು ಕಡಿಯದೆ ಯಾಕೆ ಮರವಾಗಲು ಬಿಟ್ಟಿದ್ದಾರೆ ಎಂಬುದು ಇವರ ನಗೆಗೆ ಕಾರಣ.  ಏಕೆಂದರೆ ಅವರ ಪ್ರಕಾರ ಇದು “ಹಣ್ಣಿಗೆ ಹಣ್ಣಿನ ಮರವಲ್ಲ, ಮುಟ್ಟಿಗೆ ಮುಟ್ಟಿನ ಮರವಲ್ಲ, ಹೀಗಿರುವಾಗ ಸುಮ್ಮನೆ ಜಾಗ ತಿನ್ನುವ ಈ ಮರ ವೇಸ್ಟ್”.‌

ಈ ಮರವೂ ನಾವು ನೆಟ್ಟು ನೀರುಣಿಸಿ ಬೆಳೆಸಿದ್ದಲ್ಲ, ಹಕ್ಕಿ ತನ್ನ ಹಿಕ್ಕೆಯ ಜೊತೆ ಬೀಜ ಉದುರಿಸಿ ಉತ್ಪತ್ತಿ ಮಾಡಿದ ಮರ. ಈ ಮರವೀಗ ನಮ್ಮ ಅಚ್ಚುಮೆಚ್ಚು. ಬೇರೆಲ್ಲ ಹಣ್ಣಿನ ಮರಗಳಿಗಿಂತಲೂ ವಿಶೇಷ ಗೌರವ.

ಈ ಚಳ್ಳೆ ಹಣ್ಣುಗಳನ್ನು ನಾವು ಸಣ್ಣ ಹುಡುಗರಾಗಿದ್ದಾಗ ಗೊಣ್ಣೆ ಹಣ್ಣಿನ ಹೆಸರಿನಲ್ಲಿ ನಲುಬಿಕೊಂಡು ತಿಂದ ನೆನಪು. ಗೊಣ್ಣೆ ಹಣ್ಣು, ಸೊಳ್ಳೆ ಹಣ್ಣು, ಚಳ್ಳೆ ಹಣ್ಣು ಎಂಬ ಹೆಸರುಗಳಿಂದ ಕರೆಯಲ್ಪಡುವ ಈ ಹಣ್ಣು ಹೆಚ್ಚು ಬಳಕೆಯ ಹಣ್ಣಲ್ಲ. ಉದಾಸೀನಕ್ಕೆ ಒಳಗಾಗಿರುವ ಅನೇಕ ಒಳ್ಳೆಯ ಹಣ್ಣುಗಳಲ್ಲಿ ಇದೂ ಒಂದು ಎನ್ನಬಹುದು.

ಒಗರು ಮಿಶ್ರಿತ, ಸಾಧಾರಣ ಸಿಹಿಯ, ತಿಳಿ ಕಂದು ಬಣ್ಣದ ಈ ಹಣ್ಣುನ್ನು ತಿನ್ನಲು ರೂಢಿ ಮಾಡಿಕೊಂಡರೆ, ಇಷ್ಟವಾಗತೊಡಗುತ್ತದೆ. ಗಟ್ಟಿ ಬೀಜವುಳ್ಳ, ಲೋಳೆಯಂತೆ ಬಾಯಿಗೆ ಅಂಟಿಕೊಂಡು ನಲುಬಲು ಒತ್ತಾಯಿಸುವ ಈ ಹಣ್ಣು ಹಣ್ಣುಗಳಲ್ಲೇ ವಿಶಿಷ್ಟವಾದುದು. ಅಪಾರ ಜೀವ ಸತ್ವದಿಂದ ಕೂಡಿರುವ ಈ ಹಣ್ಣನ್ನು ಮಕ್ಕಳಿಗೆ ರೂಢಿ ಮಾಡಿಸಿದರೆ ಬಬಲ್‌ ಗಮ್‌ ಕಾಯಿಲೆಯಿಂದ ಹುಷಾರು ಮಾಡಬಹುದು.

