Homeಮುಖಪುಟ'ಚುನಾವಣೆ ಪ್ರಚಾರದಲ್ಲಿ ಪದೇ ಪದೇ ಸುಳ್ಳು ಹೇಳುತ್ತಿರುವುದರಿಂದ.....',: ಮೋದಿಗೆ ಕಾಂಗ್ರೆಸ್‌ ಪ್ರಣಾಳಿಕೆಯನ್ನು ವಿವರಿಸಿ ಪತ್ರ ಬರೆದ...

‘ಚುನಾವಣೆ ಪ್ರಚಾರದಲ್ಲಿ ಪದೇ ಪದೇ ಸುಳ್ಳು ಹೇಳುತ್ತಿರುವುದರಿಂದ…..’,: ಮೋದಿಗೆ ಕಾಂಗ್ರೆಸ್‌ ಪ್ರಣಾಳಿಕೆಯನ್ನು ವಿವರಿಸಿ ಪತ್ರ ಬರೆದ ಖರ್ಗೆ

- Advertisement -
- Advertisement -

ಕಾಂಗ್ರೆಸ್‌ ಪ್ರಣಾಳಿಕೆಯ ಬಗ್ಗೆ ಮೋದಿ, ಅಮಿತ್‌ ಶಾ ಚುನಾವಣಾ ಭಾಷಣದಲ್ಲಿ ಸುಳ್ಳು ಆಪಾದನೆ ಮಾಡುತ್ತಿರುವ ಮಧ್ಯೆ ಕಾಂಗ್ರೆಸ್‌ ಪ್ರಣಾಳಿಕೆ ಬಗ್ಗೆ ಚರ್ಚೆಗೆ ನರೇಂದ್ರ ಮೋದಿ ಅಥವಾ ಅವರಿಂದ ನಿಯೋಜಿಸಲ್ಪಟ್ಟ ಯಾರಾದರು ಬನ್ನಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಹ್ವಾನವನ್ನು ನೀಡಿದ್ದರು. ಆದರೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಬರದ ಹಿನ್ನೆಲೆ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿಯವರಿಗೆ ಪತ್ರವನ್ನು ಬರೆದು ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿನ ಅಂಶಗಳನ್ನು ವಿವರಿಸಿದ್ದಾರೆ.

ಈ ಕುರಿತು ಪತ್ರವನ್ನು ಎಕ್ಸ್‌ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಂಚಿಕೊಂಡಿದ್ದಾರೆ. ಚುನಾವಣಾ ಪ್ರಚಾರದಲ್ಲಿ ಪದೇ ಪದೇ ಸುಳ್ಳು ಹೇಳುತ್ತಿರುವ ನರೇಂದ್ರ ಮೋದಿ ಅವರಿಗೆ ನನ್ನ ಪತ್ರ ಹಂಚಿಕೊಳ್ಳುತ್ತಿದ್ದೇನೆ ಎಂದು ಬರೆದಿದ್ದಾರೆ.

