ಎಪ್ರಾಮಿಸ್ಡ್ ಲ್ಯಾಂಡ್- ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಬಹುಚರ್ಚಿತ ಪುಸ್ತಕ. ಈ ವರ್ಷ ಮುದ್ರಣಗೊಂಡು ಈಗಷ್ಟೇ ಓದುಗರಿಗೆ ಲಭ್ಯವಾಗಿದೆ. ಅಮೆರಿಕದ ಮೊದಲ ಆಫ್ರೋ ಅಮೇರಿಕನ್ ಅಧ್ಯಕ್ಷರಾದ ಬರಾಕ್ ಹುಸೇನ್ ಒಬಾಮಾ ಅವರ 751 ಪುಟಗಳ ಈ ಆತ್ಮಕತೆ ಓದುಗರ ಆಸಕ್ತಿಯನ್ನು ಹಿಡಿದಿಡುವ ರಮ್ಯ ರಾಜಕೀಯ ಕಥನದಂತೆ (ಪೊಲಿಟಿಕಲ್ ಫ್ಯಾಂಟಸಿ ಫಿಕ್ಷನ್) ಕಾಣುತ್ತದೆ.
ಭಾರತದಲ್ಲಿ ಈ ಪುಸ್ತಕ ಚರ್ಚೆಗೊಳಗಾಗುತ್ತಿರುವುದಕ್ಕೆ ಕಾರಣವಿದೆ. ಭಾರತದ ಮಾಧ್ಯಮಗಳಲ್ಲಿ ಹೆಚ್ಚಿನವರು ಅದರಲ್ಲಿರುವ ಕೆಲವು ಆಯ್ದ ಭಾಗಗಳನ್ನು ಮಾತ್ರ ಆರಿಸಿಕೊಂಡು, ಎಂದಿನಂತೆ ಕಾಂಗ್ರೆಸ್ ಪಕ್ಷ ಅಥವಾ ರಾಹುಲ್ ಗಾಂಧಿಯನ್ನು ಗುರಿಯಾಗಿಸುವ ತಮ್ಮ ರೂಢಿಯ ಭಾಗವಾಗಿ ಬಿಸಿಬಿಸಿ ಚರ್ಚೆಯನ್ನು ಹುಟ್ಟುಹಾಕುತ್ತಿರುವುದು. ಒಬಾಮಾ ಹೇಳಿರುವ ಅವಧಿಯಲ್ಲಿ ರಾಹುಲ್ ಗಾಂಧಿ ಕಾಂಗ್ರೆಸ್ಸಿನ ಉಪಾಧ್ಯಕ್ಷರೂ ಆಗಿರದ ಎಳಸಿನಂತೆ ಇದ್ದ ಕಾಲ. ಮಾಧ್ಯಮಗಳು ಉಲ್ಲೇಖಿಸಿರುವ ಮಾತುಗಳನ್ನು ಅನುಭವಿ ರಾಜಕಾರಣಿ ಒಬಾಮಾ ಅವರು ಆಡಿರುವುದು ನಿಜ. ಆದರೆ, ಅದೇ ಪುಸ್ತಕದಲ್ಲಿ ರಾಹುಲ್ ಕುರಿತಾದ ಕಮೆಂಟುಗಳಿರುವ ಅದೇ ಅಧ್ಯಾಯದಲ್ಲಿ ಸಮಕಾಲೀನ ಭಾರತವು ಆಲೋಚಿಸಬೇಕಾದ ತೀವ್ರವಾಗಿ ಚರ್ಚಿಸಬೇಕಾದ ಇನ್ನೂ ಸಾಕಷ್ಟು ಸಂಗತಿಗಳಿವೆ. ಅಂತಹವುಗಳನ್ನು ನಾವು ಮಾಧ್ಯಮಗಳ ಓರೆನೋಟ ಮತ್ತು ಓತಪ್ರೋತ ವಾಗ್ದಾಳಿಯ ನಡುವೆ ಕಳೆದುಕೊಳ್ಳಬಾರದು.
