Homeಮುಖಪುಟರೈತ ಹೋರಾಟಕ್ಕೆ ಒಂದು ವರ್ಷ; ಕಾಫಿ ಬೋರ್ಡ್ ನಿಷ್ಕ್ರಿಯಗೊಂಡ ಉದಾಹರಣೆಯಲ್ಲಿ ಎಪಿಎಂಸಿ ತಿದ್ದುಪಡಿಯ ಅಪಾಯ

ರೈತ ಹೋರಾಟಕ್ಕೆ ಒಂದು ವರ್ಷ; ಕಾಫಿ ಬೋರ್ಡ್ ನಿಷ್ಕ್ರಿಯಗೊಂಡ ಉದಾಹರಣೆಯಲ್ಲಿ ಎಪಿಎಂಸಿ ತಿದ್ದುಪಡಿಯ ಅಪಾಯ

- Advertisement -
- Advertisement -

ವಿವಾದಿತ ಕೃಷಿ ಕಾಯಿದೆಗಳ ವಿರುದ್ಧದ ರೈತರ ಹೋರಾಟಕ್ಕೆ ಒಂದು ವರ್ಷವಾಯಿತು. ಸುಮಾರು ಏಳುನೂರು ಜನ ರೈತರು ಪ್ರಾಣತೆತ್ತರು. ಶಾಂತಿಯುತವಾದ ಚಳವಳಿ ನಿರತ ರೈತರ ಮೇಲೆ ಜೀಪು ಹರಿಸಲಾಯಿತು. ಇಷ್ಟೆಲ್ಲ ಆದನಂತರ ಪ್ರಧಾನಿ ಈ ವಿವಾದಿತ ಕಾಯಿದೆಗಳನ್ನು ಹಿಂಪಡೆಯಲಾಗಿದೆ ಎಂದು ಘೋಷಿಸಿದ್ದಾರೆ. ಸಂಸತ್ತಿನಲ್ಲಿ 29 ನವೆಂಬರ್‌ನಂದು ಹಿಂಪಡೆಯಲಾಗಿದೆ ಕೂಡ. ಈ ಘೋಷಣೆಯ ಸಂದರ್ಭ ಮತ್ತು ರೀತಿ ಕೂಡಾ ಒಕ್ಕೂಟ ಸರ್ಕಾರದ ಮುಂದಿನ ನಡೆಯ ಬಗ್ಗೆ ಅನುಮಾನ ಹುಟ್ಟಿಸುವಂತಿದೆ. ಯಾಕೆಂದರೆ ಪ್ರಧಾನಿ ರೈತರಿಗೆ ಲಾಭದಾಯಕವಾದ ಕಾಯಿದೆಗಳ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಡಲು ನಾವು ವಿಫಲರಾಗಿದ್ದೇವೆ ಎಂಬ ಕಾರಣಕ್ಕಾಗಿ ದೇಶದ ಜನರ ಕ್ಷಮೆ ಯಾಚಿಸಿದ್ದಾರೆಯೇ ಹೊರತು, ಈ ಒಂದು ವರ್ಷ ಕಾಲ ರೈತ ಹೋರಾಟವನ್ನು ಕಡೆಗಣಿಸಿದ್ದಕ್ಕಾಗಲೀ, ಪ್ರಾಣ ಕಳೆದುಕೊಂಡ ರೈತರ ಬಗ್ಗೆಯಾಗಲೀ ಅಲ್ಲ. ಅಂದರೆ ಒಕ್ಕೂಟ ಸರ್ಕಾರ ಮಾನಸಿಕವಾಗಿ ಈಗಲೂ ಈ ಕಾಯಿದೆಗಳ ಪರವಾಗಿಯೇ ಇದೆ. ರೈತ ಹೋರಾಟಗಾರರೂ ಸಹ ಸಂಸತ್ತಿನಲ್ಲಿ ಈ ಕಾಯಿದೆಗಳನ್ನು ಹಿಂಪಡೆಯುವವರೆಗೂ, ಹಾಗೂ ಕನಿಷ್ಠ ಬೆಂಬಲ ಬೆಲೆ ಮಸೂದೆಯನ್ನು ಜಾರಿ ಮಾಡುವವರೆಗೂ ತಮ್ಮ ಹೋರಾಟಗಳನ್ನು ಮುಂದುವರೆಸುವುದಾಗಿ ಹೇಳಿದ್ದಾರೆ.

