Homeಮುಖಪುಟಬೆಂಗಳೂರಿನ ಮುಸ್ಲಿಂ ಯುವಕನಿಗೆ ಥಳಿತ, ಮೂತ್ರ ಕುಡಿಸಲು ಒತ್ತಾಯ ಆರೋಪ: ಸಬ್ ಇನ್ಸ್‌ಪೆಕ್ಟರ್ ಅಮಾನತು

ಬೆಂಗಳೂರಿನ ಮುಸ್ಲಿಂ ಯುವಕನಿಗೆ ಥಳಿತ, ಮೂತ್ರ ಕುಡಿಸಲು ಒತ್ತಾಯ ಆರೋಪ: ಸಬ್ ಇನ್ಸ್‌ಪೆಕ್ಟರ್ ಅಮಾನತು

ಈ ವರ್ಷದಲ್ಲಿ ಇದು ಮೂರನೆ ಕಸ್ಟಡಿ ಹಿಂಸೆ ಪ್ರಕರಣವಾಗಿದೆ. ಈ ಹಿಂದೆಯೂ ಹಲವು ಪೊಲೀಸರು ಕಾನೂನುಬಾಹಿರ ಕೃತ್ಯಗಳಿಗಾಗಿ ಸಸ್ಪೆಂಡ್ ಆಗಿದ್ದಾರೆ.

- Advertisement -
- Advertisement -

ಬೆಂಗಳೂರಿನಲ್ಲಿ ಕಸ್ಟಡಿ ಚಿತ್ರಹಿಂಸೆ ಪ್ರಕರಣಗಳು ಹೆಚ್ಚುತ್ತಿದ್ದು 23 ವರ್ಷದ ತೌಸೀಫ್ ಎಂಬ ಮುಸ್ಲಿಂ ಯುವಕನಿಗೆ ಬ್ಯಾಟರಾಯನಪುರ ಠಾಣೆ ಪೊಲೀಸರು ಗಂಭೀರವಾಗಿ ಥಳಿಸಿ, ಮೂತ್ರ ಕುಡಿಸಲು ಒತ್ತಾಯಿಸಿದ ಪ್ರಕರಣದಲ್ಲಿ ಸಬ್ ಇನ್ಸ್ ಪೆಕ್ಟರ್ ಹರೀಶ್ ಎಂಬುವವರನ್ನು ಅಮಾನತು ಮಾಡಲಾಗಿದೆ.

ಈ ಪ್ರಕರಣದ ಕುರಿತು ಸೋಮವಾರ ಮಧ್ಯಂತರ ವರದಿಯನ್ನು ಸಲ್ಲಿಸಲಾಗಿದೆ. ಅದರ ಆಧಾರದ ಮೇಲೆ ಕರ್ತವ್ಯಲೋಪ, ಪೊಲೀಸ್ ಠಾಣೆಗೆ ವರದಿ ಮಾಡದ ಮತ್ತು ಪ್ರಕರಣವನ್ನು ದಾಖಲಿಸದ ಕಾರಣ ಸಬ್‌ ಇನ್ಸ್‌ಪೆಕ್ಟರ್ ಹರೀಶ್ ಅವರನ್ನು ಅಮಾನತುಗೊಳಿಸಲಾಗಿದೆ. ಸಂತ್ರಸ್ತನ ಕುಟುಂಬದವರು ಮಾಡಿರುವ ಆರೋಪಗಳ ಬಗ್ಗೆ ಇಲಾಖಾ ತನಿಖೆಗೂ ಆದೇಶಿಸಲಾಗಿದೆ ಎಂದು ಪೊಲೀಸ್ ಉಪ ಆಯುಕ್ತ (ಪಶ್ಚಿಮ) ಸಂಜೀವ್ ಎಂ ಪಾಟೀಲ್ ಹೇಳಿಕೆ ಆಧರಿಸಿ ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಘಟನೆಯ ವಿವರ