ಭಾರತ ಕುರಿತು ತಕ್ಕಮಟ್ಟಿಗೆ ವಿಶೇಷವೆನ್ನಿಸುವ ಉಲ್ಲೇಖ ಈ ಪುಸ್ತಕದಲ್ಲಿ ಬರುವುದು ’ಇನ್ ದ ಬ್ಯಾರಲ್ (’ಪೀಪಾಯಿಯೊಳಗೆ’) ಎಂಬ ಅಧ್ಯಾಯದಲ್ಲಿ. ಅಧ್ಯಾಯದ ಶೀರ್ಷಿಕೆ ಸೂಚಿಸುವಂತೆ, ತಮ್ಮ ಅಧಿಕಾರಾವಧಿಯಲ್ಲಿ ಅನುಭವಿಸಿದ ಭಯಂಕರವಾದ ಏರುಪೇರುಗಳನ್ನೂ, ದಿಙ್ಮೂಢರಾಗುವಂತೆ ಮಾಡಿದ ಆರ್ಥಿಕ-ರಾಜಕೀಯ ಅಲ್ಲೋಲಕಲ್ಲೋಲಗಳನ್ನೂ ವಿವರಿಸುತ್ತಾರೆ. ಮುಚ್ಚಿದ ಪೀಪಾಯಿಯೊಳಗೆ ಸಿಲುಕಿಕೊಂಡು ಭಾರೀ ಎತ್ತರದಿಂದ ಧುಮುಕುವ ನೀರಿನೊಂದಿಗೆ ಬೀಳುವ ಜೀವಿಯೊಂದರ ಚಡಪಡಿಕೆಯನ್ನು ಒಬಾಮಾ ಇದರಲ್ಲಿ ವಿವರಿಸಿದ್ದಾರೆ.
ಅಮೇರಿಕದ ಪಾಲಿಗೆ ದುಃಸ್ವಪ್ನವೆನಿಸಿದ್ದ9/10 ದಾಳಿಯನ್ನು ನೆನಪಿಸಿದಂತಹ 2009ರ ಅಮೆರಿಕನ್ ವಿಮಾನದಲ್ಲಿ ಆಫ್ಘನ್ ಪ್ರಜೆಯೊಬ್ಬ ಬಾಂಬ್ ಸಿಡಿಸಲು ಮಾಡಿದ ವಿಫಲ ಯತ್ನ, ಗಲ್ಫ್‌ನಲ್ಲಿ ಅಮೆರಿಕ ಆರಂಭಿಸಿದ್ದ ತೈಲ ಗಣಿಗಾರಿಕೆಯ ಮಹತ್ವಾಕಾಂಕ್ಷಿ ಯೋಜನೆಯು ಎಡವಟ್ಟಾಗಿ, ತೈಲ ನಿಕ್ಷೇಪದಿಂದುಂಟಾದ ಭಾರೀ ಸೋರಿಕೆಯು ನೀರನ್ನೂ, ಜಲಚರಗಳು ಮತ್ತು ಮನುಷ್ಯರ ಬದುಕುಗಳೆಲ್ಲವನ್ನೂ ಕದಡಿದ ದುರದೃಷ್ಟಕರ ಘಟನೆ, 1980ರ ನಂತರ ಮೊದಲ ಬಾರಿ ಶೇ.10ಕ್ಕೇರಿದ ನಿರುದ್ಯೋಗದ ಭಾರೀ ಸೂಚ್ಯಂಕ, ನಿಲ್ಲದ ಆರ್ಥಿಕ ಕುಸಿತ-ಇಂತಹ ಸಾಲು ಸಾಲು ಸಮಸ್ಯೆಗಳ ನಡುವೆ ಒಬಾಮಾ ಅವರ ತಂಡ ಎದುರಿಸಿದ (ಡೆಮಾಕ್ರಟರು ಸೋಲುತ್ತಾರೆಂದೇ ಬಿಂಬಿಸಲ್ಪಟ್ಟಿದ್ದ) ಮಧ್ಯಾವಧಿ ಚುನಾವಣೆಗಳು; ಇವೆಲ್ಲ ಕೂಡಿ ತಮ್ಮನ್ನು ಪೀಪಾಯಿಯೊಳಗೆ ಸಿಲುಕಿದವನು ಎದುರಿಸುವ ಅನಿಶ್ಚಿತತೆ ಮತ್ತು ಆಧಾರವಿಲ್ಲದ ಆಶಾವಾದದ ಸ್ಥಿತಿಯಾಗಿತ್ತು ಎಂದು ಬಣ್ಣಿಸುತ್ತಾರೆ.
ಅದೇ ಸಂದರ್ಭದಲ್ಲಿ ಭಾರತಕ್ಕೆ ಮೊದಲ ಬಾರಿಗೆ ಭೇಟಿ ನೀಡಿದ್ದ ತಮ್ಮ ಅನುಭವವನ್ನೂ ಬರೆದುಕೊಂಡಿದ್ದಾರೆ. 2010ರಲ್ಲಿ ಮೊದಲ ಸಲ ಏಷ್ಯನ್ ದೇಶಗಳೊಂದಿಗೆ ಒಪ್ಪಂದಗಳಿಗಾಗಿ ತಾವು ನಡೆಸಿದ 9 ದಿನಗಳ ಪ್ರವಾಸದ ಭಾಗವಾಗಿ ಭಾರತದಲ್ಲಿ ಒಬಾಮಾ ಅವರು ನಡೆಸಿದ ಭೇಟಿಗಳ ಸಂದರ್ಭದಲ್ಲಿ ರಾಹುಲ್ ಗಾಂಧಿಯವರನ್ನು ಕಂಡು, ಇತರ ವಿವರಣೆಗಳ ನಡುವೆ ರಾಹುಲ್ ಅವರ ಬಗ್ಗೆಯೂ ಅವರು ಬರೆದಿರುವ ಕೆಲವು ಮಾತುಗಳೇ ಇಂದು ಅತಿರೇಕದ ಚರ್ಚೆಗಳಿಗೆ ಕಾರಣವಾಗಿರುವುದು.