ನಿಯಂತ್ರಿತ ಮಾರುಕಟ್ಟೆಯ ಮೂಲಕ ರೈತನ ಬೆಳೆಗೆ ಸೂಕ್ತ ಬೆಲೆ ದೊರಕಿಸಿಕೊಡುವುದು, ರೈತನನ್ನು ದಲ್ಲಾಳ್ಳಿಗಳಿಂದ ರಕ್ಷಿಸುವುದು, ಸರ್ಕಾರಕ್ಕೆ ಬರಬೇಕಾದ ತೆರಿಗೆ ಸೋರಿಕೆಯಾಗದಂತೆ ನೋಡಿಕೊಳ್ಳುವುದೂ ಅಲ್ಲದೆ ಮಾರುಕಟ್ಟೆಗಳ ಅಭಿವೃದ್ಧಿ, ರೈತಭವನಗಳ ನಿರ್ಮಾಣ, ಮಾರುಕಟ್ಟೆಗಳಿಗೆ ಸಂಪರ್ಕ ಸಾಧಿಸುವ ರಸ್ತೆಗಳನ್ನು ಮಾಡುವುದು ಹೀಗೆ ಕೃಷಿವಲಯದ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಕಾರ್ಯಗಳು ಎ.ಪಿ.ಎಂ.ಸಿಯ ಕಾರ್ಯವ್ಯಾಪ್ತಿಯಲ್ಲಿ ಇದೆ. ಎ.ಪಿ.ಎಂ.ಸಿ. ಕಾಯಿದೆ ಜಾರಿಯಾಗಿ ದೇಶದ ಎಲ್ಲ ಕಡೆಗಳಲ್ಲಿ ಮಾರುಕಟ್ಟೆಗಳ ನಿರ್ಮಾಣವಾದವು. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಇಂದು ಹೆಚ್ಚಿನ ಎಲ್ಲ ತಾಲ್ಲೂಕುಗಳಲ್ಲಿ ಎ.ಪಿ.ಎಂ.ಸಿ. ಮಾರುಕಟ್ಟೆ ಇದೆ. ಕಾಲ ಕಾಲಕ್ಕೆ ಚುನಾವಣೆಗಳು ನಡೆಯುತ್ತವೆ. ಮಾರುಕಟ್ಟೆ ಸಮಿತಿಗಳಿವೆ. ಕಾಯಿದೆಯ ಪ್ರಕಾರ ರೈತರು, ವ್ಯಾಪಾರಿಗಳು ಯಾರೂ ಈ ಮಾರುಕಟ್ಟೆಗಳ ಹೊರಗೆ ವ್ಯಾಪಾರ ಮಾಡುವುದನ್ನು ನಿಷೇಧಿಸಲಾಗಿತ್ತು.

ಈಗ ಹಲವು ದಶಕಗಳ ನಂತರ ಮತ್ತೆ ರೈತನಿಗೆ ಉತ್ತಮ ಬೆಲೆ ದೊರಕಿಸಿಕೊಡುವ ನೆಪ ಹೇಳಿ ರೈತನಿಗೆ ತನ್ನ ಉತ್ಪನ್ನಗಳನ್ನು ಮಾರುಕಟ್ಟೆಗಳ ಹೊರಗೂ ಮಾರುವ ಸ್ವಾತಂತ್ರ್ಯವನ್ನು ನೀಡಲಾಗಿದೆ. ಇದರಿಂದ ರೈತ ತಾನು ಬೆಳೆದ ಬೆಳೆಗೆ ಉತ್ತಮ ಬೆಲೆಯನ್ನು ಪಡೆಯುವ ಚೌಕಾಸಿಯ ಬಲ ಹೆಚ್ಚುವುದೆಂದೂ ಹೇಳಲಾಗಿದೆ.

ಇವೆಲ್ಲದರಿಂದ ಒಂದು ವಿಚಾರ ಸ್ಪಷ್ಟವಾಗಿದೆ. ಇಷ್ಟು ವರ್ಷಗಳ ಕಾಲ ನಡೆಸಿದ ನಿಯಂತ್ರಿತ ಮಾರುಕಟ್ಟೆಯ ಪ್ರಯೋಗದಿಂದ ರೈತನಿಗೆ ಯೋಗ್ಯ ಬೆಲೆ ಕೊಡಿಸಲು ಸಾಧ್ಯವಾಗಿಲ್ಲ. ಮತ್ತು ಇತರ ಉದ್ದೇಶಗಳು ನಿರೀಕ್ಷಿತ ಮಟ್ಟದಲ್ಲಿ ಈಡೇರಿಲ್ಲ. ವ್ಯಾಪಾರಿಗಳು ಎ.ಪಿ.ಎಂ.ಸಿಯ ಕಣ್ಣು ತಪ್ಪಿಸುವ ಹಲವು ದಾರಿಗಳನ್ನು ಕಂಡುಕೊಂಡರು. ರೈತರು ದಲ್ಲಾಳಿಗಳ ಹಿಡಿತದಲ್ಲಿ ನರಳಿದರು.