ಯುವಕನೋರ್ವ ಗುದ್ದದಹಳ್ಳಿಯ ತಮ್ಮ ಮನೆ ಬಳಿ ಕುಳಿತುಕೊಂಡಿದ್ದನ್ನು ತೌಸೀಫ್ ಆಕ್ಷೇಪಿಸಿದ್ದ. ಆ ನಂತರ ಊರ ಮಂದಿಯ ಮಧ್ಯಸ್ಥಿಕೆಯೊಂದಿಗೆ ಆ ಯುವಕನಿಗೆ ಗುದ್ದದಹಳ್ಳಿಗೆ ಬರದಂತೆ ಎಚ್ಚರಿಕೆ ನೀಡಲಾಗಿತ್ತು. ಆದರೆ 8 ತಿಂಗಳ ನಂತರ, ಮೂರು ದಿನಗಳ ಹಿಂದೆ ಆ ಯುವಕ ಮತ್ತೇ ಗುದ್ದದಹಳ್ಳಿಗೆ ಬಂದಿದ್ದ. ಆ ವೇಳೆ ತೌಸೀಫ್ ಆ ಯುವಕನನ್ನು ದೂರ ಕರೆದುಕೊಂಡು ಹೋಗಿ ಪ್ರಶ್ನಿಸಿದ್ದಾನೆ. ಇದು ಪೊಲೀಸರಿಗೆ ತಿಳಿದು ಪೊಲೀಸರು ಇಬ್ಬರನ್ನೂ ವಿಚಾರಿಸಿದ ಬಳಿಕ ತೌಸೀಫ್ ನನ್ನು ಬ್ಯಾಟರಾಯನಪುರ ಠಾಣೆಗೆ ಕರೆದೊಯ್ದು ಹಲ್ಲೆ ನಡೆಸಿದ್ದಾರೆ ಎಂದು ತೌಸಿಫ್ ತಂದೆ ಅಸ್ಲಮ್ ಪಾಶ ಆರೋಪಿಸಿದ್ದಾರೆ.

‘ಠಾಣೆಯಲ್ಲಿ ಸರ್ಕಲ್ ಪೊಲೀಸ್ ಶಂಕರ್ ನಾಯಕ್, ಸಬ್ ಇನ್ಸ್ ಪೆಕ್ಟರ್ ಹರೀಶ್ ಉಪಸ್ಥಿತಿಯಲ್ಲಿ ಇತರ ಸಿಬ್ಬಂದಿ ತನ್ನ ಗಡ್ಡ ಕತ್ತರಿಸಿದ್ದಾರೆ. ಮುಂಜಾನೆ 2 ಗಂಟೆಯಿಂದ ಸುಮಾರು 5 ಗಂಟೆಯವರಗೆ ನಿರಂತರ 3 ಗಂಟೆಗಳ ಕಾಲ ಬ್ಯಾಟ್‌ನಿಂದ ಥಳಿಸಿದ್ದಾರೆ. ಬಾಯಾರಿಕೆ ತಣಿಸಲು ನೀರು ಕೇಳಿದಾಗ ಮೂತ್ರ ನೀಡಿ ಕುಡಿಸಲು ಒತ್ತಾಯಿಸಿದ್ದಾರೆ. ಕಾಲು, ಬೂಟುಗಳಿಂದ ತಲೆ, ಮುಖ, ಭುಜ, ಗುಪ್ತಾಂಗಕ್ಕೆ ಒದೆಯಲಾಗಿದೆ. ತೀವ್ರ ತೆರನಾದ ಥಳಿತದಿಂದ ಯುವಕನ ಕಾಲು ಬಾತುಕೊಂಡಿದೆ. ನಡೆದಾಡಲೂ ಸಾಧ್ಯವಾಗದೇ ಕೊನೆಗೆ ಮೂರ್ಛೆ ತಪ್ಪಿದ್ದೆ. ನಂತರ ಪೊಲೀಸ್ ಠಾಣೆ ಸ್ವಚ್ಛಗೊಳಿಸುವಂತೆ ಒತ್ತಾಯಿಸಿದರು. ಯಾವುದೇ ಪ್ರಕರಣ ದಾಖಲಿಸದ ಪೊಲೀಸರು, ಬಿಡುಗಡೆಗಾಗಿ 1 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದರು. ಶಾಸಕರಾದ ಜಮೀರ್ ಅಹ್ಮದ್ ಖಾನ್‌ರವರು ಮಧ್ಯಪ್ರವೇಶಿಸಿದ ಬಳಿಕ ಬಿಡುಗಡೆಗೊಳಿಸಿದ್ದಾರೆ’ ಎಂದು ತೌಸಿಫ್ ಆರೋಪಿಸಿದ್ದರು.

ತೀವ್ರ ಹಲ್ಲೆಗೆ ಒಳಗಾಗಿದ್ದ ತೌಸಿಫ್‌ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸೋಮವಾರ ಡಿಸ್ಚಾರ್ಜ್ ಮಾಡಲಾಗಿದೆ. ಅವರು ಈಗಲೂ ನೋವಿನಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ.