ಆ ಭಾಗದಲ್ಲಿ ಯಥಾವತ್ತಾಗಿ ಒಬಾಮಾ ಅವರು ಬರೆದಿರುವ ಮಾತುಗಳನ್ನು ನೋಡುವುದಾದರೆ- “ಅಂದು ರಾತ್ರಿಯ ಔತಣಕೂಟದಲ್ಲಿ ಸೋನಿಯಾ ಗಾಂಧಿ ಮಾತನಾಡುವುದಕ್ಕಿಂತ ಹೆಚ್ಚು ಕೇಳಿಸಿಕೊಳ್ಳುತ್ತಿದ್ದರು, ನೀತಿನಿರೂಪಣೆಯ ವಿಚಾರ ಬಂದಾಗ ಎಚ್ಚರಿಕೆಯಿಂದ ಮಿ.ಸಿಂಗ್ (ಮನಮೋಹನ್ ಸಿಂಗ್) ಅವರ ಮಾತುಗಳಿಗಿಂತ ಭಿನ್ನವಾದ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಾ, ಮಾತುಕತೆಯನ್ನು ಆಗಾಗ ತಮ್ಮ ಮಗನೆಡೆಗೆ ತಿರುಗಿಸುತ್ತಿದ್ದರು. ಆದರೂ ನನಗೆ ಸ್ಪಷ್ಟವಾದದ್ದು ಅವರ ಅಧಿಕಾರವು ದಿಟ್ಟವಾದ ಮತ್ತು ಶಕ್ತಿಶಾಲಿಯಾದ ಮಾಹಿತಿಯಿಂದ ಹೊರಹೊಮ್ಮಿದ್ದಾಗಿತ್ತೆಂಬುದು. ರಾಹುಲ್ ವಿಷಯಕ್ಕೆ ಬರುವುದಾದರೆ, ಅವರು ಚುರುಕಾಗಿ ಮತ್ತು ಪ್ರಾಮಾಣಿಕರಾಗಿ ಕಾಣುತ್ತಿದ್ದರು. ಸ್ಫುರದ್ರೂಪದಲ್ಲಿ ತಾಯಿಯ ಹೋಲಿಕೆಯಿತ್ತು. ಭವಿಷ್ಯದ ಪ್ರಗತಿಪರ ರಾಜಕಾರಣದ ಕುರಿತು ಅವರು ತಮ್ಮ ಅನಿಸಿಕೆಗಳನ್ನು ಮುಂದಿಡುತ್ತಾ, ಆಗಾಗ ತಡೆದು ನನ್ನ ೨೦೦೮ರ ಚುನಾವಣಾ ಪ್ರಚಾರದ ಕುರಿತ ಮಾಹಿತಿಯನ್ನು ಕೇಳಿಕೊಳ್ಳುತ್ತಿದ್ದರು. ಆದರೆ ಅವರಲ್ಲೊಂದು ಅಸ್ಥಿರ ಮತ್ತು ಇನ್ನೂ ಪೂರ್ತಿ ರೂಪುಗೊಳ್ಳದಿರುವ ಗುಣವೊಂದಿತ್ತು. ಅವರು, ಪಠ್ಯದ ಕಲಿಕೆಯನ್ನು ಮುಗಿಸಿ ತನ್ನ ಗುರುವನ್ನು ಮೆಚ್ಚಿಸಲು ಕಾದಿರುವ ವಿದ್ಯಾರ್ಥಿಯಂತೆ, ಆದರೆ ಒಳಗೆಲ್ಲೋ ಹಾಗೆ ಮೆಚ್ಚಿಸಲು ಬೇಕಾದ ಹಿಡಿತವನ್ನು ಆ ವಿಷಯದ ಮೇಲೆ ಗಳಿಸಲು ಸಾಮರ್ಥ್ಯ ಅಥವಾ ತುಡಿತ ಸಾಲದಿರುವವರಂತೆ ಕಾಣುತ್ತಿದ್ದರು”.