ಕೆಲವು ಕಡೆಗಳ ಎ.ಪಿ.ಎಂ.ಸಿ ಸಮಿತಿಗಳಲ್ಲಿ ದಕ್ಷರೂ ಸೇವಾಮನೋಭಾವದವರೂ ಇರುವಾಗ ಮಾತ್ರ ರೈತರಿಗೆ ಕೆಲವು ಅನುಕೂಲಗಳಾದುವು. ಒಂದು ವ್ಯವಸ್ಥೆಯಾಗಿ ಈ ಸಮಿತಿಗಳು ರೈತರಲ್ಲಿ ಒಳ್ಳೆಯ ಭಾವನೆಯನ್ನೇನೂ ಮೂಡಿಸಲಿಲ್ಲ. ಆದ್ದರಿಂದ ಎಷ್ಟೋ ಕಡೆಗಳಲ್ಲಿ ರೈತರೂ ಎ.ಪಿ.ಎಂ.ಸಿ.ಯ ಹೊರಗೇ ವ್ಯವಹಾರ ನಡೆಸುತ್ತಾರೆ. ವಾಣಿಜ್ಯ ಬೆಳೆಗಳಲ್ಲಿ ಇದು ಎದ್ದು ಕಾಣುವಂತಿದೆ.

ಈಗ ಸರ್ಕಾರ ಈ ಸಮಿತಿಗಳನ್ನೇನೂ ರದ್ದು ಮಾಡುತ್ತಿಲ್ಲ. ಬದಲಿಗೆ ವಹಿವಾಟನ್ನು ರೈತನ ಆಯ್ಕೆಗೆ ಬಿಟ್ಟಿದೆ. ಆ ದೃಷ್ಟಿಯಿಂದ ರೈತ ಸ್ವತಂತ್ರ. ಆದರೆ ಇದು ಅರ್ಧ ಸತ್ಯ. ವ್ಯಾಪಾರಿಯೂ, ದಳ್ಳಾಳಿಯೂ ಆಮಟ್ಟಿಗೆ ಸ್ವತಂತ್ರನೇ ಆಗಿದ್ದಾನೆ. ಅಂದರೆ ಅವರಿಗೆ ಎ.ಪಿ.ಎಂ.ಸಿ.ಯ ನಿಯಂತ್ರಣ ಮುಕ್ತಾಯಗೊಂಡಿದೆ.

ಈಗ ನಾವು ಈ ಹಿನ್ನೆಲೆಯಲ್ಲಿ ಮುಂದಿನ ಸಾಧ್ಯತೆಗಳನ್ನು ಗಮನಿಸಬೇಕು. ಮುಕ್ತ ವ್ಯಾಪಾರ ಎಂದರೇನು ಎನ್ನುವುದನ್ನು ನಾವು ಇತ್ತೀಚಿನ ವರ್ಷಗಳಲ್ಲಿ ಚೆನ್ನಾಗಿ ಅರಿತಿದ್ದೇವೆ. ಎ.ಪಿ.ಎಂ.ಸಿ ಕಾಯಿದೆ ತಿದ್ದುಪಡಿಯ ಜೊತೆಗೆ ಸರ್ಕಾರ ಕೃಷಿ ಭೂಮಿಯ ಖರೀದಿಗಿದ್ದ ನಿರ್ಬಂಧಗಳನ್ನು ತೆಗೆದು ಹಾಕಿದೆ. ಇದರ ಮುಂದಿನ ಹೆಜ್ಜೆಯೇ ದೊಡ್ಡ ಪ್ರಮಾಣದ ಕಾರ್ಪೊರೆಟ್ ಕೃಷಿ. ಮತ್ತು ಈಗ ಎ.ಪಿ.ಎಂ.ಸಿ.ಯ ನಿರ್ಬಂಧವಿಲ್ಲದ ಕಾರ್ಪೊರೆಟ್ ವ್ಯಾಪಾರ. ಇದು ಆರಂಭದ ದಿನಗಳಲ್ಲಿ ಖಂಡಿತ ರೈತನಿಗೆ ಲಾಭದಾಯಕವಾಗಿ ಕಾಣಿಸುತ್ತದೆ. ನಿಯಂತ್ರಿತ ಮಾರುಕಟ್ಟೆಯೇ ರೈತನ ಶತ್ರು ಎಂಬ ಭಾವನೆ ಬರುವಂತೆ ಪ್ರಾರಂಭದ ದಿನಗಳಲ್ಲಿ ಒಳ್ಳೆಯ ಬೆಲೆ ಬರುವ ಸಾಧ್ಯತೆ ಇದೆ.