ಆತ್ಮೀಯ ಪ್ರಧಾನ ಮಂತ್ರಿಗಳೇ,

ಮತದಾರರಿಗೆ ಏನು ತಿಳಿಸಬೇಕು ಎಂದು ನೀವು ಎನ್‌ಡಿಎ ಅಭ್ಯರ್ಥಿಗಳಿಗೆ ಬರೆದ ಪತ್ರವನ್ನು ನಾನು ನೋಡಿದೆ.
ಪತ್ರದ ವಿಷಯಗಳನ್ನು ಗಮನಿಸಿದಾಗ ನಿಮ್ಮಲ್ಲಿ ಬಹಳಷ್ಟು ಹತಾಶೆ ಮತ್ತು ಚಿಂತೆ ಇದೆ ಎಂದು ತೋರುತ್ತದೆ, ಇದು ಪ್ರಧಾನ ಮಂತ್ರಿಯ ಘನತೆಗೆ ಹೊಂದಿಕೆಯಾಗದ ಭಾಷೆಯನ್ನು ಬಳಸಲು ನಿಮ್ಮನ್ನು ಪ್ರೇರೇಪಿಸುತ್ತದೆ. ಪತ್ರವು ನಿಮ್ಮ ಭಾಷಣಗಳಲ್ಲಿನ ಸುಳ್ಳುಗಳು ನೀವು ಉದ್ದೇಶಿಸಿರುವ ಪರಿಣಾಮವನ್ನು ಬೀರಿಲ್ಲ ಎಂದು ತೋರುತ್ತದೆ, ಅದಕ್ಕೆ ಈಗ ನಿಮ್ಮ ಅಭ್ಯರ್ಥಿಗಳಲ್ಲಿ ಈ ಸುಳ್ಳುಗಳನ್ನು ಹೇಳಿಸುತ್ತಿದ್ದೀರಿ, ಒಂದು ಸುಳ್ಳನ್ನು ಸಾವಿರ ಬಾರಿ ಪುನರಾವರ್ತಿಸಿದರೂ ಅದು ಸತ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಏನು ಬರೆದಿದೆ ಮತ್ತು ನಾವು ಏನು ಭರವಸೆ ನೀಡಿದ್ದೇವೆ ಎಂಬುದನ್ನು ಸ್ವತಃ ಮತದಾರರು ಓದಿ ಅರ್ಥಮಾಡಿಕೊಳ್ಳುವಷ್ಟು ಬುದ್ಧಿವಂತರಾಗಿದ್ದಾರೆ. ನಮ್ಮ ಖಾತರಿಗಳು ತುಂಬಾ ಸರಳ ಮತ್ತು ಸ್ಪಷ್ಟವಾಗಿದೆ, ನಾವು ಅವರಿಗೆ ಅದನ್ನು ವಿವರಿಸಬೇಕಾಗಿಲ್ಲ. ನಿಮ್ಮ ಅನುಕೂಲಕ್ಕಾಗಿ, ನಾನು ಅವುಗಳನ್ನು ಇಲ್ಲಿ ಪುನರುಚ್ಚರಿಸುತ್ತೇನೆ…

1. ಯುವ ನ್ಯಾಯ – ನಿಮ್ಮ ಅತ್ಯಂತ ಕೆಟ್ಟ ನೀತಿಗಳಿಂದಾಗಿ ನಿರುದ್ಯೋಗದಿಂದ ಬಳಲುತ್ತಿರುವ ಈ ದೇಶದ ಯುವಕರಿಗೆ ನಾವು ಉದ್ಯೋಗ ನೀಡುವ ಭರವಸೆ ನೀಡುತ್ತೇವೆ. ಯುವಕರಿಗೆ ಕಾಂಗ್ರೆಸ್ ಭರವಸೆ – ಪೆಹ್ಲಿ ನೌಕ್ರಿ ಪಕ್ಕಿ.

2. ನಾರಿ ನ್ಯಾಯ – ನಿಮ್ಮ ನಾಯಕರು ಮತ್ತು ಅವರ ಮನಸ್ಥಿತಿಯಿಂದ ಅಭೂತಪೂರ್ವ ಕಿರುಕುಳವನ್ನು ಕಾಣುತ್ತಿರುವ ನಮ್ಮ ದೇಶದ ಮಹಿಳೆಯರು ಮತ್ತು ಯುವತಿಯರ ಸಬಲೀಕರಣ

3. ಕಿಸಾನ್ ನ್ಯಾಯ –ನ್ಯಾಯಯುತ ಬೆಲೆ ಕೇಳಿದ್ದಕ್ಕಾಗಿ ಗುಂಡು ಮತ್ತು ಹೊಡೆತಕ್ಕೆ ಒಳಗಾದ ರೈತರ ಸಬಲೀಕರಣ

