ನಾಗಾಲ್ಯಾಂಡ್‌ನ ಸೋಮ ಜಿಲ್ಲೆಯಲ್ಲಿ ಸೇನೆಯಿಂದ ನಡೆದ ನಾಗರಿಕರ ಹತ್ಯೆಯ ಆಕ್ರೋಶದ ನಡುವೆ, ಪ್ರಭಾವಿ ಬುಡಕಟ್ಟು ಸಂಸ್ಥೆಯಾದ ಕೊನ್ಯಾಕ್ ಯೂನಿಯನ್ ರಾಷ್ಟ್ರಪತಿಗಳಿಗೆ ಐದು ಅಂಶಗಳ ಜ್ಞಾಪಕ ಪತ್ರವನ್ನು ಕಳುಹಿಸಿದೆ. ಘಟನೆಯಲ್ಲಿ ಭಾಗಿಯಾಗಿರುವ ರಕ್ಷಣಾ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಮತ್ತು ಈಶಾನ್ಯ ಭಾರತದಲ್ಲಿ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯನ್ನು (AFSPA) ರದ್ದುಗೊಳಿಸುವಂತೆ ಕೋರಿದೆ.
ಕೊನ್ಯಾಕ್ ಯೂನಿಯನ್, ಸಮರ್ಥ ತನಿಖಾ ಸಂಸ್ಥೆಯ ಅಡಿಯಲ್ಲಿ ಸ್ವತಂತ್ರ ತನಿಖೆ ನಡೆಸುವಂತೆ ಮತ್ತು ಅಸ್ಸಾಂ ರೈಫಲ್ಸ್ ಅನ್ನು ಸೋಮ ಜಿಲ್ಲೆಯಿಂದ ತೆರವು ಮಾಡುವಂತೆ ಒತ್ತಾಯಿಸಿದೆ. “ಘಟನೆಯಲ್ಲಿ ಇಂಟಲಿಜೆಂಟ್ ಮೂಲಗಳು ಸಂಪೂರ್ಣ ವಿಫಲತೆ ಹೊಂದಿದೆ ಎಂದು ತೋರುತ್ತದೆ. ಗುರುತು ತಪ್ಪಾಗಿದ್ದರಿಂದ ಘಟನೆ ನಡೆದಿಲ್ಲ, ಮುಗ್ಧ ನಾಗರಿಕರ ಮೇಲೆ ಯೋಜಿತ ದಾಳಿ ನಡೆಸಲಾಗಿದೆ” ಎಂದು ಕೊನ್ಯಾಕ್ ಯೂನಿಯನ್ ಆರೋಪಿಸಿದೆ.
ಇದನ್ನೂ ಓದಿ:ನಾಗಾಲ್ಯಾಂಡ್ ಹತ್ಯಾಕಾಂಡ: AFSPA ರದ್ದತಿಗೆ ಮೇಘಾಲಯ ಮತ್ತು ನಾಗಾಲ್ಯಾಂಡ್ ಸಿಎಂಗಳ ಒತ್ತಾಯ
ಕೊನ್ಯಾಕ್ ಒಕ್ಕೂಟದ ಬೇಡಿಕೆಗಳು
- ಸಮರ್ಥ ತನಿಖಾ ಸಂಸ್ಥೆಯ ಅಡಿಯಲ್ಲಿ ಸ್ವತಂತ್ರ ತನಿಖೆಯನ್ನು ತಕ್ಷಣವೇ ನೇಮಿಸಬೇಕು ಮತ್ತು ನಾಗಾ ನಾಗರಿಕ ಸಮಾಜದ ಇಬ್ಬರು ಸದಸ್ಯರನ್ನು ವಿಶೇಷ ತನಿಖಾ ತಂಡಕ್ಕೆ ಸೇರಿಸಿಕೊಳ್ಳಬೇಕು.
- ಘಟನೆಯಲ್ಲಿ ಭಾಗಿಯಾಗಿರುವ ಎಲ್ಲಾ ಸೇನಾ ಪಡೆಗಳು ಅಥವಾ ಸೇನಾ ಸಿಬ್ಬಂದಿಯನ್ನು ಗುರುತಿಸಿ, ಅನ್ವಯವಾಗುವ ಸಿವಿಲ್ ನ್ಯಾಯಾಲಯದ ಅಡಿಯಲ್ಲಿ ಪ್ರಕರಣ ದಾಖಲಿಸಿ ಶಿಕ್ಷೆಗೆ ಒಳಪಡಿಸಬೇಕು
- ಹತ್ಯಾಕಾಂಡದಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ತೆಗೆದುಕೊಂಡ ಕ್ರಮವನ್ನು 30 ದಿನಗಳಲ್ಲಿ ಸಾರ್ವಜನಿಕ ಡೊಮೇನ್‌ಗೆ ಸೇರಿಸಬೇಕು.
- ಹತ್ಯಾಕಾಂಡವನ್ನು ನಡೆಸಿ, ತನ್ನ ನಾಗರಿಕರಿಗೆ ಭದ್ರತೆಯನ್ನು ಒದಗಿಸಲು ವಿಫಲವಾದ ಕಾರಣ ಅಸ್ಸಾಂ ರೈಫಲ್ಸ್ ನೈತಿಕ ಆಧಾರದ ಮೇಲೆ ಸೋನ್ ಜಿಲ್ಲೆಯನ್ನು ತಕ್ಷಣವೇ ಖಾಲಿ ಮಾಡಬೇಕು.