ಇದಕ್ಕೆ ಬಹಳ ಉತ್ತಮ ಉದಾಹರಣೆಯೆಂದರೆ ಕಾಫಿ ಬೆಳೆ. ಅಲ್ಲಿ ಭೂಮಿತಿ ಮೊದಲೇ ಇರಲಿಲ್ಲ. ಆದರೆ ಎಲ್ಲ ಬೆಳೆಗಳಿಗೂ ಮಾದರಿ ಎನ್ನಿಸುವಂತಹ ಉತ್ತಮ ನಿಯಂತ್ರಿತ ಮಾರುಕಟ್ಟೆ ಇತ್ತು. ಆದರೆ ಕಾಫಿ ಕೃಷಿ ಮತ್ತು ಮಾರಾಟದ ಬಗೆಗಿನ ನಿಯಂತ್ರಣ ಸಂಪೂರ್ಣ ತೆಗೆದ ನಂತರ ಈಗ ಏನಾಗಿದೆ ಎನ್ನುವುದು ಇತಿಹಾಸ.

ಕಾಫಿ ಬೆಳೆಯ ಅಭಿವೃದ್ಧಿ ಮತ್ತು ಮಾರಾಟಕ್ಕಾಗಿ ಬ್ರಿಟಿಷರ ಕಾಲದಲ್ಲೇ ಪ್ರಾರಂಭವಾದ ’ಕಾಫಿ ಬೋರ್ಡ್’, ದೇಶ ಸ್ವತಂತ್ರವಾದ ನಂತರ ಉಳಿದುಕೊಂಡು ಇನ್ನಷ್ಟು ಶಕ್ತವಾಗಿ ಮುಂದುವರಿಯಿತು. ಕಾಫಿ ಬೆಳೆಯ ಸಂಪೂರ್ಣ ನಿಯಂತ್ರಣ ಕಾಫಿ ಬೋರ್ಡಿನ ಕೈಯಲ್ಲಿತ್ತು. ಕಾಫಿ ಬೆಳೆಯುವ ಪ್ರದೇಶದ ವಿಸ್ತೀರ್ಣದ ನಿಯಂತ್ರಣ, ಲೆಕ್ಕ ಪತ್ರಗಳನ್ನಿಡುವುದು, ಸಂಗ್ರಹ ಮತ್ತು ಮಾರಾಟ ಅಷ್ಟೇ ಅಲ್ಲದೇ ಸಂಶೋಧನೆಗಳು ಕೂಡಾ ಕಾಫಿಬೋರ್ಡಿನ ಸಂಪೂರ್ಣ ಸ್ವಾಮ್ಯದಲ್ಲಿತ್ತು. ಕೃಷಿಕನಿಗೆ ಸರ್ಕಾರ ಅನುಮತಿಯೊಂದಿಗೆ ಕಾಫಿ ಬೆಳೆದು ಕಾಫಿ ಬೋರ್ಡಿನ ಗೋದಾಮಿಗೆ ತಂದು ಸುರಿಯುವುದಷ್ಟೇ ಕೆಲಸವಾಗಿತ್ತು. ಆಂತರಿಕ ಬಳಕೆಗೆ ಬೇಕಾದಷ್ಟನ್ನು ಬಿಡುಗಡೆಮಾಡಿ ಉಳಿದ ಎಲ್ಲ ಕಾಫಿಯನ್ನು ಕಾಫಿಬೋರ್ಡ್ ತಾನೇ ರಫ್ತು ಮಾಡಿ ಬೆಳಗಾರರಿಗೆ ಕಂತುಕಂತಾಗಿ ಹಣ ಪಾವತಿ ಮಾಡುತ್ತಿತ್ತು. ಈ ಕಂತಿನ ಹಣ ನಾಲ್ಕೈದು ವರ್ಷಗಳಿಗೂ ಚಾಚಿಕೊಂಡಿರುತ್ತಿದ್ದು ಪ್ರತಿ ವರ್ಷವೂ ನಿರಂತರವಾಗಿ ಹಣದ ಹರಿವಿರುತ್ತಿತ್ತು. ಇದರಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಳಿತವಾದಾಗಲೂ ಅದು ಬೆಳೆಗಾರರನ್ನು ಅಷ್ಟಾಗಿ ಬಾಧಿಸದೆ ಒಂದು ರೀತಿ ಬೆಲೆ ಸ್ಥಿರತೆಯ ಅನುಕೂಲ ದೊರೆಯುತ್ತಿತ್ತು. ಉಳಿದೆಲ್ಲಾ ಬೆಳೆಗಳು ಕಷ್ಟ ನಷ್ಟ ಅನುಭವಿಸುತ್ತಿದ್ದಾಗಲೂ ಕಾಫಿ ಬೆಳೆಗಾರ ಸದೃಢವಾಗಿದ್ದ.