 4. ಶ್ರಮಿಕ ನ್ಯಾಯ – ನಿಮ್ಮ ಸೂಟ್-ಬೂಟ್ ಕಿ ಸರ್ಕಾರ್ ನೀತಿಗಳಿಂದಾಗಿ ಹೆಚ್ಚುತ್ತಿರುವ ಹಣದುಬ್ಬರ ಮತ್ತು ಹೆಚ್ಚುತ್ತಿರುವ ಆದಾಯದ ಅಸಮಾನತೆಯಿಂದ ಬಳಲುತ್ತಿರುವ ಕಾರ್ಮಿಕರ ಸಬಲೀಕರಣ

5.ಹಿಸ್ಸೆದಾರಿ ನ್ಯಾಯ – ತಮ್ಮ ಹಕ್ಕನ್ನು ಪಡೆಯಲು ಅರ್ಹರಾದ ಬಡವರ ಸಬಲೀಕರಣ
ನಮ್ಮ ಗ್ಯಾರಂಟಿ ಎಲ್ಲರಿಗೂ ನ್ಯಾಯವನ್ನು ನೀಡುವುದಾಗಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಮೋದಿಗೆ ಬರೆದ ಪತ್ರದಲ್ಲಿ ಉಲ್ಲೆಖಿಸಿದ್ದಾರೆ.

ಕಾಂಗ್ರೆಸ್ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ ಎಂದು ನೀವು ಮತ್ತು ಗೃಹ ಸಚಿವರು ಹೇಳುವುದನ್ನು ಕೇಳಿದ್ದೇವೆ. ಕಳೆದ 10 ವರ್ಷಗಳಲ್ಲಿ ನಾವು ನೋಡಿದ ತುಷ್ಟೀಕರಣ ನೀತಿಯೆಂದರೆ ನೀವು ಮತ್ತು ನಿಮ್ಮ ಮಂತ್ರಿಗಳು ಚೀನಿಯರನ್ನು ಓಲೈಸುವುದು. ಇಂದಿಗೂ, ನೀವು ಚೀನಾದವರನ್ನು ಒಳನುಸುಳುಕೋರರು ಎಂದು ಕರೆಯಲು ನಿರಾಕರಿಸಿದ್ದೀರಿ, ಬದಲಿಗೆ ಜೂನ್ 19, 2020ರಂದು, ನೀವು “ನಾ ಕೋಯಿ ಘುಸಾ ಹೈ, ನ ಹೈ ಕೋಯಿ ಘುಸ್ ಆಯಾ ಹೈ” ಎಂದು ಹೇಳಿದ್ದೀರಿ, ಈ ರೀತಿ ಹೇಳಿ ಗಾಲ್ವಾನ್‌ನಲ್ಲಿ 20 ಭಾರತೀಯ ಸೈನಿಕರ ಅತ್ಯುನ್ನತ ತ್ಯಾಗವನ್ನು ಅವಮಾನಿಸಿದ್ದೀರಿ. ಚೀನಾಕ್ಕೆ ನೀವು ಸಾರ್ವಜನಿಕವಾಗಿ ನೀಡಿದ ‘ಕ್ಲೀನ್ ಚಿಟ್’, ಭಾರತದ ಪ್ರಕರಣವನ್ನು ದುರ್ಬಲಗೊಳಿಸಿದೆ. ಅರುಣಾಚಲ ಪ್ರದೇಶ, ಲಡಾಖ್ ಮತ್ತು ಉತ್ತರಾಖಂಡದ ಎಲ್‌ಎಸಿ ಬಳಿ ಚೀನಾದಿಂದ ನಿಯಮಗಳ ಉಲ್ಲಂಘನೆ ಮತ್ತು ಮಿಲಿಟರಿ ಮೂಲಸೌಕರ್ಯ ನಿರ್ಮಾಣದಿಂದಾಗಿ ಉದ್ವಿಗ್ನತೆ ಹೆಚ್ಚುತ್ತಿರುವಾಗಲೂ, ಭಾರತಕ್ಕೆ ಚೀನಾದ ಸರಕುಗಳ ಆಮದು ಕಳೆದ 5 ವರ್ಷಗಳಲ್ಲಿ 54.76% ರಷ್ಟು ಹೆಚ್ಚಾಗಿದೆ ಮತ್ತು 2023- 24ರಲ್ಲಿ 101 ಬಿಲಿಯನ್ ದಾಟಿದೆ ಎಂದು ಹೇಳಿದ್ದಾರೆ.

