ಇದೊಂದು ದುರಂತ ಚಿತ್ರ. ಈಗಾಗಲೇ ಟ್ರಕ್ ಒಂದು ಮೂಟೆಗಳಿಂದ ಅರ್ಧ ತುಂಬಿದೆ. ಅದರ ಮೇಲೆ ಒಂದಷ್ಟು ಜನ ಹತ್ತಿ ನಿಂತಿದ್ದಾರೆ. ಇನ್ನು ಜನ ಹತ್ತುತ್ತಿದ್ದಾರೆ. ಯುವಕನೊಬ್ಬ ಟ್ರಕ್‌ನ ಅರ್ಧಭಾಗದಲ್ಲಿ ನಿಂತು ಒಂದು ಕೈಯಲ್ಲಿ ಟ್ರಕ್‌ಗೆ ಕಟ್ಟಿರುವ ಹಗ್ಗ ಹಿಡಿದುಕೊಂಡು ಇನ್ನೊಂದು ಕೈಯಿಂದ ಮಗುವೊಂದನ್ನು ಎತ್ತಿ ಟ್ರಕ್ ಮೇಲಿಡುತ್ತಿರುವ ಚಿತ್ರ ಎಂತವರ ಮನಸ್ಸನು ಕದಲಿಸುಬಿಡುತ್ತದೆ. ನಿನ್ನೆ ಇಂಟರ್ನೆಟ್ ತುಂಬೆಲ್ಲಾ ಈ ಚಿತ್ರ ಹರಿದಾಡಿದ್ದು ವಲಸೆ ಕಾರ್ಮಿಕರ ಬವಣೆಗಳ ಪಟ್ಟಿಗೆ ಹೊಸ ಸೇರ್ಪಡೆಯಾಗಿತ್ತು.
ಈ ಚಿತ್ರವು ಕೆಲಸವಿಲ್ಲದೇ, ಊಟವಿಲ್ಲದೇ ವಾಪಸ್ ತಮ್ಮೂರಿಗೆ ಹೊರಟ ವಲಸೆ ಕಾರ್ಮಿಕರ ಕರಾಳ ಸ್ಥಿತಿಯನ್ನು ನೆನಪಿಸುತ್ತದೆ. ಈ ಚಿತ್ರವನ್ನು ಚತ್ತೀಸ್‌ಘಡದಲ್ಲಿ ತೆಗೆಯಲಾಗಿದೆ. ಅದರ ವಿಡಿಯೋ ನೋಡಿದ್ದಲ್ಲಿ ಮತ್ತಷ್ಟು ದುರಂತ ನಮಗೆ ಕಾಣುತ್ತದೆ.
heart-breaking picture showing a man holding an infant in one hand as he clings on to a rope hanging on the vehicle with another in raipur @ndtvindia @ndtv #NursesDay #LockdownEnd #COVID19 pic.twitter.com/F4YhUWLyA0
— Anurag Dwary (@Anurag_Dwary) May 12, 2020
ಸುಮಾರು 20 ಸೆಕೆಂಡುಗಳ ಕ್ಲಿಪ್‌ನಲ್ಲಿ, ಆ ವ್ಯಕ್ತಿ ಮಗುವನ್ನು ಟ್ರಕ್‌ನಲ್ಲಿರುವ ಮತ್ತೊಬ್ಬ ಕಾರ್ಮಿಕನಿಗೆ ಹಸ್ತಾಂತರಿಸುತ್ತಾನೆ. ಆನಂತರ ಆತನು ಟ್ರಕ್ ಏರುತ್ತಾನೆ. ಅದೇ ಸಂದರ್ಭದಲ್ಲಿ ಹಲವಾರು ಮಹಿಳೆಯರು ಸಹ ಟ್ರಕ್ ಏರುತ್ತಾರೆ. ಸೀರೆ ತೊಟ್ಟಿರುವ ಮಹಿಳೆಯೊಬ್ಬಳು ಟ್ರಕ್ ಏರಲು ಹರಸಾಹಸಪಡುತ್ತಾಳೆ. ಕೊನೆಯಲ್ಲಿ ಆರು ತಿಂಗಳಿಗೂ ಕಡಿಮೆ ವಯಸ್ಸಿನ ಪುಟ್ಟ ಮಗುವನ್ನು ಸಹ ಒಂದೇ ಕೈಯಲ್ಲಿ ಎತ್ತಿ ಟ್ರಕ್‌ನಲ್ಲಿಡುವ ದುರಂತ ದೃಶ್ಯ ಮನಕಲಕುತ್ತದೆ.
ಅವರೆಲ್ಲರೂ ಜಾರ್ಖಂಡ್ ರಾಜ್ಯದ ವಲಸೆ ಕಾರ್ಮಿಕರಾಗಿದ್ದು ತೆಲಂಗಾಣದಲ್ಲಿ ಕೆಲಸ ಮಾಡುತ್ತಿದ್ದವರು. ಲಾಕ್‌ಡೌನ್ ಕಾರಣಕ್ಕೆ ಕೆಲಸ ಕಳೆದುಕೊಂಡ ಅವರು ತಮ್ಮ ಸ್ವಂತ ಊರು ತಲುಪಲು ಹೆಣಗಾಡಿದ್ದಾರೆ. ತೆಲಂಗಾಣದಿಂದ ಕಾಲ್ನಡಿಗೆಯಲ್ಲಿ ಹೊರಟ ಅವರು ಚತ್ತೀಸ್‌ಘಡದಲ್ಲಿದ್ದಾಗ ಈ ಟ್ರಕ್ ಸಿಕ್ಕಿದೆ. ಈ ಕುರಿತು ಅವರು ಹೇಳಿದಿಷ್ಟು.. “ನಾವು ಏನು ಮಾಡಲು ಸಾಧ್ಯವಿಲ್ಲ … ನಾವು ಅಸಹಾಯಕರಾಗಿದ್ದೇವೆ. ನಾವು ಜಾರ್ಖಂಡ್‌ಗೆ ಹೋಗಬೇಕಾಗಿದೆ. ಬೇರೆ ದಾರಿಯಿಲ್ಲ” ಎಂದು ವೃದ್ಧೆಯೊಬ್ಬರು ಹೇಳಿದ್ದಾರೆ.