ಈ ಕಾರಣಕ್ಕಾಗಿಯೇ ಎಂಬತ್ತರ ದಶಕದಲ್ಲಿ ಅನೇಕ ಬೆಳೆಗಾರರು ನಮಗೂ ಕಾಫಿ ಬೋರ್ಡಿನಂತಹ ವ್ಯವಸ್ಥೆ ಬೇಕೆಂದು ಕೇಳತೊಡಗಿದ್ದರು. ರೈತ ಸಂಘ ಕೂಡಾ ಎಲ್ಲ ಕೃಷಿ ಉತ್ಪನ್ನಗಳಿಗೆ ಕಾಫಿಬೋರ್ಡಿನಂತಹ ವ್ಯವಸ್ಥೆ ಸೂಕ್ತವೆಂದು ಹೇಳುತ್ತಿತ್ತು.

ಹಾಗಾದರೆ ಈ ಸಂತೃಪ್ತಿಯ ಭಾವದಲ್ಲಿದ್ದ ಕಾಫಿಗೆ ಬಂದ ವಿಪತ್ತೇನು?

ನಮ್ಮೆಲ್ಲ ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳಂತೆ ಕಾಫಿ ಬೋರ್ಡ್ ಕೂಡಾ ಜಡವಾಗುತ್ತ ಹೋಯಿತು. ನಮ್ಮ ರಫ್ತು ಚೆನ್ನಾಗಿದ್ದುದರಿಂದ ಆಂತರಿಕ ಮಾರುಕಟ್ಟೆಯನ್ನು ವಿಸ್ತರಿಸುವ ವಿಚಾರವನ್ನೇ ಮಾಡಲಿಲ್ಲ. ಎಲ್ಲಾ ಸಂಸ್ಥೆಗಳಂತೆ ಕಾಫಿ ಬೋರ್ಡಿನಲ್ಲೂ ಕೆಟ್ಟ ರಾಜಕಾರಣ ಪ್ರವೇಶಿಸಿತು. ಕಾಫಿ ಬೆಳೆಯ ಜ್ಞಾನವಿಲ್ಲದ ರಾಜಕಾರಣಿಗಳು ಕಾಫಿಬೋರ್ಡಿನ ನಿಯಂತ್ರಣ ಪಡೆದು ಅವರೇ ಐಷಾರಾಮಿಗಳಾದರು. ಕಾಫಿ ಬೋರ್ಡು ಬೆಳೆಗಾರರ ಸಂಸ್ಥೆಯಾಗಿ ಉಳಿದಿಲ್ಲ ಎಂಬ ಅತೃಪ್ತಿ ಬೆಳೆಗಾರರಲ್ಲಿ ಮೂಡಿತು. ಅದೇ ವೇಳೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಫಿ ಬೆಲೆ ಒಂದೇಸಮನೆ ಏರುತ್ತಿತ್ತು. ಅದರ ಫಲ ನಮಗೆ ಸಿಗುತ್ತಿಲ್ಲ ಎಂಬ ಕೂಗೆದ್ದಿತು.

ಎಲ್ಲ ಕಡೆ ಜಾಗತೀಕರಣದ ಗಾಳಿ ಬೀಸುತ್ತಿತ್ತು. ದೊಡ್ಡ ವ್ಯಾಪಾರಿಗಳು ಕಾಫಿ ವ್ಯಾಪಾರಕ್ಕಿಳಿಯಲು ಹೊಂಚುಹಾಕಿ ಕಾದಿದ್ದರು.

ಇದೇ ಸಮಯದಲ್ಲಿ ಕಾಫಿಯನ್ನು ಕಾಫಿ ಬೋರ್ಡಿನ ನಿಯಂತ್ರಣದಿಂದ ಬಿಡಿಸಿ ಮುಕ್ತ ಮಾರುಕಟ್ಟೆಗೆ ಅವಕಾಶ ನೀಡಬೇಕೆಂಬ ಕೂಗೆದ್ದಿತು.