ಇವಿಷ್ಟು ನೇರವಾಗಿ ರಾಹುಲ್ ಅವರ ವಿಷಯದ ಕುರಿತ ಸಂಗತಿಗಳಿರುವ ಒಬಾಮಾ ಅವರ ಮಾತುಗಳು. ಇದರಲ್ಲಿ ಯಾವ ದಿಕ್ಕಿನಿಂದ ನೋಡಿದರೂ, ಸಹಾನುಭೂತಿಯ ಹಿರಿಯ ವಿದ್ಯಾರ್ಥಿಯೊಬ್ಬ ತಾನು ಕಾಲೇಜು ಬಿಟ್ಟ ಹಲವು ವರ್ಷಗಳ ಮೇಲೆ ಮರಳಿ, ತನ್ನ ಜೂನಿಯರ್ ಒಬ್ಬನನ್ನು ಕುರಿತಾಗಿ ಮಾಡಿರುವ ಸರಳವಾದ ಅಬ್ಸರ್ವೇಶನ್ಸ್ ಆಗಿ ಕಾಣಿಸುತ್ತವೆಯೇ ಹೊರತು ಹೀಗಳಿಕೆಯಾಗಲೀ, ರಾಹುಲ್ ಅವರನ್ನು ಅಸಮರ್ಥರೆಂದು (ಈಗ ಚೀರಾಡುತ್ತಿರುವ ಮಾಧ್ಯಮಗಳ ಬಯಕೆಯಂತೆ) ಬಿಂಬಿಸುವುದಿಲ್ಲ.
ಈ ಗದ್ದಲದ ನಡುವೆ ಒಬಾಮಾ ಅವರು ಭಾರತದ ಸಂದರ್ಭದಲ್ಲಿ ಬರೆದಿರುವ ಅತ್ಯಂತ ಸೂಕ್ಷ್ಮ ಗ್ರಹಿಕೆಯ, ದೂರದೃಷ್ಟಿಯ ಇನ್ನೂ ಅನೇಕ ವಿಷಯಗಳು ಮರೆಯಾಗಿಹೋಗಿವೆ; ಅಥವಾ ಮರೆಮಾಚಲ್ಪಟ್ಟಿವೆ.
ಬರಾಕ್ ಒಬಾಮಾ ಭಾರತವನ್ನು ಕುರಿತಾಗಿ ಈ ಭಾಗದಲ್ಲಿ ಬರೆಯಲು ಆರಂಭಿಸುವುದೇ ಮಹಾತ್ಮಾ ಗಾಂಧಿಯವರ ನೆನಪನ್ನು ಹೆಕ್ಕಿ ತೆಗೆಯುವ ಮೂಲಕ (ಅಧ್ಯಾಯದ ಆರಂಭದಲ್ಲಿ ತಮ್ಮ ಪ್ರಯಾಣದ ವಿವರ ಹೇಳುವಾಗ ಬಳಕೆಯಾಗಿರುವ ’ಮುಂಬೈ’ ಪದವನ್ನು ಹೊರತುಪಡಿಸಿದರೆ). ಭಾರತದ ಕುರಿತಾಗಿ ತನಗಿರುವ ಆಕರ್ಷಣೆಯ ಕಾರಣಗಳೇನಿರಬಹುದೆಂದು ಊಹಿಸುತ್ತಾ, ಜಗತ್ತಿನ ಆರರಲ್ಲಿ ಒಂದರಷ್ಟು ಬೃಹತ್ ಜನಸಂಖ್ಯೆಯನ್ನು ಹೊಂದಿರುವ ಈ ದೇಶದ ಗಾತ್ರ, ಸುಮಾರು 2000 ಸಂಪ್ರದಾಯಗಳ ಪಂಗಡಗಳನ್ನೂ, 700ರಷ್ಟು ಭಾಷೆಗಳನ್ನೂ ಆಡುವ ಬಹುವೈವಿಧ್ಯದ ಜನರು, ತಾನು ಬಾಲ್ಯವನ್ನು ಕಳೆದ ಇಂಡೋನೇಷಿಯಾದಲ್ಲಿ ಕೇಳಿದ ರಾಮಾಯಣ ಮಹಾಭಾರತ ಮಹಾಕಾವ್ಯಗಳ ಕಥೆಗಳು, ತನಗೆ ಕಾಲೇಜಿನಲ್ಲಿ ಜೊತೆಗಾರರಾಗಿದ್ದು ’ದಾಲ್ ಮತ್ತು ’ಕೀಮಾ’ ಮಾಡುವುದನ್ನೂ ಬಾಲಿವುಡ್ ಸಿನೆಮಾಗಳನ್ನು ನೋಡುವುದನ್ನೂ ಕಲಿಸಿದ ಭಾರತ ಮತ್ತು ಪಾಕಿಸ್ತಾನಗಳ ಗೆಳೆಯರು-ಇವೆಲ್ಲವನ್ನೂ ದಾಖಲಿಸುತ್ತಾರೆ. ಆದರೆ, ಅದೆಲ್ಲಕ್ಕಿಂತ ಮುಖ್ಯವಾದುದೆಂದು ಒಬಾಮಾ ಅವರು ಬರೆಯವುದು ಗಾಂಧೀಜಿಯ ಬಗ್ಗೆ.