ದೊಡ್ಡ ಅಂದರೆ ದ್ರಾಕ್ಷಿ ಗಾತ್ರದ, ಸಣ್ಣ ಅಂದರೆ ಅವರೆ ಕಾಳು ಗಾತ್ರದ ಹೀಗೆ ಎರಡು ಬಗೆಯ ಪ್ರಭೇದಗಳಿವೆ. ಏಪ್ರಿಲ್‌ ಮೇ ತಿಂಗಳಲ್ಲಿ ಕಾಯಿ, ಜೂನ್‌ ಜುಲೈ ತಿಂಗಳಲ್ಲಿ ಹಣ್ಣು ಲಭ್ಯ.

ಒಮ್ಮೆ ನಾಟಕ ನೋಡಲೆಂದು ಸಾಣೆಹಳ್ಳಿಗೆ ಹೋಗಿದ್ದಾಗ ಮಠದಲ್ಲಿ ಊಟಕ್ಕೆ ಒಂದು ಬಗೆಯ ಉಪ್ಪಿನಕಾಯಿ ಇಟ್ಟರು. ನಮ್ಮ ತುಮಕೂರು ಸೀಮೆಯ ಜನಕ್ಕೆ ಗೊತ್ತಿಲ್ಲದ ಹೊಸರುಚಿಯ ಉಪ್ಪಿನಕಾಯಿ ಅದಾಗಿತ್ತು. ನನ್ನ ಹೆಂಡತಿ ಆ ಬಗೆಗೆ ವಿಚಾರಿಸಲಾಗಿ ಅದು “ಚಳ್ಳೆಕಾಯಿ” ಉಪ್ಪಿನಕಾಯಿ  ಎಂದು ಗೊತ್ತಾಯಿತು. ತಕ್ಷಣವೇ ನಮ್ಮ ತೋಟದ ಆ ಚಳ್ಳೆ ಹಣ್ಣಿನ ಮರ ನಮ್ಮ ಮನಸ್ಸಿನಲ್ಲಿ ಮಾವಿನ ಮರಕ್ಕಿಂತ ಎತ್ತರ ಬೆಳೆದು ನಿಂತಿತ್ತು. ಎಂಥ ವಿಶಿಷ್ಟ ರುಚಿ, ಏನು ಮಜವಾದ ಒಗರು. ಲೈಕ್‌ ಅಟ್‌ ಫಸ್ಟ್‌ ಟೇಸ್ಟ್‌ ಎನ್ನಬಹುದು. ನಾವೂ ಆ ಮರವನ್ನು ಕಡಿಯದೆ ಗೌರವದಿಂದ ಉಳಿಸಿಕೊಂಡದ್ದಕ್ಕೆ ಹೆಮ್ಮೆ ಎನಿಸಿತು.

ಊರಿಗೆ ಮರಳಿದ್ದೇ ತಡ ನಾವಿಬ್ಬರೂ ಆ ಮರದ ಬಳಿ ಹೋಗಿ, ಚಳ್ಳೆ ಹೀಚುಗಳಿಂದ ಜೋಲಾಡುತ್ತಿದ್ದ ಆ ಮರವನ್ನು ನೇವರಿಸಿ ಬಂದೆವು. ಅಂದಿನಿಂದ ಪ್ರತಿ ವರ್ಷ ಚಳ್ಳೆಕಾಯಿಯ ಉಪ್ಪಿನಕಾಯಿ ನಮ್ಮ ಮಾವು, ಅಮಟೆ, ನಿಂಬೆ, ಯಳ್ಳಿ, ಹುಣಿಸೆ ಮುಂತಾದ ಉಪ್ಪಿನಕಾಯಿಗಳ ಸಾಲಿನಲ್ಲಿ ಉನ್ನತ ಸ್ಥಾನ ಪಡೆಯಿತು. ಮನೆಗೆ ಬಂದವರಿಗೆಲ್ಲ ಇದರ ರುಚಿಯನ್ನು ತೋರಿಸುವ ಪರಿಪಾಠ ನಡೆದಿದೆ.