ಮೊದಲೇ ಖಾಸಗೀಕರಣದತ್ತ ವಾಲಿದ್ದ ಅಂದಿನ ಸರ್ಕಾರ ಬಹಳ ಜಾಣತನದಿಂದ ಇದನ್ನು ಸಾಧಿಸಿತು. ಮೊದಲಿಗೆ ಶೇ.ಮೂವತ್ತರಷ್ಟು ಕಾಫಿಯನ್ನು ಬೆಳೆಗಾರರು ಯಾರಿಗೆ ಬೇಕಾದರೂ ಮುಕ್ತವಾಗಿ ಮಾರಬಹುದೆಂದು ಅನುಮತಿ ನೀಡಿತು. (30% ಎಫ್.ಎಸ್.ಕ್ಯು. ಅಂದರೆ ಫ್ರೀ ಸೇಲ್ ಕೋಟಾ). ಇದು ಕೋಟೆ ಬಾಗಿಲು ತೆಗೆದಂತಾಯಿತು. ಯಾರೂ ಈ ನಿಯಮವನ್ನು ಪಾಲಿಸಲಿಲ್ಲ. ಯಾಕೆಂದರೆ ಕಾಫಿಗೆ ಮುಕ್ತ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಕೊಟ್ಟ ಬೆಲೆ ಬೆಳೆಗಾರರು ಕನಸಿನಲ್ಲಿಯೂ ಊಹಿಸದಂತಿತ್ತು. ಬೆಳೆಗಾರರು ಸರ್ಕಾರವನ್ನು ಲೆಕ್ಕಿಸದೆ ತಮಗೆ ಬೇಕಾದಂತೆ ಮಾರಿದರು. ಇದನ್ನೇ ಕಾಯುತ್ತಿದ್ದಂತೆ ಇದ್ದ ಸರ್ಕಾರ ಎರಡೇ ವರ್ಷವಾಗುವುದರೊಳಗೆ ಸರ್ಕಾರ ಕಾಫಿಯ ಎಲ್ಲ ನಿಯಂತ್ರಣವನ್ನು ಕಿತ್ತುಹಾಕಿ ಸಂಪೂರ್ಣ ಮುಕ್ತವಾಗಿಸಿತು.

ಮುಂದಿನ ಎರಡು ವರ್ಷಗಳಲ್ಲಿ ಸಂಪೂರ್ಣವಾಗಿ ಖಾಸಗಿಯವರು ಕಾಫಿ ಉದ್ಯಮದ ಮೇಲೆ ಹಿಡಿತ ಸಾಧಿಸಿದರು.

ಈಗ ಕಾಫಿ ಬೆಳೆಗಾರರು ದಿಕ್ಕೆಟ್ಟು ಕುಳಿತಿದ್ದಾರೆ. ಕಾಫಿಯ ಮಾರುಕಟ್ಟೆ ಸಂಪೂರ್ಣ ಖಾಸಗಿಯವರ ಕೈಯಲ್ಲಿದೆ. ಎಲ್ಲ ರೀತಿಯಿಂದಲೂ ಅತ್ಯಂತ ವೈಜ್ಞಾನಿಕವಾದ ವ್ಯವಸ್ಥೆಯಾಗಿದ್ದ ಆದರೆ ಕೆಟ್ಟ ರಾಜಕಾರಣಕ್ಕೆ ಬಲಿಯಾಗಿ ನಾಶವಾದ ಕಾಫಿ ಬೋರ್ಡಿನಂತಹ ಸಂಸ್ಥೆಯನ್ನು ಹೋರಾಡಿ ಉಳಿಸಿಕೊಳ್ಳುವ ಬದಲಿಗೆ ಅದರ ಅಂತ್ಯಕ್ಕೆ ಕೈ ಜೋಡಿಸಿದ ಫಲವನ್ನು ನಾವಿಂದು ಅನುಭವಿಸುತ್ತಿದ್ದೇವೆ. ಈ ವಿದ್ಯಮಾನಗಳು ಕೃಷಿಯಲ್ಲಿ ನಿಯಂತ್ರಿತ ಮಾರುಕಟ್ಟೆಯ ಅಗತ್ಯವನ್ನು ಮತ್ತೆ ಮತ್ತೆ ಹೇಳುತ್ತಿದೆ. ಆದರೆ ಈಗ ಇರುವ ಸರ್ಕಾರವೂ ಕೂಡಾ ನಿಯಂತ್ರಿತ ಮಾರುಕಟ್ಟೆ ವ್ಯವಸ್ಥೆ ಸರಿಯಾಗಿ ಕೆಲಸ ಮಾಡುತ್ತಿಲ್ಲವೆಂದು ಅದನ್ನು ಸರಿಪಡಿಸುವ ಬದಲಿಗೆ ಅದನ್ನು ಸಂಪೂರ್ಣವಾಗಿ ಖಾಸಗಿಯವರ ಕೈಗೆ ಒಪ್ಪಿಸುವ ಹಾದಿಯಲ್ಲಿ ಇದೆ.