“ಅವೆಲ್ಲಕ್ಕಿಂತ ಹೆಚ್ಚಾಗಿ ನನಗೆ ಭಾರತದ ಕುರಿತಾದ ಆಕರ್ಷಣೆಯ ಕಾರಣ ಮಹಾತ್ಮಾ ಗಾಂಧಿ. ಲಿಂಕನ್, ಕಿಂಗ್ ಮತ್ತು ಮಂಡೇಲಾ ಅವರುಗಳ ಜೊತೆಗೆ ಗಾಂಧಿ ನನ್ನ ಚಿಂತನೆಯನ್ನು ಗಾಢವಾಗಿ ಪ್ರಭಾವಿಸಿದ್ದಾರೆ. ಯುವಕನಾಗಿದ್ದಾಗ ನಾನು ಅವರ ಬರಹಗಳ ಅಧ್ಯಯನ ಮಾಡಿದ್ದೆ ಮತ್ತು ನನ್ನೊಳಗೆ ಆಳವಾಗಿರುವ ಕೆಲವು ತುಡಿತಗಳಿಗೆ ಅವರ ವಿಚಾರಗಳು ದನಿಯಾಗಿದ್ದನ್ನು ಕಂಡುಕೊಂಡಿದ್ದೆ. ಅವರ ’ಸತ್ಯಾಗ್ರಹ’ದ ಪರಿಕಲ್ಪನೆ ಅಥವಾ ಸತ್ಯಕ್ಕೆ ಅಪಾರವಾದ ಬದ್ಧತೆ ಹಾಗೂ ಆತ್ಮಸಾಕ್ಷಿಯನ್ನು ಕಲಕುವಂತೆ ಮಾಡುವ ಶಕ್ತಿಯುಳ್ಳ ಅಹಿಂಸಾತ್ಮಕ ಹೋರಾಟದ ಮಾರ್ಗ; ನಮ್ಮೆಲ್ಲರ ಸಾಮಾನ್ಯ ಮಾನವೀಯತೆ ಮತ್ತು ಎಲ್ಲ ಧರ್ಮಗಳ ಐಕ್ಯತೆಯ ಕುರಿತು ಅವರು ಕೊಡುತ್ತಿದ್ದ ಒತ್ತು; ಪ್ರತೀ ಸಮಾಜವೂ ತನ್ನೆಲ್ಲ ಜನರ ಘನತೆ ಮತ್ತು ಮೌಲ್ಯವನ್ನು ಸಮಾನವೆಂದು ತನ್ನ ಸಾಮಾಜಿಕ, ಆರ್ಥಿಕ, ರಾಜಕೀಯ ಸಂರಚನೆಗಳ ಮೂಲಕ ತೋರಿಸಿಕೊಡಬೇಕಾದ ಬಾಧ್ಯತೆ- ಈ ಪ್ರತಿಯೊಂದು ಚಿಂತನೆಯೂ ನನ್ನೊಳಗೆ ಮಾರ್ದನಿಸುತ್ತಿತ್ತು. ಅವರ ಚಿಂತನೆಗಳಷ್ಟೇ ಪ್ರಬಲವಾಗಿ ಅವರ ಕ್ರಿಯೆಗಳು ನನ್ನನ್ನು ಅಲುಗಾಡಿಸಿದ್ದವು. ಅವರು ತನ್ನ ಮಾತುಗಳ ಪರೀಕ್ಷೆಗಾಗಿ ಸ್ವತಃ ತನ್ನ ಜೀವವನ್ನೇ ಪಣವಾಗಿಟ್ಟವರು; ಜೈಲಿಗೆ ಹೋದವರು; ತನ್ನ ಜನರ ಹೋರಾಟದಲ್ಲಿ ತನ್ನನ್ನು ತಾನು ಪೂರ್ಣವಾಗಿ ತೊಡಗಿಸಿಕೊಂಡವರು. ಬ್ರಿಟನ್‌ನಿಂದ ಭಾರತದ ಬಿಡುಗಡೆಗಾಗಿ ಅವರು ಆರಂಭಿಸಿದ ಅಹಿಂಸಾತ್ಮಕ ಆಂದೋಲನವು 1915ರಿಂದ ಸುಮಾರು 30 ವರ್ಷಗಳ ಕಾಲ ಮುಂದುವರೆದಿತ್ತು. ಅದು ಕೇವಲ ಈ ಉಪಖಂಡವು ಸಾಮ್ರಾಜ್ಯಶಾಹಿಗಳಿಂದ ಬಿಡುಗಡೆಗೊಳ್ಳುವುದಕ್ಕೆ ಕಾರಣವಾದದ್ದು ಮಾತ್ರವಲ್ಲ, ಇಡೀ ಜಗತ್ತನ್ನು ತಟ್ಟಿದ ಒಂದು ನೈತಿಕ ಶಕ್ತಿಯನ್ನು ಹೊರಹೊಮ್ಮಿಸಿತು. ಅದು ಇನ್ನಿತರ ಅಂಚಿಗೊತ್ತಲ್ಪಟ್ಟ, ಏನೂ ಇಲ್ಲದ ಜನರು-ದಕ್ಷಿಣ ಆಫ್ರಿಕಾದ ಜಿಮ್ ಕ್ರೋನ ಕಪ್ಪು ಜನರಂತಹವರು-ಬಿಡುಗಡೆಯ ಕನಸು ಕಾಣುವಂತೆ ಮಾಡಿತು”.