ಈ ಮಧ್ಯೆ ಮರದಲ್ಲಿ ಇನ್ನು ಉಳಿದಿದ್ದ ಹಣ್ಣುಗಳನ್ನು ಬಿಡಿಸಿ ಬೆಲ್ಲದೊಂದಿಗೆ ಬೆರಸಿ ವೈನ್‌ ತಯಾರಿಸುವ ಪ್ರಯತ್ನ ಮಾಡಿದೆ. ಮೊದಲು ಹಣ್ಣುಗಳನ್ನು ಒಂದು ಮಡಕೆಗೆ ಕಿವುಚಿ ಬೀಜ ಬೇರ್ಪಡಿಸಿ ಅದಕ್ಕೆ ಎರಡರಷ್ಟು ಪುಡಿಮಾಡಿಟ್ಟುಕೊಂಡ ಬೆಲ್ಲ ಸೇರಿಸಿದೆ. ಇದಕ್ಕೆ ಈಸ್ಟ್‌ ಬೆರೆಸುವ ಗೋಚಿಗೆ ಹೋಗಲಿಲ್ಲ. ಮಡಕೆಯ ಮುಚ್ಚಳ ಮುಚ್ಚಿ ಒಂದು ತಿಂಗಳವರೆಗೆ ಇಟ್ಟು ವಾರಕ್ಕೊಮ್ಮೆ ತಿರುವುತ್ತಾ ಬಂದೆ. ನಂತರ ಇಳಿದುಕೊಂಡಿದ್ದ ಚಳ್ಳೆ ಹಣ್ಣಿನ ರಸವನ್ನು ಸುರಿದುಕೊಂಡು ಬಾಟಲ್‌ನಲ್ಲಿ ಸಂಗ್ರಹಿಸಿದೆ. ಗಟ್ಟಿಯಾಗಿ ಜೇನುತುಪ್ಪದಂತಿರುವ ಈ ರಸವನ್ನು ಸ್ವಲ್ಪ ನೀರು ಬೆರೆಸಿಕೊಂಡು ಕುಡಿದರೆ ಒಳ್ಳೆಯದು. ಎಷ್ಟು ದಿನ ಇಟ್ಟರೂ ಕೆಡುವುದಿಲ್ಲ. ಮನೆಗೆ ಬಂದ ಗೆಳೆಯರಿಗೆ ಈ ಬಗೆಯ ಪೇಯವನ್ನು ಜೂಸ್‌ ಹೆಸರಿನಲ್ಲಿ ಕೊಟ್ಟು ಕುಡಿಸಿದ್ದೇವೆ. ನಮ್ಮ ಜನಪದರು ಯಾರನ್ನಾದರು ಪಿಗ್ಗಿ ಬೀಳಿಸುವುದಕ್ಕೆ ತಮಾಷೆಯಾಗಿ “ಸರಿಯಾಗಿ ಚಳ್ಳೆ ಹಣ್ಣು ತಿನ್ನಿಸಿದೆ” ಎಂಬ ನುಡಿಗಟ್ಟು ಬಳಸುತ್ತಾರೆ. ನಾನು ಯಾರಿಗೂ ಚಳ್ಳೆಹಣ್ಣು ತಿನ್ನಿಸಿಲ್ಲ, ಆದರೆ …

ಕೃಷ್ಣಮೂರ್ತಿ ಬಿಳಿಗೆರೆ

(ಹುಳಿಯಾರು ಬಿಎಂಎಸ್‌ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರು. ತಮ್ಮ ತೋಟದಲ್ಲಿ ಸಹಜ ಕೃಷಿ ಮಾಡುತ್ತಲೇ ಕೃಷಿ ಶೋಧನೆಯಲ್ಲಿ ತೊಡಗಿಸಿಕೊಂಡಿರುವ ಇವರು ಸಾವಿರ ಕಣ್ಣಿನ ನವಿಲು, ಕಿಂಚಿತ್ತು ಪ್ರೀತಿಯ ಬದುಕು, ದಾಸಯ್ಯ ಇದು ಕನಸೇನಯ್ಯ, ಧರೆ ಮೇಲೆ ಉರಿಪಾದ, ಮಳೆ ನೀರ ಕುಡಿ, ಅನ್ನ ದೇವರ ಮುಂದೆ, ಮರದಡಿಯ ಮನುಷ್ಯ ಸೇರಿದಂತೆ ಹಲವು ಪುಸ್ತಕಗಳನ್ನು ರಚಿಸಿದ್ದಾರೆ.)