ಕರ್ನಾಟಕದಲ್ಲಿ ಕಸ್ಟಡಿ ಹಿಂಸಚಾರಗಳು ಹೆಚ್ಚುತ್ತಿರುವುದು ಆತಂಕಕಾರಿಯಾಗಿದೆ. ಮೇ ತಿಂಗಳಿನಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಿರುಗುಂದ ಗ್ರಾಮದ ದಲಿತ ಯುವಕನಿಗೆ ಮೂತ್ರ ಕುಡಿಸಿ ಅಮಾನವೀಯವಾಗಿ ನಡೆಸಿಕೊಂಡಿದ್ದ ಪ್ರಕರಣದಲ್ಲಿ ಗೋಣಿಬೀಡು PSI ಅರ್ಜುನ್ ಅವರನ್ನು ಸಿಐಡಿ ಪೊಲೀಸರು ಬಂಧಿಸಿದ್ದರು. ಸದ್ಯ ಅಮಾನತ್ತು ಶಿಕ್ಷೆ ಅನುಭವಿಸುತ್ತಿದ್ದಾರೆ.

ಇನ್ನೊಂದೆಡೆ ಅಕ್ಟೋಬರ್ 27 ರಂದು 22 ವರ್ಷದ ಯುವಕರೊಬ್ಬನನ್ನು ಬಂಧನದಲ್ಲಿಟ್ಟು ಸತತ ಚಿತ್ರಹಿಂಸೆ ನೀಡಿ ಆತ ತನ್ನ ಬಲಗೈ ಕಳೆದುಕೊಳ್ಳುವಂತೆ ಮಾಡಿದ ಆರೋಪದಲ್ಲಿ ಬೆಂಗಳೂರಿನ ವರ್ತೂರು ಪೊಲೀಸ್ ಠಾಣೆಯ ಮೂವರು ಪೊಲೀಸರನ್ನು ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಅಮಾನತುಗೊಳಿಸಿದ್ದಾರೆ. ಸಲ್ಮಾನ್ ಮೇಲೆ ಹಲ್ಲೆ ನಡೆಸಿರುವುದು ಹಿರಿಯ ಅಧಿಕಾರಿಯ ವಿಚಾರಣೆಯ ನಂತರ ಬೆಳಕಿಗೆ ಬಂದಿದ್ದು, ಹೆಡ್ ಕಾನ್‌ಸ್ಟೆಬಲ್‌ಗಳಾದ ನಾಗಭೂಷಣ ಗೌಡ, ನಾಗರಾಜ್ ಬಿ.ಎನ್ ಮತ್ತು ಶಿವಕುಮಾರ್ ಹೆಚ್ ಎಂಬುವವರನ್ನು ಅಮಾನತುಗೊಳಿಸಲಾಗಿದೆ. 

ಈ ರೀತಿಯ ಕಾನೂನು ಬಾಹಿರ ಹಿಂಸೆಗಳ ವಿರುದ್ಧ ಪಿಎಫ್‌ಐ ಸಂಘಟನೆ ದನಿ ಎತ್ತಿದೆ. “ಠಾಣೆಯಲ್ಲಿ ಪ್ರಕರಣ ಇತ್ಯರ್ಥಪಡಿಸಲು ಪೊಲೀಸರು ಇಂತಿಷ್ಟು ಮೊತ್ತಕ್ಕೆ ಬೇಡಿಕೆ ಇಡುವ ವಿಚಾರ ಗುಪ್ತವಾಗಿರುವುದೇನಲ್ಲ. ಬ್ಯಾಟರಾಯನ ಠಾಣೆಯಲ್ಲಿ ಕೇಳಿ ಬಂದಿರುವ ಪೊಲೀಸರು ಹಣಕ್ಕಾಗಿ ಬೇಡಿಕೆ ಇಟ್ಟಿರುವ ವಿಚಾರವೇ ವಾರದ ಹಿಂದೆ ವರ್ತೂರು ಠಾಣೆಯಲ್ಲೂ ಕೇಳಿ ಬಂದಿತ್ತು. ತಮ್ಮ ಹಣದಾಹಕ್ಕಾಗಿ ಯುವಕರಿಗೆ ಚಿತ್ರಹಿಂಸೆ ನೀಡುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಂಡು, ಜನಸಾಮಾನ್ಯರಿಗೆ ಕಿರುಕುಳ ನೀಡುವ ಇಂತಹ ಅನಿಷ್ಟ ಪದ್ಧತಿಗೆ ಅಂತ್ಯ ಕಾಣಿಸಬೇಕು” ಎಂದು ಪಿಎಫ್‌ಐ ಒತ್ತಾಯಿಸಿದೆ.


ಇದನ್ನೂ ಓದಿ: ಬೆಂಗಳೂರು: ಯುವಕನ ಬಲಗೈ ಕಟ್ ಆಗುವಂತೆ ಚಿತ್ರಹಿಂಸೆ ನೀಡಿದ್ದ ಮೂವರು ಪೊಲೀಸರ ಅಮಾನತು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...