ನಿಮ್ಮ ಪತ್ರದಲ್ಲಿ, ಕಾಂಗ್ರೆಸ್‌ SC, ST ಮತ್ತು OBCಯಿಂದ ಮೀಸಲಾತಿಯನ್ನು ಕಿತ್ತು “ಮತಬ್ಯಾಂಕ್” ಗೆ ನೀಡುತ್ತದೆ ಎಂದು ಹೇಳುತ್ತೀರಿ. ನಮ್ಮ ಮತಬ್ಯಾಂಕ್ ಪ್ರತಿಯೊಬ್ಬ ಭಾರತೀಯರಾದ ಬಡವರು, ಅಂಚಿನಲ್ಲಿರುವವರು, ಮಹಿಳೆಯರು, ಯುವಕರು, ಕಾರ್ಮಿಕ ವರ್ಗ, ದಲಿತರು ಮತ್ತು ಆದಿವಾಸಿಗಳು. 1947 ರಿಂದ ಪ್ರತಿ ಹಂತದಲ್ಲೂ ಮೀಸಲಾತಿಯನ್ನು ವಿರೋಧಿಸಿದವರು ಆರೆಸ್ಸೆಸ್‌ ಮತ್ತು ಬಿಜೆಪಿ ಎಂದು ಎಲ್ಲರಿಗೂ ತಿಳಿದಿದೆ. ಮೀಸಲಾತಿಯನ್ನು ಕೊನೆಗೊಳಿಸಲು ಸಂವಿಧಾನವನ್ನು ಬದಲಾಯಿಸಲು ಬಯಸುತ್ತಿರುವುದು ಆರೆಸ್ಸೆಸ್‌ ಮತ್ತು ಬಿಜೆಪಿ ಎಂದು ಎಲ್ಲರಿಗೂ ತಿಳಿದಿದೆ. ನಿಮ್ಮ ನಾಯಕರು ಈ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ನಮ್ಮ ಸಂವಿಧಾನದ 16ನೇ ವಿಧಿಯ ಪ್ರಕಾರ ಜನಸಂಖ್ಯೆಯ ಆಧಾರದ ಮೇಲೆ SC, ST ಮತ್ತು OBC ಗಳಿಗೆ ಮೀಸಲಾತಿಯನ್ನು ನೀವು ಏಕೆ ವಿರೋಧಿಸುತ್ತೀರಿ ಎಂಬುದನ್ನು ನೀವು ಸ್ಪಷ್ಟಪಡಿಸಬೇಕು ಎಂದು ಹೇಳಿದ್ದಾರೆ.