ಇದನ್ನೂ ಓದಿ: ನಮ್ಮ ತೋಟದ ಸಾಲಿಗೆ ನೀವೂ ಬನ್ನಿ-3: ಶಂಖದ ಹುಳುವಿನ ಮಾಮೇರಿ ಸೈನ್ಯದ ಬಗ್ಗೆ ನಿಮಗೆ ಗೊತ್ತೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

4 COMMENTS

  1. ಚಳ್ಳೆಹಣ್ಣಿನ ಉಪ್ಪಿನಕಾಯಿ ವಿಷಯ ಓದಿ ಆಶ್ಚರ್ಯವಾಯಿತು. ನಮಗೆ ಮಾವಿನಕಾಯಿ, ಮಿಡಿ ಮಾವಿನಕಾಯಿ, ನಿಂಬೆ ಉಪ್ಪಿನಕಾಯಿ ಗೊತ್ತು‌. ಚಳ್ಳೆಹಣ್ಣಿನ ಉಪ್ಪಿನಕಾಯಿ ಹೇಗಿರಬಹುದು ಅಂತಾ ಆಲೋಚಿಸುತ್ತಿದ್ದೇನೆ.
    ನನಗೆ ಅರ್ಧ ಕೆಜಿಯಷ್ಟು ಚಳ್ಳೆಹಣ್ಣಿನ ಉಪ್ಪಿನಕಾಯಿಯನ್ನ ಅಂಚೆ ಇಲ್ಲವೇ ಕೂರಿಯರ್ ಮೂಲಕ ಕಳುಹಿಸಿ ಜೊಡುವಿರಾ. ಪೋನ್ ಪೇ ಮೂಲಕ ಹಣ ಸಂದಾಯ ಮಾಡುತ್ತೇನೆ.
    ವ್ಯವಹಾರ ಅನ್ನಬೇಡಿ ಆಹಾರ ಸಂಸ್ಕೃತಿಗಳ ಪರಿಚಯಿಸುವಿಕೆ ಎಂದು ಭಾವಿಸಲು ಮನವಿ.
    ಮೊಬೈಲ್ ಸಂಖ್ಯೆ: 98869 40339.

  2. ಚಳ್ಳೆಹಣ್ಣು ನನಗೂ ಗೊತ್ತು ನಮ್ಮ ತೋಟದ ಮೂಲೆಯಲ್ಲಿ ಒಂದು ದೊಡ್ಡ ಮರವಿತ್ತು. ಗೊಂಚಲು ಗೊಂಚಲು ಕಾಯಿ ಇರುತ್ತಿದ್ದವು. ಕಾಯಿಯಲ್ಲಿ ತುಂಬಾ ಲೋಳೆ, ಹಣ್ಣಿನಲ್ಲಿ ಕಡಿಮೆ ಲೋಳೆಯಿದ್ದ ನೆನಪು. ಉಪ್ಪಿನಕಾಯಿಯಲ್ಲಿ ಲೋಳೆಯೆ ಇರುವುದಿಲ್ಲ, ಏಕೆಂದರೆ ಉಪ್ಪಿನ ನೀರಿನಲ್ಲಿ ವಾರ ಹದಿನೈದು ದಿನಗಳವರೆಗೂ ಕಾಯಿಗಳನ್ನ ಬಿಟ್ಟಿರುತ್ತಾರೆ. ಹಣ್ಣು ಮತ್ತು ಉಪ್ಪಿನಕಾಯಿ ತಿನ್ನಲು ತುಂಬಾ ಚನ್ನಾಗಿರುತ್ತವೆ.ಅ ಮರ ಈಗಲೂ ನಮ್ಮ ತೋಟದಲ್ಲಿದೆ.