ಹೀಗೆ ಗಾಂಧಿಯವರ ಬಗ್ಗೆ ಬರೆದು ಅಷ್ಟಕ್ಕೇ ನಿಲ್ಲಿಸದೆ, ಇಂದು ಗಾಂಧಿಯವರ ಸಮಾನ ಮಾನವೀಯತೆ ಮತ್ತು ಸರ್ವಧರ್ಮಗಳ ಐಕ್ಯತೆಯ ತತ್ವಕ್ಕೆ ಮಾರಕವಾಗಿ ನಿಂತಿರುವ ಶಕ್ತಿಗಳ ಬಗ್ಗೆಯೂ ಸ್ಪಷ್ಟ ಮಾತುಗಳಲ್ಲಿ ಬರೆಯುತ್ತಾರೆ. ಇಂದು ವಾಸ್ತವವಾಗಿ ಭಾರತ ಹೆಚ್ಚು ಮಾತಾಡಬೇಕಿರುವುದು ರಾಹುಲ್ ಗಾಂಧಿ ಕುರಿತಾದ ಸಾಲುಗಳ ಬಗೆಗಲ್ಲ; ಬದಲಿಗೆ ಆ ಸಾಲುಗಳ ಕೆಳಗಡೆಯೇ ಒಬಾಮಾ ಅವರು ದೇಶವನ್ನು ಹಲವು ಕಾರಣಗಳಿಗೆ ಒಡೆದಾಳುವ ಶಕ್ತಿಗಳು ಜಗತ್ತಿನೆಲ್ಲೆಡೆ ಹಾಗೂ ಭಾರತದಲ್ಲೂ ಪ್ರವರ್ಧಮಾನಕ್ಕೆ ಬರುತ್ತಿರುವುದನ್ನು ಆಗಲೇ ಕಂಡವರಂತೆ ಬರೆದಿರುವ ವಿಚಾರಗಳ ಬಗೆಗೆ.
“……..ಪ್ರಧಾನಮಂತ್ರಿಗಳು ಮತ್ತು ಅವರ ಪತ್ನಿ ನಮ್ಮನ್ನು ಬೀಳ್ಕೊಡಲು ಕಾರಿನ ತನಕ ಬಂದರು. ಆ ಮಂದ ಬೆಳಕಿನಲ್ಲಿ ಪ್ರಧಾನಮಂತ್ರಿ ತಮ್ಮ 78 ವರ್ಷ ವಯಸ್ಸಿಗಿಂತ ಹೆಚ್ಚು ಮಾಗಿದವರಂತೆ ಕಂಡರು. ನಾನು ಕುತೂಹಲಗೊಂಡೆ, ಈ ವ್ಯಕ್ತಿ ತಮ್ಮ ಹುದ್ದೆಯಿಂದ ಕೆಳಗಿಳಿದ ನಂತರ ಏನಾಗಬಹುದು? ರಾಹುಲ್ ಅವರ ಕೈಗೆ ಅವರ ತಾಯಿಯ ಇಚ್ಛೆಯಂತೆ ಬೇಟನ್‌ಅನ್ನು ದಾಟಿಸಲು ಇವರು ಶಕ್ತರಾದಾರೇ? ಒಡೆಯುವ ರಾಷ್ಟ್ರೀಯತೆಯನ್ನು ತೀವ್ರವಾಗಿ ಪ್ರತಿಪಾದಿಸುವ ಬಿಜೆಪಿಯ ಮೇಲೆ ಕಾಂಗ್ರೆಸ್ ತನ್ನ ಮೇಲುಗೈಯನ್ನು ಮುಂದುವರೆಸಲು ಶಕ್ತವಾಗಬಲ್ಲದೇ?”