ಈ ಕಾಯಿದೆಗಳು ಮುಂದುವರಿದರೆ ಮುಂದಿನ ದಿನಗಳಲ್ಲಿ ಎ.ಪಿ.ಎಂ.ಸಿ ಅಪ್ರಸ್ತುತವೆನಿಸಿ ಅಂತ್ಯಕಾಣಲಿದೆ. ಆಗ ದೊರೆಯುವ ’ಸ್ವಾತಂತ್ರ್ಯ’ ರೈತನಿಗೆ ಗುತ್ತಿಗೆ ಕೃಷಿಯೂ ಸೇರಿದಂತೆ ಹಲವು ಸಾಧ್ಯತೆಗಳನ್ನು ತೆರೆದಿಡುತ್ತದೆ. ಈಗಾಗಲೇ ಶುಂಠಿಯಂತಹ ಕೆಲವು ವಾಣಿಜ್ಯ ಬೆಳೆಗಳಲ್ಲಿ ಕಂಡಿದ್ದೇವೆ. ಕಾಫಿ ಬೆಳೆಯಲ್ಲಿಯೂ ಈ ಕ್ರಮ ಈಗ ಪ್ರಾರಂಭವಾಗಿದೆ. ಹವಾಮಾನ ಬದಲಾವಣೆ, ಕಾಡುಪ್ರಾಣಿಗಳ ಜೊತೆಗೆ ಸಂಘರ್ಷ, ಕುಸಿದ ಬೆಲೆ ಮುಂತಾದ ಸಮಸ್ಯೆಗಳಿಂದ ಕಾಫಿ ಕೃಷಿಕರು ಒಂದು ಎಕರೆಗೆ ವರ್ಷಕ್ಕೆ ಕೇವಲ ಹತ್ತು ಸಾವಿರ ರೂಪಾಯಿಗಳಷ್ಟು ಕಡಿಮೆ ಹಣಕ್ಕೆ ತೋಟಗಳನ್ನು ಗುತ್ತಿಗೆ ನೀಡುತ್ತಿದ್ದಾರೆ.

ಈ ಕಾಯಿದೆಗಳಿಂದ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸಬಹುದಾಗಿದೆ ಎಂದು ಹೇಳಲಾಗುತ್ತಿತ್ತು. ಇದು ಮೊದಲೂ ಇತ್ತು. ಸರ್ಕಾರ ಹೇಳುವ ಇನ್ನೊಂದು ವಿಷಯವೆಂದರೆ ಕೃಷಿ ಉತ್ಪನ್ನಗಳ ಬ್ರಾಂಡಿಂಗ್. ಇದು ಸಣ್ಣ ರೈತರ ಮಟ್ಟಿಗೆ ಕಷ್ಟದ ಕೆಲಸ. ರೈತರಿಗೆ ಲಾಭದಾಯಕವಾದ ಈ ಕಾನೂನಿನ ಬಗ್ಗೆ ಮನವರಿಕೆ ಮಾಡಿಕೊಡಲು ನಾವು ವಿಫಲರಾಗಿದ್ದೇವೆ ಎಂದು ಪ್ರಧಾನಿ ಈಗ ಹೇಳಿದ್ದಾರೆ. ವಿಫಲರಾದದ್ದು ಯಾರಿಗೆ ಮನವರಿಕೆ ಮಾಡಿಕೊಡಲು?

ರೈತ ಹೋರಾಟಗಾರರಲ್ಲಿ ಅತ್ಯಂತ ಸುಶಿಕ್ಷಿತರಿದ್ದಾರೆ, ಕಾನೂನು ತಿಳಿದವರಿದ್ದಾರೆ. ಇಂದಿನ ರೈತಾಪಿ ನಾಲ್ಕು ದಶಕಗಳ ಹಿಂದಿನ ಪೀಳಿಗೆ ಅಲ್ಲ. ವಿದ್ಯೆ ಸಾರ್ವತ್ರಿಕವಾಗಿ ಇದೆ. ಹಾಗಾದರೆ ಮನವರಿಕೆ ಮಾಡಿಕೊಡುವುದು ಎಂದರೇನು? ಕಾನೂನು ತನ್ನ ಪರವಿದ್ದರೆ ಅದನ್ನು ಅರಿಯುವಷ್ಟು ಜ್ಞಾನ ಇಂದಿನ ರೈತರಿಗೆ ಇದೆ. ಆದ್ದರಿಂದ ‘ಮನವರಿಕೆ ಮಾಡಿಕೊಡಲು ವಿಫಲರಾಗಿದ್ದೇವೆ’ ಎಂಬುದೊಂದು ರಾಜಕೀಯ ಹೇಳಿಕೆಯೇ ಹೊರತು ಇನ್ನೇನೂ ಅಲ್ಲ.