  3. I have heard the name of that fruit and the idiom connected to it right from childhood
    Today knowing more about it I really felt happy
    Thanks a lot

  4. ಗುರುಗಳೇ ಈ ಸೊಳ್ಳೆಹಣ್ಣಿನ ಮರಗಳು ನಮ್ಮೂರಿನ ತೋಟದ ಸಾಲುಗಳು ಉದಿ ಬದುಗಳಲ್ಲಿ ಬಹಳಷ್ಟಿದ್ದವು ನಾವು ಚಿಕ್ಕವರಿದ್ದಾಗ ನವಳುತ್ತ ನವಳುತ್ತ ತಿಂದ ನೆನಪುಗಳು ಅಜರಾಮರ ಹಾಗೆ ನಮ್ಮ ಹರಿದ ಪುಸ್ತಕದ ಪುಟಗಳನ್ನು ಮತ್ತೆ ಜೋಡಿಸಲು ಈ ಗೊಣ್ಣೆಹಣ್ಣಿನ ಅಂಟು ಬಳಸುತ್ತಿದ್ದುದು ಸ್ಮರಣೆಯಾಗುತ್ತಿದೆ. ಹಾಗೆಯೇ ಬಹಳಷ್ಟು ಬಾರಿ ಕಾರಾಹುಣ್ಣಿಮೆಯ ದಿನ ಎತ್ತುಗಳ ಕೊಂಬುಗಳನ್ನು ಸಿಂಗರಿಸಲು ಹುಣಸೆ ಬೀಜದ ಸರಿ ಮಾಡಲಿಲ್ಲವಾದರೆ ಇದೇ ಸೊಳ್ಳೆಹಣ್ಣಿನ ಅಂಟಿನ ಮೊರೆ ಹೋದದ್ದೂ ಉಂಟು. ಆದರೆ ಇಂದು ಬಹುತೇಕ ಮರಗಳು ಅಡಕೆಯೆಂಬ ಅನಾಗರೀಕ ಬೆಳೆಯ ಹಿಂದೆ ಬೀಳಲು ತೋಟ ಹೊಲಗಳಲ್ಲಿ ಬದುವಿನಂಚಿನ ಗಿಡ ಮರಗಳು ಸಮ್ಮೂಲವಾಗಿ ನಾಶವಾಗುತ್ತಿವೆ..

LEAVE A REPLY

Please enter your comment!
Please enter your name here

- Advertisment -

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...

‘ಬೀಬಿ ನೀನು ಅಡಗಿಕೊಳ್ಳಲು ಸಾಧ್ಯವಿಲ್ಲ’: ವಾಷಿಂಗ್ಟನ್‌ ಗೆ ಭೇಟಿ ನೀಡಿದ ನೆತನ್ಯಾಹು ವಿರುದ್ಧ ಜನಾಕ್ರೋಶ: ಐಸಿಸಿ ವಾರಂಟ್ ನಿರ್ಲಕ್ಷಿಸಿ ಟ್ರಂಪ್ ಆತಿಥ್ಯ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಮಾತುಕತೆಗಾಗಿ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡುತ್ತಿದ್ದಂತೆಯೇ, ರಾಜಧಾನಿಯಾದ್ಯಂತ ಅವರ ವಿರುದ್ಧ ಕಟು ಆಕ್ರೋಶ ಮತ್ತು ಪ್ರತಿಭಟನೆಗಳ ಕಾವು ತೀವ್ರಗೊಂಡಿದೆ. ಅಂತರರಾಷ್ಟ್ರೀಯ...

SIR: ಕರ್ನಾಟಕದಲ್ಲಿ 43 ಲಕ್ಷಕ್ಕೂ ಹೆಚ್ಚು ಜನರಿಂದ ಸಿಗದ ಸಹಿ ಮಾಡಿದ ನಮೂನೆ; ಕರಡು ಪಟ್ಟಿಯಿಂದ ಹೆಸರು ಕೈಬಿಡುವ ಭೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಮುಖ ಮೈಲಿಗಲ್ಲುಗಳನ್ನು ತಲುಪಿದ್ದು, ರಾಜ್ಯಾದ್ಯಂತ ಶೇಕಡಾ 77ರಷ್ಟು ಗಣತಿ ನಮೂನೆಗಳು ಡಿಜಿಟಲೀಕರಣಗೊಂಡಿವೆ. ಆದಾಗ್ಯೂ, ರಾಜ್ಯದ 43.24 ಲಕ್ಷಕ್ಕೂ ಹೆಚ್ಚು ಮತದಾರರು...