- ಸಂಪೂರ್ಣ ಈಶಾನ್ಯ ಪ್ರದೇಶದಿಂದ ತಕ್ಷಣವೇ AFSPA ಅನ್ನು ರದ್ದುಗೊಳಿಸುವುದು.
ಇದನ್ನೂ ಓದಿ:ನಾಗಾಲ್ಯಾಂಡ್ ಹತ್ಯಾಕಾಂಡ: ಈಶಾನ್ಯ ಭಾರತದಲ್ಲಿ AFSPA ರದ್ದತಿ ಹೋರಾಟಕ್ಕೆ ಮತ್ತಷ್ಟು ಧ್ವನಿ
“ಕೊನ್ಯಾಕ್ ಯೂನಿಯನ್ ಮುಗ್ಧ ನಾಗರಿಕರ ವಿರುದ್ಧದ ಈ ಅನಾಗರಿಕ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತದೆ. ಯೂನಿಯನ್ ಅಪರಾಧಿಗಳ ವಿರುದ್ಧ ದೃಢವಾಗಿ ನಿಲ್ಲುತ್ತದೆ ಮತ್ತು ತಕ್ಷಣದ ತನಿಖೆಗೆ ಒತ್ತಾಯಿಸುತ್ತದೆ. ಅನ್ವಯವಾಗುವ ಸಿವಿಲ್ ನ್ಯಾಯಾಲಯದ ಪ್ರಕಾರ ಪ್ರಕರಣದ ದಾಖಲಿಸಲು ಒತ್ತಾಯಿಸುತ್ತದೆ” ಎಂದು ಬುಡಕಟ್ಟು ಯುನಿಯನ್ ಕೊನ್ಯಾಕ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಈ ಮಧ್ಯೆ, ಘಟನೆಯ ಹಿನ್ನಲೆಯಲ್ಲಿ ಕೊನ್ಯಾಕ್ ವಿದ್ಯಾರ್ಥಿಗಳ ಒಕ್ಕೂಟವು ಮಂಗಳವಾರದಿಂದ ಒಂದು ವಾರದ ಶೋಕಾಚರಣೆಗೆ ಕರೆ ನೀಡಿದೆ. “ಶೋಕಾಚರಣೆಯ ಪ್ರಾರಂಭವಾಗಿ ಡಿಸೆಂಬರ್ 7 ರಂದು ಬೆಳಿಗ್ಗೆ 6 ರಿಂದ ಸಂಜೆ 5 ರವರೆಗೆ ಸೋಮ ಜಿಲ್ಲೆಯಲ್ಲಿ ಸಂಪೂರ್ಣ ಬಂದ್ ನಡೆಯಲಿದೆ” ಎಂದು ಕೊನ್ಯಾಕ್ ವಿದ್ಯಾರ್ಥಿ ಒಕ್ಕೂಟ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಆಡಳಿತ, ಪೊಲೀಸ್ ಸಿಬ್ಬಂದಿ, ವೈದ್ಯಕೀಯ ಸೇವೆಗಳು, ಅಗ್ನಿಶಾಮಕ ತುರ್ತು, ವಿದ್ಯುತ್ ಮತ್ತು ಸಾರ್ವಜನಿಕ ಆರೋಗ್ಯ ತಾಂತ್ರಿಕ ಇಲಾಖೆಗೆ ಬಂದ್‌ನಿಂದ ವಿನಾಯಿತಿ ನೀಡಲಾಗಿದೆ. ಆದರೆ ಅರೆ ಮಿಲಿಟರಿ ವಿಭಾಗವು ಬಂದ್‌ನಿಂದ ವಿನಾಯಿತಿ ಪಡೆದಿಲ್ಲ. ಬಂದ್ ಸಮಯದಲ್ಲಿ ಸಾರ್ವಜನಿಕ ಸಂಚಾರವನ್ನು ನಿರ್ಬಂಧಿಸಲಾಗುವುದು ಎಂದು ಕೊನ್ಯಾಕ್ ವಿದ್ಯಾರ್ಥಿಗಳ ಸಂಘಟನೆ ತಿಳಿಸಿದೆ.
ಡಿಸೆಂಬರ್ 4 ರಂದು, ಭದ್ರತಾ ಪಡೆಗಳು ನಾಗಾಲ್ಯಾಂಡ್‌ನ ಸೋನ್ ಜಿಲ್ಲೆಯಲ್ಲಿ ಸತತ ಮೂರು ಹಂತಗಳಲ್ಲಿ 14 ಜನರನ್ನು ಕೊಂದಿವೆ. 11 ಮಂದಿ ಘಟನೆಯಲ್ಲಿ ಗಾಯಗೊಂಡಿದ್ದಾರೆ. ಜೊತೆಗೆ ಗಲಭೆಯಲ್ಲಿ ಒಬ್ಬ ಯೋಧ ಕೂಡ ಸಾವನ್ನಪ್ಪಿದ್ದಾರೆ.