ಸುಗ್ರೀವಾಜ್ಞೆಗಳ ಮೂಲಕ ಕಾನೂನನ್ನು ತಂದುದಲ್ಲದೆ, ದೇಶದ ಸರ್ವೋಚ್ಚ ವೇದಿಕೆಯಾದ ಸಂಸತ್ತಿನಲ್ಲೇ ಇದನ್ನೇ ಚರ್ಚಿಸಲು ಅವಕಾಶ ಕಲ್ಪಿಸಲಿಲ್ಲ. ಆದ್ದರಿಂದ ಸರ್ಕಾರ ವಿಫಲವಾದದ್ದು ತನ್ನ ರೈತವಿರೋಧಿ ನೀತಿಯನ್ನು ಜಾರಿಗೊಳಿಸುವ ಪ್ರಯತ್ನದಲ್ಲಿ ಎನ್ನಬಹುದಷ್ಟೇ.

ಈಗ ನಾವು ಏನೇ ಹೇಳಲಿ ಸರ್ಕಾರ ಈಗ ಹಿಂದಿಟ್ಟ ಹೆಜ್ಜೆಯ ಬದಲಿಗೆ ಹಲವು ಒಳದಾರಿಗಳನ್ನು ಬಳಸುವ ಸಾಧ್ಯತೆ ಇದ್ದೇ ಇದೆ. ಆಗ ರೈತರ ಪಾಲಿಗೆ ಉಳಿಯುವುದು ಕಾರ್ಪೊರೆಟ್ ಸಂಸ್ಥೆಗಳ ಜೊತೆ ಸ್ಪರ್ಧಿಸುವ ‘ಅವಕಾಶ’ ಮಾತ್ರ. ಇದರ ಬಗ್ಗೆ ಎಚ್ಚರ ಅಗತ್ಯವಾಗಿ ಇರಬೇಕಿದೆ.

ರೈತ ಹೋರಾಟಕ್ಕೆ ಒಂದು ಸಣ್ಣ ಮುನ್ನಡೆಯಂತೂ ಆಗಿದೆ. ಇದನ್ನು ವಿಸ್ತಾರವಾಗಿ ಬಳಸಿಕೊಂಡು ಮುನ್ನಡೆದು ದೇಶದ ಸಮಗ್ರ ಕೃಷಿ ನೀತಿಯ ನಿರೂಪಣೆಗೆ ಮತ್ತು ಜಾರಿಗೆ ಪ್ರಯತ್ನಿಸುವ ಅಗತ್ಯ ಕೂಡಾ ಈಗ ರೈತರ ಮೇಲಿದೆ. ನಮ್ಮನ್ನು ನಾವೇ ಕಾಪಾಡಿಕೊಳ್ಳಬೇಕು.

ಪ್ರಸಾದ್ ರಕ್ಷಿದಿ

ಪ್ರಸಾದ್ ರಕ್ಷಿದಿ
ಪ್ರಸಾದ್ ಸಕಲೇಶಪುರದ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಂದಲೂ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿದ್ದಾರೆ. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಆಸಕ್ತಿಯ ಕ್ಷೇತ್ರಗಳು. ಅವರ ‘ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಪುಸ್ತಕ.


ಇದನ್ನೂ ಓದಿ: ಕಾಫಿ ಭಾರತಕ್ಕೆ ಬಂದ ಕತೆ: ಕಳೆದು ಹೋದ ದಿನಗಳು ಭಾಗ -2, ಅಧ್ಯಾಯ -18

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಚುನಾವಣೆ ಪ್ರಚಾರದಲ್ಲಿ ಪದೇ ಪದೇ ಸುಳ್ಳು ಹೇಳುತ್ತಿರುವುದರಿಂದ…..’,: ಮೋದಿಗೆ ಕಾಂಗ್ರೆಸ್‌ ಪ್ರಣಾಳಿಕೆಯನ್ನು ವಿವರಿಸಿ ಪತ್ರ...

0
ಕಾಂಗ್ರೆಸ್‌ ಪ್ರಣಾಳಿಕೆಯ ಬಗ್ಗೆ ಮೋದಿ, ಅಮಿತ್‌ ಶಾ ಚುನಾವಣಾ ಭಾಷಣದಲ್ಲಿ ಸುಳ್ಳು ಆಪಾದನೆ ಮಾಡುತ್ತಿರುವ ಮಧ್ಯೆ ಕಾಂಗ್ರೆಸ್‌ ಪ್ರಣಾಳಿಕೆ ಬಗ್ಗೆ ಚರ್ಚೆಗೆ ನರೇಂದ್ರ ಮೋದಿ ಅಥವಾ ಅವರಿಂದ ನಿಯೋಜಿಸಲ್ಪಟ್ಟ ಯಾರಾದರು ಬನ್ನಿ ಎಂದು...