ಈ ತಿಂಗಳ ಆರಂಭದಲ್ಲಿ ಕಾರ್ಮಿಕರಿಗಾಗಿ ಕೇಂದ್ರ ಸರ್ಕಾರ ಪ್ರಾರಂಭಿಸಿದ ವಿಶೇಷ ರೈಲುಗಳ ಬಗ್ಗೆ ಅವರಲ್ಲಿ ಕೇಳಿದಾಗ, “ಆ ಬಗ್ಗೆ ಯಾವುದೇ ಮಾಹಿತಿ ನಮಗೆ ಸಿಗಲಿಲ್ಲ” ಎಂದಿದ್ದಾರೆ.
ಈ ಗೊಂದಲವನ್ನು ಗಮನಿಸುತ್ತಾ ಟ್ರಕ್ ಹತ್ತಿರ ನಿಂತಿದ್ದ ರಾಜ್ಯ ಸಾರಿಗೆ ಇಲಾಖೆಯ ಅಧಿಕಾರಿಯೊಬ್ಬರು “ಬೇರೆ ಯಾವುದೇ ಸಾರಿಗೆ ಮಾರ್ಗಗಳಿಲ್ಲ. ನಾನು ಸಾರಿಗೆ ಇಲಾಖೆಯಿಂದ ಬಂದಿದ್ದೇನೆ ಆದರೆ ನಾನು ಬಸ್ ವ್ಯವಸ್ಥೆ ಮಾಡಲು ಸಾಧ್ಯವಿಲ್ಲ. ಆಡಳಿತವು ಅವರಿಗೆ ವಿಶೇಷ ಬಸ್ಸುಗಳನ್ನು ಒದಗಿಸಬೇಕಿದೆ” ಎಂದಿದ್ದಾರೆ.
ಮಾರ್ಚ್ ಅಂತ್ಯದಲ್ಲಿ ಲಾಕ್‌ಡೌನ್ ಘೋಷಿಸಿದಾಗಿನಿಂದ ವಲಸಿಗರು ತಮ್ಮ ಹಳ್ಳಿಗಳಿಗೆ ಹಿಂತಿರುಗಲು ದೊಡ್ಡ ನಗರಗಳನ್ನು ತೊರೆಯುತ್ತಿದ್ದಾರೆ. ಅವರಲ್ಲಿ ಹಲವರು ನೂರಾರು-ಸಾವಿರಾರು ಕಿಲೋಮೀಟರ್ ನಡೆದು ಹೋಗಿದ್ದಾರೆ. ಅವರಲ್ಲಿ ಕೆಲವರು ತಮ್ಮ ಪ್ರಯಾಣವನ್ನು ಪೂರ್ಣಗೊಳಿಸುವ ಮೊದಲೇ ಸಾವನ್ನಪ್ಪಿದ್ದಾರೆ.
ಕಳೆದ ವಾರ, 20 ಜನರ ಗುಂಪಿನಲ್ಲಿ 16 ವಲಸಿಗರು ಮಹಾರಾಷ್ಟ್ರದಲ್ಲಿ ಸರಕು ರೈಲು ಹಳಿಗಳ ಮೇಲೆ ಮಲಗಿದ್ದಾಗ ರೈಲು ಹರಿದು ಮೃತಪಟ್ಟಿದ್ದಾರೆ. ಭಾನುವಾರ, ಮಧ್ಯಪ್ರದೇಶದಲ್ಲಿ ಪ್ರಯಾಣಿಸುತ್ತಿದ್ದ ಟ್ರಕ್ ಪಲ್ಟಿಯಾಗಿ ಐದು ವಲಸಿಗರು ಸಾವನ್ನಪ್ಪಿದ್ದಾರೆ.
ವಲಸೆ ಕಾರ್ಮಿಕರು ತಮ್ಮ ಸ್ವಂತ ಊರುಗಳಿಗೆ ತಲುಪುವಂತೆ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ಇದು ಕಾರ್ಮಿಕರ ಬವಣೆಯನ್ನು ಹೆಚ್ಚಿಸಿದ್ದು, ಎಲ್ಲೆಲ್ಲಿಯೂ ಅವರ ನೋವಿನ ಚಿತ್ರಗಳು ಹರಿದಾಡುತ್ತಿವೆ.
ಕೃಪೆ: ಎನ್‌ಡಿಟಿವಿ
ಇದನ್ನೂ ಓದಿ: ಲಾಕ್‌ಡೌನ್: ಹಸಿವು, ಅಪಘಾತಗಳಿಂದ ಸಾವಿಗೀಡಾದವರ ಸಂಖ್ಯೆ 383!