“ಯಾಕೋ ನನಗೆ ಆ ಬಗ್ಗೆ ಅನುಮಾನವಿತ್ತು. ಇದರಲ್ಲಿ ಸಿಂಗ್ ಅವರ ತಪ್ಪೇನಿಲ್ಲ. ಶೀತಲ ಸಮರದ ನಂತರದ ನಿಯಮಾವಳಿಯ ಪುಸ್ತಕದಲ್ಲಿದೆಯೇನೋ ಎಂಬಂತೆ ವಿಶ್ವದ ಎಲ್ಲ ಡೆಮಾಕ್ರಟಿಕ್ ಸರ್ಕಾರಗಳು ಪಾಲಿಸಿಕೊಂಡು ಬಂದಂತೆಯೇ ಅವರು ತಮ್ಮ ಕೆಲಸ ಮಾಡಿದ್ದರು- ಸಂವಿಧಾನಾತ್ಮಕ ಆಡಳಿತವನ್ನು ಕೊಡುವುದು, ಜಿಡಿಪಿ ಮೊದಲಾದ ಅಂಕಿಸಂಖ್ಯೆಗಳನ್ನು ಏರಿಸುವ ತಾಂತ್ರಿಕ ಕೆಲಸಗಳೆಡೆಗೆ ಗಮನ ಹರಿಸುವುದು, ಸಾಮಾಜಿಕ ಭದ್ರತೆಯ ಸಾಧನಗಳನ್ನು ಹೆಚ್ಚಿನವರಿಗೆ ದೊರಕಿಸಲು ಪ್ರಯತ್ನಿಸುವುದು…….”
ಹೀಗೆ ಬರೆಯುವುದರಲ್ಲಿ ಒಬಾಮಾ ಅವರು ಸ್ಪಷ್ಟಪಡಿಸಿರುವ ವಿಷಯಗಳು ಮಾತ್ರವಲ್ಲ, ಸಾಲುಗಳ ನಡುವೆ ಓದಿಕೊಳ್ಳಬಹುದಾದ ಅವರು ಬರೆಯದೇ ಉಳಿಸಿರುವ ಸಂಗತಿಗಳೂ ಗ್ರಹಿಕೆಗೆ ನಿಲುಕುತ್ತವೆ. ತಾನೂ ಕೂಡಾ ಸಿಂಗ್ ಅವರಂತೆಯೇ ಭಾರತ ಅಥವಾ ಅಮೇರಿಕಗಳಂತಹ ಬಹುಸಂಸ್ಕೃತಿಯ ದೇಶಗಳಲ್ಲಿ ಜನಸಮುದಾಯಗಳ ನಡುವೆಯೇ ಇರಬಹುದಾದ ಭಿನ್ನಾಭಿಪ್ರಾಯಗಳನ್ನು ಶಾಂತಿಯುತವಾಗಿ ಬಗೆಹರಿಸುವ ಅಥವಾ ಕನಿಷ್ಟ ಸಹಿಸಿಕೊಂಡು ಹೋಗುವ ವಾತಾವರಣವನ್ನು ಉಳಿಸಿಕೊಳ್ಳುವುದು, ಒಂದಷ್ಟಾದರೂ ಜನರ ಬದುಕಿನ ಮಟ್ಟವನ್ನು, ಶಿಕ್ಷಣದ ಅವಕಾಶವನ್ನು ಎತ್ತರಿಸಬಲ್ಲ ಕೆಲವಾದರೂ ನೀತಿಗಳನ್ನು ತರಲು ಸಾಧ್ಯವಾಗುತ್ತದೆಯೇ ಎಂದು ನೋಡುವುದು-ಇಂತಹವುಗಳನ್ನು ಆಡಳಿತಾವಧಿಯಲ್ಲಿ ಸಾಧಿಸುವುದಕ್ಕಷ್ಟೇ ಹೆಣಗಾಡಿದವನು ಎಂದು ಸ್ಪಷ್ಟವಾಗಿ ಹೇಳುತ್ತಾರೆ.