ನಿಮ್ಮ ಪತ್ರದಲ್ಲಿ, ಜನರ ಕಷ್ಟಪಟ್ಟು ದುಡಿದ ಹಣವನ್ನು ಕಸಿದುಕೊಳ್ಳಲಾಗುವುದು ಎಂದು ಹೇಳಿದ್ದೀರಿ. ಗುಜರಾತ್‌ನ ಬಡ ದಲಿತ ರೈತರಿಂದ ವಂಚಿಸಿ ಬಿಜೆಪಿಗೆ ಚುನಾವಣಾ ಬಾಂಡ್‌ಗಳಾಗಿ ಪಡೆದಿರುವ 10 ಕೋಟಿ ರೂ.ಗಳನ್ನು ಹಿಂದಿರುಗಿಸಲು ನಿಮ್ಮ ಪಕ್ಷಕ್ಕೆ ನಿರ್ದೇಶನ ನೀಡುವಂತೆ ನಾನು ಈ ಸಂದರ್ಭದಲ್ಲಿ ವಿನಂತಿಸುತ್ತೇನೆ. ನಿಮ್ಮ ಪಕ್ಷವು  ಹಫ್ತಾ ವಸೂಲಿ ಮೂಲಕ ವಿವಿಧ ಕಂಪನಿಗಳಿಂದ ಅಕ್ರಮ ಮತ್ತು ಅಸಂವಿಧಾನಿಕ ಚುನಾವಣಾ ಬಾಂಡ್‌ಗಳ ಮೂಲಕ 8,250 ಕೋಟಿ ರೂ.ಗಳನ್ನು ಸಂಗ್ರಹಿಸಿದೆ. 8,250 ಕೋಟಿಗಳಲ್ಲಿ ಕನಿಷ್ಠ 10 ಕೋಟಿ ರೂಪಾಯಿಯನ್ನು ಈ ದಲಿತ ಕುಟುಂಬಕ್ಕೆ ಹಿಂತಿರುಗಿಸಬಹುದು. ನಿಮ್ಮ ಹಿಂದಿನ ಹಣಕಾಸು ಸಚಿವರು ಮತ್ತು ನಿಮ್ಮ ಪಕ್ಷದ ನಾಯಕರು ಪಿತ್ರಾರ್ಜಿತ ತೆರಿಗೆ ಬೇಕು ಎಂದು ಪದೇ ಪದೇ ಪ್ರಸ್ತಾಪಿಸುತ್ತಿರುವಾಗ ಕಾಂಗ್ರೆಸ್ ಪಿತ್ರಾರ್ಜಿತ ತೆರಿಗೆಯನ್ನು ತರಲು ಬಯಸುತ್ತದೆ ಎಂದು ನಿಮ್ಮ ಪತ್ರ ಸುಳ್ಳು ಹೇಳುತ್ತಿದೆ ಎಂದು ಹೇಳಿದ್ದಾರೆ.

ಮೊದಲೆರಡು ಹಂತದ ಚುನಾವಣೆಗಳಲ್ಲಿ ಕಡಿಮೆ ಮತದಾನವಾಗಿರುವುದರ ಬಗ್ಗೆ ನೀವು ಚಿಂತೆಗೀಡಾಗಿರುವುದು ನಿಮ್ಮ ಪತ್ರದಿಂದ ಮನವರಿಕೆಯಾಗುತ್ತದೆ. ನಿಮ್ಮ ನೀತಿಗಳು ಅಥವಾ ನಿಮ್ಮ ಪ್ರಚಾರ ಭಾಷಣಗಳ ಬಗ್ಗೆ ಜನರು ಉತ್ಸಾಹ ಹೊಂದಿಲ್ಲ ಎಂದು ಇದು ತೋರಿಸುತ್ತದೆ. ಬೇಸಿಗೆಯ ಬೇಗೆಯಿಂದಲ್ಲ, ನಿಮ್ಮ ನೀತಿಗಳಿಂದ ಬಡವರು ಸುಟ್ಟು ಹೋಗಿದ್ದಾರೆ. ಧರ್ಮದ ಹೆಸರಿನಲ್ಲಿ ಮತದಾರರನ್ನು ಒಗ್ಗೂಡಿಸುವಂತೆ ನಿಮ್ಮ ಕಾರ್ಯಕರ್ತರಿಗೆ ಮನವಿ ಮಾಡಿದ್ದೀರಿ. ಮತದಾರರು ನಿಮಗೆ ಮತ ಹಾಕಲು ಉತ್ಸುಕರಾಗದಿದ್ದರೆ, ನಿಮ್ಮ ಕಾರ್ಯಕರ್ತರನ್ನು ದೂಷಿಸಬೇಡಿ ಎಂದು ಹೇಳಿದ್ದಾರೆ.

ಹೆಚ್ಚುತ್ತಿರುವ ಅಸಮಾನತೆಯ ಬಗ್ಗೆ ಮಾತನಾಡಲು ನಿಮಗೆ ಆಸಕ್ತಿ ಇಲ್ಲ. ನಿರುದ್ಯೋಗ ಮತ್ತು ಬೆಲೆ ಏರಿಕೆಯ ಬಗ್ಗೆ ಮಾತನಾಡಲು ನಿಮಗೆ ಆಸಕ್ತಿ ಇಲ್ಲ, ಅದು ನಮ್ಮ ಜನರ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ನಾಯಕರಿಂದ ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯದ ಬಗ್ಗೆ ಮಾತನಾಡಲು ನಿಮಗೆ ಆಸಕ್ತಿ ಇಲ್ಲ. ನಮ್ಮ ಪ್ರಣಾಳಿಕೆ ನ್ಯಾಯ ಮತ್ತು ಸಮಾಜದ ಎಲ್ಲಾ ವರ್ಗಗಳ ಬೆಳವಣಿಗೆಯನ್ನು ಹೇಗೆ ಮಾಡಬಹದು ಎಂದು ಹೇಳುತ್ತದೆ. ಪ್ರಧಾನಿಯಾಗಿ ನೀವು ದ್ವೇಷದ ಭಾಷಣಗಳನ್ನು ಮಾಡುವ ಬದಲು ಕಳೆದ ಹತ್ತು ವರ್ಷಗಳ ನಿಮ್ಮ ಸರ್ಕಾರದ ಸಾಧನೆಯ ಬಗ್ಗೆ ಮತ ಕೇಳುವುದು ಉತ್ತಮ. ಕಾಂಗ್ರೆಸ್ ಪಕ್ಷವು ನಿಮಗೆ ಅಥವಾ ನಿಮ್ಮನ್ನು ಪ್ರತಿನಿಧಿಸುವ ಯಾರಿಗಾದರೂ ನಮ್ಮ ಪ್ರಣಾಳಿಕೆ ಮತ್ತು ಅಂಶಗಳ ಬಗ್ಗೆ ನಮ್ಮೊಂದಿಗೆ ಚರ್ಚೆಗೆ ಬರುವಂತೆ ಸವಾಲು ಹಾಕುತ್ತದೆ ಎಂದು ಮಲ್ಲಿಕಾರ್ಜುನ ಖರ್ಗೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ನಾನು ನನ್ನ ಹಿಂದಿನ ಪತ್ರದಲ್ಲಿ ಪ್ರಸ್ತಾಪಿಸಿದಂತೆ, ಚುನಾವಣೆಗಳು ಮುಗಿದ ನಂತರ, ಅನಿವಾರ್ಯ ಸೋಲನ್ನು ತಪ್ಪಿಸಲು ಸುಳ್ಳುಗಳಿಂದ ತುಂಬಿದ ಒಡೆದು ಆಳುವ ಮತ್ತು ಕೋಮುವಾದಿ ಭಾಷಣಗಳನ್ನು ಮಾಡಿದ ಪ್ರಧಾನಿಯಾಗಿ ಜನರು ನಿಮ್ಮನ್ನು ನೆನಪಿಸಿಕೊಳ್ಳುತ್ತಾರೆ ಎಂದು ಖರ್ಗೆ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನು ಓದಿ: ಮಣಿಪುರ ಸಂಘರ್ಷಕ್ಕೆ ಒಂದು ವರ್ಷ: ಮೈತೈ, ಕುಕಿ ಸಮುದಾಯಗಳಿಂದ ಪ್ರತ್ಯೇಕ ಕಾರ್ಯಕ್ರಮ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷರಾಗಿ ಕಪಿಲ್ ಸಿಬಲ್ ಆಯ್ಕೆ

0
ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ (ಎಸ್‌ಸಿಬಿಎ) ​​ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹಿರಿಯ ವಕೀಲ ಕಪಿಲ್ ಸಿಬಲ್ ಗೆಲುವು ಸಾಧಿಸಿದ್ದಾರೆ. ಸಿಬಲ್ 1,066 ಮತಗಳನ್ನು ಪಡೆದರೆ, ಅವರ ಪ್ರತಿಸ್ಪರ್ಧಿ ಹಿರಿಯ ವಕೀಲ ಪ್ರದೀಪ್ ರೈ...