“ಧಾರ್ಮಿಕ ಅಸಹಿಷ್ಣುತೆ, ಹಿಂಸೆ, ದ್ವೇಷ, ಲೋಭ, ರಾಷ್ಟ್ರೀಯತೆ, ಭ್ರಷ್ಟಾಚಾರ-ಇವೆಲ್ಲವೂ ಮನುಷ್ಯದ ಅಭದ್ರತೆಯ ಭಾವದೊಳಗೆ ಸದಾ ಆಳದಲ್ಲಿ ಅಡಗಿಕೊಂಡೇ ಇರುತ್ತವೆಯೇ ಎಂದು ನನ್ನನ್ನು ನಾನು ಪ್ರಶ್ನಿಸಿಕೊಳ್ಳುವಂತಾಗಿದೆ. ತನ್ನ ಅಮುಖ್ಯತೆಯನ್ನು ಇತರರನ್ನು ಅಡಿಯಾಳಾಗಿಸಿ ಆಳುವ ಮೂಲಕ ಹೋಗಲಾಡಿಸುವ ಮನಸ್ಥಿತಿಯೇ ಇದು ಎಂದು ಯೋಚಿಸಬೇಕಾಗಿದೆ. ಯಾವಾಗಾದರೂ ಒಂದು ಸರ್ಕಾರ ಸ್ವಲ್ಪ ಎಡವಿದರೆ, ಬೆಳವಣಿಗೆಯ ದರ ಸ್ವಲ್ಪ ಕುಂಠಿತವಾದರೆ, ಜನರ ವಯೋಮಿತಿಯ ಸಂಖ್ಯೆ ಬದಲಾದರೆ ಮೇಲೆದ್ದುಬರಲು ಸಿದ್ಧವಾಗಿರುವ ಮಿಥ್ಯೆ ಸದಾ ತೆರೆಮರೆಯಲ್ಲಿ ಕಾದಿರುತ್ತದೆ. ಅಥವಾ ಪ್ರಭಾವಿಯಾದ ನಾಯಕನೊಬ್ಬ ಈ ಸುಳ್ಳಿನ ಅಲೆಯನ್ನು ಬಳಸಿಕೊಂಡು ಜನರ ಭಯಾತಂಕಗಳ ಮೇಲೆ ಸವಾರಿ ಮಾಡುತ್ತಾ ಅಧಿಕಾರಕ್ಕೇರುವ ಸಾಧ್ಯತೆ ಕಾಣಬರುತ್ತಿದೆ ಎಂಬ ಅವ್ಯಕ್ತ ಭೀತಿ ನನ್ನೊಳಗೆ ತುಂಬುತ್ತದೆ. ಹಾಗೆಯೇ, ನಾನು ಎಷ್ಟೇ ಬಯಸಬಹುದಾದರೂ ಇಂತಹ ಅವ್ಯಕ್ತ ಭೀತಿ ಕಾಡದಂತೆ ನಾನೇನು ಮಾಡಬೇಕೆಂದು ಹೇಳಲು ಮಹಾತ್ಮಾ ಗಾಂಧಿ ಇಂದು ಇಲ್ಲ……”.
ಭಾರತದ ಕುರಿತ ತನ್ನ ಬರಹವನ್ನು ಈ ಮಾತುಗಳೊಂದಿಗೆ ಬರಾಕ್ ಒಬಾಮಾ ಮುಗಿಸಿದ್ದಾರೆಂಬುದನ್ನೂ, ಅವುಗಳ ಹಿಂದಿರುವ ವಾಸ್ತವಗಳೇನೆಂಬುದನ್ನೂ ಚರ್ಚೆಗೆತ್ತಿಕೊಳ್ಳಬೇಕಲ್ಲವೇ? ’ಭಾರತ’ಕ್ಕಿಂದು ಆ ವಾಸ್ತವಗಳಿಗೆ ಮುಖಾಮುಖಿಯಾಗುವ ಶಕ್ತಿ ಉಳಿದಿದೆಯೇ?
- ಮಲ್ಲಿಗೆ ಸಿರಿಮನೆ

(ಕರ್ನಾಟಕ ಜನಶಕ್ತಿಯ ರಾಜ್ಯ ಸಂಚಾಲಕರಾಗಿ ಕೆಲಸ ಮಾಡುತ್ತಿರುವ ಮಲ್ಲಿಗೆಯವರು ಮಹಿಳಾ ಮುನ್ನಡೆ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಆಸಿಡ್ ದಾಳಿಗೊಳಗಾದ ಸಂತ್ರಸ್ತರ ಪರವಾಗಿ ಚಿಕ್ಕಂದಿನಲ್ಲೇ ತೊಡಗಿಸಿಕೊಂಡ ಇವರು, ಇಂದಿಗೂ ಮಹಿಳೆಯರ ಪರ ಗಟ್ಟಿ ದನಿಯೆತ್ತುತ್ತಿರುವ ಹೋರಾಟಗಾರ್ತಿ)
ಇದನ್ನೂ ಓದಿ: ರಾಹುಲ್ ಗಾಂಧಿಯದ್ದು ಅಸ್ಥಿರ ಮತ್ತು ಅಪಕ್ವ ಗುಣ: ಆತ್ಮಚರಿತ್ರೆಯಲ್ಲಿ ಒಬಾಮ



ಹೇಳಲಾಗದ ದಿಗಿಲಿನ ನಡುವೆ
…
ಮಾತುಕತೆ